ಗಂಗೋತ್ರಿಯ ನೆನಪುಗಳು

Share Button

‘ಅನುಭವವು ಸವಿಯಲ್ಲ ಅದರ ನೆನಪೇ ಸವಿಯು’ ಎನ್ನುವಂತೆ ನನಗೆ ನಾನು ಪಿ ಎಚ್ ಡಿ ಮಾಡುತ್ತಿದ್ದಾಗಿನ ನೆನಪುಗಳು ಮುದ ಕೊಡುತ್ತವೆ. ಪಿ ಜಿ ಮುಗಿಸಿ ಅನಾಮತ್ತು ಹದಿನೈದು ವರ್ಷಗಳ ನಂತರ ನನ್ನ ಗೈಡ್ ಎದುರು ಹೋಗಿ ನಿಂತು ‘ನಾನು ಪಿ ಎಚ್ ಡಿ ಮಾಡ್ತೇನೆ ಸರ್’ ಎಂದಾಗ ‘ಅಲ್ಲ ಇಷ್ಟೊತ್ತಿಗಾಗ್ಲೇ ಮಾಡ್ಬೇಕಿತ್ತಲ್ಲಮ್ಮ’ ಎಂದು ಹೇಳಿ, ‘ಇರು,ಒಂದು ವರ್ಷ ಬಿಟ್ಟು ಬಾ’ಎಂದು ಸತಾಯಿಸಿ, ಕೊನೆಗೂ ಒಪ್ಪಿಗೆ ಕೊಟ್ಟರು. ಆ ನಂತರ ಶುರುವಾದುದೇ ಪಿ ಎಚ್ ಡಿ ಯ ಪರ್ವ. ಇಲ್ಲಿ ನಾನೇನೂ ಜಂಭ ಕೊಚ್ಚಿಕೊಳ್ಳಲಾಗಲಿ, ಸ್ವಾನುಕಂಪದಿಂದ ಪ್ರಶಂಸೆ ಪಡೆಯಲಾಗಲಿ ಬರೆಯುತ್ತಿಲ್ಲ . ಹೆಣ್ಣು ಜೀವನದ ಘಟ್ಟಗಳು ನಮ್ಮ ಮನಸ್ಸಿನ ಪದರುಗಳನ್ನು ಹೇಗೆ ವಿಸ್ಮೃತಿಗೊಳಿಸುತ್ತವೆ ಎನ್ನುವುದನ್ನು ಹೇಳುವದಷ್ಟೇ ಇಲ್ಲಿನ ಉದ್ದೇಶ. ಹೆಣ್ಣು ಮಕ್ಕಳೆಂದಲ್ಲ , ದುಡಿಮೆ, ಕೆಲಸ ಎಂದೆಲ್ಲ ಸಂಪಾದನೆ ಅನಿವಾರ್ಯವಿರುವ ಹೆಚ್ಚಿನ ಮಧ್ಯಮ ವರ್ಗದವರಿಗೂ ವರುಷಗಟ್ಟಲೆ ಯುನಿವರ್ಸಿಟಿ, ಹೈಯರ್ ಸ್ಟಡಿಸ್ ಎಂದೆಲ್ಲ ಎಡತಾಕುವುದು ಕಷ್ಟವೇ.

ಇನ್ನು ಅಣ್ಣನಂತಹ ಗೈಡ್ ಸಿಕ್ಕಿದ್ದು ನನ್ನ ಪುಣ್ಯವೇ. (ಪ್ರೊ.ಎಂ. ಎಚ್. ರುದ್ರಮುನಿ ಅವರು) . ಆಗೆಲ್ಲ ಕವಿತೆ, ಕತೆ ಎಂದೆಲ್ಲ ಬರೀತಿದ್ದಿಯಲ್ಲ , ಈಗಿಲ್ವಾ ಎಂದು ಹುರಿದುಂಬಿಸಿ ಮರಳಿ ವಿದ್ಯಾರ್ಥಿಯಂತೆ ಟ್ರಾಕ್ ಗೆ ಬಂದ ಅನುಭವ. ಕಲಿಕೆ ಎನ್ನುವುದು ನಿರಂತರ ಹೌದಾದರೂ ಗುರುವಿನ ನಿರ್ದೇಶನ, ಬೈಗುಳ, ಪ್ರಶಂಸೆ ಹೀಗೆಲ್ಲ ಇದ್ದರೇನೆ ಕಲಿಕೆಗೊಂದು ಮೌಲ್ಯ.

ಈ ಪಯಣದಲ್ಲಿ ನನ್ನ ಬದುಕೇ ಬದಲಾಯಿತು ಎಂದರೆ ತಪ್ಪಲ್ಲ. ನನ್ನ ಗಂಡ, ಮಗಳು ಸಹಕಾರವಿತ್ತದ್ದು ಹೌದಾದರೂ ಓದುವ ಕಾಯಕ ನನ್ನಿಂದಲೇ ಆಗಬೇಕಿತ್ತಲ್ಲವೇ? ಫ಼ುಲ್ ಟೈಮ್ ಜಾಬ್ ಜತೆ ಓದುವುದು ಸುಲಭವೇನೂ ಅಲ್ಲ. ಸಿನಾಪ್ಸಿಸ್ ಸಲ್ಲಿಸುವುದರಿಂದ ಶುರುವಾಗಿ ಡಿಗ್ರಿ ಸಿಗುವ ವರೆಗೆ ಅದೊಂದು ದೊಡ್ಡ ಯಜ್ಞ. ಡಾಕ್ಟರೇಟ್ ಇಲ್ಲದೆ ಕೂಡ ಜ್ಞಾನನಿಧಿಗಳಾಗಿರುವ ಅನೇಕರಿದ್ದಾರೆ ಎಂಬ ಸ್ಪಷ್ಟ ಅರಿವಿನೊಂದಿಗೆ ನಾನು ಹೇಳಬಯಸುತ್ತಿರುವುದು ಈ ಓದು ನನ್ನಲ್ಲಿ ತಂದ ಚೈತನ್ಯದ ಬಗ್ಗೆ. ಒಂದು ಶಿಸ್ತು ಬದ್ಧ ಓದು, ಹದಿನೈದು ವರ್ಷದ ನಂತರ ಯುನಿವರ್ಸಿಟಿಗೆ ಒಂದು ಫ಼ೈಲ್ ಹಿಡಿದುಕೊಂಡು ಹೋಗುವುದಿದೆಯಲ್ಲ ಅದೊಂದು ಅನಿರ್ವಚನೀಯ ಅನುಭವ. ಮಾನಸ ಗಂಗೋತ್ರಿಯ ವಿಶಾಲ ಕ್ಯಾಂಪಸ್, ಅಲ್ಲಿನ ವಿಸ್ತಾರವಾದ ಲೈಬ್ರರಿ, ರೌಂಡ್ ಕ್ಯಾಂಟೀನ್, ಕ್ರಾಫ಼ರ್ಡ್ ಹಾಲಿನ ಎದುರಿನ ಬಾಗಿ ನಿಂತ ಕ್ರಿಸ್ಮಸ್ ಟ್ರೀ.. ಇವೆಲ್ಲ ನನ್ನನ್ನು ಹೇಗಿದ್ದಿಯಮ್ಮ ಎಂದು ಮಾತನಾಡಿಸಿದಂತೆ, ಪಿ ಜಿಯಲ್ಲಿನ ಫ಼್ರೆಂಡ್ಸ್ ಎಲ್ಲ ಕಣ್ಣ ಮುಂದೆ ನಿಂತಂತೆ..( ಫ಼ೇಸ್ ಬುಕ್, ವಾಟ್ಸ್ ಆಪ್ ಇಲ್ಲದ ಆ ಕಾಲದ ಅವರೆಲ್ಲ ಈಗೆಲ್ಲಿದ್ದಾರೋ ತಿಳಿಯದು. )

ಕಠಿಣ ಪರಿಶ್ರಮದ ದಿನಗಳಿವೆಯಲ್ಲ, ಅವು ಆ ಸಂದರ್ಭಗಳಲ್ಲಿ ಉಸಿರು ಕಟ್ಟಿದಂತೆ ಭಾಸವಾದರೂ ಆ ನಂತರ ಆಪ್ಯಾಯತೆಯ ಭಾವ ಕೊಡುತ್ತದೆ. ಇಪ್ಪತ್ತು ಶನಿವಾರ ಕೋರ್ಸ್ ವರ್ಕ್ ಗೋಸ್ಕರ ಮಂಗಳೂರಿನಿಂದ ಮೈಸೂರಿಗೆ ಪಯಣ. ಶುಕ್ರವಾರ ಕಾಲೇಜಿನಲ್ಲಿ ಪಾಠ ಮುಗಿಸಿ, ನೈಟ್ ಬಸ್ಸಿನಲ್ಲಿ ಮೈಸೂರಿಗೆ ಹೋಗಿ , ಮೈಸೂರಿನಲ್ಲಿರುವ ಅಕ್ಕನ ಮನೆಗೋ, ಯುನಿವರ್ಸಿಟಿ ಗೆಸ್ಟ್ ಹೌಸಿಗೋ ಹೋಗಿ, ಕ್ಲಾಸಿಗೆ ಹಾಜರಾಗಿ ಮಧ್ಯಾಹ್ನ ಮೂರು ಗಂಟೆಯ ಗೋವಾ- ಪಣಜಿ ವೋಲ್ವೋ ಬಸ್ ಹತ್ತಿ ಮಂಗಳೂರು ಜ್ಯೋತಿ ಸರ್ಕಲ್ ಗೆ ರಾತ್ರಿ ಹತ್ತು ಗಂಟೆಗೆ ವಾಪಸ್. ನನ್ನ ಗಂಡ ಅಲ್ಲಿ ಕಾರಿನೊಂದಿಗೆ ಕಾಯುತ್ತಿದ್ದರು. ಈ ಶ್ರಮ ವ್ಯರ್ಥವಾಗಲಿಲ್ಲವೆನ್ನುವುದೊಂದು ಸಮಾಧಾನ.

ಇನ್ನು ನನ್ನ ಗೈಡ್ ನಾನು ಯಾವತ್ತೂ ಅಹಂಕಾರಿಯಾಗದಂತೆ, ಅದೇ ರೀತಿ ಕುಗ್ಗಿ ಕೂಡ ಹೋಗದಂತೆ ನೋಡಿಕೊಂಡರು. “ಶ್ರೀನಿವಾಸ ಅಯ್ಯಂಗಾರ್, ಮೀನಾಕ್ಷಿ ಮುಖರ್ಜಿ ಏನು ಹೇಳ್ತಾರೆ ಅಂತ ಅಲ್ಲ. ನಿಮಗೆ ಏನು ಅನಿಸ್ತದೆ ಬರೀರಿ ಜಯಶ್ರೀ” ಎಂದೆಲ್ಲ ಬೈದು ಬೈದು ‘ಒರಿಜಿನಲ್’ ಅಲ್ಲದ ಏನನ್ನೂ ಈಗಲೂ ಬರೆಯದಂತೆ ಅವರು ಎಚ್ಚರಿಸುತ್ತಲೇ ಇರುತ್ತಾರೆ.

ನಮ್ಮ ಸಂಕಟಗಳಿಗೆ, ಹೇಳಿಕೊಳ್ಳಲಾಗದ ಯಾತನೆಗಳಿಗೆ, ಯಾರಿಂದಲೂ ಅರ್ಥ ಮಾಡಿಕೊಳ್ಳಲಾಗದ ಸಂದಿಗ್ಧಗಳಿಗೆ, ಅಸಲಿಗೆ ನಮಗೆಯೇ ಅರ್ಥವಾಗದ ಗೊಂದಲಗಳಿಗೆ ‘ಓದು’ ಒಂದೇ ಮುಲಾಮು ಎಂದು ನಾನು ದೃಢವಾಗಿ ನಂಬಿದ್ದೇನೆ. ಅದರಲ್ಲೂ ನಮ್ಮ ಅಡುಗೆ, ಬಟ್ಟೆ ಬರೆ, ಸೀರೆ, ಬಳೆ, ಮಕ್ಕಳು, ಮನೆವಾರ್ತೆ, ಎಲ್ಲವನ್ನು ಹೊರತು ಪಡಿಸಿ, ಅಥವಾ ಒಳಗೊಂಡು, ಒಂದು ಆಂತರಿಕ ಜಗತ್ತನ್ನು ಬೆಳೆಸಿಕೊಳ್ಳುವುದು ನಮ್ಮೆಲ್ಲರ , ಅದರಲ್ಲೂ ಹೆಣ್ಣು ಮಕ್ಕಳ ಮಾನಸಿಕ ಸ್ವಾಸ್ಥ್ಯಕ್ಕೆ ಅಗತ್ಯವಾಗಿದೆ. ಇದೇ ಹಂತದಲ್ಲಿ ನಾನು ಅವರ, ಹೀಗೆ ಹತ್ತು ಹಲವು ಸ್ತ್ರೀ ವಾದಿ ಚಿಂತಕರ ಪುಸ್ತಕಗಳನ್ನು ಓದಿದೆ. The Second Sex (Simone De Beauvoir), The Feminine Mystique ( Betty Friedan) , The Female Eunuch ( Germaine Greer), ‘ Can the Subaltern Speak’? (Gayatri Chakavorthy Spivak) ,Real and Imagined Women ( Rajeshwari SundarRajan ) , Appropriately Indian (Smitha Radhakrishnan) …..ಓದಿದ ವಿಚಾರಗಳು ತಲೆಯಲ್ಲಿ ತಾಕಲಾಡುತ್ತಿದ್ದವು. ಈ ಹಂತದಲ್ಲಿ ನಾನು ಸಣ್ಣದಾಗಿ ಪತ್ರಿಕೆಗಳಿಗೆ, ಮ್ಯಾಗಜಿನ್ ಗಳಿಗೆ ಬರೆಯಲಾರಂಭಿಸಿದೆ. ನನ್ನ ಅಸ್ಪಷ್ಟ ಯೋಚನೆಗಳಿಗೆ ಅವು ರೂಪುರೇಷೆ ಕೊಡುತ್ತಾ ಬಂದವು. ದೊಡ್ಡ ಲೇಖಕಿ ಎಂದಲ್ಲದಿದ್ದರೂ ತಕ್ಕ ಮಟ್ಟಿಗೆ ಗುರುತಿಸಿಕೊಂಡದ್ದಕ್ಕೆ ಖುಶಿ ಇದೆ.

ಗಂಗೋತ್ರಿಯಲ್ಲಿ ಮರಳಿ ವಿದ್ಯಾರ್ಥಿನಿಯಾಗಿ ಕಳೆದ ‘ಗೋಲ್ಡನ್’ ವರ್ಷಗಳಿಗೆ, ನನ್ನನ್ನು ಪೊರೆದ ಮಾನಸ ಗಂಗೋತ್ರಿ ಸಂಸ್ಥೆಗೆ ನಾನು ಋಣಿ. ಮೈಸೂರಿನ ಶಾಂತ ವಾತಾವರಣ, ಚಾಮುಂಡಿ ಬೆಟ್ಟದಿಂದ ಬೀಸಿ ಬರುವ ತಂಗಾಳಿ ನನ್ನನ್ನು ಹರಸಿದೆ ಎಂದೇ ನನಗನಿಸುತ್ತದೆ.

ಬದುಕಿನ ಕಾಲು ಶತಮಾನವನ್ನು ನಮಗೇನು ಬೇಕು ಎಂದು ಅರಿವಿಲ್ಲದೆ ನಾವು ಕಳೆದುಕೊಳ್ಳುತ್ತೇವೆ. ಅದು ಮರಳಿ ಸಿಕ್ಕಿದಾಗ ಅದನ್ನು ಉಪಯೋಗಿಸಿಕೊಳ್ಳಬೇಕು. ನನಗೆ ಪ್ರಿಯವಾದ ಓದು ಮತ್ತು ಬರವಣಿಗೆ ನನಗೆ ಮರಳಿ ಸಿಕ್ಕಿದ್ದೇ ನನ್ನ ಸೌಭಾಗ್ಯ. ಈ ಪಯಣದಲ್ಲಿ ನನಗೆ ಹಲವಾರು ಗೆಳತಿಯರು, ಅದರಲ್ಲೂ ಲೇಖಕಿಯರು ಸಿಕ್ಕರು. ಹಳ್ಳಿ ಮೂಲೆಯಲ್ಲಿದ್ದುಕೊಂಡೇ ಮಲ್ಲಿಗೆ ಬಿರಿದಂತೆ ಕವಿತೆ ಬರೆವ ಕವಯಿತ್ರಿಯರು, ಮನುಷ್ಯ ಜೀವನದ ಬೆಚ್ಚಿ ಬೀಳಿಸುವ ಸತ್ಯಗಳನ್ನು ಬರೆಯುವ ಕತೆಗಾರ್ತಿಯರು, ಪ್ರಖರವಾಗಿ ಚಿಂತಿಸುವ ಭಾಷಣಕಾರರು, ವಾಗ್ಮಿಗಳು, ಲೇಖನವೋ, ಕವಿತೆಯೋ ಬರೆದರೆ ಅದನ್ನು ಮುಲಾಜಿಲ್ಲದೆ ಖಂಡಿಸಿ ತಿದ್ದುವ ಆಪ್ತ ವಲಯದವರು..ಹೀಗೆ.

‘ಕವಿತೆ, ಕತೆ, ಲೇಖನ, ಹೆಚ್ಚೇಕೆ ಒಂದು ಅಡುಗೆ ರೆಸಿಪಿ ಅಪ್ ಲೋಡ್ ಮಾಡುವುದು ಕೂಡ ಹೆಣ್ಣಿಗೆ ಅಭಿವ್ಯಕ್ತಿಯ ಮಾರ್ಗವೇ. ಬರೆಯುತ್ತ ಬರೆಯುತ್ತ ಖಾಲಿಯಾಗುತ್ತ ಹೋಗುತ್ತೇವೆ. ಕ್ರಮೇಣ ನಮ್ಮ ಬರಹಗಳಲ್ಲಿ ಏಕತಾನತೆ, ಶುಷ್ಕತೆ ತುಂಬಿಕೊಳ್ಳುವ ಸಾಧ್ಯತೆಗಳೂ ಇವೆ. ಹೆಣ್ಣು ಯಾಕೆ ಬರೆಯಬೇಕು? ಬರೆದರೆ ಯಾರಾದರೂ ಓದುತ್ತಾರೆಯೇ? ಎನ್ನುವುದೂ ಒಂದು ಪ್ರಶ್ನೆ. ನನ್ನನ್ನೂ ಸೇರಿಸಿದಂತೆ ಹೆಚ್ಚಿನ ಬರಹಗಾರ್ತಿಯರಿಗೆ ಬದುಕೆಂಬುದು ಕಿಟಿಕಿಯಿಂದ ನೋಡುವ ಜಗತ್ತೇ. ಮನೆ- ಕೆಲಸ- ಹೆಚ್ಚೆಂದರೆ ಸಣ್ಣ ಪುಟ್ಟ ಪ್ರವಾಸ, ಪುಸ್ತಕಗಳ ಓದು. ‘ಜೆಂಡರ್’ ಎನ್ನುವುದು ನಮ್ಮನ್ನು ಮಿತಿಯಲ್ಲಿ ಇರಿಸಿರುವುದು ಸತ್ಯ. ಕೇವಲ ಪುಸ್ತಕಗಳಿಂದ ಲಭ್ಯವಾದ ಅಷ್ಟಿಷ್ಟು ಜ್ಞಾನ ಪ್ರಾಕ್ಟಿಕಲ್ ಅಲ್ಲ ಎನ್ನುವ ಅರಿವೂ ನನಗಿದೆ. ಹಾಗೆಂದು ಅದಕ್ಕೆ ಹೊರತಾದ ಆಕಾಶ ನಮಗೆ ಲಭಿಸುವುದಿದ್ದಲ್ಲಿ, ಮನೆವಾರ್ತೆಯ ಜಂಜಡದಿಂದ ಮುಕ್ತಿ ಸಿಗುವುದಿದ್ದಲ್ಲಿ ( ಅಡುಗೆ, ಮನೆಕೆಲಸದಲ್ಲಿ ಸಂತಸ ಇಲ್ಲವೆಂದಲ್ಲ. ಅದೊಂದು ಚಕ್ರದಂತೆ ಮುಗಿಯುವುದೇ ಇಲ್ಲವೆನ್ನುವುದು ಸತ್ಯ) ಹೆಣ್ಣು ಮಕ್ಕಳೂ ಬರೆಯಬಲ್ಲರು. ಅದಕ್ಕೆ ಅವರಿಗೆ ಆರ್ಥಿಕ ಸ್ವಾತಂತ್ರ್ಯ, ಪೂರಕ ವಾತಾವರಣಗಳೂ ಬೇಕು,.
ಇನ್ನು ಜಗತ್ತು ಗ್ಲೋಬಲೈಸ್ಡ್ ಆಗಿರುವ ಈ ಕಾಲದಲ್ಲಿ ಶ್ರಮ ವಿಭಜನೆ, ಹಣ ಸಂಪಾದನೆ, ವಿದ್ಯೆಯ ಅರ್ಜನೆ, ಪ್ರೀತಿ ಪ್ರೇಮ ಮೊದಲುಗೊಂಡು ಭಾವನೆಗಳ ಅನುಪಾತ, ಎಲ್ಲವನ್ನೂ ಹೊಸ ದೃಷ್ಟಿಯಿಂದ ನೋಡಲೇಬೇಕಾದ ಅವಶ್ಯಕತೆ ಇದೆ. ಎಲ್ಲಕ್ಕಿಂತ ಮಿಗಿಲಾಗಿ ಎಳೆಯ ಹೆಣ್ಣುಮಕ್ಕಳಿಗೆ ‘ಆಯ್ಕೆ’ ಯ ಸ್ವಾತಂತ್ರ್ಯ ಕೊಡಬೇಕೆಂದು ನನ್ನ ಭಾವನೆ.

ಇಪ್ಪತ್ತು ವರ್ಷದ ಎಳೆ ವಿದ್ಯಾರ್ಥಿನಿಗೆ ಬರುವ ವರ್ಷ ತಾನು ಮದುವೆ ಆಗುತ್ತೇನೆಯೇ ಅಥವಾ ಹೆಚ್ಚಿನ ಓದು ಓದುತ್ತೇನೆಯೇ ಎನ್ನುವ ವಿಷಯದ ಬಗ್ಗೆ ಈಗಲೂ ಆಯ್ಕೆಗಳಿಲ್ಲದಿರುವಾಗ,ಕೋವಿಡ್ ಕಾಲ ಬಂದಿದ್ದೇ ಸಾಕೆಂದು ಡಿಗ್ರಿ ಫ಼ೈನಲ್ ವರ್ಷದ ಹಲವು ಹುಡುಗಿಯರು ಪರೀಕ್ಷೆ ಕೂಡ ಬರೆಯದೆ ಮದುವೆ ಆದಾಗ, ಈ ಹುಡುಗಿಯರಿಗೆ ಏನಾದರೂ ‘ಆಯ್ಕೆ’ ಯ ಸ್ವಾತಂತ್ರ್ಯ ಇತ್ತೇ ಎಂದೆನಿಸುತ್ತದೆ. ಉಪನ್ಯಾಸಕಿ ಎನ್ನುವ ನೆಲೆಯಲ್ಲಿ ಓದಿನ ಮಹತ್ವವನ್ನು, ಸ್ವಾವಲಂಬಿಯಾಗಬೇಕಾದ ಅಗತ್ಯವನ್ನು ಒತ್ತಿ ಒತ್ತಿ ಹೇಳುವುದೊಂದೇ ನಮ್ಮಿಂದ ಮಾಡಲು ಸಾಧ್ಯ.

ಒಟ್ಟಿನ ಮೇಲೆ. ಪುಸ್ತಕಗಳ ಓದು, ಇ ಸಂಪನ್ಮೂಲಗಳು ಸೇರಿದಂತೆ ಶೇಷ್ಠ ಗ್ರಂಥಾಲಯಗಳು, ಉತ್ತಮ ಪುಸ್ತಕಗಳ ಓದು ನಮ್ಮನ್ನು ಬೆಳೆಸುತ್ತದೆ.
ಏನಿಲ್ಲವೆಂದರೂ ನಮ್ಮ ಮಸ್ತಿಷ್ಕದಲ್ಲಿ ಬೆಳಕಿನ ಕಿಡಿಯೊಂದನ್ನು ಹಚ್ಚುತ್ತದೆ. ಈ ಕಾರಣಕ್ಕಾಗಿ ನಾನು ಗಂಗೋತ್ರಿಯ ನೆನಪುಗಳನ್ನು ಕಾಪಿಟ್ಟುಕೊಳ್ಳಲು ಬಯಸುತ್ತೇನೆ. ‘ಏಸೊಂದು ಮುದವಿತ್ತು’ ಆ ಕಾಲ’ ..

-ಡಾ. ಜಯಶ್ರೀ ಬಿ ಕದ್ರಿ, ಮಂಗಳೂರು

17 Responses

  1. ಆಶಾ ನೂಜಿ says:

    ಚೆನ್ನಾಗಿದೆ ನೆನಪುಗಳ ಪುಟ . ಜಯಶ್ರೀ .ಸಾಧಿಸಬೇಕೆಂಬ ಆತ್ಮವಿಶ್ವಾಸ ನಮ್ಮಲ್ಲಿದ್ದರೆ ಏನನ್ನೂ ಸಾಧಿಸಬಹುದು ಎಂದು ತೋರಿಸಿಕೊಟ್ಟಿ …ಚಂದದ ಬರಹ ನನಗಂತೂ ಖುಷಿ ಆಯಿತು …

  2. ಮಹೇಶ್ವರಿ ಯು says:

    ಜಯಶ್ರೀ ಖುಷಿಯಾಯಿತು ಓದಿ. ಅಭಿನಂದನೆಗಳು

  3. Savithri bhat says:

    ವೃತ್ತಿ ಜೀವನ ದೊಂದಿಗೆ ನಿಮ್ಮ ಉನ್ನತ ವ್ಯಾಸಂಗದ ಅನುಭವ ವನ್ನು ಬಹಳ ಸುಂದರವಾಗಿ ನಿರೂಪಿಸಿದ್ದೀರಿ..ಅಭಿನಂದನೆಗಳು..

  4. Samatha.R says:

    ತುಂಬಾ ಚೆನ್ನಾಗಿದೆ ಲೇಖನ..ನಿಜ ಆಯ್ಕೆಯ ಸ್ವಾತಂತ್ರ್ಯ ಇಂದಿನ ಈ ಅತ್ಯಾಧುನಿಕ ಕಾಲದಲ್ಲೂ ಬಹಳ ಹೆಣ್ಣುಮಕ್ಕಳಿಗೆ ಇಲ್ಲ.ಬರವಣಿಗೆ ಬಹಳ ಸುಲಭವಾಗಿ ದೊರೆಯುವ ಒಂದು ಅಭಿವ್ಯಕ್ತಿ ಮಾಧ್ಯಮ..ತೋಚಿದ್ದನ್ನು ಹುಡುಗಿಯರು ಬರೀತಾ ಹೋಗ್ಬೇಕು…ವಿಮರ್ಶೆ ಬಗ್ಗೆ ಎಲ್ಲಾ ತಲೆ ಕೆಡಿಸಿಕೊಳ್ಳಬೇಡಿ..ಎಂದು ನನ್ನ ಗೆಳತಿ ಕವಿ ಸ್ಮಿತಾ ಅಮೃತರಾಜ್ ನನಗೆ ಹೇಳದೆ ಇದ್ದಿದ್ದರೆ ಬಹುಶಃ ನಾ ಎಂದಿಗೂ ಬರೀತಾ ಇರಲಿಲ್ಲ…ನಿಮ್ಮ ಲೇಖನ ಬಹಳ ಸ್ಪೂರ್ತಿದಾಯಕ ವಾಗಿದೆ ಮೇಡಂ…ಅಭಿನಂದನೆಗಳು..

  5. ನಾಗರತ್ನ ಬಿ. ಅರ್. says:

    ಸಾಧಿಸಬೇಕು ಎಂಬ ಛಲ ಮನ ಒಂದಿಷ್ಟು ಇದ್ದರೆ ಏನಾದರೂ ಮಾಡಬಹುದು ಎನ್ನುವುದನ್ನು ತಮ್ಮ ಅನುಭವದ ಮೂಸೆಯಲ್ಲಿ ಅದ್ದಿ ಉಣಬಡಿಸಿದ ಬಗೆ ಬಹಳಷ್ಟು ಆಪ್ತವಾಗಿ ಮೂಡಿ ಬಂದಿದೆ.ಧನ್ಯವಾದಗಳು ಮೇಡಂ.

  6. Hema says:

    ಉತ್ತಮ ಸಾಧನೆ, ಚೆಂದದ ಬರಹ.

  7. ಎಲ್ಲರಿಗೂ ಧನ್ಯವಾದಗಳು. ತುಂಬಾ ಥ್ಯಾಂಕ್ಸ್ ಮಹೇಶ್ವರಿ ಮೇಡಂ ನೀವು ನಮಗೆಲ್ಲ ಸ್ಫೂರ್ತಿ

  8. ನಯನ ಬಜಕೂಡ್ಲು says:

    Superb. ಸ್ಫೂರ್ತಿ ತುಂಬುವ ಬರಹ, ಹಾಗೆಯೇ ಓದಿನ ಮಹತ್ವವನ್ನು ಬಹಳ ಚೆನ್ನಾಗಿ ವಿವರಿಸಿದ್ದೀರಿ.

  9. ಹರೀಶ್ ಪೆರ್ಲ says:

    ಅಷ್ಟೆಲ್ಲ ಕಷ್ಟ ಇದೆ ಎಂದು ನಾನು ಯಾವುದೇ ಹೆಜ್ಜೆ ಇರಿಸುವ ಗೋಜಿಗೆ ಹೋಗದೆ ಲೇಖನ ಕವನ ಸಣ್ಣ ಚಿಕ್ಕ ಕತೆಗೆ ಸೀಮಿತ ಗೊಳಿಸಿದ್ದೇನೆ. ಈಗ ಹೆಚ್ಚು ಕಡಿಮೆ ಎಲ್ಲಾ ಮುಗಿಸುವ ಮನಸ್ಸಿನ ಹಂತದಲ್ಲಿ ಇದ್ದೇನೆ. ನಿಮ್ಮಂತಹವ ರ ಯಶೋಗಾಥೆಗೆ ಸದ್ದಿಲ್ಲದೆ ಶುಭ ಹಾರೈಸುತ್ತೇನೆ.

  10. Anonymous says:

    ನಿಮ್ಮ ಅನುಭವ ಕಥನ ಓದಿ ಖುಷಿಯಾಯಿತು.

  11. ಶಂಕರಿ ಶರ್ಮ, ಪುತ್ತೂರು says:

    ನೆನಪಿನ ಸಿಹಿ ಬುತ್ತಿಯನ್ನು ಬಿಚ್ಚಿದೆ ಈ ಸೊಗಸಾದ ಲೇಖನ..
    ಮಧ್ಯಮ ವರ್ಗದ ಹೆಣ್ಣು ಮಕ್ಕಳ ಒಳ ಹೊರಗನ್ನು ನಿರೂಪಿಸಿದ ರೀತಿ ಮನ ಮುಟ್ಟಿತು.

  12. Padma Anand says:

    ನೆನಪುಗಳ ಮೆಲುಕು ಅತಿ ಮಧುರ. ಮನಸ್ಸಿನ ಧೃಡ ನಿಶ್ಚಯವಿದ್ದರೆ ವಯಸ್ಸು ಎಂಬುದು ಒಂದು ಸಂಖ್ಯೆಯಷ್ಟೆ. ಸಾಧನೆಗೆ ಸ್ಪೂರ್ತಿಯಾಗುವ ಲೇಖನ.

  13. Akshata krishnmurthy says:

    ಒಳ್ಳೆಯ ಅನುಭವ ಕಥನ.
    ದೈನಿಕ ದಿವ್ಯವಾಗಿ ಕಂಡಿತು.

  14. sudha says:

    DR.JAYASHREE very happy to read your gangotri kathe. i too went to gangotri again for my Ph.D when i was 45 yrs young! and enjoyed it like you . With family..aged f in law and mother. got many young friends. a life time wish was achieved. thanks for bringing back my memories.

  15. ನಿರ್ಮಲ says:

    ಬರೆಹ ಪ್ರಾರಂಭಿಸಲು ವಯಸ್ಸಿನ ಅಡ್ಡಿ ಇರುವುದಿಲ್ಲ. ಗಂಗೋತ್ರಿಯ ನೆನಪುಗಳಿಗಂತೂ ತಮ್ಮಷ್ಟಕ್ಕೆ ತಾವೇ ಉಕ್ಕಿ ಹರಿಯುವ ಚೈತನ್ಯವಿದೆ. ಹೆಣ್ಣಿನ ಬಾಳಿನ ಸತ್ಯಾಸತ್ಯತೆಯನ್ನು ತೆರೆದಿಡುವ ನಿಮ್ಮ ಕಥನ ಚೆನ್ನಾಗಿದೆ. ನನಗೂ ನಾವು ಗಂಗೋತ್ರಿಯಲ್ಲಿ ಕಳೆದ ದಿನಗಳು ಕಾಡುತ್ತಲೇ ಇರುತ್ತವೆ.

  16. ವತ್ಸಲ says:

    ಭಾವಾಂತರಂಗಗಳು ತುಂಬಿರುವ ಕವನ, ಕವಿತೆಗಳಲ್ಲಿ
    ಹುರುಳಿಲ್ಲವೆಂದು ಎಷ್ಟೋ ಸಲ ನನಗೆ ಅನಿಸಿದ್ದುಂಟು.
    ಬದುಕೇ ಬೇರೆ, ಬರಹವೇ ಬೇರೆ. ನಿಜ. ಆದರೂ,
    ಅವುಗಳು ತುಲನೆಗೆ ಮೀರಿದ್ದು. ನಿಮ್ಮ ನೆನಪಿನ ಬುತ್ತಿ
    ತುಂಬಾ ಚೆನ್ನಾಗಿದೆ ಜಯಶ್ರೀಯವರೆ.

  17. padmini kadambi says:

    ಚಿಂತನೆ, ವಿವೇಚನೆಗೆ ಹಚ್ಚುವ ಸಂಶೋಧಕ ಓದು ಯಾವಾಗಲೂ ಸಂತೋಷದಾಯಕ ಎನ್ನುವ ನಿಮ್ಮ ಲೇಖನ ಚೆನ್ನಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: