ಅಪಘಾತದ ಸುಳಿಯಲ್ಲಿ…
ಇದು 2018 ರ ನವೆಂಬರಿನಲ್ಲಿ ಹನ್ನೆರಡು ದಿನಗಳ ಗುಜರಾತ್ ಪ್ರವಾಸ ಹೊರಟಿದ್ದಾಗ ನಡೆದ ಮನಕಲಕುವ ದುರಂತ ಘಟನೆ.
ಹಿಂದಿನ ದಿನ ತಾನೇ ಪ್ರವಾಸ ಆರಂಭಿಸಿ ಅಹ್ಮದಾಬಾದಿನ ಪ್ರಸಿದ್ಧ ಹುತೀಸಿಂಗ್ ಪ್ಯಾಲೇಸ್ (ಅದೊಂದು ಜೈನ ದೇವಾಲಯ) ಗಾಂಧೀಜಿಯವರ ಕರ್ಮಭೂಮಿ ಸಬರಮತಿ ಆಶ್ರಮ ಹಾಗೂ ಗಾಂಧಿನಗರದ ಪ್ರಸಿದ್ಧ ಅಕ್ಷರಧಾಮ ಮಂದಿರಗಳನ್ನು ನೋಡಿ ವಾಪಸಾಗುತ್ತಿದ್ದಾಗ ಪ್ರವಾಸ ವ್ಯವಸ್ಥಾಪಕ “ನಾಳೆ ನಾವು ದ್ವಾರಕೆಗೆ ಹೋಗುತ್ತಿದ್ದೇವೆ .ಇಲ್ಲಿಂದ ಸುಮಾರು ಎಂಟು ಗಂಟೆ ಪ್ರವಾಸ.ಸರಿಯಾಗಿ ತಲುಪಿದರೆ ನಾವು ದ್ವಾರಕಾಧೀಶನ ಸಾಯಂಕಾಲದ ಆರತಿ ನೋಡಬಹುದು” ಎಂದಾಗ ಎಲ್ಲ ಪ್ರವಾಸಿಗಳಿಗೂ ಆ ಕ್ಷಣದ್ದೇ ತವಕ.
ಮಾರನೆಯ ದಿನ ಒಂಬತ್ತು ಗಂಟೆಗೆ ಉಪಾಹಾರ ಮುಗಿಸಿ ಅಹ್ಮದಾಬಾದಿನಿಂದ ಹೊರಟೆವು. ಚಾಲಕನು ಉಪಾಹಾರ ಸೇವಿಸದೇ ಇದ್ದುದರಿಂದ ಹನ್ನೊಂದು ಗಂಟೆಯ ಹೊತ್ತಿಗೆ ರಸ್ತೆ ಬದಿಯ ದೊಡ್ಡ ರೆಸ್ಟೊರೆಂಟ್ ಹತ್ತಿರ ಬಸ್ ನಿಂತಿತು.ನಾವೂ ಸಹ ಅಲ್ಲಿ ಪಾಪ್ಡಾ ಚಹ ಸೇವಿಸಿದೆವು. ಅಲ್ಲಿಂದ ಹೊರಟು ಸುರೇಂದ್ರನಗರ ಜಿಲ್ಲೆಯ ಸಾಯ್ಲಾ ಎಂಬ ತಾಲೂಕಿನ ಹಳ್ಳಿ ಒಂದರ ಮೂಲಕ ಹಾದುಹೋಗುತ್ತಿದ್ದಾಗ ಒಂದು ದೊಡ್ಡ ಸ್ಪೋಟದಂಥ ಶಬ್ದವಾಯಿತು ಬಸ್ಸಿನೊಳಗೆ ನಿಂತು ಮಾತನಾಡುತ್ತಿದ್ದ ಒಬ್ಬರು ಮುಗ್ಗರಿಸಿ ಬಿದ್ದು ದವಡೆಗೆ ಪೆಟ್ಟಾಯಿತು. ನಿದ್ರಿಸುತ್ತಿದ್ದ ಒಂದಿಬ್ಬರು ಮುಂದಿನ ಸೀಟಿನ ಅಂಚಿನಿಂದ ತಲೆ ಜಜ್ಜಿಸಿಕೊಂಡರು.ಕುಳಿತವರೂ ತೂರಾಡಿ ಸಮತೋಲನ ಕಳೆದುಕೊಂಡರು. ಚಾಲಕ ಕನ್ನಡಿಯಿಂದ ನೋಡುತ್ತ, ಸಹಾಯಕನಿಗೆ ಏನಾಯ್ತು ಎಂದು ಕೇಳಿದ. ”ಒಬ್ಬ ಮೋಟಾರು ಬೈಕ್ ಸವಾರ ಬಸ್ಸಿಗೆ ಡಿಕ್ಕಿಹೊಡೆದು ಬಿದ್ದಿದ್ದಾನೆ.ರಕ್ತ ಚೆಲ್ಲಿದೆ”ಎಂದು ಅವನು ಹೇಳಿದೊಡನೆಯೇ ಚಾಲಕ ವೇಗ ಹೆಚ್ಚಿಸಿ ಅಲ್ಲಿಂದ ಚಲಿಸಿದ.ಪ್ರವಾಸಿಗಳು “ನಿಲ್ಲಿಸಿ,ನಿಲ್ಲಿಸಿ”ಎಂದಾಗ “ನಿಲ್ಲಿಸಿದರೆ ಅವರು ನನ್ನ ಕೊಂದುಹಾಕುತ್ತಾರೆ ಅಷ್ಟೆ”ಎಂದು ಮತ್ತಷ್ಟು ವೇಗ ಹೆಚ್ಚಿಸಿದ.ಪ್ರವಾಸ ವ್ಯವಸ್ಥಾಪಕನಿಗೆ “ಸ್ವಾಮೀ ಅವನಿಗೆ ನಿಲ್ಲಿಸಲು ಹೇಳಿ” ಎಂದು ಗೋಗರೆದಾಗ .”ಸುಮ್ಮನಿರಿ ಚಾಲಕನಿಗೆ ಗೊತ್ತು” ಎಂದು ಒರಟಾಗಿ ಉತ್ತರಿಸಿದ.
ಹಾಗೇ ಒಂದೆರಡು ಮೈಲು ಹೊರಟಿತ್ತೋ ಇಲ್ಲವೋ ಮತ್ತೆ ಗದ್ದಲ ಹೊರಗಿನಿಂದ “ಮಾರೋ,ಬಸ್ ಜಲಾದೋ “ಎಂಬ ಬೊಬ್ಬೆ ಆಕಾಶ ಮುಟ್ಟುವಂತಿತ್ತು. ಐವತ್ತಕ್ಕೂ ಹೆಚ್ಚು ಹಳ್ಳಿಗರು ಟೆಂಪೋ,ಮೋಟಾರುಬೈಕುಗಳಲ್ಲಿ ಬಂದು ಬಸ್ಸನ್ನು ಸುತ್ತುವರೆದಿದ್ದರು. ಈಗ ಚಾಲಕ ಬಸ್ ನಿಲ್ಲಿಸಲೇ ಬೇಕಾಯ್ತು. ನಿಲ್ಲಿಸಿ ಕೊನೆಯ ಸೀಟಿನ ಕೆಳಗೆ ಅವಿತುಕೊಂಡ.
ಆ ಗುಂಪಿನ ಎಲ್ಲರ ಕೈಯಲ್ಲೂ ದೊಣ್ಣೆ,ಕುಡುಗೋಲು,ದೊಡ್ಡ ಸ್ಪ್ಯಾನರ್ ಇಂಥ ಹತ್ಯಾರುಗಳೇ ಇದ್ದವು .ಪೆಟ್ರೋಲ್ ಕ್ಯಾನ್ ಹಿಡಿದಿದ್ದ ಒಂದಿಬ್ಬರು “ಎಲ್ಲರೂ ಬಸ್ಸಿನಿಂದ ಇಳಿಯಿರಿ, ಇಲ್ಲದಿದ್ದರೆ ನಿಮ್ಮ ಸಮೇತ ಬಸ್ ಸುಟ್ಟು ಹಾಕುತ್ತೇವೆ” ಎಂದು ಬಸ್ ಹತ್ತಿರ ಎಂದು ಜೋರುದನಿಯಲ್ಲಿ ಬೆದರಿಸಿದಾಗ ವಯಸ್ಸಾದ ಪ್ರವಾಸಿಗಳಷ್ಟೇ ಅಲ್ಲ ಯುವಕರೂ ಕಂಪಿಸಿದರು.”ಇಳಿದುಬಿಡೋಣ “ಎಂದು ಒಬ್ಬರು ಹೇಳಿದಾಗ “ಬೇಡ” ಎಂದು ಉಳಿದವರು ಎಚ್ಚರಿಸಿದರು.
“ಇವರು ಹೀಗೆ ಇಳಿಯುವುದಿಲ್ಲ, ಬನ್ನಿ ಎಂದೊಬ್ಬ ಬಸ್ಸಿನ ಮುಂದಿನ ಗಾಜಿಗೆ ದೊಣ್ಣೆಯಿಂದ ಬೀಸಿದಾಗ ಗಾಜು ಪುಡಿಪುಡಿಯಾಯಿತು. ಇನ್ನೇನು ಆ ಉದ್ರಿಕ್ತರ ಕೈಗೆ ಸಿಕ್ಕಿ ಚಚ್ಚಿಸಿಕೊಳ್ಳುವುದಷ್ಟೇ ನಮ್ಮ ಹಣೆಬರಹವೇ ಎಂದುಕೊಂಡೆವು. ಚಾಲಕ ಕಷ್ಟಪಟ್ಟು ತನ್ನ ಮಾಲೀಕರಿಗೆ ತಿಳಿಸಿದ. ಅವರು ಪೋಲೀಸರಿಗೆ ಸುದ್ದಿ ಮುಟ್ಟಿಸಿ ಹೆದ್ದಾರಿ ಪೋಲೀಸಿನ ಒಂದು ವ್ಯಾನು ಸೈರನ್ ಮಾಡುತ್ತ ಅಲ್ಲಿಗೆ ಬಂದು ಅಲ್ಲಿದ್ದವರನ್ನೆಲ್ಲ ಚದುರಿಸಿ ಚಾಲಕನನ್ನು ಕರೆದು ಪೋಲೀಸ್ ಸ್ಟೇಷನಿನತ್ತ ಚಾಲನೆ ಮಾಡಲು ಹೇಳಿದರು. ಬಸ್ಸು ಈಗ ಸಾಯ್ಲಾ ಪೋಲೀಸ್ ಸ್ಟೇಷನ್ನಿನ ಹೊರಗೆ ಬಂದು ನಿಂತಿತು.ಚಾಲಕ ಒಳಗೆ ಹೋಗಿ ವಿಷಯ ತಿಳಿಸಿದ. ಅಲ್ಲಿಗೂ ಕೆಲವರು ಉದ್ರಿಕ್ತರು ಮೋಟಾರುಬೈಕಿನಲ್ಲಿ ಹಿಂಬಾಲಿಸಿ ಬಂದರು.
ಸ್ಟೇಷನ್ನಿನ ಮುಖ್ಯಸ್ಥರಾದ ಚೂಡಸಾಮಾ ಎಂಬ ಆಕರ್ಷಕ ಮೈಕಟ್ಟಿನ ಎತ್ತರದ ವ್ಯಕ್ತಿ ಬಸ್ಸಿನೊಳಗೆ ಬಂದು”ಯಾರೂ ಹೆದರಬೇಡಿ.ಇದರಲ್ಲಿ ನಿಮ್ಮದೇನೂ ಪಾತ್ರವಿಲ್ಲ.ರಸ್ತೆಯೆಂದ ಮೇಲೆ ಅಪಘಾತ ಸರ್ವೇ ಸಾಮಾನ್ಯ. ಮುಂದಿನ ಕ್ರಮ ನಾವು ನೋಡಿಕೊಳ್ಳುತ್ತೇವೆ. ನಿಶ್ಚಿಂತರಾಗಿರಿ. ಆದರೆ ಯಾರೂ ಆವರಣದ ಹೊರಗೆ ಹೋಗಬೇಡಿ.ಅವರ ಕೋಪ ಇನ್ನೂ ಕಡಿಮೆಯಾಗಿರುವುದಿಲ್ಲ. ನಿಮ್ಮ ಗುರುತು ಹಿಡಿದು ಹಲ್ಲೆ ಮಾಡಬಹುದು. ನಿಮ್ಮ ಬೆಲೆಬಾಳುವ ವಸ್ತುಗಳನ್ನು ಮಾತ್ರ ತೆಗೆದುಕೊಂಡು ಸ್ಟೇಷನ್ ಒಳಗೆ ಬನ್ನಿ. ಉಳಿದ ಲಗೇಜ್ ಬಸ್ಸಿನಲ್ಲೇ ಇರಲಿ. ಬೇರೆ ಬಸ್ ಬರುವವರೆಗೆ ಇಲ್ಲೇ ಇರಿ. ನಿಮ್ಮ ಅನುಕೂಲದ ಎಲ್ಲ ವ್ಯವಸ್ಥೆ ನಾನು ಮಾಡುತ್ತೇನೆ.ನೀವೆಲ್ಲ ನಮ್ಮ ಅತಿಥಿಗಳು.” ಎಂದು ಸರಳವಾದ ಹಿಂದಿಯಲ್ಲಿ ಸಾಂತ್ವನ ನೀಡಿದರು.
ಎಲ್ಲಿಂದಲೋ ಕುರ್ಚಿಗಳನ್ನು ತರಿಸಿ ಆವರಣದಲ್ಲಿದ್ದ ವಿಶಾಲವಾದ ಮರದ ಕೆಳಗೆ ಹಾಕಿಸಿದರು. ಕುಡಿಯುವ ನೀರಿನ ಕ್ಯಾನ್ ಬಂತು.ವಾಶ್ ರೂಮ್ ಬಳಸಿಕೊಳ್ಳಲು ಸಂಕೋಚಪಡಬೇಡಿ ಎಂದು ತಿಳಿಸಿ, ಏನಾದರೂ ಸಹಾಯ ಬೇಕಿದ್ದರೆ ತಮ್ಮ ಠಾಣೆಯ ಸಿಬ್ಬಂದಿಯನ್ನು ಕೇಳಿ ಎಂದರು.
ಡಿಕ್ಕಿ ಹೊಡೆದಿದ್ದ ಮೋಟಾರು ಬೈಕ್ ಚಾಲನೆ ಮಾಡುತ್ತಿದ್ದ ಯುವಕ ಆಸ್ಪತ್ರೆಗೆ ಒಯ್ಯುವಾಗಲೇ ಸತ್ತನೆಂಬ ಸಿದ್ಧಿ ಬಂದು ಎಲ್ಲ ಪ್ರವಾಸಿಗಳೂ ಅತೀವವಾಗಿ ದುಃಖಿಸಿದರು. ಅದರಲ್ಲೂ ಹೆಂಗೆಳೆಯರಂತೂ ಅತ್ತೇಬಿಟ್ಟರು. ಅಪಘಾತದ ಸ್ಥಳದಿಂದ ಮೋಟಾರು ಬೈಕನ್ನೂ ಟೆಂಪೋದಲ್ಲಿ ಹೊತ್ತು ತಂದರು. ಸ್ವಲ್ಪ ಹೊತ್ತಿಗೆ ಮಾಸಿದ ಪಂಚೆ,ಜುಬ್ಬಾ,ಪಗಡಿ ಧರಿಸಿದ್ದ ಆ ಯುವಕನ ಅಪ್ಪನೂ ಬಂದ. ಆಘಾತದಿಂದ ಅವನು ಹೊರಬಂದಿಲ್ಲವೆಂಬುದನ್ನು ಅವನ ಕಣ್ಣುಗಳೇ ಹೇಳುತ್ತಿದ್ದವು.ಇನ್ನು ಆ ಯುವಕನ, ತಾಯಿ, ಅಕ್ಕ, ತಂಗಿಯರ ಸ್ಥಿತಿಯೇನೋ ಎಂದುಕೊಂಡೆವು.
ಹಾಗೇ ಕಾಲ ಕಳೆಯುತ್ತಿದ್ದಾಗ ಊಟದ ಸಮಯವೂ ಬಂತು.ಪ್ರವಾಸ ಸಂಸ್ಥೆಯವರು ಠಾಣೆಯ ಆವರಣದಲ್ಲೇ ಊಟ ಬಡಿಸಿದರು.ಎರಡೂವರೆ ಹೊತ್ತಿಗೆ ಬೇರೆ ಬಸ್ ಬಂತು.ಅಪಘಾತವಾದ ಬಸ್ಸಿನಿಂದ ಲಗೇಜು ಸಾಗಿಸಿ ಹೊರಟಲು ಸಿದ್ಧರಾದೆವು. ಅದೇ ಸಮಯಕ್ಕೆ ಬಸ್ ಮಾಲೀಕರು ತನ್ನ ಚಾಲಕನನ್ನು ಜಾಮೀನಿನ ಮೇಲೆ ಬಿಡಿಸಿಕೊಂಡು ಹೋಗಲು ಬಂದರು.
ಇನ್ಸ್ ಪೆಕ್ಟರರು ಮತ್ತೊಮ್ಮೆ ಬಸ್ಸಿನೊಳಗೆ ಆಗಮಿಸಿ “ನಿಮಗೆ ಇಲ್ಲಿ ಅನುಕೂಲವಿತ್ತೆಂದು ಭಾವಿಸುತ್ತೇನೆ. ನಿಮ್ಮ ಪ್ರಯಾಣ ಸುಖಕರವಾಗಲಿ.ಅಂತೂ ದ್ವಾರಕಾಧೀಶನನ್ನು ನೋಡುವ ಮೊದಲೇ ಅವನ ಜನ್ಮಸ್ಥಾನವನ್ನು ನೀವು ನೋಡುವಂತಾಯಿತು.”ಎಂದು ನಗುತ್ತಾ ವಿದಾಯ ಹೇಳಿದರು. ನಾವೂ ಮನಸಾರೆ ನಕ್ಕೆವು .ನಮ್ಮ ಪ್ರಯಾಣ ದ್ವಾರಕಾದತ್ತ ಮುಂದುವರೆಯಿತು.ಆದರೆ ಪ್ರವಾಸದುದ್ದಕ್ಕೂ ಆ ಕಹಿಘಟನೆಯ ಕರಿನೆರಳು ಚಾಚಿತ್ತು.ಇಂದೂ ಆ ದುರಂತದ ನೆನಪು ಕಾಡುತ್ತಲೇ ಇದೆ.
-ಮಹಾಬಲ ಕೆ ಎನ್
ಪ್ರವಾಸದಲ್ಲಾದ ದುರಂತ ಘಟನೆ ಓದಿದ ನನಗೆ ಬೆಚ್ಚಿಬೀಳುವಂತಾಯಿತು.ಆ ಸಮಯದಲ್ಲಿ ನೀಡಿದ ನೆರವು ಧೈರ್ಯ ಮೆರೆದ ಮಾನವೀಯತೆ ನೋಡಿ ನಾವು ಮಾಡುವ ಪುಣ್ಯ ನಮ್ಮನ್ನು ಕಾಪಾಡುತ್ತದೆ ಎಂದು ತಿಳಿಯಿತು.ಆದರೆ ಪ್ರಾಣ ಕಳೆದುಕೊಂಡ ನಾನು ಬಗ್ಗೆ ಅನುಕಂಪ ಸೂಚಿಸುವುದಷ್ಷೇ ನಮ್ಮ ಪಾಲಿಗೆ ಉಳಿಯಿತು.ಧನ್ಯವಾದಗಳು ಸಾರ್.
ಧನ್ಯವಾದ
ಅಲ್ಲಿ ಅಪಘಾತ ಆದ ವ್ಯಕ್ತಿಗೆ ಸಹಾಯ ಮಾಡುವ ಹಾಗೂ ಇಲ್ಲ. ಸಹಾಯ ಮಾಡದೆ ತಪ್ಪಿಸಿಕೊಂಡು ಬರುವಾಗ ಅಪರಾಧಿ ಪ್ರಜ್ಞೆಯೂ ಕಾಡ್ತದೆ ಉದ್ರಿಕ್ತ ವ್ಯಕ್ತಿಗಳು ವಿವೇಚನೆ ಇಲ್ಲದೆ ಯಾರದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಕೊಡುವುದು ಮಾತ್ರ ಬೇಸರದ ಸಂಗತಿ. ಅಪಘಾತ ಆದ ವ್ಯಕ್ತಿಯ ಕುಟುಂಬ ಪಾಪ ನೋವು ಅನುಭವಿಸುವಂತಾಯ್ತು !!
ಧನ್ಯವಾದ
ಛೇ..ಆತ ಬದುಕಬೇಕಿತ್ತು…ನಿಮ್ಮ ನಿರೂಪಣೆ ಸೊಗಸಾಗಿದೆ.
ಧನ್ಯವಾದ
ಹೃದಯ ವಿದ್ರಾವಕ ಘಟನೆ. ಬರಹ ಚೆನ್ನಾಗಿದೆ.
ಧನ್ಯವಾದ
ಪ್ರವಾಸದಲ್ಲಿಯ ಇಂಥಹ ಘಟನೆಗಳು ಜೀವನದುದ್ದಕ್ಕೂ ಮನದ ಮೂಲೆಯಲ್ಲುಳಿದು ಕಾಡುತ್ತಿರುತ್ತವೆ. ವಸ್ತುನಿಷ್ಟ ನಿರೂಪಣೆ.
ಧನ್ಯವಾದ
we will not be expecting these things…
ಧನ್ಯವಾದಗಳು
ಪ್ರವಾಸದಲ್ಲಿ ಸಂತೋಷವಾಗಿ ಕಾಲಕಳೆಯಲೆಂದು ಹೋಗುತ್ತೇವೆ. ಇಂತಹ ಘಟನೆಗಳಿಂದ ಆಘಾತವಾಗುತ್ತದೆ. ಮರೆಯಲಾಗುವುದಿಲ್ಲ. ಆದರೂ ಪ್ರವಾಸಿಗಳಿಗೆ ತೊಂದರೆಯಾಗದಂತೆ ಕಾಳಜಿ ವಹಿಸಿದ ಪೋಲೀಸ್ ಅಧಿಕಾರಿ ಅಭಿನಂದನಾರ್ಹರು. ನಿಮ್ಮ ಬರಹ ಎಂದಿನಂತೆ ಸ್ವಾರಸ್ಯಕರವಾಗಿದೆ.
ಹೌದು ಸರ್.. ಇಂತಹ ಭಯಂಕರ ಅನುಭವ ಜನ್ಮ ಪೂರ್ತಿ ಕಾಡುತ್ತಿರುತ್ತದೆ. ತಮ್ಮೆಲ್ಲರನ್ನೂ ಆತ್ಮೀಯವಾಗಿ ಆದರಿಸಿ, ಸಾಂತ್ವನದೊಂದಿಗೆ ಧೈರ್ಯ ತುಂಬಿದ ಪೋಲಿಸ್ ಅಧಿಕಾರಿಗೆ ನಿಜವಾಗಿಯೂ ಮೆಚ್ಚಲೇಬೇಕು. ಸಹಜ ನಿರೂಪಣೆ ಇಷ್ಟವಾಯ್ತು.
classic