ಕಾದಂಬರಿ: ನೆರಳು…ಕಿರಣ 21
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..
“ಭಾಗ್ಯಮ್ಮಾ ನಿನಗೆ ಅಭಿನಂದನೆಗಳು, ನೀನು ಮೆಟ್ರಿಕ್ ಪರೀಕ್ಷೆಯಲ್ಲಿ ನಿಮ್ಮ ಶಾಲೆಗೇ ಮೊದಲಿಗಳಾಗಿ, ಅಷ್ಟೇ ಅಲ್ಲ ನಮ್ಮ ರಾಜ್ಯಕ್ಕೇ ಎರಡನೆಯ ರ್‍ಯಾಂಕ್ ಪಡೆದು ಉತ್ತೀರ್ಣಳಾಗಿದ್ದೀಯೆ. ನೋಡಿಲ್ಲಿ ಪೇಪರ್‌ನಲ್ಲಿ ನಿನ್ನ ಫೋಟೋ ಹಾಕಿದ್ದಾರೆ.” ಎಂದು ಹೇಳುತ್ತಾ ಆ ದಿನದ ಪೇಪರನ್ನು ಅವಳ ಕೈಗಿತ್ತರು. ಮೊದಲನೆಯ ದರ್ಜೆಯನ್ನು ನಿರೀಕ್ಷಿಸಿದ್ದಳು ಆದರೆ ಇದೆಲ್ಲವನ್ನೂ ಅಲ್ಲ ಎಂದುಕೊಂಡು ಸರಸರನೆ ಪೇಪರ್ ಬಿಡಿಸಿ ನೋಡಿದಳು ಭಾಗ್ಯ. ಅಚ್ಚರಿ, ಆನಂದ ಎರಡೂ ಒಟ್ಟಿಗೇ ಮುಖದಲ್ಲಿ ಹೊಮ್ಮಿದವು. ಅಷ್ಟರಲ್ಲಿ ಭಾವನಾ “ಅಕ್ಕಾ ಬೆಳಗ್ಗೆ ವಾಕಿಂಗ್ ಹೋಗಿ ಬರುವಾಗಲೇ ಪೇಪರ್ ತಂದಿದ್ದೆವು. ನಾವೆಲ್ಲ ಅಲ್ಲೇ ನೋಡಿದೆವು. ಮಾವಯ್ಯ, ಭಾವ, ಅತ್ತೆಯವರು ಅಷ್ಟೇ ಏಕೆ ನಾಣಜ್ಜಾ ಕೂಡ ಈಗಲೇ ಹೇಳುವುದು ಬೇಡ, ಪೂಜೆಯಾದ ನಂತರ ಸರ್‌ಪ್ರೈಸ್ ಕೊಡೋಣವೆಂದು ನನ್ನನ್ನು ತಡೆದುಬಿಟ್ಟರು” ಎಂದಳು.
“ಹಾ ! ಈಗ ಇನ್ನೊಂದು ಸರ್‌ಪ್ರೈಸ್” ಎಂದರು ಸೀತಮ್ಮ. “ಏನತ್ತೆ?” ಎಂದಾಗ ತಮ್ಮ ಕೈಯಲ್ಲಿದ್ದ ಬಾಕ್ಸನ್ನು ಅವಳಿಗೆ ಕೊಟ್ಟರು. “ತೆಗೆದುನೋಡು” ಎಂದರು. ಚಿನ್ನದ ಒಂದೆಳೆಯ ಸರ, ಜೊತೆಬಳೆ, ಜೊತೆ ಓಲೆ ಎಲ್ಲವೂ ಅದರಲ್ಲಿದ್ದವು. “ಅತ್ತೇ ಮದುವೆಯಲ್ಲಿ ಎಲ್ಲವನ್ನೂ ಹಾಕಿದ್ದಿರಲ್ಲಾ ಮತ್ತೇಕೆ?” ಎಂದಳು ಭಾಗ್ಯ.
“ಹೂ,,ಇದನ್ನು ಮದುವೆಯಲ್ಲೇ ಕೊಡಬೇಕಿತ್ತು. ಆದರೆ ಆಚಾರಿ ಸಮಯಕ್ಕೆ ಸರಿಯಾಗಿ ಮಾಡಿಕೊಡಲಿಲ್ಲ. ನೆನ್ನೆ ನಾರಾಣಪ್ಪನನ್ನು ಅವನ ಬಳಿಗೆ ಕಳುಹಿಸಿದ್ದೆ. ಆಗಿದೆಯೆಂದು ಕಳಿಸಿದ್ದನು. ಇವತ್ತು ನಿನ್ನ ರಿಸಲ್ಟ್, ಅಮ್ಮನ ಮನೆಗೂ ಹೋಗುವುದಿತ್ತಲ್ಲ, ಅದಕ್ಕೆ ನೆನ್ನೆ ತೋರಿಸಲಿಲ್ಲ. ನನ್ನ ಕಡೆಯಿಂದ ನಿನಗೆ ಉಡುಗೊರೆ. ಒಳ್ಳೆಯದಾಗಲಿ” ಎಂದು ಮನತುಂಬಿ ಹರಸಿದರು.
ಅವರುಗಳ ಪ್ರೀತಿ, ವಾತ್ಸಲ್ಯ ಕಂಡು ಭಾಗ್ಯಳಿಗೆ ಹೃದಯ ತುಂಬಿಬಂದಿತು. ಸ್ವಲ್ಪ ಹೊತ್ತಿನ ಹಿಂದೆ ಯಾರಿಗೂ ತನ್ನ ಫಲಿತಾಂಶದ ಬಗ್ಗೆ ಆಸಕ್ತಿಯಿಲ್ಲವೆಂದು ತಪ್ಪಾಗಿ ಕಲ್ಪಿಸಿಕೊಂಡಿದ್ದಳು. ಅತ್ತೆ, ಮಾವ, ಗಂಡ ಜೊತೆಗೆ ನಾಣಜ್ಜನಿಗೂ ಕಾಲಿಗೆ ನಮಸ್ಕಾರ ಮಾಡಿದಳು.
“ಹಾ ಮಗೂ ಎಲ್ಲವೂ ಸುಖಾಂತವಾಯಿತಲ್ಲಾ, ಹಲೊ ನಾಣಿ ಇವತ್ತು ಊಟಕ್ಕೇನೇನು ಸ್ಪೆಷಲ್” ಎಂದು ಕೇಳಿದರು ಜೋಯಿಸರು.
ತಕ್ಷಣವೇ ನಾರಾಣಪ್ಪ “ಅದೂ ಕೂಡ ಸರ್‌ಪ್ರೈಸ್, ಊಟಕ್ಕೆ ಕುಳಿತಾಗಲೇ ತಿಳಿಯುವುದು” ಎಂದು ಹೇಳುತ್ತಾ ತನ್ನ ಕೆಲಸ ಗಮನಿಸಲು ಅಡುಗೆಮನೆಯತ್ತ ಹೊರಟರು. ಭಾಗ್ಯಳೂ ಅವರನ್ನನುಸರಿಸಿದಳು. ಭಾವನಾ ತನ್ನೆರಡು ಪುಟ್ಟ ತಂಗಿಯರನ್ನು ಕರೆದುಕೊಂಡು ಹಾಲಿನಲ್ಲಿದ್ದ ಒಂದು ರೂಮಿಗೆ ಬಂದಳು. ಅಲ್ಲಿಯೇ ಅವರ ಠಿಕಾಣಿಯಾಗಿತ್ತು. “ವೀಣಾ, ವಾಣಿ ನಿಮ್ಮ ಬಟ್ಟೆಬರೆ, ಮತ್ತೇನೇನು ತಂದಿದ್ದಿರಿ ಎಲ್ಲವನ್ನೂ ಪ್ಯಾಕ್ ಮಾಡಿಕೊಳ್ಳಿ. ಊಟವಾದ ನಂತರ ನಮ್ಮ ಮನೆಗೆ ಹೋಗಬೇಕು ಗೊತ್ತಲ್ಲವಾ?” ಎಂದಳು.
ಅಕ್ಕ ಭಾವನಾಳ ಮಾತುಗಳನ್ನು ಕೇಳಿದ ಇಬ್ಬರೂ “ಹೂ ನಮಗೆಲ್ಲಾ ಗೊತ್ತು, ನೋಡಿಲ್ಲಿ ಚೀಲದಲ್ಲಿ ಹಾಕಿಬಿಟ್ಟಿದ್ದೇವೆ. ಆದರೆ ಇವತ್ತು ಸ್ನಾನ ಮಾಡಿದಾಗ ಬಿಚ್ಚಿದ ಬಟ್ಟೆಗಳನ್ನು ಯಾವುದರಲ್ಲಿ ಹಾಕುವುದು? ಅವು ಮೈಲಿಗೆಯಲ್ಲವಾ?” ಎಂದರು.
“ಚಿಂತೆಮಾಡಬೇಡಿ, ನಾನಾಗಲೇ ಅವುಗಳನ್ನು ತೊಳೆದು ಮಹಡಿಯಮೇಲೆ ಹರವಿದ್ದೇನೆ. ಬಿಸಿಲೂ ಜೋರಾಗಿದೆ. ನಾವೆಲ್ಲ ಸಿದ್ಧವಾಗುವೇಳೆಗೆ ಒಣಗಿರುತ್ತವೆ. ಆಗ ತೆಗೆದುಕೊಂಡು ಹೋಗೋಣ.” ಎಂದಳು.
“ಥ್ಯಾಂಕ್ಸ್ ಅಕ್ಕಾ” ಎಂದರು ತಂಗಿಯರು.
“ಮಕ್ಕಳೇ ಊಟಕ್ಕೆ ಬನ್ನಿ” ಎಂದು ಕೂಗಿದರು ಸೀತಮ್ಮ.
“ಪ್ಯಾಕಿಂಗ್ ಬಗ್ಗೆ ವಿಚಾರಿಸಲು ಆಮೇಲೇ ಬರಬಹುದಿತ್ತು. ಕೆಳಗೆ ಅಕ್ಕಾ ಒಬ್ಬಳೇ ಆಗಿದ್ದಾಳೆ. ನಾವೂ ಸೇರಿ ಊಟಕ್ಕೆ ರೆಡಿಮಾಡಬಹುದಿತ್ತು. ಬನ್ನಿ ಬನ್ನಿ” ಎಂದು ಅವರಿಬ್ಬರನ್ನೂ ಕರೆದುಕೊಂಡು ಬಂದಳು ಭಾವನಾ. ಅಷ್ಟು ಹೊತ್ತಿಗೆ ಎಲ್ಲವನ್ನೂ ಸಿದ್ಧಪಡಿಸಿದ್ದ ಸೀತಮ್ಮನವರು ಇವರನ್ನು “ಬನ್ನಿ, ಕುಳಿತುಕೊಳ್ಳಿ” ಎಂದರು.
“ನಾನೂ ಬಡಿಸುತ್ತೇನೆ ಅತ್ತೆ ಎಂದ ಭಾವನಾಳಿಗೆ ನಾರಾಣಪ್ಪ ಬಡಿಸುತ್ತಾರೆ, ನೀವೆಲ್ಲರೂ ಕುಳಿತುಕೊಳ್ಳಿ. ಭಾಗ್ಯಳನ್ನೂ ಕರೆತರುತ್ತೇನೆ” ಎಂದು ಹೇಳಿ ಹೊರನಡೆದರು ಸೀತಮ್ಮ. ಅಡುಗೆಮನೆಯಲ್ಲಿ ತಯಾರಿಸಿದ್ದ ಪದಾರ್ಥಗಳನ್ನು ಬಡಿಸುವ ಪಾತ್ರೆಗಳಿಗೆ ತೋಡುತ್ತಿದ್ದ ಭಾಗ್ಯಳನ್ನು ನೋಡಿ ಸೀತಮ್ಮ “ಬಾಮ್ಮ, ನಾರಾಣಪ್ಪ ಬಡಿಸುತ್ತಾರೆ. ಅವರಿಗೆ ಅಭ್ಯಾಸವಿದೆ. ಬೆಳಗಿನಿಂದ ಬೇಡವೆಂದರೂ ಇಲ್ಲೇ ಏನಾದರೊಂದು ಕೆಲಸ ಮಾಡುತ್ತಲೇ ಇದ್ದೀಯ. ಈಗ ಬಾ, ಊಟ ಮುಗಿಸಿ ಸ್ವಲ್ಪ ವಿಶ್ರಾಂತಿ ಪಡೆದು ಅಮ್ಮನ ಮನೆಗೆ ಹೊರಡಬೇಕು. ಅಮ್ಮನ ಮನೆಯಿಂದ ಹಿಂದಿರುಗಿದ ಮೇಲೆ ನಾನೇ ನೀನು ಬೆಡವೆಂದರೂ ಅಡುಗೆಯ ಮನೆಗೆ ಕಳುಹಿಸುತ್ತೇನೆ. ನಿನಗೆ ಓದಿನಲ್ಲಿ ಎಷ್ಟು ಆಸಕ್ತಿಯಿದೆಯೋ, ಅಷ್ಟೇ ಆಸಕ್ತಿ ಅಡುಗೆ ಮಾಡುವುದರಲ್ಲೂ ಇದೆಯೆಂಬುದು ಗೊತ್ತು.”ಎಂದರು ಸೀತಮ್ಮ.
“ನಿಮಗಿಲ್ಲವೇ ಅತ್ತೆ?” ಎಂದಳು ಭಾಗ್ಯ.
ಅವಳ ಮಾತಿಗೆ ನಾರಾಣಪ್ಪ ಪಕ್ಕನೆ ನಕ್ಕು “ದೊಡ್ಡಮ್ಮನಿಗೆ ಅಡುಗೆ, ತಿಂಡಿ ಮಾಡುವುದರಲ್ಲಿ ಅಷ್ಟೊಂದು ಆಸಕ್ತಿಯಿಲ್ಲ. ಏಕೆಂದರೆ ನಾನು ಚಿಕ್ಕವನಿದ್ದಾಗಲೇ ಇಲ್ಲಿಗೆ ಬಂದದ್ದು. ಆಗ ಹಿರಿಯಜ್ಜಿ ದೊಡ್ಡದೊಡ್ಡ ಸಮಾರಂಭಗಳಿದ್ದಾಗಲೂ ಲೀಲಾಜಾಲವಾಗಿ ಅಡುಗೆ ಮಾಡಿಬಿಡುತ್ತಿದ್ದರು. ಧಣಿಯವರ ಅಮ್ಮನೂ ಸೈ, ಇವರಿಗೆ ಅವರಿಬ್ಬರೂ ಅಡುಗೆ ಮಾಡಲು ಬಿಡುತ್ತಲೇ ಇರಲಿಲ್ಲ. ಆಮೇಲೆ ನನ್ನ ಹೆಂಡತಿ, ನಂತರ ನಾನೂ, ಅದೇ ಅಭ್ಯಾಸವಾಗಿ ನಾನು ಹೇಗೆ ಮಾಡಿದರೂ ಏನೂ ಅನ್ನುವುದಿಲ್ಲ. ನಾನು ಕೇಳುವ ಪರಿಕರಗಳನ್ನೆಲ್ಲ ಅಚ್ಚುಕಟ್ಟಾಗಿ ಒದಗಿಸುತ್ತಾರೆ. ನನಗೆ ಯಾರೊಬ್ಬರೂ ಅಳತೆ, ಹಾಗೆ ಹೀಗೆ ಮಾಡಬೇಕೆಂದು ಹೇಳೇಕೊಟ್ಟಿಲ್ಲ. ಹೀಗಾಗಿ ಅಂದಾಜಿನಲ್ಲಿ ತಿಳಿದಂತೆ ಮಾಡುತ್ತೇನೆ. ಆದರೆ ನಿಮ್ಮ ವಯಸ್ಸು ಚಿಕ್ಕದಾದರೂ ಅನುಭವ ಚೆನ್ನಾಗಿದೆ. ನಿಮ್ಮ ಹೆತ್ತಮ್ಮನವರು ಚೆನ್ನಾಗಿ ತರಬೇತಿ ಕೊಟ್ಟಿದ್ದಾರೆ. ನಾನು ನಿಮ್ಮ ಹತ್ತಿರ ಕಲಿಯುವುದು ಬಹಳವಿದೆ. ಸದ್ಯಕ್ಕೆ ಇವತ್ತಿಗಿಷ್ಟು ಸಹಾಯ ಸಾಕು ನಡೆಯಿರಿ. ಎಲ್ಲರ ಜೊತೆಯಲ್ಲಿ ಕುಳಿತು ಊಟ ಮಾಡುವಿರಂತೆ. ದೊಡ್ಡಮ್ಮ ಕರೆದುಕೊಂಡು ಹೋಗಿ” ಎಂದರು ನಾರಾಣಪ್ಪ.
“ತಿಳೀತ ಭಾಗ್ಯ, ಎಂದು ಸೀತಮ್ಮನವರು “ಬಾ” ಎಂದರು.
“ಸರಿ” ಎಂದು ಅತ್ತೆಯೊಡನೆ ಊಟದ ಮನೆಗೆ ಬಂದಳು ಭಾಗ್ಯ.
ಎಲೆಯ ತುದಿಗೆ ಉಪ್ಪು, ರವೆ ಪಾಯಸ, ಕ್ಯಾರೆಟ್ ಹುರುಳೀಕಾಯಿ ಪಲ್ಯ, ಹೆಸರುಬೇಳೆ ಸೌತೇಕಾಯಿ ಕೋಸಂಬರಿ, ತೊಗರಿಬೇಳೆಯ ಕರಿಗಡುಬು, ಅದರದ್ದೇ ಸಾರು, ಮಾವಿನಕಾಯಿ ಚಿತ್ರಾನ್ನ, ಹೀರೆಕಾಯಿ ಬಜ್ಜಿ, ಬಿಳಿ ಅನ್ನ, ಮೊಸರು, ಕಡೆದ ಮಜ್ಜಿಗೆ, ಹಪ್ಪಳ, ಸಂಡಿಗೆ, ಉಪ್ಪಿನಕಾಯಿ. ಊಟಮಾಡಿ ಎದ್ದವರೇ “ಬಪ್ಪರೇ ನಾಣಿ, ಅಡುಗೆ ತುಂಬಾ ರುಚಿಯಾಗಿತ್ತು ಕಣೋ, ನಾನೊಂದು ಗಮನಿಸಿದೆ ಸಾಮಾನ್ಯವಾಗಿ ನೀನು ಎಣ್ಣೆಯನ್ನೋ, ತುಪ್ಪವನ್ನೋ ಧಂಡಿಯಾಗಿ ಬಳಸುತ್ತಿದ್ದೆ. ಇವತ್ತು ಅಳತೆ ಮಾಡಿದಂತಿದೆ. ಎಲ್ಲವೂ ಒಪ್ಪ ಓರಣವಾಗಿದೆ.. ಸೂಪರ್” ಎಂದರು ಜೋಯಿಸರು.
“ಅಪ್ಪಾ ! ನೀವು ಇಷ್ಟೊಂದು ಗಮನಿಸಿದ್ದೀರಾ? ಕರಿಗಡುಬು, ಹೋಳಿಗೆ ಮಾಡಿದಾಗಲೆಲ್ಲ ಅಂಚು ಚಕ್ಕಳದಂತಿರುತ್ತಿತ್ತು. ಆದರಿವತ್ತು ತೆಳುವಾಗಿ ಗರಿಗರಿಯಾಗಿ ಅಲಂಕಾರವಾಗಿದೆ. ತುಂಬ ಸುಧಾರಿಸಿದ್ದೀರಾ ನಾಣಜ್ಜ, ಕೀಪಿಟಪ್” ಎಂದ ಶ್ರೀನಿವಾಸ.
“ಏ ತೆಗೀರಿ ನಿಮ್ಮ ಹೊಗಳಿಕೇನಾ, ನಾನು ಹಾಗೆ ಮಾಡಲು ಸಾಧ್ಯಾನಾ ಅಂತ ಯೋಚಿಸಲೇ ಇಲ್ಲ ನೀವ್ಯಾರೂ. ಇವತ್ತಿನ ಅಡುಗೆಯ ಜವಾಬ್ದಾರಿ ಪೂರ್ತಿಯಾಗಿ ಚಿಕ್ಕಮ್ಮನವರದ್ದು. ನಾನು ಬರೀ ಅವರು ಹೇಳಿದ್ದನ್ನು ಮಾಡಿದೆ ಅಷ್ಟೇ” ಎಂದರು ನಾರಾಣಪ್ಪ.
“ಓಹೋ ! ಹಾಗೆ ಹೇಳು ಮತ್ತೆ, ಇಷ್ಟೆಲ್ಲಾ ನಾವು ಹೇಳುತ್ತಿದ್ದರೂ ಸುಮ್ಮನೆ ಕುಳಿತಿದ್ದೀಯಲ್ಲೇ ತಾಯಿ, ಭಾಗ್ಯಮ್ಮಾ ಅಡುಗೆ ತುಂಬಾ ರುಚಿಯಾಗಿತ್ತಮ್ಮ. ನೀನೇ ನಮ್ಮ ಅಡುಗೆ ಭಟ್ಟರನ್ನು ಸುಧಾರಿಸಿಬಿಡಲ್ಲ. ನಿಮ್ಮತ್ತೆ ಹೇಗೋ ಮಾಡಲಿ, ನನಗೆ ಕಷ್ಟವಾಗದಿದ್ದರೆ ಸಾಕೂಂತ, ಈ ಮಹಾರಾಯನೋ ತನ್ನದೇ ಕ್ರಮದಲ್ಲಿ ಮಾಡುತ್ತಾನೆ. ನಾವಿಬ್ಬರೂ ಏನಾದರೂ ಬಾಯಿಬಿಟ್ಟರೆ ಹೊಟ್ಟೆಗೆ ತಣ್ಣೀರು ಬಟ್ಟೆ ಗ್ಯಾರಂಟೀಂತ ಸುಮ್ಮನೆ ಹೊಟ್ಟೆಗೆ ತುಂಬುತ್ತಿದ್ದೆವು. ರುಚಿಯೇನೂ ತೀರಾ ಹದಗೆಡುತ್ತಿರಲಿಲ್ಲ. ಆದರೆ ರಾಮರಾಮಾ, ಆ ಎಣ್ಣೆ, ತುಪ್ಪ ! ಊಟವಾದ ಬಳಿಕ ಸೋಪು ಹಾಕಿ ತಿಕ್ಕುವ ತನಕ ಜಿಡ್ಡು ಹೋಗುತ್ತಿರಲಿಲ್ಲ. ಅಂತೂ ಒಳ್ಳೆಯ ಹುಡುಗಿ ಸೊಸೆಯಾಗಿ ಸಿಕ್ಕಿದಳಮ್ಮ, ಈ ಕ್ರೆಡಿಟ್ಟೆಲ್ಲಾ ನಿಮ್ಮಮ್ಮನಿಗೆ ಸೇರಬೇಕು. ಅವರಿಗೆ ನನ್ನ ಕಡೆಯಿಂದ ಧನ್ಯವಾದಗಳನ್ನು ತಿಳಿಸಿಬಿಡು.” ಎಂದರು ಜೋಯಿಸರು. “ನಂದೂ ಡಿಟೋ ಡಿಟೋ” ಎಂದು ಸೇರಿಸಿದ ಶ್ರೀನಿವಾಸ. ಸೀತಮ್ಮನವರು “ನನ್ನದೂ ಸೇರಿಸಿಕೋ ಭಾಗ್ಯಾ” ಎಂದು ನಕ್ಕರು.
ಇದನ್ನು ಕಂಡ ಭಾವನಾ ಹೊರಗಿನವರ ಆಕ್ಷೇಪಣೆಗಳಿಗೆ ಹೆದರಿ ಹೆತ್ತವರು ಈ ಸಂಬಂಧದಿಂದ ಹಿಂದೆ ಸರಿದಿದ್ದರೆ ಅಕ್ಕನಿಗೆ ಇಂಥಹ ಮನೆ ಸಿಗುತ್ತಿತ್ತೇ? ಈ ಮನೆಯಲ್ಲಿ ಜನರ ಆತ್ಮೀಯತೆ, ಹೊಂದಾಣಿಕೆ, ಸಂತೋಷಗಳು ಹೀಗೆ ಇರಲಿ ಎಂದುಕೊಂಡು ಭಾಗ್ಯಳ ಕಡೆ ನೋಡಿದಳು. ಅವಳಿಗೂ ಎಲ್ಲರ ಮಾತುಗಳು ಸಂತಸ ತಂದಿವೆ ಎನ್ನುವಂತೆ ಮುಖದಲ್ಲಿ ಮುಗುಳುನಗೆ ಕಾಣಿಸುತ್ತಿತ್ತು.
ರಾಹುಕಾಲ ಕಳೆದ ನಂತರ ಹೊರಟವರಿಗೆ ಕುಂಕುಮ, ಹಣ್ಣು ಹಂಪಲುಗಳನ್ನಿತ್ತು, ಮಕ್ಕಳಿಗೆಲ್ಲ ಹೊಸಬಟ್ಟೆಯ ಉಡುಗೊರೆ ಕೊಟ್ಟು ಆಶೀರ್ವದಿಸಿದರು ಸೀತಮ್ಮ. “ಶೀನು ನಂಜುಂಡನಿಗೆ ಕಾರು ತರಲು ಹೇಳಿದ್ದೇನೆ. ಇನ್ನೇನು ಬರಬಹುದು” ಎಂದರು.
ಅದನ್ನು ಕೇಳಿಸಿಕೊಂಡ ಶ್ರೀನಿವಾಸ “ಅಪ್ಪಾ ಈಗ ಸದ್ಯಕ್ಕೆ ನಾವೇ ಒಂದು ಸೆಕೆಂಡ್‌ಹ್ಯಾಂಡ್ ಕಾರ್ ಖರೀದಿಸಿದರೆ ಹೇಗೆ? ನಿಮ್ಮ ಶಿಷ್ಯನಿಗೆ ಹೇಳಿ ಯಾವುದಾದರೂ ಸಿಂಗಲ್ ಹ್ಯಾಂಡ್ ಉಪಯೋಗದ ಕಾರಿದ್ದರೆ. ನಾವೇ ಉಪಯೋಗಿಸಬಹುದು” ಎಂದನು.
“ಅದೂ ಸರಿ ಸೀನು, ಡ್ರೈವಿಂಗ್ ಕಲಿತಿದ್ದಷ್ಟೇ, ಆಮೇಲೆ ನೀನು ಗಾಡಿ ಓಡಿಸಿದ್ದನ್ನು ನಾನು ನೋಡೇ ಇಲ್ಲ. ಈಗ ಗಾಡಿ ತೆಗೆದುಕೊಂಡರೆ ಡ್ರೈವರ್ ಇಟ್ಟುಕೊಳ್ಳಬೇಕಾಗುತ್ತದೋ, ಏನೋ” ಎಂದರು ಸೀತಮ್ಮ.
“ಸೀತೂ ಇಲ್ಲಿ ಎಲ್ಲೂ ಓಡಿಸಿಲ್ಲ, ಆದರೆ ನಾವುಗಳು ಬೇರೆಕಡೆಗೆಲ್ಲ ಪೂಜೆಕಾರ್ಯಗಳಿಗೆ ಹೋಗುತ್ತಿರುತ್ತೇವಲ್ಲಾ ಆಗ ನಂಜುಂಡನನ್ನು ಪಕ್ಕಕ್ಕೆ ಕೂಡಿಸಿ ತಾನೇ ಓಡಿಸುತ್ತಾನೆ. ಚೆನ್ನಾಗಿ ಪ್ರಾಕ್ಟೀಸ್ ಆಗಿದೆ. ನಾನೇ ಇದನ್ನು ಎಷ್ಟೋ ಸಾರಿ ಹೇಳಿದ್ದೆ. ಈಗ ಮನಸ್ಸು ಮಾಡಿದ್ದಾನೆ. ಆಯಿತು ಬಿಡು ಒಳ್ಳೆಯ ಆಲೋಚನೆಯೇ, ಗಾಡಿ ನಮ್ಮಲ್ಲಿದ್ದರೆ ಇನ್ನೊಬ್ಬರನ್ನು ಕಾಯಬೇಕಿಲ್ಲ. ಅವನಿಗೆ ಹೇಳುತ್ತೇನೆ ಬಿಡು ಶೀನು, ನೀನೂ ನಿನ್ನ ಗೆಳೆಯರ ಕಿವಿಯ ಮೇಲೆ ವಿಷಯ ಹಾಕಿರು.” ಎಂದರು ಜೋಯಿಸರು.
ಅಷ್ಟರಲ್ಲಿ ನಂಜುಂಡ ಬಂದ ಸದ್ದಾಯಿತು. ಲಗ್ಗೇಜನ್ನೆಲ್ಲ ಇಟ್ಟುಬಂದು ಮಕ್ಕಳು ಹಿರಿಯರಿಗೆ ನಮಸ್ಕರಿಸಿ ಹೋಗಿ ಬರುತ್ತೇವೆಂದು ಹೇಳಿದರು. ಅವರ ಸಂಸ್ಕಾರ ನೋಡಿ ಜೋಯಿಸರು ದಂಪತಿಗಳಿಗೆ ಸಂತಸವಾಯಿತು. “ನಿಮಗೆ ಶಾಲೆಗೆ ರಜೆಯಿದ್ದಾಗ, ಅಥವಾ ನಿಮಗೆ ಅಕ್ಕನನ್ನು ನೋಡಬೇಕೆನ್ನಿಸಿದರೆ ಇಲ್ಲಿಗೆ ಸಂಕೋಚವಿಲ್ಲದೆ ಬನ್ನಿ. ನಮಗೇನೂ ಬೇಸರವಿಲ್ಲ. ಚೆನ್ನಾಗಿ ಓದಿ ಮಕ್ಕಳೇ” ಎಂದು ಎಲ್ಲರನ್ನೂ ಬಿಳ್ಕೊಟ್ಟರು.
ಪತಿಯೊಡನೆ ಮತ್ತು ಕಿರಿಯ ಸೋದರಿಯರ ಜೊತೆಯಲ್ಲಿ ಮನೆಗೆ ಆಗಮಿಸಿದ ಮಗಳನ್ನು ಪ್ರೀತಿಯಿಂದ ಬರಮಾಡಿಕೊಂಡರು ಲಕ್ಷ್ಮಿ ಮತ್ತು ಭಟ್ಟರು. “ನಿನ್ನ ಪ್ರಯತ್ನಕ್ಕೆ ಉತ್ತಮ ಫಲಿತಾಂಸ ಸಿಕ್ಕಿದೆ. ಬಹಳ ಸಂತೋಷವಾಯಿತು” ಎಂದು ಭಾಗ್ಯಳನ್ನು ಅಭಿನಂದಿಸಿದರು.
ಸ್ವಲ್ಪ ಹೊತ್ತಿನಲ್ಲಿಯೇ ಸೋದರಮಾವ ರಾಮಣ್ಣನವರ ಜೊತೆಗೆ ಕೆಲವು ಶಿಕ್ಷಕರು ಪತ್ರಿಕೆಯವರೊಡನೆ ಮನೆಗೆ ಬಂದರು. ಇದನ್ನು ನಿರೀಕ್ಷಿಸಿದ್ದರೂ ತನ್ನ ಪತಿಯ ಮುಂದೆ ಏನೇನು ಪ್ರಶ್ನೆಗಳನ್ನು ಕೇಳಿಬಿಡುತ್ತಾರೆಯೋ ಅಥವಾ ಇನ್ನೇನಾದರೂ ಸಲಹೆ ನೀಡಿದರೆ, ಅದರ ಪರಿಣಾಮ ಏನಾಗುತ್ತದೆಯೋ ಎನ್ನುವ ಆತಂಕ ಪ್ರಾರಂಭವಾಯಿತು ಭಾಗ್ಯಳಿಗೆ. ತುಂಬಾ ಯೋಚಿಸಿ ಏನೇ ಕೇಳಿದರೂ ಆಲೋಚಿಸುತ್ತೇನೆ, ಎಂದು ಹೇಳುವುದು, ಇಲ್ಲಾ ಸುಮ್ಮನೆ ನಗೆ ಚೆಲ್ಲುವುದು ಎಂದುಕೊಂಡಳು.
ಅವಳ ಊಹೆಯಂತೆಯೇ ಪತ್ರಿಕೆಯವರ ಮಾಮೂಲಿ ಪ್ರಶ್ನೆಗಳಿದ್ದವು. ನೀವು ವಿದ್ಯಾಭ್ಯಾಸವನ್ನು ಮುಂದುವರಿಸುತ್ತೀರಾ? ಎಂದಾಗ ಅಲ್ಲಿದ್ದ ಶ್ರೀನಿವಾಸ “ಪರೀಕ್ಷೆಯ ಫಲಿತಾಂಶ ಇವತ್ತು ಬಂದಿದೆ. ಅವರೀಗ ವಿವಾಹಾನಂತರ ಗೃಹಿಣಿಯ ಸ್ಥಾನದಲ್ಲಿದ್ದಾರೆ. ಅವರ ಮನೆಯವರೊಡನೆ ಚರ್ಚಿಸಿ ತಿರ್ಮಾನ ತೆಗೆದುಕೊಳ್ಳುತ್ತಾರೆ. ಸುಮ್ಮನೆ ಅವರನ್ನು ಮುಜುಗರಕ್ಕೆ ಒಳಪಡಿಸಬೇಡಿ ಪ್ಲೀಸ್” ಎಂದು ಹೇಳಿದನು. ಅದನ್ನು ಕೇಳಿಸಿಕೊಂಡ ಭಾಗ್ಯ ಸಂದಿಗ್ಧ ಪರಿಸ್ಥಿತಿಯಿಂದ ಪಾರುಮಾಡಿದ ಅವನ ಕಡೆಗೆ ಕೃತಜ್ಞತೆಯ ನೋಟ ಬೀರಿದಳು. ಮನಸ್ಸಿನಲ್ಲಿ ಅದೇ ಪ್ರಶ್ನೆಯನ್ನು ನನಗೆಲ್ಲಿ ಕೇಳುತ್ತಾರೋ ಎಂದು ಊಹಿಸಿ ಜಾಣ್ಮೆಯಿಂದ ಉತ್ತರಿಸಿದರು ಎಂದುಕೊಂಡಳು.
ಅವರೆಲ್ಲರೂ ಹೋದಮೇಲೆ ಶ್ರಿನಿವಾಸ “ಅತ್ತೇ ರಾತ್ರಿಗೆ ನನಗೆ ತಿಳಿಸಾರು, ಅನ್ನ, ಮೊಸರು ಅದೂ ಸ್ವಲ್ವೇ ಸಾಕು” ಎಂದನು.
“ಏಕಪ್ಪಾ?” ಎಂದು ಪ್ರಶ್ನಿಸಿದಳು ಲಕ್ಷ್ಮಿ.
“ಬೆಳಗಿನ ಊಟ ಹೆವಿಯಾಗಿತ್ತು. ಇಲ್ಲಿಗೆ ಬಂದಮೇಲೆ ರಾಮಣ್ಣನವರು ತಂದಿದ್ದ ತಿಂಡಿ, ಬಂದವರ ಜೊತೆ ಕಾಫಿ ಕುಡಿದೆ. ಹೊರಗೆಲ್ಲೂ ಅಡ್ಡಾಡಿಯೇ ಇಲ್ಲ. ಬೆಳಗ್ಗೆ ಬೇಗನೇ ಹೊರಡಬೇಕು” ಎಂದು ಹೇಳಿದನು. ಹೊರಡಬೇಕಾದ ಕಾರಣವನ್ನು ಚುಟುಕಾಗಿ ತಿಳಿಸಿ ಸಂಜೆಯ ಪೂಜೆಗೆ ಮೊದಲು ಸ್ನಾನಕ್ಕೆ ಹೊರಟನು ಶ್ರೀನಿವಾಸ.
ಅಳಿಯನ ಮಾತುಗಳು ಲಕ್ಷ್ಮಿಗೆ ಅಚ್ಚರಿಯನ್ನುಂಟುಮಾಡಿದವು. ಅವರ ಕೆಲಸವೆ ಪೌರೋಹಿತ್ಯ. ಸರಿ ಆದರೆ ಮದುವೆಯಾಗಿನ್ನೂ ಒಂದು ತಿಂಗಳೂ ಆಗಿಲ್ಲ. ಅಷ್ಟರಲ್ಲೇ ! ಮನಸ್ಸಿಗೆ ಪಿಚ್ಚೆನ್ನಿಸಿತು. ಹಾಗೇ ನಿಂತುಕೊಂಡಳು. ಅದನ್ನು ಗಮನಿಸಿದ ಭಾಗ್ಯ “ಅಮ್ಮಾ ಮದುವೆಗೂ ಮೊದಲೆ ಒಪ್ಪಿಕೊಂಡ ಕೆಲಸವಂತೆ ಇದು. ಹೋಗಿ ಬರಲಿ ಬಿಡಿ. ನನಗಂತೂ ಒಳ್ಳೆಯದೇ, ಏಕೆಂದರೆ ಇವತ್ತು ಆ ಪೇಪರಿನವರ ದೆಸೆಯಿಂದ ನನ್ನ ಸಹಪಾಠಿಗಳೊಡನೆ ಸರಿಯಾಗಿ ಮಾತನಾಡಲೂ ಆಗಲಿಲ್ಲ. ಅಲ್ಲದೆ ಮಿಕ್ಕ ಟೀಚರ್‌ಗಳನ್ನು ಭೇಟಿಯಾಗಿ ಬರಬೇಕು. ಅವರಿಗೆಲ್ಲ ಸಿಹಿ ಹಂಚಬೇಕು. ಟಿ.ಸಿ., ಮಾಕ್ಸ್‌ಕಾರ್ಡ್ ತೆಗೆದುಕೊಳ್ಲಲು ಸ್ಕೂಲಿನ ಹತ್ತಿರ ಹೊಗಬೇಕು. ನನ್ನ ಸಂಗೀತದ ಟೀಚರ್‌ಗೆ ನಾನು ಸಂಗೀತದ ಕಲಿಕೆ ಮುಂದುವರಿಸುತ್ತೇನೆಂದು ವಿಷಯ ತಿಳಿಸಬೇಕು. ನಿಮ್ಮ ಅಳಿಯ ಇಲ್ಲಿದ್ದರೆ ಪದೇಪದೇ ಅವರನ್ನು ಕೇಳಿಕೊಂಡು ಹೋಗುವುದೆಂದರೆ ಬೇಸರ. ನಿರಾತಂಕವಾಗಿ ಮಾತನಾಡಲು ಕಷ್ಟವಾಗಬಹುದು” ಎಂದಳು.
ಭಾಗ್ಯಳ ಮಾತುಗಳನ್ನು ಕೇಳಿ ತಮ್ಮ ಮಗಳು ಹದಿನೈದು ದಿನಗಳೊಳಗೆ ತನ್ನ ಗಂಡನ ಇಷ್ಟಾನಿಷ್ಟಗಳನ್ನು ಅರಿತಿದ್ದಾಳೆಂದರೆ ನಾವು ಗೆದ್ದಂತೆ, ಕೊಟ್ಟ ಮನೆಗೆ ಹೊಂದಿಕೊಳ್ಳುತ್ತಾಳೆಂದು ನಿರಾತಂಕವಾಗಿರಬಹುದು. ಅದು ಸರಿ, ಇವಳು ಸಂಗೀತ ಕಲಿಕೆ ಮುಂದುವರಿಸುತ್ತೇನೆಂದು ಹೇಳುತ್ತಿದ್ದಾಳೆ. ಇದನ್ನು ಇಷ್ಟು ಬೇಗ ನಿರ್ಧಾರ ಮಾಡಿದ್ದಾಳೆ. ಕಾಲೇಜಿನ ಸಂಗತಿ ಕೇಳೇಬಿಡೋಣವೆಂದು “ಭಾಗ್ಯಾ ಸಂಗೀತ ಕಲಿಕೆಗೆ ಒಪ್ಪಿಗೆ ಸಿಕ್ಕಿಬಿಟ್ಟಿದೆಯಾ? ಇಷ್ಟೊಂದು ಅಂಕಗಳನ್ನು ಪಡೆದು ಉತ್ತೀರ್ಣಳಾದ ನಿನಗೆ ಮುಂದೆ ಓದಬೇಕೆಂಬ ಆಸೆಯೇ ಇಲ್ಲವೇ?” ಎಂದು ಕೇಳಿದರು ಲಕ್ಷ್ಮಿ.
“ಆಸೆಯೇನೋ ಬೆಟ್ಟದಷ್ಟಿದೆ, ಅದೆಲ್ಲಾ ನೆರವೇರಲು ಸಾಧ್ಯವೇ? ನೀವು ನೆರವೇರಿಸುತ್ತಿದ್ದಿರಾ? ಆಗಲಿಲ್ಲ ಅಲ್ಲವೇ, ಇನ್ನು ಅವರುಗಳನ್ನು ಕೇಳಿ ಅವಲಕ್ಷಣ ಅನ್ನಿಸಿಕೊಳ್ಳುವುದೇಕೆ, ಇದನ್ನು ನಾನೇ ಆರಿಸಿಕೊಂಡದ್ದು. ಮುಂದೆ ಓದಿಸುವ ಮನಸ್ಸಿದ್ದರೆ ಅವರೇ ಪ್ರಸ್ತಾಪ ಮಾಡುತ್ತಿದ್ದರು. ಹಾಗೆ ಆಗಲಿಲ್ಲ. ಅತ್ತೆ, ಮಾವ ಒಪ್ಪಬಹುದೇನೋ, ನಿಮ್ಮ ಅಳಿಯ ಒಪ್ಪುವುದು ಕಷ್ಟ. ನೋಡೋಣ ಮುಂದೆ. ಸದ್ಯಕ್ಕೆ ಇಷ್ಟು ಸಾಕು. ನೀವುಗಳಾರೂ ಈ ಬಗ್ಗೆ ಮಾತನಾಡಬೇಡಿ ಜೋಕೆ. ಅವರು ಸ್ನಾನ ಮುಗಿಸಿ ಬಂದರೂಂತ ಕಾಣುತ್ತೆ. ಅಪ್ಪಿತಪ್ಪಿ ಕೂಡ ಮುಂದಿನ ಓದಿನ ಬಗ್ಗೆ ಕೇಳಬೇಡಿ” ಎಂದು ಆ ಜಾಗದಿಂದ ಸರಿದುಹೋದಳು ಭಾಗ್ಯ. ಮಗಳ ಮಾತುಗಳನ್ನು ಕೇಳಿದ ಲಕ್ಷ್ಮಿಗೆ ಮನಸ್ಸು ಕಸಿವಿಸಿಗೊಂಡಿತು. ತಮ್ಮ ನಿಸ್ಸಹಾಯಕ ಪರಿಸ್ಥಿತಿಯ ಅರಿವಾಗಿ ರಾತ್ರಿಯ ಅಡುಗೆಯ ತಯಾರಿಗೆ ಒಳನಡೆದಳು.
(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : http://surahonne.com/?p=35525
–ಬಿ.ಆರ್.ನಾಗರತ್ನ, ಮೈಸೂರು
ಊಟದಷ್ಟೇ ಚೆನ್ನ ಹಿತಕರವಾದ ಲೇಖನ. ನಿಮ್ಮ ಸಾಹಿತ್ಯ ಸೇವೆ ಹೀಗೇ ಮುಂದುವರಿಯಲಿ. ಲೇಖನ ಸಣಪೂರ್ಣವಾದ ಮೇಲೆ ಸುಧೀರ್ಘ ವಿಶ್ಲೇಷಣೆ ನೀಡುವೆ. ಒಳಿತಾಗಲಿ
ತುಂಬಾ ಚಂದದ ಕಥೆ. ಪ್ರತೀ ಕಂತು ಕೂಡ ಆಹ್ಲಾದಕರವಾಗಿ ಓದಿಸಿಕೊಂಡು ಹೋಗುತ್ತದೆ.
ಕಾದಂಬರಿಯ ಸಂಭಾಷಣೆ ಚೆನ್ನಾಗಿದೆ ತಂಗಿ.
ಮುಂದುವರಿಯಲಿ.
ನಿಮ್ಮೆಲ್ಲರ ಪ್ರತಿಕ್ರಿಯೆ ಗೆ ನನ್ನ ಹೃತ್ಪರ್ವಕ ಧನ್ಯವಾದಗಳು ನಯನಮೇಡಂ ,ಪೂರ್ಣಿಮಾ ಮೇಡಂ, ಹಾಗೂ ಮತ್ತೊಬ್ಬ ಸಹೃದಯಿಗೆ.
ಆತ್ಮೀಯ ಮಾತುಕತೆಗಳಿಂದ ಕೂಡಿ ಹಿತವಾದ ವಾತಾವರಣವನ್ನು ಸೃಷ್ಟಿಸುವ ಕಥಾ ಹರಿವು ಬಹಳ ಸೊಗಸಾಗಿ ಮುಂದೆ ಸರಿಯುತ್ತಿದೆ. ಧನ್ಯವಾದಗಳು ಮೇಡಂ.
ಸಹಜ ಸಂಬಾಷಣೆಯಿಂದ ಮುದ ನೀಡುತ್ತಿದೆ ಕಾದಂಬರಿ. ಭಾಗ್ಯಳ ಯಶಸ್ಸನ್ನು ಮನೆಯವರು ಆಚರಿಸಿದ ಪರಿ ಸೊಗಸಾಗಿತ್ತು.
ಧನ್ಯವಾದಗಳು ಶಂಕರಿ ಮೇಡಂ
ಧನ್ಯವಾದಗಳು ಪದ್ಮಾ ಮೇಡಂ