ಹೆಣ್ಣೆಂಬ ದೇವತೆ
ಅಳುತ್ತಾ ಈ ಜಗಕ್ಕೆ ಆಗಮಿಸಿದಾಗ
ನೋವಿನಲ್ಲೂ ನನ್ನ ಎತ್ತಿ ಮುದ್ದಾಡಿ ಸಂತೈಸಿದವಳು
ಅದೇ ಹೆಣ್ಣೆಂಬ ದೇವತೆ ನನ್ನಮ್ಮ
ಕಾಲಚಕ್ರ ಉರುಳಿ ನಾನು ಬೆಳೆದು ನಿಂತು
ಆಡಲು ಸಂಗಾತಿ ಬೇಕೆನಿಸಿದಾಗ
ನನ್ನಯ ತುಂಟಾಟ ಸಹಿಸಿಕೊಂಡು
ನನ್ನೊಡನೆ ಆಡಲು ಬಂದಿದ್ದು
ಅದೇ ಹೆಣ್ಣೆಂಬ ದೇವತೆ ನನ್ನಕ್ಕ
ಅಕ್ಷರವ ಅಕ್ಕರೆಯಲಿ ಕಲಿತು
ಅಜ್ಞಾನವ ದೂರಗೊಳಿಸಲು ಶಾಲೆಗೆ ಸೇರಿದಾಗ
ತಾಳ್ಮೆ ಪ್ರೀತಿಯ ತೋರಿ ಕಲಿಸಲು ಬಂದ
ಎರಡನೇ ತಾಯಿ ಅದೇ ಹೆಣ್ಣೆಂಬ ದೇವತೆ ಶಾಲಾ ಶಿಕ್ಷಕಿ
ಮುಖದ ಮೇಲಿನ ಚಿಗುರು ಮೀಸೆ
ನನ್ನ ತಾರುಣ್ಯವ ಸೂಸಿ
ಮನ ಜೀವದ ಸಂಗಾತಿ ಬೇಡಿದಾಗ
ತನ್ನದೆಲ್ಲವ ನನಗಾಗಿ ತೊರೆದು
ನನ್ನಯ ಬಾಳಲ್ಲಿ ನಂದಾದೀಪದಂತೆ ಬಂದವಳು
ಅದೇ ಹೆಣ್ಣೆಂಬ ದೇವತೆ ನನ್ನ ಮನದನ್ನೆ
ಕಾಡುವ ಒತ್ತಡಗಳಲ್ಲಿ ನೆಮ್ಮದಿಗೆಡಿಸುವ ಪರಿಸ್ಥಿತಿಗಳಲ್ಲಿ
ಮನವೇ ಗೊಂದಲದ ಗೂಡಾಗಿದ್ದಾಗ
ನನ್ನ ಕಠಿಣತೆಯ ಕರಗಿಸಿ ಎನ್ನ ಮೆದುವಾಗಿಸಲು
ಬಂದಳು ಅದೇ ಹೆಣ್ಣೆಂಬ ದೇವತೆ ನನ್ನ ಮಗಳು
ಬೆನ್ನು ಬಾಗಿ ದೇಹ ಕೃಶವಾಗಿ
ಈ ಬದುಕೇ ಬೇಡವೆನಿಸಿ
ಸಾವಿನಪ್ಪುಗೆಯಲಿ ಈ ಜಗವ ಬಿಡಲು ತಯಾರಾದಾಗ
ನನ್ನ ಹೀರಿಕೊಂಡು ತನ್ನ ಮಡಿಲಲ್ಲಿ ಮಲಗಿಸಿಕೊಳ್ಳಲು
ಬಂದಳು ಅದೇ ಹೆಣ್ಣೆಂಬ ದೇವತೆ ನನ್ನ ಭೂತಾಯಿ
ನಾನೇ ಗಂಡಸು ಮೇಲೆಂಬ ಹಮ್ಮು ಬಿಮ್ಮು ನಿನ್ನಲ್ಲಿದ್ದರೆ
ಜೀವನದ ಪ್ರತಿ ಹೆಜ್ಜೆಯಲ್ಲೂ ಜೊತೆಯಾದ
ಈ ಹೆಣ್ಣೆಂಬ ದೇವತೆಯ ಗೌರವಿಸು
ಪೂರ್ವ ಜನ್ಮದ ಪುಣ್ಯದಿಂದ ಸ್ವತಃ ನೀನೇ ಹೆಣ್ಣಾಗಿದ್ದರೆ
ಅದಕ್ಕಾಗಿ ಹೆಮ್ಮೆಪಡು……ಹೆಮ್ಮೆಪಡು…..ಈ ಜನ್ಮಕ್ಕೆ
-ಕೆ.ಎಂ ಶರಣಬಸವೇಶ
ಸುಂದರವಾದ ಆತ್ಮೀಯವಾದ ಕವನ ಧನ್ಯವಾದಗಳು
ಹೆಣ್ಣಿನ ಬೇರೆ ಬೇರೆ ಪಾತ್ರಗಳು. ಸೊಗಸಾಗಿದೆ ಕವನ.
ಹೆಣ್ಣೆಂಬ ದೇವತೆಗೆ ಅರ್ಪಿತ ಸೊಗಸಾದ ಕವನ
ಅರ್ಥಪೂರ್ಣ ವಾದ ಕವನ ಧನ್ಯವಾದಗಳು ಸಾರ್