ಸೆರಗಿನ ಮೆರಗು
ಮರೆಯಾಗಿಹ ಅಮ್ಮನ
ಸೆರಗಿನ ಮರೆಯ
ಸುಖದಲ್ಲಿ ಬೆಳೆದವರು
ನಾವಲ್ಲವೆ
ಚಳಿಯಲ್ಲಿ ಬೆಚ್ಚಗೆ
ಅವಿತು ಎದೆ ಹಾಲು ಹೀರಿದ್ದು
ಅಮ್ಮನ ಸೆರಗಿನ ಒಳಗಲ್ಲವೆ
ತುಟಿಯಲ್ಲಿ ,ಹಾಲುಗಲ್ಲದ ಮೇಲೆ
ಒಸರಿದ್ದ ಎದೆ ಹಾಲನ್ನ
ನಯವಾಗಿ ಒರೆಸಿದ್ದು
ಅಮ್ಮನ ಸೆರಗಲ್ಲವೆ
ಬೇಸಿಗೆಯ ಝಳದಲ್ಲಿ
ಮೆತ್ತನೆಯ ಮಡಿಲಲ್ಲಿ
ಮಲಗಿರುವಾಗ
ತಣ್ಣನೆಯ ಗಾಳಿಯ ಬೀಸುವ
ಚಾಮರವಾಗಿದ್ದು
ಅಮ್ಮನ ಸೆರಗಲ್ಲವೆ
ತೊಳೆದ ಮೊಗ, ಒದ್ದೆ ಕೈ
ಒರೆಸಲು ಸರಕ್ಕನೇ
ಕೈಗೆಟುಕುತ್ತಿದ್ದದ್ದು
ಅಮ್ಮನ ಮೆತ್ತನೆಯ ಸೆರಗಲ್ಲವೆ
ಕಣ್ಣಾಮುಚ್ಚಾಲೆ ಆಟದಲ್ಲಿ
ಅದೆಷ್ಟೋ ಬಾರಿ ಅವಿತದ್ದು
ಅಮ್ಮನ ಸೆರಗೊಳಗಲ್ಲವೇ
ನೊಚ್ಚಗೆ ಅಪ್ಪಿ ಮಲಗಿದಾಗ
ಅಮ್ಮನ ತೋಳಲ್ಲಿ
ಬೆಚ್ಚಗಿನ ಹೊದಿಕೆಯಾಗುತ್ತಿದ್ದದ್ದು
ಅವಳ ಸೆರಗಲ್ಲವೆ
ಅಮ್ಮ ನಡೆದ ಕಡೆಯೆಲ್ಲ
ಹಿಂದೆಯೇ ನಡೆದು
ಅಮ್ಮನಂತೆಯೇ ಬದುಕುವ
ದಾರಿ ತೋರಿಸಿದ್ದು
ನಾವು ಹಿಡಿದು ಓಡಾಡಿದ
ಅವಳ ಸೆರಗೇ ಅಲ್ಲವೇ
ಅಂದಿನ ಅಮ್ಮಂದಿರ
ಸೆರಗು ಹಿಡಿದು ಓಡಾಡಿದ
ನಾವುಗಳೇ ಪುಣ್ಯವಂತರಲ್ಲವೇ
-ನಟೇಶ
ಅಮ್ಮನ ಸೆರಗಿನಲ್ಲಿ ಅಡಗಿರುವ ಬದುಕಿನ ಮಹತ್ವವನ್ನು ಕವಿತೆಯ ಲ್ಲಿ ಕಟ್ಟಿ ಕೊಟ್ಟಿರುವ ರೀತಿ ಬಹಳ ಮುದಕೂಟ್ಟಿತು.ಧನ್ಯವಾದಗಳು ಸಾರ್
Very nice
ಅಮ್ಮನ ಸೆರಗಿನ ಮಹಿಮೆ ಅಂತಿಂಥಹದಲ್ಲ….ಸೊಗಸಾದ ಕವನ.
ಎಲ್ಲರಿಗೂ ಧನ್ಯವಾದಗಳು
ಚಂದದ ಕವನ