ಪರಾಗ

ಹಣೆಯ ಮೇಲಿನ ಬರಹ…

Share Button

ಎಲ್ಲರಂತೆ ನಾನೂ ಕೂಡ ಸಣ್ಣಳ್ಳಿಯ ವಿಳಾಸ ಹುಡುಕಿಕೊಂಡು ಹೋದಾಗ  ಸಾಲೀ ಮಕ್ಕಳು  ಪಾಟೀಮ್ಯಾಲ ಬಿಳಿ ಬಣ್ಣದ ಪೆನ್ಸಿಲ್ಲಿನಿಂದ ಬರೆದಂತೆ , ಆ  ಊರ ಹೆಸರು  ಬರೆದು  ಕಚ್ಚಾರಸ್ತೆಯ ಪಕ್ಕ  ನೀಲಗಿರಿ ಗಿಡದ ಬುಡಕ್ಕೆ   ನೇತುಹಾಕಲಾಗಿತ್ತು.  ಅಲ್ಲಿ ಯಾವುದೇ ಬಸ್ ನಿಲ್ದಾಣವಾಗಲಿ ಅಥವಾ ಇತರ  ಕಟ್ಟಡವಾಗಲಿ  ಇರಲಿಲ್ಲ . ಸುಮಾರು ವರ್ಷಗಳ  ಹಿಂದೆ  ನೆಟ್ಟ  ನೀಲಗಿರಿ ಗಿಡಗಳು ಇಂದು ಮರವಾಗಿ ಮಗಿಲೆತ್ತರಕ್ಕೆ ಬೆಳೆದು ಹಣ್ಣೆಲೆ ಉದುರಿಸಿ ಹಸಿರೆಲೆ ಚಿಗುರಿಸುತಿದ್ದವು. ಬದಲಾವಣೆ ಸಹಜ ಆದರೆ ಆ ಊರು ಇನ್ನೂ ಯಾಕೆ ಬದಲಾಗಿಲ್ಲ  ಅನ್ನುವ ಪ್ರಶ್ನೆ ಸಹಜವಾಗಿ ಕಾಡುತಿತ್ತು.  ನನ್ನಂಥ  ಹೊಸಬರಿಗೆ ಊರು ಹುಡುಕುವದು ಇನ್ನೂ   ಕಷ್ಟದ ಕೆಲಸವೇ ಆಗಿತ್ತು.  ಆ ಊರ  ರಸ್ತೆ ಸರಿ ಇಲ್ಲ ಅನ್ನುವ ನೆವ ಮಾಡಿಕೊಂಡು ಯಾವುದೇ  ವಾಹನಗಳು ಅಲ್ಲಿಯ  ರಸ್ತೆಗಿಳಿಯದೇ ಹೋದಾಗ  ಅನಿವಾರ್ಯವಾಗಿ  ಕಾಲ್ನಡಿಗೆಯಿಂದಲೇ  ಹೋಗಬೇಕು . ಎಲ್ಲರೂ ಹಾಗೇ ಮಾಡ್ತಾ ಇದ್ದರು  ರಾಷ್ಟ್ರೀಯ ಹೆದ್ದಾರಿಗೆ ಇಳಿದು ಆ ಊರ ಕಡೆ  ಹೆಜ್ಜೆ ಹಾಕುತಿದ್ದರು.  ಊರು  ಯಾವ ಜಮಾನಾದಲ್ಲಿ  ಇದೆಯೋ ಏನೋ ? ಇದು ಸುಧಾರಣೆಯಾಗಲು ಇನ್ನೂ ಎಷ್ಟು ವರ್ಷ ಬೇಕೋ ಏನೋ  ?  ಅನ್ನುವ ಅನುಮಾನ ಕೆಲವರ ಬಾಯಿಂದ ಕೇಳಿ ಬರುತಿತ್ತು.

ಊರೇನಾದ್ರು  ರಾಷ್ಟ್ರೀಯ ಹೆದ್ದಾರಿಗೆ  ಹೊಂದಿಕೊಂಡಿದ್ದರೆ ಇಷ್ಟು ಹೊತ್ತಿಗೆ  ಸುಧಾರಣೆ  ಕಾಣಬಹುದಿತ್ತು  ಆದರೆ  ಹೆದ್ದಾರಿ ಬಿಟ್ಟು ಮೂರು ಕಿಲೋಮೀಟರ್ ಅಂತರ ಇರೋದ್ರಿಂದ  ಸುಧಾರಣೆ ಕಂಡಿಲ್ಲ ಅಂತ ಕೆಲವರು ತಾರ್ಕಿಕವಾಗಿ  ಹೇಳುವ  ಮಾತಿನಲ್ಲಿ   ಸತ್ಯಾಂಶವಿತ್ತು.  ಊರ  ರಸ್ತೆ  ಮಾತ್ರ  ರಾಷ್ಟ್ರೀಯ ಹೆದ್ದಾರಿಗೆ ಕೂಡಿಕೊಂಡು  ಇಂಗ್ಲಿಷ್ ಅಕ್ಷರದ ಟಿ  ಆಕಾರ ಪಡೆದುಕೊಂಡಿತ್ತಾದರೂ ಅದಿನ್ನು  ಕಲ್ಲುಮಣ್ಣಿನ  ಮೊಗಲಾಯಿ ರಸ್ತೆಯಾಗೇ  ಉಳಿದು , ಮಳೆಗಾಲ ಬಂದರೆ  ಸ್ವಯಂ ಘೋಷಿತ ನಿರ್ಬಂಧ ವಿಧಿಸಿ ಅಣುಕಿಸುತಿತ್ತು.  ಕಾಲಲ್ಲಿನ  ಪಾದರಕ್ಷೆ ಕೈಯಲ್ಲಿ ಹಿಡಿದುಕೊಂಡೇ ಸಾಗಬೇಕು ಇಲ್ಲದಿದ್ದರೆ  ಮುಂದೆ ಹೋಗಲು  ಯಾರನ್ನೂ ಬಿಡ್ತಾನೇ  ಇರಲಿಲ್ಲ. ಅದೇನಾಗ್ತದೆ ನೋಡೇ ಬಿಡೋಣವೆಂದು ಮೊಂಡು ಧೈರ್ಯ ಮಾಡಿ ಸಾಗಿದರೆ  ಚಟಕ್ ಪಟಕ್ ಅಂತ ನಾಲ್ಕು ಹೆಜ್ಜೆ ನಡೆಯುವದರಲ್ಲೇ  ಪಾದರಕ್ಷೆ  ಕೆಸರಲ್ಲಿ ಸಿಕ್ಕು ಮಾಯವಾಗಿ ಬಿಡುತಿದ್ದವು  .

ಊರಲ್ಲಿರೋದ  ಕೇವಲ  ಬೆರಳೆಣಿಕೆಯ  ಮನೆಗಳು ಮಾತ್ರ  . ಊರ ಸುತ್ತಲೂ  ಜಾಲಿ ಬೆಳೆದು  ಬೇಲಿಯಾಗಿ  ಸುತ್ತುವರೆದಿತ್ತು . ಇದೇನಿದು   ಅಂತ ಪ್ರಶ್ನಿಸಿದರೆ, ನಮ್ಮೂರಿಗೆ ಕಳ್ಳ ಕಾಕರ ಭಯ ಇಲ್ಲ ಹಗಲು ಹೊತ್ತು ಬರೋದು ಕಷ್ಟವಿರುವಿವಾಗ ಇನ್ನೂ ರಾತ್ರಿ ಯಾರು ಬರ್ತಾರೆ ಅಂತ  ಜನ  ಹಾಸ್ಯ ಮಾಡಿ ಉತ್ತರ ಕೊಡುತಿದ್ದರು.   ಊರ ಮಧ್ಯೆದಲ್ಲಿ ಕಾಣುವ  ಆ  ದೊಡ್ಡ ಮನೆಯೇ  ಗುಂಡಪ್ಪ  ಧಣಿಯ ಮನೆ ಊರಿಗೆ  ದೊಡ್ಡ ಮನೆ ಅಂದರೆ ಆತನದೊಂದೇ ಆ ಮನೆಯಲ್ಲಿರೋದು ಕೇವಲ ಇಬ್ಬರೇ ಇಬ್ಬರು  ಗುಂಡಪ್ಪ ಧಣಿ ಮತ್ತು ಅವನ ಹೆಂಡತಿ  ಮಾತ್ರ,  ಮಕ್ಕಳಿಲ್ಲದ ಕೊರಗು  ಅವರಿಗೆ ನಿತ್ಯ  ಕಾಡಿ ಚಿಂತೆಗೀಡು ಮಾಡಿತ್ತು.

ಊರಲ್ಲಿ ಆ  ಒಂದು ಸುದ್ದಿ  ಸದ್ದು ಮಾಡಿ ಆಶ್ಚರ್ಯ ಮೂಡಿಸಿತು . “ ಧಣಿ   ಒಬ್ಬ ಹುಡುಗನಿಗೆ   ದತ್ತು ತೆಗೆದುಕೊಂಡು ಬಂದಿದ್ದಾನೆ  ಆ  ಹುಡುಗನ  ಹಣೆಯ  ಮೇಲೆ  ಸ್ವಸ್ತಿಕ ಚಿಹ್ನೆಯ ಬರಹವಿದೆ  ಹಿಂದೆಂದೂ  ಕಂಡು ಕೇಳರಿಯದ ಅದ್ಭುತ ದೃಶ್ಯ”  ಅಂತ ಪಂಪಾಪತಿ ವಾಸ್ತವ  ಹೇಳಿದಾಗ    ” ನಿಜವಾಗಿಯೂ ಇದು ಸತ್ಯಾನಾ? ಹಾಗಾದರೆ  ಆ  ಹುಡುಗ  ದೇವರ ವರಾನೇ   ಇದ್ದಿರಬೇಕು ಅದಕ್ಕೆ   ಸ್ವಸ್ತಿಕ ಚಿಹ್ನೆ  ಆತನ  ಹಣೆಯ ಮೇಲಿದೆ !  ಇದು ಅಪರೂಪದಲ್ಲೇ ಅಪರೂಪ ” ಅಂತ  ಕಾಶಿಪತಿ ಕೂಡ ದನಿಗೂಡಿಸಿದ. ಇಬ್ಬರೂ ಅದೇ ವಿಷಯ  ಚರ್ಚಿಸುತ್ತಾ  ನಡು ಊರ ಕಡೆ ಬಂದರು.   ಬೇಸಿಗೆ ಕಾಲ  ಜನರಿಗೆ ಹೊಲ ಮನೆಯ ಕೆಲಸ ಕಾರ್ಯದಿಂದ ಸ್ವಲ್ಪ  ಬಿಡುವು ಸಿಕ್ಕು  ಅವರೆಲ್ಲ  ಅರಳೆ ಮರದ ನೆರಳಿಗೆ  ಗುಂಪಾಗಿ ಕುಳಿತು , ಕೆಲವರು ಹುಲಿಕಟ್ಟೆ  ಆಡ್ತಾ ಇನ್ನೂ ಕೆಲವರು  ದೇಶಾವರಿ ಚರ್ಚೆ ಮಾಡುತ್ತಾ ಕಾಲ ಕಳೆಯುವಾಗ  ಆ ಸುದ್ದಿ   ಕಿವಿಗೆ ಬೀಳುತ್ತಲೇ “ನಾವೂ  ನೋಡಿ  ಬರೋಣ ನಡೀರಿ ರೊಕ್ಕ ಕೊಟ್ಟರೂ ಇಂತಹ  ಅಪರೂಪದ ದೃಶ್ಯ ಸಿಗೋದಿಲ್ಲ ” ಅಂತ ಎಲ್ಲರೂ  ಧಣಿ ಮನೆ ಕಡೆ  ಹೆಜ್ಜೆ ಹಾಕಿದರು.

ಸ್ವಸ್ತಿಕ ಹುಡುಗನ  ವಿಷಯ ಆಗಲೇ ಒಬ್ಬರ ಬಾಯಿಂದ ಒಬ್ಬರಿಗೆ ಹರಡಿ ಊರ ತುಂಬಾ  ಪುಕಾರಾಗಿತ್ತು.   ದೊಡ್ಡವರು ಸಣ್ಣವರು ಮಹಿಳೆಯರು,  ಮಕ್ಕಳೆಲ್ಲರೂ ತಂಡೋಪತಂಡವಾಗಿ  ಆತನಿಗೆ  ನೋಡಲು   ಧಣಿ ಮನೆ ಕಡೆ ಕಾತುರದಿಂದ  ಹೆಜ್ಜೆ ಹಾಕಿದರು.   “ದೇವರ ಆಟ ಬಲ್ಲೋರು ಯಾರು ಸ್ವಸ್ತಿಕ ಚಿಹ್ನೆ ಹಣೆ ಮೇಲಿದೆಯೆಂದರೆ ಇದು ಸಾಮಾನ್ಯ ವಿಷಯವಲ್ಲ , ಇಂತಹ ಹುಡುಗನಿಗೆ  ನೀನು ದತ್ತು ಪಡೆದದ್ದು  ನಿಜವಾಗಿಯೂ ಹೆಮ್ಮೆಯ ವಿಷಯ ” ಅಂತ   ದೊಡ್ಡ ಸಂಗಪ್ಪ ಕೇಳಿದಾಗ ,  “ಸ್ವಸ್ತಿಕ ಹುಡುಗ  ನಿಮ್ಮ  ಮನೆತನದ ಕೀರ್ತಿ ಹಬ್ಬಿಸುವಲ್ಲಿ ಅನುಮಾನವಿಲ್ಲ , ಇವನು ನಿಮ್ಮ ಮನೆತನದ ತಕ್ಕ ವಾರಸುದಾರರ ”  ಅಂತ   ಶಿಖರೆಪ್ಪ ಕೂಡ ದನಿಗೂಡಿಸಿದ.  ಅವರ  ಮಾತು ಧಣಿಗೆ  ಪ್ರಸನ್ನಚಿತ್ತನಾಗಿ ಮಾಡಿ ,  “ಇದೆಲ್ಲ ಆ ಮೇಲಿನವನ ಇಚ್ಛಾ ”  ಅಂತ  ಮುಗಿಲಿನ ಕಡೆ ಕೈ ಮಾಡಿದ.

ಸುದ್ದಿ ಊರಿಗಷ್ಟೇ ಸೀಮಿತವಾಗದೆ  ದೂರ ದೂರದ ಹಳ್ಳಿ ಪಟ್ಟಣಗಳಿಗೂ ಆಗಲೇ ಶರವೇಗದಲಿ ಹಬ್ಬಿತು. ಅಲ್ಲಿನ  ಜನ ಕೂಡ ಕುತೂಹಲಭರಿತರಾಗಿ ” ಸ್ವಸ್ತಿಕ ಹುಡುಗನಿಗೆ ನಾವೂ  ನೋಡಿ ಬರಬೇಕು” ಅಂತ  ಊರ ವಿಳಾಸ  ಹುಡುಕಿಕೊಂಡು  ಬರತೊಡಗಿದರು. ನಿತ್ಯ ಊರಲ್ಲಿ  ಮೋಟಾರು ಗಾಡಿಗಳು  ಸದ್ದು ಮಾಡಿ ಧೂಳೆಬ್ಬಿಸತೊಡಗಿದವು . ಅಲ್ಲಲ್ಲಿ ಹೋಟೆಲು ಕಿರಾಣಿ ಅಂಗಡಿ ಮುಂದೆ ಕುಳಿತವರು ಗಾಬರಿಯಾಗಿ ” ನಮ್ಮ ಊರಿಗೆ ಒಮ್ಮೆಯೂ ಇಷ್ಟೊಂದು  ಮೋಟಾರು ಗಾಡಿ ಬಂದದ್ದು ನಾವು ನೋಡೇ ಇಲ್ಲ,  ದೊಡ್ಡ ಮಂದಿಯ  ಕಾರು ಜೀಪು  ಓಡಾಡ್ತಿವೆ  ಇದೆಲ್ಲ ಸ್ವಸ್ತಿಕ ಹುಡುಗನ ಕಾಲ್ಗುಣ ” ಅಂತ  ಮಾತಾಡಿದರು. ದಿನ ಕಳೆದಂತೆ ಸುದ್ದಿ  ಇನ್ನೂ  ದೊಡ್ಡದೇ ಆಯಿತು  ಪತ್ರಿಕೆಯವರು,  ಟಿವಿ ಮಾಧ್ಯಮದವರು, ಸ್ವಸ್ತಿಕ ಹುಡುಗನ  ಸಂದರ್ಶನ ಮಾಡಿ ,  ಫೋಟೋ ಕ್ಲಿಕ್ಕಿಸಿ ಆತನ ಬಗ್ಗೆ ವರದಿ ಪ್ರಕಟ ಮಾಡತೊಡಗಿದರು . ಧಣಿ  ದಿನಾಲೂ  ಹತ್ತಾರು ಪತ್ರಿಕೆ  ತರೆಸಿ ತಮ್ಮ ದತ್ತು ಮಗನ  ಬಣ್ಣ ಬಣ್ಣದ ಫೋಟೋ ನೋಡಿ ಖುಷಿ ಪಡುತ್ತಾ  ಇತರರಿಗೂ  ತೋರಿಸಿ  ಖುಷಿ ಹಂಚಿಕೊಂಡ.  ಮಗನ ಫೋಟೋ ಪೇಪರದಾಗ ಬಂದದ್ದು  ರುದ್ರಮ್ಮಳ ಖುಷಿ  ಇಮ್ಮಡಿಯಾಗುವಂತೆ ಮಾಡಿತು.  ” ಇಷ್ಟು ದಿನ ಯಾರೋಬ್ಬರು ಇತ್ತ  ಸುಳಿಯತಿರಲಿಲ್ಲ ಈಗ ನೋಡಿದರೆ ಜನ ಹುಡುಕಿಕೊಂಡು ಬರ್ತಿದ್ದಾರೆ  , ಜಾತ್ರ್ಯಾಗ ಸೇರಿದಂಗ ಸೇರತಿದ್ದಾರೆ”  ಅಂತ  ಖುಷಿ ಹೊರ ಹಾಕಿದಳು. ಎಷ್ಟೋ ವರ್ಷಗಳ ನಂತರ ಹೆಂಡತಿಯ ಮುಖದ ಮೇಲೆ ಲವಲವಿಕೆ ಮೂಡಿದ್ದು  ಧಣಿಗೆ ಸಮಾಧಾನ ತಂದಿತು.

” ಮಕ್ಕಳಿಲ್ಲದ ನಮ್ಮ  ಕೊರಗಿಗೆ  ಸಧ್ಯ ಏನೋ ಒಂದು ಪರಿಹಾರ ಸಿಕ್ಕಿತು  ಇಲ್ಲದಿದ್ದರೆ ಎಲ್ಲರ ಕಡೆಯಿಂದ  ವ್ಯಂಗ್ಯಭರಿತ ಮಾತುಗಳೇ  ಕೇಳಿ ಬರುತಿದ್ದವು ” ಅಂತ ಧಣಿ  ಹೇಳಿದಾಗ “ನಿಮ್ಮ ಮಾತು ನೂರಕ್ಕೆ ನೂರು ಸತ್ಯ  ಪಕ್ಕದ ಮನೆಯ ಸುಬ್ಬವ್ವಳ ಕಾಟ ಈಗಲಾದರು ತಪ್ಪಬಹುದು. ಅವಳಿಗೆ ನನ್ನ ಬಗ್ಗೆ ವ್ಯಂಗ್ಯವಾಡುವದೇ ಒಂದು ಕೆಲಸವಾಗಿ ಹೋಗಿತ್ತು   ದಿನಾ ಏನಾದರೊಂದು ಮಾತಾಡಿ ಮನಸ್ಸಿಗೆ ನೋವು ಕೊಡುತಿದ್ದಳು” ಅಂತ ರುದ್ರಮ್ಮ ಕೂಡ  ನೆನಪಿಸಿಕೊಂಡುಳು .  ” ”ಆ  ಸುಬ್ಬವ್ವಳ ಸ್ವಭಾವ ಇಡೀ ಊರಿಗೆ ಗೊತ್ತು ಅವಳ ಮಾತಿಗೇನು ಬೆಲೆ ಕೊಡೋದು ಅವಳ ಮಾತು  ಒಂದು ಕಿವಿಯಿಂದ ಕೇಳಿ  ಇನ್ನೊಂದು ಕಿವಿಯಿಂದ ಬಿಟ್ಟು  ಬಿಡಬೇಕು” ಅಂತ ಸಲಹೆ ನೀಡಿದ.

“ಇವನಿಗೆ  ದತ್ತು ಪಡೆಯಲು ಯಾಕೆ ನಿರ್ಧಾರ ಮಾಡಿದ್ರಿ”  ಅಂತ  ತೀಕ್ಷ್ಣವಾಗಿ ಮತ್ತು ಕುತೂಹಲಭರಿತಳಾಗಿ ರುದ್ರಮ್ಮ ಪ್ರಶ್ನಿಸಿದಾಗ  “ಇದೆಲ್ಲ ಆ ಗುಡ್ಡದ ಮುತ್ಯಾನ ಆಶೀರ್ವಾದ ಆತ ದಾರಿ ತೋರಿಸದಿದ್ದರೆ ನಾನೆಲ್ಲಿ ಇವನಿಗೆ ಕರೆದುಕೊಂಡು ಬರುತ್ತಿದ್ದೆ  ಮೊನ್ನೆ ನಾನು ಗುಡ್ಡಕ್ಕೆ ಹೋದಾಗ ನನ್ನ ಮನಸ್ಸಿನಲ್ಲಿ ಮಡುಗಟ್ಟಿದ ಆ ನೋವು ಅವರೆದುರಿಗೆ  ತೋಡಿಕೊಂಡೆ,  ಆಗ ಅವರು ತಮ್ಮ ಆಶ್ರಮಕ್ಕೆ ಕರೆದುಕೊಂಡು ಹೋಗಿ ಸುಮಾರು ಅನಾಥ  ಹುಡುಗರನ್ನು ತೋರಿಸಿ  ಇವರಿಗೆಲ್ಲ  ಊಟ ಬಟ್ಟೆ ಶಿಕ್ಷಣದ  ವ್ಯವಸ್ಥೆ ನಾವೇ ಮಾಡತಿರೋದು. ಇವರಲ್ಲಿ ಯಾರು ಬೇಕೋ ಅವರಿಗೆ ನೀನು ದತ್ತು ಪಡೆದು ನಿನ್ನ  ಕೊರಗು ನಿವಾರಿಸಿಕೊ ಅಂತ ಉಪದೇಶ ನೀಡಿದರು.  ಅವರ ಮಾತಿಗೆ ನಾನು  ಸಮ್ಮತಿಸಿ ಎಲ್ಲ  ಹುಡುಗರ ಮುಖ ಲಕ್ಷಣ  ಗಮನಿಸಿದಾಗ  ಈ ಹುಡುಗನೇ  ತುಂಬಾ ಇಷ್ಟವಾದ. ಅನಾಥಾಶ್ರಮಕ್ಕೆ ಬರುವಾಗ ಇವನಿಗೆ  ಹೆಸರೇ ಇರಲಿಲ್ಲವಂತೆ   ರೈಲು ನಿಲ್ದಾಣದಲ್ಲಿ ಸಿಕ್ಕ ಕಾರಣ ಯಾರೋ ಕರೆತಂದು  ಅಶ್ರಮಕ್ಕೆ ಸೇರಿಸಿದ್ದರು. ಗುಡ್ಡದ ಮುತ್ಯಾ  ಇವನಿಗೆ ಶಿವಪ್ರಸಾದ ಅಂತ ಹೆಸರಿಟ್ಟಿದ್ದು ಇವನ  ಹೆಸರಿಗೂ  ಸ್ವಸ್ತಿಕ ಚಿಹ್ನೆಗೂ ಸರಿಯಾಗಿ  ಹೊಂದಾಣಿಕೆಯಾಗ್ತಿದೆ , ಇವನೇ  ನಮ್ಮ ಮನೆಗೆ  ಯೋಗ್ಯ  ಅಂತ  ಕರೆದುಕೊಂಡು ಬಂದೆ ” ಎಂದು  ಹಕೀಕತ ಬಿಚ್ಚಿಟ್ಟ. ಗಂಡನ ಮಾತು  ಕ್ಛಣ ಕಾಲ ಗದ್ಗದಿತಳಾಗುವಂತೆ ಮಾಡಿತು.

ಮದುವೆ ಆಗಿ ಬರೋಬ್ಬರಿ ಇಪ್ಪತ್ತೈದು ವರ್ಷ ಕಳೆದು ಹೋದರೂ  ಮಕ್ಕಳಾಗದೇ ಹೋದಾಗ ಸಹಜವಾಗಿ   ಧಣಿಯ ಮನೆತನದ  ವಿಷಯ  ಸಣ್ಣಳ್ಳಿಯ  ದೊಡ್ಡ  ವಿಷಯವಾಗಿ ಮಾರ್ಪಟ್ಟಿತ್ತು.   ನೂರಾರು ಎಕರೆ ಜಮೀನು , ಆಳು ಕಾಳು ಚಿರಾಸ್ಥಿ ಚರಾಸ್ಥಿ ಎಲ್ಲಾ  ಇದ್ದರೂ  ಮನೆ ಬೆಳಗಲು ಮಕ್ಕಳೇ ಇಲ್ಲ  ಅಂದ್ಮೇಲೆ ಇದೆಲ್ಲ ತೊಗೊಂಡು ಏನು ಮಾಡೋದು?  ಎಲ್ಲವೂ ವ್ಯರ್ಥ ಅನ್ನುವ ಸ್ಥಿತಿಗೆ ಎಲ್ಲರೂ  ಬಂದು ಬಿಟ್ಟಿದ್ದವು.  ಇವರ  ಸಂಪತ್ತಿನ  ಬಗ್ಗೆಯೂ   ಚರ್ಚೆ   ಶುರುವಾಗಿದ್ದವು.   ಧಣಿ  ಮನೆತನ ಅಳಿದ ಮೇಲೆ  ಊರ ಅಭಿವೃದ್ಧಿಗಾಗಿ, ಸಾರ್ವಜನಿಕ ಹಿತಕ್ಕಾಗಿ, ಇಲ್ಲವೇ ಧಾರ್ಮಿಕ ಕಾರ್ಯಗಳಿಗಾಗಿ,  ಆಸ್ತಿ  ಬಳಸಿಕೊಳ್ಳಬೇಕು  ಅಂತ  ಕೆಲವರು ಹೇಳಿದರೆ  ಇಲ್ಲ ಊರ ಜನರಿಗೆ ಅವರ ಆಸ್ತಿಪಾಸ್ತಿ ಸಮವಾಗಿ ಹಂಚಬೇಕು ಅಂತ ಇನ್ನೂ ಕೆಲವರು ಅಭಿಪ್ರಾಯ ಹೊರ ಹಾಕಿದ್ದರು.

ಊರಲ್ಲಿ ನಡೆಯುತಿದ್ದ ಆ  ಗುಸುಗುಸು ಚರ್ಚೆ  ಆಗಲೇ  ರುದ್ರಮ್ಮಳ ಕಿವಿಗೂ  ಮುಟ್ಟಿತು. ನಮ್ಮ ಆಸ್ತಿ ಪಾಸ್ತಿ ವ್ಯರ್ಥವಾಗಲು  ಬಿಡಬಾರದು ಇದಕ್ಕೊಂದು ಪೂರ್ಣ  ವಿರಾಮ ಹಾಕಲೇಬೇಕು  ಅಂತ ಗಟ್ಟಿ ನಿರ್ಧಾರ ಮಾಡಿ   ಅಂದು ಗಂಡ  ಜೇಳಜಿ ಕಟ್ಟೆಗೆ ಕುಳಿತಾಗ  ಆತನ   ಹತ್ತಿರ ಬಂದು ” ನೀವು ಇನ್ನೊಂದು ಮದುವೆಯಾಗಿ ನಮ್ಮ ವಂಶದ ಕುಡಿ ಬೆಳೆಸಬೇಕು ಇಲ್ಲದಿದ್ದರೆ  ನಮ್ಮ ದೊಡ್ಡ ಆಸ್ತಿಗೆ ವಾರಸುದಾರರೇ ಇಲ್ಲದಂತಾಗುತ್ತದೆ.  ಮನೆತನದ  ಸಂಪತ್ತು ನಮ್ಮ ನಂತರ  ಹೆಸರಿಲ್ಲದಂತೆ ನಾಶವಾಗಿ  ಹೋಗುತ್ತದೆ ”  ಅಂತ ಎಚ್ಚರಿಕೆಯ  ಸಲಹೆ ನೀಡಿದಳು.  ಹೆಂಡತಿಯ ಮಾತಿಗೆ ಧಣಿ ಸಾರಾಸಗಟಾಗಿ  ತಿರಸ್ಕರಿಸಿ  ” ನಾನು  ನಿನ್ನ ಮಾತಿಗೆ ಒಪ್ಪೋದಿಲ್ಲ ಇಂತಹ ಮಾತು ಹೇಳಲು ನಿನಗೆ ಮನಸ್ಸಾದರು ಹೇಗೆ ಬಂತು”  ಅಂತ  ಬೈದು ಬಿಟ್ಟ. ಆದರೂ  ಅವಳು ಸುಮ್ಮನಾಗದೆ  ” ನಮ್ಮ ಆಸ್ತಿಪಾಸ್ತಿಗೆ ಪರಿಹಾರವೇನು? ದಾನ ಮಾಡ್ತೀರಾ? ” ಅಂತ ಪ್ರಶ್ನಿಸಿದಳು

” ಇಲ್ಲ ಎಲ್ಲದಕ್ಕೂ ಒಂದು ಪರಿಹಾರ ಇದ್ದೇ ಇರ್ತಾದೆ ಯಾರನ್ನಾದರೂ  ಒಬ್ಬ ಒಳ್ಳೆಯ ಸ್ವಭಾವಿರುವ  ಹುಡುಗನಿಗೆ   ದತ್ತು ಪಡೆದು ನಮ್ಮ ಆಸ್ತಿಪಾಸ್ತಿಗೆ ಹಕ್ಕುದಾರನಾಗಿ ಮಾಡಿದರಾಯಿತು. ಎಷ್ಟೋ ಜನ ಮಕ್ಕಳಿಲ್ಲದವರು ಹಾಗೇ ಮಾಡ್ತಾರೆ, ಇದು ಕಾನೂನು ಸಮ್ಮತವೂ ಆಗಿದೆ ”   ಎಂದಾಗ  ” ಆಸ್ತಿ ಅಂತಸ್ತು ಇದೆ ಅಂದರೆ ದತ್ತು ಬರಲು ಎಲ್ಲರೂ ತಕ್ಷಣ ಒಪ್ಕೋತಾರೆ   ಆದರೆ ಯಾರನ್ನು ಪಡೆಯೋದು?  ಯಾರು ನಮ್ಮ ಮನೆತನಕ್ಕೆ ಸರಿಯಾಗಿ ಹೊಂದಿಕೆಯಾಗಬಲ್ಲರು.  ಸಂಬಂಧಿಕರಲ್ಲಿ  ದತ್ತು ಪಡೆದರೆ  ಅವರು  ನಮಗಿಂತ   ನಮ್ಮ ಆಸ್ತಿಗೇ   ಆಸೆ ಪಟ್ಟರೆ ಏನ್ಮಾಡೋದು ? ”  ಅಂತ  ಅನುಮಾನ ಹೊರ ಹಾಕಿದಳು.   ಹೆಂಡತಿಯ ಮಾತು ಧಣಿಗೆ  ನೂರು ಬಾರಿ ಯೋಚಿಸಿ  ಮರುದಿನ  ಆ ಗುಡ್ಡದ ಮುತ್ಯಾನ ಮೊರೆ ಹೋಗಿ  ಈ ಎಲ್ಲ  ಸಮಸ್ಯೆಗೂ ತೆರೆ ಎಳೆದು  ನಿಟ್ಟುಸಿರು ಬಿಟ್ಟಿದ್ದ.

” ನಾವೆಲ್ಲ ಧಣಿಯ ಮನೆತನದ ಬಗ್ಗೆ  ಏನೇನೋ ವ್ಯಂಗ್ಯವಾಗಿ  ಮಾತಾಡಿದೇವು  ಆದರೀಗ  ಅವರು ದತ್ತು ಪಡೆದ  ಮೇಲೆ ನಾವೇ ಅವರ ಈ ಕಾರ್ಯ ಮೆಚ್ಚಿಕೊಳ್ಳುತಿದ್ದೇವೆ. ಸ್ವಸ್ತಿಕ ಹುಡುಗ  ನಮ್ಮೂರಿನ ಹೆಸರು ಎಲ್ಲ ಕಡೆ ಬೆಳಕಿಗೆ ಬರುವಂತೆ  ಮಾಡ್ತಿದ್ದಾನೆ.  ಮೊದಲು ನಮ್ಮೂರ  ಹೆಸರೇ ಬಹಳ ಜನರಿಗೆ ಗೊತ್ತಿರಲಿಲ್ಲ  ಈಗ ಸಣ್ಣಳ್ಳಿ  ಅಂದರೆ  ಸಾಕು ಈಗ  ಎಲ್ಲರೂ   ಥಟ್ಟನೆ ಹೇಳತಾರೆ ”  ಅಂತ ಜನ ತಮ್ಮ ವರಸೆ ಬದಲಿಸಿ ಹೇಳತೊಡಗಿದರು.

ಊರ  ಅಗಸಿ ಹತ್ತಿರ ಇರುವ ಶರಭಣ್ಣನ ಛಪ್ಪರದ ಹೋಟಲು ಆಗಲೇ ಒಂದು ಸುಸಜ್ಜಿತ ಹೋಟಲಾಗಿ ಪರಿವರ್ತನೆಯಾಗಿದ್ದು ಎಲ್ಲರ ಹುಬ್ಬೇರಿಸುವಂತೆ ಮಾಡಿತು.  ಅದರ ಮೇಲೆ ಸ್ವಸ್ತಿಕ ಹೋಟಲ ಅನ್ನುವ ಬೋರ್ಡ್ ಕೂಡ ಕಾಣುತಿತ್ತು.  ಕೇಳಿದವರಿಗೆಲ್ಲ  “ಆ ಸ್ವಸ್ತಿಕ ಹುಡುಗನಿಂದಲೇ  ನನ್ನ ಹೋಟೆಲು ಈ ರೀತಿ  ಬದಲಾಗಿದೆ. ನನ್ನ ವೃತ್ತಿ ಜೀವನದಲ್ಲೇ ಇಷ್ಟೊಂದು ಫಾಯದಾ ಯಾವತ್ತೂ  ಆಗಿರಲಿಲ್ಲ , ಮೊದಲು ಚಹಾ ಬಿಟ್ಟು ಏನನ್ನೂ ಮಾರಾಟವಾಗುತಿರಲಿಲ್ಲ  ಅದು ಸ್ವಲ್ಪ ನಗದೀ ಉಳಿದದ್ದು ವರ್ಷ ಪೂರ್ತಿ ಉದ್ರಿ, ಆದರೀಗ ಊರಿಗೆ ನಿತ್ಯ ಹೊಸ ಹೊಸ ಜನ  ಬರುತಿದ್ದಾರೆ ಚಹಾ ,ನಾಷ್ಟಾ , ತಂಪು ಪಾನೀ ಕೂಡ  ನಗದಾಗಿ ಮಾರಾಟವಾಗುತ್ತಿದೆ” ಅಂತ ಖುಷಿಯಿಂದ  ಹೇಳಿದ. ಹೋಟಲ ಪಕ್ಕದಲ್ಲಿ  ರಾಘಣ್ಣನ  ಪಾನ ಶಾಪ ಕೂಡ ಭರ್ಜರಿಯಾಗೇ ನಡೆದು  ಸಾದಾಪಾನ , ಮಸಾಲಾಪಾನ,  ಸೋಂಪು, ಅಡಿಕೆ ಅಂತ  ಆತ ಕೂಡ  ಸಾಕಷ್ಟು ಗಳಿಕೆ ಮಾಡಿಕೊಳ್ಳತೊಡಗಿದ.

ಒಟ್ಟಾರೆ ಸಣ್ಣಳ್ಳಿಯ ಹೆಸರು  ಆಗಲೇ ವ್ಯಾಪಕ ಪ್ರಚಾರ ಪಡೆದುಕೊಂಡಿತು  ಜನ ಪ್ರತಿನಿಧಿಗಳು ಕೂಡ  ಎಚ್ಚೆತ್ತುಕೊಂಡರು  ಊರಿಗೆ ಸುಸಜ್ಜಿತ ರಸ್ತೆ ಕುಡಿಯುವ ನೀರು , ವಿದ್ಯುತ್  ಮತ್ತಿತರ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಿ  ಜನಬೆಂಬಲ ಗಳಿಸಲು  ಮುಂದಾದರು . ನೀಲಗಿರಿ ಗಿಡಕ್ಕೆ ನೇತುಹಾಕಿದ  ಆ ಸಣ್ಣ ಬೋರ್ಡ್ ತೆಗೆಸಿ ಸಿಮೆಂಟ್ ಕಾಂಕ್ರೇಟಿನ   ದೊಡ್ಡ ಬೋರ್ಡ್   ಮೇಲೆ ದಪ್ಪಕ್ಛರಗಳಿಂದ  ಸ್ವಸ್ತಿಕ ಸಣ್ಣಳ್ಳಿ ಅಂತ ಬರೆಸಿ  ಎರಡು ಕಂಬದ ಮಧ್ಯೆ  ಎಲ್ಲರಿಗೂ ಸ್ಪಷ್ಟವಾಗಿ ಕಾಣುವಂತೆ ಆ ರಾಷ್ಟ್ರೀಯ ಹೆದ್ದಾರಿಯ ಪಕ್ಕ ಜೋಡಿಸಲಾಯಿತು.

ಅವತ್ತು ಟ್ಯಾಕ್ಸಿ  ಡ್ರೈವರ್ ನಬೀಸಾಬನ ಜೀಪಿನಲ್ಲಿ ಸ್ವಸ್ತಿಕ ಹುಡುಗನಿಗೆ ನೋಡಲು ಕೆಲವರು ಸಣ್ಣಳ್ಳಿಗೆ ಬಂದರು.  ಊರಿನ ಅಮೂಲಾಗ್ರ  ಬದಲಾವಣೆ ಕಂಡು “ಇದು  ಪವಾಡವಲ್ಲದೆ ಬೇರೆ ಏನೂ ಅಲ್ಲ. ಎಷ್ಟೋ ವರ್ಷದಿಂದ ಅಭಿವೃದ್ಧಿ ಕಾಣದ ಈ ಊರು ಇವತ್ತು ಈ ರೀತಿ ಬದಲಾಗಿದೆಯೆಂದರೆ ಆ ಸ್ವಸ್ತಿಕ ಹುಡುಗನ   ಶಕ್ತಿ ಅಷ್ಟಿಷ್ಟಲ್ಲ. ಅಂತ ಮಾತಾಡಿಕೊಂಡು  ಆತನ ಹತ್ತಿರ ಬಂದರು . ಆತನ ಹಣೆಯ ಮೇಲಿನ ಆ ಸ್ವಸ್ತಿಕ ಚಿಹ್ನೆ ಆಶ್ಚರ್ಯ ಮೂಡಿಸಿತು. ಆದರೆ  ನಬೀಸಾಬ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೆ ಆಕಾಶವೇ ತಲೆಯ ಮೇಲೆ ಬಿದ್ದವರಂತೆ ಗಾಬರಿಯಾಗಿ ನಿಂತುಕೊಂಡ.  ಆತನ  ಮುಖ ಏಕಾಏಕಿ ಸಪ್ಪಗಾಗಿದ್ದು  ಕಂಡು  “ಯಾಕೆ ಏನಾಯಿತು ಅಂತ  ಪ್ರಶ್ನಿಸಿದರು.  ನಬೀಸಾಬ  ಕಣ್ತುಂಬಾ ನೀರು ತಂದು “ಏನೂ ಇಲ್ಲ” ಅಂತ ಕರವಸ್ತ್ತದಿಂದ  ಕಣ್ಣೊರೆಸಿಕೊಂಡು ಮೌನವಾದ.  ” ಬಿಸಿಲಿನ ತಾಪದಿಂದ  ನಿನಗೆ  ಸುಸ್ತಾಗಿರಬೇಕು ಅದಕ್ಕೆ ಹೀಗಾಗುತ್ತದೆ ನೀನು ಹೋಗಿ  ಸ್ವಲ್ಪ ವಿಶ್ರಾಂತಿ ತೆಗೆದುಕೊ  ಎಲ್ಲವೂ  ಸರಿಯಾಗುತ್ತದೆ” ಅಂತ ಸಲಹೆ ನೀಡಿದಾಗ ಆತ  ತಲೆಯಾಡಿಸಿ ವಾಪಸ್ ಬಂದು  ಜೀಪಿನಲ್ಲಿ ಕುಳಿತುಕೊಂಡ .

ಸುಮಾರು ಹತ್ತು ವರ್ಷದ ಹಿಂದಿನ ಘಟನೆ ನಬೀಸಾಬನ  ಕಣ್ಣೆದುರಿಗೆ ಬಂದಿತು. ಕುಟುಂಬ ಸಮೇತ  ಮುಂಬೈಗೆ ಕೂಲಿ ಕೆಲಸಕ್ಕೆ ಹೋಗುವಾಗ ರೈಲು ನಿಲ್ದಾಣದಲ್ಲಿ ಮಗ ಅಲ್ಲಾಭಕ್ಛ  ಕಳೆದು ಹೋಗಿದ್ದ.  ಆತನಿಗೆ ಹುಡುಕುವ  ಎಲ್ಲ ಪ್ರಯತ್ನ ಮಾಡಿದರು ವ್ಯರ್ಥವಾಗಿತ್ತು.  ಆತನ ಹಣೆಯ ಮೇಲೂ ಈ ಸ್ವಸ್ತಿಕ ಗುರುತು ಇತ್ತು. ಯಾಕೆಂದರೆ ಸಣ್ಣವನಿದ್ದಾಗ  ಆಟವಾಡಲು ಹೋಗಿ ಮನೆಯ ಮುಂದಿನ  ಕಾಂಕ್ರೇಟ ರಸ್ತೆಯ  ಮೇಲೆ ಬಿದ್ದು  ಹಣೆಗೆ ಗಾಯ ಮಾಡಿಕೊಂಡಿದ್ದ.  ಆಸ್ಪತ್ರೆಗೆ ಕರೆದುಕೊಂಡು ಹೋದಾಗ  ಐದಾರು ಹೊಲಿಗೆ ಹಾಕಿ ಗೋಲಿ ಔಷಧಿ ಮುಲಾಮು ಕೊಟ್ಟು  ಕಳಿಸಿದ್ದರು .  ಸ್ವಲ್ಪ ದಿನದ ನಂತರ  ಗಾಯ ಮಾಯವಾದರೂ ಗಾಯನ ಗುರುತು ಹಾಗೇ ಉಳಿದು ಅದು ಸ್ವಸ್ತಿಕ  ಚಿಹ್ನೆಯ  ಆಕಾರ ಪಡೆದಿತ್ತು.

 ” ಈ ಧಣಿ ದತ್ತು ಪಡೆದ ಹುಡುಗ ಬೇರೆ   ಯಾರೂ ಅಲ್ಲ  ಇವನು  ನನ್ನ ಮಗ  ಅಲ್ಲಾಭಕ್ಛನೇ  ಸಧ್ಯ  ಹೆಸರು ಮಾತ್ರ  ಶಿವಪ್ರಸಾದ ಆಗಿ ಬದಲಾಗಿದೆ,  ಜನ್ಮಕೊಟ್ಟ ನಾನೇ ನನ್ನ ಮಗನಿಗೆ ಗುರುತು ಹಿಡಿಯದಿದ್ದರೆ  ಹೇಗೆ ? ”  ಅಂತ ಯೋಚನೆಯಲ್ಲಿ ಮುಳುಗಿದ. ಆದರೆ  ಈ ಸತ್ಯ ಹೇಳಿದರೂ  ಯಾರೂ ನಂಬುವದಿಲ್ಲ ಈ ವಿಷಯ ಯಾರಿಗೂ ಹೇಳೋದು ಬೇಡ ನಮ್ಮ  ಮಗ ಎಲ್ಲೇ ಇರಲಿ ಜೀವಂತವಾಗಿ ಸುಖವಾಗಿ ಇದ್ದಾನೆ ಅಷ್ಟೇ ಸಾಕು. ” ಹಣೆಬರಹ ಅದೃಷ್ಟ ಬದಲಾಯಿಸುತ್ತದೆ ” ಅಂತ ಕೇಳಿದ್ದೆ ಆದರೆ ಹಣೆಯ ಮೇಲಿನ ಬರಹ   ಕೂಡ  ನಮ್ಮ  ಮಗನ  ಅದೃಷ್ಟ ಬದಲಾಯಿಸಿ ಬಿಟ್ಟಿತು ಅಂತ ಶೂನ್ಯ ದಿಟ್ಟಿಸಿದ. ಒಂದು ಕಡೆ ಪುತ್ರ ಶೋಕವೂ ಕಾಡಿ ಸಂಕಟ ನೀಡಿತು .

 “ನಡೀ ನಬೀಸಾಬ  ಹೊರಡೋಣ” ಅಂತ ಹೆಗಲ ಮುಟ್ಟಿ ಎಚ್ಚರಿಸಿದ್ದು ಗೊತ್ತಾಯಿತು ಆಗ  ವಾಸ್ತವ ಲೋಕಕ್ಕೆ ಮರಳಿ “ಜೀ ಸಾಬ” ಅಂತ  ಜೀಪ ಚಾಲೂ ಮಾಡಿ ಗೇರ್ ಬದಲಾಯಿಸಿದ,  ಆ ಸ್ವಸ್ತಿಕ  ರಹಸ್ಯದ ಬಗ್ಗೆ ಯಾರ ಮುಂದೆಯೂ  ನಬೀಸಾಬ  ತುಟಿ ಪಿಟಕ ಅನ್ನದೇ  ಉಸಿರು ಬಿಗಿ ಹಿಡಿದುಕೊಂಡು ಊರ ಕಡೆ  ಪಯಣ ಬೆಳೆಸಿದ.!!!

ಶರಣಗೌಡ ಬಿ ಪಾಟೀಲ ತಿಳಗೂಳ, ಕಲಬುರಗಿ.

4 Comments on “ಹಣೆಯ ಮೇಲಿನ ಬರಹ…

  1. ಕುತೂಹಲಕಾರಿ ಯಾದ ಕಥೆ… ಜೊತೆಗೆ ಸತ್ಯವನ್ನು ತೆರೆದಿಡಲಾಗದ ಸನ್ನಿವೇಶ…
    ವಾಸ್ತವಿಕದ ಪರಿಚಯ.ಚೆನ್ನಾಗಿ..ಒಡಮೂಡಿದೆ.

    ಧನ್ಯವಾದಗಳು ಸಾರ್.

    .

  2. ಹಣೆಯ ಮೇಲಿನ ಸ್ವಸ್ತಿಕ ಆಕಾರದ ಗಾಯದ ಗುರುತು ಹುಡುಗನ ನಿಜವಾದ ಹಣೆಬರಹವಾದುದು ನಿಜಕ್ಕೂ ವಿಧಿಯಾಟ! ಸೊಗಸಾದ ಕಥೆ…ಧನ್ಯವಾದಗಳು.

  3. ಸುಂದರ, ಕತೂಹಲಕಾರಿ, ಸೊಗಸಾದ ಕಥೆ. ಅಭಿನಂದನೆಗಳು ಸರ್ ತಮಗೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *