ಅಂಗುಷ್ಠದ ಸುತ್ತ
ಅಂಗುಷ್ಠ ಎನ್ನುವುದು ಕೈಯ ಹೆಬ್ಬೆರಳಿಗಷ್ಟೇ ಅಲ್ಲ, ಕಾಲಿನ ಹೆಬ್ಬೆರಳಿಗೂ ಅನ್ವಯ. ನಾವು ಕೈಯ ಹೆಬ್ಬೆರಳಿಗೆ ತಳುಕು ಹಾಕುವುದಾದರೂ ಕಾಲಿನ ಹೆಬ್ಬೆರಳಿಗೂ ಹೆಚ್ಚಿನ ಪ್ರಾಶಸ್ತ್ಯವಿರುವುದು ಕಾಣಬರುತ್ತದೆ. ರಾಮಾಯಣ ಹಾಗೂ ಮಹಾಭಾರತ ಕೆಲವು ಪ್ರಸಂಗಗಳಿಂದ ಈ ಲೇಖನ ಪ್ರಾರಂಭಿಸುವುದು ಸೂಕ್ತ ಎನಿಸುತ್ತದೆ.
ಮಹಾಭಾರತ ಯುದ್ಧಕ್ಕೆ ಮೊದಲು ಸಂಧಾನಕ್ಕಾಗಿ ಕೃಷ್ಣ ಕೌರವರನ್ನ ಭೇಟಿಯಾಗಲು ಮೊದಲು ವಿದುರನ ಮನೆಯಲ್ಲಿ ರಾತ್ರಿಯನ್ನು ಕಳೆಯುತ್ತಾನೆ. ಮಾರನೇ ದಿನ ಆಸ್ಥಾನಕ್ಕೆ ಕೃಷ್ಣ ಆಗಮಿಸಿದಾಗ ಎಲ್ಲರೂ ಎದ್ದು ನಿಂತು ವಂದಿಸಿದರೆ ದುರ್‍ಯೋಧನ ಮೊದಲೇ ಕೋಪದಿಂದ ಇದ್ದಿದ್ದರಿಂದ ಏಳದೇ ಸಿಂಹಾಸನಾರೂಢನಾಗಿರುತ್ತಾನೆ. ಈತನ ಕೋಪಕ್ಕೆ ಕಾರಣ ಕೃಷ್ಣನು ತನ್ನನ್ನು ಬಿಟ್ಟು ವಿದುರನ ಆತಿಥ್ಯ ಸ್ವೀಕರಿಸಿದ್ದು. ಈತನ ಗರ್ವಭಂಗಮಾಡಲೆಂದು ಕೃಷ್ಣ ತನ್ನ ಬಲಗಾಲಿನ ಅಂಗುಷ್ಠವನ್ನ ನೆಲಕ್ಕೆ ಒತ್ತುತ್ತಾನೆ. ಆ ರಭಸಕ್ಕೆ ಭೂಮಿ ನಡುಗಿ,ಸಿಂಹಾಸನ ಅದುರಿ ದುರ್ಯೋಧನ ಕೆಳಗೆ ಬೀಳುತ್ತಾನೆ, ನೇರವಾಗಿ ಕೃಷ್ಣನ ಪದತಲಕ್ಕೆ.
ಮುಂದೆ ಮಹಾಭಾರತ ಯುದ್ಧ ಕುರುಕ್ಷೇತ್ರದಲ್ಲಿ ಪ್ರಾರಂಭ. ಕರ್ಣ, ಅರ್ಜುನರ ಭೀಕರ ಕಾಳಗದಲ್ಲಿ ಕರ್ಣ ಸರ್ಪಾಸ್ತ್ರವನ್ನು ಅರ್ಜುನನ ಕೊರಳಿಗೆ ಸರಿಯಾಗಿ ಗುರಿಯಿಟ್ಟು ಪ್ರಯೋಗಿಸುತ್ತಾನೆ. ಬಾಣ ತಾಗಿದರೆ ಅರ್ಜುನನ ಅಂತ್ಯ ನಿಶ್ಚಿತ. ಕೃಷ್ಣ ಇದನ್ನ ಮನಗಂಡು ತನ್ನ ಬಲಗಾಲಿನ ಅಂಗುಷ್ಠದಿಂದ ರಥವನ್ನು ಅದುಮುತ್ತಾನೆ. ರಥ ಆರಿಂಚು ನೆಲದ ಕೆಳಗೆ ಕುಸಿಯುತ್ತದೆ. ಇದರ ಪರಿಣಾಮ ಬಾಣ ಅರ್ಜುನನ ಕಿರೀಟವನ್ನು ಹಾರಿಸಿಕೊಂಡು ಹೋಗುತ್ತದೆ. ಅರ್ಜುನನ ಪ್ರಾಣ ಉಳಿಯಿತು. ಅರ್ಜುನನಿಗೆ ಇದು ಗೊತ್ತಾಗಲೇ ಇಲ್ಲವೆಂಬುದು ಒಂದು ರಹಸ್ಯ.
ಮುಂದೆ ಕೃಷ್ಣನ ಅವತಾರ ಮುಗಿದ ಮೇಲೆ ಗಾಂಧಾರಿಯ ಶಾಪದಂತೆ ಯಾದವರು ಸರ್ವನಾಶವಾದ ಮೇಲೆ, ಕೃಷ್ಣ ಕೊನೆಗಾಲದಲ್ಲಿ ವನವಾಸಿಯಾಗಿದ್ದಾಗ ಮರದ ಕೆಳಗೆ ಒರಗಿ ಕಾಲು ಚಾಚಿ ಕುಳಿತಿರುವಾಗ, ಕೃಷ್ಣನ ಅಂಗುಷ್ಠವನ್ನು ಜಿಂಕೆಯ ಕಣ್ಣು ಎಂದು ಭಾವಿಸಿ ಓರ್ವ ಬೇಟೆಗಾರ ಬೇಡನು ಬಾಣ ಬಿಟ್ಟು ಕೃಷ್ಣನ ಅಂತ್ಯ ಆಗುತ್ತದೆ. ಗುಜರಾತಿನ ಭಾಲ್ಕತೀರ್ಥ್ ಎಂಬ ಸ್ಥಳದಲ್ಲಾದ ಈ ಪ್ರಸಂಗ ಅಲ್ಲಿ ಹೋದಾಗ ಮೈನವಿರೇಳಿಸುತ್ತದೆ. ಒಂದು ಸುಂದರ ತಾಣ. ಅಂಗುಷ್ಠವೇ ಪ್ರಧಾನವಾಗಿ ಕಾಣುವ ಕೃಷ್ಣನ ಶಯನಾಕೃತಿಯ ಮೂರ್ತಿ ಅದ್ಭುತವಾಗಿ ಪ್ರತಿಷ್ಠಾಪಿಸಲ್ಪಟ್ಟಿದೆ.
ರಾಮಾಯಣದಲ್ಲೂ ಅಂಗುಷ್ಠಗಳ ಪ್ರಸಂಗ ರೋಚಕಕಾರಿಯಾದುದು. ವನವಾಸದ ಸಮಯದಲ್ಲಿ ರಾಮನ ಹೆಬ್ಬೆಟ್ಟು ಶಿಲಾಪ್ರತಿಮೆಗೆ ತಗಲಿ ಅಹಲ್ಯೆಯ ಶಾಪ ವಿಮೋಚನೆಯಾದ ಕಥೆ ಸರ್ವವಿದಿತ. ಹಾಗೆಯೇ ವಾಲಿಯು ಬಿಸಾಡಿದ ದುಂದುಭಿ ಎಂಬ ರಾಕ್ಷಸದ ಪರ್ವತಾಕಾರದ ದೇಹವನ್ನು ರಾಮ ತನ್ನ ಕಾಲಿನ ಹೆಬ್ಬೆರಳಿನಿಂದ ದಶಯೋಜನ ದೂರಕ್ಕೆ ಝಾಡಿಸಿದ ಕಥೆ ನಿಜಕ್ಕೂ ರೋಚಕ.
ಪರಮೇಶ್ವರನು ತನ್ನ ಅಂಗುಷ್ಠದಿಂದ ಕೈಲಾಸ ಪರ್ವತವನ್ನು ಅದುಮಿ ಹಿಡಿದು ರಾವಣದ ಅಹಂಕಾರವನ್ನು ದಮನ ಮಾಡಿದ ಒಂದು ಪ್ರಸಂಗವೂ ಇದೆ. ಹಿಂದೆ ಋಷಿ ಮುನಿಗಳು ಕಾಲುಗಳ ಹೆಬ್ಬೆರಳಿನಲ್ಲೇ ನಿಂತು ಘೋರ ತಪಸ್ಸನ್ನಾಚರಿಸುತ್ತಿದ್ದರಂತೆ. ರಾಕ್ಷಸರೂ ಇದಕ್ಕೆ ಹೊರತಲ್ಲ. ತಮ್ಮ ಇಷ್ಟದೇವತೆಯ ಪ್ರಸನ್ನತೆಗೆ ಈ ವಿಧಾನವನ್ನೇ ಅನುಸರಿಸುತ್ತಿದ್ದರೆಂಬ ಮಾತಿದೆ. ಹೀಗೆ ಪುರಾಣ ಕಾಲದಿಂದಲೂ ಕಾಲಿನ ಅಂಗುಷ್ಟದ ಪ್ರಾಧಾನ್ಯತೆ ಅಲ್ಲಲ್ಲಿ ಕಂಡು ಬರುತ್ತದೆ.
ಗುರುಹಿರಿಯರಿಗೆ ನಮಸ್ಕರಿಸುವಾಗ ನಾವು ಅವರ ಅಂಗುಷ್ಠವನ್ನೂ ಹಿಡಿದು ನಮಸ್ಕರಿಸಬೇಕೆಂಬುದು ಒಂದು ಪದ್ಧತಿ. ಹಿರಿಯರ ಆಶೀವಾದ, ಪುಣ್ಯ, ತಪಶ್ಶಕ್ತಿ ಎಲ್ಲವೂ ಈ ಅಂಗುಷ್ಟದ ಮೂಲಕ ನಮ್ಮನ್ನು ಸೇರುತ್ತವೆ. ಎಂಬ ಬಲವಾದ ನಂಬಿಕೆ ಇದೆ. ಕೃಷ್ಣ ತನ್ನ ಬಾಲ್ಯಾವಸ್ಥೆಯಲ್ಲಿ ತನ್ನ ಅಂಗುಷ್ಠವನ್ನು ಚೀಪುತ್ತಿರುವ ನೋಲ ರಮಣೀಯ. ಇದರಲ್ಲಿ ಹಲವಾರು ತತ್ವಗಳು ಅಡಕವಾಗಿದೆ. ನವತರುಣಿಯರು ತಮ್ಮ ಬಲಗಾಲಿನ ಅಂಗುಷ್ಟವನ್ನು ಕೆರೆಯುತ್ತಿದ್ದರೆ ಮದುವೆಗೆ ಒಪ್ಪಿದ್ದಾರೆಂಬುದು ಅನುಭವಿಗಳ ನುಡಿ. ಪ್ರಾಣಿಗಳು ತಮ್ಮ ಅಂಗುಷ್ಟ ಕೆರೆದರೆ ಜಗಳಕ್ಕೆ ಆಹ್ವಾನ ಎಂಬುದೂ ನಿಜ ಹಾಗೆಯೇ ಇನ್ನು ಹೆಬ್ಬೆರಳಿನ ಬಗ್ಗೆಯೂ ರೋಚಕವಾದ ಸಂಗತಿಗಳು ಪುರಾಣಗಳಲ್ಲಿ ಲಭ್ಯ. ಮಹಾಭಾರತದಲ್ಲಿ ಏಕಲವ್ಯನ ಬಿಲ್ವಿದ್ಯೆಯನ್ನು ನೋಡಿ ದ್ರೋಣಾಚಾರ್‍ಯರು ದಂಗಾಗಿ, ಇವನು ಅರ್ಜುನನಿಗಿಂತ ಮಿಗಿಲಾದ ಪ್ರವೀಣನಾಗುತ್ತಾನೆಂಬುದರಲ್ಲಿ ಸಂಶಯವೇ ಇಲ್ಲ ಎಂದು ಮನಗಂಡು, ಅವನಿಂದ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಕೇಳುತ್ತಾನೆ. ಅಲ್ಲಿಗೆ ಏಕಲವ್ಯನ ಬಿಲ್ವಿದ್ಯೆಯ ಅವಸಾನವಾಗುತ್ತದೆ. ಇಲ್ಲಿ ಬಿಲ್ಲನ್ನು ಹೆದೆಯೇರಿಸಲು ಹೆಬ್ಬೆಟ್ಟೇ ಪ್ರಾಮುಖ್ಯ ಎಂಬುದು ವಿಶೇಷ.
ಒಂದು ವೇಳೆ ನಮ್ಮ ಹೆಬ್ಬೆರಳು ಇಲ್ಲದಿದ್ದರೆ ನಮ್ಮ ದೈನಂದಿನ ಹಲವಾರು ಚಟುವಟಿಕೆಗಳನ್ನು ಮಾಡಲು ಸಾಧ್ಯವೇ ಇಲ್ಲ. ನಮ್ಮ ಟಿ.ವಿ. ರಿಮೋಟ್, ಕಂಪ್ಯೂಟರ್, ಮೊಬೈಲ್ ಎಲ್ಲ ಪರಿಸರಕ್ಕೂ ಅದರ ಬಳಕೆಗೆ ಹೆಬ್ಬೆಟ್ಟೇ ಮುಖ್ಯ. ಸಾಮಾಜಿಕ ಜಾಲತಾಣದ ಫೇಸ್ ಬುಕ್‌ನ ಲೈಕ್ ಚಿಹ್ನೆ ಹೆಬ್ಬೆಟ್ಟೇ. ಇದು ಬಹಳ ಜನಪ್ರಿಯವಾದ ಚಿಹ್ನೆ. ಪೂಜೆ ಮಾಡುವಾಗ ಜಪಮಣಿ ಎಣಿಸುವುದೂ ಹೆಬ್ಬೆಟ್ಟೇ. ಬನ್ನಂಜೆ ಗೋವಿಂದಾಚಾರ್‍ಯರ ಪ್ರಕಾರ ಹೆಬ್ಬೆರಳು ಜೀವಾತ್ಮ. ಕಿರುಬೆರಳು, ಉಂಗುರದ ಬೆರಳು, ಮಧ್ಯದ ಬೆರಳು ಕ್ರಮವಾಗಿ ಅವಿದ್ಯಾ, ಕಾಮ ಮತ್ತು ಕರ್ಮ. ಆದ್ದರಿಂದ ತೋರು ಬೆರಳೇ ಎಲ್ಲಕ್ಕಿಂತ ಶ್ರೇಷ್ಟ ಎಂಬುದು ಅವರ ಅಭಿಮತ.
ನಮ್ಮ ಈಗಿನ ಸಂಸ್ಕೃತಿಯಲ್ಲಿ ಕೂಡ ಹೆಬ್ಬೆರಳಿಗೇ ಪ್ರಾಧಾನ್ಯ. ನಮ್ಮ ಎಲ್ಲಾ ವಹಿವಾಟಿನ ನೊಂದಣಿ ಮಾಡುವಾಗ, ಸಬ್‌ರಿಜಿಸ್ಟ್ರಾರ್‌ರವರ ಕಛೇರಿಯಲ್ಲಿ ನಮ್ಮ ಎಡಗೈ ಹೆಬ್ಬೆಟ್ಟಿನ ಗುರುತೇ ಅಲ್ಲಿ ಪ್ರಧಾನವಾದ ಒಂದು ದಾಖಲು. ಶತಮಾನಗಳಿಂದ ನಡೆದು ಬಂದ ಈ ಪದ್ಧತಿ ಇವತ್ತಿಗೂ ಬದಲಾಗಿಲ್ಲ. ಅನಕ್ಷರಸ್ಥರು ತಮ್ಮ ಅಹವಾಲಿಗೆ, ಚೆಕ್ ಇತ್ಯಾದಿ ಕಾಗದಗಳಿಗೆ ಎಡಗೈ ಹೆಬ್ಬೆಟ್ಟಿನ ಗುರುತೇ ಅದಕ್ಕೆ ಪ್ರಮಾಣೀಕೃತ ದಾಖಲು ಬ್ಯಾಂಕ್, ಅಂಚೆ ಕಛೇರಿ, ಸಬ್‌ರಿಜಿಸ್ಟ್ರಾರ್ ಆಫೀಸ್, ಕೋರ್ಟ್ ಎಲ್ಲ ಕಡೆ ಈ ಹೆಬ್ಬೆರಳಿನ ಮಹತ್ವ ವರ್ಣನಾತೀತ.
ಬಡಗಿಗಳು ತಮ್ಮ ಮರಮಟ್ಟುಗಳ ಅಳತೆಗಳನ್ನು ಇವತ್ತಿಗೂ ಹೆಬ್ಬೆಟ್ಟನ್ನೇ ಆಧಾರವಾಗಿಟ್ಟುಕೊಂಡು ಮಾಡುವುದು ಸಾಮಾನ್ಯ. ಶತಮಾನಗಳಿಂದ ಪ್ರಾರಂಭವಾದ ಈ ಹೆಬ್ಬೆಟ್ಟಿನ ಅಳತೆ ಇಂದೂ ಮುಂದುವರಿದಿರುವುದು ನಿಜಕ್ಕೂ ಆಶ್ಚರ್‍ಯಕರ. ಅದರಿಂದಲೇ ‘ರೂಲ್ ಆಫ್ ಥಂಬ್’ ಎಂಬ ನುಡಿಗಟ್ಟು ಬಂದಿದೆ ಎಂಬ ಮಾತಿದೆ. ಹತ್ತೊಂಬತ್ತನೇ ಶತಮಾನದಲ್ಲಿ ಯುರೋಪಿನಲ್ಲಿ ಒಂದು ವಿಚಿತ್ರವಾದ ಕಾನೂನೂ ಜಾರಿಯಲ್ಲಿತ್ತಂತೆ. ಅದರಂತೆ ಗಂಡನಾದವನು ಹೆಂಡತಿಯನ್ನು ಅಂಗುಷ್ಟಕ್ಕಿಂತ ದಪ್ಪನಾದ ಕೋಲಿನಿಂದ ಹೊಡೆಯುವಂತಿರಲಿಲ್ಲ. ಅಕಸ್ಮಾತ್ ತಪ್ಪಿದರೆ ಅವನಿಗೆ ರೂಲ್ ಆಫ್ ಥಂಬ್‌ನ ಅನ್ವಯ ಶಿಕ್ಷಾರ್ಹನಾಗುತ್ತಿದ್ದನಂತೆ. ಇದರ ಸತ್ಯಾಂಶ ಹೇಗೂ ಪ್ರಶ್ನಾರ್ಹ. ಇನ್ನೊಂದು ಐತಿಹ್ಯದ ಪ್ರಕಾರ ಗ್ರೀಕ್‌ನ ಪ್ರಖ್ಯಾತ ದೇವತೆ ಹರಿಕ್ಯುಲಸ್‌ನ ಪ್ರತಿಮೆಯ ಜನ್ನತ್ಯವನ್ನೂ ಅದರ ಹೆಬ್ಬೆರಳಿನ ಪ್ರಮಾಣದಿಂದ ಅಳೆಯಬಹುದು. ಅವರ ಪ್ರಕಾರ ಹೆಬ್ಬೆರಳೇ ಬೇರೆ ಅಂಗಾಂಗಗಳ ಅಳತೆಗಳಲ್ಲಿ ಪ್ರಧಾನವಾದುದು ಎಂಬುದು.
ಪ್ರಸ್ತುತ ಕಾಲದಲ್ಲೂ ಊಟ ಮುಗಿದ ಬಳಿಕ ಎಡಗೈಯ ಹೆಬ್ಬೆಟ್ಟನ್ನು ನೆಲಕ್ಕೆ ಒತ್ತಿ ಅನ್ನಕೊಟ್ಟ ದೇವನಿಗೆ ಕೃತಜ್ಞತೆ ಸಲ್ಲಿಸುವ ಮಂತ್ರವಿದೆ. ಇದನ್ನು ಸಾಂಪ್ರದಾಯಕದವರು ತಪ್ಪದೆ ಪಾಲಿಸುತ್ತಾರೆ. ಹೆಬ್ಬೆಟ್ಟು ಮಾನವ ದೇಹದಲ್ಲಿ ಒಂದು ಪ್ರಧಾನ ಅಂಗ ಹಾಗೂ ಪಾತ್ರವಹಿಸುತ್ತದೆ. ಸಂಧಿವಂದನೆ ಸಮಯದಲ್ಲಿ ಹೆಬ್ಬೆರಳಿನ ಪಾತ್ರ ಪ್ರಮುಖವಾದದ್ದು. ಪಾದರಕ್ಷೆಗಳಿಗೆ ಹಿಡಿತ ಸಾಧಿಸಲು ಮಾಡುವ ಸುರುಳಿಯಾಕಾರದ ಉಂಗುರಗಳು ಹೆಬ್ಬೆರಳುಗಾತ್ರಕ್ಕೆ ಸರಿಹೊಂದುವಂಥದ್ದೆ ! ನಮ್ಮ ಯಾವುದಾದರೂ ಕಾರ್‍ಯದಲ್ಲಿ ಜಯಶೀಲರಾದರೆ ನಮ್ಮ ಹೆಬ್ಬೆಟ್ಟನ್ನು ಮೇಲೆತ್ತಿ ತೋರಿಸಿದರೆ ಉಳಿದವರಿಗೆ ಬಾಯಲ್ಲಿ ಏನನ್ನು ಹೇಳುವ ಅವಶ್ಯಕತೆ ಇಲ್ಲ.
ಡಾರ್ವಿನನ ವಿಕಾಸವಾದದಲ್ಲಿ ಒಂದು ಪ್ರತಿಪಾದನೆಯ ಪ್ರಕಾರ ಕೇವಲ ಮಾನವನಲ್ಲಿ ಮಾತ್ರ ಹೆಬ್ಬೆರೆಳು ಪ್ರಭುದ್ಧವಾಗಿ ಬೆಳೆದಿರುವುದು ಕಾಣಬರುತ್ತದೆ. ಬೇರೆಲ್ಲ ಬೆರಳುಗಳು ಹೆಬ್ಬೆರಳನ್ನು ತಾಕಬಲ್ಲುದು. ಇದು ಯಾವ ಇತರೆ ಪ್ರಾಣಿಗಳಲ್ಲಿ ಸಾzs ವಿಲ್ಲದ್ದು. ಇನ್ನು ಮುದ್ರೆ ಎಂಬ ಬೆರಳು ಚಿಕಿತ್ಸಾ ಕ್ರಮದಲ್ಲಿ ಎಲ್ಲ ಮುದ್ರೆಗಳಲ್ಲೂ ಹೆಬ್ಬೆರಳನ್ನು ಉಪಯೋಗಿಸುವುದು ಕಂಡು ಬರುತ್ತದೆ. ಈ ಚಿಕಿತ್ಸಾ ಕ್ರಮ ಬಹಳ ಪರಿಣಾಮಕಾರಿ ಹಾಗೂ ಜನಪ್ರಿಯವಾಗುತ್ತಿದೆ.
ಹೀಗೆ ಅಂಗುಷ್ಟಗಳ ಪ್ರಭಾವ ವರ್ಣನಾತೀತ. ಪುರಾಣ ಕಾಲದಿಂದ ಇಂದಿನವರೆಗೂ ಇವುಗಳು ಉಪಯೋಗ, ಪ್ರಭಾವ ನಿಜಕ್ಕೂ ಆಶ್ಚರ್ಯ ತರಿಸುವಂಥಹುದು. ಕವಿಗಳಿಗೂ ಅಂಗುಷ್ಠಗಳು ಸಾಕಷ್ಟು ಕಾವ್ಯ ರಚನೆಗೆ ಸ್ಪೂರ್ತಿ ನೀಡಿದೆ. ಅಂಗುಷ್ಠಗಳ ತಿರಸ್ಕಾರ ಬೇಡ. ಅದನ್ನು ಆದಷ್ಟು ಹಾನಿಯಾಗದಂತೆ ನೋಡಿಕೊಳ್ಳೋಣ, ಪ್ರೀತಿಸೋಣ, ನೀವೇನಂತೀರಿ?
-ಕೆ. ರಮೇಶ್
ಚಂದದ, ಹಲವಾರು ಮಾಹಿತಿಗಳಿಂದ ಕೂಡಿದ ಬರಹ.
ಧನ್ಯವಾದಗಳು ಮೇಡಂ
ಉಪಯುಕ್ತ ಮಾಹಿತಿಗಳನ್ನು ಒಳಗೊಂಡ ಬರಹ ಚೆನ್ನಾಗಿದೆ ಸಾರ್.
ಭಾಲ್ಕ ತೀರ್ಥ ನೋಡಿದ್ದೇವೆ.
…….ಸಂಕ್ಷಿಪ್ತವಾಗಿ ಬಹಳಷ್ಟು ಮಾಹಿತಿ ನೀಡಿದ್ದಾರೆ-ಲೇಖಕರು…ತುಂಬಾ ತಿಳಿದವರೇ ಸರಿ…ಧನ್ಯವಾದಗಳು..
ಅಂಗುಷ್ಟದ ಬಗ್ಗೆ ಬಹಳಷ್ಟು ಮಾಹಿತಿಗಳನ್ನೊಳಗೊಂಡ ಸ್ವಾರಸ್ಯಪೂರ್ಣ ಲೇಖನ. ಯೋಗಾಭ್ಯಾಸದ ಕೆಲವು ಆಸನಗಳಲ್ಲಿ ಕಾಲಿನ ಅಂಗುಷ್ಟವು ಮಹತ್ವದ ಪಾತ್ರ ವಹಿಸುತ್ತದೆ… ಉದಾಹರಣೆಗೆ ವೃಕ್ಷಾಸನ. ನಮ್ಮ ದೇಹದ ಸಮತೋಲನಕ್ಕೆ ಈ ಅಂಗ ಬಹಳ ಮುಖ್ಯ.
ಚೋಟುದ್ದಾ ಬೆರಳಿನ ಮಾರುದ್ದಾ ವಿವರಣೆ ಮಾಹಿತಿಪೂರ್ಣವಾಗಿ ಸ್ವಾರಸ್ಯಕರವಾಗಿದೆ. ಅಭಿನಂದನೆಗಳು.
ಅಂಗುಷ್ಟದ ಮಹತ್ವದ ಬಗ್ಗೆ ಸ್ವಾರಸ್ಯಕರವಾದ ಮಾಹಿತಿ ಧನ್ಯವಾದಗಳು