ಕಾದಂಬರಿ: ನೆರಳು…ಕಿರಣ2
–ಹಿಂದಿನ ಸಂಚಿಕೆಯಿಂದ ಮುಂದುವರಿದುದು…..
ಗಂಡನ ಮಾತನ್ನು ಕೇಳಿದ ಲಕ್ಷ್ಮಿಗೆ ಹಾಲುಕುಡಿದಷ್ಟು ಸಂತಸವಾಯ್ತು. ಆದರೂ ಅದನ್ನು ತೋರ್ಪಡಿಸಿಕೊಳ್ಳದೆ ”ದೇವರೇ, ನನ್ನ ಗಂಡನಿಗೆ ಈಗಲಾದರೂ ತನ್ನ ಸಂಸಾರದ ಬಗ್ಗೆ ಯೋಚಿಸುವಷ್ಟು ಬುದ್ಧಿ ಕೊಟ್ಟೆಯಲ್ಲ. ನಿನಗೆ ಕೋಟಿ ನಮನಗಳು” ಎಂದು ಅಗೋಚರ ಶಕ್ತಿಗೆ ತಲೆಬಾಗಿದಳು. ನಂತರ ಗಂಡನಿಗೆ ”ಯೋಚಿಸಬೇಡಿ, ನೀವೇನೂ ನೇಗಿಲು ಹಿಡಿದು ಹೋಗುವ ಅವಶ್ಯಕತೆಯಿಲ್ಲ. ಗೇಣಿಗೆ ಕೊಟ್ಟಿರುವ ರೈತರ ಹತ್ತಿರ ನಾನು ಮಾತನಾಡಿದ್ದೇನೆ. ನೀವು ಇಲ್ಲದ ಕಾರಣ ಹುಡುಕಿ ಸುಳ್ಳಿನ ಸರಪಣಿ ಪೋಣಿಸಿ ಒಂದಿಷ್ಟು ಕೈಗಿತ್ತರೆ ಅದರ ಕಥೆಯೇ ಬೇರೆಯಾಗುತ್ತದೆ. ನೀವು ಬಿಟ್ಟುಕೊಟ್ಟು ಹೊರಡಿ. ನಾನು ಬೇರೆಯವರಿಗೆ ವಹಿಸುತ್ತೇನೆ. ನನಗೆ ಈ ಗೇಣಿಗೆ ಕೊಡುವುದು, ಗುತ್ತಿಗೆಗೆ ಕೊಡುವುದು ಇವುಗಳ ಬಗ್ಗೆ ಚೆನ್ನಾಗಿ ಗೊತ್ತು. ಇದುವರೆವಿಗೂ ಮನೆಯಲ್ಲಿ ನಮ್ಮ ಹಿರಿಯರಿದ್ದರು, ಅವರ ಮತ್ತು ನಿಮ್ಮ ಮಧ್ಯೆ ನನ್ನ ದೊಡ್ಡಸ್ಥಿಕೆ ತೋರಿಸೋದು ಸರಿಯಲ್ಲವೆಂದು ಸುಮ್ಮನಿದ್ದೆ. ಈಗ ಮನೆಯ ವ್ಯವಹಾರವೆಲ್ಲ ನನ್ನ ಮತ್ತು ನನ್ನ ಯಜಮಾನರದ್ದು ಯೋಚಿಸಿ ಎಂದೆ. ಆಗ ಅವರು ನಿಮ್ಮನ್ನು ಒಂದುಮಾತು ಕೇಳಿ ಹೇಳುತ್ತೇವೆಂದರು. ನಾನು ನಿಮ್ಮ ಹತ್ತಿರ ಈ ಬಗ್ಗೆ ಚಿರ್ಚಿಸಿಯೇ ತೀರ್ಮಾನಿಸಿದ್ದೇವೆ ಎಂದು ಧೈರ್ಯವಾಗಿ ಹೇಳಿಬಿಟ್ಟೆ. ಇದು ವರೆಗೆ ಏನು ಮಾಡಿದಿರೋ ನಮಗೆ ಬೇಡದ ವಿಷಯ. ಮುಂದೆ ಹಾಗಾಗಬಾರದು. ಅದಕ್ಕೆ ನಿಮ್ಮ ನಿರ್ಧಾರ ತಿಳಿಸಿದರೆ ಉತ್ತಮ” ಎಂದು ಹೇಳಿದೆ.
ನನ್ನ ಮಾತಿನಲ್ಲಿದ್ದ ಖಚಿತತೆ ಕಂಡ ಅವರುಗಳು ಅಡ್ಡಬಿದ್ದು ” ತಪ್ಪಾಯಿತು ತಾಯೀ, ನಿಮ್ಮ ಭೂಮಿ ಭಾಗವಾಗುವುದಕ್ಕಿಂತ ಮುಂಚಿನಿಂದಲೂ ನಮ್ಮ ಮನತನದವರೇ ಉಳುಮೆ ಮಾಡಿಕೊಂಡು ಬಂದಿದ್ದೇವೆ. ದೊಡ್ಡ ಧಣಿಯವರ ಕಾಲಕ್ಕೆ ಪಾಲಾದಾಗ ನಿಮ್ಮ ಮಾವನವರು ನೌಕರಿಯಲ್ಲಿದ್ದುದರಿಂದ ಜಮೀನಿನ ಕಡೆ ಆಸ್ತೆ ವಹಿಸಲಾಗದೆಂದು ನಮಗೇ ವಹಿಸಿದ್ದರು. ನಾವೂ ನಿಷ್ಠೆಯಿಂದ ಇದ್ದೆವು. ಅವರು ಬೇಸಾಯಕ್ಕೆಂದು ಯಾವುದೇ ಖರ್ಚುಮಾಡುತ್ತಿರಲಿಲ್ಲ. ಹೀಗಾಗಿ ಬಂದದ್ದರಲ್ಲಿ ಸೇ 60 ಭಾಗ ನಮಗೆ, 40 ಭಾಗ ನಿಮ್ಮ ಮನೆಗೆ ಕೊಡುತ್ತಿದ್ದೆವು. ನಂತರ ದೊಡ್ಡ ಯಜಮಾನರಿಗೆ ವಯಸ್ಸಾದ ಕಾರಣ ಬೇಸಾಯದ ಬಗ್ಗೆ ವಿಚಾರಿಸುವುದನ್ನೇ ಬಿಟ್ಟಿದ್ದರು. ನಾವು ಕೊಟ್ಟಷ್ಟು ಅವರು ತೆಗೆದುಕೊಳ್ಳುತ್ತಿದ್ದರು. ಕಡಿಮೆಯಾಯ್ತಲ್ಲಾ ಎಂದಾಗಲೆಲ್ಲ ಏನಾದರೂ ಕಾರಣಗಳನ್ನು ಕೊಟ್ಟು ನಂಬಿಸುತ್ತಿದ್ದೆವು. ಆ ನಂತರ ಅವರು ಯಾವ ಪ್ರಶ್ನೆಯನ್ನೂ ಕೇಳಿತ್ತಿರಲಿಲ್ಲ. ಇನ್ನು ನೀವು, ನಮ್ಮ ಚಿಕ್ಕಧಣಿ ಶಂಭುಭಟ್ಟರ ಕೈಹಿಡಿದ ಮೇಲೆ ನಿಮ್ಮ ಬಲವಂತಕ್ಕೆ ಆಗೊಮ್ಮೆ ಈಗೊಮ್ಮೆ ಜಮೀನಿನ ಹತ್ತಿರ ಬಂದು ಹೋಗುತ್ತಿದ್ದರೇ ವಿನಃ ಮಿಕ್ಕ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಅಂಥವರು ಇಷ್ಟು ಮಟ್ಟಕ್ಕೆ ಬಂದಿದ್ದಾರೆಂದರೆ ಅದು ನಿಮ್ಮ ಶ್ರಮದಿಂದ ತಾಯಿ. ಇನ್ಯಾವತ್ತೂ ನಾವು ನಿಮಗೆ ಎರಡು ಬಗೆಯುವುದಿಲ್ಲ. ದಯವಿಟ್ಟು ಈಗ ನಮ್ಮನ್ನು ಹೊರಕ್ಕೆ ತಳ್ಳಬೇಡಿ” ಎಂದು ಕೇಳಿಕೊಂಡರು.
ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಸರಿಪಡಿಸಿಕೊಳ್ಳುತ್ತೇವೆಂದು ಪ್ರಾಮಾಣಿಕವಾಗಿ ಹೇಳುತ್ತಿದ್ದಾರೆ. ತೆಗೆ ಈಗ ನಾವು ಬೇರೆ ಯಾರನ್ನೋ ಹುಡುಕಲು ಸಾಧ್ಯವಿಲ್ಲವೆಂದು ಯೋಚಿಸಿ ”ಆಯಿತು, ನೀವೇ ಗೇಣಿಯನ್ನು ಮುಂದುವರಿಸಿ, ಎಂದು ಹೇಳಿ ಕಳಿಸಿದ್ದೇನೆ. ಹಾಗಂತ ಆಕಡೆ ಗಮನ ಹರಿಸುವುದನ್ನು ನಿರ್ಲಕ್ಷಿಸಬಾರದು. ಹೋಗಿ ಬರುತ್ತಿರಬೇಕು. ಕಾಟಾಚಾರದಿಂದಲ್ಲ, ಕಾಳಜಿಯಿಂದ ಗೊತ್ತಾಯಿತೇ? ಇದೆಲ್ಲವನ್ನು ಒಂದು ಮೊಂಡು ಧೈರ್ಯದಿಂದ ತಹಬಂದಿಗೆ ತಂದಿದ್ದೇನೆ. ಏಕೆಂದರೆ ಮದುವೆಯಾದ ಹೊಸತರಲ್ಲಿ ನಾನು ನಿಮ್ಮ ಜೊತೆ ಒಮ್ಮೆ ಜಮೀನಿನ ಕಡೆಗೆ ಹೋದವಳು ಇದುವರೆಗೆ ಮತ್ತೆ ಆಕಡೆ ಹೋಗೇ ಇಲ್ಲ. ಹೋಗುವ ಪ್ರಮೇಯ ಬಂದರೂ ಹಿರಿಯರಿಗೆ ಅದು ಇಷ್ಟವಿಲ್ಲವಾದ ವಿಷಯವೆಂದು ಸುಮ್ಮನಿದ್ದೆ. ಆದರೆ ಆಗ ನೋಡಿದ ಹೊಲ. ಗದ್ದೆಗಳಿರುವ ಸ್ಥಳ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಒಳ್ಳೆಯ ಆಯಕಟ್ಟಿನ ಜಾಗ. ಅಲ್ಲಿರುವ ಕಲ್ಯಾಣಿಯಲ್ಲಿ ಯಾವಾಗಲೂ ಬತ್ತದಜಲ. ಆ ಮಾತನ್ನು ಹಿಂದೆ ನೀವೇ ಹೇಳಿದ್ದು. ಜೊತೆಗೆ ಗೇಣಿಗೆ ತೆಗೆದುಕೊಂಡ ಜನಗಳು ತುಂಬಾ ಜಾಣರು. ವ್ಯವಸಾಯದಲ್ಲಿ ನುರಿತವರು. ಇದೆಲ್ಲವುಗಳ ಜೊತೆಗೆ ಪ್ರತಿವರ್ಷ ಬೆಳೆಬಂದದ್ದು ಹೇಗಿತ್ತು ಎಂಬೆಲ್ಲ ವಿಚಾರಗಳನ್ನು ಹಲವಾರು ನೆರೆಹೊರೆಯ ಜನರಿಂದ ಕೇಳಿ ತಿಳಿದುಕೊಂಡೇ ಈ ನಿರ್ಧಾರ ಮಾಡಿದೆ” ಎಂದಳು.
”ಮಕ್ಕಳು ಬೆಳೆಯುತ್ತಿದ್ದಾರೆ, ಓದುಬರಹ, ಅವರುಗಳ ಬದುಕಿಗೊಂದು ದಾರಿಮಾಡುವುದು, ನಮ್ಮ ಜೀವನ ನಡೆಯುವುದು ಎಲ್ಲಕ್ಕೂ ಜಮೀನಿನಿಂದ ಬರುವ ಉತ್ಪನ್ನ ಏನೇನೂ ಸಾಲದು. ಅದೂ ಇತ್ತೀಚೆಗೆ ನಿಮಗೂ ಗೊತ್ತಾಗಿದೆ. ಅದಕ್ಕೆ ನಾನು ಮತ್ತೊಂದು ಆಲೋಚನೆ ಮಾಡಿದ್ದೇನೆ. ನಿಮ್ಮ ಒಪ್ಪಿಗೆಗಾಗಿ ಕಾಯುತ್ತಿದ್ದೇನೆ” ಎಂದಳು ಲಕ್ಷ್ಮಿ.
ಹೆಂಡತಿಯ ಮಾತುಗಳನ್ನೆಲ್ಲ ಇದುವರೆಗೆ ತುಟಿಪಟಕ್ಕೆನ್ನದೆ ಕೇಳುತ್ತಾ ಕುಳಿತಿದ್ದ ಶಂಭುಭಟ್ಟರು ಅಬ್ಬಾ ! ಹೆಣ್ಣೇ ನನ್ನ ತಲೆಗೆ ಹೊಳೆಯದೇ ಇದ್ದುದನ್ನು ಇಷ್ಟು ದಿಟ್ಟತನದಿಂದ ಹೇಗೆ ನಿರ್ವಹಿಸಿದ್ದಾಳೆ. ಏನಾದರಾಗಲೀ ಸಧ್ಯ, ನಾನು ನೇಗಿಲು ಹಿಡಿಯುವುದನ್ನು ತಪ್ಪಿಸಿದಳು ಮಹಾರಾಯ್ತಿ. ಇಗೇನು ಯೋಜನೆ ಹಾಕಿಕೊಂಡಿದ್ದಾಳೋ ಕೇಳೋಣವೆಂದು ”ಹಾ ಅದೇನು ಹೇಳಬೇಕೆಂದಿದ್ದೀಯೆ ಹೇಳು ಲಕ್ಷ್ಮೀ. ಅದು ನನ್ನ ಕೈಲಾದರೆ ಮಾಡುತೇನೆ” ಎಂದು ಕೇಳಿದರು.
”ಆಗುತ್ತೆ, ಆದರೆ ನೀವು ಮನಸ್ಸು ಮಾಡಬೇಕಷ್ಟೇ” ಎಂದಳು.
”ಅದೇನು ಹೇಳು, ನಾನೀಗ ಹಳೆಯ ಶಂಭುಭಟ್ಟನಲ್ಲ. ನಾಲ್ಕು ಹೆಣ್ಣುಮಕ್ಕಳ ಜವಾಬ್ದಾರಿ ಹೊತ್ತ ತಂದೆ. ಹೆತ್ತವರ ಅತಿಮುದ್ದು, ಕೇಳಿದ್ದೆಲ್ಲ ಕಾಲಬುಡಕ್ಕೇ ಬಿಳುತ್ತಿದ್ದುದರಿಂದ ಇದೇ ಶಾಶ್ವತವೆಂದು ನಂಬಿದ್ದ ಹುಂಬ. ನಿನ್ನ ಮಾತಿಗೂ ಬೆಲೆ ಕೊಟ್ಟಿರಲಿಲ್ಲ”ಎಂದ.
”ಬಿಡಿ ಅವೆಲ್ಲ ಆಗಿಹೋದದ್ದು, ಮತ್ತೆಮತ್ತೆ ಅವೇ ಮಾತುಗಳು ಈಗೇಕೆ? ಈಗ ನಾನು ಹೇಳುವುದನ್ನು ಸ್ವಲ್ಪ ಗಮನವಿಟ್ಟು ಕೇಳಿ. ನಮ್ಮ ಮನೆಯ ಮುಂದೆ ಎಡಬಲದಲ್ಲಿ ಇರುವ ಎರಡೂ ರೂಮುಗಳು ಖಾಲಿಯಿವೆ. ಅವುಗಳನ್ನು ಯಾರಿಗಾದರೂ ಬಾಡಿಗೆಗೆ ಕೊಡೋಣವೆಂದರೆ ಅಲ್ಲಿರುವವರಿಗೆ ಸ್ನಾನ ಶೌಚಾಲಯಕ್ಕೆ ಸೌಕರ್ಯವಿಲ್ಲ. ನಮ್ಮ ಮನೆಯೊಳಕ್ಕೆ ಅವರನ್ನು ಬಿಟ್ಟುಕೊಳ್ಳೋಣವೆಂದರೆ ಮನೆಯಲ್ಲಿ ಹೆಣ್ಣುಮಕ್ಕಳಿದ್ದಾರೆ. ಅದು ಆಗದ ಕೆಲಸ. ಅದಕ್ಕೆ ಅಲ್ಲಿ ಒಂದು ರೂಮಿನಲ್ಲಿ ಸಣ್ಣಪುಟ್ಟ ಸಮಾರಂಭಗಳಿಗೆ ಶಾಮಿಯಾನ, ಖುರ್ಚಿಗಳು, ಟೇಬಲ್ಗಳು, ಪಾತ್ರೆಗಳು. ಇತ್ಯಾದಿಗಳನ್ನಿಟ್ಟು ಬಾಡಿಗೆಗೆ ಕೊಡೋಣ. ಮತ್ತೊಂದು ರೂಮಿನಲ್ಲಿ ಕೆಲವು ಮಕ್ಕಳಿಗೆ ಪಾಠ ಹೇಳಿಕೊಡಬೇಕೆಂದಿದ್ದೇನೆ. ಅವರುಗಳ ಜೊತೆಯಲ್ಲೇ ನಮ್ಮ ಮಕ್ಕಳ ಓದಿನ ಕಡೆಗೂ ಗಮನ ಹರಿಸಿದಂತಾಗುತ್ತದೆ. ಏನು ಇದು ನಿಮಗೆ ಒಪ್ಪಿಗೆಯಾ? ಹೇಳಿ ”ಎಂದು ಕೇಳಿದಳು ಲಕ್ಷ್ಮೀ.
”ನೀನು ಹೇಳಿದ್ದು ಸರಿ, ಆದರೆ ಇದಕ್ಕೆ ಬಂಡವಾಳವನ್ನು ಎಲ್ಲಿಂದ ತರುವುದು? ”ಎಂದರು ಶಂಭುಭಟ್ಟರು.
”ಹೆದರಬೇಡಿ, ಪಾತ್ರೆಪಡಗಗಳು ಮನೆಯಲ್ಲಿರುವವೇ ಬೇಕಾದಷ್ಟಿದೆ. ಅಟ್ಟದಮೇಲಿದ್ದವುಗಳನ್ನೆಲ್ಲ ತೆಗೆದು ಬೆಳಗಿಟ್ಟಿದ್ದೇನೆ. ಮನೆಯ ಆಸ್ತಿ ಭಾಗಮಾಡುವಾಗ ನಿಮ್ಮ ಚಿಕ್ಕಪ್ಪಂದಿರು ಜಮೀನು, ಒಡವೆ, ಬೆಲೆಬಾಳುವ ವಸ್ತುಗಳ ಮೇಲೆ ಹೆಚ್ಚಿನ ಕಾಳಜಿವಹಿಸಿ ಮಿಕ್ಕವೇನೂ ತಮಗೆ ಬೇಡವೆಂದು ಬರೆದುಕೊಟ್ಟಿದ್ದರಂತೆ. ಇಷ್ಟೊಂದು ಪಾತ್ರೆಗಳನ್ನು ಏಕೆ ಕೂಡಿಸಿಟ್ಟಿದ್ದೀರಾ? ಎಂದು ಅತ್ತೆಯವರನ್ನು ಕೇಳಿದಾಗ ಅವರೇ ಈ ವಿಷಯವನ್ನು ನನಗೆ ಆಗಾಗ್ಗೆ ಹೇಳುತ್ತಿದ್ದರು. ಈಗ ಅವುಗಳನ್ನು ಈ ರೀತಿಯಲ್ಲಿ ಉಪಯೋಗಿಸಿಕೊಳ್ಳೋಣ. ಇನ್ನು ಮಿಕ್ಕ ಸಾಮಾನುಗಳನ್ನು ಕೊಳ್ಳಲು ನನ್ನ ಸೋದರಮಾವ ಸ್ವಲ್ಪ ಸಹಾಯ ಮಾಡುತ್ತಾರಂತೆ. ಅಲ್ಲದೆ ಅವರೇ ಅಂಗಡಿಯ ಲೈಸೆನ್ಸ್ ಕೂಡ ಕೊಡಿಸುತ್ತಾರಂತೆ. ಅವರೆಷ್ಟು ಕೊಡುತ್ತಾರೋ ಕೊಡಲಿ, ಮೇಲಾಗಿದ್ದನ್ನು ಕಂತಿನಲ್ಲಿ ತೀರಿಸಿದರಾಯಿತು. ಮನೆಯಲ್ಲಿರುವ ಉಳಿತಾಯವೆಷ್ಟಿದೆ ಎಂಬುದು ನಿಮಗೇ ಗೊತ್ತು. ಅದನ್ನು ಖಾಲಿಮಾಡುವುದು ಬೇಡ. ಆಪತ್ಕಾಲಕ್ಕೆ ಇರಲಿ. ಈಗ ಹೇಳಿ ಇದಕ್ಕೆ ನಿಮ್ಮ ಸಮ್ಮತಿ ಇದೆಯಾ? ” ಎಂದು ಅನುನಯದ ಧ್ವನಿಯಲ್ಲಿ ಕೇಳಿದಳು ಲಕ್ಷ್ಮಿ.
ಎಲ್ಲವನ್ನೂ ಮೊದಲೇ ತಯಾರಿ ಮಾಡಿಕೊಂಡು ಬರೀ ನನ್ನ ಸಹಿಗಾಗಿ ಕಾಯುತ್ತಿದ್ದಾಳೆಂದು ಮನಸ್ಸಿಗೆ ಪಿಚ್ಚೆನ್ನಿಸಿದರೂ, ನನಗೆ ನಮ್ಮ ಅಪ್ಪನಾಣೆಗೂ ಇಷ್ಟೆಲ್ಲಾ ಆಲೋಚನೆಗಳು ಬರುತ್ತಿರಲಿಲ್ಲ, ಒಳ್ಳೆಯ ಯೋಜನೆ, ಎಲ್ಲೂ ಅಲೆಯದೆ ಮನೆಯ ಮುಂದೆಯೇ ಬದುಕು ಕಟ್ಟಿಕೊಳ್ಳುವ ಇರಾದೆ. ಸದ್ಯ ನನಗೆ ಬಂದ ಯೋಚನೆಗಳಿಗಿಂತ ಉತ್ತಮವೆಂದು ತನ್ನ ಸಮ್ಮತಿಯ ಮುದ್ರೆಯನ್ನೊತ್ತಿದರು ಶಂಭುಭಟ್ಟರು.
”ಸರಿ ಆಯಿತು, ನಾಳೆಯೇ ನಾನು ನಮ್ಮ ಮಾವನವರಿಗೆ ಹೇಳಿ ಕರೆಸುತ್ತೇನೆ. ನೀವು ಅವರ ಎದುರಿನಲ್ಲಿ ಈಗ ಹೇಳಿದಂತೆ ನನಗೆಲ್ಲಾ ಒಪ್ಪಿಗೆಯಿದೆಯೆಂದು ಹೇಳಬೇಕೆಂದು” ತಾಕೀತು ಮಾಡಿದಳು ಲಕ್ಷ್ಮಿ.
ಮಾವನ ಸಹಾಯದಿಂದ ಎಲ್ಲಾ ಏರ್ಪಾಡುಗಳನ್ನು ಮಾಡಿಕೊಂಡು ಒಂದು ಶುಭದಿನದಂದು ಅಂಗಡಿ ತೆರೆಸಿಯೇ ಬಿಟ್ಟಳು ಲಕ್ಷ್ಮಿ.
ಆ ಮನೆಗೆ ಹಿರಿಯರು, ಅಣ್ಣ ಅತ್ತಿಗೆಯಿದ್ದಾಗ ಎಡತಾಕುತ್ತಿದ್ದ ಶಂಭುಭಟ್ಟರ ಚಿಕ್ಕಪ್ಪಂದಿರುಗಳು ಅವರೆಲ್ಲ ಕಾಲವಾದ ನಂತರ ಮನೆಯ ವ್ಯವಹಾರ, ಮಗನ ಬುದ್ಧಿವಂತಿಕೆಯ ಬಗ್ಗೆ ತಿಳಿದಿದ್ದರೂ ಒಮ್ಮೆಯೂ ಬಾಯಿಮಾತಿಗಾದರೂ ಮುಂದೇನು ಮಾಡುತ್ತೀರಾ? ಎಂದು ಕೇಳದೆ ಇದ್ದರು. ಈಗ ಅಂಗಡಿ ತೆರೆದದ್ದು ನೋಡಿ ಅಂತೂ ಚಿಕ್ಕಂದಿನಲ್ಲಿ ಹೆತ್ತವರಿಲ್ಲದೇ ಪರರಾಶ್ರಯದಲ್ಲಿ ಬೆಳೆದ ಹೆಣ್ಣುಮಗಳ ದಾಷ್ಟಿಕತೆಗೆ ತಲೆದೂಗಿದರು. ಭೇಷ್..ಎಂದು ಬೆನ್ನುತಟ್ಟಿದರೇ ವಿನಃ ಸಹಾಯಹಸ್ತವನ್ನೇನೂ ಚಾಚಲಿಲ್ಲ. ಅವೆಲ್ಲವನ್ನೂ ತಿಳಿಯದಷ್ಟು ದಡ್ಡಳಾಗಿರಲಿಲ್ಲ ಲಕ್ಷ್ಮಿ. ಆದರೂ ಏನೂ ಗೊತ್ತಿಲ್ಲದವಳಂತೆ ಅವರೊಡನೆ ಸಂಯಮದಿಂದಲೇ ವರ್ತಿಸುತ್ತಾ ಒಡನಾಟವಿಟ್ಟುಕೊಂಡಿದ್ದಳು.
ಅದುವರೆಗೂ ಶಿವನಳ್ಳಿಯಲ್ಲಿ ಈ ತರಹದ ಅಂಗಡಿಯನ್ನು ಯಾರೂ ತೆರೆದಿರಲಿಲ್ಲ. ಆದ ಕಾರಣ ಶಂಭುಭಟ್ಟರ ಅಂಗಡಿಯ ವಸ್ತುಗಳ ಬಾಡಿಗೆಗೆ ಬಹಳ ಬೇಡಿಕೆ ಬಂತೆನ್ನಬಹುದು. ಕೆಲವರು ಪಾತ್ರೆಪಡಗಗಳಿಗೆ ಮಾತ್ರ ಬೇಡಿಕೆಯಿಟ್ಟರೆ ಮತ್ತೆ ಕೆಲವರು ಸಮಾರಂಭಕ್ಕೆ ಬೇಕಾದ ಎಲ್ಲ ವಸ್ತುಗಳನ್ನೂ ಬಾಡಿಗೆಗೆ ತೆಗೆದುಕೊಂಡು ಹೋಗುತ್ತಿದ್ದರು. ದಿನೇದಿನೇ ವ್ಯಾಪಾರ ವಹಿವಾಟು ವೃದ್ಧಿಸುತ್ತಾ ಅಂಗಡಿಯನ್ನು ಪ್ರಾರಂಭಿಸಿದ್ದು ಒಳ್ಳೆಯದೇ ಆಯಿತು ಎನ್ನುವ ಮಟ್ಟಕ್ಕೆ ಬಂತು. ಹಾಗೇ ಶಂಭುಭಟ್ಟರ ಸಂಸಾರವೂ ಒಂದು ಹಂತಕ್ಕೆ ಮುಟ್ಟಿತೆನ್ನಬಹುದು. ಆರ್ಥಿಕವಾಗಿ ಬಲಗೊಂಡು ಲಕ್ಷ್ಮಿಯ ಮಾವನವರು ಕೊಟ್ಟಿದ್ದ ಸಾಲವನ್ನು ಹಂತಹಂತವಾಗಿ ತೀರಿಸಿದರು ದಂಪತಿಗಳು.
”ಲಕ್ಷ್ಮೀ ನಿನ್ನಂಥ ಹೆಣ್ಣನ್ನು ನಾನು ಬಾಳಸಂಗಾತಿಯಾಗಿ ಪಡೆದದ್ದು ಸಾರ್ಥಕವಾಯಿತು. ಮನೆ, ಮನೆತನ ಎರಡನ್ನೂ ಉಳಿಸಿಬಿಟ್ಟೆ. ಎಂಥಾ ಕಷ್ಟ ಬಂದರೂ ಈಗ ಹೆದರದೆ ನಿಭಾಯಿಸುತ್ತೇನೆ” ಎಂದು ಭಾವುಕರಾಗಿ ತಮ್ಮ ಹೆಂಡತಿಗೆ ಹೇಳಿದರು ಶಂಭುಭಟ್ಟರು.
ಗಂಡನ ಮಾತನ್ನು ಕೇಳುತ್ತಾ ಮನದಲ್ಲಿ ತನ್ನ ಅಜ್ಜಿ ಹೇಳಿದ್ದ ಎಚ್ಚರಿಕೆ, ಬುದ್ಧಿವಂತಿಕೆಯ ಮಾತುಗಳು, ಮಾವನವರ ಸಹಾಯ ಹಸ್ತವನ್ನು ಕೃತಜ್ಞತೆಯಿಂದ ನೆನಪಿಸಿಕೊಂಡಳು ಲಕ್ಷ್ಮಿ. ನಾನು ಮದುವೆಯಾಗಿ ಗಂಡನ ಮನೆಗೆ ಹೋಗಲು ತಯಾರಿ ನಡೆಸಿದಾಗ ನನ್ನಜ್ಜಿ ನನಗಾಗಿ ಮಾವನವರ ಬಳಿ ಇರಿಸಿದ್ದ ಇಡುಗಂಟನ್ನು ಮಾವ ಕೊಡಲು ಬಂದಾಗ ಅಜ್ಜಿ ”ಬೇಡ ಮಗಾ, ಅವಳು ಅಲ್ಲಿಗೆ ಹೋಗಿ ಜೀವನ ನಡೆಸುವುದನ್ನು ಕಲಿಯಲಿ. ನಂತರ ಅಲ್ಲಿನ ಆಗುಹೋಗುಗಳನ್ನು ನೋಡಿಕೊಂಡು ನಂತರ ಆವಶ್ಯಕತೆ ಬಿದ್ದಾಗ ಕೊಡುವೆಯಂತೆ ಎಂದುಹೇಳಿ ಅದನ್ನು ನನ್ನ ಹೆಸರಿನಲ್ಲಿಯೇ ಡಿಪಾಸಿಟ್ ಮಾಡಿಸಿಟ್ಟಿದ್ದರು. ನಂತರ ಗಂಡನ ಮನೆಯ ವಾರ್ತೆಗಳನ್ನು ಆಗಿಂದಾಗ್ಗೆ ಕೇಳಿದ ಮೇಲಂತೂ ಅದನ್ನು ಕೊಡುವುದಿರಲಿ, ಅದೊಂದು ಇದೆಯೆಂಬ ಸುದ್ಧಿಯನ್ನೂ ಗಂಡನ ಕಿವಿಗೆ ಹಾಕಬಾರದೆಂದು ತಾಕೀತು ಮಾಡಿದ್ದರು. ‘ಮಕ್ಕಳಿಗೆ ಸಿಹಿ ತೋರಿಸಬೇಡ, ಗಂಡನಿಗೆ ಗಂಟು ತೋರಿಸಬೇಡ’ ಎಂಬ ಗಾದೆಯನ್ನು ಹೇಳಿ ಅದು ಪೂರ್ತಿ ಖರ್ಚಾಗುವವರೆಗೂ ಇಬ್ಬರೂ ಬಿಡುವುದಿಲ್ಲ. ಅದರಲ್ಲೂ ನಿನ್ನ ಗಂಡ ಸೋಮಾರಿ ಎನ್ನುವ ವಿಷಯ ತುಂಬಾಜನ ಹೇಳಿದ್ದು ನನ್ನ ಕಿವಿಗೂ ಬಿದ್ದಿತ್ತು. ಆದರೂ ಕಂಡು ನೋಡಿದ ಕುಟುಂಬದ ಹುಡುಗ, ಮದುವೆಯಾಗಿ ಜವಾಬ್ದಾರಿ ಬಿದ್ದಮೇಲೆ ಸರಿಹೋಗುತ್ತಾನೆಂದು ತಿಳಿದು ನಿನ್ನನ್ನು ಆ ಮನೆಗೆ ಸೊಸೆಯಾಗಿ ಕೊಟ್ಟುಬಿಟ್ಟೆ ಕೂಸೇ. ಆಗಿದ್ದು ಆಯಿತು, ನೀನೇ ಬುದ್ಧಿವಂತಿಕೆಯಿಂದ ಅವನನ್ನು ದಾರಿಗೆ ತರುತ್ತೀಯೆ ಎಂಬ ನಂಬಿಕೆ ನನಗಿದೆ. ಜಾಣ್ಮೆಯಿಂದ, ತಾಳ್ಮೆಯಿಂದ ನಿಭಾಯಿಸಬೇಕು” ಎಂದು ತಮ್ಮ ಕೊನೆಯ ದಿನದವರೆಗೂ ಹೇಳುತ್ತಿದ್ದರು. ಹಾಗೇ ನನ್ನ ಮಾವನವರಿಂದಲೂ ಹಣಕಾಸಿನ ಸಂಗತಿ ಹೊರಗೆ ಬೀಳದಂತೆ ಕಾಪಾಡುವಂತೆ ಕೇಳಿಕೊಂಡಿದ್ದರು. ಮಾವ ಪಾಪ ಅದರಂತೆಯೇ ನಿಭಾಯಿಸಿಕೊಂಡು ಬಂದಿದ್ದರು. ಈಗ ನನ್ನ ಯೊಜನೆಗೆ ಕೈಜೋಡಿಸಿ ಒಂದು ಚಿಕ್ಕಾಸೂ ಸಾಲಮಾಡಲು ಬಿಡದಂತೆ ಅದೇ ಗಂಟಿನಿಂದ ಸ್ವಲ್ಪಭಾಗ ತೆಗೆದು ಬಂಡವಾಳ ಹಾಕಿ ಅಂಗಡಿ ತೆರೆಯಲು ನೆರವಾದರು. ಮಾಡದ ಸಾಲಕ್ಕೆ ತಾವೇ ಕೊಟ್ಟಂತೆ ಹೆಸರು ಕೊಟ್ಟು ತನ್ನವರಿಂದ ವಸೂಲು ಮಾಡಿದರು. ನನ್ನ ಗಂಡನಿಗೆ ಜವಾಬ್ದಾರಿಯೂ ಬಂತು. ಹಾಗೇ ಅಜ್ಜಿ ನನಗಾಗಿ ಎತ್ತಿಡಿಸಿದ್ದ ಗಂಟೂ ಹಾಗೇ ಉಳಿಯಿತು. ಇದೆಲ್ಲವನ್ನೂ ಕಂಡ ಲಕ್ಷ್ಮಿಯ ಮಾವ ಇಂಥದ್ದೇ ಬುದ್ಧಿವಂತಿಕೆ, ಗಟ್ಟಿತನವನ್ನು ಮಕ್ಕಳಿಗೂ ಕಲಿಸೆಂದು ಅವಳನ್ನು ತಾರೀಫು ಮಾಡಿದರು.
ಲಕ್ಷ್ಮಿ ಶಂಭುಭಟ್ಟರ ನಾಲ್ಕು ಹೆಣ್ಣುಮಕ್ಕಳು ಚೆಲುವಿನಲ್ಲಿ ಒಬ್ಬರನ್ನೊಬ್ಬರು ಮೀರಿಸುವಂತಿದ್ದರು.. ಓದಿನಲ್ಲೂ ಅಷ್ಟೇ ಚುರುಕಾಗಿದ್ದರು. ಹಿರಿಯವಳು ಹೈಸ್ಕೂಲಿನ ಕೊನೆಯ ವರ್ಷದಲ್ಲಿ ಅಭ್ಯಾಸ ನಡೆಸಿದ್ದಳು. ಅಲ್ಲಿಂದ ಎರಡೆರಡು ತರಗತಿಗಳ ವ್ಯತಾಸವಷ್ಟೇ ಉಳಿದವರಿಗೆ. ಮನೆಯಲ್ಲಿ ಹಿರಿಯರೆಲ್ಲ ಸರಿದುಹೋಗಿದ್ದು ನಂತರದ ವಿದ್ಯಮಾನಗಳನ್ನೆಲ್ಲಾ ನೋಡುತ್ತಲೇ ಬೆಳೆಯುತ್ತಿದ್ದ ಅವರುಗಳಿಗೆ ತಮ್ಮ ಹೆತ್ತಮ್ಮನ ಮೇಲೆ ಅಪಾರವಾದ ಗೌರವಾದರಗಳು ಮೂಡಿದ್ದವು. ಹಾಗೆಂದು ತಂದೆಯ ಮೇಲೆ ಅಸಮಾಧಾನವಿರಲಿಲ್ಲ. ಪಾಪದ ಮನುಷ್ಯನಂತೆ, ಏನೂ ತಿಳಿಯದ ಮುಗ್ಧರೆಂಬ ಭಾವನೆ ಬೆಳೆದಿತ್ತು.
ಲಕ್ಷ್ಮಿ ತನ್ನ ಮಕ್ಕಳಿಗೆ ಮನೆವಾರ್‍ತೆ, ಹೊರಗಿನ ಆಗುಹೋಗುಗಳ ಬಗ್ಗೆ ಸಮಯ ಸಿಕ್ಕಾಗಲೆಲ್ಲ ತಿಳಿಸಿ ಹೇಳುತ್ತಿದ್ದಳು. ಹಾಗೇ ಏನೇ ಬಂದರೂ ಎದುರಿಸಿ ಬದುಕು ನಡೆಸಬೇಕೆಂಬ ಮಾತನ್ನು ಮರೆಯದೇ ಸೇರಿಸುತ್ತಿದ್ದಳು.
ಹಿರಿಯಮಗಳು ಭಾಗ್ಯ ಎಸ್.ಎಸ್.ಎಲ್.ಸಿ., ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ಲಕ್ಷ್ಮಿಗೆ ಮುಂದೆ ಅವಳನ್ನು ಟಿ.ಸಿ.ಎಚ್., ಗೆ ಸೇರಿಸಿ ಶಿಕ್ಷಕಿಯಾಗಿ ಮಾಡಬೇಕೆಂಬ ಆಲೋಚನೆಯಲ್ಲಿದ್ದಳು. ಅಷ್ಟರಲ್ಲಿ ಅವಳ ನಿರೀಕ್ಷೆಗೂ ಮೀರಿದ ಆಹ್ವಾನ ಮನೆ ಬಾಗಿಲಿಗೇ ಬಂದಿತು. ಬೆಂಗಳೂರಿನ ಶಿವನಳ್ಳಿಯಲ್ಲಿ ಲಕ್ಷ್ಮಿ ಶಂಭುಭಟ್ಟರ ನಿವಾಸವಾದರೆ ಅದೇ ಊರಿನ ಬಾಣಸವಾಡಿಯಲ್ಲಿ ವೆಂಕಟರಮಣ ಜೋಯಿಸರು, ಮಡದಿ ಸಾವಿತ್ರಮ್ಮ, ಅವರ ಪುತ್ರ ಶ್ರೀನಿವಾಸ ಜೋಯಿಸರು ನೆಲೆಸಿದ್ದರು. ವೆಂಕಟರಮಣ ಜೋಯಿಸರು ಜ್ಯೋತಿಷ್ಯದಲ್ಲಿ ಪ್ರಖಾಂಡ ಪಂಡಿತರೆಂದು ಹೆಸರು ಗಳಿಸಿದ್ದರು. ತಲೆಮಾರಿನಿಂದ ನಡೆಸಿಕೊಂಡು ಬಂದಂಥ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಪೂಜಾಕೈಂಕರ್ಯವನ್ನು ಮಾಡಿಕೊಂಡು ಬಂದಂಥಹ ಮನೆತನ. ಅವರು ಲಕ್ಷ್ಮಿಯ ಹಿರಿಯಮಗಳು ಭಾಗ್ಯಳನ್ನು ಸೊಸೆಮಾಡಿಕೊಳ್ಳಲು ಆಸಕ್ತಿ ತೋರಿಸಿ ಹೇಳಿ ಕಳುಹಿಸಿದ್ದರು.
ಈ ಸಂಗತಿಯನ್ನು ಕೇಳಿದ ಲಕ್ಷ್ಮಿ ಮತ್ತು ಶಂಭುಭಟ್ಟರ ಎರಡೂ ಕಡೆಯ ನೆಂಟರಿಷ್ಟರು ”ಅಯ್ಯೋ ಆ ಜೋಯಿಸರ ಮನೆಗಾ? ಅವರಲ್ಲಿ ತುಂಬ ನೇಮನಿಷ್ಠೆ, ಪೂಜೆಪುನಸ್ಕಾರ ಬಹಳ ಕಟ್ಟುನಿಟ್ಟು, ಅದು ಹೋಗಲಿ ಅಂದರೆ ಕೂತರೆ, ನಿಂತರೆ, ಘಳಿಗೆ, ನಕ್ಷತ್ರ, ಗ್ರಹಗತಿ ಲೆಕ್ಕಾಚಾರ ಹಾಕುತ್ತಾರಂತೆ. ಇವೆಲ್ಲ ತಿಳಿದವರು ಯಾರೂ ಅವರ ಮನೆಯ ಸಂಬಂಧ ಬೆಳೆಸಲು ಹಿಂಜರಿಯುತ್ತಾರೆ. ನಿಮ್ಮ ಕುಟುಂಬದ ಬಗ್ಗೆ ಕೂಲಂಕುಷವಾಗಿ ವಿಚಾರಿಸಿರುತ್ತಾರೆ ಅಂತ ಕಾಣಿಸುತ್ತೆ. ನಾಲ್ಕು ಹೆಣ್ಣುಮಕ್ಕಳು ಬೇರೆ. ಮನೆಯ ಸ್ಥಿತಿಗತಿ ಎಲ್ಲವನ್ನೂ ವಿಚಾರಿಸಿ ತಮ್ಮ ಕೆಲಸ ಸುಲಭವಾಗುತ್ತೇಂತ ಗಾಳ ಹಾಕಿದ್ದಾರೆ. ಎಂದು ಹೇಳಿದರು. ಅಲ್ಲದೆ ಚೆನ್ನಾಗಿ ಯೋಚಿಸಿ ತೀರ್ಮಾನ ತೆಗೆದುಕೊಳ್ಳಿ ”ಎಂದು ಸೇರಿಸುವುದನ್ನು ಮರೆಯಲಿಲ್ಲ.
ಆ ಕುಟುಂಬದ ಬಗ್ಗೆ ದಂಪತಿಗಳಿಬ್ಬರೂ ದೀರ್ಘವಾಗಿ ಆಲೋಚನೆಯಲ್ಲಿ ಮುಳುಗಿದರು. ”ಅಷ್ಟು ದೊಡ್ಡ ಮನುಷ್ಯರು ಮನೆ ಬಾಗಿಲಿಗೆ ಹೇಳಿಕಳುಹಿಸಿದ್ದಾರೆ, ಅವರ ಬಗ್ಗೆ ತಿಳಿದವರೆಲ್ಲ ಹೀಗೆ ಹೇಳುತ್ತಾರಲ್ಲಾ. ಏನು ಮಾಡೋಣ? ನನಗಂತೂ ಏನೂ ಗೊತ್ತಾಗುತ್ತಿಲ್ಲ. ನೀವೇ ಏನಾದರೂ ಪರಿಹಾರ ಸೂಚಿಸಿ” ಎಂದಳು ಲಕ್ಷ್ಮಿ.
‘ಅರೆ ಮೊದಲು ನಮ್ಮ ಹುಡುಗಿಯ ಜಾತಕ ಕಳುಹಿಸಿಕೊಡಲು ಹೇಳಿದ್ದಾರೆ. ಕಳುಹಿಸೋಣ. ಅವರ ಮಗನದ್ದೂ ಕಳುಹಿಸುತ್ತಾರಂತೆ. ನಾವೂ ಎಲ್ಲಾದರೂ ತೋರಿಸೋಣ. ಅವರೂ ನೋಡಲಿ. ಹೊಂದಿಕೆಯಾದಾಗ ನೋಡೋಣ. ಈಗಲೇ ಏಕೆ ತಲೆ ಕೆಡಿಸಿಕೊಳ್ಳುತ್ತೀಯೆ? ಲಕ್ಷ್ಮೀ” ಎಂದರು ಶಂಭುಭಟ್ಟರು.
ಅಯ್ಯೋ ಈ ಮನುಷ್ಯನ ಸ್ವಭಾವ ಗೊತ್ತಿದ್ದೂ ನಾನಿವರನ್ನು ಕೇಳಿದೆನಲ್ಲಾ ಎಂದುಕೊಂಡು ”ಹೂ ನೀವ್ಹೇಳುವುದೂ ಸರಿ. ಆದರೆ ಒಂದುವೇಳೆ ಎರಡೂ ಜಾತಕಗಳು ಹೊಂದಿಕೆಯಾಗಿಬಿಟ್ಟರೆ ಉತ್ತರಿಸಬೇಕಲ್ಲಾ. ಎಲ್ಲ ರೀತಿಯಲ್ಲಿ ಆಲೋಚಿಸಿ ಮೊದಲೇ ತೀರ್ಮಾನಕ್ಕೆ ಬಂದಿದ್ದರೆ ಉತ್ತರ ಹೇಳುವುದಕ್ಕೆ ಅನುಕೂಲವಾಗುತ್ತೆ. ಅದಕ್ಕೇ ನಿಮ್ಮನ್ನು ಕೇಳಿದ್ದು ”ಎಂದಳು ಲಕ್ಷ್ಮಿ.
‘ಓ..ನಾನು ಆ ನಿಟ್ಟಿನಲ್ಲಿ ಯೋಚಿಸಲೇ ಇಲ್ಲ ಲಕ್ಷ್ಮಿ, ಏನು ಮಾಡಬಹುದು ಅಂತ ನೀನೇ ಹೇಳು?” ಎಂದಿನಂತೆ ಹೆಂಡತಿಯ ತೀರ್ಮಾನಕ್ಕೇ ಬಿಟ್ಟರು ಶಂಭುಭಟ್ಟರು.
”ಹಾಗಾದರೆ ಕೇಳಿ, ಆ ನೆಂಟರಿಷ್ಟರ ಮಾತುಗಳನ್ನೆಲ್ಲ ಪಕ್ಕಕ್ಕಿಟ್ಟು ಯೋಚಿಸಿದೆ. ಒಂದುವೇಳೆ ಜಾತಕಗಳು ಹೊಂದಿಕೆಯಾದರೆ ಸಂಬಂಧಕ್ಕೆ ಒಪ್ಪಿಗೆ ಕೊಡೋಣಾಂತ. ಏಕೆ ಮಾಡಬಾರದು? ಹುಡುಗನೇನು ಕುಂಟನೇ? ಕುರುಡನೇ? ಇಲ್ಲ ದುರಭ್ಯಾಸಗಳ ದಾಸನೇ? ಅವರದ್ದೇನು ತುಂಬ ಮಕ್ಕಳಿರುವ ಮನೆಯೇ? ಯಾವುದೂ ಇಲ್ಲ. ಸ್ವಲ್ಪ ಧಾರ್ಮಿಕ ನೇಮ ನಿಷ್ಠೆ ಹೆಚ್ಚು ಇರಬಹುದು. ನಮ್ಮಲ್ಲೂ ಇಲ್ಲವೇ, ಅವರಿಗೆ ದೇವಸ್ಥಾನದ ಪೂಜಾಕಾರ್ಯಗಳ ಹೆಚ್ಚಿನ ಜವಾಬ್ದಾರಿಯಿದೆ. ನಾಲ್ಕು ಜನರ ಬಾಯಿಗೆ ಸಿಗಬಾರದೆಂಬ ಬದ್ಧತೆಯಿರುತ್ತದೆ. ಅಷ್ಟಕ್ಕೇ ಸಂಬಂಧ ಬೆಳೆಸುವುದು ಬೇಡವೆಂದರೆ ಹೇಗೆ? ಪ್ರತಿಯೊಂದರಲ್ಲು ಕೊಂಕು ತೆಗೆಯುತ್ತಾ ಕೂತರೆ ಹೇಗೆ? ನಾವು ನಾಲ್ಕು ಹೆಣ್ಣು ಮಕ್ಕಳನ್ನು ದಡ ಸೇರಿಸುವುದು ಯಾವಾಗ? ಮದುವೆ ಮಾಡಿಬಿಟ್ಟರೆ ಆಗಿಹೋಯಿತೇ? ಬಸಿರು, ಬಾಣಂತನ ಇವುಗಳಿಗೆಲ್ಲ ನಾವು ಆಸರೆಯಾಗಿರಬೇಡವೇ? ಅವುಗಳೆಲ್ಲಾ ನಮ್ಮ ಪಾಲಿನ ಕರ್ತವ್ಯವಲ್ಲವೇ? ಹೀಗಿರುವಾಗ ಸಕಾರಾತ್ಮಕವಾಗಿ ಸ್ಫಂದಿಸುವುದು ಉತ್ತಮ. ಆದರೆ ವರೋಪಚಾರ, ವರದಕ್ಷಿಣೆ ಅತಿಯಾದ ಹೊರೆಯೆನಿಸದಿದ್ದರೆ ಮಾತ್ರ. ನಿಮಗೇನೆನ್ನಿಸುತ್ತದೆ?” ಎಂದು ಕೇಳಿದಳು ಲಕ್ಷ್ಮಿ.
”ನೀನು ಹೇಳುವುದರಲ್ಲೂ ಸತ್ಯಾಂಶವಿದೆ. ಬುದ್ಧಿಗೇಡಿ ಕೆಲಸ ಮಾಡಿಕೊಂಡದ್ದಾಗಿದೆ. ಹಾಗಂತ ಆತುರಪಟ್ಟು ಎಡವಟ್ಟು ಮಾಡಿ ಮಕ್ಕಳ ಬದುಕಿಗೆ ಮಾರಕವಾಗಬಾರದು. ಹಾಗೆಂದು ಅತಿಯಾಗಿ ಸೋಸಲೂ ಬಾರದು. ಹಣೆಬರಹ ಬರೆಯಲು ನಾವೇನು ಬ್ರಹ್ಮರೇ? ಸೂಕ್ತವೆಂದರೆ ಗಟ್ಟಿಮನಸ್ಸು ಮಾಡಿ ಮದುವೆ ಮಾಡಿಬಿಡೋಣ. ಅವರ ಬೇಡಿಕೆಗಳು ನಮ್ಮ ಅಳತೆಗೆ ಸಿಕ್ಕರೆ ”ಎಂದ ಶಂಭುಭಟ್ಟ.
”ಆಯಿತು, ಈಗ ರಾತ್ರಿ ಬಹಳ ಹೊತ್ತಾಗಿದೆ. ಬನ್ನಿ ಮಲಗೋಣ. ನಾಳೆ ಬೆಳಗ್ಗೆ ಬೇಗ ಏಳಬೇಕು. ಮುಂದಿನವಾರದಿಂದ ಮಕ್ಕಳಿಗೆ ಪರೀಕ್ಷೆಗಳು ಪ್ರಾರಂಭವಾಗುತ್ತವೆ. ಮನೆಗೆಲಸ ಬೇಗ ಮುಗಿಸಿ ಅವರುಗಳ ಕಡೆ ಗಮನ ಹರಿಸಬೇಕು” ಎಂದು ಮಾತುಕತೆಗೆ ಇತಿಶ್ರೀ ಹಾಡಿದಳು ಲಕ್ಷ್ಮಿ.
ಇತ್ತ ಲಕ್ಷ್ಮಿಯ ಹಿರಿಯ ಮಗಳು ಭಾಗ್ಯಳಿಗೆ ಮನೆಯಲ್ಲಿ ನಡೆಯುತ್ತಿದ್ದ ತನ್ನ ಮದುವೆಯ ಮಾತುಕತೆಗಳು, ಹೊರಗಿನವರು ಕೊಡುತ್ತಿದ್ದ ಉಪದೇಶಗಳು ಎಲ್ಲವೂ ಕಿವಿಯ ಮೇಲೆ ಬೀಳುತ್ತಿದ್ದವು. ಹೆತ್ತಮ್ಮನ ಬದುಕಿನ ಜಂಝಾಟಗಳನ್ನು ನೋಡುತ್ತಲೇ ಬೆಳೆಯುತ್ತಿದ್ದ ಅವಳಿಗೆ ತಾನು ಚೆನ್ನಾಗಿ ಓದಿ ಏನಾದರೊಂದು ಕೆಲಸ ಗಿಟ್ಟಿಸಿಕೊಂಡು ತನ್ನ ಕಾಲಮೇಲೆ ತಾನು ನಿಲ್ಲಬೇಕು, ಆ ನಂತರ ಮದುವೆ, ಗಂಡ, ಮಕ್ಕಳ ಚಿಂತೆ ಮಾಡಿದರಾಯ್ತೆಂಬ ಅಭಿಲಾಷೆ ಹೊತ್ತು ಅಭ್ಯಾಸದ ಕಡೆ ಹೆಚ್ಚು ಗಮನ ಹರಿಸಿದ್ದಳು. ಆದರೆ ಈಗ ನಡೆಯುತ್ತಿರುವ ಬೆಳವಣಿಗೆ ನೋಡಿ ಮನದ ಮೂಲೆಯಲ್ಲಿ ನಿರಾಸೆ ಇಣುಕತೊಡಗಿತ್ತು. ಹೆತ್ತವರಿಗೆ ನನ್ನ ನಿರ್ಧಾರವನ್ನು ಹೇಳಿಬಿಡಲೇ… ಛೇ ನನ್ನ ಮಾತುಗಳನ್ನು ಅವರು ಕೇಳುತ್ತಾರೆಯೇ, ಹೋಗಲಿ ನನ್ನ ಮದುವೆ ಮಾಡಿಕೊಳ್ಳಲು ಇಚ್ಛೆಪಟ್ಟು ಹೇಳಿಕಳುಹಿಸಿದ್ದಾರಲ್ಲಾ ಅವರನ್ನೇ ಕೇಳಿದರೆ, ಅವ್ವಯ್ಯಾ ! ತುಂಬ ಸಂಪ್ರದಾಯಸ್ಥರಂತೆ, ಗಂಡುಬೀರಿ ಎಂದುಬಿಟ್ಟರೆ. ಅದೇ ಸಂಗತಿ ಬಾಯಿಂದ ಬಾಯಿಗೆ ಹರಡಿ ಗುಲ್ಲೆದ್ದರೆ ಮುಂದೆ ”ದೇವರೇ ಜಾತಕ ಹೊಂದದಂತೆ ಹೇಗಾದರೂ ಮಾಡಪ್ಪಾ” ಅದೊಂದೇ ದಾರಿ ನನಗಿರುವುದು ಎಂದು ಭಗವಂತನಿಗೆ ಅಹವಾಲು ಸಲ್ಲಿಸಿ ಪರೀಕ್ಷೆಯ ತಯಾರಿಯ ಕಡೆ ಗಮನ ಹರಿಸಿದಳು.
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ: http://surahonne.com/?p=34714
(ಮುಂದುವರಿಯುವುದು)
–ಬಿ.ಆರ್,ನಾಗರತ್ನ, ಮೈಸೂರು
ತುಂಬಾ ಚೆನ್ನಾಗಿ ಮುಂದುವರಿಯುತ್ತಿದೆ ಕಾದಂಬರಿ.
ಧನ್ಯವಾದಗಳು ನಯನ ಮೇಡಂ.
ಕಾದಂಬರಿ ಸೊಗಸಾಗಿ ಮೂಡಿ ಬರುತ್ತಿದೆ.
ಧನ್ಯವಾದಗಳು ಗೆಳತಿ ಹೇಮಾ
ಕಾಲಕ್ಕೆ ತಕ್ಕಂತೆ ಕಾದಂಬರಿ ಮುಂದುವರೆಯುತ್ತಿರಲಿ!
ಆಸಕ್ತಿಯಿಂದ ಓದಿಸಿಕೊಳ್ಳುವ ಕಥೆ ,ಬರಹದ ಶೈಲಿ ಚೆನ್ನಾಗಿದೆ
ಧನ್ಯವಾದಗಳು ಪದ್ಮಿನಿ ಮೇಡಂ
ಬುದ್ಧಿವಂತಳಾದ ಲಕ್ಷ್ಮಿಯ ನಡೆ ಖುಷಿಕೊಟ್ಟಿತು. ಸೊಗಸಾದ ಕಥಾಹಂದರ.
ಧನ್ಯವಾದಗಳು ಮೂರ್ತಿ ಸರ್ ಹಾಗೂ ಶಂಕರಿಶರ್ಮ ಮೇಡಂ.
ಹೆಣ್ಣು ಮಕ್ಕಳು ಯಾವುದರಲ್ಲೂ ಕಡಿಮೆ ಇಲ್ಲ ಎನ್ನುವುದು ಲಕ್ಷ್ಮಿ ಪಾತ್ರದ ಮೂಲಕ ತಿಳಿಸಿದ್ದೀರಿ.
ಧನ್ಯವಾದಗಳು ಗೆಳತಿ ವೀಣಾ