ಅವಿಸ್ಮರಣೀಯ ಅಮೆರಿಕ-ಎಳೆ 9
ಮಾಯಾ ನಗರಿಯತ್ತ..
ಈಗಾಗಲೇ, ಅಮೆರಿಕದಲ್ಲಿನ ಹಲವಾರು ವಿಶೇಷತೆಗಳಲ್ಲಿ ಕೆಲವೇ ಕೆಲವು ಎಳೆಗಳನ್ನು ಬಿಚ್ಚಿಟ್ಟಿರುವೆ. ಇನ್ನು ಉಳಿದವುಗಳನ್ನು ಸ್ವಲ್ಪ ಮುಂದಕ್ಕೆ ಹೋಗ್ತಾ ಹೋಗ್ತಾ ತಿಳಿಯೋಣ… ಯಾಕೆಂದರೆ ಈಗ ನಾವು ಅಲ್ಲಿಯ ಪ್ರಸಿದ್ಧ ಸ್ಥಳವೊಂದಕ್ಕೆ ಭೇಟಿ ಕೊಡಲಿದ್ದೇವೆ.
ಈ ಮಧ್ಯೆ ಮಗುವಿಗೆ ಮೂರು ತಿಂಗಳು ಪೂರ್ತಿಯಾಯಿತು. ನನ್ನ ಅರ್ಧಾಂಗರು ಬಂದು ನಮ್ಮನ್ನು ಸೇರಿಕೊಂಡರು. ಜೊತೆಗೆ ಕ್ಯಾಲಿಫೋರ್ನಿಯಾದಿಂದ ಸುಮಾರು 500 ಕಿ.ಮೀ. ದೂರವಿರುವ, ಜಗತ್ತಿನಲ್ಲೇ ಪ್ರಸಿದ್ಧವಾಗಿರುವ ಸಿನಿಮಾ ನಗರಿ “ಲಾಸ್ ಏಂಜಲ್ಸ್” ಗೆ ನಾಲ್ಕು ದಿನಗಳ ಪ್ರವಾಸ ಹೋಗುವ ತಯಾರಿ ನಡೆಯಿತು.
ಸುಮಾರು 39 ಲಕ್ಷ ಜನರು ವಾಸವಾಗಿರುವ ಈ ನಗರವು ದಕ್ಷಿಣ ಕ್ಯಾಲಿಫೋರ್ನಿಯಾದ ಅತಿ ದೊಡ್ದ ಪಟ್ಟಣ ಮಾತ್ರವಲ್ಲದೆ ದೇಶದ ಸಿನಿಮಾ ಮತ್ತು ದೂರದರ್ಶನಗಳ ವಾಣಿಜ್ಯ ಕೇಂದ್ರ ಹಾಗೂ ಮನೋರಂಜನಾ ಕೇದ್ರವಾಗಿದೆ. ಅಲ್ಲದೆ, ಬಯಲು ಮತ್ತು ಬೆಟ್ಟ ಪ್ರದೇಶಗಳಲ್ಲಿ ವಾಸಿಸುವ ಜನರು ಸುಮಾರು 13ಮಿಲಿಯ ಮಂದಿ. ಫೆಸಿಫಿಕ್ ಸಾಗರದ ಪಾರ್ಶ್ವದಲ್ಲಿರುವ ಇದು ಬಹು ದೊಡ್ಡ ಮರುಭೂಮಿ ಮತ್ತು ಸುಮಾರು 10,000 ಅಡಿಗಳಷ್ಟು ಎತ್ತರದ ಪರ್ವತ ಶ್ರೇಣಿಗಳಿಂದ ಆವೃತವಾಗಿದೆ. ಸುಮಾರು 1300 ಚ.ಕಿ.ಮೀ ವಿಸ್ತೀರ್ಣದ ಈ ಮಾಯನಗರದ ಪ್ರಾಂತ(County)ವು ಗಾತ್ರದಲ್ಲಿ ನ್ಯೂಯಾರ್ಕ್ ಮಹಾನಗರದ ನಂತರದ ಸ್ಥಾನವನ್ನು ಹೊಂದಿದೆ. ಇಲ್ಲಿ ಮಕ್ಕಳಿಗಾಗಿ ಡಿಸ್ನಿಲ್ಯಾಂಡ್ ಹಾಗೂ ಇತರರಿಗಾಗಿ ಯುನಿವರ್ಸಲ್ ಸ್ಟುಡಿಯೊ ಎನ್ನುವ ಮನೋರಂಜನಾ ಕೇಂದ್ರ (Theme Park)ಗಳು ಬೇರೆ ಬೇರೆಯಾಗಿ ಸ್ಥಾಪಿಸಲ್ಪಟ್ಟಿವೆ. ಅಮೆರಿಕದ ಮನೋರಂಜನಾ ರಾಜಧಾನಿಯಾಗಿರುವ ಇದು ಸ್ಯಾನ್ ಫ಼ರ್ನಾಡೋ ಕಣಿವೆ ಪ್ರದೇಶದಲ್ಲಿದೆ.
ಚಳಿಗಾಲದಲ್ಲಿ ಇಲ್ಲಿಯ ಉಷ್ಣತೆಯು ಸುಮಾರು 20°C ಇದ್ದು, ನಮ್ಮ ಊಟಿಯಂತೆ ಬಹಳ ಅಹ್ಲಾದಕರ ವಾತಾವರಣವಿರುತ್ತದೆ. ಬೇಸಿಗೆಯಲ್ಲಿ ವಾತಾವರಣದ ಉಷ್ಣತೆಯು ಸುಮಾರು 32°Cರಷ್ಟು ಹೆಚ್ಚಾಗುವುದು. ವಿಶೇಷವೆಂದರೆ, ಇಲ್ಲಿ ನೆಲೆಸಿರುವ ಪ್ರತಿ ಆರು ಜನಕ್ಕೊಬ್ಬರು ಕಲಾನಿಪುಣರಾಗಿರುತ್ತಾರೆ. ಎಂದರೆ, ಲೇಖಕರು, ಕಲಾಗಾರರು, ಸಿನಿಮಾ ತಯಾರಕರು, ನಟರು, ನೃತ್ಯಪಟುಗಳು, ಸಂಗೀತಗಾರರು ಹೀಗೆ ವಿವಿಧ ಕಲಾ ಪ್ರಕಾರಗಳಲ್ಲಿ ದುಡಿಯುತ್ತಾ ಇಲ್ಲೇ ನೆಲೆಸಿರುವರು. ಇದು ಸುಮಾರು 109 ವರ್ಷಗಳ ಹಿಂದೆ, 1912ನೇ ಇಸವಿ, ಎಪ್ರಿಲ್ 30ರಂದು ಚಲನಚಿತ್ರ ತಯಾರಿಕೆಗಾಗಿ ಪುಟ್ಟ ಸ್ಟುಡಿಯೋ ರೂಪದಲ್ಲಿ ಪ್ರಾರಂಭವಾಯಿತಾದರೂ, ಆಮೇಲೆ ಅದು ಬೆಳೆದ ಪರಿ ಮಾತ್ರ ಅದ್ಭುತ! ಇಷ್ಟು ದೊಡ್ಡ ಪಟ್ಟಣವಾದರೂ ಇಲ್ಲಿ ಗಗನಚುಂಬಿ ಕಟ್ಟಡಗಳು ಬೆರಳೆಣಿಕೆಯಷ್ಟು ಮಾತ್ರ!
ಚಳಿನಾಡಾದ ಅಮೆರಿಕದಲ್ಲಿ ಮೇ ತಿಂಗಳಿನ ಹದವಾದ ಹವೆ ಪ್ರವಾಸಕ್ಕೆ ಹೇಳಿ ಮಾಡಿಸಿದಂತಿತ್ತು.. ಈ ಮಾಯಾನಗರಿಯ ವೀಕ್ಷಣೆಗೆ. ಮಗಳ ಮನೆಯಿಂದ ಮಗಳಿನ ಪುಟ್ಟ ಮಗುವಿಗೆ ಜೀವನದ ಮೊದಲ ಪ್ರವಾಸದ ಸಿದ್ಧತೆ ಜೋರಾಗಿಯೇ ನಡೆಯಿತು. ಕಾರಿನಲ್ಲಿ ಆರು ಗಂಟೆಯ ಪ್ರಯಾಣ.. ನಮ್ಮೊಂದಿಗೆ, ನಮ್ಮ ಕುಟುಂಬ ಸ್ನೇಹಿತರ ಇನ್ನೆರಡು ಕುಟುಂಬ ಸದಸ್ಯರೂ ಸೇರಿಕೊಂಡರು. ನಮ್ಮ ವಾಹನವಲ್ಲದೆ ಇನ್ನೊಂದು ವಾಹನವನ್ನು ಬಾಡಿಗೆಗೆ ಪಡೆಯಲಾಯಿತು.. ನಾವು ಒಟ್ಟು ಎಂಟು ಜನರಿಗಾಗಿ. ಇಲ್ಲಿ, ನಮ್ಮಲ್ಲಿಯಂತೆ ಬಾಡಿಗೆ ವಾಹನಕ್ಕೆ ಜೊತೆಗೆ ಚಾಲಕ ಇರುವುದಿಲ್ಲ. ಬಾಡಿಗೆ ಪಡೆದುಕೊಂಡವರೇ ವಾಹನ ಚಾಲನೆ ಮಾಡಬೇಕಾಗುತ್ತದೆ.
ವಿಶೇಷವೆಂದರೆ, ಇಲ್ಲಿರುವ ಸುಸಜ್ಜಿತವಾದ ವಸತಿಗೃಹಗಳಲ್ಲಿ ಎಲ್ಲಾ ರೀತಿಯ ವ್ಯವಸ್ಥೆಗಳ ಜೊತೆಗೆ ಸುಸಜ್ಜಿತವಾದ ಅಡುಗೆ ಕೋಣೆಯೂ ಸೇರಿಕೊಂಡಿರುತ್ತದೆ. ಅದರಲ್ಲಿ, ಅಡುಗೆಗೆ ಬೇಕಾದ ವಿದ್ಯುತ್ ಒಲೆಯ ಸಹಿತ, ಪಾತ್ರೆಗಳು, ಸೌಟುಗಳು ಮಾತ್ರವಲ್ಲದೆ, ಪುಟ್ಟ ಚಮಚದಿಂದ ಹಿಡಿದು ಊಟದ, ತಿಂಡಿಯ ಬಟ್ಟಲುಗಳು, ಫ್ರಿಜ್, ಬಟ್ಟೆ ತೊಳೆಯುವ ಯಂತ್ರ ಇತ್ಯಾದಿಗಳೆಲ್ಲವೂ ಸೇರಿವೆ. ಪಕ್ಕಾ ಸಸ್ಯಾಹಾರಿಗಳಾದ ನಮಗೆ ಅಲ್ಲಿ ಆಹಾರದ ಸಮಸ್ಯೆಯಾಗದಂತೆ ನಾಲ್ಕು ದಿನಗಳಿಗೆ ಅಡುಗೆ ಮಾಡಲು ಬೇಕಾದ ಆಹಾರ ಸಾಮಗ್ರಿಗಳನ್ನು ಕೂಡಾ ಕಾರುಗಳಲ್ಲಿ ತುಂಬಿಸಿಕೊಂಡು ಮಧ್ಯಾಹ್ನ ಎರಡು ಗಂಟೆಗೆ ಪ್ರಯಾಣ ಪ್ರಾರಂಭವಾಯಿತು. ಬಾಡಿಗೆ ಕಾರನ್ನು ಅಳಿಯ ಚಲಾಯಿಸುತ್ತಿದ್ದರೆ, ನಮ್ಮ ಕಾರನ್ನು ಮಗಳು ಓಡಿಸುತ್ತಿದ್ದಳು.
ಇಲ್ಲಿಯ ರಸ್ತೆ ಮತ್ತು ವಾಹನ ಚಾಲನೆ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳಿವೆ. ವಾಹನಗಳು ಹೋಗಲು ಮತ್ತು ಬರಲು ಪ್ರತ್ಯೇಕ ರಸ್ತೆಗಳು; ಹೆಚ್ಚು ವಾಹನ ದಟ್ಟಣೆಯ ಪ್ರದೇಶಗಳಲ್ಲಿ ಒಂದೊಂದರ ಪಕ್ಕವೂ ಮೂರು ಅಥವಾ ಅದಕ್ಕಿಂತ ಹೆಚ್ಚು ಸಮಾನಾಂತರ ರಸ್ತೆಗಳು. ಹೆದ್ದಾರಿಗಳಲ್ಲಿ, ಒಂದೊಂದು ರಸ್ತೆಗಳಲ್ಲೂ ವಾಹನದ ವೇಗದ ಮಿತಿಯು ಬೇರೆ ಬೇರೆಯಾಗಿರುತ್ತದೆ. ಈ ವೇಗವನ್ನು ಅಲ್ಲಲ್ಲಿ ಅಳವಡಿಸಿರುವ ರಾಡಾರ್ ಪರಿಶೀಲನಾ ಯಂತ್ರಗಳ ಮೂಲಕ ನಿರೀಕ್ಷೆಗೆ ಒಳಪಡಿಸಲಾಗುತ್ತದೆ. ವಾಹನದ ವೇಗವು ಸ್ವಲ್ಪ ಹೆಚ್ಚು ಕಡಿಮೆಯಾದರೂ ಅದೆಲ್ಲಿಂದಲೋ ಬರುತ್ತಾರೆ ಸಂಚಾರಿ ಪೋಲೀಸರು.. ಹಿಡಿದು ದಂಡ ಹಾಕಿಯೇ ಹಾಕುವರು.
ನಮ್ಮ ಪಯಣ ಸಾಗುತ್ತಿತ್ತು.. ಪಟ್ಟಣದ ಸರಹದ್ದಿನಲ್ಲಿ. ಬಯಲು ಪ್ರದೇಶದಿಂದ ಬೆಟ್ಟದ ಮೇಲಿನ ಏರು ರಸ್ತೆಯ ತಿರುವಿನಲ್ಲಿ ಕಾರು ಸಾಗುತ್ತಿದ್ದಂತೆ ಐದು ತಿಂಗಳ ಮೊಮ್ಮಗಳು ಅಳಲು ಪ್ರಾರಂಭಿಸಿದಳು. ಇಲ್ಲಿ ಇನ್ನೊಂದು ವಿಶೇಷವಾದ ಸಂಗತಿಯಿದೆ. ಎಷ್ಟೇ ಚಿಕ್ಕ ಮಕ್ಕಳನ್ನಾದರೂ ಹೊರಗಡೆ ಹೋಗುವಾಗ ಮಕ್ಕಳನ್ನು ಕೈಯಲ್ಲಿ ಎತ್ತಿಕೊಳ್ಳುವಂತಿಲ್ಲ.. ಅದಕ್ಕಾಗಿ ಇರುವ ನೂಕು ಗಾಲಿಕುರ್ಚಿ ( stroller)ಯಲ್ಲಿ ಕುಳ್ಳಿರಿಸಿ ಬೆಲ್ಟ್ ಬಿಗಿದು ತಳ್ಳಿಕೊಂಡು ಹೋಗಬೇಕು. ಅದೇ ರೀತಿ ವಾಹನದಲ್ಲಿ ಹೋಗುವಾಗಲೂ ಎಷ್ಟೇ ಚಿಕ್ಕ ಮಕ್ಕಳಾದರೂ ಸರಿ, ಕಾರಿನ ಸೀಟಿಗೆ ಮಕ್ಕಳಿಗಾಗಿಯೇ ಇರುವ ಬೇರೊಂದು ಸೀಟನ್ನು ಬಿಗಿದು ಅದರ ಮೇಲೆ ಮಗುವನ್ನು ಕುಳ್ಳಿರಿಸಿ ಮಗುವಿನ ಮೇಲೆ ಇನ್ನೂ ಬಲವಾಗಿ ಬೆಲ್ಟ್ ಬಿಗಿಯಬೇಕು. ನನಗಂತೂ ಇದನ್ನು ನೋಡಿದರೆ ವಿಪರೀತ ಹಿಂಸೆ.. ಮಗುವಿಗೆಲ್ಲಿ ನೋವಾಗುವುದೋ ಎಂದು. ಅಲ್ಲದೆ ಕಾರು ಓಡುತ್ತಿರುವಾಗ ಮಗು ಅತ್ತರೂ ಎತ್ತಿಕೊಳ್ಳುವ ಹಾಗೆಯೇ ಇಲ್ಲವಲ್ಲಾ!.. ಕಾರು ನಿಲ್ಲಿಸಲೇ ಬೇಕು. ನಮ್ಮಲ್ಲಿಯಾದರೋ ಮಕ್ಕಳು ತಮ್ಮ ಅಮ್ಮನ ಬಿಸಿ ಅಪ್ಪುಗೆಯಲ್ಲಿ ನೆಮ್ಮದಿಯಲ್ಲಿ ಮಲಗುವುದೇ ಸಂತೋಷ. ದೊಡ್ಡ ಮಕ್ಕಳಾದರೆ ಕಾರಿನಲ್ಲಿ ಅತ್ತಿತ್ತ ಹಾರಾಡುತ್ತಾ, ಕಿಟಿಕಿ ಪಕ್ಕದ ಸೀಟಿಗೆ ಜಗಳವಾಡುತ್ತಾ ಇರುವುದೇ ಚಂದ. ಇದ್ಯಾಕೆ ಹೀಗೆಂದು ಮಗಳಲ್ಲಿ ಕೇಳಿದಾಗ, ಅವಳು ಕೊಟ್ಟ ಉತ್ತರ ಸಮಂಜಸವಾಗಿತ್ತು. ಗಂಟೆಗೆ ಕಡಿಮೆಯೆಂದರೆ 70ಕಿ.ಮೀ., ಜಾಸ್ತಿಯೆಂದರೆ 140ಕಿ.ಮೀನಷ್ಟು ವೇಗದಲ್ಲಿ ಚಲಿಸುವ ಕಾರುಗಳನ್ನು ಫಕ್ಕನೆ ನಿಲ್ಲಿಸಬೇಕಾಗಿ ಬಂದರೆ ಸೀಟಲ್ಲಿ ಕುಳಿತ ಮಕ್ಕಳಿಗೆ ವಿಪರೀತ ಆವಘಡವಾಗುವುದನ್ನು ತಪ್ಪಿಸಲು ಈ ವ್ಯವಸ್ಥೆಯಂತೆ. ಕಿಲಾಡಿ ಮಗುವೊಂದು ತಂದೆಗೆ ತಿಳಿಯದಂತೆ ಮೆಲ್ಲನೆ ಬೆಲ್ಟ್ ಕಳಚಿ ಕೂತ ಸ್ವಲ್ಪ ಹೊತ್ತಿಗೆ ಅಪ್ಪ ಹಾಕಿದ ಬ್ರೇಕಿನಿಂದ ಮಗು ಮುಗ್ಗರಿಸಿ ಮುಂದಿನ ಸೀಟಿನ ಪಕ್ಕ ಬಿದ್ದ ವಿಷಯ ತಿಳಿದು ಗಾಬರಿಯಾಯಿತು.
ನನ್ನ ಮೊಮ್ಮಗಳ ಅಳು ತಾರಕಕ್ಕೇರಿದರೂ ಅವಳನ್ನು ಸಮಾಧಾನಪಡಿಸುವ ದಾರಿ ಕಾಣಲಿಲ್ಲ. ಸ್ವಲ್ಪ ಏರು ರಸ್ತೆಯಲ್ಲಿ ಕಾರು ಚಲಾಯಿಸುತ್ತಿದ್ದ ಮಗಳ ಗಮನವು ಮಗುವಿನ ಮೇಲೆ ಹರಿದಾಗ ಚಲಿಸುತ್ತಿದ್ದ ಕಾರಿನ ವೇಗವು ಸ್ವಲ್ಪ ಕಡಿಮೆಯಾಯಿತು. ಸ್ವಲ್ಪ ಹೊತ್ತಿನಲ್ಲಿ ಹಿಂದಿನಿಂದ ಹಾರ್ನ್ ಶಬ್ದದೊಂದಿಗೆ ಬೆಳಕು ಚೆಲ್ಲುತ್ತಾ ಕಾರೊಂದು ಬರುವುದು ತಿಳಿಯಿತು. ಆದರೆ ನಮಗಾಗಿ ಈ ಸೂಚನೆ ಎಂಬುದು ನಮ್ಮ ಗಮನಕ್ಕೆ ಬರಲೇ ಇಲ್ಲ. ನಮ್ಮ ಕಾರು ಮುಂದಕ್ಕೆ ಹೋಗುತ್ತಿದ್ದಂತೆಯೇ ನಮ್ಮ ಪಕ್ಕ ಬಂದ ಪೋಲೀಸ್ ವಾಹನವು ನಮ್ಮನ್ನು ನಿಲ್ಲಿಸಿ, ಮಗಳಲ್ಲಿ ಬಹಳ ವಿನಯದಿಂದ ಪ್ರಶ್ನೆಗಳನ್ನು ಕೇಳಿ ಅವಳ ವಾಹನ ಚಾಲನೆಯ ಪರವಾನಿಗಿ ಪತ್ರವನ್ನು ಸ್ವಾಧೀನ ಪಡಿಸಿ, ಪ್ರಯಾಣಕ್ಕೆ ಅನುವು ಮಾಡಿಕೊಟ್ಟರು. ಮಧ್ಯದಲ್ಲಿ ನಾವು ಯಾವುದೇ ರೀತಿಯಲ್ಲಿ ಮಾತನಾಡುವ ಹಾಗೆಯೇ ಇಲ್ಲ.(ಮುಂದೆ, ಒಂದು ವಾರದ ತರಬೇತಿ ನೀಡಿ ಆ ಪತ್ರವನ್ನು ವಾಪಾಸು ಕೊಟ್ಟರು.)
ಈ ಕಿಟಿಪಿಟಿಗಳ ಮಧ್ಯೆ, ಪ್ರಯಾಣವು ಸುಲಲಿತವಾಗಿ ಮುಂದುವರಿಯಿತು. ಅದ್ಭುತ ಪ್ರಕೃತಿ ಸೌಂದರ್ಯ ಮತ್ತು ಅತ್ಯುತ್ತಮ ರಸ್ತೆ.. ಇವೆರಡೂ ಆಯಾಸವಿಲ್ಲದ ನಮ್ಮ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದ್ದವು. ರಾತ್ರಿ ಸುಮಾರು 8ಗಂಟೆ ಹೊತ್ತಿಗೆ ಒಮ್ಮಿಂದೊಮ್ಮೆಲೆ ಸಹಿಸಲಾರದ ಕೆಟ್ಟ ವಾಸನೆ ಮೂಗಿಗೆ ಅಡರಿತು. ಹೊಟ್ಟೆಯಲ್ಲಿ ಸಂಕಟ..! ಇದೇನಪ್ಪಾ ಎಂದು ಅಳಿಯನಲ್ಲಿ ವಿಚಾರಿಸಿದಾಗ ತಿಳಿದ ವಿಷಯ ನಿಜಕ್ಕೂ ಆಶ್ಚರ್ಯ ಹಾಗೂ ಭಯ ಹುಟ್ಟಿಸುವಂತಿತ್ತು. ಅದು Coalinga ಎನ್ನುವ ಸ್ಥಳವಾಗಿತ್ತು. ಸಾವಿರಾರು ಎಕರೆ ಖಾಲಿ ಜಾಗದಲ್ಲಿ, ಲಕ್ಷಗಟ್ಟಲೆ ಜಾನುವಾರುಗಳನ್ನು ಬೇಲಿಯೊಳಗೆ ಕೂಡಿ ಹಾಕಿ ಚೆನ್ನಾಗಿ ಸಾಕಿ ಹಾಲು, ಗೊಬ್ಬರ, ಮಾಂಸಕ್ಕಾಗಿ ಅವುಗಳನ್ನು ಉಪಯೋಗಿಸುತ್ತಾರೆ. ದುರಾದೃಷ್ಟಕ್ಕೆ ನಮ್ಮ ಊಟದ ವ್ಯವಸ್ಥೆಯು ಅಲ್ಲಿಯ ಒಂದು ಹೋಟೇಲಿನಲ್ಲಿ ಇದ್ದುದು ನನಗೆ ಮತ್ತಷ್ಟು ಕಷ್ಟಕ್ಕಿಟ್ಟುಗೊಂಡಿತು..ಆದರೇನು ಮಾಡಲಿ? ಅದೂ ಅಲ್ಲದೆ, ಮೈಲುಗಟ್ಟಲೆ ದೂರ ಆ ವಾಸನೆಯನ್ನು ಸಹಿಸಲಾರದೆ ಸಹಿಸಿಕೊಂಡು ಮುಂದುವರಿಯಬೇಕಾಯಿತು.
ಮುಂದಕ್ಕೆ, ದಟ್ಟ ಕತ್ತಲನ್ನು ಸೀಳಿಕೊಂಡು ನಮ್ಮ ವಾಹನಗಳು, ಏರು ತಗ್ಗುಗಳು, ತಿರುವುಗಳು, ಹೊಂಡ ಗುಂಡಿಗಳಿಲ್ಲದ ಸೊಗಸಾದ ರಸ್ತೆಯಲ್ಲಿ, ನೂರು ಮೈಲಿಗಿಂತಲೂ ಹೆಚ್ಚು ವೇಗದಲ್ಲಿ ತನ್ನ ಗಮ್ಯದೆಡೆಗೆ ಧಾವಿಸುತ್ತಿತ್ತು… ಅತ್ಯಂತ ಸುಖಕರವಾದ, ಕೊಂಚವೂ ಆಯಾಸವಿಲ್ಲದ ಪ್ರಯಾಣವಾಗಿತ್ತದು. ಮಾರ್ಗದರ್ಶಿ GPS ಮೂಲಕ , ಸುಮಾರು ಮಧ್ಯರಾತ್ರಿ 1:30ಕ್ಕೆ ಲಾಸ್ ಏಂಜಲ್ಸ್ ತಲಪಿ ನಮಗಾಗಿ ಕಾದಿರಿಸಿದ್ದ ದೊಡ್ಡದಾದ ಬಂಗಲೆಯೊಳಗೆ ಕಾಲಿಟ್ಟೆವು..ಇದಂತೂ ನನಗೆ ಅತ್ಯಂತ ಅಚ್ಚರಿಯ ವಿಷಯವಾಗಿತ್ತು! ನಮ್ಮಲ್ಲಿ ಈಗಿನಂತೆ ಹತ್ತು ವರ್ಷಗಳ ಹಿಂದೆ GPS ಉಪಯೋಗ ಅಷ್ಟಾಗಿ ಇರಲಿಲ್ಲ.. ಅಲ್ಲವೇ? ಆ ನಿದ್ದೆಯ ಸಮಯದಲ್ಲಿಯೂ ಅದರ ಆವರಣದಲ್ಲಿದ್ದ ಬಹಳ ಚಂದದ ಹೂದೋಟವನ್ನು ಸುತ್ತಿ ಬಂದೆವು. ಪ್ರತ್ಯೇಕವಾಗಿ, ದೊಡ್ಡದಾದ ಸ್ನಾನದ ಕೋಣೆ ಹೊಂದಿರುವ ವಿಶಾಲವಾದ ನಾಲ್ಕೈದು ಮಲಗುವ ಕೋಣೆಗಳು, ಬಟ್ಟೆ ಬರೆಗಳನ್ನಿರಿಸಲು ಪ್ರತ್ಯೇಕ ಕೊಠಡಿ, ಫ್ರಿಜ್, ವಿದ್ಯುತ್ ಒಲೆ, ಸಕಲ ಪಾತ್ರಪಗಡಿಗಳ ಸಹಿತದ ಸುಸಜ್ಜಿತ ಅಡುಗೆಕೋಣೆ.. ನೋಡುವಾಗಲೇ ಬೆರಗಾಗಿಹೋದೆ! ಅದಾಗಲೇ ಮಧ್ಯರಾತ್ರಿ 2:30.. ಎಲ್ಲರೂ ಅವರವರ ಕೋಣೆಗಳಲ್ಲಿ ಮಲಗಿ ನಿದ್ರಿಸಲು ಪ್ರಯತ್ನಿಸಿದೆವು. ನನಗಂತೂ, ಮರುದಿನ ನೋಡಲಿರುವ ವಿಶೇಷ ಸ್ಥಳಗಳ ಬಗ್ಗೆ ಯೋಚಿಸುತ್ತಾ ನಿದ್ರೆ ಆವರಿಸಿದುದೇ ತಿಳಿಯಲಿಲ್ಲ.
ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: http://surahonne.com/?p=34783
ಮುಂದುವರಿಯುವುದು………
-ಶಂಕರಿ ಶರ್ಮ, ಪುತ್ತೂರು.
ಅಮೆರಿಕದ ಪ್ರವಾಸ ಕಥನ ಎಳೆಎಳೆಯಾದ ವಿವರಣೆ ಯೊಂದಿಗೆ ಚೆನ್ನಾಗಿ ಮೂಡಿ ಬರುತ್ತಿದೆ ಧನ್ಯವಾದಗಳು ಮೇಡಂ.
ತಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ.
Nice
ತಮ್ಮ ಮೆಚ್ಚುಗೆಯ ನುಡಿಗೆ ಕೃತಜ್ಞತೆಗಳು ಮೇಡಂ.
ಸೊಗಸಾದ ಅಮೇರಿಕದ ಪ್ರವಾಸದ ಕಥನಾ ಅಕ್ಕೋ
ಪ್ರೀತಿಯ ಸ್ಪಂದನೆಗೆ ವಂದನೆಗಳು ಆಶಾ
ಪ್ರವಾಸ ಕಥನ ಚೆನ್ನಾಗಿದೆ
ಧನ್ಯವಾದಗಳು ಮೇಡಂ.