ಅಜ್ಜಿಯ ಕೋಳಿ ಇಲ್ಲದ ಅಂದು..
ಆ ಹಳ್ಳಿಯಲ್ಲಿ
ಅಜ್ಜಿಯ ಕೋಳಿಯಿಂದೇನು
ಬೆಳಗಾಗುತ್ತಿರಲಿಲ್ಲ
ಅಜ್ಜಿಯ ಕೋಳಿ ಬೆಳಗಾಯಿತು
ಏಳಿ ಎಂದು ಹೇಳುತ್ತಿದ್ದದ್ದೂ ಸುಳ್ಳಲ್ಲ
ಒಮ್ಮೆ ಇರಲಿಲ್ಲ ಅಜ್ಜಿ
ಮತ್ತವಳ ಕೋಳಿ
ಬೆಳಕು ಹರಿದಿತ್ತು
ಎಂದಿನಂತೆ ಮಾಮೂಲಿ
ಆದರೂ ಹಳ್ಳಿಯ
ಕೆಲವರಿಗಾಗಿತ್ತು ಗಲಿಬಿಲಿ
ಕೆಂಪ ಹೆಣ್ಣು ನೋಡಲು
ಹೋಗಬೇಕಾಗಿತ್ತು
ರೋಡ್ ಕ್ರಾಸ್ಗೆ
ಹೋಗುವಷ್ಟರಲ್ಲಿ
ಇದ್ದೊಂದು ಬಸ್
ಹೊರಟು ಹೋಗಿತ್ತು
ಏಳುವಾಗ ತಡವಾಗಿ
ದಿನಚರಿಯಲ್ಲಾಗಿತ್ತು ಎಡವಟ್ಟು
ಕರಿಯನ ಹೊಲದಲ್ಲಿ
ಆಗಬೇಕಿತ್ತು ನಾಟಿ,
ತಡವಾಗಿ, ಹೊತ್ತು ಮುಳುಗಿ
ಪಕ್ಕದೂರಿಂದ ಬಂದಿದ್ದ
ಆಳುಗಳಿಗೆ
ನೀಡುವಂತಾಯ್ತು ಓಟಿ
ಊರಬಾವಿಯ ಬಳಿ
ಒಮ್ಮೆಲೇ ಜನರ ಗುಂಪಾಗಿ
ನಾ ಮೊದಲು
ತಾ ಮೊದಲೆಂದಾಯಿತು
ಜಟಾಪಟಿ
ಪಕ್ಕದ ಹಳ್ಳಿ ಶಾಲೆಗೆ
ಹೋಗಬೇಕಾದ ಮೇಷ್ಟ್ರು
ತಡವಾದ್ದರಿಂದ ಶಾಲೆಗೆ
ನೀಡಬೇಕಾಯಿತು ಸೂಟಿ
ಅಜ್ಜಿಯ ಕೋಳಿ
ಇಲ್ಲದಿದ್ದರೂ
ಬೆಳಗಾಗಿತ್ತು !
ಆದರೂ ಎಲ್ಲರಿಗೂ
ಅನ್ನಿಸಿತ್ತು
ಬೆಳಗಾಯ್ತೇಳಿ ಎನ್ನುವ
ಅಜ್ಜಿಯ ಕೋಳಿ
ಇರಬೇಕಿತ್ತು
-ನಟೇಶ
ಕವನ ಚೆನ್ನಾಗಿದೆ ಸಾರ್
ಈ ಕವನದಲ್ಲಿ ಕೇವಲ ಒಂದು ಕೋಳಿಯನ್ನು ಆಧಾರವಾಗಿಟ್ಟುಕೊಂಡು ಗ್ರಾಮೀಣ ಜನರ ನಡುವೆ ಇರುವ ಅಗಾಧ ನಂಬಿಕೆಯನ್ನು ಪ್ರಸ್ತುತಪಡಿಸಿದಂತಿದೆ. ಎಲ್ಲರೂ ಸಾಮಾನ್ಯವಾಗಿ ಅದರಲ್ಲೂ ಗ್ರಾಮೀಣ ಜನರ ಬದುಕು ಒಬ್ಬರೊಬ್ಬರನ್ನು ಆಶ್ರಯಿಸುವ ಪರಿ ವರ್ಣಿಸಲು ಅಸಾಧಾರಣವಾದುದು..
ಚೆನ್ನಾಗಿದೆ…
ಚೆನ್ನಾಗಿದೆ
ಚೆಂದದ ಕವನ.ವಿಭಿನ್ನ ರೀತಿಯ ಪರಿಕಲ್ಪನೆ ಚೆನ್ನಾಗಿದೆ.
ಕೋಳಿ ಇಲ್ಲದೆ…ಅದರ ಕೂಗು ಇಲ್ಲದೆ ಆದ ಪಡಿಪಾಟಲುಗಳ ಚಿತ್ರಣ ಕವನದಲ್ಲಿ ಬಹಳ ಸೊಗಸಾಗಿ ಮೂಡಿಬಂದಿದೆ.
ಯಾರಿಲ್ಲದಿದ್ದರೂ ಜೀವನ ನಡೆಯುತ್ತಾದರೂ ಎಲ್ಲರೊಂದಿಗಿದ್ದರೆ ಸುಲಲಿತವಾಗಿರುತ್ತದೆ ಎಂಬಸಂದೇಸ ಹೊತ್ತ ಸುಂದರ ಕವನ. ಅಭಿನಂದನೆಗಳು
ಎಲ್ಲರಿಗೂ ಧನ್ಯವಾದಗಳು