ಹಿಮಗಿರಿಯ ಹಂದರದಲ್ಲಿ…ಹೆಜ್ಜೆ 3
(ಕಳೆದ ವಾರದ ಸಂಚಿಕೆಯಿಂದ ಮುಂದುವರಿದುದು..)
ಶರ್ಪಾ ಅವರು ಬಂದು, – ಹೋಗುತ್ತಾ, ಹೊಗುತ್ತಾ ನಾವುಗಳು ಎತ್ತರಕ್ಕೆ ಹೋಗುವುದರಿಂದ ಆಮ್ಲಜನಕದ ಕೊರತೆ ಇರುತ್ತದೆ. ಹಾಗಾಗಿ ದಯವಿಟ್ಟು ಯಾರೂ ಯಾರಿಗೂ ಕಾಯಬೇಡಿ. ನಿಮ್ಮ ನಿಮ್ಮ ಪಾಡಿಗೆ ನೀವು, ನೀವು ಹೋಗುತ್ತಾ ಇರಿ. ನಮ್ಮ ಗುಂಪಿನ ಮುಂದೆ ನಮ್ಮವರಲ್ಲಿ ಒಬ್ಬರು ಇರುತ್ತಾರೆ, ಹಾಗೆಯೇ ಎಲ್ಲರಿಗಿಂತ ಹಿಂದೆಯೂ ಒಬ್ಬರಿರುತ್ತಾರೆ. ಮತ್ತೊಬ್ಬರು ಮಧ್ಯದಲ್ಲಿ ಓಡಾಡುತ್ತಾ, ಎಲ್ಲರ ಯೋಗಕ್ಷೇಮದ ಹೊಣೆ ಹೊರುತ್ತೇವೆ. ಹಾಗಾಗಿ ನಿಶ್ಚಿಂತರಾಗಿ ನಿಮ್ಮ ನಿಮ್ಮ ಯೋಗಕ್ಷೇಮವನ್ನು ಮಾತ್ರ ನೀವುಗಳು ನೋಡಿಕೊಳ್ಳುತ್ತಾ, ಶಿವನ ಸಾನಿಧ್ಯದ ಪವಿತ್ರತೆಯನ್ನು ಅನುಭವಿಸುತ್ತಾ ಹೊರಡಿರಿ. ಎಲ್ಲರಿಗೂ ಮಂಗಳವಾಗಲಿ – ಎಂದಾಗ, “ಜೈ ಭೋಲೇನಾಥ್, ಹರ ಹರ ಮಹಾದೇವ, ಓಂ ನಮಃ ಶಿವಾಯ‛ ಎನ್ನ ತೊಡಗಿದೆವು.
ಆಗ ಮತ್ತೆ ಶರ್ಪಾ ಅವರು, – ಇಲ್ಲಿಯ ಯಾತ್ರೆಯಲ್ಲಿ ಶಕ್ತಿಯ ವ್ಯಯ ತೀವ್ರವಾಗಿ ಆಗುತ್ತಾದ್ದರಿಂದ, ದಯವಿಟ್ಟು ನಿಮ್ಮ ಭಕ್ತಿ ಭಾವವನ್ನು ಮನಸ್ಸಿನಲ್ಲೇ ಅನುಭವಿಸಿ, ಮನಸ್ಸಿನಲ್ಲೇ ಪ್ರರ್ಥಿಸುತ್ತಾ, ಧ್ಯಾನಿಸುತ್ತಾಸಾಗಿರಿ. ಯಾವುದೇ ರೀತಿಯ ಗದ್ದಲ, ಗಲಾಟೆಗಳು ಬೇಡ. ಬೇಗ ಸುಸ್ತಾಗಿ ಮುಂದೆ ಚಲಿಸಲು ಸಾಧ್ಯವಾಗದಂತೆ ಆಗಿ ಬಿಡುತ್ತದೆ – ಎಂದಾಗ, ಮನಸ್ಸಿನಲ್ಲೇ ನಾನು, – ಅವರವರ ಭಾವ, ಅವರವರ ಭಕುತಿ, ಅವರವರದೇ ಅನುಭವ – ಎಂದುಕೊಳ್ಳುತ್ತಾ, ಮುಂದೆ ಹೆಜ್ಜೆ ಹಾಕತೊಡಗಿದೆ.
ಮುಂದೆ ಸಾಗುತ್ತಾ, ಸಾಗುತ್ತಾ ದೇಹ, ಮನಸ್ಸುಗಳು ಪ್ರತಿಕ್ಷಣವೂ ರೋಮಾಂಚನವನ್ನು ಅನುಭವಿಸತೊಡಗಿತು. ಕಲ್ಲು ಮಣ್ಣುಗಳ ಹಾದಿ, ಉದ್ದಕ್ಕೆ ಸಾಗುತ್ತಿರುವ ಭಕ್ತವೃಂದ, ಪಕ್ಕದಲ್ಲಿ ಹರಿಯುವ ನದಿ, ಅದರ ಪಕ್ಕ ಅಗಾಧವಾಗಿ ಹರಡಿಕೊಂಡಿರುವ ಹಿಮಾಲಯ ಪರ್ವತ ಶ್ರೇಣಿ. ಅದರ ಕೆಲವೊಂದು ಭಾಗಗಳು ಶ್ವೇತ ಹಿಮದಿಂದ ಮುಸುಕಿ ವಿಧ ವಿಧವಾದ ಆಕಾರಗಳನ್ನು ಸೃಷ್ಟಿಸಿ, ಮನ ಬಯಸುವ ರೀತಿಯಲ್ಲಿ ಸ್ವರ್ಗ ನಿರ್ಮಾಣವಾದಂತೆ ಅನ್ನಿಸ ತೊಡಗಿತು. ಮುಂದೆ ಮುಂದೆ ಹೋಗುತ್ತಾ, ನಡಿಗೆ ಅರಿವಿಲ್ಲದಂತೆ ನಿಧಾನವಾಗತೊಡಗಿತು. ಗುಂಪಿನವರೆಲ್ಲಾ ಬೇರೆ ಬೇರೆಯಾಗತೊಡಗಿದೆವು. ಆದರೂ ಯಾವುದೇ ಭೀತಿಯಿಲ್ಲ, ಆತಂಕವಿಲ್ಲ. ಮುಂಚೆಯೇ ನಮ್ಮ ಟೂರ್ ಆರ್ಗನೈಜರ್ ಹೇಳಿದ್ದರು, ”ರಸ್ತೆ ಕಿರಿದಾದ ಕಾರಣ, ನಡೆಯುವಾಗ ನೆಲ ನೋಡುತ್ತಾ ನಡೆಯಿರಿ. ಪ್ರಕೃತಿ ವೀಕ್ಷಿಸುವಾಗ ನಿಂತು ವೀಕ್ಷಿಸಿರಿ” ಎಂದು. ಅದರಂತೆ ಪ್ರತೀ 8 – 10 ನಿಮಿಷಗಳ ನಡಿಗೆಯ ನಂತರ ನಿಂತು, ವೀಕ್ಷಿಸಿದಾಗ ಮನ, ದೇಹ ಎರಡೂ ಅವರ್ಣನೀಯವಾದ ಆನಂದದಿಂದ ಮುದಗೊಳುತ್ತಿತ್ತು. ಮತ್ತೆ ನಡೆಯತೊಡಗಿದರೆ, ಮನೆ, ಗಂಡ, ಮಕ್ಕಳು, ಬಂಧು, ಬಾಂಧವರು, ಸ್ನೇಹಿತರ ನೆನಪುಗಳು ಬರುತ್ತಿತ್ತು, ಸುಸ್ತು ಎನ್ನಿಸುತ್ತಿತ್ತು.
ಹಿಮಚ್ಛಾದಿತ ಪರ್ವತ ಶ್ರೇಣಿಗಳನ್ನು ನೋಡಿದಾಗ, ಮನದ ಕಣ್ಣಿಗೆ ದೈವೀಕವಾದ ದೃಶ್ಯಗಳು ಗೋಚರಿಸತೊಡಗಿದವು. ಚಿಕ್ಕಂದಿನಲ್ಲಿ ತಾರಸಿಯಲ್ಲಿ ಕುಳಿತು ಮೋಡಗಳನ್ನು ನೋಡಿದಾಗ ಗೋಚರಿಸಿದಂತೆ, ಇಲ್ಲೂ ಹಿಮಚ್ಛಾದಿತ ಬೆಟ್ಟಗಳಲ್ಲಿ, ಒಮ್ಮೆ ಶಿವ ಪಾರ್ವತಿ ಸಂಚಾರ ಹೊರಟಿರುವಂತೆ ಅನ್ನಿಸಿದರೆ, ಮತ್ತೊಮ್ಮೆ, ಗುರುಗಳೊಬ್ಬರು, ಪೀಠವಿರುವ ಅತ್ಯಂತ ದೊಡ್ಡ ಹರಿವಾಣವೊಂದರಲ್ಲಿ, ಮೊನ್ನೆ ತಾನೆ ನೋಡಿ ಬಂದ ಪಶುಪತಿನಾಥನನ್ನು ಮಧ್ಯದಲ್ಲಿರಿಸಿ, ಸುತ್ತ ದ್ವಾದಶ ಲಿಂಗಗಳನಿಟ್ಟು, ನೊರೆಹಾಲಿನಿಂದ ಅಭಿಷೇಕ ಮಾಡುತ್ತಿರುವಂತೆ ಅನ್ನಿಸಹತ್ತಿತು. ಮತ್ತೊಮ್ಮೆ ಕಾಳಿಂಗ ಮರ್ಧನವಾದರೆ, ಮಗದೊಮ್ಮೆ ವಿಶ್ವರೂಪ, ಇನ್ನೊಮ್ಮೆ ರಾಧಾಕೃಷ್ಣ ಸಂಚರಿಸುತ್ತಿರುವಂತೆ ಅನ್ನಿಸುತ್ತಿತ್ತು. ‘ಓ ಇದೇನು, ಕೈಲಾಶ ಪರ್ವತದಲ್ಲಿ ಕೃಷ್ಣ, ಎನ್ನಿಸಿದಾಗ, ಮತ್ತದೇ, ಅವರವರ ಭಾವ, ಭಕುತಿ ಎಂದುಕೊಂಡೆ. ಮುಂದೆ ಮುಂದೆ ನಡೆಯುತ್ತಾ, ನಡಿಗೆ ನಿಧಾನವಾಗತೊಡಗಿತು. ಮನೋಶಕ್ತಿ ಎಷ್ಟೇ ಇದ್ದರೂ ದೇಹದ ಶಕ್ತಿ ಕುಂದತೊಡಗಿತು. ಮತ್ತೆ, ಸೂರ್ಯ ಮೋಡಗಳಲ್ಲಿ ಮರೆಯಾಗಿ, ಸಣ್ಣಗೆ ಹಿಮ ಬೀಳತೊಡಗಿತು. ದೇಹ ಛಳಿಗೆ ಗಡಗಡ ನಡುಗತೊಡಗಿತು.
ಆಗ ಕಂಡೆ ಮೂವರು ಪ್ರಯಾಣಿಕರನ್ನು. ಅರೆ, ಅಷ್ಟೊಂದು ಪ್ರಯಾಣಿಕರು ಇದ್ದೇ ಇದ್ದರಲ್ಲ, ಈ ಮೂವರಲ್ಲಿ ಏನು ವಿಶೇಷ ಎಂದಿರಾ, ಹೇಳುತ್ತೇನೆ ಕೇಳಿ. ಅವರು ಟಿಬೆಟ್ಟಿಗರಾಗಿದ್ದರು, ನಾನು ಒಂದೊಂದು ಹೆಜ್ಜೆ ಎತ್ತಿ ಇಡಲೂ ಕಷ್ಟ ಪಡುತ್ತಿರುವಾಗ, ಅವರುಗಳು ಹೆಜ್ಜೆ ನಮಸ್ಕಾರ ಹಾಕುತ್ತಿದ್ದಾರೆ, ಹುಂ ಹೌದು, ಖಂಡಿತಾವಾಗಿಯೂ ಹೆಜ್ಜೆ ನಮಸ್ಕಾರವೆ! ಅಬ್ಬ, ಕಂಡು ನಾನು ಶಿಲೆಯಂತೆ ನಿಂತುಬಿಟ್ಟೆ. ಏನೀ ಭಕುತಿ? ಏನೀ ಆರಾಧನೆ? ಏನೀ ಇಚ್ಛಾ ಶಕ್ತಿ?, ಮನದಲ್ಲೇ ವಂದಿಸುತ್ತಾ, ನಿಧಾನವಾಗಿ ಮುಂದೆ ಮುಂದೆ ಸಾಗತೊಡಗಿದೆ.
ನಾನು ಕೈಲಾಶ ಮಾನಸ ಸರೋವರ ಯಾತ್ರೆಯ ಸಿದ್ಧತೆಗಳಲ್ಲಿ ತೊಡಗಿದ್ದಾಗಲೇ ಹೇಳುತ್ತಿದ್ದೆ. – ಹುಂ, ನನಗೆ ಜಗದೀಶ್ವರನಲ್ಲಿ ಕೇಳಲು ಹಲವಾರು ಪ್ರಶ್ನೆಗಳಿವೆ. ಅಲ್ಲಿಗೆ ಹೋಗಿ ಶಿವನನ್ನು ಪ್ರತ್ಯಕ್ಷ ಕಂಡು ಉತ್ತರ ಕಂಡುಕೊಳ್ಳುತ್ತೇನೆ – ಎಂದು. ಮತ್ತೆ ನನಗೆ ನಾನೇ, – ಹುಂ, ನಾನೇನು ಮಹಾ ಘನಂಧಾರಿ ದೈವಾಂಶ ಸಂಭೂತಳೇ, ಶಿವ ನನಗೆ ಪ್ರತ್ಯಕ್ಷವಾಗಿ, ನನ್ನ ಪ್ರಶ್ನೆಗಳಿಗೆ ಉತ್ತರಿಸಲು, ಅಯ್ಯೋ, ಭ್ರಾಂತು ಅಷ್ಟೆ. ಹೋಗುವ ಮನೋ ಸಂಕಲ್ಪ ಮಾಡಿದ್ದೇನೆ, ಹೋಗಿಬರೋಣ, -ಎಂದೂ ಅಂದು ಕೊಳ್ಳುತ್ತಿದ್ದೆ.
ಈಗ ಧುತ್ತೆಂದು ಆ ವಿಚಾರ ಜ್ಞಾಪಕಕ್ಕೆ ಬಂತು. – ಈಶ್ವರಾ, ನನ್ನ ಪ್ರಶ್ನೆಗಳಿಗೆ ಉತ್ತರಿಸಲಾರೆಯಾ – ಎಂದು ಮನದಲ್ಲಿ, ಅಂದುಕೊಳ್ಳುವಷ್ಟರಲ್ಲಿಯೇ, – ಅಯ್ಯೋ ಹೆಣ್ಣೆ, ಯಾವ ಪ್ರಶ್ಣೆಗೆ ಯಾವ ಉತ್ತರ? ಹಿರಿಯರು, ಜ್ಞಾನಿಗಳು, ಋಷಿಗಳು, ಅಷ್ಟೇ ಏಕೆ, ನಿನ್ನ ತಂದೆ ಬಾಲ್ಯದಲ್ಲಿಯೇ ನಾನು ಹೇಳುವ ಉತ್ತರವನ್ನು ತಲೆಯಲ್ಲಿ ತುಂಬಿದ್ದಾರಲ್ಲವೇ – ಅಂದ ಹಾಗೆ ಆಯಿತು. ನನ್ನ ಮನ ಕೇಳಿತು, – ಅಂದರೆ?
‘ಅಂದರೆ, ಅಷ್ಟೇ. ಎಲ್ಲರಿಗೂ ಎಷ್ಟೆಷ್ಟು ಪ್ರಾಪ್ತಿಯೋ ಅಷ್ಟೇ. ಆದಾಗ್ಯೂ ತಮ್ಮ ತಮ್ಮ ಕರ್ಮ, ಕರ್ತವ್ಯಗಳನ್ನು ನಿಷ್ಠೆಯಿಂದ ಪೂರೈಸಿದಾಗ, ಪ್ರಾಪ್ತಿಯ ಕಷ್ಟಗಳು ಎದುರಾದಾಗ, ¸ ಸುಖಗಳು ಎದುರಾದಾಗ, ಅವುಗಳ ತೀರ್ವತೆಯನ್ನು ಸ್ಥಿತ ಪ್ರಜ್ಞತೆಯಿಂದ ಸ್ವೀಕರಿಸುವ ಮನೋಸ್ಥೈರ್ಯವನ್ನು ಗಳಿಸಬಹುದಷ್ಟೇ ಹೊರತು, ಅವರವರ ಪ್ರಾಪ್ತಿಯ ಒಂದಿಂಚೂ ಆಚೆ, ಈಚೆ ಹೋಗುವಂತಿಲ್ಲ, ಇಷ್ಟನ್ನು ಕೇಳಲು ಇಲ್ಲಿಯವರೆಗೂ ಬಂದೆಯಾ’ ಎಂದಂತಾಯಿತು.
ತಕ್ಷಣ ನಾನು, – ಇಲ್ಲ ಶಿವ, ಇಲ್ಲ. ನಿನ್ನ ವಾಸಸ್ಥಾನವಾದ ಈ ಕೈಲಾಶ ಪರ್ವತದ ಮಣ್ಣಿನ ಧೂಳಕಣಗಳನ್ನು ಹಣೆಯಲ್ಲಿ ಧರಿಸುವುದಷ್ಟೇ ನನ್ನ ಮೊದಲ ಆಶಯ. ಆದಾಗ್ಯೂ, ಉಪ್ಪು, ಹುಳಿ, ಖಾರ ತಿನ್ನುವ ಹುಲು ಮಾನವಳಾದ್ದರಿಂದ ಲೌಕಿಕವಾದ ಈ ಪ್ರಶ್ನೆಗಳು ಅಷ್ಟೆ. ನೀನೇ ತಿಳಿದಿರುವಂತೆ 2–3, ಅತ್ಯಂತ, ದುರಂತ, ದಾರುಣ ಘಟನೆಗಳು ನನ್ನ ಕುಟುಂಬದಲ್ಲೇಕೆ ನಡೆಯಿತು? ಯಾಕೆ ಈ ಶಿಕ್ಷೆ? ಮನಸ್ಸು ಗದ್ಗದವಾಯಿತು.
‘ಮಗೂ, ಕೆಲವೊಮ್ಮೆ ನನ್ನ ಭಕ್ತರು ಅನುಭವಿಸುವ ಸಂಕಟಗಳನ್ನು ನೋಡುವಾಗ, ನನ್ನ ಮನಸ್ಸೂ ಮಮ್ಮಲ ಮರುಗುತ್ತದಾದರೂ, ಅವರವರಿಗೆ ಎಷ್ಟೆಷ್ಟು ಪ್ರಾಪ್ತಿಯೋ ಅಷ್ಟಷ್ಟೇ. ಅವುಗಳನ್ನು ಅನುಭವಿಸಿಯೇ ತೀರಬೇಕು. ಇನ್ನು ಈ ಬಗ್ಗೆ ಚಿಂತಿಸಿ ಪ್ರಯೋಜನವಿಲ್ಲ. ಇದರ ಸತ್ಯತೆ ಜೀವನದಲ್ಲಿ ಮತ್ತೆ, ಮತ್ತೆ ಸಾಬೀತಾಗುತ್ತಲೇ ಇರುತ್ತದೆ, ಮನಸ್ಸನ್ನು ಜಿತಗೊಳಿಸಿಕೋ’ ಎಂದಂತಾಯಿತು. ಇದ್ದಕ್ಕಿದ್ದಂತೆ ಮನಸ್ಸು ಅತ್ಯಂತ ಪ್ರಶಾಂತಗೊಂಡಂತಾಯಿತು.
ಮುಂದಿನ ಪ್ರಯಾಣ ನಿಧಾನವಾಗಿ ಸಾಗತೊಡಗಿತು. ಮತ್ತೆ ಇಬ್ಬರು ಹೆಜ್ಜೆ ನಮಸ್ಕಾರದ, ಟಿಬೆಟ್ ಪ್ರಯಾಣಿಕರು ಕಾಣ ಸಿಕ್ಕರು. ಈಗಂತೂ ಮನಸ್ಸು ತಡೆಯದೇ ಅವರಿಗೆ ನಾನು ಸಾಷ್ಟಾಂಗ ನಮಸ್ಕಾರ ಮಾಡಿಬಿಟ್ಟೆ.
ಈ ಪ್ರವಾಸಕಥನದ ಹಿಂದಿನ ಕಂತು ಇಲ್ಲಿದೆ : https://surahonne.com/?p=34236
(ಮುಂದುವರಿಯುವುದು)
-ಪದ್ಮಾ ಆನಂದ್
ಕೈಲಾಸಪರ್ವತದ ಅನುಭವ ಚೆನ್ನಾಗಿ ಮೂಡಿಬರುತ್ತಿದೆ
ಧನ್ಯವಾದಗಳು
ಸುಂದರ ಪ್ರಕೃತಿಯ ವರ್ಣನೆ
ಅಲ್ಲಿಯ ಪ್ರಕೃತಿ ಅತ್ಯದ್ಭುತವೇ ಹೌದು. ಧನ್ಯವಾದಗಳು.
ಅನುಭವದ ಅನುಭೂತಿಯೊಂದಿಗೆ ಅನಾವರಣಗೊಳಿಸಿರುವ ಇಂದಿನ ಪ್ರವಾಸ ಕಥನ ತುಂಬಾ ಚೆನ್ನಾಗಿ ಮೂಡಿಬಂದಿದೆ.ಗೆಳತಿ ಧನ್ಯವಾದಗಳು.
ಧನ್ಯವಾದಗಳು ನಿಮ್ಮಭಿಮಾನಕ್ಕೆ ಗೆಳತಿ
ಅನಂತ ವೈಭವದ ಪ್ರಕೃತಿಯ ನಡುವೆ ಭಗವಂತನ ಮಗುವಾಗಿ ಹೋಗಿ, ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡ ಬಗೆ ಬಹಳ ಇಷ್ಟವಾಯ್ತು ಮೇಡಂ ..ಸೊಗಸಾದ ಪ್ರವಾಸ ಕಥನ.
ಧನ್ಯವಾದಗಳು ಮೇಡಂ