ವಯಸ್ಸಾದ ಮೇಲೆ
ಓಡುವ ಹೆಜ್ಜೆಗಳ ಸಪ್ಪಳಕೆ ಕೇಳಿಸದ
ಮನದ ಮಾತು ಈಗೀಗ ಸ್ಪಷ್ಟವಾಗಿ ರಿಂಗಣಿಸತೊಡಗಿದೆ
ಮೊದಲಿನಂತೆ ಓಟದ ವೇಗ ಈಗಿಲ್ಲ
ಓಡುವ ಹುಮ್ಮಸ್ಸು ಕುಂದಿದೆಯೆಲ್ಲಾ
ದಿನವಿಡೀ ದುಡಿದರೂ ಕಾಣದ ಆಯಾಸ
ಈಗ ಬೆಳ ಬೆಳಗ್ಗೆಯೇ ಕಾಡತೊಡಗಿದೆ
ಕೈ ಕಾಲುಗಳಲಿ ನೋವಿನ ರಾಗ ಇಣುಕತೊಡಗಿದೆ
ನಡೆದೇ ಬರುತ್ತಿದ್ದ ತರಕಾರಿ ಈಗ ವಾಹನ ಕೇಳತೊಡಗಿದೆ
ಗೊತ್ತಿಲ್ಲದೆ ಮಾತಿನ ಮಧ್ಯೆ ರಾಜಕೀಯ ವಿಷಯ ತೂರಿ ಬರುತ್ತಿದೆ
ಗತಿಸಿದ ಘಟನೆಗಳ ನೆನಪಿನ ಸುರುಳಿ ಪದೇ ಪದೇ ಬಿಚ್ಚಬೇಕೆನಿಸುತ್ತಿದೆ
ಖಾಯಿಲೆಗಳ ಲಕ್ಷಣಗಳ ಪಟ್ಟಿಗೆ ರಾತ್ರಿ ನಿದ್ದೆ ಬಾರದಾಗಿದೆ
ರಕ್ತ ಪರೀಕ್ಷೆಯ ಫಲಿತಾಂಶದಲಿ ಎಲ್ಲಾ ಮಟ್ಟಗಳು ಸಾಧಾರಣ ಬಂದಾಗ
ಅವ್ಯಕ್ತ ಸಂತಸ ಮನದಲ್ಲಿ ಮೂಡುತಿದೆ
ಪರೀಕ್ಷೆಯಲಿ ಅತ್ಯುನ್ನತ ಶ್ರೇಣೆಯಲಿ ಪಾಸಾದಂತೆ ಅನಿಸಿದೆ
ಹೊಟ್ಟೆ ಬಿರಿಯುವಷ್ಟು ತಿನ್ನಬೇಕೆನಿಸಿದರೂ
ಬೊಂಡ ಬಜ್ಜಿಗಳ ಚಪ್ಪರಿಸಬೇಕೆನಿಸಿದರೂ
ಒಳಗಿನ ಎಚ್ಚರಿಕೆ ನೆನಪಾಗಿ ಬಾಯಿ ಕಟ್ಟಿಸಿದೆ
ಯೋಗ ಧ್ಯಾನ ತರಗತಿಗಳ ಹುಡುಕಿಕೊಂಡು ಅಲೆಯುವ ಸ್ಥಿತಿ ಬಂದಿದೆ
ಸಂಬಂಧಿಕರ ಮದುವೆ ಮುಂಜಿಗಳಿಗೆ ಮೊದಲೇ ಹೋಗುವ ಮನಸ್ಸಾಗುತ್ತಿದೆ
ಮದುವೆಯಾಗದ ಹುಡುಗ ಹುಡುಗಿಯರಿಗೆ ಸಂಬಂಧ ಹುಡುಕುವ ತಾಳ್ಮೆ ಆಸಕ್ತಿ ಗರಿಗೆದುರಿದೆ
ಎದುರಿಗಿರುವ ಜನಗಳು ತೋರುವ ಗೌರವ ಅನುಕಂಪ ಅಚ್ಚರಿಯ ತರಿಸಿದೆ
ವಾರ್ತಾ ಪತ್ರಿಕೆಯ ಪುಟಗಳಲ್ಲಿ ಗಂಟೆಗಟ್ಟಲೇ ಕಳೆಯಲು ಸಮಯ ಸಿಗುತ್ತಿದೆ
ವ್ಯವಸ್ಥೆಯ ಬಗ್ಗೆ ಆಗಾಗ ಆಕ್ರೋಶ ಒಮ್ಮೊಮ್ಮೆ ಕರಗುವ ಕರುಣೆ ಮಡುಗಟ್ಟಿದೆ
ಈಗಿನ ಯುವ ಜನಾಂಗದ ಕಾರ್ಯ ತತ್ಪರತೆಯ ಕೊರತೆ
ಜಿಡ್ಡುಗಟ್ಟಿದ ಅವರ ಮೈಗಳ್ಳತನ ಕಂಡು ಮೈಮೇಲೆ ಮುಳ್ಳು ಏಳುತ್ತಿದೆ
ಶಾಸ್ತ್ರೀಯ ಸಂಗೀತದ ಕಛೇರಿಗಳಿಗೆ ಹಾಜರಾಗಲು ಮನಬಯಸುತ್ತಿದೆ
ಹಳೆಯ ಸಹಪಾಠಿಗಳ ಕೂಡ ಹರಟೆ ಹೊಡೆಯುವ ಕ್ಷಣಕ್ಕೆ ಕಾಯುತ್ತಿದೆ
ಸಮವಯಸ್ಕರ ಸಾವು ಇಲ್ಲದ ಭಯವನ್ನು ತುಂಬಿಸುತ್ತಿದೆ
ಆಧ್ಯಾತ್ಮ ಜ್ಞಾನದ ಕಡೆಗೆ ಮೆಲ್ಲನೆ ಮನ ಜಾರುತ್ತಿದೆ
ಮಠ ಮಂದಿರಗಳಿಗೆ ತೀರ್ಥ ಕ್ಷೇತ್ರಗಳಿಗೆ ಎಡತಾಕುವ ಆಸೆಯಾಗುತ್ತಿದೆ
ಕಳಚಿಕೊಳ್ಳಲು ಬಯಸಿದ್ದಷ್ಟು ಈ ಸಂಸಾರದ ಮೋಹ
ಮತ್ತೆ ಬಂಧನದಲಿ ಸಿಲುಕಿಸುತ್ತಿದೆ
ಬದಲಾಗುತ್ತಿರುವ ಮೇಲಿನ ಸ್ವಭಾವಗಳಿಗೆ ಕಾರಣ ಹುಡುಕಹೊರಟೆ
ಅರೆಬೋಳಾದ ತಲೆಯಲ್ಲಿ ಉಳಿದ ಬೆಳ್ಳಿ ಕೂದಲು
ತುಸು ಮುಂದೆ ಬಂದು ಡೊಳ್ಳಾದ ಹೊಟ್ಟೆ
ಸಣ್ಣ ಅಕ್ಷರಗಳ ಓದಲು ಕಷ್ಟಪಡುವ ಕಣ್ಣುಗಳು
ನಗುತಾ ನುಡಿದಿವೆ ನಿನಗೆ ವಯಸ್ಸಾಗಿದೆ ಎಂದು
ಜೀವನದ ಪಾಠಶಾಲೆಯಲಿ ನೀನೀಗ ಹಿರಿಯ ವಿದ್ಯಾರ್ಥಿಯೆಂದು
ಬದುಕೆಂಬ ಮೂಸೆಯಲಿ ಅನುಭವದ ಅಮೃತ ಪಡೆದವನು ನೀನೆಂದು
ಗಳಿಸಿದ ಜ್ಞಾನವ ಸಮಾಜಕ್ಕೆ ಹಂಚಿಕೋ
ಬದಲಾಗುವ ಸನ್ನೀವೇಶಗಳಿಗೆ ನಿನ್ನ ಖುಷಿ ಬಲಿಕೊಡದೆ
ಸಂತೋಷ ಉಲ್ಲಾಸದಿಂದಿರುವ ಮನೋಭಾವ ಬೆಳಸಿಕೋ
ಎಂಬ ಪರಮ ಸತ್ಯವ ಸಾರಿ ಸಾರಿ ಹೇಳಿವೆ…..
-ಕೆ.ಎಂ ಶರಣಬಸವೇಶ
ಜೀವನದ ಪಾಠಶಾಲೆಗಳಲ್ಲಿ ಕಲಿತ ಪಾಠಗಳ ಅಭಿವ್ಯಕ್ತಿ ಸುಂದರವಾಗಿ ಮೂಡಿಬಂದಿದೆ
ಅರ್ಥಪೂರ್ಣವಾಗಿದೆ. ಧನ್ಯವಾದಗಳು
ಬಾಳ ಇಳಿಸಂಜೆಯ ಕುರಿತಾಗಿ ಸೊಗಸಾಗಿ ವರ್ಣಿಸಿದ್ದೀರಿ.
ಸೊಗಸಾದ ಕವನ ಸಾರ್…
Addabidde swamy, thumba sogasagide
ವಾಸ್ತವವನ್ನು ಚಿತ್ರಿಸುವ ಚೆಂದದ ಕವನ.
Tumba chennagide!
ಪ್ರತಿಯೊಬ್ಬರ ಅನಿಸಿಕೆ
ಮಾಗಿದ ಮನದ ಮನದಾಳದ ಮಾತುಗಳ ಚಂದದ ಅನಾವರಣ. ಅಭಿನಂದನೆಗಳು
ಇಳಿ ವಯಸ್ಸಿನ ಬಗೆಗಿನ ಆಳವಾದ ಆತಂಕವು ಕವನ ಪೂರ್ತಿ ಆವರಿಸಿದೆ.
ಸೊಗಸಾದ ಭಾವಯಾನ.
) ನಿಸರ್ಗದ ನಿಯಮಗಳಲ್ಲಿ ಸರಿಯುವ ಸಮಯವು
ನಿಸರ್ಗದ ನಿಯಮಗಳಲ್ಲಿ ಸರಿಯುವ ಸಮಯವು
ಕರೆದೊಯ್ಯುವುದು ಜೀವಿಗಳ ಜೊತೆ ಜೊತೆಯಲ್ಲಿ/
ನಿಸರ್ಗದ ನಿಯಮಗಳಲ್ಲಿ ಸರಿಯುವ ಸಮಯವು/
ಪರಿವರ್ತಿಸುವುದು ತನುಮನಗಳ ವಾಡಿಕೆಗಳಲ್ಲಿ/
ಬದಲಾಗುವುದು ಕಸುವು ಚಿಂತಿಸುವ ಚಿಂತನವು/
ನೆಡೆನುಡಿಯಲ್ಲಿ ಸಮಾನತೆಯು ಸರಿದೂಗುವುದು/
ರೂಪ ಸ್ವರೂಪಗಳಲ್ಲಿ ಬದಲಾಗುವುದು ಜೀವನವು/
ಅಂತರಂಗದಲ್ಲಿ ಅಧ್ಯಾತ್ಮಿಕ ಭಾವನೆಗಳು ಬರುವುದು/
ಜೀವನದ ಮೈಲಿಗಲ್ಲುಗಳು ಅರ್ಥ ಧರ್ಮ ಕಾಮ ಮೋಕ್ಷವು/
ಕಾಲಾನುಸಾರವಾಗಿ ನೆನಪಿಸುತ ಸಾಗುವುದು ಜೀವನವು /
ನವರಸ ಭಾವಗಳ ಸವಿಯುತ ಜೀವಿಸುವುದು ಉದ್ದೇಶವು/
ದಿನನಿತ್ಯಜಾಗೃತಿಯಲ್ಲಿ ಅನುಭವಿಸಿ ಬಾಳುವುದು ಭಾಗ್ಯವು