ಕಾದಂಬರಿ: ನೆರಳು…ಕಿರಣ 38

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..

ಲಕ್ಷ್ಮಿ ಭಟ್ಟರಿಗಂತೂ ಮೊಮ್ಮಗಳ ಲಾಲನೆ, ಪಾಲನೆಯಲ್ಲಿ ದಿವಸಗಳು ಹೇಗೆ ಕಳೆಯುತ್ತಿದ್ದವು ಎನ್ನುವುದೇ ಗೊತ್ತಾಗುತ್ತಿರಲಿಲ್ಲ. ಇತರ ಮೊಮ್ಮಕ್ಕಳಿಗಿಂತ ಈಕೆ ಚಲುವೆ ಎಂದೆನ್ನಿಸುತ್ತಿತ್ತು. ಭಾಗ್ಯಳಿಗಂತೂ ಮನೆಯ ಹಿರಿಯರ ಅಗಲಿಕೆಯ ದುಃಖವು ಈ ಹೊಸ ಅತಿಥಿಯ ಆಗಮನದಿಂದ ದೂರವಾಗತೊಡಗಿತು. ಯಾವ ಕಾರಣಕ್ಕೂ ಸಂಗೀತಶಾಲೆ ನಿಲ್ಲಿಸಬಾರದೆಂಬ ನಿಲುವಿಗೆ ಬದ್ಧರಾಗಿದ್ದ ಗೌರಿಯಮ್ಮ ಈ ಸಮಯದಲ್ಲಿ ಅದರ ಸಾರಥ್ಯವನ್ನು ತಾವೇ ವಹಿಸಿಕೊಂಡರು.

ಮೊಮ್ಮಗಳು ಹುಟ್ಟಿ ದಿನಗಳು, ವಾರಗಳೇ ಕಳೆದರೂ ಮಗು ಹುಟ್ಟಿದ ಘಳಿಗೆ ಹೇಗಿದೆ, ನಕ್ಷತ್ರ ಯಾವುದು, ಹೆಸರಿಡಲು ಯಾವ ಅಕ್ಷರ ಸೂಕ್ತವಾಗಿದೆ, ಮಗುವಿನ ನಾಮಕರಣ ಯಾವಾಗ ಇಟ್ಟುಕೊಳ್ಳುವುದು, ಹೀಗೆ ಯಾವುದೇ ಸಂಗತಿಯ ಬಗ್ಗೆ ಸೊಲ್ಲೇ ಎತ್ತದ ತಮ್ಮ ಅಳಿಯನ ವರ್ತನೆ ಲಕ್ಷ್ಮಿ ಮತ್ತು ಭಟ್ಟರಿಗೆ ಅಚ್ಚರಿಯುಂಟುಮಾಡಿತ್ತು. ಅದರ ಬಗ್ಗೆ ತಮ್ಮೊಳಗೇ ಚರ್ಚಿಸಿ ಮಗಳೊಡನೆ ಪ್ರಸ್ತಾಪಿಸಿದರು.

“ಮಗಳೇ ನಿನ್ನ ಗಂಡ ಊರಿನವರಿಗೆಲ್ಲಾ ಕುಂಡಲಿ ಬರೆದುಕೊಡುವುದು, ಜಾತಕ ಬರೆದುಕೊಡುವುದು ಎಲ್ಲವನ್ನೂ ಮಾಡುತ್ತಾರೆ. ಆದರೆ ತನ್ನ ಮಗಳು- ನಮ್ಮ ಮೊಮ್ಮಗಳು ಹುಟ್ಟಿದ ಘಳಿಗೆ ಹೇಗಿದೆ? ನಕ್ಷತ್ರ , ಹುಟ್ಟೆಸರು ಯಾವಾಗ ಹೇಳುತ್ತಾರಂತೆ?  ನಾಮಕರಣವನ್ನು ಯಾವಾಗ ಮಾಡುವುದು? ಆಕೆ ಹುಟ್ಟಿ ಒಂದು ತಿಂಗಳಾಗುತ್ತಾ ಬಂತು. ಇನ್ನೂ ಬರೆದಿಲ್ಲವಂತೆ, ಬೇಗ ಬರೆದಿಡಲು ಹೇಳಮ್ಮಾ” ಎಂದರು ಲಕ್ಷ್ಮಿ ಮತ್ತು ಭಟ್ಟರು.

“ನಾನು ಕೇಳಿದ್ದಾಯಿತಮ್ಮ, ಎಲ್ಲವನ್ನೂ ಕಣ್ಣಾಡಿಸಿದ್ದೇನೆ, ಸೂಕ್ಷ್ಮವಾಗಿ ಪರಿಶೀಲಿಸಿಲ್ಲ. ನೀನು ಸ್ವಲ್ಪ ಸುಧಾರಿಸಿಕೋ, ಮನೆಯವರೆಲ್ಲ ವಿದುರಾಶ್ವತ್ಥಕ್ಕೆ ಹೋಗಿ ಅಲ್ಲಿ ಹರಕೆ ಪೂರೈಸಿ ಅಲ್ಲಿನ ಅರ್ಚಕರ ಹತ್ತಿರವೇ ನಾಮಕರಣಶಾಸ್ತ್ರ ಮುಗಿಸಿಕೊಂಡು ಬರೋಣ. ಅದ್ದೂರಿ ಬೇಡ. ವರ್ಷವಾದಾಗ ಹುಟ್ಟುಹಬ್ಬದ ಸಮಯದಲ್ಲಿ ಎಲ್ಲರನ್ನೂ ಆಮಂತ್ರಿಸಿ ಔತಣಕೊಡೋಣ ಎಂದಿದ್ದಾರೆ” ಎಂದು ಹೇಳಿದಳು ಭಾಗ್ಯ.

“ಹೌದೇನು ಹಾಗಾದರೆ ಸರಿ, ಯಾವ ಅಕ್ಷರ ಬಂದಿದೆಯಂತೆ?” ಎಂದು ಕೇಳಿದರು ಭಟ್ಟರು.

“ಗೊತ್ತಿಲ್ಲಪ್ಪ ಸರ್‌ಪ್ರೈಸ್ ಅಂತೆ. ಅಲ್ಲಿಂದ ಬಂದಮೇಲೆ ನಿಧಾನವಾಗಿ ಕುಳಿತು ಜಾತಕ ಬರೆಯುತ್ತಾರಂತೆ.” ಎಂದು ಹೇಳಿದಳು ಭಾಗ್ಯ.

ಬಹುಕಾಲದಿಂದ ಬಯಸೀ ಬಯಸೀ ಈ ಮನೆ ಬೆಳಗಲು ಬಂದಿದ್ದ ಮೊಮ್ಮಗಳ ನಾಮಕರಣವನ್ನು ಬಂಧು ಬಾಂಧವರು, ಆತ್ಮೀಯರೊಡನೆ ಪೂಜೆಪುನಸ್ಕಾರಗಳನ್ನೇರ್ಪಡಿಸಿ ಅದ್ದೂರಿಯಾಗಿ ಆಚರಿಸಬೇಕೆಂದಿದ್ದ ದಂಪತಿಗಳಿಗೆ ಮಗಳ ಬಾಯಿಂದ ಕೇಳಿದ ಸಂಗತಿ ನಿರಾಸೆ ಉಂಟುಮಾಡಿತು. ಆದರೂ ಯಾವ ಸನ್ನಿಧಾನದ ದರ್ಶನದಿಂದ ಮಗಳಿಗೆ ಸಂತಾನಭಾಗ್ಯ ಲಭ್ಯವಾಯಿತೋ ಅದೇ ಸನ್ನಿಧಾನದಲ್ಲಿ ಕಂದನಿಗೆ ಹೆಸರಿಡುವ ಕಾರ್ಯಕ್ರಮ ಶುಭಕರವಾದದ್ದೇ. ಇದು ಒಳ್ಳೆಯ ತೀರ್ಮಾನವೇ ಎಂದು ಸಮಾಧಾನಪಟ್ಟುಕೊಂಡರು.

ಮಗುವಿಗೆ ಮೂರು ತಿಂಗಳು ತುಂಬುವ ಮೊದಲೇ ವಿದುರಾಶ್ವತ್ಥದಲ್ಲಿ ತಾವಂದುಕೊಂಡಂತೆ ಹರಕೆಯ ಎಲ್ಲಕಾರ್ಯಗಳನ್ನು ಸಮರ್ಪಕವಾಗಿ ಪೂರೈಸಿ ಅಲ್ಲಿಯೇ ಶಾಸ್ತ್ರೋಕ್ತವಾಗಿ ನಾಮಕರಣವನ್ನು ನೆರವೇರಿಸಿದರು. ಪುಟ್ಟ ಮಗಳಿಗೆ “ಸಿರಿ” ಎಂದು ಹೆಸರಿಟ್ಟು ಕರೆಯಲಾಯಿತು. ಇದು ಎಲ್ಲರಿಗೂ ಮೆಚ್ಚುಗೆಯಾದ್ದರಿಂದ ಯಾರೂ ಅಪಸ್ವರವೆತ್ತದೆ ಸಂತೋಷದಿಂದ ಹಿಂದಿರುಗಿದರು.

ಅಲ್ಲಿಂದ ಹಿಂದಿರುಗಿದ ಭಾಗ್ಯ ಗೌರಿಯಮ್ಮನವರಿಗೆ “ನಾನಿನ್ನು ಸಂಗೀತಪಾಠ ಹೇಳುವ ಕೆಲಸವನ್ನು ವಹಿಸಿಕೊಳ್ಳುತ್ತೇನೆ.” ಎಂದು ಹೇಳಿದಳು.

“ಬೇಡ ಭಾಗ್ಯಾ, ನೀನು ಯಾವಾಗ ಪ್ರಾರಂಭಿಸಬೇಕೆಂದು ನಾನೇ ಹೇಳುತ್ತೇನೆ. ಬಯಸಿ ಬಯಸಿ ತಾಯಾಗಿದ್ದೀಯೆ. ಮಗುವಿನ ಪಾಲನೆ ಪೋಷಣೆ ಕಡೆಗೆ ನಿನ್ನ ಗಮನ ಕೊಡು.” ಎಂದರು ಗೌರಿಯಮ್ಮ.

ತನಗೆ ಗುರುವಾಗಿ ಬಂದ ಅವರು ಈಗ ತಾಯಿಯಂತೆ ಮಮತೆ ತೋರುವುದನ್ನು ಕಂಡು ಯಾವ ಜನ್ಮದ ಬಂಧುವೋ ಕಾಣೆ ಎಂದುಕೊಂಡಳು ಬಾಗ್ಯ. ಗೌರಿಯಮ್ಮ ತಮಗೆ ಪಾಠ ಹೇಳಿದ್ದರಿಂದ ಬಂದ ಹಣದಲ್ಲಿ ಬೇಡವೆಂದರೂ ಕೇಳದೆ ಅರ್ಧಭಾಗವನ್ನು ಭಾಗ್ಯಳಿಗೆ ಕೊಡುತ್ತಿದ್ದರು. ಕೇಳಿದರೆ ನನಗೇನು ಖರ್ಚು ಇದ್ದೀತು, ನೀನಾದರೆ ಸಂಸಾರವಂದಿಗಳು ಎಂದು ಬಾಯಿ ಮುಚ್ಚಿಸುತ್ತಿದ್ದರು.

ಇತ್ತ ಶ್ರೀನಿವಾಸ ಸದಾ ಏಕೋ ಏನೋ ಅನ್ಯಮನಸ್ಕನಂತೆ ಕಾಣತೊಡಗಿದ. ಮಗಳು ಹುಟ್ಟಿದಾಗ ಅವನು ಪಟ್ಟ ಆನಂದ ಅವನ ಮುಖದಲ್ಲಿ ಮಾಸತೊಡಗಿತು. ಮಗಳನ್ನು ಹಚ್ಚಿಕೊಂಡಂತೆಯೂ ಅಲ್ಲ ಬಿಟ್ಟಂತೆಯೂ ಅಲ್ಲದಂತೆ ಅವನ ಒಡನಾಟದಲ್ಲಿ ವ್ಯಕ್ತವಾಗುತ್ತಿತ್ತು. ಎಲ್ಲ ಬದಲಾವಣೆಗಳನ್ನು ಗಮನಿಸಿದ ಲಕ್ಷ್ಮಮ್ಮ ಏನಾಗಿದೆ? ಗಂಡಹೆಂಡಿರಲ್ಲೇನಾದರೂ ಮನಸ್ಥಾಪವೇ ಎಂದರೆ ಅಂತಹುದೇನೂ ನಡೆದಿಲ್ಲ. ಮನೆಯಲ್ಲಿ ಎಲ್ಲವೂ ವ್ಯವಸ್ಥಿತವಾಗಿ ನಡೆದುಕೊಂಡು ಹೋಗುತ್ತಿದೆ. ಆತನಿಗೆ ಹೆತ್ತವರ ನೆನಪು ಕಾಡುತ್ತಿದೆಯಾ ಎಂದರೆ, ಮೊದಮೊದಲು ಹಾಗಿತ್ತು ಕ್ರಮೇಣ ತಮಗೆತಾವೇ ಸಮಾಧಾನ ತಂದುಕೊಂಡು ನಮಗೂ ಸಮಾಧಾನ ಹೇಳುತ್ತಿದ್ದರು. ಭಾಗ್ಯಳು ತಾಯಿಯಾಗುತ್ತಿದ್ದಾಳೆಂದಾಗ ಅಕ್ಕರೆಯ ಮಹಾಪೂರವನ್ನೇ ಹರಿಸಿದರು. ಮಗಳು ಜನಿಸಿದಾಗಲಂತೂ ತಮ್ಮಮ್ಮನೇ ಮನೆಗೆ ಮಗಳ ರೂಪದಲ್ಲಿ ಬಂದಿದ್ದಾಳೆಂದು ಕುಣಿದಾಡಿದ್ದರು. ಈಗ ಯಾವ ಲೆಕ್ಕಾಚಾರ ಕೈಕೊಟ್ಟಿದೆ. ಮಗು ಹುಟ್ಟಿದ ಸಮಯವನ್ನು ಕೇಶವಣ್ಣನಿಗೆ ಕೊಟ್ಟು ಜನ್ಮಫಲವನ್ನು ನೋಡಿಹೇಳಿರೆಂದು ಕೇಳಲೇ? ..ಬೇಡ ಬೇಡ ಇದೇನಾದರೂ ಅಳಿಯನಿಗೆ ಗೊತ್ತಾದರೆ ಪರಿಣಾಮ ಏನಾಗುತ್ತದೆಯೋ? ಇದ್ದುದರಲ್ಲಿ ನೆಮ್ಮದಿಯ ಎಳೆ ಸಿಕ್ಕಿತೆನ್ನುವಷ್ಟರಲ್ಲಿ ಏನು ತಂದೆಯಪ್ಪಾ ಭಗವಂತಾ ಎಂದು ಹಲುಬಿದಳು.

ಭಾಗ್ಯ ತನ್ನ ಮಗಳ ಜವಾಬ್ದಾರಿಯನ್ನು ನಿಭಾಯಿಸುತ್ತಲೇ ಗಂಡನನ್ನೂ ನೋಡಿಕೊಳ್ಳುತ್ತಿದ್ದಳು. ಅವನ ಚಲನವಲನ ಅವಳಿಗೂ ಸಂದೇಹ ಉಂಟುಮಾಡಿತ್ತು. ಆರ್ಥಿಕವಾಗಿ ಅಡಚಣೆ ಏನಾದರೂ ಇದೆಯಾ ಎಂದರೆ ತನಗೆ ತಿಳಿದಂತೆ ಯಾವುದೂ ಇಲ್ಲ. ಹಿರಿಯರ ನೆನಪಿಗೆ ತಾವೇ ಪರಿಹಾರ ಕಂಡುಕೊಂಡವರಂತೆ ಪೂಜೆಪುನಸ್ಕಾರಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ಬಿಡುವಿನ ವೇಳೆಯಲ್ಲಿ ಸಂಗೀತಕಛೇರಿ, ಸಾಧನೆ, ಬಂದವರೊಡನೆ ಸೌಹಾರ್ದತೆ, ಯಾವುದರಲ್ಲೂ ಅಸಹನೆ ತೋರುತ್ತಿರಲಿಲ್ಲ. ಆದರೆ ದಿನೇದಿನೇ ಏಕೋ ನವೆದುಹೋಗುತ್ತಿದ್ದಾರೆ ಏಕಿರಬಹುದು? ಯೋಚಿಸಿ ಯೋಚಿಸಿ ಪ್ರಶ್ನೆ ಕೇಳಿದಾಗಲೆಲ್ಲ ಏನೂ ಇಲ್ಲ ಭಾಗ್ಯ, ಕೆಲಸದ ಒತ್ತಡ ಎಂದು ಜಾಗವನ್ನು ಬಿಟ್ಟು ಹೋಗಿಬಿಡುತ್ತಿದ್ದರು. ಇದು ಬಿಡಿಸಲಾಗದ ಒಗಟಿನಂತೆ ಕಾಡತೊಡಗಿತು.

ನಾರಣಪ್ಪನಿಗಂತೂ ಗಲಗಲ ಎನ್ನುತ್ತಿದ್ದ ಮನೆ ಮಗ ಮೌನಕ್ಕೆ ಶರಣಾಗುತ್ತಿದ್ದುದು ಪ್ರಶ್ನಾರ್ಥಕ ಚಿಹ್ನೆಯಾಗಿ ಕಣ್ಮುಂದೆ ಬಂದಂತಾಗುತ್ತಿತ್ತು. ಇದ್ಯಾವುದರ ಸೂಕ್ಷ್ಮತೆಗಳನ್ನೂ ಗಮನಿಸದ ಭಟ್ಟರು ಏನೂ ಅರಿಯದ ಕಂದಮ್ಮ ‘ಸಿರಿ’ ಇಬ್ಬರೇ ತಂತಮ್ಮ ಲೋಕದಲ್ಲಿದ್ದರು. ಹೀಗೇ ಮತ್ತೆರಡು ತಿಂಗಳು ಸರಿದುಹೋದವು. ಒಬ್ಬೊಬ್ಬರು ಒಂದೊಂದು ದಿಕ್ಕಿನಲ್ಲಿ ಯೋಚಿಸುತ್ತಿರುವಾಗಲೇ ಯಾರೂ ನಿರೀಕ್ಷಿಸದ ದುರ್ಘಟನೆಯೊಂದು ನಡೆದುಬಿಟ್ಟತು.

ಪೂಜಾಕಾರ್ಯಕ್ಕೆಂದು ದೇವಸ್ಥಾನಕ್ಕೆ ಹೋದ ಶ್ರೀನಿವಾಸನನ್ನು ಗತಪ್ರಾಣನಾಗಿ ಮನೆಗೆ ಕರೆತಂದರು. ಪೂಜೆಮಾಡುತ್ತಿರುವಾಗಲೇ ಇದ್ದಕ್ಕಿದ್ದಂತೆ ಕೆಳಕ್ಕೆ ಬಿದ್ದವನು ಮತ್ತೆ ಮೇಲೇಳಲಿಲ್ಲ ಎಂಬ ಸುದ್ಧಿ ಭಾಗ್ಯಳಿಗೆ ಸಿಡಿಲು ಬಡಿದಂತೆರಗಿ ಪ್ರಜ್ಞೆತಪ್ಪಿ ನೆಲಕ್ಕುರುಳಿದಳು. ತಕ್ಷಣ ವೈದ್ಯರ ನೆರವು, ಲಕ್ಷ್ಮೀ, ಭಟ್ಟರು, ನಾರಣಪ್ಪನವರ ಉಪಚಾರದಿಂದ ತಿಳಿವು ಮರುಕಳಿಸಿದರೂ ಮತ್ತೆ ಮತ್ತೆ ಪ್ರಜ್ಞೆ ತಪ್ಪುವುದು ನಡೆದೇ ಇತ್ತು.

ಅವರ ಮನೆಯ ಮುಂದೆ ಜನವೋಜನ ಸೇರಿದರು. ಒಬ್ಬೊಬ್ಬರ ಬಾಯಲ್ಲಿ ಒಂದೊಂದು ತರಹ ಮಾತುಗಳು, ಹೇಗಿದ್ದ ಮನೆ ಹೇಗಾಯಿತು, ಬಂದವರ ಕಷ್ಟಗಳನ್ನು, ಸಮಸ್ಯೆಗಳನ್ನು ತಮಗೆ ತಿಳಿದ ರೀತಿಯಲ್ಲಿ ಪರಿಹಾರವಾಗುವಂತೆ ಸಲಹೆ, ಸಮಾಧಾನವನ್ನು ನೀಡುತ್ತಿದ್ದರು ಜೋಯಿಸರು ಮತ್ತವರ ಮಗ. ಅಂಥವರ ಮನೆಯಲ್ಲಿ ಒಂದೆರಡು ವರ್ಷಗಳಲ್ಲೇ ಯಾರೂ ಊಹಿಸಲಾಗದಂಥ ದುರ್ಘಟನೆಗಳು. ಛೇ..ಛೇ ಭಗವಂತನ ಸೇವೆಯಲ್ಲಿ ನಿರತರಾಗಿದ್ದ ಸಜ್ಜನರಿಗೆ ಹೀಗಾಗಬೇಕೇ? ಎಂದು ಕೆಲವರು ಹಲುಬಿದರೆ ಇನ್ನೂ ಕೆಲವರು ಇವೆಲ್ಲಕ್ಕೂ ಹುಟ್ಟಿದ ಮಗುವಿನ ಕಾಲ್ಗುಣವೇ ಕಾರಣ. ಹುಟ್ಟುವುದಕ್ಕೆ ಮುಂಚೆಯೇ ಅಜ್ಜ, ಅಜ್ಜಿಯರು, ಒಂದು ವರ್ಷ ತುಂಬುವ ಮೊದಲೇ ತನ್ನ ಹೆತ್ತಪ್ಪ. ಇನ್ನೂ ಏನೇನು ಕಾದಿದೆಯೋ ! ಎಂದು ಪುಂಖಾನುಪುಂಖವಾಗಿ ಮಾತುಗಳನ್ನು ಹರಿಯಬಿಡುತ್ತಿದ್ದರು.

ಇವೆಲ್ಲವೂ ಅಲ್ಲಿಯೇ ಇದ್ದ ಕೇಶವಯ್ಯನವರ ಪತ್ನಿ ರಾಧಮ್ಮನವರ ಕಿವಿಗೂ ಬಿದ್ದರೂ ಮಾತನಾಡುವವರನ್ನು ವಿರೋಧಿಸಲಾಗದೆ, ಹಾಗೂ ಮನೆಯಲ್ಲಿದ್ದವರ ಪರವಾಗಿ ಮಾತನಾಡಲೂ ಆಗಲಾರದಂತೆ ಅವರ ಪರಿಸ್ಥಿತಿ ಅಸಹಾಯಕತೆಯಿಂದ ವಿಲವಿಲನೆ ಒದ್ದಾಡುವಂತಾಗಿತ್ತು. ಇದೇ ಸಮಯದಲ್ಲಿ ಜೋಯಿಸರ ದೊಡ್ಡಪ್ಪನವರು ಜೀವಂತರಾಗಿದ್ದು ಇಲ್ಲಿಗೆ ಬಂದಿದ್ದರೆ ಏನಾಗುತ್ತಿತ್ತೆಂಬುದನ್ನು ನೆನೆಸಿಕೊಂಡರೇ ಸಾಕು ಮೈಮೇಲೆ ಮುಳ್ಳುಗಳೆದ್ದಂತಾಗುತ್ತದೆ. ಸದ್ಯ ಆ ಮನುಷ್ಯ ಜೋಯಿಸರ ಅವಸಾನವಾದ ನಂತರ ಬಂದು ಅಡ್ಡಾದಿಡ್ಡಿಯಾಗಿ ಮಾತನಾಡಿ ಹೋದವರು ಒಂದು ವಾರಕ್ಕೇ ದಿಢೀರನೆ ಹರಿಪಾದ ಸೇರಿದ್ದರು. ಅದನ್ನು ಕೇಳಿದಾಗ ನನಗೆ ಕೆಟ್ಟದ್ದೆನ್ನಿಸಿದರೂ ಅಂಥವರ ಸಂಖ್ಯೆ ಕಡಿಮೆಯಾದರೆ ಒಳ್ಳಿತೆಂದು ನಿರಾಳವಾಗಿದ್ದೆ. ಆದರೀಗ ಇಲ್ಲಿ ಬಂದಿದ್ದವರಲ್ಲಿ ಅಂಥವರು ಎಷ್ಟೋ ಜನರಿದ್ದಾರೆ. ಪಾಪ ಈ ಪಾಪದ ಹೆಣ್ಣುಮಗಳನ್ನು ಎಷ್ಟು ರೀತಿಯಲ್ಲಿ ಪರೀಕ್ಷಿಸುತ್ತಿದ್ದಾನೋ ಭಗವಂತ ಕಾಣೆ. ಬದುಕನ್ನು ನಾವಿಕನಿಲ್ಲದ ದೋಣಿಯಂತೆ ಮಾಡಿದೆಯೆಲ್ಲೋ ದೇವರೇ, ಇವಳಿಗೆ ರೂಪ, ಬುದ್ಧಿ, ಗುಣ, ಎಲ್ಲವನ್ನೂ ಕೊಟ್ಟ ನೀನು ಹಣೆಯಬರಹವನ್ನು ಹೀಗೇಕೆ ಬರೆದೆ? ಅವಸರ ಮಾಡಿಬಿಟ್ಟೆಯೋ ದೇವಾ. ಈ ಎರಡೂ ಕುಟುಂಬದ ಹಿತೈಷಿಗಳಾಗಿ ಮಕ್ಕಳ ದಾಂಪತ್ಯದ ನೊಗ ಹೊರಲು ಮುಂದೆನಿಂತ ನಮ್ಮ ಕಣ್ಮುಂದೆಯೇ ಹಿಗಾಗಬೇಕೇ? ಒಬ್ಬರಲ್ಲ ಇಬ್ಬರು ಜಾತಕ ನೋಡಿ ದಿವ್ಯವಾಗಿದೆ ಎಂದಿದ್ದರಲ್ಲ. ಎಲ್ಲಿ ಹಳಿ ತಪ್ಪಿತ್ತು. ಅಥವಾ ಜಾತಕವೇ ಸುಳ್ಳೇ ! ಅವರು ಗುರುತು ಹಾಕಿದ ಜನನದ ಘಳಿಗೆಗಳಲ್ಲಿನ ವ್ಯತ್ಯಾಸವೇನಾದರೂ ಇತ್ತೇ? ಇನ್ನು ಮುಂದಿನದನ್ನು ಆಲೋಚಿಸಿದರೆ ಭಯವಾಗುತ್ತದೆ. ಈ ಹುಡುಗಿಯನ್ನು ಆಚಾರ, ವಿಚಾರ, ಸಂಪ್ರದಾಯದ ಕಟ್ಟುಕಟ್ಟಳೆಗಳಲ್ಲಿ ಬಂಧಿಸಿ ಹಿಂಡಿ ಹಿಪ್ಪೆ ಮಾಡಿಬಿಡುತ್ತವೆ. ಅವುಗಳಿಗೆ ಕೊರಳೊಡ್ಡದಿದ್ದರೆ ಬಂದುಬಳಗ, ಸಮಾಜವನ್ನೆಲ್ಲ ಎದುರು ಹಾಕಿಕೊಂಡು ಬದುಕು ನಡೆಸಲು ಸಾಧ್ಯವೇ? ಸಾಲದ್ದಕ್ಕೆ ಮಠದವರಿಂದ ಬಹಿಷ್ಕಾರವನ್ನೂ ಎದುರಿಸಬೇಕಾಗುತ್ತದೆ. ಅದೂ ಕೈಯಲ್ಲಿರುವ ಎಳೆಯ ಬೊಮ್ಮಟೆಯ ಜವಾಬ್ದಾರಿಯನ್ನು ನಿಭಾಯಿಸಲು ಸಾಧ್ಯವೇ? ಹೀಗೇ ನಾನಾ ಯೋಚನೆಗಳ ತಾಕಲಾಟಕ್ಕೊಳಗಾದ ರಾಧಮ್ಮನವರಿಗೆ ಮಗುವಿನ ಅಳುವಿನ ಸದ್ದು ಎಚ್ಚರಿಸಿತ್ತು.

ಉದ್ದದ ನಿಟ್ಟುಸಿರೊಂದನ್ನು ಬಿಡುತ್ತಾ ತಲೆಬಾಗಿಲಿನಿಂದ ಒಳಬಂದು ರೂಮಿನೊಳಕ್ಕೆ ಹೋದರು. ಅಲ್ಲಿನ ದೃಶ್ಯ ಅವರನ್ನು ಮತ್ತಷ್ಟು ಕಂಗಾಲಾಗುವಂತೆ ಮಾಡಿತು. ಒಳಕ್ಕೆ ಯಾರು ಬಂದರು, ಯಾರು ಹೋದರೆಂಬ ಪರಿವೆಯೇ ಇಲ್ಲದಂತೆ ಮಲಗಿದ್ದ ಭಾಗ್ಯ, ಏನನ್ನೂ ಅರಿಯದ ಅಬೋಧ ಮಗು ಲಕ್ಷ್ಮಿ ಅಜ್ಜಿಯ ತೆಕ್ಕೆಯಲ್ಲಿದ್ದರೂ ಕೈಕಾಲು ಆಡಿಸಿ ಹೊರಬರಲು ಹವಣಿಸುತ್ತಿದೆಯೇನೋ ಎಂಬಂತಿತ್ತು. ಅದನ್ನು ಹಿಡಿದಿಟ್ಟಿದ್ದರಿಂದಲೇ ಅಳು. ರಾಧಮ್ಮನ ಕಣ್ತುಂಬಿಬಂದಿತು. ಬಾಗಿ ಮಗುವನ್ನು ಎತ್ತಿಕೊಂಡು ಹಿತ್ತಲಕಡೆ ನಡೆದರು.

ಅತ್ತೆಯವರು ಹಿತ್ತಲಿಗೆ ಹೋದದ್ದನ್ನು ನೋಡಿದ ಭಾವನಾ ಲಗುಬಗೆಯಿಂದ ಗೌರಿಯಮ್ಮನವರ ತಮ್ಮನ ಮನೆಯಿಂದ ಮಗುವಿಗಾಗಿ ಮಾಡಿಸಿಕೊಂಡು ಬಂದಿದ್ದ ಅನ್ನಕ್ಕೆ ತುಪ್ಪ ಸ್ವಲ್ಪ ಉಪ್ಪು ಬೆರೆಸಿ ಚೆನ್ನಾಗಿ ಮಿದ್ದು ಬಟ್ಟಲಲ್ಲಿ ಹಾಕಿಕೊಂಡು ಅದರೊಂದಿಗೆ ಕಾಯಿಸಿ ಆರಿಸಿಟ್ಟಿದ್ದ ನೀರನ್ನೂ ಲೋಟವೊಂದರಲ್ಲಿ ತೆಗೆದುಕೊಂಡು ಅತ್ತೆಯಿದ್ದಲ್ಲಿಗೆ ಬಂದಳು. “ಅತ್ತೇ ಹಿಡಿಯಿರಿ, ಅಕ್ಕ ಸದ್ಯಕ್ಕೆ ಎಚ್ಚರವಾಗುವ ಲಕ್ಷಣ ಕಾಣಿಸುತ್ತಿಲ್ಲ. ಮಗುವಿಗೆ ಹಸಿವಾಗಿರಬೇಕು, ಇದನ್ನು ಉಣಿಸಿ ಸ್ವಲ್ಪ ನೀರುಕುಡಿಸಿ ತಿರುಗಾಡಿಸಿ. ಸಮಾಧಾನವಾದನಂತರ ಪಕ್ಕದ ಮನೆಯವರ ಬಳಿ ಬಿಟ್ಟುಬನ್ನಿ. ಅದಕ್ಕೆ ಹಾಕುವ, ಹೊದಿಸುವ ಬಟ್ಟೆಗಳನ್ನಾಗಲೇ ಅವರಿಗೆ ಕೊಟ್ಟಿದ್ದೇನೆ. ಅವರು ಇವೆಲ್ಲ ಕಾರ್ಯ ಮುಗಿಯುವವರೆಗೂ ನಾವು ನೋಡಿಕೊಳ್ಳುತ್ತೇವೆ. ನೀವೇನೂ ಚಿಂತಿಸಬೇಡಿ. ಮಗು ನಮಗೆ ರೂಢಿಯಾಗಿದೆ ಎಂದಿದ್ದಾರೆ. ಯಾರಾದರು ಕೇಳಿದರೆ ಮಲಗಿದೆ ಎಂದರಾಯಿತು. ಇಲ್ಲವಾದರೆ ಬಂದವರೆಲ್ಲರೂ ಎತ್ತಿಕೊಳ್ಳುವುದು, ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸುವುದನ್ನು ಕೇಳಿ ಕೇಳಿ ತಲೆ ಕೆಟ್ಟುಹೋಗಿದೆ.” ಎಂದಳು ಭಾವನಾ.

ಸೊಸೆ ಹೇಳಿದ್ದು ರಾಧಮ್ಮನಿಗೂ ಸರಿಯೆನ್ನಿಸಿತು. ಆದರೆ “ಈ ಅನ್ನವನ್ನು ಎಲ್ಲಿಂದ ?” ತಡೆಯದೇ ಕೇಳಿದರು. ಅವರ ಅನುಮಾನಕ್ಕೆ ಚುಟುಕಾಗಿ ಉತ್ತರಿಸಿ ಮತ್ತಾರಾದರೂ ಬಂದಾರೆಂದು ಬಂದಷ್ಟೇ ವೇಗವಾಗಿ ಒಳಹೋದಳು ಭಾವನಾ.

ಸೊಸೆಯ ಮುಂದಾಲೋಚನೆಗೆ ರಾಧಮ್ಮ ಮನದಲ್ಲೇ ಮುಚ್ಚುಗೆ ಸೂಚಿಸುತ್ತಾ ಆಕೆಯ ಮಾತಿನಂತೆ ಅಲ್ಲೇ ಕೈತೋಟದಲ್ಲಿದ್ದ ಬೆಂಚಿನ ಮೇಲೆ ಮಗುವನ್ನು ಕೂಡಿಸಿಕೊಂಡು ತುತ್ತನ್ನು ಬಾಯಿಗಿಟ್ಟರು. ಅಳು ನಿಲ್ಲಿಸಿ ಅದು ಬಾಯಿಚಪ್ಪರಿಸಿಕೊಂಡು ತಿಂದು ಮುಗಿಸಿತು. ಬಾಯಿ ತೊಳೆದು ನೀರು ಕುಡಿಸಿ ಅಲ್ಲಿಯೇ ಸ್ವಲ್ಪ ಅಡ್ಡಾಡಿಸಿದರು. ಕಳೆದ ವಾರ ಮನೆಗೆ ಬಂದಿದ್ದಾಗ “ರಾಧತ್ತೇ ನೋಡಿ ನನ್ನ ಮಗಳಿಗಿನ್ನೂ ಹತ್ತು ತಿಂಗಳೇ ತುಂಬಿಲ್ಲ. ಎಷ್ಟು ಚೆನ್ನಾಗಿ ಓಡಾಡುತ್ತಾಳೆ” ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಳು ಭಾಗ್ಯ. ಪಾಪ ಬಯಸೀ ಬಯಸೀ ತಾಯಿಯಾದವಳು ಅವಳಿಗೆ ಈಗ ಇಂತಹ ದುರ್ಗತಿ ಬಂದೊದಗಿದೆ. ಅಷ್ಟರಲ್ಲಿ “ಅವ್ವಾ” ಎಂಬ ಕರೆ ಕೇಳಿಸಿತು. ಧ್ವನಿ ಬಂದಕಡೆಗೆ ತಿರುಗಿದರು. ಭಾವನಾ ಹೇಳಿದಂತೆ ಪಕ್ಕದ ಮನೆಯ ಹೆಂಗಸು ಬಂದಿದ್ದಳು. “ಓ ನೀವೇ ಬಂದಿರಾ ನಾನು” ಎಂದು ಮಾತು ಮುಗಿಸುವ ಮೊದಲೇ “ಭಾವನಾಮ್ಮ ಹೇಳಿದ್ದರು. ಮಗುವಿನ ಅಳು ಕೇಳಿ ಕಿಟಕಿಯಿಂದ ನೋಡಿದ್ದೆ. ಈಗ ಮಗುವನ್ನು ಕರೆದುಕೊಂಡು ಹೋಗಲು ಬಂದೆ” ಎಂದು ಹೇಳುತ್ತಾ ‘ಸಿರಿಪುಟ್ಟಿ’ ಎನ್ನುತ್ತಿದ್ದಂತೆ ಖುಷಿಯಿಂದ ಅವರ ತೆಕ್ಕೆಗೆ ಹೋಯಿತು. ಅವರಿಗೆ “ಜೋಪಾನ” ಎಂದು ಹೇಳುತ್ತಾ ತಾವು ಮನೆಯೊಳಕ್ಕೆ ಹೋದರು ರಾಧಮ್ಮ,

ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : http://surahonne.com/?p=36343

ಬಿ.ಆರ್.ನಾಗರತ್ನ, ಮೈಸೂರು

4 Responses

  1. ನಯನ ಬಜಕೂಡ್ಲು says:

    ಸರಾಗವಾಗಿ ಸಾಗುತಿದ್ದ ಕತೆಯಲ್ಲಿ ನೋವಿನ ಎಳೆ

  2. ಹಾ..ನಯನ.ಮೇಡಂ…ಮುಂದೆ.. ಓದುತ್ತಾ..
    ನಿಮ್ಮ… ಪ್ರತಿ ಕ್ರಿಯೆ…ಕೊಡಿ..ಧನ್ಯವಾದಗಳು

  3. ಆಶಾ ನೂಜಿ says:

    ಚಂದದಕಥೆ

  4. ಧನ್ಯವಾದಗಳು ಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: