ಸತ್ಯ ಕಾಣೆಯಾಗಿದೆ..
ಬಣ್ಣವಿಲ್ಲ ಬಲಿಷ್ಠ ಮೈಕಟ್ಟು
ಅನೂಹ್ಯ ಗಮ್ಯದಷ್ಟು ಎತ್ತರ
ವಯಸ್ಸಿಗಿಲ್ಲ ಯಾವುದೇ ಚೌಕಟ್ಟು
ಸ್ಥಳ ದೈವತ್ವಕ್ಕೆ ತುಂಬಾ ಹತ್ತಿರವಾಗಿರುವ
ಸತ್ಯ ಕಾಣೆಯಾಗಿದೆ..
ಸಿಹಿಯಾದ ಸುಳ್ಳಿನ ನರ್ತನದ ಆರ್ಭಟ
ಕಟುಸತ್ಯದ ತಲೆಮೇಲೆ!
ಕಹಿಯೆಂದು ದೂಡಿಸಿಕೊಂಡ ಮುಗ್ಧಸತ್ಯ
ಸುಳ್ಳಿನ ಸಂಭ್ರಮದ ಸುಳಿಯಲಿ ಸಿಲುಕಬಾರದೆಂದು
ನಿಲುಕಲಾರದಾಯಿತೇ?
ಈರ್ಷ್ಯೆ ಕುಣಿಯುವವನ ಕಣ್ಣಿಂದ ಜಾರಿ
ಮುಖವಾಡದ ಚಹರೆಯೊಳಗಿಂದ ಉದುರಿ
ಕಪಟ ನಗೆಯೊಂದರಿಂದ ನೆಗೆದು
ಅನೈತಿಕತೆಯ ಹಾದಿಯಿಂದ ದೂರ ದೂರ ಓಡಿ
ಸತ್ಯ ಕಾಣೆಯಾಗಿದೆ..
ಮೋಸದಾಟದಾ ಮೈದಾನದಲಿ
ಬಣ್ಣ ಬಣ್ಣದಾ ಮಾತಿನ ಮರುಳಿನಲಿ
ದ್ರೋಹ ವಂಚನೆಯ ಕೋಟೆಯಲಿ
ಸ್ವಾರ್ಥದಾ ಪರಮಾವಧಿಯಲಿ
ದಿಟದ ಹುಡುಕಾಟ ವ್ಯರ್ಥವಲ್ಲವೇ?
ಮಿಥ್ಯೆಯ ಕಂದುಪರದೆಯ ಮಂಪರುಗಣ್ಣಿಗೆ
ಬೇಕಂತೇ ಕಾಣಿಸಿಕೊಳ್ಳಬಾರದೆಂದು
ಸುರಕ್ಷಿತ ಜಾಗದಲಿ ಅಡಗಿ ಕೂತಿದೆಯೇನೋ,
ಕಾಲಸರಿದಂತೆ ಕುಣಿಕುಣಿದು ದಣಿದು
ಕುಬ್ಜವಾಗುವ ಸುಳ್ಳಿನ ಮುಖವಾಡ
ಕಳಕಳಚಿ ಬೀಳಲು ತಂತಾನೇ ತಾನು
ವಾಯದೆ ಮುಗಿಯುವ ಮುನ್ನ
ನೊಂದವರ ಸಂತೈಸಲು
ಹೊರಬಂದು ಹೊಳೆವೆನೆಂದದಕೆ
ಗೊತ್ತಿದೆಯೇನೋ.
-ಆಶಾ ಹೆಗಡೆ
ಚೆಂದದ ಕವನ. ಧನ್ಯವಾದಗಳು
ಧನ್ಯವಾದಗಳು ಸರ್
Beautiful
ಧನ್ಯವಾದಗಳು ಮೇಡಂ
ಚಿಂತನೆಗೆ ಹಚ್ಚುವ ಕವನ ….ಚೆನ್ನಾಗಿ ಮೂಡಿಬಂದಿದೆ ಸೋದರಿ
ತುಂಬಾ ಧನ್ಯವಾದಗಳು ಮೇಡಂ
ಅರ್ಥಪೂರ್ಣ ಕವನ..ಚೆನ್ನಾಗಿದೆ.
ಧನ್ಯವಾದಗಳು ಮೇಡಂ
ಚಂದದ ಕವನ. ವಾಯಿದೆ ಎಂದು ಮುಗಿಯುವುದೋ, ಮಿಥ್ಯೆಯ ರುದ್ರ ನರ್ತನ ಬೇಗ ನಿಂತು, ಸತ್ಯದ ಅನಾವರಣ ಹತ್ತಿರವಾಗಲಿ.
ಕವನ ಮನವನ್ನು ಚಿಂಚನೆಗೆ ಹಚ್ಚಿತು.
ಹೌದು ಮೇಡಂ..ಸತ್ಯವಂತರಿಗೇ ಜಯಸಿಗಲಿ..ಧನ್ಯವಾದಗಳು..
ಸುಳ್ಳಿನ ಆರ್ಭಟಕ್ಕೆ ಸತ್ಯ ಕಾಣೆಯಾದ ಬಗ್ಗೆ ಮೂಡಿಬಂದ ಭಾವಪೂರ್ಣ ಕವನ.
ಧನ್ಯವಾದಗಳು ಮೇಡಮ್
ಅಳಿವಿಲ್ಲ ಸತ್ಯಕೆ ಉಳಿವಿಲ್ಲ ಮಿಥ್ಯಕೆ
ಅಳಿವಿಲ್ಲ ಸತ್ಯಕೆ ಉಳಿವಿಲ್ಲ ಮಿಥ್ಯಕೆ
ಸೂರ್ಯ ಬಾಂದಳದಲ್ಲಿ ಬೆಳಗುವವರೆಗು/
ಅಳಿವಿಲ್ಲ ಸತ್ಯಕೆ ಉಳಿವಿಲ್ಲ ಮಿಥ್ಯಕೆ/
ಚಂದ್ರನು ಬೆಳದಿಂಗಳಲ್ಲಿ ಮಿಂದಿರುವವರೆಗು/
ಸತ್ಯಕೆ ಸಾವಿಲ್ಲ ಚಿರಂಜೀವಿಯು ಪ್ರಪಂಚದಲ್ಲಿ /
ಯಾವ ಶಕ್ತಿಗೂ ಮಣಿಯದು ಶಾಶ್ವತವು ಭುವಿಯಲ್ಲಿ/
ಸತ್ಯಕೆ ಅಂತ್ಯವಿಲ್ಲ ಅಮರವು ಭೂಲೋಕದಲ್ಲಿ/
ಯಾವ ಯುಕ್ತಿಗೂ ಸೋಲದು ಅನಂತವು ಪೃಥ್ವಿಯಲ್ಲಿ/
ಬೇದಭಾವವಿಲ್ಲ ಸತ್ಯಕೆ ಕಹಿಯಾಗಲಿ ಸಿಹಿಯಾಗಲಿ
ಬಡವ ಬಲ್ಲಿದರೆಂಬ ತಾರತಮ್ಯವಿಲ್ಲ ಅದರಾತ್ಮದಲ್ಲಿ
ವೇಷ ಬೂಷಣವಿಲ್ಲದೆ ಜಯಿಸುವುದು ಅಮರತ್ವದಲ್ಲಿ /
ಸುಳ್ಳಿನ ಅರೆಕ್ಷಣ ಆರ್ಭಟದಲ್ಲಿ ನಶಿಸದು ದೈವತ್ವದಲ್ಲಿ
`
Very nice