ಅವಿಸ್ಮರಣೀಯ ಅಮೆರಿಕ-ಎಳೆ 14

Share Button

ನಾ ನಿನ್ನ ಮರೆಯಲಾರೆ…!

ನಾಲ್ಕು ದಿನಗಳ ನಮ್ಮ ಸಿನಿಮಾ ನಗರಿಯ ಸುತ್ತಾಟದ  ಗಮ್ಮತ್ತನ್ನು ಮೆಲುಕು ಹಾಕುತ್ತಾ  ಇದ್ದಂತೆಯೇ ಪುಟ್ಟ ಮಗುವಿನ ಒಡನಾಟದಲ್ಲಿ ದಿನಗಳು ಸರಾಗವಾಗಿ ಓಡುತ್ತಿದ್ದವು. ಅದಾಗಲೇ ಚಳಿಗಾಲ ಮುಗಿದು ವಸಂತಕಾಲ ಪ್ರಾರಂಭವಾಯ್ತು. ನಾವಿದ್ದ ಬೇ ಏರಿಯಾವು, ಕ್ಯಾಲಿಫೋರ್ನಿಯಾ ರಾಜ್ಯದಲ್ಲೇ, ಸಮಶೀತೋಷ್ಣ ಪ್ರದೇಶದ ಜನರಿಗೆ ವಾಸಿಸಲು ಅತ್ಯಂತ ಸೂಕ್ತವಾದ ಸ್ಥಳವಾಗಿದೆ.. ಆದ್ದರಿಂದಲೇ ಅತ್ಯಂತ ಹೆಚ್ಚು ಭಾರತೀಯರನ್ನು ಇಲ್ಲಿ ಕಾಣಬಹುದು. ಅಲ್ಲದೆ, ಇಲ್ಲಿ ಅಮೆರಿಕದ ಇತರ ಕಡೆಗಳಲ್ಲಿರುವಂತೆ ಚಳಿಗಾಲದಲ್ಲಿ ಹಿಮಪಾತದ  ತೊಂದರೆಯಿಲ್ಲ.

ಇಲ್ಲಿ ವಸಂತಕಾಲದ (ಮಾರ್ಚಿನಿಂದ ಮೇ ವರೆಗೆ) ಹವೆಯು ಬಹಳ ಆನಂದದಾಯಕ. ಚಳಿಗಾಲದಲ್ಲಿ ಎಲೆಗಳೆಲ್ಲಾ ಉದುರಿ ಬೋಳಾದ ಮರಗಳು ಚಿಗುರಿ ಹೂ ಬಿಡಲು ಆರಂಭ. ನಾನು ಅಮೆರಿಕಕ್ಕೆ ಬಂದಿಳಿದ  ಹೊಸದರಲ್ಲಿ, (ಫೆಬ್ರವರಿ) ನಮ್ಮ ಮನೆಯ ಮುಂಭಾಗದಲ್ಲಿದ್ದ ಬೋಳಾದ ಮರವನ್ನು ಕಂಡು, ಅದು ಸತ್ತ ಮರವೆಂದು ತಿಳಿದು, “ಅದನ್ನು ಯಾಕೆ ಇನ್ನೂ ಕಡಿಯದೆ ಬಿಟ್ಟಿದ್ದಾರೆ?” ಎಂದು ಮಗಳಲ್ಲಿ ಕೇಳಿದಾಗ, ಅವಳು ನಕ್ಕು, ” ಇನ್ನೆರಡು ತಿಂಗಳಿಗೆ ನೋಡು ಅದು ಹೇಗಾಗುವುದೆಂದು” ಎಂದಿದ್ದು ನೆನಪಾಯಿತು. ಕಣ್ಣೆದುರಿಗೇ ಮರಗಳು ಚಿಗುರಿ, ವಿವಿಧ ಮರಗಳು ಬಣ್ಣದ ಹೂಗಳಿಂದ ತುಂಬಿ ರಸ್ತೆ ಇಕ್ಕೆಲಗಳಲ್ಲಿ ಹೂವಿನ ರಾಶಿ ಹಾಸುವುದನ್ನು ನೋಡಲು..ಆಹಾ..ಎರಡು ಕಣ್ಣುಗಳೂ ಸಾಲವೆಂದೆನಿಸುತ್ತದೆ. ಹೂವಿನ ತೇರಿನಂತೆ ಕಂಗೊಳಿಸುವ ಮರಗಳು ಮುಂದೆ ಒಂದೆರಡು ತಿಂಗಳುಗಳ ಕಾಲ ತಮ್ಮ ಪ್ರಕೃತಿ ವೈಭವವನ್ನು ಮೆರೆಸುವುದು  ಅದ್ವಿತೀಯ ಸೊಬಗಿನ ದಿನಗಳು. ವಾಕಿಂಗ್ ಹೋದಲ್ಲೆಲ್ಲ ಫೋಟೋ ಕ್ಲಿಕ್ಕಿಸಿ ನೆನಪಿನ ಮೂಟೆಯನ್ನು ತುಂಬಿಸುವುದೆ ಕೆಲಸವಾಯಿತು. ಇದರ ಜೊತೆಗೇ ಎಲ್ಲಿ ನೋಡಿದರಲ್ಲಿ ಹಿಂದೆಲ್ಲೂ ನೋಡಿರದಂತಹ ವಿವಿಧ ರೀತಿಯ, ಬಣ್ಣಗಳ ಹೂಗಳ ವೈಭವದ ಸೊಗಸು ಹೇಳತೀರದು. ಸೊಬಗಿನ ಹೂದೋಟಗಳು ನಮ್ಮನ್ನು ನಿಬ್ಬೆರಗಾಗಿಸುವುದಂತೂ ನಿಜ. ಒಮ್ಮೆ, “ಅಮ್ಮ, ನಿನಗೆ ತುಂಬಾ ಇಷ್ಟವಾಗುವ ಒಂದು ಕಡೆಗೆ ಹೋಗೋಣ, ಆದರೆ ನೀನು ವಾಪಾಸ್ ಬರ್ತೀಯೋ ಇಲ್ವೋ ಸಂಶಯ!” ಎಂದಳು ಮಗಳು. ನನಗೋ ಕುತೂಹಲ..ಏನಿರಬಹುದೆಂದು. ಆಮೇಲೆ ತಿಳಿಯಿತು, ಪಕ್ಕದ ಕೌಂಟಿ, ಸ್ಯಾನ್ ಜೋಸ್ (San Jose) ಯಲ್ಲಿ ಇದೇ ಸಮಯಕ್ಕೆ ಅಲ್ಲಿಯ ಮುನ್ಸಿಪಲ್ ಗುಲಾಬಿ ಹೂಗಳ ತೋಟದ ಪ್ರದರ್ಶನವು  ಸಾರ್ವಜನಿಕರಿಗೆ  ವೀಕ್ಷಣೆಗಾಗಿ ತೆರೆದಿರುವುದೆಂದು. ಸ್ವಾಭಾವಿಕವಾಗಿಯೇ ಎಲ್ಲರೂ ಹೂಗಳನ್ನು ಇಷ್ಟ ಪಡುವುದು ಸಹಜ.. ಅದರಲ್ಲೂ  ಗುಲಾಬಿಯೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಗುಲಾಬಿ ಎಂದರೆ ಒಂದು ತೂಕ ಹೆಚ್ಚೇ ಪ್ರೀತಿ ಇರುವ ನನಗೆ  ಇನ್ನು ಕೇಳಬೇಕೇ …ಸಂಭ್ರಮದಿಂದ ಪುಟ್ಟ ಮಗುವಿನೊಂದಿಗೆ ಹೊರಟೆವು.    

ಒಟ್ಟು 37 ಎಕ್ರೆ ಜಾಗ ಹೊಂದಿರುವ ತೋಟದಲ್ಲಿ; 5.5 ಎಕರೆ ಜಾಗದಲ್ಲಿ ಮಾತ್ರ ಹರಡಿರುವ ಈ ವಿಶೇಷವಾದ ಗುಲಾಬಿ ತೋಟವನ್ನು ಕ್ಯಾಲಿಫೋರ್ನಿಯ ರಾಜ್ಯದ ಸ್ಯಾನ್ ಜೋಸ್ ಯಲ್ಲಿ ಸಿದ್ಧಗೊಳಿಸಲು, ಅಲ್ಲಿಯ ಮುನ್ಸಿಪಲ್ ಸದಸ್ಯರು 1927ರಲ್ಲಿ ಯೋಜನೆ ರೂಪಿಸಿದ್ದರು. ಆರು ವರ್ಷಗಳ ಬಳಿಕ, ಅಂದರೆ 1931ರಲ್ಲಿ ಇದು ಪೂರ್ಣ ಪ್ರಮಾಣದಲ್ಲಿ ರೂಪುಗೊಂಡು ಸಾರ್ವಜನಿಕರ ವೀಕ್ಷಣೆಗಾಗಿ ತೆರೆಯಿತು. ಇಲ್ಲಿ ಸುಮಾರು 650ಕ್ಕೂ ಹೆಚ್ಚು, ವಿವಿಧ ರೀತಿಯ ಗುಲಾಬಿಗಳಿವೆ. ಸುಮಾರು 3500 ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಈ ಸುಂದರ ತೋಟವು ಇಲ್ಲಿಯ ಐತಿಹಾಸಿಕ ಹೆಗ್ಗುರುತು ಕೂಡಾ ಹೌದು. ಅತ್ಯಂತ ಹೆಚ್ಚು ಹೂ ಬಿಡುವ ವಸಂತ ಕಾಲದ ಮಧ್ಯದಲ್ಲಿ; ಅಂದರೆ ಎಪ್ರಿಲ್, ಮೇ ತಿಂಗಳುಗಳಲ್ಲಿ  ಸಾರ್ವಜನಿಕರಿಗೆ  ವೀಕ್ಷಿಸಲು ಅವಕಾಶವಿದೆ… ಇಲ್ಲಿ  ನಿಗದಿತ ಪ್ರವೇಶ ಶುಲ್ಕವನ್ನು ಪಾವತಿಸಬೇಕಾಗುವುದು. ಈ ಹೂದೋಟವು ಇಡೀ ಅಮೆರಿಕದಲ್ಲೇ ಅತ್ಯಂತ ಶ್ರೇಷ್ಠ ಎಂದು ಪರಿಗಣಿಸಲ್ಪಟ್ಟಿರುವುದು ಇದರ ಹೆಗ್ಗಳಿಕೆ. ಇದರ ಇನ್ನೊಂದು ವಿಶೇಷತೆಯೆಂದರೆ, ಈ ತೋಟವು ಬರೇ ಗುಲಾಬಿ ಹೂಗಳಿಗೆ ಮಾತ್ರ ಮೀಸಲು. ಇದು ಬೆಳಿಗ್ಗೆ 11ಗಂಟೆಯಿಂದ ಸಂಜೆ 7ಗಂಟೆ ವರೆಗೆ ತೆರೆದಿರುತ್ತದೆ. ಇದನ್ನು ನೋಡಲು ಕಡಿಮೆಯೆಂದರೂ ಸುಮಾರು ಎರಡು ಗಂಟೆಗಳಾದರೂ ಬೇಕು. ನಾವು ಅಲ್ಲಿಗೆ ತಲಪಿದಾಗ ಮಧ್ಯಾಹ್ನ ಮೂರು ಗಂಟೆ… ಬಹು ಹಿತಕರವಾದ ವಾತವರಣ. ಮುಂಭಾಗದ ಗೇಟಿನ ಬಳಿಯಿಂದಲೇ, ಹತ್ತು ಮೀಟರ್ ಉದ್ದಕ್ಕೆ, ಎತ್ತರದ ಕಮಾನಿನಲ್ಲಿ ಹಬ್ಬಲು ಬಿಟ್ಟಿದ್ದ ಗುಲಾಬಿ ಗಿಡದ ರೆಂಬೆಗಳಲ್ಲಿ ಅಚ್ಚ ಬಿಳಿ ಗುಲಾಬಿಯ ದೊಡ್ಡ ದೊಡ್ಡ ಗೊಂಚಲುಗಳು ಗಮನ ಸೆಳೆದುವು. ಮುಂದಕ್ಕೆ ನಮ್ಮ ಕಣ್ಣೆದುರಿಗೆ ಕಂಡು ಕೇಳರಿಯದ ಗುಲಾಬಿ ಸ್ವರ್ಗವು ಪ್ರತ್ಯಕ್ಷವಾಯ್ತು!

ಪ್ರತ್ಯೇಕ ಪ್ರತ್ಯೇಕ ಪಾತಿಗಳಲ್ಲಿ ನಿಗದಿ ಪಡಿಸಿದ ಬಣ್ಣದ ಗುಲಾಬಿ ಹೂಗಳು ಗೊಂಚಲುಗಳಲ್ಲಿ ನಳನಳಿಸುತ್ತಿದ್ದವು. ವಿಶೇಷ ಬಣ್ಣ, ಗಾತ್ರ, ಪರಿಮಳ!! ಆಹಾ… ಒಂದು ಕಡೆಗೆ ಬೊಗಸೆ ಗಾತ್ರದ ಬಿಳಿ ಗುಲಾಬಿ ರಾಣಿ ಮೆರೆಯುತ್ತಿದ್ದರೆ, ಇನ್ನೊಂದೆಡೆ ಎರಡು ಬೊಗಸೆ ಗಾತ್ರದ ಕಿತ್ತಳೆ ಬಣ್ಣದ ಗೆಳತಿ ತನ್ನ ಜೊತೆಗಾತಿಯರೊಡನೆ ನಕ್ಕು ನಲಿಯುತ್ತಿದ್ದಳು. ಹಳದಿ ಬಣ್ಣದ ಗುಂಪು ನಮ್ಮ ಬಳಿ ಬನ್ನಿರೆಂದು ಕರೆಯುವುದು ಕೇಳಿಸಿತೆಂದು ಹೋದರೆ, ಕೆಂಪು ಕನ್ನೆಯು ಸಿಟ್ಟಿನಿಂದ ಕೆನ್ನೆಯೂದಿಸಿ ಅವಳ ಸ್ನೇಹಿತೆಯೊರೊಡನೆ, ಅವಳ ಬಳಿ ನಾವು ಬರಲಿಲ್ಲವೆಂದು ನಮ್ಮನ್ನು ದೂರಿದಳು. ವಿಶೇಷವಾದ ನೇರಳೆ ಬಣ್ಣದ ಮುದ್ದು ಮೊಗದ ಪುಟಾಣಿಯು ಘಮಘಮಿಸುತ್ತ ತನ್ನ ವಿಶೇಷ ಸುವಾಸನೆಯ ಕಿರೀಟವನ್ನು ಧರಿಸಿದ್ದಳು..ಇವಳು ತೋಟದ ನಂಬರ್ ವನ್ ಎಂದೂ ಪ್ರಖ್ಯಾತಿ!.  ಕೆಲವು ಹೂಗಳ ಪಕಳೆಗಳಲ್ಲಿ ಎರಡೆರಡು ಬಣ್ಣಗಳನ್ನು ಹಚ್ಚಿತ್ತು.. ಕಣ್ಣಿಗೆ ಕಾಣದ ಕುಂಚ! ನನಗೋ ಯಾವುದನ್ನು ನೋಡುವುದೆಂದು ತಿಳಿಯದೆ ದಿಗ್ಮೂಢಳಾದೆ! ಪ್ರಪಂಚವನ್ನೇ ಮರೆತ ಪುಟ್ಟ ಮಗುವಿನಂತಾಗಿತ್ತು ಮನಸ್ಸು. ಗಿಡಗಳ ಪಾತಿಯ ಪಕ್ಕ ಬಿದ್ದ ರಾಶಿ ರಾಶಿ ಎಸಳುಗಳು ಮರುದಿನ ಬರುವ ತಮ್ಮ ಗೆಳತಿಯರನ್ನು ಕಾಯುತ್ತಾ ಮಲಗಿದ್ದವು…ತಮ್ಮದೇ ಮೆತ್ತನೆಯ ಹಾಸಿಗೆ ಮೇಲೆ! ಖಾಲಿ ಜಾಗಗಳಲ್ಲಿ ಸೊಗಸಾದ ಹಸಿರು ಹುಲ್ಲಿನ ಲಾನ್ ಕಂಗೊಳಿಸುತ್ತಿತ್ತು.

ಹೂದೋಟದ ಮಧ್ಯದಲ್ಲಿರುವ ವಿಶಾಲವಾದ ಸುಂದರ ಕಾರಂಜಿಯು ಆ ಸುಂದರ ಸಂಜೆಯ ಸೊಬಗಿಗೆ  ಮುಕುಟವಿಟ್ಟಂತಿದೆ. ಅಲ್ಲಿರುವ ಯಾವುದೇ ಹೂವನ್ನೂ ಸ್ಪರ್ಶಿಸುವಂತಿಲ್ಲ, ಆದರೆ ಆಘ್ರಾಣಿಸಿ ಆಸ್ವಾದಿಸಬಹುದು. ಇಲ್ಲಿರುವ ಪ್ರತಿಯೊಂದು ಗುಲಾಬಿ ತಳಿ ಬಗ್ಗೆಯೂ ಗಿಡದ ಪಕ್ಕದಲ್ಲಿ, ಅದರ ಹೆಸರು, ಮೂಲ, ಇಸವಿ ಎಲ್ಲವನ್ನೂ ಸ್ಪಷ್ಟವಾಗಿ ನಮೂದಿಸಲಾಗಿದೆ. ಅಲ್ಲದೆ  ಹೊಸದಾದ ಹತ್ತಾರು ತಳಿಗಳಿಗೆ ಇನ್ನೂ ಹೆಸರು ಇರಿಸಿಲ್ಲ… ಅದಕ್ಕಾಗಿ ಹೆಸರು ಸೂಚಿಸುವಂತೆಯೂ ವಿನಂತಿ ಫಲಕವಿದೆ…ಅವುಗಳ ಪಕ್ಕದಲ್ಲಿ. ಹೂದೋಟದ ಸುತ್ತಲೂ ಇರುವ ಬೇಲಿ ಕಾಣದಂತೆ ಅದರ ಮೇಲೂ ಹಲವಾರು ಬಣ್ಣಗಳ  ಸುಂದರ ಗುಲಾಬಿ ಹೂಗಳ ಗೊಂಚಲು ತುಂಬಿ ತುಳುಕುತ್ತಿದ್ದವು.

ಇನ್ನೊಂದು ವಿಶೇಷವೆಂದರೆ, ಈ ಸಮಯದಲ್ಲಿ ಸಾವಿರಾರು ಮಂದಿ ಗುಲಾಬಿಯೊಡನೆ ಫೋಟೋ  ತೆಗೆಸಿಕೊಳ್ಳಲೆಂದೇ ಬರುವರು. ಮದುವೆಯಾದ ನವಜೋಡಿಗಳಿಗೂ ಇದು ಛಾಯಾಚಿತ್ರಗಳಿಗಾಗಿ ಇರುವ ನಾಕ. ಅಂತಹ ಹಲವಾರು ಜೋಡಿಗಳ ಹಿಂದೆ ಮುಂದೆ ಛಾಯಾಗ್ರಾಹಕರು ಕ್ಯಾಮೆರಾ ಹಿಡಿದು ಓಡಾಡುವುದು ಕಂಡುಬಂತು. ಅಲ್ಲೇ ಪಕ್ಕದಲ್ಲಿ, ಸ್ವಲ್ಪ ಎತ್ತರಕ್ಕೆ ರಚಿಸಿರುವ ವೇದಿಕೆಯಲ್ಲಿ ಕಾರ್ಯಕ್ರಮಗಳನ್ನು ನಡೆಸಲು ವರ್ಷ ಮೊದಲೇ ನೊಂದಾಯಿಸಲೂ ದಕ್ಕದಿರುವುದು ಇದರ ಪ್ರಸಿದ್ಧಿಗೆ ಸಾಕ್ಷಿ.  ಹೂದೋಟವು ಮುಚ್ಚುವ ಸಮಯವಾದರೂ ನನಗೆ ಹೊರಡುವ ಮನಸ್ಸೇ ಇಲ್ಲ.. ಮಗಳು ಹೇಳಿದ್ದು ನಿಜವಾಗಿತ್ತು! ಮನಸ್ಸಿಲ್ಲದ ಮನಸ್ಸಲ್ಲಿ ಹೊರಬಂದಾಗ ಅನ್ನಿಸಿದ್ದು.. ಜೀವಮಾನದಲ್ಲಿ ಮರೆಯಲಾಗದ ಸುಂದರ ಘಳಿಗೆಗಳು ಅದಾಗಿದ್ದವು…ಇಂದಿಗೂ.. ಈಗಲೂ ಅದನ್ನು ನೆನೆದರೆ ಬೇರೇನೂ ನೆನಪಾಗುವುದಿಲ್ಲ. ಇಂತಹ ದಿವ್ಯ ಅನುಭೂತಿಗೆ ಅವಕಾಶ ಕಲ್ಪಿಸಿದ ಮಕ್ಕಳಿಗೆ ಮಮತೆಯಿಂದ ಕೃತಜ್ಞತೆಗಳು !!

 ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ : http://surahonne.com/?p=34966

ಮುಂದುವರಿಯುವುದು….

-ಶಂಕರಿ ಶರ್ಮ, ಪುತ್ತೂರು,

12 Responses

  1. ನಯನ ಬಜಕೂಡ್ಲು says:

    Very nice

  2. ಪ್ರವಾಸ ಕಥನ ಅನುಭವದ ಲೇಪನದೊಂದಿಗೆ ಸೊಗಸಾಗಿ ಸಾಗುತ್ತಿದೆ..ಧನ್ಯವಾದಗಳು ಮೇಡಂ

    • . ಶಂಕರಿ ಶರ್ಮ says:

      ಪ್ರೀತಿಯ ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು.. ನಾಗರತ್ನ ಮೇಡಂ.

  3. Hema says:

    ಪ್ರವಾಸ ಕಥನವು ಗುಲಾಬಿಯ ಸೊಬಗಿನಂತೆ ನವಿರಾಗಿ ಮೂಡಿ ಬರುತ್ತಿದೆ.

    • . ಶಂಕರಿ ಶರ್ಮ says:

      ಬರಹವನ್ನು ಬಹಳ ಚಂದಕ್ಕೆ ಪ್ರಕಟಿಸಿ, ಮೆಚ್ಚಿ ಪ್ರೋತ್ಸಾಹಿಸುವ ಹೇಮಮಾಲಾ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.

  4. ASHA nooji says:

    ಗುಲಾಬಿಯೊಟ್ಟಿಂಗೆ ನಮ್ಮ ಶಂಕರಿ ಅಕ್ಕನೂ ನಿಂದ ಫೋಟೋ ಹಾಂಗೆ ಸುಂದರ ಇದ್ದು ಆತಾ ……

    • . ಶಂಕರಿ ಶರ್ಮ says:

      ಪ್ರೀತಿಯ ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು.. ಆಶಾ.

  5. Savithri bhat says:

    ಅಹಾ..ಗುಲಾಬಿಯ ಕಂಪಿನ ಜೊತೆ ಲೇಖನವೂ ಸೊಗಸಾಗಿ ಮೂಡಿ ಬಂದಿದೆ

    • . ಶಂಕರಿ ಶರ್ಮ says:

      ಮೆಚ್ಚುಗೆಯ ನುಡಿಗಳಿಗೆ ಕೃತಜ್ಞತೆಗಳು ಅಕ್ಕಾ.

  6. Padma Anand says:

    ಯುಗಾದಿಗೆ ಮುಂಚೆಯೇ ಅಮೆರಿಕದಲ್ಲಿ ವಸಂತನಾಗಮನದ ಸಂಭ್ರಮದ ವರ್ಣನೆ ಗುಲಾಬಿಗಳ ಹೂಮಳೆ ಸುರಿದಂತಾಯಿತು.

    • . ಶಂಕರಿ ಶರ್ಮ says:

      ಮೆಚ್ಚುಗೆಯ ಪ್ರತಿಕ್ರಿಯೆಗೆ ಹೃತ್ಪೂರ್ವಕ ನಮನಗಳು ಪದ್ಮಾ ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: