ಕಾದಂಬರಿ: ನೆರಳು…ಕಿರಣ 7
–ಹಿಂದಿನ ಸಂಚಿಕೆಯಿಂದ ಮುಂದುವರಿದುದು…..
ತಂದೆಯ ಮಾತನ್ನು ಕೇಳಿದ ಭಾಗ್ಯ ಹೂಂ ಬೇಡವೆಂದು ಹೇಳಿದರೆ ಇದನ್ನು ನಿಲ್ಲಿಸಿಬಿಡುತ್ತಾರಾ, ತಂಗಿ ಭಾವನಾ ಹೇಳಿದಂತೆ ಎಂದಾದರೂ ಮದುವೆಯಾಗಲೇಬೇಕಲ್ಲ. ಇಂದಾದರೇನು, ಮುಂದಾದರೇನು. ಅಲ್ಲದೆ ನನ್ನ ನಂತರದವರದ್ದೆಲ್ಲ ಸುಗಮವಾಗಿ ಸಾಗಲು ನಾನು ನಾಂದಿ ಹಾಡಲೇಬೇಕು. ಎಂದು ಮನದಲ್ಲೇ ಅಂದುಕೊಂಡು ಬಹಿರಂಗವಾಗಿ ಅವರುಗಳು ಒಪ್ಪಿ ”ನಿಮಗೂ ಸರಿಬಂದರೆ ನನ್ನದೇನೂ ಅಭ್ಯಂತರವಿಲ್ಲಪ್ಪಾ” ಎಂದಳು. ಮುಂದೆ ಹೆಚ್ಚಿನ ಮಾತುಕತೆಗಳೇನೂ ನಡೆಯದೆ ಊಟದ ಪ್ರಕ್ರಿಯೆ ಮುಂದುವರೆದು ಮುಗಿಯಿತು. ಅವರೆಲ್ಲ ಎದ್ದು ತಮ್ಮತಮ್ಮ ತಟ್ಟೆಗಳನ್ನೆತ್ತಿಕೊಂಡು ಹಿತ್ತಲಿಗೆ ಹೋದರು. ಅಲ್ಲಿ ಕೈತೊಳೆದು ಅವರ ಕೊಠಡಿ ಸೇರಿಕೊಂಡರು. ಇತ್ತ ಭಾಗ್ಯ, ಭಾವನಾರಲ್ಲಿ ಒಬ್ಬಳು ಊಟಮಾಡಿದ ಸ್ಥಳವನ್ನು ಗೋಮಯಮಾಡಿ ಶುಚಿಗೊಳಿಸಿದರೆ ಇನ್ನೊಬ್ಬಳು ಅಮ್ಮನಿಗೆ ಊಟ ಬಡಿಸಿದಳು. ಆ ನಂತರ ಲಕ್ಷ್ಮಿ ಬೆಳಗಿನ ತಯಾರಿಗೆ ಏನುಬೇಕೋ ಅವೆಲ್ಲವನ್ನೂ ಅಣಿಗೊಳಿಸಿ ಮಿಕ್ಕ ಕೆಲಸಗಳನ್ನು ದೊಡ್ಡ ಮಕ್ಕಳಿಬ್ಬರಿಗೆ ವಹಿಸಿ ಹೊರನಡೆದಳು. ಭಟ್ಟರು ಮಡದಿಗಾಗಿಯೇ ಕಾಯುತ್ತಾ ಅಲ್ಲೇ ಹಾಲಿನಲ್ಲಿ ಅಡ್ಡಾಡುತ್ತಿದ್ದರು. ಅವಳು ಬಂದಕೂಡಲೇ ಹೊರಗಡೆ ಬಾಗಿಲನ್ನು ಭದ್ರಪಡಿಸಿದರು. ಮಕ್ಕಳ ರೂಮಿಗೂ ತಲೆಹಾಕಿ ”ಇವತ್ತು ಸಂಜೆ ಭಜನೆ ಮಾಡಲಾಗಲಿಲ್ಲ. ಮಕ್ಕಳೇ ಮನಸ್ಸಿನಲ್ಲೇ ಹೇಳಿಕೊಂಡು ದೇವರಿಗೆ ನಮಿಸಿ ಮಲಗಿಕೊಳ್ಳಿ” ಎಂದು ಹೇಳಿದರು. ತಾವು ಮಲಗುವ ಕೋಣೆಗೆ ಹೋದರು.
ಭಟ್ಟರು ಬರುವಷ್ಟರಲ್ಲಿ ಹಾಸಿಗೆಹಾಸಿ ಸಿದ್ಧಮಾಡಿ ಕರ್ನಾಟಕ ಭಾರತಕಥಾಮಂಜರಿ ಪುಸ್ತಕವನ್ನು ಕೈಗೆತ್ತಿಕೊಂಡು ನಾಂದಿ ಪದ್ಯವನ್ನು ಮೆಲುದನಿಯಲ್ಲಿ ಹೇಳಿಕೊಳ್ಳುತ್ತಿದ್ದಳು ಲಕ್ಷ್ಮೀ. ರೂಮಿನೊಳಕ್ಕೆ ಬಂದ ಭಟ್ಟರು ಹೆಂಡತಿಯ ಕಡೆಗೆ ನೋಡಿ ಪ್ರತಿದಿನದಂತೆ ಹನುಮಾನ್ ಚಾಲೀಸ ಪುಸ್ತಕ ತೆಗೆದುಕೊಂಡು ಅವಳಿಗಿಂತ ಸ್ವಲ್ಪ ದೂರದಲ್ಲಿ ಕುಳಿತು ಮನದಲ್ಲೇ ಪಠಿಸಿ ಮುಗಿದಮೇಲೆ ಪುಸ್ತಕವನ್ನು ಕಣ್ಣಿಗೊತ್ತಿಕೊಂಡು ಭಕ್ತಿಯಿಂದ ಅದನ್ನು ಕಪಾಟಿನಲ್ಲಿರಿಸಿದರು. ಹತ್ತು ನಿಮಿಷ ಧ್ಯಾನಮಾಡಿ ಮುಗಿಸಿದರು. ಕುಮಾರವ್ಯಾಸ ಭಾರತದ ಪದ್ಯಗಳನ್ನು ತದೇಕಚಿತ್ತದಿಂದ ಓದುತ್ತಿದ್ದ ಹೆಂಡತಿಯತ್ತ ನೋಡಿದರು. ಹಾಗೇ ಮುಖದಮೇಲೆ ನಗು ತುಳುಕಿಸುತ್ತ ”ನಾನು ನಿನ್ನನ್ನು ಮದುವೆಯಾದಾಗಿನಿಂದ ನೋಡುತ್ತಿದ್ದೇನೆ. ಈ ಪುಸ್ತಕವನ್ನು ಅದೆಷ್ಟು ಸಾರಿ ಓದಿದ್ದೀಯೆ. ಮತ್ತೆಮತ್ತೆ ಓದಲು ಬೇಸರವಾಗುವುದಿಲ್ಲವೇ? ಅದರಲ್ಲಿ ಅಂಥದ್ದೇನಿದೆ? ನನಗೂ ಆ ಕಥೆಯೆಲ್ಲ ಗೊತ್ತು. ರಾಜ್ಯಕ್ಕೋಸ್ಕರ ದಾಯಾದಿಗಳು ಹೊಡೆದಾಡುವುದು. ಇಬ್ಬರಲ್ಲಿ ಧರ್ಮದಿಂದ ನಡೆಯುವವರ ಪರವಾಗಿ ಶ್ರೀಕೃಷ್ಣ ಪರಮಾತ್ಮನ ಕೃಪೆಯಿಂದ ಜಯವಾಗಿ ರಾಜ್ಯ ದಕ್ಕಿಸಿಕೊಳ್ಳುವುದು. ಅದರಲ್ಲೇನಿದೆ ಅಂಥದ್ದು?” ಎಂದು ಕೇಳಿದರು.
ಗಂಡನ ಮಾತಿಗೆ ಲಕ್ಷ್ಮಿ ನಸುನಗುತ್ತ ”ಒಂದು ನಿಮಿಷ, ಫಲಶೃತಿ ಓದಿ ನಂತರ ನಾನೊಂದು ಪ್ರಶ್ನೆ ಕೇಳುತ್ತೇನೆ. ಆನಂತರ ನಿಮ್ಮ ಪ್ರಶ್ನೆಗೆ ಉತ್ತರಿಸುತ್ತೇನೆ” ಎಂದು ಓದಿ ಎತ್ತಿಟ್ಟು ”ಹಾ..ಈಗ ಮೊದಲು ನನ್ನ ಸರದಿ ಗಮನವಿಟ್ಟು ಕೇಳಿಸಿಕೊಳ್ಳಿ” ಎಂದಳು.
”ಅದೇನು ಪ್ರಶ್ನೆ ನನ್ನನ್ನು ಕೇಳು ಸತೀಮಣಿ” ಎಂದರು ಭಟ್ಟರು.
”ನೀವು ಹನುಮಾನ್ ಚಾಲೀಸ ಓದಿಯೇ ಮಲಗುವುದಲ್ಲಾ ಏಕೆ?” ಎಂದು ಕೇಳಿದಳು ಲಕ್ಷ್ಮಿ.
”ಅಯ್ಯೋ ಅಷ್ಟೇನಾ, ನಾನು ಚಿಕ್ಕವನಿದ್ದಾಗ ಎಲ್ಲದಕ್ಕೂ ಹೆದರುತ್ತಿದ್ದೆನಂತೆ. ರಾತ್ರಿ ಹೊತ್ತಿನಲ್ಲಿ ದೀಪ ಆರಿಸಲು ಬಿಡುತ್ತಿರಲಿಲ್ಲವಂತೆ. ಆಗೆಲ್ಲಾ ನಮ್ಮ ಮನೆಗಳಲ್ಲಿ ಲೈಟು ಹಾಕಿಸಿರಲಿಲ್ಲ. ಎಣ್ಣೆ ದೀಪಗಳಿದ್ದವು. ರಾತ್ರಿ ಒಮ್ಮೊಮ್ಮೆ ಹಾಸಿಗೆ ಒದ್ದೆಮಾಡಿಕೊಳ್ಳುವುದು ಹೀಗೆಲ್ಲ ಆಗುತ್ತಿತ್ತಂತೆ. ಆಗ ನಮ್ಮ ತಾತನವರು ನನ್ನನ್ನು ಗಾಳಿ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಪೂಜೆ ಮಾಡಿಸಿ ತಾಯಿತ ಕಟ್ಟಿಸಿಕೊಂಡು ಬಂದನಂತರ ಈ ಪುಸ್ತಕ ಹುಡುಕಿ ತೆಗೆದು ಅದನ್ನು ಓದಲು ಹೇಳಿಕೊಟ್ಟು ಅದರರ್ಥವನ್ನೂ ವಿವರಿಸಿದ್ದರು. ನಾನು ಭಯಭಕ್ತಿಯಿಂದ ಅದನ್ನು ರಾತ್ರಿ ಓದಿ ಮಲಗುತ್ತಿದ್ದೆ. ಇದರಿಂದ ರಾತ್ರಿ ಭಯಬೀಳುವುದು, ಹಾಸಿಗೆ ಒದ್ದೆ ಮಾಡಿಕೊಳ್ಳುವುದು ನಿಂತುಹೋಯಿತು. ಕ್ರಮೇಣ ಅದರ ಮೇಲೆ ನನಗೇ ಅರಿವಿಲ್ಲದಂತೆ ಮೋಹ ಬೆಳೆಯಿತು. ಒಂದು ದಿನ ಓದದಿದ್ದರೆ ಏನೋ ಕಳೆದುಕೊಂಡಂತೆ ಅನ್ನಿಸತೊಡಗಿತು. ಬುದ್ಧಿ ತಿಳಿದಮೇಲೆ ಆ ದೈವದ ಮೇಲಿನ ನಂಬಿಕೆ, ವಿಶ್ವಾಸ ಬೆಳೆದು ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ. ಆದರೆ ನೀನು ಓದುವುದು ಏತಕ್ಕಾಗಿ?” ಎಂದು ಕೇಳಿದರು ಭಟ್ಟರು.
”ನಾನು ಶಾಲೆಗೆ ಹೋಗಿ ಓದುವುದರ ಜೊತೆಯಲ್ಲಿಯೇ ಮನೆಗೆಲಸ, ಹಾಡು ಹಸೆ, ನೀತಿಯುತ ಜನಪದ ಕಥೆಗಳು, ಪುರಾಣಕಥೆಗಳನ್ನು ನನ್ನ ಅಜ್ಜಿಯು ಹೇಳಿಕೊಡುತ್ತಿದ್ದರು. ಆಗ ನನಗೆ ರಾಮಾಯಣ, ಮಹಾಭಾರತದಲ್ಲಿನ ಕಥೆಗಳು ಆನಂದ ಕೊಡುತ್ತಿದ್ದವು. ಅದರಲ್ಲೂ ಮಹಾಭಾರತ ನನ್ನ ಮನಸ್ಸಿನಾಳಕ್ಕೆ ಹೊಕ್ಕುಬಿಟ್ಟಿತು. ರಾಮಾಯಣದಲ್ಲಿ ಒಬ್ಬ ಅವತಾರಪುರುಷ ವ್ಯಕ್ತಿಯ ಸುತ್ತ ಸುತ್ತುವ ಕಥೆಯಾದರೆ, ಮಹಾಭಾರತದಲ್ಲಿ ಕಥೆಗಳ ಕಣಜವೇ ಇದೆ. ಅಲ್ಲಿ ಬರುವ ಪಾತ್ರಗಳು ಈಗಲೂ ಕಣ್ಮುಂದೆ ಓಡಾಡುತ್ತಿವೆಯೇನೋ ಎನ್ನುವಷ್ಟು ಜೀವಂತಿಕೆ ಇದೆ. ಸರ್ವಕಾಲಿಕ ಸತ್ಯವಾದದ್ದು ಈ ಕಥೆ. ಎಷ್ಟು ಸಲ ಓದಿದರೂ ಬೇಸರವೇ ಆಗುವುದಿಲ್ಲ. ನಿಮಗೆ ಇನ್ನೊಂದು ವಿಷಯ ಗೊತ್ತಾ? ಇದನ್ನು ‘ಪಂಚಮವೇದ’ ಎಂದೂ ಕರೆಯುತ್ತಾರೆ. ‘ಅಗೆದಷ್ಟೂ ಅರ್ಥ, ಮೊಗೆದಷ್ಟೂ ಜಲ’ ಎನ್ನುವಂತೆ. ಒಂದೊಂದು ಸಾರಿ ಓದಿದಾಗಲೂ ನಮ್ಮ ಮನಸ್ಸಿನಲ್ಲಿ ಹೊಸಹೊಸ ಆಲೋಚನೆಗಳು ಹೊಳೆಯುತ್ತವೆ. ತರ್ಕವಿತರ್ಕಕ್ಕೆ ಒಳಪಡುತ್ತವೆ, ಹಲವಾರು ಪಾತ್ರಗಳ ಸುತ್ತ ತಿರುಗುವ ಚಕ್ರದಂತೆ”.
”ಹೋಲ್ಡಾನ್, ಲಕ್ಷ್ಮೀ ಹೋಲ್ಡಾನ್, ಒಂದು ಸಣ್ಣ ಕುತೂಹಲದಿಂದ ನಾನು ಕೇಳಿದೆ. ನೀನು ಇಷ್ಟೊಂದು ವಿಸ್ತಾರವಾದ ವಿವರಣೆ ನೀಡಿದೆ. ಹಾಗೇ ಬಿಟ್ಟರೆ ಬೆಳಕು ಹರಿಯುವವರೆಗೂ ಲೆಕ್ಚರ್ ಮುಂದುವರೆಸುತ್ತೀಯಾ…ಹಾ..ನಿನ್ನಷ್ಟು ಬುದ್ಧಿವಂತ ನಾನಲ್ಲ. ಅದು ನನಗೂ ಗೊತ್ತು. ಆದರೆ ನೀನು ಇಷ್ಟೊಂದು ಮಗ್ಗುಲುಗಳಿಂದ ಆಲೋಚಿಸುವಷ್ಟು ಬುದ್ಧಿವಂತೆ ಎನ್ನುವುದು ನನಗೆ ಇವತ್ತೇ ಗೊತ್ತಾಗಿದ್ದು. ಸದ್ಯಕ್ಕೆ ಆ ವಿಷಯಕ್ಕೆ ವಿರಾಮ ಹಾಕಿ ಮಲಗು ಬಾ. ನಾಳೆ ಕಾಳಪ್ಪ, ಮಾದಯ್ಯ ಇಬ್ಬರೂ ನಿನ್ನನ್ನು ಜಮೀನಿನ ಹತ್ತಿರ ಕರೆದುಕೊಂಡು ಬರಲು ಹೇಳಿದ್ದಾರೆ. ಏನೋ ಮಾತನಾಡಬೇಕಂತೆ. ಏನೆಂದು ನಾನು ಕೇಳಲಿಲ್ಲ. ಅವರೂ ಹೇಳಲಿಲ್ಲ. ಲೆಕ್ಕಾಚಾರದ ವಿಷಯವಿರಬೇಕು. ಅವರುಗಳಿಗೆ ನೀನು ಹೇಳದಿದ್ದರೂ ವ್ಯವಹಾರ ನಡೆಸುವುದರಲ್ಲಿ ನಾನು ದಡ್ಡನೆನ್ನುವುದು ಗೊತ್ತಾಗಿರಬೇಕು. ಅದಕ್ಕೇ ನಿನ್ನ ಎದುರಿನಲ್ಲೇ ಒಪ್ಪಿಸುವ ಯೋಚನೆ ಇರಬಹುದು. ಬರುತ್ತೀಯ ತಾನೇ?” ಎಂದು ಕೇಳಿದರು ಭಟ್ಟರು.
”ಹೂ..ಜೋಯಿಸರ ಮನೆಯವರು ಹೇಳಿಕಳುಹಿಸುವವರೆಗೆ ಏನು ಕೆಲಸವಿದೆ. ಜಮೀನಿನ ಕೆಲಸಗಳ ಕಡೆ ಗಮನ ಹರಿಸಿ ಒಂದು ಹಂತಕ್ಕೆ ತರಬೇಕು” ಎಂದಳು ಲಕ್ಷ್ಮಿ.
”ಏನನ್ನು ಒಂದು ಹಂತಕ್ಕೆ ತರಬೇಕು ಲಕ್ಷ್ಮಿ? ಬೇಸಿಗೆ ಯಾವ ಬೆಳೆ ಹಾಕಲಾದೀತು. ಅದೇನೋ ಹತ್ತಿ, ಮೆಣಸಿನಕಾಯಿ, ಹರಳುಗಿಡಗಳು, ಎಳ್ಳು ಇವೇ ಮುಂತಾದುವನ್ನು ಹಾಕಿದ್ದಾನೆ. ನಾನೂ ನೋಡಿಕೊಂಡು ಬಂದಿದ್ದೇನೆ. ಈಗ ನೀನು ಹೇಳುತ್ತಿರುವುದೇನು ಅರ್ಥವಾಗುತ್ತಿಲ್ಲ”ಎಂದರು ಭಟ್ಟರು.
ಗಂಡನ ಮಾತುಗಳನ್ನು ಕೇಳಿದ ಲಕ್ಷ್ಮಿಗೆ ರಾಧಕ್ಕನ ಮನೆಗೆ ಹೋದಾಗ ಭಟ್ಟರು ನಡೆದುಕೊಂಡ ರೀತಿ, ಅಲ್ಲಿಂದ ಬಂದ ನಂತರ ಆ ಗಾಳಿಮಾತಿನ ರಾಮಣ್ಣನಿಗೆ ಕೊಟ್ಟ ಉತ್ತರ, ಅವನ ಜೊತೆಯಲ್ಲಿ ಬಂದವರೊಡನೆ ಮಾಡಿದ ವ್ಯವಹಾರ ಎಲ್ಲವೂ ಕಣ್ಮುಂದೆ ಬಂದುನಿಂತವು. ”ಈ ಮಹಾರಾಯ ಒಂದೊಂದು ಸಾರಿ ಅತ್ಯಂತ ಜವಾಬ್ದಾರಿ ಹೊತ್ತವರಂತೆ, ತಿಳಿವಳಿಕಸ್ಥರಂತೆ ನಡೆದುಕೊಳ್ಳುತ್ತಾರೆ. ಅಲ್ಲಾ ಜಮೀನಿನ ಹತ್ತಿರ ಪ್ರತಿದಿನ ಹೋಗಿ ಬರುವುದಂತೂ ನಡೆದಿದೆ. ಆದರೆ ಇವರು ಏನನ್ನು ಗಮನಿಸುತ್ತಾರೆ? ದೇವರೇ, ಹರಳು ಗಿಡಗಳಲ್ಲಿ ಬಲಿತ ಗುತಿಗಳನ್ನು ಕಿತ್ತು ಬೀಜ ಬೇರ್ಪಡಿಸಿದ್ದಾನೆ. ಮೆಣಸಿನಕಾಯಿಯನ್ನು ಬಿಡಿಸಿ ಒಣಗಿಸಿದ್ದಾಗಿದೆ. ಎಳ್ಳು ಗಿಡಗಳು ಒಣಗಿದ ಮೇಲೆ ಕಿತ್ತು ಬಡಿದು ಎಳ್ಳನ್ನು ಶೇಖರಿಸಿದ್ದಾಗಿದೆ. ಒಂದೇ ಎರಡೇ ಎಲ್ಲ ಕೆಲಸಗಳನ್ನು ಒಂದು ಹಂತಕ್ಕೆ ತಂದು ಮಾಮೂಲಿ ಅಂಗಡಿಗಳಿಗೆ ಹಾಕಿಯಾಗಿದೆ. ಇನ್ನೇನಿದ್ದರೂ ಖರ್ಚುವೆಚ್ಚಗಳ ಲೆಕ್ಕಹಾಕಿ ಅವರಿಗೆಷ್ಟು, ನಮಗೆಷ್ಟು ಎಂದು ವಿಂಗಡಿಸುವುದಷ್ಟೇ ಬಾಕಿಯಿದೆ. ಇನ್ನು ಜಮೀನಿನಲ್ಲಿರುವ ಬೆಳೆಗಳೆಂದರೆ ದನಗಳಿಗೆ ಹಾಕುವ ಜೋಳ, ಒಂದಿಷ್ಟು ತರಕಾರಿ ಗಿಡಗಳು. ಕೆಲವು ತೆಂಗಿನ ಮರಗಳು. ಅವೆಲ್ಲ ಇವರ ಕಣ್ಣಿಗೆ ಹೇಗೆ ಕಂಡವಪ್ಪಾ ! ನನ್ನ ಬಲವಂತಕ್ಕೆ ‘ಹೋದಾಪುಟ್ಟ ಬಂದಾ ಪುಟ್ಟ ‘ ಅನ್ನುವಂತೆ ಹೋಗಿಬರುತ್ತಾರೆ. ಈಗ ಖಾತರಿಯಾಯ್ತು. ಪುಣ್ಯಕ್ಕೆ ಬಾಯಿಬಿಡುವುದಿಲ್ಲ, ಕಟ್ಟಾರೋಫ್ ಹಾಕುವ ವ್ಯಕ್ತಿಯಲ್ಲ. ಅದೇ ನನ್ನ ಪುಣ್ಯ” ಎಂದುಕೊಂಡಳು.
”ಲೇ ಲಕ್ಷ್ಮಿ, ಎಲ್ಲಿ ಕಳೆದುಹೋದೆಯೇ? ಒಳ್ಳೆ ಬೊಂಬೆಯ ಹಾಗೆ ನಿಂತುಬಿಟ್ಟಿದ್ದೀ” ಎಂದರು ಭಟ್ಟರು.
”ಏನಿಲ್ಲಾರೀ, ಅತ್ತೆ ಮಾವ ಹೋದಮೇಲೆ ನಮ್ಮ ಕೈಗೆ ಸಿಕ್ಕ ಜಮೀನು, ನಾನು ಹಾಕಿದ ಹುಸಿಬಾಂಬು, ಇಷ್ಟೊಂದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೇ ಅಂದುಕೊಂಡಿರಲಿಲ್ಲ. ಉತ್ಪತ್ತಿ ಚೆನ್ನಾಗಿಯೇ ಆಗುತ್ತಿದೆ. ಅದನ್ನು ನೆನಪಿಸಿಕೊಳ್ಳುತ್ತಿದ್ದೆ. ನೀವೂ ಆದಷ್ಟೂ ತಿಳಿದುಕೊಂಡು ನಡೆಯುವುದನ್ನು ಕಲಿಯಿರಿ. ಹೊರಗಿನವರ ಹತ್ತಿರ ಹಗುರವಾಗಿ ಮಾತನಾಡಬೇಡಿ. ನಿಮಗೆ ಗೊತ್ತಿಲ್ಲವೆಂದು ತೋರಿಸಿಕೊಳ್ಳಬೇಡಿ” ಎಂದು ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಎಚ್ಚರಿಕೆಯನ್ನು ಕೊಟ್ಟಳು ಲಕ್ಷ್ಮಿ.
”ಆಯಿತು ಮನೆಯ ಮಹಾಲಕ್ಷ್ಮಿ ಇನ್ನು ಪವಡಿಸೋಣವಾಗಲೀ” ಎಂದು ನಾಟಕೀಯವಾಗಿ ಹೇಳಿ ಲೈಟು ಆರಿಸಿದರು ಭಟ್ಟರು.
ಲಕ್ಷ್ಮಿಯ ನಿರೀಕ್ಷೆಯಂತೆ ಜಮೀನಿನ ಕೆಲಸಕಾರ್ಯಗಳು ಒಂದು ಹಂತಕ್ಕೆ ಬಂದು ಮುಟ್ಟಿದ್ದವು. ಒಂದು ವಾರ ಕಳೆಯಿತು. ದಂಪತಿಗಳಿಗೆ ಗೊತ್ತೇ ಆಗದಷ್ಟು ಬಿಜಿಯಾಗಿಬಿಟ್ಟಿದ್ದರು. ನಂತರ ಒಂದುದಿನ ಬೆಳಗ್ಗೆ ಎಲ್ಲ ಕೆಲಸಗಳೂ ಮುಗಿದು ಊಟೋಪಚಾರಗಳು ಆದಮೇಲೆ ಲಕ್ಷ್ಮಿ ”ರೀ ನಾಳೆ ಕೇಶವಯ್ಯನವರ ಮನೆಗೆ ಹೋಗಿ ಜೋಯಿಸರ ಮನೆಯವರು ಏನಾದರೂ ಹೇಳಿದ್ದಾರೆಯೇ ಎಂದು ಕೇಳಿಕೊಂಡು ಬರುತ್ತೀರಾ?” ಎಂದಳು.
”ಬೇಡ ಲಕ್ಷ್ಮೀ, ಅವರಾಗಿಯೇ ಹೇಳಿಕಳಿಸಿದ್ದರು..ಜಾತಕವೂ ಹೊಂದಿಕೆಯಾಯಿತೆಂದು, ಕನ್ಯೆಯನ್ನು ನೋಡಿಕೊಂಡು ಹೋಗಿದ್ದಾರೆ. ಅವರೇ ಈಗಲೂ ಹೇಳಲಿಬಿಡು” ಎಂದರು ಭಟ್ಟರು ಬಿಗುವಾಗಿ.
”ಅವರೇ ಹೇಳಿಕಳುಹಿಸಿದ್ದು ಎಲ್ಲ ಏರ್ಪಾಡುಗಳನ್ನು ಮಾಡಿದ್ದು ನಿಜ. ಅದನ್ನು ನಾನೂ ಒಪ್ಪುತ್ತೇನೆ. ಆದರೂ ಹೆಣ್ಣು ಹೆತ್ತವರು ನಾವು, ಒಂದು ಮಾತು ಕೇಳುವುದರಲ್ಲಿ ತಪ್ಪೇನಿಲ್ಲ. ಕೇಳಿಬನ್ನಿ. ಇಲ್ಲವಾದರೆ ನಾನೇ ಒಂದು ಹೆಜ್ಜೆ ಹೋಗಿ ಬರುತ್ತೇನೆ” ಆಗದೇ ಎಂದಳು ಲಕ್ಷ್ಮಿ.
ಹೊರಗೆ ತಲೆಬಾಗಿಲಿನಿಂದ ”ಭಟ್ಟರೇ, ಲಕ್ಚ್ಮಮ್ಮಾ ”ಎಂಬ ಕರೆ ಕೇಳಿ ದಂಪತಿಗಳಿಬ್ಬರೂ ಹೊರಬಂದರು. ”ಅರೆ, ಸುಬ್ಬಣ್ಣ ! ಏನಯ್ಯಾ ..ಬಾ..ಬಾ ನೆನೆದವರು ಮನದಲ್ಲೇ ಅಂತೆ. ಈಗತಾನೇ ಲಕ್ಷ್ಮಿ ನಿಮ್ಮ ಮನೆಗೆ ಹೋಗಿಬರುವ ವಿಚಾರ ಮಾತನಾಡುತ್ತಿದ್ದಳು” ಎಂದರು ಭಟ್ಟರು.
”ಹುಂ ನಾನೇ ಬಂದೆ. ರಾಮದೂತ ಹನುಮಂತನಂತೆ ಸಂದೇಶ ಹೊತ್ತು” ಎಂದು ಹೇಳುತ್ತಾ ಮನೆಯೊಳಕ್ಕೆ ಅಡಿಯಿಟ್ಟ ಸುಬ್ಬಣ್ಣ.
”ಅದೇನು ಸಂದೇಶ ಹೇಳಪ್ಪಾ?” ಎಂದು ಕೇಳುತ್ತಾ ಬಟ್ಟರು ತಾವೊಂದು ಕುರ್ಚಿಯ ಮೇಲೆ ಕುಳಿತು ಅವನನ್ನೂ ಕೂಡಲು ಹೇಳಿದರು. ”ಹಾಗೇ ಸುಬ್ಬು ಪಾನಕ ಮಾಡಿಸಲೇ? ..ಅಥವ ಕಾಫಿ ಬೇಕೋ?” ಎಂದು ಕೇಳಿದರು.
”ಈಗತಾನೆ ಊಟ ಮುಗಿಸಿದ್ದೇನೆ. ಶಾಂತಾಳನ್ನು ಅಂಗಡಿಯಲ್ಲಿ ಕೂಡಿಸಿ ಬಂದಿದ್ದೇನೆ. ಅಪ್ಪಯ್ಯ ನಿಮ್ಮಿಬ್ಬರನ್ನೂ ಈಗಲೇ ನನ್ನ ಜೊತೆಯಲ್ಲಿ ಕರೆದುಕೊಂಡು ಬಾ ಎಂದು ಕಳಿಸಿದರು. ಜೋಯಿಸರು ಏನೋ ಹೇಳಿಕಳುಹಿಸಿದ್ದಾರಂತೆ. ಅದನ್ನು ನಿಮ್ಮ ಹತ್ತಿರವೇ ಹೇಳಬೇಕಂತೆ. ಬೇಗ ಹೊರಡಿ ಇನ್ನೇನು ಅಪ್ಪಯ್ಯ ಮಲಗುವ ವೇಳೆ. ನಿಮಗೇ ಗೊತ್ತಲ್ಲಾ ಆಮೇಲೆ ಹುಡುಗರು ಪಾಠಕ್ಕೆ ಬರುತ್ತಾರೆ” ಎಂದು ಒಂದೇ ಉಸುರಿಗೆ ಹೇಳಿ ”ಭಾವನಾ, ಭಾಗ್ಯಾ ಎಲ್ಲದ್ದೀರೆ? ಶಾಂತಾ ಸಂಜೆಗೆ ಬರುತ್ತಾಳಂತೆ. ನಿಮಗೆ ತಿಳಿಸಲು ಹೇಳಿದಳು” ಎಂದು ಅವರುಗಳ ಹತ್ತಿರ ಮಾತನಾಡಲು ಅವರ ಕೋಣೆಯ ಕಡೆಗೆ ಹೊರಟ.
ಅವನು ಅತ್ತ ಹೋದೊಡನೆ ಗಂಡಹೆಂಡತಿಯರಿಬ್ಬರೂ ಒಳಕೋಣೆಗೆ ಹೋಗಿ ಬಂದವರೇ ”ರೀ, ತೆಗೆದುಕೊಳ್ಳಿ ಈ ಶಾಲು ಮೇಲೆ ಹೊದ್ದು ನಡೆಯಿರಿ” ಎಂದು ಶಾಲನ್ನು ಭಟ್ಟರ ಕೈಗಿಟ್ಟು ತಾನುಟ್ಟಿದ್ದ ಸೀರೆಯನ್ನೇ ಸರಿಪಡಿಸಿಕೊಂಡು ”ಆಯಿತೇ, ನಡೆಯಿರಿ” ಎಂದು ಹೊರಡಿಸಿದಳು ಲಕ್ಷ್ಮಿ.
”ಅಲ್ಲಾ ಲಕ್ಷ್ಮೀ, ಸುಬ್ಬಣ್ಣನ ಹತ್ತಿರ ಏನು ವಿಷಯ ಅಂತ ಹೇಳದೇ ನಮ್ಮನ್ನೇ ಕರೆದುಕೊಂಡು ಬಾ ಎಂದು ಹೇಳಿಕಳಿಸಿರುವುದು ನೋಡಿದರೆ ನನಗೇಕೋ ಅನುಮಾನ ಕಣೇ” ಅವರ ಮಾತನ್ನು ತಡೆದು ”ಇಲ್ಲದ ಸಲ್ಲದ ಯೋಚನೆ ಏಕೆ ಮಾಡುತ್ತೀರಿ? ನಡೆಯಿರಿ ಹೋಗಿದ್ದು ಬರೋಣ..ಸುಬ್ಬೂ..ಸುಬ್ಬಣ್ಣಾ ಬಾಪ್ಪಾ ಹೋಗೋಣ..ಮಕ್ಕಳೇ ಮನೆಯ ಕಡೆ ಜೋಪಾನ” ಎಂದು ಲಕ್ಷ್ಮಿಯೇ ಕೋಣೆಯಿಂದ ಮುಂದಾಗಿ ಹೊರಬಂದು ಚಪ್ಪಲಿ ಮೆಟ್ಟಿ ಹೊರಬಾಗಿಲ ಹತ್ತಿರ ನಿಂತಳು.
ಅನುಮಾನಿಸುತ್ತಲೇ ಭಟ್ಟರೂ ಹೊರಬಂದು ಹೆಂಡತಿಯ ಜೊತೆಗೂಡಿದರು. ಮಕ್ಕಳ ಕೋಣೆಯಿಂದ ಸುಬ್ಬಣ್ಣನೂ ಬಂದ ನಂತರ ಮೂವರೂ ಮನೆಯಿಂದ ಹೊರಟರು. ಅವರೆಲ್ಲ ಹೋದಮೇಲೆ ಮುಂದಿನ ಬಾಗಿಲು ಭದ್ರಪಡಿಸಿದಳು ಭಾಗ್ಯ. ದಾರಿಯಲ್ಲಿ ಯಾರಿಗೆ ಯಾರೂ ಮಾತನಾಡದೆ ಮೌನವ್ರತ ತಾಳಿದಂತೆ ಸರಸರ ನಡೆದರು.
ಅವರಿಬ್ಬರಿಗಿಂತ ಮುಂದಾಗಿ ಮನೆ ತಲುಪಿದ ಸುಬ್ಬಣ್ಣ ಬಾಗಿಲಲ್ಲಿಟ್ಟಿದ್ದ ಕೊಳಗದಲ್ಲಿನ ನೀರಿನಿಂದ ಕಾಲು ತೊಳೆದುಕೊಂಡು ”ಅಪ್ಪಯ್ಯಾ, ಭಟ್ಟರು, ಲಕ್ಷ್ಮಮ್ಮನವರನ್ನು ಕರೆದುಕೊಂಡು ಬಂದೆ. ಇಬ್ಬರೂ ತುಂಬ ಆತಂಕದಲ್ಲಿದ್ದಾರೆ ಸ್ವಲ್ಪ ಆಟವಾಡಿಸಿ” ಎಂದು ಅವರ ಕಿವಿಯ ಹತ್ತಿರ ಪಿಸುಗುಟ್ಟಿದ. ಏನೋ ಬರೆಯುತ್ತ ಕುಳಿತಿದ್ದ ಕೇಶವಯ್ಯನವರು ಅವನ ತುಂಟಾಟದ ಮಾತು ಕೇಳಿ ”ಏ..ಹೋಗೋ ಮಂಗ್ಯಾ’ ಎಂದು ಅವನ ತಲೆಯ ಮೇಲೆ ಮೊಟಕಿದರು. ಸುಬ್ಬು ನಗುತ್ತಾ ಅಂಗಡಿಯತ್ತ ಹೋದನು.
”ಸೋದರಿ ಶಾಂತಾ , ನಾನು ಬಂದಾಯ್ತು. ನೀನು ಹೋಗಮ್ಮಾ, ಇಷ್ಟು ಹೊತ್ತು ನನ್ನ ಮಾತಿಗೆ ಬೆಲೆಕೊಟ್ಟು ಅಂಗಡಿಯಲ್ಲಿದ್ದಿದ್ದಕ್ಕೆ ಥ್ಯಾಂಕ್ಸ್. ಎಷ್ಟು ವ್ಯಾಪಾರವಾಯ್ತು?” ಎಂದು ಕೇಳಿದ.
”ಈ ಬಿಸಿಲಲ್ಲಿ ಯಾರು ಬರುತ್ತಾರಣ್ಣ, ಎಲ್ಲಾ ಉಂಡು ಮಲಗಿರುತ್ತಾರೆ. ಅಪ್ಪನಿಗೆ ಹೇಳು, ಈ ಗ್ರಂದಿಗೆ ಅಂಗಡಿಯ ಜೊತೆಗೆ ಏನಾದರೂ ತಿಂಡಿ, ತಿನಸಿನ ಸಾಮಾನುಗಳನ್ನು ಸೇರಿಸಿಡಲಿ. ಆಗ ನೋಡು ವ್ಯಾಪಾರ ಹೇಗೆ ಆಗುತ್ತೇಂತ” ಎಂದಳು ಶಾಂತಾ. ”ಹೂ ಅಂದಹಾಗೆ ನಾನು ಹೇಳಿದ್ದನ್ನು ಭಾಗ್ಯಕ್ಕ, ಭಾವನಾರಿಗೆ ಹೇಳಿದೆಯಾ? ”ಎಂದು ಕೇಳಿದಳು.
”ಹೂ ನಾನಿರುವುದೇತಕ್ಕೆ, ಹೀಗೇ ಸಂದೇಶ ತಲುಪಿಸೋದಕ್ಕೆ ತಂಗಿ, ಶಾಂತಾ ನಿನಗೆ ಇನ್ನೊಂದು ವಿಷಯ ಗೊತ್ತಾ ಹಿಂದೆ ಪಾರಿವಾಳಗಳ ಕಾಲಿಗೆ ಪತ್ರಸಂದೇಶ ಕಟ್ಟಿ ಹಾರಿಬಿಡುತ್ತಿದ್ದರಂತೆ. ನಾನೂ ಒಂದೆರಡು ಪಾರಿವಾಳಗಳನ್ನು ಸಾಕಿಕೊಂಡು ತರಬೇತಿ ಕೊಡಬೇಕು. ಏನಂತೀಯಾ?’ ಎಂದ ಸುಬ್ಬು.
”ಹೂ..ಆದಷ್ಟು ಬೇಗ ಮಾಡಿಕೋ, ನಿನ್ನ ಮದುವೆಯಾಗುವವಳಿಗೆ ಅವುಗಳ ಮೂಲಕ ಪ್ರೇಮಪತ್ರ ಕಳಿಸುವೆಯಂತೆ ” ಎಂದಳು ಶಾಂತಾ.
”ಆ ಪುಣ್ಯ ನನಗಿಷ್ಟು ಬೇಗ ಎಲ್ಲಿದೆಯಮ್ಮಾ, ಅದು ಬೇಗ ಆಗಬೇಕೆಂದರೆ ನಮ್ಮಜ್ಜಿ ಇದ್ದಾರಲ್ಲ ಗೋದಮ್ಮನ ದೂರದ ನೆಂಟ ಗೋಪಿಯನ್ನು ಬೇಗ ಕರೆದುಕೊಂಡು ಕಾಶಿಯಾತ್ರೆಯನ್ನು ಮೊಟಕುಗೊಳಿಸಿ ಹಿಂದಕ್ಕೆ ಬನ್ನಿ ಎಂದು ಹೇಳಿಕಳಿಸಬೇಕು. ಆಗ ಅವನ ಕೈಯಿಂದ ನಿನ್ನ ಕುತ್ತಿಗೆಗೆ ಮೂರು ಗಂಟುಹಾಕಿಸಿ. ಗಂಡನ ಮನೆಗೆ ಕಳುಹಿಸಿ ಆಮೇಲೆ ನಾನು”.
”ಅಣ್ಣಾ..ಆ ಗೋಪಿ ಸುದ್ಧಿ ಎತ್ತಬೇಡ, ಎಷ್ಟು ಸಾರಿ ಹೇಳಿದ್ದೀನಿ. ನೀನು ಕೇಳುವುದೇ ಇಲ್ಲ” ಎಂದು ಹುಸಿಕೋಪದಿಂದ ಅವನನ್ನು ಕೈಯೆತ್ತಿ ಹೊಡೆಯಲು ಹೋದಳು ಶಾಂತಾ. ತಂಗಿಯಿಂದ ತಪ್ಪಿಸಿಕೊಳ್ಳುತ್ತಾ ”ಏಕೆ ಬೇಡವೆನ್ನುತ್ತೀ ಸೋದರಿ? ಅಜ್ಜಿ ಹೇಳಿದಂತೆ ಜುಟ್ಟು,ಜನಿವಾರ ಎಲ್ಲಾ ಇದೆ ಅವನಿಗೆ. ಸಂಸ್ಕಾರ, ಸಂಪ್ರದಾಯ ಗೊತ್ತಿದೆ” ಅಂಗಡಿಯ ಹೊರಗೆ ಬಂದು ಸುಬ್ಬುವನ್ನು ಅಟ್ಟಿಸಿಕೊಂಡು ಮನೆಯ ವರೆಗೂ ಓಡಿಬಂದಳು ಶಾಂತಾ. ಈ ಗದ್ದಲದಿಂದ ಹಾಲಿನಲ್ಲಿ ಕುಳಿತವರು ”ಏನಾಯ್ತು ಶಾಂತಾ?” ಎಂದು ಪ್ರಶ್ನಿಸಿದರು.
ಆಗ ರಾಧಮ್ಮ ”ಅಯ್ಯೋ ಈ ಅಣ್ಣತಂಗಿಯ ಹುಸಿಜಗಳ ದಿನವೂ ಇದ್ದದ್ದೇ. ಅವನೇನೋ ರೇಗಿಸಿರಬೇಕು. ಇವಳು ಅದನ್ನೇ ನಿಜವೆಂದು ಗೋಳಾಡುತ್ತಾಳೆ. ಇಡೀ ಮನೆಯೆಲ್ಲ ಇಬ್ಬರೂ ಅಡ್ಡಾಡುತ್ತಾರೆ. ನೀವೇನೂ ತಪ್ಪು ತಿಳಿಯಬೇಡಿ ”ಎಂದರು.
ಅಲ್ಲಿಯೇ ಮಣೆಯಮೇಲೆ ಯಾರದ್ದೋ ಜಾತಕ ಬರೆಯುತ್ತಿದ್ದ ಕೇಶವಯ್ಯನವರು ”ಲೇ..ರಾಧಾ, ನಿನ್ನ ಮಗನಿಗೆ ಮನೆಯ ಮುಂದಿದ್ದ ಕೋಣೆಯಲ್ಲಿಯೇ ಅಂಗಡಿ ಮಾಡಿಕೊಟ್ಟಿದ್ದು ತಪ್ಪಾಯಿತೇನೋ ಅನ್ನಿಸುತ್ತೆ ಈಗ. ಗಳಿಗೆಗೊಮ್ಮೆ ಬೆನ್ನಿಗೆ ಬಿದ್ದವಳನ್ನು ಗೋಳಾಡಿಸುತ್ತಾ ಹೊರಗೆ, ಒಳಗೆ ಓಡಾಡುತ್ತಿರುತ್ತಾನೆ. ಬೇರೆ ಎಲ್ಲಿಯಾದರೂ ಜಾಗ ನೋಡಬೇಕು.ಎಂದರು.”
”ಹೂಂ ಹಾಗೇ ಮಾಡಿ ಅಪ್ಪಯ್ಯಾ, ಹೋದರೆ ರಾತ್ರಿ ಬರಬೇಕೆಂದು ತಾಕೀತು ಮಾಡಿ” ಎಂದಳು ಶಾಂತಾ.
”ಸದ್ಯಕ್ಕೆ ನಿಮ್ಮಿಬ್ಬರ ಜೂಟಾಟ ನಿಲ್ಲಿಸಿ. ನಿಮ್ಮನಿಮ್ಮ ಕೆಲಸ ನೋಡಿಕೊಳ್ಳಿ. ಭಟ್ಟರು, ಲಕ್ಷ್ಮಮ್ಮ ಇದೇನು ಮಕ್ಕಳನ್ನು ಹೀಗೆ ಬೆಳೆಸಿದ್ದಾರೆ ಅಂದುಕೊಂಡಾರು” ಎಂದರು ಕೇಶವಯ್ಯ.
”ಆಹಾ ಅವರುಗಳು ನಮ್ಮನ್ನೇನು ಹೊಸದಾಗಿ ಮೋಡುತ್ತಿದ್ದಾರಾ” ಎಂದು ಹೇಳುತ್ತಾ ಅಂಗಡಿಗೆ ಹೊಕ್ಕ ಸುಬ್ಬಣ್ಣ.
ಬರೆಯುವ ಮಣೆ ತೆಗೆದಿಟ್ಟು ”ಹಾ..ನಿಮ್ಮನ್ನು ಕಾಯಿಸಿಬಿಟ್ಟೆ, ಕ್ಷಮಿಸಿ ಭಟ್ಟರೇ. ಅದನ್ನು ಅರ್ಧಕ್ಕೆ ನಿಲ್ಲಿಸಿದರೆ ಲೆಕ್ಕಾಚಾರ ತಪ್ಪುತ್ತದೆ. ಎಂದು ಪೂರೈಸಿಬಿಡೋಣವೆಂದು ಕುಳಿತೆ. ಪೂರ್ತಿಯಾಯಿತು ”ಎಂದರು ಕೇಶವಯ್ಯ.
”ಕ್ಷಮಿಸಿ ಅನ್ನುವ ದೊಡ್ಡ ಮಾತೇಕೆ ಕೇಶವಣ್ಣ, ಸುಬ್ಬಣ್ಣ ಬಂದು ಕರೆಯುತ್ತಿದ್ದಾರೆ ಎಂದ ಕೂಡಲೇ ಹೊರಟುಬಂದೆವು. ಜೋಯಿಸರು ಏನು ಹೇಳಿದ್ದಾರೆ ಎನ್ನುವ ಕುತೂಹಲ ನಮ್ಮನ್ನು ಆತುರಾತುರವಾಗಿ ಬರುವಂತೆ ಮಾಡಿತು” ಎಂದರು ಭಟ್ಟರು ದಂಪತಿಗಳು.
ಕೇಶವಯ್ಯನವರು ಸಮೀಪದಲ್ಲೆ ಕುಳಿತಿದ್ದ ಹೆಂಡತಿಯ ಕಡೆ ನೋಡಿ ಮುಗುಳು ನಗುತ್ತಾ ”ಅಷ್ಟೊಂದು ಆತಂಕಪಡುವಂಥದ್ದೇನಾಗಿಲ್ಲ ಭಟ್ಟರೇ. ಅವರಿಗೆ ನಿಮ್ಮ ಮಗಳು ಹಿಡಿಸಿದ್ದಾಳೆ. ಅವರ ಮನೆಗೆ ನಿಮ್ಮನ್ನೊಮ್ಮೆ ಕರೆದುಕೊಂಡು ಬರಲು ನನಗೆ ಒಪ್ಪಿಸಿದ್ದಾರೆ. ಮಾತುಕತೆ ಮುಗಿಸಿ ನಂತರ ಅವರು ನಿಮ್ಮ ಮನೆಗೆ ಬಂದು ಹೆಣ್ಣನ್ನು ಗಟ್ಟಿಮಾಡಿಕೊಳ್ಳುತ್ತಾರಂತೆ. ಅಂದರೆ ತಾಂಬೂಲ ಬದಲಾಯಿಸಿಕೊಳ್ಳುವುದು. ತದನಂತರ ನಿಮ್ಮ ಅನುಕೂಲ ನೋಡಿಕೊಂಡು ಮದುವೆ ಮಾಡಿಕೊಡಲು ನಿರ್ಧರಿಸುವುದು. ಇದಿಷ್ಟು ವಿಷಯ ನೀವೇನು ಹೇಳ್ತೀರಾ?” ಎಂದರು.
ಏನೋ, ಎಂತೋ ಅನ್ನುವ ಧಾವಂತದಲ್ಲಿ ಬಂದಿದ್ದ ಭಟ್ಟರಿಗೆ ಕೇಶವಯ್ಯನವರು ಹೇಳಿದ್ದು ಕೇಳಿ ಮನಸ್ಸು ನಿರಾಳವಾಯಿತು. ತಮ್ಮ ಹೆಂಡತಿಯ ಕಡೆ ತಿರುಗಿ ”ಲಕ್ಷ್ಮೀ ಯಾವತ್ತು ಹೋಗಿಬರೋಣ” ಎಂದು ಕೇಳಿದರು.
”ಕೇಶವಣ್ಣಾ ನೀವೇ ಇಂಥಹ ದಿನ ಇಷ್ಟುಹೊತ್ತಿಗೆ ಎಂದು ಹೇಳಿಬಿಡಿ. ನಾವು ಬಂದುಬಿಡುತ್ತೇವೆ” ಎಂದಳು ಲಕ್ಷ್ಮಿ.
”ಅದು ಸರಿ, ನಾಳೆ ಒಳ್ಳೆಯದಿನ, ಅವರುಗಳು ಬಂದು ಹೋದಂತೆ ಸ್ವಲ್ಪ ಮುಂಚೆ ಹೋಗಿ ಬಂದುಬಿಡೋಣ. ಗುರುವಾರ ರಾಯರ ದಿನ ಮಧ್ಯಾನ್ಹ ೧-೩೦ ರಿಂದ ೩-೦೦ ಗಂಟೆವರೆಗೆ ರಾಹುಕಾಲ ಮುಗಿಯುತ್ತೆ. ಸರೀನಾ? ಮಕ್ಕಳನ್ನು ನಮ್ಮ ಮನೆಗೆ ಬಂದಿರಲು ಹೇಳಿ. ಸುಬ್ಬು ಇರುತ್ತಾನೆ. ನಾವುಗಳು ಹಿಂದಿರುಗಿದ ಮೇಲೆ ಕರೆದುಕೊಂಡು ಹೋಗುವಿರಂತೆ” ಎಂದರು ಕೇಶವಯ್ಯ.
”ಬೇಡಣ್ಣಾ ಮಕ್ಕಳು ನಮ್ಮ ಮನೆಯಲ್ಲಿಯೇ ಇರಲಿ. ಸ್ವಲ್ಪ ಜವಾಬ್ದಾರಿ ಬರುತ್ತೆ. ಭಾಗ್ಯ ಇರುತ್ತಾಳಲ್ಲಾ” ಎಂದಳು ಲಕ್ಷ್ಮಿ.
”ನಾನು ಏತಕ್ಕೆ ಹೇಳಿದೆ ಅನ್ನೋಕಡೆಗೆ ಸ್ವಲ್ಪ ಯೋಚಿಸಿ ಲಕ್ಷ್ಮಮ್ಮ. ನಿಮ್ಮ ಅಂಗಡಿಯ ಹತ್ತಿರ ಆ ಬಸವನನ್ನೋ ಸತ್ಯನನ್ನೋ ಕೂಡ್ರಿಸಿ ಬರುತ್ತೀರ. ಮನೆಯಲ್ಲಿ ಬರಿ ಹೆಣ್ಣುಮಕ್ಕಳು ಇರುತ್ತಾರೆ. ಸುಮ್ಮನೆ ಏಕೇಂತ ಅಷ್ಟೆ. ಸೂಕ್ಷ್ಮ ವಿಚಾರಗಳು. ಮೊದಲೇ ನಿಮ್ಮ ಮನೆಯ ಆಜೂಬಾಜು ಇರುವವರು ಇಲ್ಲದ್ದನ್ನೆಲ್ಲ ಆಡುವವರು. ಅವರ ಬಾಯಿಗೆ ಬೀಳುವುದೇಕೆ. ಮದುವೆಯಾಗುವವರೆಗೂ, ಅಥವಾ ನಿಮ್ಮ ಕಡೆ ಯಾರಾದರೂ ಹಿರಿಯರು ಬರುವವರೆಗೂ ಇದು ನನ್ನ ಅಭಿಪ್ರಾಯ ಕಣಮ್ಮಾ. ಅಲ್ಲವೇನೇ ರಾಧಾ ಏನು ಹೇಳುತ್ತೀ? ”ಎಂದು ಪತ್ನಿಯನ್ನು ಕೇಳಿದರು.
”ಓ ತಪ್ಪಾಯಿತು ಕೇಶವಣ್ಣಾ, ನಿಮಗೆ ತೊಂದರೆಯಾಗುತ್ತದೆಂದು ಆಲೋಚಿಸಿದೆನೇ ಹೊರತು ಬೇರೆ ಏನೂ ಇಲ್ಲ. ನೀವು ಹೇಳಿದಂತೆಯೇ ಮಾಡುತ್ತೇವೆ. ನಮ್ಮ ಮಾವನವರ ಮನೆಯಲ್ಲಿ ದೂರದ ನೆಂಟರಾದ ದಂಪತಿಗಳಿದ್ದಾರೆ. ಅವರು ಕೆಲಸಕ್ಕೂ ಸೈ, ಕಾವಲಿಗೂ ಸೈ ನಂಬಿಕಸ್ಥರು. ಮಾವನವರನ್ನು ಕೇಳಿ ಕರೆದುಕೊಂಡು ಬರುತ್ತೇನೆ. ಅಲ್ಲಿಯವರೆಗೆ ನೀವು ಹೇಳಿದಂತೆ ಮಾಡುತ್ತೇವೆ” ಎಂದಳು ಲಕ್ಷ್ಮಿ.
”ಹಾ ಹಾಗೇ ಎಷ್ಟು ಸಾರಿ ಹೇಳಿದ್ದಿವಿ ನಮ್ಮದು ನಿಮ್ಮದು ಎಂದು ಬೇರೆ ಅಂದುಕೊಳ್ಳಬೇಡಿ ಅಂತ. ಕಾಲ ಬಂದಾಗ ನಿಮ್ಮ ಹತ್ತಿರ ಬಡ್ಡಿ ಸಮೇತ ವಸೂಲಿ ಮಾಡುತ್ತೇವೆ ಆಯಿತಾ? ಈಗ ಆಗಬೇಕಾದ ಕೆಲಸಗಳ ಕಡೆ ಗಮನ ಕೊಡೋಣ” ಎಂದರು.
ಶಾಂತಾ ಎಲ್ಲರಿಗೂ ಪಾನಕ ಮಾಡಿ ತಂದಿಟ್ಟಳು. ”ಏಕೆ ಮಾಡಲು ಹೋದೆ ಮಗೂ” ಎಂದರು ಭಟ್ಟರು.
”ಅವಳೆಲ್ಲಿ ಮಾಡ್ತಾಳೆ ಭಟ್ಟರೇ, ಅವಳೇನು ಭಾಗ್ಯ, ಭಾವನಾ ಅಂದುಕೊಂಡಿರಾ, ಅಮ್ಮ ಮಾಡಿಕೊಟ್ಟದ್ದನ್ನು ತಂದುಕೊಡುತ್ತಿದ್ದಾಳೆ ಅಷ್ಟೇ” ಎಂದ ಸುಬ್ಬಣ್ಣ.
”ಲೋ ಮಗರಾಯ, ಇಷ್ಟುಬೇಗ ಅಂಗಡಿ ಬಾಗಿಲು ಹಾಕಿಬಿಟ್ಟೆಯಾ?” ಎಂದು ಕೇಳಿದರು ಕೇಶವಯ್ಯ.
”ಹೇ ಇಲ್ಲಪ್ಪಾ, ಪಾನಕ ಅಂದದ್ದು ಕೇಳಿಸಿತು. ಅದಕ್ಕೇ ಬಂದೆ” ಎಂದು ಹೇಳುತ್ತಾ ಒಂದು ಪಾನಕದ ಲೋಟ ಕೈಗೆತ್ತಿಕೊಂಡು ನಿರ್ಗಮಿಸಿದ ಸುಬ್ಬಣ್ಣ.
”ತೊಗೊಳ್ಳಿ ಭಟ್ಟರೇ, ಲಕ್ಷ್ಮೀ, ಬೇಲದ ಹಣ್ಣಿನದ್ದು. ನಮ್ಮ ಜಮೀನಿನಲ್ಲಿರುವ ಮರದಲ್ಲಿ ಮೊದಲನೇ ಸಲ ಬಿಟ್ಟಿದ್ದು. ಮೊನ್ನೆ ರಂಗಪ್ಪ ತಂದುಕೊಟ್ಟಿದ್ದ. ಹಣ್ಣಾಗಿತ್ತು ಮಾಡಿದೆ. ತುಂಬ ರುಚಿಯಾಗಿದೆ. ದೇಹಕ್ಕೂ ಒಳ್ಳೆಯದು” ಎಂದರು ರಾಧಮ್ಮ.
”ಸರಿ ಕೇಶವಣ್ಣ, ರಾಧಕ್ಕಾ ನಾವಿನ್ನು ಬರುತ್ತೇವೆ” ಎಂದು ಎದ್ದರು ಭಟ್ಟರು. ”ನಾಳೆ ನೀವು ಹೇಳಿದ ಸಮಯಕ್ಕೆ ಬರುತ್ತೇವೆ” ಎಂದು ಹೊರಟರು.
ಲಕ್ಷ್ಮಿಯು ಪಾನಕ ಖಾಲಿಯಾದ ಲೋಟಗಳನ್ನು ತಟ್ಟೆಯಲ್ಲಿಟ್ಟುಕೊಂಡು ಹಿತ್ತಲಿನ ಬಚ್ಚಲಲ್ಲಿಟ್ಟು ಕೈತೊಳೆದುಕೊಂಡು ಒಳಬಂದಳು. ರಾಧಮ್ಮ ಅವಳಿಗೆ ಕುಂಕುಮವಿತ್ತರು. ಲಕ್ಷ್ಮಿ ಅದನ್ನು ತೆಗೆದುಕೊಂಡು ಗಂಡನೊಡನೆ ಹೊರಬಂದಳು. ಕೇಶವಯ್ಯ ದಂಪತಿಗಳು ಬಾಗಿಲವರೆಗೂ ಬಂದು ಅವರನ್ನು ಬೀಳ್ಕೊಟ್ಟರು. ತಮ್ಮ ಮನೆಯ ಹಾದಿ ಹಿಡಿದ ಭಟ್ಟರು ದಂಪತಿಗಳ ಮನಸ್ಸು ಸಂತಸದಿಂದ ಕೂಡಿತ್ತು.
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : http://surahonne.com/?p=34909
(ಮುಂದುವರಿಯುವುದು)
–ಬಿ.ಆರ್,ನಾಗರತ್ನ, ಮೈಸೂರು
ಚೆನ್ನಾಗಿ ಓದಿಸಿಕೊಂಡು
ಹೋಗುತ್ತಿದೆ. ಪಾತ್ರಗಳೊಳಗೆಭಾವನಾತ್ಮಕವಾಗಿ
ನಮ್ಮನ್ನೂ ಬೆಸೆಯುವ
ಕೆಲಸ ಮಾಡುವ ಲೇಖಕಿಯಪ್ರಯತ್ನಕ್ಕೆ ನಮ್ಮದೊಂದು
ನಮನ
ಬಹಳ ಸುಂದರವಾಗಿ ಮೂಡಿ ಬರುತ್ತಿದೆ ಕಾದಂಬರಿ. ಇಲ್ಲಿನ ಸಂಬಂಧಗಳ ನಡುವಿನ ಅನ್ಯೋನ್ಯತೆ ಓದುವಾಗ ಮನಸಿಗೆ ಮುದ ನೀಡುತ್ತದೆ
ಧನ್ಯವಾದಗಳು ಪೂರ್ಣಿಮಾ ಹಾಗೂ ನಯನ ಮೇಡಂ
ಕುತೂಹಲ ಉಳಿಸಿಕೊಂಡೂ ಸರಾಗವಾಗಿ ಓದಿಸಿಕೊಂಡು ಹೋಗುತ್ತಿದೆ “ನೆರಳು” ಕಾದಂಬರಿ
ಧನ್ಯವಾದಗಳು ಗೆಳತಿ ಪದ್ಮಾ
ಆತ್ಮೀಯವಾಗಿ ಓದಿಸಿಕೊಂಡು ಹೋಗುತ್ತಿರುವ ಸುಂದರ ಕಥಾಹಂದರ
ಧನ್ಯವಾದಗಳು ಶಂಕರಿ ಮೇಡಂ