ಪಾರಿಜಾತ
1
ಶಿಲೆ ದೇವರ
ತಲೆಯ ಮೇಲೆ
ಪುಟ್ಟ ಪಾರಿಜಾತ
ಮಾಡುತ್ತಿದೆ ತಪ!
2
ಅಭಿಷೇಕಗೊಂಡ
ವಿಗ್ರಹ ತಂಪಾಗಿದೆ
ಶಿರವೇರಿದ ಪಾರಿಜಾತ
ಬಾಡದು ಬೇಗದೆ
3
ವಿಗ್ರಹ ಕಲ್ಲಿನದು
ಎಂದು ಹೇಳುವಾಗ ಅರ್ಚಕ,
ತನ್ನ ಎಸಳ ಮೃದುವಿಗೆ
ಬೇಸರಿಸಿತಾ ಪಾರಿಜಾತ!
4
ಭಕ್ತನುಡಿದ
“ಸಾವಿರ ವರ್ಷದ ವಿಗ್ರಹ
ಇಂದಿಗೂ ಹೊಳೆಯುತ್ತಿದೆ, ಆಹಾ!”
ಪಾರಿಜಾತ ನಿರ್ಮಾಲ್ಯವಾಗುವ
ಸಮಯವಾಗಿತ್ತು ಆಗ
5
ಭಕ್ತನ ಕೈಗೆ
ಜಾರುವಾಗ ಪಾರಿಜಾತ
ನೆಲದ ಮೇಲೆ
ಒಣಗುವ ಸುಖಕ್ಕೇ ಆಸೆಪಟ್ಟಿತ!?
6
ಹಕ್ಕಿ ಕೊರಳು
ಪಾರಿಜಾತದ ಅರಳು
ಸುಸ್ವರಕ್ಕೆ ಪರಿಮಳ
ದ ಮೆರುಗು
ಶುಭ್ರ ಬೆಳಗು
7
ಮುಂಜಾನೆ ಫಳಫಳಿಸಿದ
ಮಂಜು ಹನಿಗೆ ಅವಸರ,
ಪಾರಿಜಾತಕ್ಕೆ
ನಶ್ವರದ ಪಾಠ
ಹೇಳುವ ತವಕ
– ಅನಂತ ರಮೇಶ್
ಸರಳ ಸುಂದರ ಕವನ ಚೆನ್ನಾಗಿದೆ ಮೇಡಂ
ಧನ್ಯವಾದಗಳು.
ಪಾರಿಜಾತ ಎಸಳಿನಷ್ಟೇ ನವಿರಾದ ಭಾವಗಳು..ಚೆಂದದ ಹನಿಗವನಗಳು.
Beautiful
ಧನ್ಯವಾದಗಳು.
ಸೂಕ್ಷ್ಮ ಭಾವನೆಗಳನ್ನು ನವಿರಾಗಿ ಮೀಟುವ ಹನಿಗವನಗಳು ಸೊಗಸಾಗಿವೆ.
ಧನ್ಯವಾದಗಳು.
ಜೀವನದ ಪಾಠವನ್ನು ಪಾರಿಜಾತ ಹೇಳುವ ಪರಿ ಸೊಗಸಾಗಿದೆ.
ಧನ್ಯವಾದಗಳು.
ಮಧುರ ಸುಗಂಧದ ಪಾರಿಜಾತವು ದೇವರ ಮುಡಿಗೇರಿ ತನ್ನ
ನಶ್ವರತೆಯಲ್ಲೂ ಸಾರ್ಥಕತೆಯನ್ನು ಹೊಂದಿದ ಅನನ್ಯತೆ ಕವನದಲ್ಲಿ ಸೊಗಸಾಗಿ ಮೂಡಿಬಂದಿದೆ.
ಮಧುರ ಸುಗಂಧದ ಸೊಗದ ಪಾರಿಜಾತವು ದೇವನ ಮುಡಿಗೇರಿ ತನ್ನ ನಶ್ವರತೆಯಲ್ಲೂ ಸಾರ್ಥಕತೆಯನ್ನು ಪಡೆದ ಭಾವ ಬಹಳ ಚೆನ್ನಾಗಿ ಕವನದಲ್ಲಿ ಮೂಡಿಬಂದಿದೆ.
ಧನ್ಯವಾದಗಳು.
ಮಧುರ ಸುವಾಸನೆಯ ಪಾರಿಜಾತವು ದೇವನ ಮುಡಿಗೇರಿ ತನ್ನ ನಶ್ವರ ಬಾಳಿನಲ್ಲೂ ಸಾರ್ಥಕತೆಯನ್ನು ಪಡೆಯುವ ಪರಿಯನ್ನು ಬಿಂಬಿಸಿದ ಚಂದದ ಕವನ.
ಧನ್ಯವಾದಗಳು.