ಶಿಲೆಯನ್ನು ಕಲೆಯಾಗಿಸಿದ ಕಲೆಗಾರ: ‘ಶಿಲ್ಪಶ್ರೀ’.

Share Button
ತ.ರಾ.ಸುಬ್ಬರಾವ್

ಶ್ರೀ ತ.ರಾ.ಸುಬ್ಬರಾವ್ ಕೂಡ ಕನ್ನಡ ಕಾದಂಬರಿ ಸಾಮ್ರಾಟ ಶ್ರೀ ಅ.ನ.ಕೃಷ್ಣರಾಯರಂತೆ ಅತ್ಯಂತ ಜನಪ್ರಿಯತೆ ಗಳಿಸಿರುವ ಕಾದಂಬರಿಕಾರರು. ಕಾದಂಬರಿಗಳಲ್ಲದೆ ಇವರು ಇಪ್ಪತ್ತೊಂದು ಸಣ್ಣಕತೆಗಳನ್ನೂ ಬರೆದಿದ್ದಾರೆ. ಇವರ ಜನನ 1920, ಚಿತ್ರದುರ್ಗದಲ್ಲಿ.. ಕನ್ನಡದ ಪ್ರಸಿದ್ಧ ಪ್ರಾಧ್ಯಾಪಕರಾಗಿದ್ದ ತಳುಕಿನ ವೆಂಕಣ್ಣಯನವರ ತಮ್ಮ ರಾಮರಾಯರ ಪುತ್ರ. ಕೆಲಕಾಲ ಪತ್ರಿಕಾವೃತ್ತಿಯಲ್ಲಿದ್ದು ನಂತರ ಅದನ್ನು ಬಿಟ್ಟು ಪೂರ್ಣ ಲೇಖಕ ವೃತ್ತಿಯನ್ನೇ ಅವಲಂಬಿಸಿದರು. ಇವರ ಮೊದಲ ಕಾದಂಬರಿ ‘ಮನೆಗೆ ಬಂದ ಮಹಾಲಕ್ಷ್ಮಿ’ ಆಗಿನ ಕಾಲದಲ್ಲಿ ತೀವ್ರ ವಾದವಿವಾದಗಳನ್ನು ಹುಟ್ಟುಹಾಕಿತ್ತು. ಇವರು ಅ.ನ.ಕೃ.ರವರಂತೆ ಪ್ರಗತಿಶೀಲ ಸಾಹಿತ್ಯ ಪರಂಪರೆಗೆ ಸೇರಿದವರು. ಇವರ ಕಾದಂಬರಿಗಳಲ್ಲಿ ಸಾಮಾಜಿಕ, ಚಾರಿತ್ರಿಕ, ಪೌರುಷಪ್ರಧಾನ ವಸ್ತುವಿಷಯಗಳ ವೈವಿಧ್ಯತೆ ಕಂಡುಬರುತ್ತದೆ. ‘ಕೇದಿಗೆವನ, ಬೆಂಕಿಯಬಲೆ, ಬಿಡುಗಡೆಯ ಬೇಡಿ, ರಕ್ತತರ್ಪಣ, ನಾಗರಹಾವು, ಹಂಸಗೀತೆ, ಚಕ್ರತೀರ್ಥ, ಚಂದವಳ್ಳಿಯತೋಟ, ಗಾಳಿಮಾತು, ಚಂದನದಗೊಂಬೆ,‘ ಸಾಮಾಜಿಕ ಕಾದಂಬರಿಗಳು ಬಹಳ ಜನಪ್ರಿಯವಾದವು. ಕೆಲವು ಪ್ರಸಿದ್ಧ ಚಲನಚಿತ್ರಗಳಾಗಿ ಜನರ ಮನಸ್ಸಿಗೆ ಹತ್ತಿರವಾಗಿವೆ. ‘ನೃಪತುಂಗ, ಸಿಡಿಲಮೊಗ್ಗು, ಶಿಲ್ಪಶ್ರೀ’ ಆಕರ್ಷಕವಾದ ಚಾರಿತ್ರಿಕ ಕಾದಂಬರಿಗಳು. ಚಿತ್ರದುರ್ಗದ ಇತಿಹಾಸಕ್ಕೆ ಸಂಬಂಧಿಸಿದಂತೆ ಒಂದು ಕಾದಂಬರಿ ಮಾಲಿಕೆಯನ್ನೇ, ‘ಕಂಬನಿಯ ಕುಯಿಲು, ರಕ್ತರಾತ್ರಿ, ತಿರುಗುಬಾಣ, ವಿಜಯೋತ್ಸವ, ದುಗಾಸ್ತಮಾನ’ ರಚಿಸಿ ಅಭಿನಂದನೀಯರಾಗಿದ್ದಾರೆ.

ತ,ರಾ.ಸು. ಬರಹಗಲಲ್ಲಿ ವಿಶೇಷವಾಗಿ ಕಂಡುಬರುವುದು ಅವರ ಆಕರ್ಷಕ ಶೈಲಿ, ಭಾಷೆಯ ಸಮರ್ಥ ಬಳಕೆ, ವಿವರಣೆಗಳ ಮೂಲಕ ದೃಶ್ಯವನ್ನು ಓದುಗರ ಕಣ್ಮುಂದೆ ತಂದು ನಿಲ್ಲಿಸುವ ಕಲೆ. ಶಿಲ್ಪಶ್ರೀ ತ.ರಾ.ಸು.ರವರ ಕಾದಂಬರಿಗಳಲ್ಲಿ ಅತ್ಯಂತ ಮನೋಜ್ಞವಾದುದು. ಇಲ್ಲಿ ಚಾರಿತ್ರಿಕ ಸನ್ನಿವೇಶಗಳನ್ನು ತಮಗೆ ದೊರಕಿದ ಚೂರುಪಾರು ಮಾಹಿತಿಗಳೊಂದಿಗೆ ಕಲಾತ್ಮಕ ಕಲ್ಪನೆಯನ್ನು ಬೆರೆಸಿ ಕೃತಿಯನ್ನು ಸರ್ವರೂ ಇಷ್ಟಪಡುವ ರೀತಿಯಲ್ಲಿ ಸೃಷ್ಟಿಸಿದ್ದಾರೆ.

ಶ್ರವಣಬೆಳುಗೊಳದ ಇಂದ್ರಗಿರಿಯ ನೆತ್ತಿಯ ಮೇಲೆ ಸಹಸ್ರವರ್ಷಗಳಿಗೂ ಮಿಕ್ಕಿ ನಿರ್ಭಯದಿಂದ ತಲೆಯೆತ್ತಿ ನಿಂತಿರುವ ಭವ್ಯ ವೈರಾಗ್ಯಮೂರ್ತಿ ಬಾಹುಬಲಿಸ್ವಾಮಿಯು (ಗೊಮ್ಮಟೇಶ್ವರನು) ನೋಡುಗರಿಗೆ ಅಚ್ಚರಿಯನ್ನೂ, ಮನಸ್ಸಿಗೆ ಆನಂದವನ್ನೂ, ಎಲ್ಲ ಪ್ರಾಪಂಚಿಕ ಸುಖಸೌಲಭ್ಯಗಳಿಗಿಂತ ಕೈವಲ್ಯಜ್ಞಾನವೇ ಶ್ರೇಷ್ಠವೆಂಬ ಪಾರಮಾರ್ಥಿಕ ಸಂದೇಶವನ್ನು ಸಾರುತ್ತಲಿದೆ. ಇದರ ನಿರ್ಮಾಣದ ಇತಿಹಾಸವನ್ನು ಕಾದಂಬರಿಯ ರೂಪದಲ್ಲಿ ರಚನೆ ಮಾಡಲು ತ.ರಾ.ಸು ರವರಿಗೆ ಪ್ರೇರಣೆ ನೀಡಿದವರು ಶ್ರೇಷ್ಠ ಪಂಡಿತರು, ವಿಮರ್ಶಕರಾದ ಪ್ರೊ.ಡಿ.ಎಲ್.ನರಸಿಂಹಾಚಾರ್ಯರು, ಮತ್ತು ಪ್ರೊ. ತೀ.ನಂ.ಶ್ರೀಕಂಠಯ್ಯನವರು. ಅವರ ಸಲಹೆಯನ್ನು ಧನಾತ್ಮಕವಾಗಿ ಸ್ವೀಕರಿಸಿ ತ.ರಾ.ಸು ಶಿಲ್ಪಶ್ರೀ ಎಂಬ ಸುಂದರ ಕಾದಂಬರಿಯನ್ನು ರಚಿಸಿದ್ದಾರೆ.

ರಾಷ್ಟ್ರಕೂಟ ಸಾಮ್ರಾಜ್ಯದ ಚಕ್ರವರ್ತಿ ಕೃಷ್ಣರಾಜರು ದಕ್ಷಿಣದಿಕ್ಕಿನಲ್ಲಿ ತಮ್ಮ ವಿರುದ್ಧ ತಲೆಯೆತ್ತಿ ಯುದ್ಧ ಸಾರಿದ್ದ ಚೋಳರ ಹುಟ್ಟಡಗಿಸುವ ನಿರ್ಧಾರದಿಂದ ದಿಗ್ವಿಜಯ ಯಾತ್ರೆಗೆ ಸನ್ನದ್ಧನಾಗಿದ್ದ. ಸಮರಾಲೋಚನೆಗಾಗಿ ತನ್ನ ಸಾಮಂತರು, ಮಾಂಡಲೇಶ್ವರರನ್ನು ರಾಜಧಾನಿಗೆ ಆಹ್ವಾನಿಸಿದ್ದ. ಗಂಗರಾಜ ಬೂತುಗ ಕೃಷ್ಣರಾಜನಿಗೆ ಭಾವಮೈದುನನಾಗಿದ್ದ. ಬೂತುಗನ ಮಹಾದಂಡನಾಯಕನಾಗಿದ್ದವನೇ ಮಹಾಬಲಯ್ಯ. ಆತನ ಯುವವಯಸ್ಸಿನ ಪುತ್ರ ಆಗಷ್ಟೇ ಸೈನ್ಯದ ಸೇವೆಗೆ ಪದಾರ್ಪಣೆ ಮಾಡಿದ್ದವನು ಚಾವುಂಡರಾಯ. ಆತನು ತನ್ನ ತಂದೆಯ ಜೊತೆಯಲ್ಲಿ ಚಾಲುಕ್ಯ ದೊರೆ ಅರಿಕೇಸರಿಯ ಮಹಾದಂಡನಾಯಕನೂ, ಮತ್ತು ಕನ್ನಡದ ಆದಿಕವಿಶ್ರೇಷ್ಠ ಪಂಪದೇವನನ್ನು ಕಾಣುವ ಸಲುವಾಗಿ ಮಾನ್ಯಖೇಟಕ್ಕೆ ಬಂದಿದ್ದ. ಪಂಪಕವಿಯೊಡನೆ ಮೊದಲ ಭೇಟಿಯಲ್ಲಿ ಮಹಾಬಲಯ್ಯ, ಮತ್ತು ಚಾವುಂಡರಾಯ ಮಾಡಿದ ಸಂಭಾಷಣೆಯ ಸಂದರ್ಭವನ್ನು ತ.ರಾ.ಸು. ಕಲಾತ್ಮಕವಾಗಿ ಸೃಷ್ಟಿಸಿದ್ದಾರೆ. ಪಂಪಕವಿಯ ಹಸ್ತದಿಂದಲೇ ಆತ ರಚಿಸಿದ್ದ ಎರಡು ಲೋಕೋತ್ತರ ಕೃತಿಗಳಾದ ‘ವಿಕ್ರಮಾರ್ಜುನ ವಿಜಯ, ಮತ್ತು ಆದಿಪುರಾಣ’ಗಳನ್ನು ಉಡುಗೊರೆಯಾಗಿ ಪಡೆಯುತ್ತಾನೆ. ಆದಿಪುರಾಣದ ನಿರಂತರ ವಾಚನವೇ ಚಾವುಂಡರಾಯನ ಮುಂದಿನ ಬದುಕಿಗೆ ದಾರಿದೀಪವಾಗುತ್ತದೆ.

ಆತನ ಜೀವಮಾನಕಾಲದ ಹಲವಾರು ವರ್ಷಗಳ ಅವಧಿಯಲ್ಲಿ ರಾಜ್ಯದ ಸೇವೆಯಲ್ಲಿ ತತ್ಪರನಾಗಿ ದುಡಿಯುತ್ತಾನೆ. ರಾಜಕೀಯ ಏರಿಳಿತಗಳಾಗುತ್ತವೆ. ಸಾಮ್ರಾಜ್ಯದ ಪರಮ ವೈರಿಗಳಾದ ಮಾಳವದ ಪರಮಾರರು, ಅವರೊಡನೆ ಮೊದಲು ಚಕ್ರವರ್ತಿಗಳಿಗೆ ಮಿತ್ರರಾಗಿದ್ದು ಈಗ ದ್ರೋಹ ಬಗೆದಿದ್ದ ಚಾಲುಕ್ಯ ಅರಸು ಚೇದಿಯ ಲಕ್ಷ್ಮಣರ ಪ್ರಾಬಲ್ಯ ಹಿರಿದಾಗಿ ರಾಷ್ಟ್ರಕೂಟ ಸಾಮ್ರಾಜ್ಯವೆಂಬುದು ಹೆಸರಿಗೆ ಮಾತ್ರ ಎಂಬಂತಾಗಿದೆ. ಈ ಬದಲಾವಣೆಯ ದಿನಗಳ ಪರಿಣಾಮವಾಗಿ ಕೊನೆಯ ಚಕ್ರವರ್ತಿಯೆಂಬ ಬಿರುದು ಹೊತ್ತ ಇಂದ್ರದೇವನ ಅಸಹಾಯಕ ಪರಿಸ್ಥಿತಿ, ಆತನ ರಕ್ಷಣೆಯ ಭಾರಹೊತ್ತಿದ್ದ ಚಾವುಂಡರಾಯನ ಮನಸ್ಥಿತಿ ಶೋಚನೀಯವಾಗಿರುತ್ತದೆ. ಅಂತಿಮವಾಗಿ ತನಗೊದಗಿದ ದೀನಸ್ಥಿತಿಯಿಂದ ಬೇಸತ್ತ ಇಂದ್ರದೇವ ಸಲ್ಲೇಖನ ವ್ರತ ಪಡೆದು ತನ್ನ ಪ್ರಾಣತ್ಯಾಗ ಮಾಡುತ್ತಾನೆ. ಇವೆಲ್ಲದರ ವಿವರಣೆ ತ.ರಾ.ಸು.ರವರ ಪದಗಳಲ್ಲಿ ಮೂಡಿ ಓದುಗರ ಮನಮಿಡಿಯುತ್ತದೆ.

ವಿದ್ಯಾಭ್ಯಾಸಕ್ಕಾಗಿ ಅವಕಾಶ, ಮತ್ತು ಆಶ್ರಯ ಬಯಸಿ ಬನವಾಸಿಯ ಅಂದಿನ ರಾಜಧಾನಿ ಬಂಕಾಪುರಕ್ಕೆ ಬಂದ ರನ್ನಮಯ್ಯ ಅಕಸ್ಮಾತ್ತಾಗಿ ಅಜಿತಸೇನಾಚಾರ್ಯರ ದೃಷ್ಟಿಗೆ ಬೀಳುತ್ತಾನೆ. ಅವನೊಡನೆ ನಡೆಸಿದ ಸಂಭಾಷಣೆಯಿಂದ ಅವನಲ್ಲಡಗಿದ್ದ ಶ್ರದ್ಧೆ, ಸುಪ್ತ ಪ್ರತಿಭೆಗಳನ್ನು ಗುರುತಿಸಿದ ಆಚಾರ್ಯರು ಅವನನ್ನು ವಿದ್ಯಾಭ್ಯಾಸಕ್ಕಾಗಿ ಲಲಿತಕೀರ್ತೀ ಪಂಡಿತರ ವಶಕ್ಕೆ ಒಪ್ಪಿಸುತ್ತಾರೆ. ಕ್ರಮವಾದ ವಿದ್ಯಾಭ್ಯಾಸ ಹೊಂದಿದ ರನ್ನಮಯ್ಯನನ್ನು ಅಚಿತಸೇನಾಚಾರ್ಯರೇ ಗಂಗ ಮಾಂಡಲೇಶ್ವರನಾಗಿದ್ದ ಮಾರಸಿಂಹ ಪೆರ್ಮಾಡಿಗಳು ಮತ್ತು ಅವನ ದಂಡನಾಯಕನಾಗಿದ್ದ ಚಾವುಂಡರಾಯನ ಆಶ್ರಯಕ್ಕೆ ಒಪ್ಪಿಸಿ ಇದು ಹೆಮ್ಮರವಾಗುವ ಸಸಿ, ಇದಕ್ಕೆ ನಿಮ್ಮಂಥವರ ಆಶ್ರಯ, ಪೋಷಣೆ ಬೇಕು ಎಂದು ಹೇಳುತ್ತಾರೆ. ಅಂದಿನಿಂದ ಚಾವುಂಡರಾಯನ ಮಿತ್ರತ್ವ ರನ್ನಮಯ್ಯನಿಗೆ ಲಭ್ಯವಾಗುತ್ತದೆ. ಅಜಿಸೇನಾಚಾರ್ಯರ ಗುಣಗ್ರಾಹಿ ಜಾಣ್ಮೆ ಹುಸಿಯಾಗುವುದಿಲ್ಲ. ಮುಂದೆ ಇದೇ ರನ್ನಮಯ್ಯ ರನ್ನಮಹಾಕವಿಯಾಗಿ ಬೆಳೆಯುತ್ತಾನೆ. ಕಾವ್ಯಗಳನ್ನೂ ರಚಿಸುತ್ತಾನೆ.

ರಾಜಕೀಯ ಏರುಪೇರುಗಳಲ್ಲಿ ಚಾವುಂಡರಾಯ ಒಂದು ದಾಳಮಾತ್ರ. ದೊರೆಗಳ ಆಜ್ಞಾಧಾರಕ ಸೇವಕ. ತನ್ನ ಸ್ವಾಮಿಗಾಗಿ, ತನ್ನ ನಾಡಿಗಾಗಿ ಜೀವನದುದ್ದಕ್ಕೂ ಕಾಳಗಗಳ ಸರಮಾಲೆಯಲ್ಲಿ ಶಸ್ತ್ರವನ್ನು ಬಿಡುವಿಲ್ಲದಂತೆ ಬಳಸುತ್ತಲೇ ಇದ್ದವನು. ಆ ಲೆಕ್ಕವಿಲ್ಲದಷ್ಟು ಹತ್ಯೆಗಳು, ಕಡಿದಾಟಗಳು, ಹರಿಸಿದ ರಕ್ತಪ್ರವಾಹ ಅವನ ಮನಸ್ಸಿನಲ್ಲಿ ಜಿಗುಪ್ಸೆ ಹುಟ್ಟಿಸುತ್ತವೆ. ಶಸ್ತ್ರಸಂನ್ಯಾಸ ಹೊಂದಲು ಅವನ ಚಿತ್ತ ಅನೇಕ ಸಾರಿ ಬಯಸಿದರೂ ಅವನ ಕರ್ತವ್ಯದ ಕರೆ ಅವನಿಗೆ ಅಂತಹ ಅವಕಾಶವನ್ನೀಯದು. ಅವನ ಮಾನಸಿಕ ತೊಳಲಾಟ, ತನ್ನ ಕಣ್ಮುಂದೆಯೇ ಪತನವಾದ ಸಾಮ್ರಾಜ್ಯ, ನಿರಂತರವಾಗಿ ಪಂಪ ಮಹಾಕವಿಯ ಆದಿಪುರಾಣದ ಭರತ ಬಾಹುಬಲಿಯ ದ್ವಂದ್ವ ಯುದ್ಧದ ಪ್ರಸಂಗವನ್ನು ಕಣ್ಮುಂದೆ ತರುತ್ತದೆ. ಕಾವ್ಯವನ್ನು ಓದಿದಾಗಲೆಲ್ಲ ಅವನ ಮನಸ್ಸನ್ನು ಪಾರಮಾರ್ಥಿಕದತ್ತ ಸೆಳೆಯುತ್ತದೆ.

ಚಾವುಂಡರಾಯನ ಮುಂದಿನ ನಡೆಯ ಬಗ್ಗೆ ಇನ್ನೂ ಅವನು ಅಸ್ಥಿರ ಆಲೋಚನೆಯಲ್ಲಿರುವಾಗಲೇ ಆತನ ತಾಯಿ ಕಾಳಲಾದೇವಿ ಅವಳ ಮನದ ಇಚ್ಛೆಯೊಂದನ್ನು ಮಗನ ಮುಂದಿಟ್ಟಳು. ಇದು ಸಂದರ್ಭೋಚಿತವಾಗಿದೆ. ಪೌದನಪುರದಲ್ಲಿ ಭರತ ಚಕ್ರವರ್ತಿಯು ನಿರ್ಮಿಸಿರುವ ಬಾಹುಬಲಿಯ ದಿವ್ಯ ಮೂರ್ತಿಯನ್ನೊಮ್ಮೆ ನೋಡಿ ಕಣ್ತುಂಬಿಕೊಳ್ಳಬೇಕೆಂಬುದೇ ಆಕೆಯ ಹಂಬಲ. ತಾಯಿಯ ಆಸೆಯನ್ನು ಖಂಡಿತವಾಗಿ ಪೂರ್ತಿಮಾಡುವ ಭರವಸೆಯನ್ನು ಚಾವುಂಡರಾಯ ನೀಡುತ್ತಾನೆ. ಆದರೆ ನಂತರ ಶ್ರವಣಬೆಳುಗೊಳಕ್ಕೆ ಹೋಗಿ ನೇಮಿಚಂದ್ರಾಚಾರ್ಯರನ್ನು ಭೇಟಿಯಾದಾಗ ಆಕೆಯ ಬಯಕೆ ಈಡೇರುವ ಸಾಧ್ಯತೆಯಿಲ್ಲ, ಪೌದನಪುರದಲ್ಲಿ ಮೂರ್ತಿಯಿರುವ ಪ್ರದೇಶದ ಸುತ್ತಮುತ್ತ ದಟ್ಟವಾಸ ಅರಣ್ಯ ಬೆಳೆದಿದ್ದು, ಅದರಲ್ಲಿ ಕ್ರೂರ ಮೃಗಗಳು, ಕಾಳೋರಗಗಳು ಯಥೇಚ್ಚವಾಗಿ ಸೇರಿಕೊಂಡಿರುವುದರಿಂದ ಅಲ್ಲಿಗೆ ಹೋಗುವುದು ದುರ್ಲಭ ಎಂಬ ಸತ್ಯವನ್ನು ಆಚಾರ್ಯರು ಚಾವುಂಡರಾಯನಿಗೆ ತಿಳಿಸುತ್ತಾರೆ. ತಾಯಿಯ ಆಸೆಯನ್ನು ಪೂರೈಸಲಾಗದ ಅಸಹಾಯಕ ಮನಸ್ಸಿನಿಂದ ತೊಳಲಾಡುತ್ತಿರುವಾಗ ಶ್ರವಣಬೆಳುಗೊಳದಲ್ಲಿ ಅವನಿಗೆ ಒಂದು ಅತೀಂದ್ರಿಯ ಅನುಭವವಾಗುತ್ತದೆ.

ಅಲೆದಾಡುತ್ತಾ ತೀರ್ಥಗಿರಿಯ ಮೇಲೆ ಧ್ಯಾನಾಸಕ್ತನಾಗಿ ಮೈಮರೆತು ಕುಳಿತಿದ್ದ ಚಾವುಂಡರಾಯ. ರಾತ್ರಿಯಾಗಿದ್ದೂ ತಿಳಿಯಲಿಲ್ಲ. ನಕ್ಷತ್ರಗಳು ಮೂಡಿಬಂದಿದ್ದವು. ಚಂದ್ರನ ಬೆಳಕು ಹಾದಿಯಲ್ಲಿ ಚೆಲ್ಲಿತ್ತು. ಇದ್ದಕ್ಕಿದ್ದಂತೆ ಅವನ ದೃಷ್ಟಿ ಇಂದ್ರಗಿರಿಯ ಮೇಲೆ ತುದಿಯಲ್ಲಿ ಸೆಟಿದು ನಿಂತಿದ್ದ ಕೋಡುಗಲ್ಲಿನತ್ತ ಹೊರಳಿತು. ಅದು ಅಲ್ಲಿಯೇ ಸ್ಥಿತವಾಗಿ ನಿಂತಿತ್ತು. ಇದ್ದಕ್ಕಿದ್ದಂತೆ ಇಡೀ ಕೋಡುಗಲ್ಲು ಭವ್ಯ ವೈರಾಗ್ಯಮೂರ್ತಿ ಬಾಹುಬಲಿಯಂತೆ ಮೈವೆತ್ತಿ ನಿಂತಂತೆ ಭಾಸವಾಯಿತು. ಅವನ ಮೈ ಮರೆಯಿತು. ಇದನ್ನು ಆತನು ನೇಮಿಚಣದ್ರಾಚಾರ್ಯರ ಬಳಿಯಲ್ಲಿ ಹೇಳಿಕೊಂಡಾಗ ಇನ್ನೊಂದು ಅಚ್ಚರಿ ಕಾದಿತ್ತು. ಅಲ್ಲಿದ್ದ ಒಬ್ಬ ಹಣ್ಣಹಣ್ಣು ಮುದುಕಿ ಪ್ರತಿದಿನವೂ ಬೆಟ್ಟಹತ್ತಿ ಆ ಕೋಡುಗಲ್ಲಿಗೆ ಪೂಜೆ ಸಲ್ಲಿಸಿ ಬರುತ್ತಾಳೆ ಎಂಬ ಸುದ್ದಿ. ಚಾವುಂಡರಾಯನಿಗೆ ಒಮ್ಮೆ ಬಂದ ಕನಸಿನಲ್ಲಿಯೂ ಪದ್ವಾವತೀದೇವಿ ಬಂದು ಇದರ ಬಗ್ಗೆ ಪ್ರಸ್ತಾಪ ಮಾಡಿದಂತೆ ಅನುಭವವಾಗಿತ್ತು. ಆ ಅಜ್ಜಿಗೂ ಇದೇ ರೀತಿಯ ನಂಬಿಕೆಯಿತ್ತು. ಕೋಡುಗಲ್ಲಿನಲ್ಲಿ ಅಡಗಿ ಕುಳಿತ ಬಾಹುಬಲಿಸ್ವಾಮಿಯ ಮೂರ್ತಿ ತನ್ನನ್ನು ಬಿಡಿಸುವವನಿಗಾಗಿ ಕಾದುಕುಳಿತಿದ್ದಾನೆ ಎಂದನ್ನಿಸಿತು. ಆ ಬಂಡೆಯಲ್ಲೇ ಮೂರ್ತಿಯನ್ನು ನಿರ್ಮಾಣ ಮಾಡಿಸಬೇಕೆಂಬ ಬಯಕೆ ಹುಟ್ಟಿದಾಗ ಅದಕ್ಕೆ ಸರಿಯಾದ ವ್ಯಕ್ತಿ ಚಾವುಂಡರಾಯನೇ ಎಂಬ ಪ್ರೋತ್ಸಾಹದ ನುಡಿಗಳೂ ನೇಮಿಚಂದ್ರಾಚಾರ್ಯರಿಂದ ಬಂದವು. ಜೊತೆಗೆ ಇಪ್ಪತ್ನಾಲ್ಕು ಜನ ತೀರ್ಥಂಕರರ ಜೀವನವನ್ನು ಆಧರಿಸಿದ ಪುರಾಣವೊಂದನ್ನು ಯಾರೂ ರಚಿಸಿಲ್ಲವಾದ್ದರಿಂದ ಆ ಕಾರ್ಯವನ್ನು ಚಾವುಂಡರಾಯನೇ ಕೈಗೊಳ್ಳುವುದು ಒಳ್ಳೆಯದು ಎಂಬ ಮಾತನ್ನೂ ಗುರುಗಳು ಅಪ್ಪಣೆ ಕೊಡಿಸುತ್ತಾರೆ. ಅಷ್ಟುಹೊತ್ತಿಗೆ ಚಾವುಂಡರಾಯನ ಮನಸ್ಸು ಒಂದು ತಹಬಂದಿಗೆ ಬಂದಿರುತ್ತದೆ. ತನ್ನ ಧಣಿಗಳಾದ ರಾಚಮಲ್ಲ ಪೆರ್ಮಾಡಿಗಳಿಂದ ತನ್ನ ದಂಡನಾಯಕನ ಹುದ್ದೆಯಿಂದ ಬಿಡುಗಡೆ ಪಡೆಯುತ್ತಾನೆ. ತನ್ನ ಶೇಷಾಯುಷ್ಯದಲ್ಲಿ ಇನ್ನು ಬಾಹುಬಲಿಯ ಮೂರ್ತಿಯನ್ನು ಇಂದ್ರಗಿರಿಯ ನೆತ್ತಯಮೇಲೆ ಸಾಕಾರಗೊಳಿಸುವುದು ಮತ್ತು ತ್ರಿಷಷ್ಟಿ ಲಕ್ಷಣ ಮಹಾಪುರಾಣವನ್ನು ಬರೆದು ಪೂರ್ಣಗೊಳಿಸುವುದು ಅಷ್ಟೇ ತನ್ನ ಕರ್ತವ್ಯವೆಂದು ನಿರ್ಧರಿಸುತ್ತಾನೆ ಅದಕ್ಕಾಗಿ ತನ್ನ ತನು ಮನ ಧನವೆಲ್ಲವನ್ನೂ ಮೀಸಲಿರಿಸುತ್ತಾನೆ.

ಕೋಡುಗಲ್ಲನ್ನು ಶಿಲ್ಪವಾಗಿ ರೂಪಿಸಲು ಯಾರೂ ಮುಂದೆ ಬಾರದಿದ್ದಾಗ ಚಿಂತೆಯಾಗುತ್ತದೆ. ಆಗ ವೃದ್ಧೆ ಪದ್ಮಬ್ಬೆ ದಾರಿ ತೋರುತ್ತಾಳೆ. ತನ್ನ ಅಶ್ರಯದಲ್ಲಿರುವ ಭರತೋಜ ತನಗಾಗಿ ಮಾಡಿಕೊಟ್ಟಿದ್ದ ಎರಡು ಗೇಣಳತೆಯ ಬಾಹುಬಲಿಯ ಮೂರ್ತಿಯನ್ನು ಚಾವುಂಡರಾಯನಿಗೆ ತೋರುತ್ತಾಳೆ. ಅದನ್ನು ವೀಕ್ಷಿಸಿದಾಗ ಅವನಿಗೆ ತನ್ನ ಕನಸಿನ ಮೂರ್ತಿಯೇ ಸರ್ವಾಂಗ ಸುಂದರವಾಗಿ ಮೂಡಿದೆಯೇನೋ ಎಂಬಂತೆನ್ನಿಸಿತು. ಭರತೋಜನೆಂಬ ಅನಾಮಧೇಯ ಶಿಲ್ಪಿ ಅದನ್ನು ಕಡೆದವನೆಂದು ತಿಳಿದು ಬಂತು. ಆದರೆ ಅವನು ಮತ್ತೊಮ್ಮೆ ಜೀವನದಲ್ಲಿ ಉಳಿ ಕೊಡತಿಯನ್ನು ಹಿಡಿಯುವುದಿಲ್ಲವೆಂದು ಪ್ರತಿಜ್ಞೆಮಾಡಿರುತ್ತಾನೆ. ಅವನ ಮನಸ್ಸನ್ನು ಬದಲಿಸಲು ಯಾರಿಂದಲೂ ಸಾಧ್ಯವಾಗದು. ಆದರೆ ಅವನ ಆಶ್ರಯದಾತೆ, ಅವನ ಮಾತೆಯಂತಿದ್ದ ಪದ್ಮಬ್ಬೆ ಅವನನ್ನು ನಯವಾದ ಮಾತುಗಳಿಂದ ಒಲಿಸಿ ಲೊಕೋತ್ತರವಾದ ಈ ಪವಿತ್ರ ಕಾರ್ಯಕ್ಕೆ ಒಪ್ಪಿಸುತ್ತಾಳೆ. ಆದರೆ ಭರತೋಜನು ತಾನು ಶಿಲ್ಪವನ್ನು ಪೂರ್ತಿಯಾಗಿ ನಿರ್ಮಾಣಮಾಡುವವರೆಗೆ ಅದರ ದರ್ಶನವನ್ನು ಯಾರೂ ಮಾಡಬಾರದೆಂಬ ನಿಬಂಧನೆಯೊಡನೆ ಕೆಲಸ ಪ್ರಾರಂಭಿಸುತ್ತಾನೆ. ಅಮಾನುಷ ಶಕ್ತಿ ಬಂದಿತೇನೋ ಎಂಬಂತೆ ಭರತೋಜನು ಅವಿಶ್ರಾಂತ ದುಡಿಮೆಯಲ್ಲಿ ತೊಡಗುತ್ತಾನೆ. ಚಾವುಂಡರಾಯ ತಾನು ಪ್ರಾರಂಭಿಸಿದ ತ್ರಿಷಷ್ಟಿ ಲಕ್ಷಣ ಪುರಾಣವನ್ನು ರನ್ನಮಯ್ಯನ ಸಲಹೆ, ನೆರವಿನೊಂದಿಗೆ ಪೂರೈಸಿ ನೇಮಿಚಂದ್ರಾಚಾರ್ಯರಿಗೆ ಸಮರ್ಪಿಸುತ್ತಾನೆ.

ಅಂತೂ ಎಲ್ಲರೂ ಕಾಯುತ್ತಿದ್ದ ಪುಣ್ಯ ಘಳಿಗೆ ಒದಗುತ್ತದೆ. ಪೂರ್ಣಪ್ರಮಾಣದಲ್ಲಿ ಬಾಹುಬಲಿಸ್ವಾಮಿಯ ಮೂರ್ತಿಯು ಸಿದ್ಧವಾಗಿದ್ದು ಅದರ ದರ್ಶನವನ್ನು ಮಾಡಬಹುದೆಂದು ಶಿಲ್ಪಿ ಭರತೋಜನಿಂದ ಸುದ್ಧಿ ಬರುತ್ತದೆ. ಸಂಭ್ರಮದಿಂದ ಆಚಾರ್ಯರ ಸಮೇತ ಚಾವುಂಡರಾಯ, ರನ್ನಮಯ್ಯರು ಇಂದ್ರಗಿರಿಯನ್ನು ಹತ್ತಿ ಮೂರ್ತಿಯ ದರ್ಶನಮಾಡಿ ಪುನೀತರಾಗುತ್ತಾರೆ. ಚಾವುಂಡರಾಯನು ಭರತೋಜನಿಗಾಗಿ ಹುಡುಕಾಡಿದರೂ ಅವನು ಪತ್ತೆಯಾಗುವುದಿಲ್ಲ. ಬಾಹುಬಲಿಯ ಅಡಿದಾವರೆಗಳಲ್ಲೇ ಐಕ್ಯನಾಗಿಬಿಟ್ಟನೋ ಎನ್ನಿಸುತ್ತದೆ. ಚಾವುಂಡರಾಯನ ವೃದ್ದಮಾತೆ ಕಾಳಲಾದೇವಿಯ ಉತ್ಕಟೇಚ್ಛೆಯು ಪೂರ್ತಿಯಾಗುತ್ತದೆ. ಚಾವುಂಡರಾಯನ ಜೀವನ ಸಾರ್ಥಕತೆ ಹೊಂದುತ್ತದೆ.

ಕಾದಂಬರಿಯನ್ನು ಓದಿ ಕೆಳಗಿಡುವ ಮುನ್ನ ಓದುಗರ ಮನಸ್ಸು ಭಾವಾವೇಗದಿಂದ ಕೂಡಿ ಇಂದ್ರಗಿರಿಯ ನೆತ್ತಿಯಮೇಲೆ ರಾರಾಜಿಸುತ್ತಿರುವ ಭೂಮ ಶಿಲ್ಪ ವ್ಯರಾಗ್ಯಮೂರ್ತಿಯ ದರ್ಶನಾನಂದವನ್ನು ಅವರೆದೆಯಲ್ಲಿ ತುಂಬಿಕೊಂಡಂತಹ ಅನುಭವವಾಗುತ್ತದೆ.

ಈ ದೃಶ್ಯಕ್ಕೆ ಪ್ರೇರಣೆಕೊಟ್ಟ ಪಂಪಮಹಾ ಕವಿಯ ಆದಿಪುರಾಣದ ಪ್ರಸಂಗ, ಪೂರಕವಾಗಿ ಪ್ರೋತ್ಸಾಹಕವಾದ ಕಾಳಲಾಂಬೆಯ ಬಯಕೆ, ನೇಮಿಚಂದ್ರಾಚಾರ್ಯರ ಆಶೀರ್ವಚನ, ವೃದ್ದೆ ಪದ್ಮಬ್ಬೆಯ ಅಚಲವಾದ ನಂಬಿಕೆ ಎಲ್ಲವೂ ಧನ್ಯವಾದುವೇ. ತ.ರಾ.ಸು.ರವರು ಪದಗಳಲ್ಲಿ ಮೂಡಿಸಿದ ಈ ಕಾದಂಬರಿ ನಿಜಕ್ಕೂ ಅವರ್ಣನೀಯ ಅನುಭವವನ್ನು ನೀಡುತ್ತದೆ. ಅವರು ಅಭಿನಂದನೀಯರು.

ಬಿ.ಅರ್.ನಾಗರತ್ನ

10 Responses

  1. ನಯನ ಬಜಕೂಡ್ಲು says:

    ಸೊಗಸಾದ ಪುಸ್ತಕ ಪರಿಚಯ. ಪುಸ್ತಕದ ಕುರಿತಾಗಿ ಆಸಕ್ತಿ ಮೂಡಿಸಿದೆ, ಕೊಳ್ಳುವ ಮನಸಾಗಿದೆ

  2. ನಾಗರತ್ನ ಬಿ. ಅರ್. says:

    ಧನ್ಯವಾದಗಳು ನಯನ ಮೇಡಂ

  3. sudha says:

    ನಮಸ್ಕಾರ. ಬಹಳ ಚೆನ್ನಾಗಿದೆ
    ಎಲ್ಲಾ ವಾಸ್ತವ ಅಂಶಗಳೇ?

  4. ಶ್ರೇಯಸ್ ಪರಿಚರಣ್ says:

    …ತರಾಸು ಬರಹಗಳಿಂದ ಪೀಳಿಗೆಗಳು ಪ್ರೇರಣೆ ಪಡೆದಿವೆ
    ನೆನಪುಗಳು ತೀವ್ರವಾದವು…ಅತ್ಯುತ್ತಮ ಲೇಖನ…ನಮೋನ್ನಮಃ…..

  5. ನಾಗರತ್ನ ಬಿ. ಅರ್. says:

    ಧನ್ಯವಾದಗಳು ಸುಧಾ ಮೇಡಂ.

  6. . ಶಂಕರಿ ಶರ್ಮ says:

    ಚಾವುಂಡರಾಯನು ಶ್ರವಣಬೆಳಗೊಳದ ಗೋಮಟೇಶ್ವರ ವಿಗ್ರಹವನ್ನು ನಿರ್ಮಾಣ ಮಾಡಿದ ಬಗೆಗಿನ ಕಥಾಪ್ರಸಂಗವು ಬಹಳ ಚೆನ್ನಾಗಿ ಮೂಡಿಬಂದಿದೆ. ಈ ಶುಭಕಾರ್ಯಕ್ಕೆ ಪ್ರೇರಣೆಯಾದ ತಾಯಿ ಕಾಳಲಾದೇವಿ, ವೃದ್ಧೆ ಪದ್ಮಬ್ಬೆ, ಬೆಟ್ಟದ ಮೇಲಿನ ಕೋಡುಗಲ್ಲು, ಕನಸು…ಇತ್ಯಾದಿಗಳು ಬಹಳ ನೈಜವಾಗಿ ನಿರೂಪಿಸಲ್ಪಟ್ಟಿವೆ. ಮಹಾನ್ ಲೇಖಕ ತ.ರಾ.ಸು. ಅವರ ಐತಿಹಾಸಿಕ ಕಾದಂಬರಿಗಳು ನನಗೆ ಅತ್ಯಂತ ಆಪ್ತವಾಗಿವೆ. ಅತ್ಯುತ್ತಮ ಕಾದಂಬರಿಯ ಪುಸ್ತಕ ನೋಟವು ಮುದನೀಡಿತು.

  7. ನಾಗರತ್ನ ಬಿ. ಅರ್. says:

    ಸಾಹಿತ್ಯ ಸಹೃದಯರಿಗೆ ಧನ್ಯವಾದಗಳು

  8. Padma Anand says:

    ಪುಸ್ತಕ ಪರಿಚಯ ಸೊಗಸಾಗಿ ಮುಡಿ ಬಂದು, ಎಂದೋ ಓದಿದ ‘ ಶಿಲ್ಪಶ್ರೀ’. ಕೃತಿಯ ಅವಲೋಕನ ಮತ್ತೊಮ್ಮೆ ಕಣ್ಣ ಮುಂದೆ ಮೂಡಿ ಬಂತು. ಅಭಿನಂದನೆಗಳು.

  9. ನಾಗರತ್ನ ಬಿ. ಅರ್. says:

    ಧನ್ಯವಾದಗಳು ಪ್ರಿಯ ಗೆಳತಿ

  10. ನಾಗರತ್ನ ಬಿ. ಅರ್. says:

    ಧನ್ಯವಾದಗಳು ಪ್ರಿಯ ಗೆಳತಿ ಪದ್ಮಾ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: