ಬೊಗಸೆಬಿಂಬ

ಸ್ವಸ್ಥ ದೇಹದಲ್ಲಿ ಸ್ವಸ್ಥ ಮನಸ್ಸೇ ಅಥವಾ ಸ್ವಸ್ಥ ಮನಸ್ಸಿನಲ್ಲಿ ಸ್ವಸ್ಥ ದೇಹವೇ?

Share Button

ನಾನು ಶ್ರೀ ಶಿವಗಂಗಾ ಯೋಗ ಮಹಾವಿದ್ಯಾಲಯದಲ್ಲಿ ಯೋಗಶಾಸ್ತ್ರದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಮಾಡುತ್ತಿರುವಾಗ ನಡೆದ ಘಟನೆಯಿದು. ನನ್ನ ಗೆಳತಿಯೊಬ್ಬಳು -‘A sound body in a sound mind.’ ಎಂದಾಗ ನಾನು ಥಟ್ಟನೇ ಅವಳನ್ನು ತಿದ್ದಿದೆ. ‘ಇದೊಂದು ಗ್ರೀಕ್ ಗಾದೆ. ಇದರ ಸರಿಯಾದ ರೂಪ-–‘A sound mind in a sound body’  ಎಂದೆ. ಆದರೆ ನನ್ನ ಗೆಳತಿಯ ಮನದಲ್ಲಿ ತುಸು ಗೊಂದಲ ಉಳಿದಿತ್ತು. ಅವಳು ಆ ವಾಕ್ಯದಲ್ಲಿ ಬರುವ ಪದಗಳನ್ನು ಯಥಾವತ್ತಾಗಿ ಜೋಡಿಸಿದ್ದಳು-ಈ ವಾಕ್ಯದ ಅರ್ಥ – ‘ಸ್ವಸ್ಥ ಮನಸ್ಸಿನಲ್ಲಿ ಸ್ವಸ್ಥ ದೇಹ’ ಎಂದಾಗಿತ್ತು. ಕನ್ನಡ ಮಾತೃಭಾಷೆಯಾದವರಿಗೆ ಇಂತಹ ಗೊಂದಲಗಳು ಸಹಜ. ಇಂಗ್ಲಿಷ್ ಶಿಕ್ಷಕಿಯಾಗಿದ್ದ ನನಗೆ ಇಂತಹ ಹಲವು ಅನುಭವಗಳಾಗಿದ್ದವು. ಕಾರಣ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ವಾಕ್ಯಗಳಲ್ಲಿ ಪದ ಜೋಡಣೆ ವಿಭಿನ್ನವಾಗಿರುತ್ತದೆ.

ಯೋಗ ಡಿಪ್ಲೊಮಾ ತರಗತಿಗಳಲ್ಲಿ ಸುಮಾರು ಆರು ತಿಂಗಳು ಅಭ್ಯಸಿಸಿದ ಮೇಲೆ ನನ್ನ ಗೆಳತಿಯ ಮಾತನ್ನು ಹೊಸ ಬೆಳಕಿನಲ್ಲಿ ನೋಡುವ ಮನಸ್ಸಾಯಿತು. ‘ಸ್ವಸ್ಥ ಮನಸ್ಸಿನಲ್ಲಿ ಸ್ವಸ್ಥ ದೇಹ’ – ಹೌದು ಇದೇ ಸರಿಯಾದ ನುಡಿಗಟ್ಟು ಎನ್ನಿಸಲು ಆರಂಭವಾಯಿತು. ಮನಸ್ಸಿನಲ್ಲಿ ಉಂಟಾಗುವ ಒತ್ತಡಗಳೇ ಅನೇಕ ದೈಹಿಕ ಕಾಯಿಲೆಗಳಿಗೆ ಕಾರಣ. ಮನಸ್ಸು ಅರಿಷಡ್ವರ್ಗಗಳಾದ – ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್‍ಯ-ಗಳ ದಾಸನಾಗಿರುವವರೆಗೆ ದೇಹ ಎಂದೂ ಸ್ವಸ್ಥವಾಗಿರಲು ಸಾಧ್ಯವಿಲ್ಲ. ಉದಾ:- ಲೋಭಿಯಾದವನಿಗೆ ಎಷ್ಟೇ ಸಂಪತ್ತು ಗಳಿಸಿದರೂ, ತೃಪ್ತಿ, ಸಂತಸ ಲಭಿಸುವುದೇ ಇಲ್ಲ. ಇನ್ನೂ ಬೇಕು, ಇನ್ನೂ ಬೇಕು ಎಂದು ಹಪಹಪಿಸುತ್ತಲೇ ಇರುವನು. ಇಂತಹ ಅತೃಪ್ತಿಯಿಂದ ಮನಸ್ಸಿನಲ್ಲಿ ಒತ್ತಡ ಉಂಟಾಗಿ ಮಾನವನು ‘ಅಧಿಜ ವ್ಯಾಧಿ’ಗಳಿಗೆ ತುತ್ತಾಗುತ್ತಾನೆ. ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು, ಆಸ್ತಮಾ ಇತ್ಯಾದಿ.
ಯೋಗಶಾಸ್ತ್ರದಲ್ಲಿ ಹೇಳುವಂತೆ ಮನಸ್ಸು ನಾಲ್ಕು ಆಯಾಮಗಳನ್ನು ಹೊಂದಿದೆ.-ಬುದ್ಧಿ (ತಾರ್ಕಿಕವಾದುದು), ಅಹಂ (ನಾನು ಎನ್ನುವ ಅಸ್ಮಿತೆ), ಮನಸ್ಸು (ನೆನಪುಗಳ ಆಗರ) ಹಾಗೂ ಚಿತ್ತ (ವಿಶ್ವದ ಅನಂತ ಚೈತನ್ಯವನ್ನು ಒಳಗೊಂಡಿರುವುದು). ಸಂಸ್ಕೃತದ ನುಡಿಗಟ್ಟೊಂದು ಹೇಳುವಂತೆ ‘ಮನಯೇವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋಃ’ ಅಂದರೆ ಮನಸ್ಸೇ ಆತನ ಬಂಧನಕ್ಕೂ ಮೋಕ್ಷಕ್ಕೂ ಕಾರಣವಾಗುತ್ತದೆ.

ಪತಂಜಲಿ ಮಹರ್ಷಿಗಳ ಯೋಗ ಸೂತ್ರವೊಂದು ಹೀಗಿದೆ -ಯೋಗಃ ಚಿತ್ತ ವೃತ್ತಿ ನಿರೋಧಃ. ಯೋಗಿಯು ತನ್ನ ಚಿತ್ತ ವೃತ್ತಿಗಳನ್ನು ನಿರೋಧಿಸುವುದರಿಂದ ಯೋಗಿಯು ಶಾರೀರಿಕ ಸಧೃಡತೆಯನ್ನೂ, ಮಾನಸಿಕ ಸ್ಥಿರತೆಯನ್ನೂ ಹಾಗೂ ಆಧ್ಯಾತ್ಮಿಕ ಅರಿವನ್ನೂ ಪಡೆಯುತ್ತಾನೆ. ಎಲ್ಲರ ಮನದಲ್ಲೂ ಮೂರು ಬಗೆಯ ಗುಣಗಳು ಇರುತ್ತವೆ – ತಾಮಸಿಕ, ರಾಜಸಿಕ ಹಾಗೂ ಸಾತ್ವಿಕ ಗುಣ. ತಾಮಸಿಕ ಗುಣ ಜಡತ್ವದ ಸಂಕೇತವಾದರೆ ರಾಜಸಿಕ ಗುಣವು ದರ್ಪ, ಅಧಿಕಾರ ಲಾಲಸೆಯ ಪ್ರತೀಕ ಹಾಗೂ ಸತ್ವವು ಯೋಗಿಯ ಸಮಸ್ಥಿತಿಯ ಸಂಕೇತವಾಗಿ ನಿಲ್ಲುತ್ತದೆ. ಕುಂಭಕರ್ಣನು ತಾಮಸ ಗುಣವನ್ನು ಬಿಂಬಿಸಿದರೆ, ರಾವಣನು ರಾಜಸಿಕ ಗುಣವನ್ನು ಪ್ರತಿನಿಧಿಸುತ್ತಾನೆ. ವಿಭೀಷಣನು ಸತ್ವ ಗುಣದ ಪ್ರತೀಕವಾಗಿ ನಿಲ್ಲುತ್ತಾನೆ. ಕರ್ಮಯೋಗದಿಂದ ತಾಮಸವನ್ನು ನಿರೋಧಿಸಬಹುದು, ಭಕ್ತಿಯೋಗದಿಂದ ರಾಜಸವನ್ನು ನಿಯಂತ್ರಿಸಬಹುದು. ಹಾಗೆಯೇ ಸಾತ್ವಿಕ ಗುಣವನ್ನು ಬೆಳೆಸಲು ಧಾರಣ, ಧ್ಯಾನದಲ್ಲಿ ನಿರತನಾಗಬೇಕು. ತಾಮಸವನ್ನು ಮೆಟ್ಟಿನಿಂತು, ರಾಜಸವನ್ನು ನಿಯಂತ್ರಣದಲ್ಲಿರಿಸಿ ಸತ್ವವನ್ನು ಬೆಳೆಸುತ್ತಾ ಹೋದಾಗ ಮಾನವನು ಮಹಾದೇವನಾಗುವನು. ಈಗ ಹೇಳಿ, ಅನಂತವಾದ ವಿಶ್ವ ಚೈತನ್ಯವನ್ನೊಳಗೊಂಡ ಸ್ವಸ್ಥ ಮನಸ್ಸಿನಲ್ಲಿ ಸ್ವಸ್ಥ ದೇಹ ಇರುವುದೋ ಅಥವಾ ಮೂಳೆ ಮಾಂಸದ ದೇಹದಲ್ಲಿ ಮನಸ್ಸು ಇರುವುದೋ. ಪೂಜ್ಯ ಸಿದ್ಧೇಶ್ವರರ ಸ್ವಾಮಿಗಳ ಮಾತನ್ನು ಕೇಳೋಣವೇ? -ಕ್ರಿಯಾಶೀಲವಾದ ದೇಹವೇ ಹಣತೆ, ಸದ್ಬುದ್ಧಿಯೇ ಬತ್ತಿ, ಸದ್ಭಾವವೇ ತೈಲ, ಪರಮಸತ್ಯ ಜ್ಞಾನವೇ ಬೆಳಗುವ ಜ್ಯೋತಿ.

-ಡಾ.ಗಾಯತ್ರಿದೇವಿ ಸಜ್ಜನ್

5 Comments on “ಸ್ವಸ್ಥ ದೇಹದಲ್ಲಿ ಸ್ವಸ್ಥ ಮನಸ್ಸೇ ಅಥವಾ ಸ್ವಸ್ಥ ಮನಸ್ಸಿನಲ್ಲಿ ಸ್ವಸ್ಥ ದೇಹವೇ?

  1. ಅರ್ಥಪೂರ್ಣವಾದ ಲೇಖನ ಚಿಕ್ಕ ದಾಗಿ ದ್ದು ಚಿಂತನೆ ಮುಟ್ಟು ಮಾಡುವಂತೆ ಮೂಡಿ ಬಂದಿದೆ.ಅಭಿನಂದನೆಗಳು ಮೇಡಂ.

  2. ಹೌದು ಮೇಡಂ…ಆರೋಗ್ಯವಂತ ಮನಸ್ಸು ಇದ್ದಲ್ಲಿ ದೇಹವೂ ಆರೋಗ್ಯಪೂರ್ಣವಾಗಿರುವುದರಲ್ಲಿ ಸಂಶಯವಿಲ್ಲ..ಅರ್ಥಪೂರ್ಣ ಲೇಖನ…ಧನ್ಯವಾದಗಳು.

  3. ಈಗಿನ ಕಾಲಕ್ಕೆ ಅಗತ್ಯವಾದ ಅರ್ಥ ಪೂರ್ಣ ವಾದ ಲೇಖನ ಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *