ನ್ಯಾನೋ ಕಥೆಗಳು
1. ಗುರುತು
ಪ್ರಖ್ಯಾತ ಸ್ವಾಮೀಜಿಯವರ ಆಶೀರ್ವಚನ ಕೇಳಲು ನೆರೆದಿದ್ದ ಜನಸ್ತೋಮ. ಪ್ರಾಂಗಣವು ಕೆಳ ವರ್ಗದ ಜನರಿಂದ ಮೈಲಿಗೆಯಾಗದಂತೆ, ಕಾವಲು ಹಾಕಲಾಗಿತ್ತು. ದ್ವಾರದ ಹೊರಗೆ ವ್ಯಕ್ತಿಯೊಬ್ಬ ಆಸೆಯಿಂದ ನಿಂತಿದ್ದ, ಆಶೀರ್ವಚನವನ್ನು ಕೇಳಲು. ಸ್ವಾಮೀಜಿ ಕ್ಷಣದಲ್ಲೇ ಆ ವ್ಯಕ್ತಿಯನ್ನು ಗುರುತಿಸಿ ಒಳಕರೆದಾಗ ಎಲ್ಲರೂ ಮೂಗು ಮುರಿದರು. ಅವನನ್ನು ಬಳಿ ಕರೆದು ಜನರಿಗೆ ಹೇಳಿದರು,” ಈ ಕೆಂಚನೇ ನೀರಿಗೆ ಬಿದ್ದ ಮೂರು ವರ್ಷದ ನನ್ನನ್ನು ಮೇಲೆತ್ತಿದ್ದ, ಹಾಗಾಗಿಯೇ ನಾನಿಂದು ಇಲ್ಲಿರುವೆ”.
2. ಮೋಡಿ
ಅಮೆರಿಕದ ಬಿಳಿ ಚರ್ಮದವಳನ್ನು ಕಟ್ಟಿಕೊಡ ಮಗನ ಮೇಲೆ ತಂದೆ ತಾಯಿಯರ ಸಿಟ್ಟು ಇಳಿದಿರಲಿಲ್ಲ. ಮೂರು ವರ್ಷಗಳಿಂದ ಮಾತುಕತೆಯೂ ನಿಂತು ಹೋಗಿತ್ತು. ಒಮ್ಮೆಲೇ ಬೆಳ್ಳಂಬೆಳಗ್ಗೆ ಮನೆ ಮುಂದೆ ಬಂದಿಳಿದ ಮಗ ಮತ್ತು ಸೊಸೆ ಕೈಯಲ್ಲಿತ್ತೊಂದು ಪುಟ್ಟ ಕಂದ. ಬಳಿ ಬಂದ ಮಗ, “ಅಪ್ಪಾ.. ಅಮ್ಮಾ” ಎಂದಾಗ ಮುಖ ತಿರುವಿದವರು, ಸೊಸೆ ಕೈಯಲ್ಲಿದ್ದ ಮುದ್ದು ಮೊಮ್ಮಗನನ್ನು ಕಂಡು ಕಣ್ಣರಿಳಿಸಿ, ಎತ್ತಿಕೊಳ್ಳಲು ಕೈಚಾಚಿದರು… ಇಬ್ಬರ ಮೇಲೂ ಪುಟ್ಟ ಜಾದೂಗಾರ ಮೋಡಿ ಮಾಡಿದ್ದ!
3. ಸಾರ್ಥಕತೆ
“ಮಕ್ಕಳೇ, ಇವತ್ತು ನಮಗೆಲ್ಲ ಪಾಯಸದ ಊಟ ಹಾಕಿದವರಿಗೆ ದೇವರು ಒಳ್ಳೆಯದು ಮಾಡಲೆಂದು ಪ್ರಾರ್ಥಿಸೋಣ”, ಅನಾಥಾಲಯದ ಮಾತಾಜಿ ಹೇಳಿದರು. ಚಂದದ ಸೀರೆಯುಟ್ಟ ಯುವತಿಯೊಬ್ಬಳು ಊಟ ಬಡಿಸುತ್ತಿದ್ದಳು. ಅಲ್ಲೇ ರವಿರಾಯರು ತೃಪ್ತಿಯ ನಗುವಿನೊಂದಿಗೆ ನಿಂತಿದ್ದರು. ಮಕ್ಕಳಿಲ್ಲದ ಅವರು ಅದೇ ಅನಾಥಾಲಯದಿಂದ ಅನಾರೋಗ್ಯ ಪೀಡಿತ ಹೆಣ್ಣು ಮಗುವನ್ನು ದತ್ತು ತಗೊಂಡು ಪ್ರೀತಿಯಿಂದ ಬೆಳೆಸಿ ಅವಳ ಬಾಳಿಗೆ ಬೆಳಕಾಗಿದ್ದರು. ಅವಳೇ ಬಡಿಸುತ್ತಿದ್ದ ಧರಿತ್ರಿ.
4. ಮಚ್ಚೆ
ಮಧ್ಯಾಹ್ನ ಹೊತ್ತು. ಕರೆಗಂಟೆ ಸದ್ದಿಗೆ ಜೊಂಪಿನಲ್ಲಿದ್ದ ವಿಧವೆ ಶೀಲಮ್ಮ ಎದ್ದು ಬಾಗಿಲು ತೆರೆದರು. ಮಾರಲೆಂದು ಕೈಯಲ್ಲಿ ಸೋಪು ಹಿಡಿದು ನಿಂತಿದ್ದ ಹುಡುಗನ ಮುಖವನ್ನೇ ದಿಟ್ಟಿಸಿ ನೋಡಿದರು. ಅವನ ಎಡಕಣ್ಣಿನ ಪಕ್ಕದ ಮಚ್ಚೆ ಅವರಿಗೇನೋ ತಿಳಿಸಿತು. ಅವನಲ್ಲಿ, ಅವನ ವಿಷಯಗಳನ್ನು ತಿಳಿದುಕೊಂಡು, ಅವನಿದ್ದ ಆಶ್ರಮದಲ್ಲಿ ವಿಚಾರಿಸಲಾಗಿ ತಿಳಿಯಿತು; ಮೂರು ವರ್ಷದವನಿದ್ದಾಗ ಜಾತ್ರೆಯಲ್ಲಿ ಕಳೆದು ಹೋದ ಇದ್ದೊಬ್ಬ ಮಗು ಶಶಿ ಸಿಕ್ಕಿಬಿಟ್ಟಿದ್ದ. ಕತ್ತಲು ತುಂಬಿದ್ದ ಅವರ ಬಾಳಿನಲ್ಲಿ ಅರುಣೋದಯವಾಗಿತ್ತು.
– ಶಂಕರಿ ಶರ್ಮ, ಪುತ್ತೂರು.
ಸೊಗಸಾದ ನ್ಯಾನೋ ಕಥೆಗಳು ಉತ್ತಮ ಸಂದೇಶ ಹೊತ್ತ ಕಥೆಗಳು ಮುಂದೆ ತಂದವು ಅಭಿನಂದನೆಗಳು ಮೇಡಂ.
ತಮ್ಮ ಮೆಚ್ಚುಗೆಯ ಪ್ರೋತ್ಸಾಹಕ ನುಡಿಗಳಿಗೆ ಧನ್ಯವಾದಗಳು
ಬಹಳ ಅರ್ಥಪೂರ್ಣ ವಾದ ಕಥೆಗಳು
ತಮ್ಮ ಮೆಚ್ಚುಗೆಯ ಪ್ರೋತ್ಸಾಹಕ ನುಡಿಗಳಿಗೆ ಧನ್ಯವಾದಗಳು..ನಯನಾ ಮೇಡಂ.
ಪುಟ್ಟದಾದ ಮುದ್ದಾದ ಕಥೆಗಳು
ಪ್ರೀತಿಯಿಂದ ಓದಿ, ಅನಿಸಿಕೆ ಹಂಚಿಕೊಂಡಿರುವಿರಿ..ಧನ್ಯವಾದಗಳು ಮೇಡಂ
ಉತ್ತಮ ಕಥೆಗಳು
ತಮ್ಮ ಪ್ರೀತಿಯ ಸಹೃದಯೀ ಮೆಚ್ಚುಗೆಯ ನುಡಿಗಳಿಗೆ ನಮನಗಳು ಸರ್.
ಕಥೆ ಸಂಕೀರ್ಣವಾಗಿದ್ದರೂ, ಸಂದೇಶ ವಿಸ್ತೀರ್ಣವಾಗಿದೆ,
ಶಂಕರಿ ಶರ್ಮರವರೆ.
ಚಿಕ್ಕ ಚೊಕ್ಕ, ಅರ್ಥಪೂರ್ಣ ಕಥೆಗಳನ್ನು ಹೆಣೆಯುವುದರಲ್ಲಿ ಸಿದ್ಧಹಸ್ತರು ನೀವು. ನ್ಯಾನೋ ಕಥೆಗಳಿಗಾಗಿ ಅಭಿನಂದನೆಗಳು ತಮಗೆ.
ಪುಟ್ಟ ಕಥೆಗಳನ್ನು ಓದಿ ಕಣ್ಮನ ತುಂಬಿಬಂತು.
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು!