ಕಾದಂಬರಿ

‘ಭಾವ ಸಂಬಂಧ’-ಕಿರು ಕಾದಂಬರಿ, ಲೇಖಕಿ; ಪದ್ಮಾ ಆನಂದ್

Share Button

ಭಾವ ಸಂಬಂಧ. (ಕಿರು ಕಾದಂಬರಿ) ಲೇಖಕಿ; ಪದ್ಮಾ ಆನಂದ್.
(ನನ್ನ ಅನಿಸಿಕೆ : ಬಿ.ಆರ್,ನಾಗರತ್ನ. ಮೈಸೂರು)

‘ಜನನವೂ ಸತ್ಯ, ಮರಣವೂ ಸತ್ಯ ,ಇವೆರಡರ ನಡುವೆ ಇರುವ ಜೀವನ ನಿತ್ಯಸತ್ಯ’ ಎನ್ನುವ ಉಕ್ತಿಯಿದೆ. ಈ ನಿತ್ಯಸತ್ಯವಾದ ಜೀವನದ ಅವಧಿಯಲ್ಲಿ ಬೆಸೆಯುವ ಸಂಬಂಧಗಳು ಅಸಂಖ್ಯಾತ, ಅಪರಿಮಿತ. ಕೆಲವು ಅನಿವಾರ್ಯ, ಅವಶ್ಯ, ಅಗತ್ಯವಾಗಿದ್ದರೆ ಮತ್ತೆ ಕೆಲವೊಂದರಲ್ಲಿ ನಮ್ಮ ಆಯ್ಕೆಗೆ ಅವಕಾಶಗಳಿರುತ್ತವೆ. ಕೆಲವು ಅಂತಸ್ತು, ಅಧಿಕಾರ, ಜಾತಿಮತ ಇವುಗಳ ಗೊಂದಲ ಗೋಜುಗಳಿಲ್ಲದೆ ನಮ್ಮ ಮನದ ಭಾವನೆಗಳಿಗೆ ಸ್ಪಂದಿಸಿ ಬೆಸೆಯುವ ಕೊಂಡಿಗಳಾಗಿರುತ್ತವೆ. ಅವೇ ಭಾವ ಸಂಬಂಧಗಳು. ಇಂಥಹ ಸಂಬಂಧಗಳ ಅನಾವರಣವೇ ಇಲ್ಲಿನ ಕಾದಂಬರಿಯ ಕಥಾವಸ್ತು.

ಕಾದಂಬರಿಯ ಕಥಾನಾಯಕಿ ಸರಸ್ವತಿ ತನ್ನ ಹೆತ್ತಮ್ಮನ ಅಗಲಿಕೆ, ಮಲತಾಯಿಯ ಕಪಿಮುಷ್ಠಿ, ಪರಿಸ್ಥಿತಿಯ ಕೈಗೊಂಬೆಯಾಗಿದ್ದ ಹೆತ್ತಪ್ಪ, ಇವುಗಳಿಂದ ನೊಂದು ಬೆಂದು ಪ್ರೀತಿಗಾಗಿ ಹಪಹಪಿಸುತ್ತಿದ್ದಾಗ ಅಂಗೈಯಲ್ಲೇ ಆಕಾಶ ತೋರಿಸುವೆನೆಂದವನನ್ನು ನಂಬಿ ಕುಟುಂಬದಿಂದ ಹೊರಬರುತ್ತಾಳೆ. ತನ್ನ ಆಯ್ಕೆ ತಪ್ಪೆಂದು ತಿಳಿಯುವಷ್ಟರಲ್ಲಿ ಅವನಿಂದ ಅವಳ ಬದುಕು ಹದಗೆಟ್ಟು ಬಯಲಿಗೆ ಬಿದ್ದಿರುತ್ತಾಳೆ. ಆ ಬದುಕನ್ನು ಅವಳಿಗೆ ಯಾವುದೇ ಪೂರ್ವ ಸಂಬಂಧವಿಲ್ಲದ ವ್ಯಕ್ತಿಗಳಿಂದ ಹಸನುಗೊಳಿಸಿಕೊಂಡು ಶುಶ್ರೂಷಕಿಯಾಗಿ ವೃತ್ತಿ ಹಿಡಿದು ಕೆಲಸ ನಿರ್ವಹಿಸುತ್ತಾ ಬದುಕಿನ ಬಂಡಿಯನ್ನು ಸಾಗಿಸುತ್ತಿರುತ್ತಾಳೆ.

ಮದುವೆಯಾಗಿ ತಮ್ಮ ಒಲವಿನ ಪತಿ, ಪ್ರೀತಿಯ ಮಗಳನ್ನು ಪಡೆದು ಬದುಕನ್ನು ನಿಲ್ಲಿಸಲು ಬಂದದ್ದೆಲ್ಲವನ್ನೂ ಮೂಕವಾಗಿ ಸ್ವೀಕರಿಸಿ, ಸಹಕರಿಸಿ, ಒಪ್ಪಿಕೊಂಡು, ಅಪ್ಪಿಕೊಂಡು ಜೀವನ ನಡೆಸುತ್ತಿದ್ದ ಹಿರಿಯ ಜೀವ ಸೀತಮ್ಮ. ಆಕೆಯ ಬಾಳಸಂಗಾತಿಗೆ ಬಂದ ಕೊರೋನಾ ಖಾಯಿಲೆಯ ಆರೈಕೆಗೆಂದು ಸಂಬಂಧಪಟ್ಟ ಅಧಿಕಾರಿಗಳನ್ನೊಪ್ಪಿಸಿ ಕಥಾನಾಯಕಿ ಸರಸ್ವತಿಯ ಜೊತೆಯಲ್ಲಿ ಆಸ್ಪತ್ರೆಗೆ ಬರುತ್ತಾರೆ. ಅಲ್ಲಿ ತನ್ನ ಪತಿಗೆ ನೀಡಿದ ಚಿಕಿತ್ಸೆ ಫಲಕಾರಿಯಾಗದೆ ಅವರನ್ನು ಕಳೆದುಕೊಳ್ಳುತ್ತಾರೆ. ನಂತರದ ದಿನಗಳಲ್ಲಿ ಸರಸ್ವ್ವತಿ ಮತ್ತು ಸೀತಮ್ಮ ಇಬ್ಬರೂ ಒಟ್ಟಿಗೆ ಬಾಳ್ವೆ ನಡೆಸುವ ನಿರ್ಧಾರ ಮಾಡುತ್ತಾರೆ. ಆಗ ಒಬ್ಬರಿಗೊಬ್ಬರು ತಮ್ಮ ತಮ್ಮ ಬಾಳಿನ ಬುತ್ತಿಗಳನ್ನು ಬಿಚ್ಚಿಕೊಂಡು ಉಣಬಡಿಸಿರುವುದೇ ಕಾದಂಬರಿಯ ಕಥಾವಸ್ತು.

ಇಲ್ಲಿ ಬರುವ ಕೆಲವು ಪಾತ್ರಗಳನ್ನು ಬಿಟ್ಟು ಮಿಕ್ಕವೆಲ್ಲಾ ಒಂದಲ್ಲಾ ಒಂದು ರೀತಿಯಲ್ಲಿ ಭಾವನಾತ್ಮಕ ಸಂಬಂಧಗಳೇ ಆಗಿವೆ. ಯಾರಿಗೆ ಯಾರೂ ರಕ್ತಸಂಬಂಧಿಗಳಲ್ಲ. ಇಲ್ಲಿ ಯಾವುದೇ ಸ್ವಾರ್ಥ. ಕಪಟ, ಮೋಸ, ಆಡಂಬರ, ವಂಚನೆಗಳ ಛಾಯೆಯ ಸುಳಿವಿಲ್ಲ.

ತಮ್ಮ ಆರೈಕೆಗೆ ಮನೆಗೆ ಬಂದವಳೆಂಬ ಇಬ್ಬರ ನಡುವಿನ ಪರದೆಯನ್ನು ತಾವೇ ಕಳೆದು ಅವಳನ್ನು ಸ್ವೀಕೆರಿಸಿದರು ಹಿರಿಯ ದಂಪತಿಗಳು. ಅವರು ದಿಕ್ಕೆಟ್ಟು ಬಂದ ಅಸಹಾಯಕ ಹುಡುಗಿ ಸರಸ್ವತಿಯ ಪ್ರೀತಿ, ವಿಶ್ವಾಸ, ಪ್ರಾಮಣಿಕತೆ, ಸೇವಾನಿಷ್ಟೆಗಳಿಗೆ ಮನಸೋತರು. ಅಷ್ಟೇ ಅಲ್ಲ. ಆಕೆಗೆ ಅವಳ ಭವಿಷ್ಯಕ್ಕೊಂದು ಭರವಸೆಯನ್ನು ಕಟ್ಟಿಕೊಡಲು ಮುಂದಾಗುತ್ತಾರೆ. ಅದನ್ನು ಸಮರ್ಥವಾಗಿ ನಿಭಾಯಿಸಿದ್ದನ್ನು ಕಂಡು ಸಂತಸಪಟ್ಟು ತಾವು ನೆರವು ನೀಡಿದ್ದಕ್ಕೂ ಸಾರ್ಥಕವಾಯಿತೆಂದು ತೃಪ್ತಿಪಟ್ಟುಕೊಳ್ಳುತ್ತಾರೆ. ಹಾಗೇ ತಮ್ಮೆಲ್ಲ ಆಸ್ತಿಗೆ ಅವಳನ್ನೇ ವಾರಸುದಾರಳನ್ನಾಗಿ ಮಾಡಿ ಈ ಲೋಕದಿಂದ ಕಾಲವಾಗುತ್ತಾರೆ. ಇಲ್ಲಿ ಅವರುಗಳ ನಡುವೆ ಮೂಡಿದ ಅವಿನಾಭಾವ ಸಂಬಂಧ ಅನನ್ಯವಾದದ್ದು, ನಿಸ್ವಾರ್ಥವಾದದ್ದು.

ಆ ಹಿರಿಯ ದಂಪತಿಗಳಿಂದ ಪಡೆದ ಆಸ್ತಿಯನ್ನು ತಾನೇ ಚೆನ್ನಾಗಿ ಅನುಭವಿಸುತ್ತಾ ಸುಖವಾಗಿರಬಹುದಾಗಿತ್ತು. ಆದರೆ ಅದನ್ನು ಅನಾಯಾಸವಾಗಿ ಪಡೆದ ಕಥಾನಾಯಕಿ ತನಗಾಗಿ ಬಳಸದೆ ತನ್ನಂತೆ ಆವಶ್ಯಕವಿರುವವರಿಗೆ ಅನುಕೂಲವಾಗುವಂತೆ ವಿನಿಯೋಗಿಸಲು ಮೀಸಲಿಡುತ್ತಾಳೆ. ಇಲ್ಲಿ ಅವಳ ಭಾವನೆಯಲ್ಲಿ ಮೂಡಿದ್ದು ಮಾನವೀಯ ಬಂಧ, ಸಮಾಜದೊಡನೆ ಸಂಬಂಧ ಅಪೂರ್ವವಾದದ್ದು.

ಬಾಳಸಂಗಾತಿಯನ್ನು ಒಂದರೆಕ್ಷಣ ಬಿಡದೆ ಕಷ್ಟಸುಖದಲ್ಲಿ ಅವನಿಗೆ ಹೆಗಲೆಣೆಯಾಗಿ ಜೋಡಿ ಎತ್ತುಗಳಂತೆ ಬಾಳಿನ ಬಂಡಿಯ ನೊಗಹೊತ್ತು ಸಾಗಿಬಂದಿದ್ದ ಸೀತಮ್ಮ ಆತನನ್ನು ಕಳೆದುಕೊಂಡಾಗ ಧೃತಿಗೆಡದೆ ಅಲ್ಲಿನ ಕೊರೋನಾ ಪೀಡಿತರಿಗೆ ಸೇವೆ ಮಾಡುವ ‘ಕೊರೊನಾ ವಾರಿಯರ್’ ಆಗಿಯೇ ಮುಂದುವರೆಯಲು ನಿರ್ಧರಿಸುತ್ತಾರೆ. ಇದು ನಿಷ್ಕಳಂಕ ಸೇವಾ ಮನೋಭಾವದೊಂದಿಗೆ ಬೆಸೆದುಕೊಂಡ ಸಂಬಂಧ. ಹೋಲಿಕೆ ಮಾಡಲಾಗದಂತದ್ದು.

ಇಲ್ಲಿ ಬರುವ ಸೀತಮ್ಮನವರ ಸ್ವಂತ ಮಗಳು ರೇಖಾಳ ಪಾತ್ರ ಮೊದಮೊದಲು ಎಂಥಹ ಸ್ವಾರ್ಥಿಯೆನ್ನಿಸುತ್ತದೆ. ಆದರೆ ಕೊನೆಯಲ್ಲಿ ತಂದೆಯವರ ಅಂತಿಮ ದರ್ಶನಕ್ಕೂ ಆಕೆ ಬರಲಾಗದೆ ತಾಯಿಯ ಆಶ್ರಯ ಪಡೆದ ಸರಸ್ವತಿಯೊಡನೆ ತನ್ನ ಬದುಕಿನ ಪುಟಗಳನ್ನು ತೆರೆದಿಟ್ಟಾಗ ಅವಳ ಅಸಹಾಯಕ ಪರಿಸ್ಥಿತಿ, ಆಕೆಯು ತನ್ನ ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಎಸಗಿದ ಪ್ರಮಾದವನ್ನು ತಿಳಿದು ನಾವಂದುಕೊಂಡ ಅಭಿಪ್ರಾಯ ತಪ್ಪು ಎಂದೆನಿಸುತ್ತದೆ.

ಕಥಾನಾಯಕಿಗಿಂತ ರೂಪು, ವಿದ್ಯೆ, ಅಧಿಕಾರ, ಅಂತಸ್ತು ಎಲ್ಲದರಲ್ಲೂ ಎತ್ತರವಾಗಿ ಕಂಡರೂ ಅವಳು ಆಯ್ದುಕೊಂಡಿದ್ದ ಪರಿಧಿಯಿಂದ ಹೊರಬರಲಾರಳೆಂಬ ಅರಿವು ನಮಗಾಗುತ್ತದೆ. ಇಲ್ಲಿ ಭಾವನಾತ್ಮಕ ಸಂಬಂಧಕ್ಕಿಂತಲೂ ಚಿಕ್ಕಂದಿನಿಂದ ಬೆಸೆದುಕೊಂಡಿದ್ದ ಸಂಸ್ಕಾರದ ಕೊಂಡಿಯ ಬಂಧದಿಂದ ಮುಕ್ತಳಾಗದೆ ಕರ್ತವ್ಯದ ಕಡೆಯ ಜವಾಬ್ದಾರಿಯೇ ಮೇಲುಗೈಯಾಗಿದೆ.

ಇನ್ನು ಅಳಿಯನ ಪಾತ್ರ ಹೊರಗಿನಿಂದ ಕಾಣಿಸದಿದ್ದರೂ ಮುಸುಕಿನೊಳಗಿನ ದರ್ಪದ ಮನೋಭಾವ ಬೀಗರಿಗೆ ತೋರಲೇಬೇಕೆಂಬ ಧೋರಣೆ, ಆಭರಣ ವ್ಯಾಪಾರಿಗಳಿಗೆ ಇರುವ ವ್ಯಾಪಾರಿ ಮನೋಭಾವ ಅರಿವಾಗುತ್ತದೆ. ಇಂಥಹವರಿಗೆ ಭಾವಸಂಬಂಧಗಳನ್ನು ಬೆಸೆಯುವುದಾಗಲೀ, ಅದರ ಮೌಲ್ಯವಾಗಲೀ ಎಲ್ಲಿಂದ ಬಂದೀತು.

ಒಟ್ಟಾರೆ ರಕ್ತಸಂಬಂಧಗಳಿಗೆ ಹೊರತಾದ ಸಂಬಂಧಗಳನ್ನು ಬೆಳೆಸಲು ಪ್ರತಿಯೊಬ್ಬರಿಗೂ ಅವಕಾಶವಿದೆ. ಆದರೆ ಅದಕ್ಕೆ ಸ್ಪಂದಿಸುವ, ಮಿಡಿಯುವ ಮನಸ್ಸು, ಹೃದಯವಂತಿಕೆ ಇರಬೇಕೆಂಬ ಸಂದೇಶವನ್ನು ಈ ಕಾದಂಬರಿಯಲ್ಲಿ ನವಿರಾಗಿ ಹರಡಿದೆ. ‘ಭಾವಸಂಬಂಧ’ ಎನ್ನುವ ಶೀರ್ಷಿಕೆ ಅನ್ವರ್ಥವಾಗುವಂತೆ ಸರಳಭಾಷೆಯಲ್ಲಿ, ಸುಂದರ ನಿರೂಪಣೆಯೊಂದಿಗೆ ಅಚ್ಚುಕಟ್ಟಾಗಿ ಮೂಡಿಬಂದಿದೆ.

ಶ್ರೀಮತಿ ಪದ್ಮಾ ಆನಂದ್‌ರವರಿಂದ ಮತ್ತಷ್ಟು ಸಾಹಿತ್ಯ ಕೃತಿಗಳು ಹೊರಬರಲೆಂದು ತುಂಬು ಹೃದಯದಿಂದ ಹಾರೈಸುತ್ತೇನೆ. ಇವರ ಕಿರುಕಾದಂಬರಿಯನ್ನು ತಮ್ಮ ಅಂತರ್ಜಾಲ ಪತ್ರಿಕೆ  ‘ಸುರಹೊನ್ನೆ’ಯಲ್ಲಿ ಹತ್ತು ಕಂತುಗಳಲ್ಲಿ ಪ್ರಕಟಿಸಿ ಪ್ರೋತ್ಸಾಹಿಸಿದ ಸಂಪಾದಕರು ಶ್ರೀಮತಿ ಹೇಮಮಾಲಾರವರಿಗೂ, ಪ್ರತಿ ಕಂತಿನಲ್ಲಿ ಇದನ್ನು ಓದಿ ಪ್ರತಿಕ್ರಿಯಿಸಿದ ಸಾಹಿತ್ಯ ಸಹೃದಯಿಗಳಿಗೂ ನನ್ನ ಧನ್ಯವಾದಗಳ ಮೂಲಕ ನನ್ನ ಅಭಿಪ್ರಾಯಗಳನ್ನು ಮುಕ್ತಾಯಗೊಳಿಸುತ್ತೇನೆ.

-ಬಿ.ಆರ್.ನಾಗರತ್ನ. ಮೈಸೂರು

8 Comments on “‘ಭಾವ ಸಂಬಂಧ’-ಕಿರು ಕಾದಂಬರಿ, ಲೇಖಕಿ; ಪದ್ಮಾ ಆನಂದ್

  1. ಉತ್ತಮವಾದುದು …. ಭಾವ ಸಂಬಂಧ ಕಿರು ಕಾದಂಬರಿ.. ಧನ್ಯವಾದಗಳು.. ‌

  2. ಚುಟುಕಾಗಿ ಕಾದಂಬರಿಯ ಸಾರಾಂಶ ಹೇಳಿದಿರಿ..ಚೆನ್ನಾಗಿದೆ

  3. ಕಾದಂಬರಿಯನ್ನು ಸರಳವಾಗಿ ವಿಮರ್ಶಿಸಿದ ರೀತಿ ಚೆನ್ನಾಗಿದೆ.

  4. ಕಾದಂಬರಿಯ ಸತ್ವವನ್ನು ಕ್ರೋಡೀಕರಿಸಿ ಸಂಕ್ಷಿಪ್ತವಾಗಿ ಸಾರಾಂಶದ ಹೂರಣವನ್ನು ಅಚ್ಚುಕಟ್ಟಾಗಿ ಮೆಚ್ಚುಗೆಯ ಮಾತುಗಳೊಂದಿಗೆ ಉಣಬಡಿಸಿದ ಗೆಳತಿ, ಪ್ರಬುದ್ಧ ಲೇಖಕಿ, ಶ್ರೀಮತಿ. ಬಿ.ಆರ್.ನಾಗರತ್ನ ಅವರಿಗೆ ಹೃನ್ಮನಪೂರ್ವಕ ಧನ್ಯವಾದಗಳು.

  5. ನಿಮ್ಮ ಕಾದಂಬರಿಯ ಬಗ್ಗೆ ನನ್ನ ಅಭಿಪ್ರಾಯ ಅನಿಸಿಕೆ ತಿಳಿಸಿದ್ದಕ್ಕೆ ನನಗೆ ಕೃತಜ್ಞತೆ ಸಲ್ಲಿಸಿದ ನಿಮಗೆ ಧನ್ಯವಾದಗಳು ಪ್ರಿಯ ಗೆಳತಿ ಪದ್ಮಾ ಆನಂದ್.ನಿಮ್ಮ ಲೇಖನಿ ಯಿಂದ ಮತ್ತಷ್ಟು ಮಗದಷ್ಟು ಸಾಹಿತ್ಯ ಕೃಷಿ ಸಾಗಲಿ.

  6. ನಾವೆಲ್ಲರೂ ಓದಿ ಆನಂದಿಸಿದ ಕಿರು ಕಾದಂಬರಿಯ ವಿಮರ್ಶಾತ್ಮಕ ಅನಿಸಿಕೆ ಬಹಳ ಸೊಗಸಾಗಿ ಮೂಡಿಬಂದಿದೆ ಮೇಡಂ.

Leave a Reply to Padma Anand Cancel reply

 Click this button or press Ctrl+G to toggle between Kannada and English

Your email address will not be published. Required fields are marked *