ಹೇಳೋ ಗೆಳೆಯ ಪಿಸುಮಾತಲಿ.
ಹೇಳೋ ಗೆಳೆಯ ಪಿಸುಮಾತಲಿ
ತೂರಿ ಬಿಡು ಮನದ ಮಾತುಗಳ ತರಂಗಗಳಲಿ ||ಪ||
ಮುಗಿಲು ಹೊತ್ತು ತರುವುವು ನಿನ್ನ ಸಂದೇಶಗಳ
ಬಂದು ಸೇರುವುವು ನನ್ನ ಕರ್ಣ ಪಟಲಗಳ
ಅರುಣನು ಕಿರಣಗಳ ಬಾಣ ಬಿಟ್ಟಂತೆ ಭೂ ಅಂಗಳಕೆ
ರಿಂಗಣಿಸುತ್ತ ಹೊತ್ತೊಯ್ಯುವವು ನನ್ನ ನೆನಪಿನಂಗಳಕೆ
ಯಾವ ಪದಗಳಲಿ ವರ್ಣಿಸಲಿ ಆ ಆನಂದವ
ಯಾವ ಕಣ್ಣೋಟದಲಿ ಚಿಮ್ಮಿಸಲಿ ಆ ಕಾಂತಿಯ
ಅನುಭವಿಸಿಯೆ ಅರಿಯಬೇಕು ಆ ಸಂತಸವ
ಮರೆಯಲಾಗದ ಕ್ಷಣಗಳ ಅನುಭೂತಿಯ
ಇಲ್ಲಿ ನಾನು ಏಕಾಂಗಿ ಅನುವ ಮಾತೇ ಇಲ್ಲ
ಸುಯ್ಗುಡುವ ಗಾಳಿ ಮುಂಗುರುಳ
ತೀಡುವುದಲ್ಲ
ನಿನ್ನ ಸ್ಪರ್ಶದ ನೆನಪಿನಂಗಳಕೆನ್ನ ಕೊಂಡೊಯ್ಯುವುದಲ್ಲ
ಇದು ಕನಸೋ ನನಸೋ ಎಂಬ ಶಂಕೆ ಮೂಡುವುದಿಲ್ಲ
ಬಾ ಇನಿಯ ಕಾದಿಹೆನು ಚಾತಕದ ಪಕ್ಷಿಯಂತೆ
ಬೃಂಗದ ಸಂಗ ಬಯಸುವ ಬಿರಿದ
ಮಲ್ಲಿಗೆಯಂತೆ
ಮನ ಹೇಳುವುದು ಸನಿಹದಿ ನೀ ಬರುವೆ ನನ್ನ ಸೇರಲು
ಶ್ರಾವಣದಿ ಮಳೆ ಇಳೆಗೆ ಸುರಿವಂತೆ ಕಡಲ ಸೇರಲು
ಹೇಳೋ ಗೆಳೆಯ ಪಿಸುಮಾತಲಿ
ತೂರಿ ಬಿಡು ಮನದ ಮಾತುಗಳ ತರಂಗಗಳಲಿ
-ಸೀತಾತನಯ
(ಜಿ.ಎಸ್.ಟಿ.ಪ್ರಭು).
ಚೆನ್ನಾಗಿದೆ
ಧನ್ಯವಾದಗಳು.
ಸರಳ ಸುಂದರ ವಾದ ಕವಿತೆ ಚೆನ್ನಾಗಿ ದೆ ಸಾರ್
ಧನ್ಯವಾದಗಳು ಮೇಡಂ
ಸಾಂದರ್ಭಿಕ ಕವನ,ಚೆನ್ನಾಗಿದೆ.
ಧನ್ಯವಾದಗಳು
ಭಾವಪೂರ್ಣ ಕವನ ಬಹಳ ಚೆನ್ನಾಗಿದೆ ಸರ್ …ಧನ್ಯವಾದಗಳು.
ಧನ್ಯವಾದಗಳು ಮೇಡಂ.
ಸುಂದರವಾದ ಪರಿಕಲ್ಪನೆ.
ಪ್ರೀತಿಯ ನಿವೇದನೆಯನ್ನು ಪಿಸುಮಾತಿನಲ್ಲಿ ಬಣ್ಣಿಸಿದ ಕವಿಗೆ ನಮನಗಳು