ಅವಿಸ್ಮರಣೀಯ ಅಮೆರಿಕ-ಎಳೆ 8

Share Button

ಪ್ರಾಣಿ ಪ್ರೀತಿ….!

ವಿಶೇಷವಾಗಿ ಮರದಿಂದಲೇ ಮನೆಗಳನ್ನು ಅಮೆರಿಕದಲ್ಲಿ ಏಕೆ ಕಟ್ಟುವರೆಂದು ನಿಮ್ಮಂತೆ ನನಗೂ ಕುತೂಹಲ.. ಅದಕ್ಕಾಗಿ ಮಕ್ಕಳಲ್ಲಿ ವಿಚಾರಿಸಿದಾಗ ತಿಳಿಯಿತು. ಅಮೆರಿಕದ ಆ ಭೂಭಾಗದಲ್ಲಿ ಆಗಾಗ ತೀವ್ರ  ಭೂಕಂಪನಗಳು ಸಂಭವಿಸುವುದರಿಂದ, ಆ ಸಂದರ್ಭದಲ್ಲಿ ಹಾನಿಯಾಗದಂತೆ ಮನೆಗಳ ನಿರ್ಮಾಣವಾಗುತ್ತದೆ. ಒಂದು ವೇಳೆ ಸ್ವಲ್ಪ ಮಟ್ಟಿನ ಹಾನಿಯಾದರೂ ಜೀವ ಹಾನಿಗಳು ಆಗುವುದನ್ನು ತಪ್ಪಿಸಲು ಅತ್ಯಂತ ಹಗುರವಾದ  ಅದರೆ ಬಲಿಷ್ಠವಾದ ಮರದಿಂದ ಕಟ್ಟಲಾಗುತ್ತದೆ. ಅಲ್ಲದೆ, ವಿಪರೀತ ಚಳಿಗಾಲದಲ್ಲಿ ಬೆಚ್ಚನೆಯ ಅನುಭವಕ್ಕೂ ಪೂರಕವಾಗಿರುವುದು ವಿಶೇಷ. ಮನೆಯೊಳಗೆ  ಗೋಡೆಗಳು ಮರದವುಗಳೆಂದು ತಿಳಿಯುವುದೇ ಇಲ್ಲ.. ಅಷ್ಟು ಚೆನ್ನಾಗಿ ಅದರ ಮೇಲೆ ವಿಶೇಷ ಪದರನ್ನು ನಿರ್ಮಿಸಿ ಬೇಕಾದ ಬಣ್ಣವನ್ನು ಬಳಿಯುವರು. ಆದರೆ ನೆಲವು  ಮಾತ್ರ ಕಾರ್ಪೆಟ್ ನಿಂದ ಮುಚ್ಚಿರುತ್ತದೆ  ಅಥವಾ ಮರದಿಂದಲೇ ನಿರ್ಮಿಸುವರು. ಪ್ರತಿ ಮನೆಯೂ ಗಾಳಿ, ಶಬ್ದ , ಬೆಳಕು ಒಳಗಿನಿಂದ ಹೊರಗೆ ಮತ್ತು ಹೊರಗಿನಿಂದ ಒಳಗೆ ಹೋಗದಂತೆ ಪೂರ್ತಿ ವಾತಾನುಕೂಲತೆಯನ್ನು ಹೊಂದಿರಲೇಬೇಕು. ಮನೆ ಮರದಿಂದ ಮಾಡಿದುದರಿಂದ ಬೆಂಕಿ ಅಪಾಯವೂ ಜಾಸ್ತಿ ತಾನೇ? ಇಂತಹ ಅವಘಡಗಳ ಮುನ್ನೆಚ್ಚರಿಕೆಗಾಗಿ ಮನೆಯೊಳಗೆ ಯಾವುದೇ ಕಾರಣಕ್ಕೆ ಸ್ವಲ್ಪ  ಹೊಗೆ ಉಂಟಾದರೂ ಊರಿಡೀ ಕೇಳುವಂತೆ ಅಲರಾಂ ಹೊಡೆದುಕೊಳ್ಳುವ ವ್ಯವಸ್ಥೆಯಿದೆ. ಇದಕ್ಕಾಗಿ ಹೊಗೆಯನ್ನು  ಪತ್ತೆ ಮಾಡುವ ಯಂತ್ರ (Smoke detector) ಎಲ್ಲಾ ಕೋಣೆಗಳಿಗೂ ಹಾಕಲೇ ಬೇಕು. ಅಲರಾಂ ಹೊಡೆದ ಸ್ವಲ್ಪ ಹೊತ್ತಿಗೆ ಪೋಲೀಸರು ಹಾಜರ್! ಒಮ್ಮೆ ಹಾಗೆಯೇ ಆಯ್ತು ನೋಡಿ! 

ಮಾಮೂಲಿನಂತೆ ಅಡುಗೆಗೆ ಮಸಾಲೆ ಪದಾರ್ಥಗಳನ್ನು ಹುರಿಯುತ್ತಿದ್ದಾಗ ಸಿಕ್ಕಾಪಟ್ಟೆ ಹೊಗೆ..ಮನೆಯೊಳಗೆ. ಮೆಲ್ಲನೆ ಅಲರಾಂ ಶಬ್ದ ಪ್ರಾರಂಭವಾದಾಗ ನನಗೆ ಬಹಳ ಗಾಬರಿ! ಇದರ ಬಗ್ಗೆ ತಿಳಿದಿರಲಿಲ್ಲವಾದ್ದರಿಂದ ಏನೂ ತೋಚದೆ ನಿಂತುಬಿಟ್ಟೆ. ಅಳಿಯ  ಛಾವಣಿ ಮೇಲಿದ್ದ Smoke detector ರನ್ನೇ ಬಟ್ಟೆಯಿಂದ ಮುಚ್ಚಿ, ಶಬ್ದ ಬರುವುದನ್ನು ನಿಲ್ಲಿಸಿದ, ಜೊತೆಗೆ ಅದರ ಬಗ್ಗೆ ಒಂದರ್ಧ ಗಂಟೆ ಉಪನ್ಯಾಸವೂ ಆಯಿತೆನ್ನಿ. ಆಮೇಲಿಂದ ಏನೇ ಹುರಿದರೂ ಭಯಪಡುವಂತಾದುದು ಮಾತ್ರ ಸುಳ್ಳಲ್ಲ.  ಮನೆಯೊಳಗೆ, ಬೇಸಿಗೆಗೆ ಬೇಕಾದಂತೆ ತಂಪುಗಾಳಿಯೂ, ಚಳಿಗಾಲದಲ್ಲಿ ಬಿಸಿಗಾಳಿಯೂ ನೆಲದ ಕೆಳಭಾಗದಿಂದ ಬರುವ ವ್ಯವಸ್ಥೆ  ಮಾಡಿರುತ್ತಾರೆ. ಅದೂ ಅಲ್ಲದೆ, ಪ್ರತಿ ಮನೆಯಲ್ಲೂ ಕಟ್ಟಿಗೆ ಉರಿಸಿ ಮನೆಯನ್ನು ಬಿಸಿ ಮಾಡಲು ಅಗ್ಗಿಷ್ಟಿಗೆಯ ಪ್ರತ್ಯೇಕ ವ್ಯವಸ್ಥೆಯಿರುತ್ತದೆ. ಇಲ್ಲಿ ಇನ್ನೊಂದು ವಿಷಯವನ್ನು ಹೇಳಲೇಬೇಕು.ಅಮೆರಿಕನ್ನರು ಸಾಮಾನ್ಯವಾಗಿ ನಮ್ಮಂತೆ ಅಡುಗೆಯನ್ನೇ ಮಾಡುವುದಿಲ್ಲ. ಬರೇ ಮೈದಾ, ಗೋಧಿ ಹಿಟ್ಟುಗಳಿಂದ ಮಾಡಿದ ಬೇಕರಿ ತಿನಿಸುಗಳು, ಹಣ್ಣು ಹಂಪಲುಗಳು, ಸಂಸ್ಕರಿಸಿದ ಹಣ್ಣಿನ ರಸಗಳು ಇತ್ಯಾದಿಗಳನ್ನೇ ಮುಖ್ಯ ಆಹಾರವನ್ನಾಗಿಸಿಕೊಂಡವರು. ನಾವು ಭಾರತೀಯರು ಮಸಾಲೆ ಪದಾರ್ಥಗಳ ಬಳಕೆ ಮಾಡುವುದು ರೂಢಿ…ಅದಿಲ್ಲದೆ ಅಡುಗೆ ಮಾಡಲು ಹೇಗೆ ಸಾಧ್ಯ ಎನ್ನುವ ಚಿಂತೆ ನಮ್ಮದು ಅಲ್ಲವೇ? ಅದೇ ಕಾರಣಕ್ಕಾಗಿಯೇ ಅವರು ಭಾರತೀಯರಿಗೆ ಬಾಡಿಗೆ ಮನೆಯನ್ನು ಕೊಡಲು ಹಿಂದೇಟು ಹಾಕುವರು… ಮನೆಯೊಳಗಿನ ಮಸಾಲೆ ಪರಿಮಳವನ್ನು (ನಮಗೆ?) ಯಾವುದೇ ರಾಸಾಯನಿಕದಲ್ಲಿಯೂ ಸ್ವಚ್ಛಗೊಳಿಸಲು ಸಾಧ್ಯವಿಲ್ಲವಂತೆ! 

ಅಲ್ಲಿ ಪ್ರಾಣಿಗಳನ್ನು  ಮಕ್ಕಳಿಗಿಂತಲೂ ಒಂದು ಪಟ್ಟು ಹೆಚ್ಚೇ ಪ್ರೀತಿಸುವರೆಂದರೆ ಅತಿಶಯೋಕ್ತಿಯಾಗಲಾರದು. ಯಾಕೆಂದರೆ, ಸ್ವಂತ ಮಕ್ಕಳನ್ನು ಹದಿನೈದು ವರ್ಷಗಳಿಗೆಲ್ಲಾ  ಮನೆಯಿಂದ ಹೊರಗೆ ಕಳಿಸಿಬಿಡುತ್ತಾರೆ… ತಮ್ಮ ಸಾಕುಪ್ರಾಣಿಗಳನ್ನೇ ಮುದ್ದು ಮಾಡುತ್ತಾ ಜೀವಿಸುತ್ತಾರೆ…ಇದನ್ನು ನಮಗೆ ಯೋಚಿಸಲೂ ಸಾಧ್ಯವಿಲ್ಲ ಅಲ್ಲವೇ?! ಪ್ರತಿ ಮನೆಯಲ್ಲೂ ಒಂದು ನಾಯಿ ಇದ್ದೇ ಇದೆ… ಕೆಲವರಲ್ಲಿ ಅದಕ್ಕಿಂತಲೂ ಹೆಚ್ಚು. ಇಲ್ಲಿ ಮನುಷ್ಯರಿಗೆ ಮಾತ್ರವಲ್ಲ; ಸಾಕುಪ್ರಾಣಿಗಳಿಗೂ ವೈದ್ಯಕೀಯ ವಿಮೆ ಮಾಡಿಸಲೇ ಬೇಕಾಗುತ್ತದೆ. ಮಕ್ಕಳಂತೆಯೇ ಅವುಗಳನ್ನು ನೋಡಿಕೊಳ್ಳುವುದರಿಂದ, ಅವುಗಳು ಅತೀ ಪ್ರೀತಿ ಮತ್ತು ಮುದ್ದಿನಿಂದ ಬೆಳೆಯುತ್ತವೆ. ಕಂಡು ಕೇಳರಿಯದ ವಿವಿಧ ತಳಿಗಳ, ವಿವಿಧ ರೀತಿಯವು! ಕೆಲವೊಂದು ಬೆಕ್ಕಿನ ಮರಿಯಷ್ಟು ಸಣ್ಣದಿದ್ದರೆ ಇನ್ನು ಕೆಲವು ನಾಲ್ಕಡಿ ಎತ್ತರದವು, ವಿಚಿತ್ರ ಬಣ್ಣ, ಆಕಾರಗಳು ಅಸಹ್ಯ ಹುಟ್ಟಿಸುವಂತಹುಗಳೂ ಇವೆ. ಅಷ್ಟು ನಾಯಿಗಳಿದ್ದರೂ ಬೊಗಳುವ ಗಲಾಟೆ ಶಬ್ದ ಎಲ್ಲೂ ಕೇಳಿಸುವುದಿಲ್ಲ, ಅಷ್ಟು ಚೆನ್ನಾಗಿ ತರಬೇತಿ ನೀಡುವರು. ಆದರೆ ನನಗೆ ಮಾತ್ರ, ನಾಯಿಗಳು ಅವುಗಳ  ಸಹಜ ಗುಣವನ್ನೇ  ಮರೆತವೇನೋ ಅನ್ನಿಸುತ್ತಿತ್ತು. ಬರೇ ನಾಯಿಗಳಿಗಾಗಿಯೇ ಪ್ರತ್ಯೇಕ ಆಸ್ಪತ್ರೆ, ಅವುಗಳಿಗಾಗಿಯೇ ಆಡಲು ಪ್ರತ್ಯೇಕ ದೊಡ್ಡದಾದ ಹುಲ್ಲಿನ ಮೈದಾನ, ಇವನ್ನೆಲ್ಲಾ ನೋಡಿದಾಗ ನಿಜಕ್ಕೂ  ಬೆರಗಾಗುವುದು!  ನಾಯಿಯ ಮಾಲಕ/ಮಾಲಕಿಯರು ಅದನ್ನು ಸುತ್ತಾಡಿಸಲು ಹುಲ್ಲು ಮೈದಾನಕ್ಕೆ ಕರೆ ತಂದರೆ, ಕೈಯಲ್ಲಿ ಪ್ಲಾಸ್ಟಿಕ್ ಲಕೋಟೆ ಹಿಡಿದು,  ಅವುಗಳು ಮಾಡಿದ  ಗಲೀಜನ್ನು ಅವರೇ ಎತ್ತೊಯ್ಯಬೇಕು.. ಕಡ್ಡಾಯವಾಗಿ! ತಪ್ಪಿದರೆ ಸಿಕ್ಕಾಪಟ್ಟೆ ದಂಡ! ಅವುಗಳಿಗೆ ಚಡ್ಡಿ, ಅಂಗಿ ತೊಡಿಸಿ ತರುವುದನ್ನು ಕಂಡಾಗ ನಗು ಬರುವುದು..ಹಾಗೆಯೇ ಆಶ್ಚರ್ಯವೂ ಉಂಟಾಗುವುದು!

ಅಲ್ಲಿಯವರ ಪ್ರಾಣಿ ಪ್ರೀತಿಗೆ ನನಗಾದ ಅನುಭವವು ತುಂಬಾ ತಮಾಷೆಯಾಗಿದೆ. ಎಂದೂ ನಾಯಿ ಬೊಗಳುವ ಸದ್ದು ಕೇಳಿಸದವಳಿಗೆ ಆ ದಿನ ಪಕ್ಕದ ಮನೆಯಲ್ಲಿ  ನಾಯಿಯೊಂದು ಸಣ್ಣದಾಗಿ ಬೊಗಳುವುದು ಕೇಳಿಸಿತು.. ಅದು ಒಂದೆರಡು ದಿನಗಳ ಕಾಲ ಮುಂದುವರೆಯಿತು. ಆಗಲೇ ಒಮ್ಮೆ ನಮ್ಮ ಮನೆಯ ಮುಂಭಾಗದ ಹುಲ್ಲು ಹಾಸಿನ ಮೇಲೆ  ಮಹಿಳೆಯೊಬ್ಬರು ನಡೆದಾಡುತ್ತಿದ್ದರು, ತಮ್ಮ ಬಿಳಿಯ ನಾಯಿಯೊಂದಿಗೆ. ನನ್ನೊಡನೆ ಅವರು, “ ನನ್ನ ಮಗು ಎರಡು ದಿನಗಳಿಂದ ತುಂಬಾ ಅಳುತ್ತಿದೆ.” ಎಂದರು. ನಾನು, “ಹೌದಾ.. ಪಾಪ! ನಿಮಗೆಷ್ಟು ಜನ ಮಕ್ಕಳು?” ಎಂದು ಕೇಳಿದಾಗ, “ನೋಡಿ, ಇದೇ ನನ್ನ ಮಗು” ಎಂದು ಅವರಲ್ಲಿದ್ದ ನಾಯಿಯನ್ನು ತೋರಿಸಿದರು! ನನಗೆ ಏನು ಹೇಳಬೇಕೆಂದು ತಿಳಿಯದೆ  ಬೆಪ್ಪಾದೆ. 

ಅಲ್ಲಿಯ ಬೆಕ್ಕುಗಳು  ಗಾತ್ರದಲ್ಲಿ ನಮ್ಮಲ್ಲಿಯ  ಬೆಕ್ಕಿಗಿಂತ ಸುಮಾರು ನಾಲ್ಕು ಪಟ್ಟು ದೊಡ್ಡವು. ನೋಡಲು ಮುದ್ದಾಗಿರುವುದಕ್ಕಿಂತ ಹೆಚ್ಚು ಭಯ ಹುಟ್ಟಿಸುವಂತಿವೆ. ಪ್ರಾಣಿಗಳಿಗೆ ಏನಾದರೂ ಅಪಾಯವಾದರೆ ಇಡೀ ಪೋಲೀಸ್ ಇಲಾಖೆಯೇ ಸೇರಿ, ಹರಸಾಹಸ ಪಟ್ಟು ರಕ್ಷಿಸಲು ಹೆಣಗುವರು. ನಮ್ಮಲ್ಲಿ  ವಾಹನದಡಿಗೆ ಬಿದ್ದು ಬೀದಿಯಲ್ಲೇ ಪ್ರಾಣಬಿಡುವ ಮನುಷ್ಯರನ್ನೇ ಕೇಳುವವರಿಲ್ಲ.. ಅಲ್ಲವೇ? ಜೀವಿಗಳ ಮೇಲೆ ಅಲ್ಲಿಯ ಜನರ ಪ್ರೀತಿ ನಿಜಕ್ಕೂ ಮೆಚ್ಚುವಂತಹದು. ರಸ್ತೆಯಲ್ಲಿ ಯಾವುದೇ ಪ್ರಾಣಿಗಳೂ ಅಡ್ಡಾಡುವುದಿಲ್ಲ.

ಅಲ್ಲಿ, ನಮ್ಮಲ್ಲಿಯಂತೆ ಯಾರೂ ದನ ಸಾಕುವುದಿಲ್ಲ..  ಆದರೆ ಅವುಗಳನ್ನು ಸರಕಾರವೇ ಸಾವಿರಾರು ಸಂಖ್ಯೆಗಳಲ್ಲಿ  ಒಂದೇ ಕಡೆ ಸಾಕಿ ಹಾಲು ಸರಬರಾಜು ಮಾಡುವುದು. ಅವುಗಳ ಮಾಂಸ ಅಲ್ಲಿಯವರ ಆಹಾರವೂ ಹೌದು. ಬಹು ದೊಡ್ಡ ಗಾತ್ರದ ಇವುಗಳ ಮೇವಿಗಾಗಿಯೇ ಹೆಕ್ಟೇರ್ ಗಟ್ಟಲೆ ಜಾಗಗಳಲ್ಲಿ ಹುಲ್ಲುಗಾವಲಿದೆ. ಹಾಲನ್ನು ಹೆಚ್ಚಾಗಿ ನಮ್ಮಲ್ಲಿಯಂತೆ ಪ್ಯಾಕೆಟ್ ನಲ್ಲಿ ಮಾರದೆ, ತರಹೇವಾರು ಕ್ಯಾನ್ ಗಳಲ್ಲಿ ಮಾರುವರು. ಈ ಹಾಲಿನಲ್ಲಿ ಬೆಣ್ಣೆಯೇ ಇರುವುದಿಲ್ಲ…ಯಾಕೆಂದರೆ, ಅದರಲ್ಲಿರುವ ಕೊಬ್ಬನ್ನು ಪ್ರತ್ಯೇಕಿಸಿ ಬೆಣ್ಣೆ ಮಾಡಿ ಮಾರುವರು. ನೋಡಲು ಸ್ಲ್ಯಾಬ್ ಐಸ್ ಕ್ರೀಂನಂತಿರುವ, ಚಂದಕ್ಕೆ ಪ್ಯಾಕ್ ಮಾಡಿದ ಬೆಣ್ಣೆಯಿಂದ ತುಪ್ಪವನ್ನು ನಾವು ಮನೆಯಲ್ಲೇ ತಯಾರಿಸಬಹುದು…ಆದರೆ ನಮ್ಮೂರಿನ ತುಪ್ಪದ ರುಚಿ ಇರುವುದಿಲ್ಲ. ಹೆಚ್ಚು ಹಾಲು ಪಡೆಯಲು ಆಕಳುಗಳಿಗೆ ಯಾವುದೋ ಔಷಧಿಯನ್ನು ಚುಚ್ಚುವರು. ಅಂತಹ ಹಾಲನ್ನು ಕುಡಿದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ  ಉಂಟಾಗುವ ಬಗ್ಗೆ ಈಗೀಗ ಜನರಲ್ಲಿ ಎಚ್ಚರಿಕೆ ಮೂಡಲಾರಂಭಿಸಿದೆ ಎನ್ನಬಹುದು. ಆದ್ದರಿಂದ ಸಾವಯವದ ಖಯಾಲಿ ಅಮೆರಿಕದಲ್ಲೂ ಆರಂಭವಾಗಿದೆ..ನಮ್ಮಂತೆ.. ಬರೇ ಹುಲ್ಲು ತಿಂದ ಹಸುವಿನ ಹಾಲೆಂದು ಪ್ರತ್ಯೇಕವಾದ, ಆದರೆ ಬಹಳ ತುಟ್ಟಿಯಾದ  ಹಾಲು ಈಗ ಅಂಗಡಿಗಳಲ್ಲಿ ಲಭ್ಯ!              

 ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ:  http://surahonne.com/?p=34738

ಮುಂದುವರಿಯುವುದು………

-ಶಂಕರಿ ಶರ್ಮ, ಪುತ್ತೂರು.

8 Responses

  1. ನಿಮ್ಮ ಅಮೇರಿಕಾ ಪ್ರವಾಸ ಕಥನ ಚೆನ್ನಾಗಿದೆ ತಂಗೀ ಶಂಕರಿ ಶರ್ಮ.

    • ಶಂಕರಿ ಶರ್ಮ says:

      ತಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು ವಿಜಯಕ್ಕಾ

  2. ನಾಗರತ್ನ ಬಿ.ಆರ್. says:

    ಅಮೆರಿಕಾ ಪ್ರವಾಸ ಕಥನದ ನಿರೂಪಣೆ ಸೊಗಸಾಗಿ ಅನಾವರಣವಾಗುತ್ತಿದೆ.ಧನ್ಯವಾದಗಳು ಮೇಡಂ.

    • ಶಂಕರಿ ಶರ್ಮ says:

      ತಮ್ಮ ಪ್ರೀತಿಯ ಪ್ರತಿಕ್ರಿಯೆ ಮುದನೀಡಿತು ..ಧನ್ಯವಾದಗಳು ಮೇಡಂ

  3. ನಯನ ಬಜಕೂಡ್ಲು says:

    ಸೊಗಸಾಗಿದೆ ಪ್ರವಾಸ ಕಥನ

  4. Dr Krishnaprabha M says:

    ಒಳ್ಳೊಳ್ಳೆಯ ವಿಷಯಗಳುಗೊತ್ತಾಗುತ್ತಿವೆ. ಚಂದದ ಲೇಖನ

  5. B c n murthy says:

    ಅಮೆರಿಕ ಪ್ರವಾಸ ಕಥನ ಎಂದಿನಂತೆ ಚೆನ್ನಾಗಿ ಮೂಡಿಬಂದಿದೆ. ಮಾಲಕ ಎಂಬುದು ಬಹುಶಃ ಮಾಲೀಕ ಎಂದಾಗಬೇಕಿತ್ತೇನೋ ,ಮಾಲೀಕರು ಎಂದರೆ ಸ್ತ್ರೀ ಪುಲ್ಲಿಂಗಗಳೆರಡಕ್ಕೂ ಅನ್ವಯಿಸಬಹುದು. ಅನ್ಯತಾ ಭಾವಿಸಬೇಡಿ, ತಪ್ಪಿದ್ದರೆ ಕ್ಷಮೆಯಿರಲಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: