ಕೊಟ್ಟು ಹೋಗಬೇಕು
ಬಲಿಯುತ್ತಿದೆ
ಕೊಟ್ಟು ಹೋಗೆನ್ನುವ ಭಾವ
ಎಲ್ಲ ಬಿಟ್ಟು ಹೊರಡುವ ಮುನ್ನ
ಆಲಯದ ಚೌಕಟ್ಟಿನ ಬದುಕಲಿ ಬಂದವರಿಗೆ
ನನ್ನೆದೆಲ್ಲವ ಕೊಟ್ಟ ತೃಪ್ತಿಯೊಂದಿಗೆ
ಉಳಿದಿದ್ದಷ್ಟೆ ನನಗಾಗಿ
ಬದುಕಿನ ಇಳಿಹೊತ್ತಲಿ ನೊಗವಿಳಿಸಿದ ನೆಮ್ಮದಿ
ಏಗಿದ್ದಾಗಿದೆ ಆಲಯದ
ಬದುಕಿನ ಬವಣೆಗಳೊಂದಿಗೆ
ಆಲಯದೊಳಗಿನ ಬದುಕು ಸಂಕೀರ್ಣ
ಪ್ರತಿಫಲಾಪೇಕ್ಷೆಯ ಸ್ವಾರ್ಥದ ಲೆಕ್ಕ
ಮಮಕಾರಗಳ ಬಂಧನದ ಸಿಕ್ಕುಗಳ
ಒಳತೋಟಿಯ ತೀರದ ತೊಳಲಾಟ
ಹಿಟ್ಟಿಲ್ಲದಾಗ ಹೊಟ್ಟೆಗೆ
ಮುಚ್ಚಬೇಕು ಕಿಟಕಿ ಬಾಗಿಲು
ಮಲ್ಲಿಗೆಯಿದ್ದಾಗ ಜುಟ್ಟಿಗೆ
ಹಾರುಹೊಡೆಯ ಬೇಕು ಬಾಗಿಲು
ರಟ್ಟು ಮಾಡದೆ ಗುಟ್ಟಿನ ಮಾತುಗಳ
ಕಾಪಿಡಬೇಕು ಉಸಿರು ತೊರೆವ ತನಕ
ಜ್ವಾಲಾಮುಖಿಯೊಳಗಿನ ಲಾವಾರಸದಂತೆ
ಕೂಪ ಮಂಡೂಕದ ಸೀಮಿತ ಜಗತ್ತು
ಆಲಯದೊಳಗಿನ ಬದುಕು
ಬಂಧನಗಳ ಕಳಚಿ ಹೊರಡುವುದು
ಆಲಯದಿಂದ ಬಯಲಿನತ್ತ ಹೊರಟ
ಅಕ್ಕನಷ್ಟು ಸುಲಭ ಸಾಧ್ಯವಲ್ಲ
–ಎಂ. ಆರ್.ಅನಸೂಯ.
ಸೊಗಸಾದ ಕವನ. ಅರ್ಥಪೂರ್ಣವಾಗಿದೆ
ಅರ್ಥಪೂರ್ಣ ವಾದ ಕವನ ಆದರೆ ಅದನ್ನು ಅರ್ಥೈಸಿಕೊಳ್ಳುವವರೆಷ್ಟು ಮಂದಿ…
ಧನ್ಯವಾದಗಳು ಮೇಡಂ
ವಾಸ್ತವವನ್ನು ಚಿತ್ರಿಸುವ ಚೆಂದದ ಕವನ.
ಯೋಚನೆ ಹೀಗೇ ಇರಬೇಕು
ಜೀವನ ತತ್ವಗಳ ಸರಳೀಕರಣ ಹಾಸುಹೊಕ್ಕಾಗಿರುವ ಸುಂದರ ಕವಿತೆ. ಅಭಿನಂದನೆಗಳು ತಮಗೆ.
ಜೀವನದ ಸರಳ ಸುಂದರ ಸೂತ್ರವನ್ನು ತಮ್ಮಲ್ಲಿ ಅಳವಡಿಸಿಕೊಳ್ಳಲು ಕರೆನೀಡಿದ ಸುಂದರ ಕವನ.
ಜನಿಸಿದ ಮರುಕ್ಷಣವೆ ವಿಧಿಯಿಲ್ಲದೆ ಹೊರುವೆವು ನೊಗವ/
ಬಾಳ ಬಂಧನಗಳ ಬವಣೆಯಲ್ಲಿ ಹೆಣೆಯುವೆವು ಜೀವನವ/
ಜನಿಸಿದ ಮರುಕ್ಷಣವೆ ವಿಧಿಯಿಲ್ಲದೆ ಹೊರುವೆವು ನೊಗವ/
ಭಾವಗಳ ಕಡಲಲ್ಲಿ ತೆವಳುವೆವು ತಲುಪಲು ದೂರ ತೀರವ/
ಪರಿಸರದ ಪ್ರಭಾವದಲ್ಲಿ ಸ್ವರೂಪಿಸುವೆವು ಬದುಕಿನ ಸಾಕಾರವ /
ಧರ್ಮ ಕರ್ಮಗಳ ಸಾರಸತ್ವದಲ್ಲಿ ನಿರೂಪಿಸುವೆವು ಬಾಳಪಥವ/
ನ್ಯಾಯ ನೀತಿಯೆಂಬ ಕಟ್ಟು ನಿಟ್ಟುಗಳಲ್ಲಿ ನಿರ್ಮಿಸುವೆವು ಭವಿಷ್ಯವ/
ಅರಿಯದೆ ಹರಸಿರುವ ಆಯುಷ್ಯದ ಅವಧಿಯ ಕಟ್ಟುವೆವು ಆಲಯವ/
ಬದುಕಿನ ಮೌಲ್ಯ ಪರಿಶೀಲಿಸುವ ಸಮಯ ಬಾಗ್ಯ ಸುಯೋಗವು
ಪೂರ್ವಜನುಮದ ಪ್ರತಿಫಲದಲ್ಲಿ ದೊರಕುವುದು ಆ ಸೌಬಾಗ್ಯವು/
ಬಂಧನಗಳ ಕಳಚಲು ಬದುಕಿನಲ್ಲಿ ಬೇಕು ಧಾರ್ಮಿಕತೆಯ ನೆರವು/
ಬಯಲಿನ ಕಡಗೆ ತೃಪ್ತಿಯಲ್ಲಿ ಹೋಗುವುದು ದೈವದಾಶೀರ್ವಾದವು