ಅತ್ಯುನ್ನತ ಕೀರ್ತಿಯ ಅತ್ರಿ
‘ನಿನ್ನ ಸತ್ಕೀರ್ತಿ ಆಚಂದ್ರಾರ್ಕ ಪರ್ಯಂತ ಬೆಳಗಿ ಅಮರನಾಗು’ ಎಂಬುದಾಗಿ ಗುರುಹಿರಿಯರು ಹೃದಯತುಂಬಿ ಹರಿಸುವುದನ್ನು ನೋಡಿದ್ದೇನೆ. ಆದರೆ ನವಗ್ರಹ ಶ್ರೇಷ್ಠರೂ ದಿನ ರಾತ್ರಿಗಳ ಹಿಡಿತದಲ್ಲಿರುವವರೂ ಆದ ”ಸೂರ್ಯ-ಚಂದ್ರರ ಸ್ಥಾನವೇ ನಿನಗೆ ಸಿಗಲಿ” ಎಂಬ ಶುಭಾಶೀರ್ವಾದವನ್ನು ಯಾರೂ ಕೊಡುವುದೂ ಇಲ್ಲ, ಬಯಸುವುದೂ ಇಲ್ಲ. ಕಾರಣ ಸೂರ್ಯ ಚಂದ್ರರ ಸ್ಥಾನ ಬೇರೆಯವರಿಗೆ ದೊರಕುವುದಕ್ಕೆ ಸಾಧ್ಯವೇ? ಇಲ್ಲ….. ಖಂಡಿತ ಇಲ್ಲ ಎಂಬುದು ಈ ಪ್ರಶ್ನೆಗೆ ನಮ್ಮ ಉತ್ತರ. ಆದರೆ…. ಬ್ರಹ್ಮನ ಮಾನಸ ಪುತ್ರನಾಗಿ ಬ್ರಹ್ಮನ ಅಧಿಕಾರವನ್ನೂ ಒಮ್ಮೆ ವಹಿಸಿಕೊಂಡು ಹಾಗೆಯೇ ಚಂದ್ರನ ಸ್ಥಾನವೂ ಲಭಿಸಿದ ಮಹರ್ಷಿಯೊಬ್ಬನಿದ್ದ. ಆತನೇ ಅತ್ರಿ ಮಹರ್ಷಿ.
ಈಗಾಗಲೇ ಸೂಚಿಸಿದಂತೆ ಅತ್ರಿಯು ಬ್ರಹ್ಮನ ಮಾನಸಪುತ್ರ, ವೈವಸ್ವತ ಮನ್ವಂತರದವ. ಇವನ ಪತ್ನಿ ಕರ್ದಮ ಮುನಿಯ ಪುತ್ರಿಯಾದ ಅನಸೂಯೆ. ಈತನು ಕೆಲಕಾಲ ಬ್ರಹ್ಮನ ಅಧಿಕಾರದಲ್ಲಿದ್ದ. ಈತನಿಗೆ ಅನೇಕ ಮಹರ್ಷಿಗಳು ಮುಂದೆ ಮಕ್ಕಳಾದರೂ ದೂರ್ವಾಸ, ದತ್ತಾತ್ರೇಯ, ಚಂದ್ರರೆಂಬ ಮೂವರು ಪ್ರಖ್ಯಾತ ಮಕ್ಕಳು. ಈ ಮೂವರು ಮಕ್ಕಳಾಗುವುದಕ್ಕೂ ಒಂದು ವಿಶೇಷ ಕತೆಯಿದೆ.
ಅತ್ರಿ-ಅನಸೂಯೆಯರು ಪುತ್ರ ಸಂತತಿಗಾಗಿ ವಿಷ್ಣುವನ್ನು ಕುರಿತು ಅನೇಕ ಕಾಲ ಪ್ರಾರ್ಥಿಸುತ್ತಾ ಬಂದರು. ಹೀಗಿರಲು ಒಂದು ದಿನ ಬ್ರಹ್ಮ , ವಿಷ್ಣು, ಮಹೇಶ್ವರರಿಗೆ ಅನಸೂಯೆಯ ಪಾತಿವ್ರತ್ಯವನ್ನು ಪರೀಕ್ಷಿಸಬೇಕೆಂಬ ಇಚ್ಛೆಯುಂಟಾಯಿತು. ಸರಿ, ಅನಸೂಯೆಯ ಶಕ್ತಿಯನ್ನು ಒರೆಹಚ್ಚಲು ಆಕೆಯ ಗೃಹಕ್ಕೆ ಅತಿಥಿಗಳಾಗಿ ಮೂವರೂ ಹೋದರು. ಮನೆಗೆ ಬಂದ ಅತಿಥಿಗಳನ್ನು ಆದರಿಸುವುದು ಭಾರತಿಯ ನಾರಿಗೆ ಅನಾದಿ ಕಾಲದಿಂದಲೇ ಪಾರಂಪರ್ಯವಾಗಿ ಬಂದ ಧರ್ಮ. ಮನೆಯ ಯಜಮಾನ ಇಲ್ಲದೆ ಹೋದರೂ ಮನೆಯೊಡತಿ ಊಟೋಪಚಾರಗಳನ್ನಿತ್ತು ಸತ್ಕರಿಸಬೇಕಾದ್ದು ಸತ್ಸಂಪ್ರದಾಯ.
ಅತ್ರಿಮುನಿ ಮನೆಯಲ್ಲಿಲ್ಲದ ಹೊತ್ತು ನೋಡಿ ಗಮನಿಸಿಕೊಂಡು ಮೂವರೂ ಬಂದು ಕುಶಲೋಪರಿ ವಿಚಾರಿಸುತ್ತಾ ನಿಂತರು. ಅನಸೂಯೆ ಬಂದವರನ್ನು ಸತ್ಕರಿಸಲು ಮುಂದಾದಳು, ಆಗ ಮೂವರೂ ಆಕೆಯೊಡನೆ ”ನೀನು ವಿವಸ್ತ್ರಳಾಗಿ ನಮಗೆ ಉಪಚರಿಸುವುದಾದಲ್ಲಿ ಮಾತ್ರ ನಿನ್ನ ಸತ್ಕಾರವನ್ನು ಸ್ವೀಕರಿಸುತ್ತೇವೆ” ಎಂದರು. ಅನಸೂಯೆ ಇಕ್ಕಟ್ಟಿಗೆ ಸಿಲುಕಿದಳು. ಒಳಗೆ ಹೋಗಿ ಸ್ವಲ್ಪ ಹೊತ್ತು ಚಿಂತಿಸಿ ಒಂದು ನಿರ್ಧಾರಕ್ಕೆ ಬಂದಳು. ದೇವರನ್ನು ಧ್ಯಾನಿಸಿ ಒಂದಷ್ಟು ಉದಕವನ್ನು ಮಂತ್ರಿಸಿ ಹೊರಗೆ ಬಂದು ಅವರುಗಳ ಮೈ ಮೇಲೆ ಪ್ರೋಕ್ಷಣೆ ಮಾಡಿದಳು. ಏನಾಶ್ಚರ್ಯ..! ತಕ್ಷಣವೇ ಆ ಮೂವರೂ ಶೈಶಾವಸ್ಥೆಯ ಹಾಲು ಹಸುಳೆಯಾದರು. ಮೂವರು ಕಂದಮ್ಮಗಳೂ ತಾಯ ಹಾಲಿಗಾಗಿ ಹಂಬಲಿಸಿ ಅಳುವುದನ್ನು ನೋಡಿದ ಆಕೆ ದಿಕ್ಕೇ ತೋಚದೆ ಕಂಗೆಟ್ಟು ಅಳುವ ಮಕ್ಕಳನ್ನು ಸಂತೈಸಿದ ಅನಸೂಯೆಯ ಮಾತೃಪ್ರೇಮ ಉಕ್ಕಿ ಹರಿದು ಆಕೆಯ ಸ್ತನಗಳಲ್ಲಿ ಹಾಲೂ ಹರಿಯಿತು. ದೇವರ ಆಟ ಬಲ್ಲವರಾರು…? ಅನಸೂಯೆಗೆ ಒಮ್ಮಿಂದೊಮ್ಮೆಗೆ ಮೂವರು ಹಾಲು ಹಸುಳೆಯರಾದರು. ಹೊರಗೆ ಹೋಗಿದ್ದ ಅತ್ರಿಮುನಿ ಹಿಂತಿರುಗಿ ಬಂದಾಗ ತನ್ನ ಪತ್ನಿಯ ಮಡಿಲಲ್ಲಿ ಮೂರು ಹಾಲು ಹಸುಳೆಗಳು ಮಲಗಿರುವುದನ್ನೂ, ಆಕೆ ಹಾಲೂಡುವುದನ್ನೂ ಕಾಣುತ್ತಾನೆ. ನಡೆದ ವಿಚಾರವನ್ನುಪತಿಗೆ ತಿಳಿಸಿದಾಗ ಅತ್ರಿಯು ಅವರಿಗೆ ಸಂತೋಷದಿಂದ ದತ್ತಾತ್ರೇಯ, ಚಂದ್ರ, ದೂರ್ವಾಸರೆಂದು ಹೆಸರಿಟ್ಟನು.
ಅತ್ರಿಮುನಿಯು ಮೂರು ಸಾವಿರ ವರ್ಷ ಕಾಲ ತಪಸ್ಸು ಮಾಡಿದನು. ಆಗ ಆತನ ಕಣ್ಣಿನಿಂದ ಸುರಿದ ತೇಜಸ್ಸಿನಿಂದ ಚಂದ್ರನು ಹುಟ್ಟಿದನು ಎಂಬುದೂ ಪುರಾಣದಲ್ಲಿ ಉಲ್ಲೇಖವಿದೆ.
ದೇವತೆಗಳಿಗೂ ದಾನವರಿಗೂ ಸಮುದ್ರ ಮಥನವಾದಾಗ ಸಿಕ್ಕಿದ ಅಮೃತವನ್ನು ದೇವತೆಗಳ ಸಲಹೆಯಂತೆ ಚಂದ್ರನು ಪಡೆಯುತ್ತಾನೆ. ಆಗ ರಾಕ್ಷಸರು ಅವನನ್ನು ಬೆನ್ನಟ್ಟುತ್ತಾರೆ. ಚಂದ್ರನು ಓಡೋಡಿ ಶಿವನ ಮೊರೆ ಹೋಗುತ್ತಾನೆ. ಆ ಸಮಯದಲ್ಲಿ ಕತ್ತಲು ಆವರಿಸಲಾಗಿ ಚಂದ್ರನ ಸ್ಥಾನವನ್ನು ಅತ್ರಿಮುನಿ ತುಂಬಿ ಬೆಳಕು ಪಸರಿಸುವಂತೆ ಮಾಡುತ್ತಾನೆ. ಚಂದ್ರನು ಅಮೃತ ಕಲಶದೊಂದಿಗೆ ಶಿವನಲ್ಲಿಗೆ ಹೋದನಷ್ಟೆ ! ಅಮೃತವನ್ನೆಲ್ಲ ನೀನು ಕುಡಿದು ಬಿಡು ಎಂದು ಶಿವ ಚಂದ್ರನಿಗೆ ಹೇಳುತ್ತಾನೆ. ಅಮೃತವಾದರೂ ಹದಮೀರಿದರೆ ಅಪಾಯವೇ ಸರಿ, ಚಂದ್ರ… ಹಿಂದು-ಮುಂದು ನೋಡಿದಾಗ ನಿನ್ನನ್ನು ನಾನು ರಕ್ಷಿಸುತ್ತೇನೆ’ ಎಂದು ಅಭಯ ನೀಡಿದಾಗ ಚಂದ್ರ ಕುಡಿದು ಬಿಡುತ್ತಾನೆ. ಕೊಟ್ಟ ಮಾತಿನಂತೆ ಶಿವನು ಚಂದ್ರನನ್ನು ತಲೆಯಲ್ಲಿ ಧರಿಸುತ್ತಾನೆ. ಶಿವನ ಶರೀರದಲ್ಲಿ ಒಂದು ಆಭರಣವಾಗಿ ಚಂದ್ರ ಶೋಭಿಸುತ್ತಾನೆ.
ಒಮ್ಮೆ ಅಸುರರು ಅತ್ರಿಯನ್ನು ನೂರು ದ್ವಾರಗಳುಳ್ಳ ಯಂತ್ರದಲ್ಲಿ ಹಾಕಿ ತುಷಾಗ್ನಿಯಿಂದ ಸುಡುವಾಗ ಅತ್ರಿಯು ಆಶ್ವಿನೀ ದೇವತೆಗಳನ್ನು ಪ್ರಾರ್ಥಿಸುತ್ತಾನೆ. ಅವರು ಬಂದು ನೀರಿನಿಂದ ಬೆಂಕಿಯನ್ನು ನಂದಿಸಿ ಆತನನ್ನು ಬದುಕಿಸುತ್ತಾರೆ.
ಶ್ರೀರಾಮನು ಅರಣ್ಯವಾಸದ ಸಮಯದಲ್ಲಿ ಅತ್ರಿಮುನಿಯ ಆಶ್ರಮಕ್ಕೆ ಹೋಗಿದ್ದಾಗ ಅತ್ರಿಮುನಿಯ ಪತ್ನಿಯಾದ ಅನಸೂಯೆ ಸೀತೆಯನ್ನು ಬಹಳವಾಗಿ ಆದರಿಸಿ ಆಕೆಗೆ ಅನೇಕ ಸ್ತ್ರೀ ಧರ್ಮ ರಹಸ್ಯಗಳನ್ನು ತಿಳಿ ಹೇಳಿ ಸೌಮಾಂಗಲ್ಯವನ್ನು ವೃದ್ಧಿಸುವ ವಸ್ತ್ರ, ಗಂಧ, ಮೂಲ್ಯಾದಿ ಭೂಷಣಗಳನ್ನು ಕೊಟ್ಟು ಬಹಳವಾಗಿ ಕೊಂಡಾಡಿ ಹರಸುತ್ತಾಳೆ.
ಅತ್ರಿಮುನಿಯು ಗೋತ್ರ ಪ್ರವರ್ತಕನು, ಈತನು ಧ್ರುವನ ತಂದೆಯಾದ ಉತ್ತಾನಪಾದನನ್ನು ದತ್ತಕ್ಕೆ ತೆಗೆದುಕೊಂಡಿದ್ದನು ಎಂಬುದು ಹರಿವಂಶದಿಂದ ವೇದ್ಯ.
ವಿಜಯಾ ಸುಬ್ರಹ್ಮಣ್ಯ, ಕುಂಬಳೆ
ಅಡ್ಮಿನರ್ ಹೇಮಮಾಲಾ ಹಾಗೂ ಓದುಗ ಬಳಗಕ್ಕೆ ಧನ್ಯವಾದಗಳು.
Nice
ಎಂದಿನಂತೆ…ಪೌರಾಣಿಕ ಕಥೆಯ ಹಂದರದಲ್ಲಿ..
ಈ ಸಾರಿಯ ಕಥೆ… ಅನಸೂಯಾ ಹಾಗೂ ಅತ್ರಿಮುನಿಯ ..
ಕಥೆ ಚೆನ್ನಾಗಿ ಬಂದಿದೆ.
ಧನ್ಯವಾದಗಳು ಮೇಡಂ
ಅತ್ರಿ ಮಹಾಮುನಿ ಮತ್ತು ಅನಸೂಯಾ ದೇವಿಯರ ಪಾವಿತ್ರತೆ ಹಾಗೂ ಶಕ್ತಿಯ ಅರಿವು ಮೂಡಿಸುವುದರ ಜೊತೆಗೆ ತ್ರಿಮೂರ್ತಿ ರೂಪಿಗಳ ಬಗ್ಗೆ ತಿಳಿಸುವ ಸೊಗಸಾದ ಪೌರಾಣಿಕ ಕಥೆ. ಧನ್ಯವಾದಗಳು ವಿಜಯಕ್ಕ.
ಲೇಖನ ಓದಿದಾಗ, ಬಾಲ್ಯದಲ್ಲಿ ನೋಡಿದ್ದ ‘ಮಹಾಸತಿ ಅನಸೂಯ’ ಸಿನಿಮಾದ ದೃಶ್ಯಗಳು ಕಣ್ಣ ಮುಂದೆ ಬಂದವು. ಗೊತ್ರ ಪ್ರವರ್ತಕರಾದ ಅತ್ರಿ ಮುನಿಯ ಮಹಿಮೆಯನ್ನು ತಿಳಿಸುವ ಲೇಖನ ಬಹಳ ಚೆನ್ನಾಗಿದೆ.