ಹೆಕ್ಕಿದ ಕವಿತೆಗಳು
1.
ಎಳೆ ತಾಯ ಸೊಂಟಕ್ಕಂಟಿದ
ಮುತ್ತು; ಮತ್ತಿನಲಿ ತೂಕಡಿಸುತ್ತಾ ಕಳೆದುಕೊಂಡಿತು ಅಮೂಲ್ಯ ಹೊತ್ತು..
ದೊರಕದೆ ನ್ಯಾಯ, ಒಡೆಯಿತು
ಅಯ್ಯೋ ಒಂದೊಳ್ಳೆ ನತ್ತು..
ಯಾವ ಶಾಪವೋ ಇದು; ಹೀಗೆಲ್ಲಾ
ಆಗುವುದು ಈ ನೆಲಕ್ಕಂಟಿದ ಘೋರ
ಆಪತ್ತು..
2.
ಹಾದಿಬದಿ ಒಣಮರದ
ಕೊಂಬೆಗೊಂದು ಇಳಿಬಿದ್ದ
ಜೋಳಿಗೆ. ಒಳಗೆ ಮಲಗಿದೆ
ಬಡಕಲು ನಡುಹೊತ್ತ ಅಮೃತ
ಕಳಸದಮ್ಮನ ಪಾಲಿನ ಹೋಳಿಗೆ.
3.
ಮೂರು ಕಲ್ಲು ನಾಕಾರು
ತುಂಡು ಸೌದೆ. ಉರಿವ ಬೆಂಕಿ;
ಏನು ಘಮಲು! ಬೀದಿಗೆಲ್ಲಾ
ಹಬ್ಬಿ ಹರಡಿದೆ.
4.
ಅವರು,
ಆಗ ತಂದು ಆಗ ಮಾಡಿ
ಆಗ ತಿಂದರೂ ಬಿಸಿಯೂಟ;
ಇವರು,
ತಂಪು ಕಾರು, ಏಸಿ ಚೇರು
ಜೋರು ಕಾರುಬಾರು;
ಉಣ್ಣುವರು ಐದಾರಂಕಿ ಸಂಬಳ
ಪಡೆದೂ ತಂಗಳೂಟ..
5.
ಅವರು,
ಹತ್ತು ಇಪ್ಪತ್ತು ಮೂವತ್ತು
ಸಾವಿರ ಬಿರುಸು ಹೆಜ್ಜೆ ಇಡುತ್ತಾ
ಕಂಕಳು ಬೆನ್ನು ಮುಖದ ಮೇಲೆ
ಮೂಡಿದ ಬೆವರ ಹನಿ ಲೆಕ್ಕ
ಹಾಕುತ್ತಾ, ನೆಗೆದು ಕುಪ್ಪಳಿಸುವ
ಬೊಜ್ಜನು ಕರಗಿಸಲು ಮಾಡುತಾ
ವಿಧವಿಧ ಸರ್ಕಸ್ಸು ನಿತ್ಯ…
ಇವರು,
ತಲೆ ಮೇಲೆ ಗಟ್ಟಿ ಕಾಂಕ್ರೀಟಿನ
ಘಟ್ಟಿ ಹೊತ್ತು, ಬೆವರ ನದಿ
ಹರಿಸುತಾರೆ. ಬೊಜ್ಜು- ಗಿಜ್ಜು,
ಕೊಬ್ಬು- ಗಿಬ್ಬು ಹತ್ತಿರಕೂ
ಸುಳಿಯದು ಎಂಬುದು ಮಾತ್ರ
ಸಾರ್ವಕಾಲಿಕ ಸತ್ಯ…
– ವಸುಂಧರಾ ಕದಲೂರು
ಅರ್ಥಪೂರ್ಣ ವಾದ ಕವತೆಗಳು ಆಭಿನಂದನೆಗಳು.ಮೇಡಂ
Thank you
ಬ್ಯೂಟಿಫುಲ್
ಸೊಗಸಾದ ಅರ್ಥಪೂರ್ಣ ಕವನ
ಹನಿಗವನಗಳ ಹನಿ ಹನಿಗಳಲ್ಲಿ ಹನಿಗೂಡಿಸಿರುವಿರಿ ನಿಜಾಂಶವ/
ಹನಿಗವನಗಳ ಹನಿ ಹನಿಗಳಲ್ಲಿ ಹನಿಗೂಡಿಸಿರುವಿರಿ ನಿಜಾಂಶವ/
ಬದುಕಿನ ಅನುದಿನದ ಆಗುಹೋಗುಗಳ ಸಂಕ್ಷಿಪ್ತದ ಸಾರಂಶವ/
ಹನಿಗವನಗಳ ಹನಿ ಹನಿಗಳಲ್ಲಿ ಹನಿಗೂಡಿಸಿರುವಿರಿ ನಿಜಾಂಶವ/
ಜೀವನ ಜಂಜಾಟದ ಏಳಿರಿತಗಳ ಸುಖದುಃಖಗಳ ತಾತ್ಪರ್ಯವ/
ಪದಗಳ ವಿಶೇಷ ಜೋಡಣೆಯಲ್ಲಿ ಪ್ರಕಟಿಸಿರುವಿರಿ ಭಾವನೆಗಳ/
ಸ್ಥೂಲಚಿತ್ರದಲ್ಲಿ ವಿವರಿಸಿರುವಿರಿ ಬಾಳಿನ ಕಹಿಸಿಹಿಯ ರೂಪಗಳ/
ಗ್ರಹಿಸಿರುವಿರಿ ಬಡವ ಬಲ್ಲಿದರ ವಿಭಿನ್ನತೆಯಲಿ ಬಾಳುವ ಧೃಶ್ಯಗಳ/
ಬರಹ ಶೈಲಿಯಲ್ಲಿ ಸ್ಪೂರ್ತಿಸಿರುವಿರಿ ಚಿಂತನದ ಮೂಲಾಧಾರಗಳ/
ಕಣ್ಣಿಗೆ ಕಂಡರೂ ಕಾಣದಂತೆ ಮುನ್ನೆಡೆಯುವರು ಔದಾಸೀನ್ಯದಲಿ /
ಸ್ವಾರ್ಥ ನಿಸ್ವಾರ್ಥದ ಗುಣಗಳು ನಿರ್ಧರಿಸುವುದು ನೆಡೆವಳಿಕೆಯನು /
ಬರವಣಿಗೆಯುಲ್ಲಿ ಜ್ಞಾಪಿಸಿರುವಿರಿ ಬಾಳಿ ಬದುಕಲು ವಾಸ್ತವತೆಯಲಿ
ಚಿಂತಿಸುವ ಭಾವನೆಗಳು ಹೊಮ್ಮುವುದು ಓದಲು ಹನಿಗವನಗಳನು/