ಚಾರ್ ಧಾಮ್ ಯಾತ್ರೆಯ ಅನುಭವಗಳು
ಚಾರ್ ಧಾಮ್ ಯಾತ್ರೆಗೆಂದು ಟ್ರಾವಲ್ಸನಲ್ಲಿ ಸೀಟು ಕಾಯ್ದಿರಿಸಿದಾಗಿನಿಂದ, ನನಗೆ, ನನ್ನ ಶ್ರೀಮತಿಗೆ 24 ಗಂಟೆಯೂ ಯಾತ್ರೆಯದೇ ಚಿಂತೆ. ನಾವು ಹೋಗುತ್ತಿದುದು ಅಕ್ಟೋಬರ್ ತಿಂಗಳಲ್ಲಿ. ಅಲ್ಲಿ ವಿಪರೀತ ಛಳಿ ಎಂದು ಎಲ್ಲರೂ ಹೆದರಿಸುವವರೇ. ನಮ್ಮದು ಸೀಜ಼ನಿನ ಕೊನೆಯ ಯಾತ್ರೆ. ನಾವು ದೆಹಲಿ ವಿಮಾನ ನಿಲ್ದಾಣದಲ್ಲಿ ನಮಗೆ ನಿಗದಿಯಾಗಿದ್ದ ಹೋಟಲ್ ತಲುಪಿದಾಗ ಮಿಕ್ಕ 19 ಸಹಪ್ರಯಾಣಿಕರು ಆಗಲೇ ಬಂದು ಹೋಟೆಲ್ ತಲುಪಿದ್ದರು. ಎಲ್ಲರ ಪರಿಚಯವಾಯಿತು. ಮುಕ್ಕಾಲು ಪಾಲು ಜನ ನಮ್ಮಂತೆ ಹಿರಿಯ ನಾಗರೀಕರೇ.
ನಮ್ಮ ಟೂರ್ ಮ್ಯಾನೇಜರ್ ರಘುರಾಮರು ಪ್ರಯಾಣದ ಬಗ್ಗೆ ಎಲ್ಲ ವಿವರಗಳನ್ನು ನೀಡಿದರು. ಬರುವ 20 ದಿನಗಳು ನಾವುಗಳು ಅವರು ಹೇಳಿದಂತೆ ನಡೆಯಬೇಕು. ದಿನಾ ಬೆಳಗ್ಗೆ 5 ಗಂಟೆಗೆ ಏಳಬೇಕು. ಕಾಫಿ ಕುಡಿದು 6 ಗಂಟೆಯ ಹೊತ್ತಿಗೆ ತಯಾರಾಗಿ ಬೆಳಗಿ ಉಪಹಾರ ಸೇವಿಸಿ 7 ಗಂಟೆಗೆ ಬಸ್ಸಿನಲ್ಲಿರಬೇಕು. ಕೆಲವು ದಿನಗಳಲ್ಲಿ 6 ಗಂಟೆಗೇ ಹೊರಡಬೇಕಾಗಬಹುದು ಎಂದು ತಿಳಿಸಿದರು. ನಾವುಗಳು ದೆಹಲಿಯನ್ನು ಬಿಟ್ಟು ಮಧ್ಯಾಹ್ನದ ಹೊತ್ತಿಗೆ ಹರಿದ್ವಾರವನ್ನು ಸೇರಿದೆವು. ಹರಿದ್ವಾರ ಹಿಂದುಗಳ ದೇವನಗರಿ. ಅಲ್ಲಿ 2000 ಕ್ಕೂ ಹೆಚ್ಚು ದೇವಾಲಯಗಳಿವೆ. ಎಲ್ಲ ದೇವಾಲಯಗಳನ್ನು ನೋಡಲು ತಿಂಗಳುಗಟ್ಟಲ್ಲೇ ಅಲ್ಲೇ ಇರಬೇಕು. ನಾವುಗಳು ಸುಮಾರು ಮುಖ್ಯವಾದ 5-6 ದೇವಸ್ಥಾನಗಳನ್ನು ನೋಡಿ ಸಂಜೆ ಗಂಗಾನದಿಯ ತಟದಲ್ಲಿ ಗಂಗಾರತಿಯನ್ನು ನೋಡಿದೆವು. ಸಾವಿರಾರು ಜನರು ನದಿಯ ತಟದಲ್ಲಿ ಕುಳಿತು ಸಾಮೂಹಿಕವಾಗಿ ಭಜನೆ ಮಾಡುವ, ಗಂಗಾರತಿಯನ್ನು ಮಾಡುತ್ತಾ, ಗಂಗಾರತಿಯನ್ನು ನೋಡುತ್ತಾ ಭಾವ ಪರವಶರಾಗುವುದನ್ನು ನೋಡುವುದೇ ಒಂದು ರೋಚಕವಾದ ಅನುಭವ. ಮೊದಲಿನಂತೆ ಗಂಗಾನದಿಯ ತಟದಲ್ಲಿ ಈಗ ಸ್ವಚ್ಛತೆಯ ಸಮಸ್ಯೆ ಇದ್ದಂತೆ ಕಾಣಿಸಲಿಲ್ಲ. ಎಲ್ಲವೂ ವ್ಯವಸ್ಥಿತವಾಗಿ ಶುಭ್ರವಾಗಿದ್ದವು.
ಮಾರನೆಯ ದಿನ ಬೆಳಗಿನ ಝಾವ 5 ಗಂಟೆಗೇ ಎದ್ದು ಗಂಗಾಸ್ನಾನ ಮಾಡಿದೆವು. ಸ್ವಲ್ಪ ಛಳಿಯಿದ್ದರೂ ನೀರು ಬಹಳ ಶುಭ್ರವಾಗಿತ್ತು. ದೇಹ ಮನಸ್ಸುಗಳೆಲ್ಲವೂ ಶುಚಿಯಾಗಿ ಮನಸ್ಸಿಗೆ ಆಹ್ಲಾದವೆನಿಸಿತು. ಸ್ನಾನದ ನಂತರ ದೇವರ ದರ್ಶನ ಮಾಡಿ ನಮ್ಮ ಪ್ರಯಾಣ ಹೃಷಿಕೇಶದ ಕಡೆ ಹೊರಟಿತು. ಹೃಷಿಕೇಶದಲ್ಲಿ ಭರತನ ದೇವಾಲಯ, ಲಕ್ಷಣನ ದೇವಾಲಯಗಳಿಗೆ ಭೇಟಿ ಕೊಟ್ಟೆವು. ಇಲ್ಲಿ ಲಕ್ಷಣ ಜೂಲಾ ಸೇತುವೆ ಇದೆ. ಹೃಷಿಕೇಷದಿಂದ ನಮ್ಮ ಪ್ರಯಾಣ ಬಾರಕೋಟ್ ಎಂಬ ಸ್ಥಳವನ್ನು ತಲುಪಿ ಅಲ್ಲೇ ರಾತ್ರಿಯ ಬಿಡಾರ ಹೂಡಿದೆವು. ಮತ್ತೆ ಮುಂಜಾನೆ ಎದ್ದು ಬಾರಕೋಟನ್ನು ಬಿಟ್ಟು ಯಮುನೋತ್ರಿಯ ಕಡೆ ನಮ್ಮ ಪ್ರಯಾಣ ಶುರುವಾಯಿತು.
ಜಾನಕಿಬಾಯಿ ಜಟ್ಟಿ ಎಂಬ ಸ್ಥಳದಿಂದ ಯಮುನೋತ್ರಿಗೆ ಹೋಗಿ ಬರಲು 12 ಕಿಲೋಮೀಟರಿನ ದಾರಿ. ಬಹಳ ದುರ್ಗಮವಾದ ದಾರಿ ಎನಿಸಿ, ನಾವು ಡೋಲಿಯಲ್ಲಿ ಯಮನೋತ್ರಿಯನ್ನು ತಲುಪಲು ನಿರ್ಧರಿಸಿದೆವು. ಹೃಷಿಕೇಶದಿಂದ ಯಮುನೋತ್ರಿಯ ಜಾನಕಿ ಜಟ್ಟಿಯ ನಮ್ಮ ಪ್ರಯಾಣ ಒಂದು ಕನಸಿನಂತೆ ಇತ್ತು. ಆಳವಾದ ಪ್ರಪಾತ, ಪ್ರಪಾತದ ಅಡಿಯಲ್ಲಿ ಮೈಲುಗಟ್ಟಲೆ ಒಂದೇ ಸಮನೆ ಹರಿಯುತ್ತಿರುವ ಯಮುನಾ ನದಿ, ಮಧ್ಯೆ ಮಧ್ಯೆ ಸೇತುವೆಗಳು, ಪರ್ವತ ಶ್ರೇಣಿ, ಅದರ ಮೇಲೆ ಬಿಸಿಲು ಬಿದ್ದಾಗ ಥಳ ಥಳ ಹೊಳೆಯುವ ಹಿಮದಿಂದ ಆವೃತವಾದ ಶಿಖರಗಳು, ಸ್ವರ್ಗವೇ ಧರೆಗಿಳಿದಂತ ಅನುಭವ. ಮಧ್ಯೆ ದಾರಿಯಲ್ಲಿ ಬಸ್ಸು ನಿಲ್ಲಿಸಿದಾಗ ಫೋಟೋ ತೆಗೆಯಲು ನಿಂತಾಗ ಕಂಡ ದೃಶ್ಯಗಳು ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿ ಮಾಡುತ್ತಿದ್ದವು. ಪ್ರಕೃತಿಯ ಈ ಅಗಾಧತೆಯ ಮುಂದೆ ನಾವೆಷ್ಟು ಕುಬ್ಜರು ಅನ್ನಿಸುತಿತ್ತು. ಮೂಕ ವಿಸ್ಮಿತವಾಗಿ ಫೋಟೋವನ್ನೂ ತೆಗೆಯದೆ ಬಸ್ಸಿನಲ್ಲಿ ಬಂದು ಕುಳಿತು ಬಿಟ್ಟೆ.
ಜಾನಕಿಜಟ್ಟಿಯಿಂದ ಯಮುನೋತ್ರಿಗೆ ತೆರಳಲು ಡೋಲಿಯಲ್ಲಿ ಕುಳಿತಾಗ ಯಾಕೋ ಮನಸ್ಸು ಚುರ್ ಎನ್ನಿಸಿತು. ಹೊಟ್ಟೆ ಪಾಡಿಗಾಗಿ ಆ ಹುಡುಗರು ನಮ್ಮನ್ನು ಹೊತ್ತುಕೊಂಡು ನಡೆಯುವುದನ್ನು ನೋಡಿದಾಗ , – ಓ ದೇವರೇ, ಏನಿದು ಜೀವನ – ಎಂದೆನಿಸಿದರೂ, ಆ ಹುಡುಗರು ಮಾತ್ರ, ತಮಾಷೆಯಾಗಿ ಮಾತನಾಡುತ್ತಾ, ನಮ್ಮನ್ನು ಹೊತ್ತುಕೊಂಡು ನಡೆದರು. ಆ ಎತ್ತರದಲ್ಲಿ ಆಮ್ಲಜನಕದ ಕೊರತೆ ಇರುವ ಆ ಜಾಗದಲ್ಲಿ ಹತ್ತು ಹೆಜ್ಜೆ ಇಟ್ಟರೇ ಏದುಸಿರು ಬಿಡುವ ನಮಗೆ ಅವರ ಲವಲವಕೆಯನ್ನು ನೋಡಿ ಆಶ್ಚರ್ಯವಾಯಿತು. ನಮ್ಮನ್ನು ಎತ್ತಿಕೊಂಡು ಹೋಗುತ್ತಿದ್ದ ಹುಡುಗರಲ್ಲಿ ಒಬ್ಬ, – ತಾನು ಎಂ.ಎ. ಪಾಸು ಮಾಡಿದ್ದೀನೆಂತಲೂ, ಇಲ್ಲಿ ಬೆಟ್ಟದಲ್ಲಿ ಅವನಿಗೆ ಯಾವ ಕೆಲಸವೂ ಇಲ್ಲವೆಂದೂ ಬೆಂಗಳೂರಿನಲ್ಲಿ ಕೆಲಸ ಕೊಡಿಸಿದರೆ ಬರುತ್ತೇನೆಂದೂ ತಿಳಿಸಿದಾಗ ಆಶ್ಚರ್ಯವಾಯಿತು. ಇಷ್ಟು ಸುಂದರವಾದ ಪ್ರಕೃತಿ, ಆದರೆ ಅಲ್ಲಿಯ ಸ್ಥಳೀಯರಿಗೆ ಹೊಟ್ಟೆ ಪಾಡಿಗಾಗಿ ಯಾತ್ರಿಗಳದೇ ಆಸರೆ. ಡೋಲಿಯನ್ನು ಮಾರ್ಗ ಮಧ್ಯದಲ್ಲಿ ನಿಲ್ಲಿಸಿ ನಮ್ಮ ಹುಡುಗರು ಊಟ ಮಾಡಿದರು. ನಾವು ಡೋಲಿಯಿಂದ ಕೆಳಗಿಳಿದು ಪರ್ವತದ, ನದಿಗಳ, ಪ್ರಪಾತದ ಚಿತ್ರಗಳನ್ನು ಸೆರೆ ಹಿಡಿದೆವು.
ಯಮುನೋತ್ರಿ ತಲುಪಿದ ಮೇಲೆ ನಮಗೆ ಮತ್ತೊಂದು ಆಶ್ಚರ್ಯ ಕಾದಿತ್ತು. ಯಮುನಾ ನದಿಯ ಪೂಜೆ ಮಾಡುವ ಮೊದಲು ನದಿಯಲ್ಲಿ ಸ್ನಾನ ಮಾಡಬೇಕೆಂದು ನಮ್ಮ ಮ್ಯಾನೇಜರ್ ಹೇಳಿದಾಗ, – ಈ ಕೊರೆಯುವ ಛಳಿಯಲ್ಲಿ ಹೇಗೆ ಸ್ನಾನ ಮಾಡಲು ಸಾಧ್ಯ ಎಂದು – ಕೇಳಿದಾಗ, ”ನಿಮಗಾಗಿ ನಾನು, ಇಲ್ಲೇ ಬಿಸಿ ನೀರಿನ ವ್ಯವಸ್ಥೆ ಮಾಡಿದ್ದೇನೆ” – ಎಂದು ಹೇಳಿದಾಗ ನಮಗೆ ತಮಾಷೆಯೆನಿಸಿತು. ಆದರೆ ಹಬೆಯಾಡುತ್ತಿರುವ ಬಿಸಿ ಬಿಸಿ ನೀರಿನ ಕೊಳವನ್ನು ನೋಡಿದಾಗ , ಇದು ನಿಜವೇ ಎಂದೆನಿಸಿತು.
ಬಿಸಿ ನೀರಿನ ಆ ಕೊಳದಲ್ಲಿ ಸ್ನಾನ ಮಾಡಿ ಎದ್ದಾಗ ಮೈ ಮನಸ್ಸುಗಳು ಅರಳಿತ್ತು. ಆ ಕೊರೆಯುವ ಛಳಿಯಲ್ಲಿ, ಯಮುನಾ ನದಿಯ ಉಗಮ ಸ್ಥಾನದ ಬಳಿ ಬಿಸಿ ನೀರಿನ ಈ ಸ್ನಾನ ಯಾವ ಪಂಚತಾರಾ ಹೋಟಲಿನಲ್ಲಿಯೂ ಸಿಗದ ಅನುಭವವಾಗಿತ್ತು. ಯಮುನಾ ನದಿಗೆ ಮಹಿಳೆಯರೆಲ್ಲಾ ಬಾಗಿನ ಕೊಟ್ಟು, ಮತ್ತೆ ಡೋಲಿಯಲ್ಲಿ ವಾಪಸ್ಸು ಬಂದು ಬಸ್ಸಿನಲ್ಲಿ ಕುಳಿತು ಬಾರಕೋಟಿನ ಹೋಟಲನ್ನು ತಲುಪಿದಾಗ ರಾತ್ರಿಯಾಗಿತ್ತು.
ಮುಂದೆ ಬರೀ ಬಸ್ಸಿನಲ್ಲಿ ಪ್ರಯಾಣವೇ ಜಾಸ್ತಿ. ಬಾರಕೋಟಿನಿಂದ ಉತ್ತರಕಾಶಿ, ಅಲ್ಲಿಂದ ಗಂಗೋತ್ರಿಗೆ ಪ್ರಯಾಣ. ನಮ್ಮ ಬಸ್ಸಿನ ಪ್ರಯಾಣದ ಬಗ್ಗೆ ಒಂದು ಮಾತನ್ನು ಹೇಳಲೇ ಬೇಕು. ನಮ್ಮ ಜೊತೆಗೆ ಪ್ರಯಾಣಿಸುತ್ತಿದ್ದ ಎಲ್ಲರೂ ಮಹಾ ದೈವಭಕ್ತರು. ಹೇಳಿ ಕೇಳಿ ನಮ್ಮ ಚಾರ್ ಧಾಮ್ ತೀರ್ಥಯಾತ್ರೆ. ಬೆಳಗ್ಗೆ 5 ಗಂಟೆಗೆ ಬಸ್ಸಿನಲ್ಲಿ ಕುಳಿತ ಕೂಡಲೇ ನಮ್ಮ ಮಹಿಳಾಮಣಿಯರು ಒಬೊಬ್ಬರಾಗಿ ಭಜನೆಯನ್ನು ಹಾಡುತ್ತಿದ್ದರು. ಮಿಕ್ಕ ಎಲ್ಲರೂ ಜೊತೆ ಕೊಡುತ್ತಿದ್ದರು. ಮೊದಲು ವೆಂಕಟೇಶ ಸುಪ್ರಭಾತ, ನಂತರ ವಿಷ್ಣು ಸಹಸ್ರನಾಮ, ಭಜಗೋವಿಂದಂ ಹಾಡು, ಲಿಂಗಾಷ್ಟಕ, ಹೀಗೆ ಎಲ್ಲಾ ದೇವರುಗಳ ಭಜನೆ ನಡೆಯುತ್ತಿದ್ದವು. ಇದರ ಮಧ್ಯೆ, ನಮ್ಮ ಟೂರ್ ಮ್ಯಾನೇಜರ್ ರಘುನಾಥರು ಪ್ರತೀದಿನ ಬೆಳಗ್ಗೆ, ನಾವು ತಲುಪಲಿರುವ ಕ್ಷೇತ್ರದ ಬಗ್ಗೆ ಸ್ಥಳ ಪುರಾಣವನ್ನು ಹೇಳುತ್ತಿದ್ದರು. ಮಧ್ಯೆ, ಮಧ್ಯೆ, ಕುತೂಹಲಕಾರಿಯಾದ ಅನೇಕ ಉಪಕಥೆಗಳು ರೋಚಕವಾಗಿರುತ್ತಿದ್ದವು.
ಪೂರ್ತಿ ಉತ್ತರಾಕಾಂಡ ರಾಜ್ಯ ದೇವಭೂಮಿ ಎಂದು ಖ್ಯಾತಿ ಪಡೆದಿದೆ. ನಮ್ಮ ರಾಮಾಯಣ, ಮಹಾಭಾರತ, ಪುರಾಣಗಳಲ್ಲಿನ ಎಲ್ಲಾ ಪಾತ್ರಗಳೂ ಇಲ್ಲಿ ಒಂದಲ್ಲ ಒಂದು ಜಾಗದಲ್ಲಿ ನಮಗೆ ಕಾಣಸಿಗುತ್ತವೆ. ಮಹಾಭಾರತವನ್ನು ಗಣೇಶನ ಕೈಲಿ ಬರೆಸಿದ ವ್ಯಾಸ ಮಹರ್ಷಿಯ ಪೀಠ, ಗಣೇಶನು ಮಹಾಭಾರತವನ್ನು ಬರೆದ ಸ್ಥಳ, ಭೀಮನಿಗೆ ಹನುಮಂತನಿಂದ ಗರ್ವಭಂಗವಾದ ಸ್ಥಳ, ಮುಂತಾದವು ಅವುಗಳಲ್ಲಿ ಕೆಲವು. ಗರುಡನಿಗೆಂದೇ ಕಟ್ಟಿಸಲಾದ ದೇವಸ್ಥಾನ, ಅಲ್ಲಿ ಕೆಳಗೆ ಹರಿಯುತ್ತಿರುವ ನದಿಯಿಂದ ಕಲ್ಲುಗಳನ್ನು ಆಯ್ಕೆಮಾಡಿ ಅದನ್ನು ಗರುಡ ದೇವರಿಗೆ ಮುಟ್ಟಿಸಿ ಮನೆಯಲ್ಲಿ ತಂದು ಇಟ್ಟುಕೊಂಡರೆ ನಾಗಭೀತಿ ಇರುವುದಿಲ್ಲವೆಂಬ ನಂಬಿಕೆ. ಹೀಗೆ ಅದೆಷ್ಟೋ ಕಥೆಗಳು, ಐತಿಹ್ಯಗಳು. ಇವೆಲ್ಲವನ್ನೂ ಭಾಗವತದಿಂದ ಓದಿ ಹೇಳುತ್ತಿದ್ದೇನೆ, ಎಂದ ನಮ್ಮ ಮ್ಯಾನೇಜರರ ಕಥೆ ಹೇಳುವ ಶೈಲಿಗೆ ತೆಲೆದೂಗದವರೇ ಇರುತ್ತಿರಲಿಲ್ಲ.
ಯಮುನೋತ್ರಿಯಿಂದ ಗಂಗೋತ್ರಿಗೆ ಪ್ರಯಾಣ. ಉತ್ತರಕಾಶಿಯ ಮೂಲಕ ಗಂಗೋತ್ರಿಯನ್ನು ಸೇರಿ, ಅಲ್ಲೂ ಪವಿತ್ರವಾದ ನದೀ ಸ್ನಾನ ಮಾಡಿ, ಗಂಗಾನದಿಯ ಉಗಮ ಸ್ಥಾನಕ್ಕೆ ಮತ್ತೆ ಬಾಗಿನ ಸಮರ್ಪಿಸಲಾಯಿತು. ಈ ಮಧ್ಯೆ ನಮಗೆ ಉತ್ತರಾಕಾಂಡದ ಅಧ್ಭುತ ಟೆಹರಿ ಡ್ಯಾಮ್ ಅನ್ನು ನೋಡುವ ಅವಕಾಶ ಸಿಕ್ಕಿತು. ಭಾಗೀರಥಿ ನದಿಗೆ ಅಡ್ಡಲಾಗಿ ಕಟ್ಟಿರುವ ಈ ಡ್ಯಾಮ್ ಭಾರತದ ಅತ್ಯಂತ ಎತ್ತರದ ಡ್ಯಾಮ್ ಮತ್ತು ಪ್ರಪಂಚದ ಅತೀ ಎತ್ತರದ ಡ್ಯಾಮುಗಳಲ್ಲಿ ಒಂದು. ಡ್ಯಾಮಿನಿಂದ ಸರಿಸುಮಾರು 60 ಕಿ.ಮೀ.ವರಗೆ, ಸತತವಾಗಿ ಹರಿಯುತ್ತಿರುವ ಸ್ವಾಭಾವಿಕ ಕಾಲುವೆಗಳನ್ನು ನೋಡುವುದೇ ಒಂದು ಆನಂದ.
ನಾಲ್ಕರಲ್ಲಿ ಎರಡು ಪುಣ್ಯಕ್ಷೇತ್ರಗಳ ಯಾತ್ರೆ ಮುಗಿದಿದ್ದವು. ಮುಂದೆ ನಮ್ಮ ಪ್ರಯಾಣ ಕೇದಾರನಾಥದತ್ತ. ಶ್ರೀನಗರ, ಶ್ರೀಕೋಟಾ, ಸೀತಾಪುರ ಮಾರ್ಗವಾಗಿ ಸೋಮಪ್ರಯಾಗಕ್ಕೆ ಪ್ರಯಾಣ. ಅಲ್ಲಿಂದ ಸಾಮಾನ್ಯವಾಗಿ ಗೌರೀ ಕುಂಡಕ್ಕೆ ಹೋಗಿ ಕೇದಾರನಾಥನ ದರ್ಶನಕ್ಕೆ 18 ಕಿ.ಮೀ.ರಸ್ತೆಯನ್ನು ಡೋಲಿ ಅಥವಾ ಕುದುರೆ ಅಥವಾ ಕಾಲ್ನಡಿಗೆಯಲ್ಲಿ ಪ್ರಯಾಣಿಸುವುದು ನೊದಲಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಇತ್ತೀಚಿನ ಕೆಲವು ವರುಷಗಳಿಂದ ಹೆಲಿಕ್ಯಾಪ್ಟರ್ ಸೇವೆಯ ಲಭ್ಯತೆ ಇದೆ. ನಮ್ಮ ಗುಂಪಿನ 14 ಜನರ ಯಾತ್ರೆ ಅಕ್ಟೋಬರ್ 16 ನೇ ತಾರೀಖಿಗೆ ನಿಗದಿಯಾಗಿತ್ತು. ಮಿಕ್ಕ 7 ಜನರ ಯಾತ್ರೆ ಅಕ್ಟೋಬರ್ 17 ನೇ ತಾರೀಖಿಗೆ ನಿಗದಿಯಾಗಿತ್ತು. ಅಕ್ಟೋಬರ್ 17 ರಿಂದ ಹೆಲಿಕ್ಯಾಪ್ಟರ್ ಸೇವೆಯನ್ನು ಸ್ಥಗಿತಗೊಳಿಸಬೇಕೆಂದು ಅಧಿಕಾರಿಗಳು ನಿರ್ಧಿರಿಸಿದ್ದರಿಂದ ಅಕ್ಟೋಬರ್ 16 ರಂದೇ ನಮ್ಮ ಗುಂಪಿನ ಎಲ್ಲಾ 21 ಸದಸ್ಯರು ಹೆಲಿಕ್ಯಾಪ್ಟರಿನಲ್ಲಿ ಕೇದಾರ ಪರ್ವತವನ್ನು ತಲುಪಿದೆವು. ಹೆಲಿಕ್ಯಾಪ್ಟರ್ ಯಾತ್ರೆ ಕೇವಲ 7 ನಿಮಿಷಗಳದ್ದಾದರೂ ರೋಮಾಂಚಕತೆಗೆ ಏನೂ ಕೊರತೆಯಿರಲಿಲ್ಲ.
ಪ್ರಪಾತದೊಳಗಿನಿಂದ ಮೇಲೆ ಹಾರಿ ಸಾಗುವಾಗ ಕಾಣುವ ಪ್ರಕೃತಿ ಸೌಂದರ್ಯ ಅವರ್ಣನೀಯ. ಹಿಮದಿಂದ ಕೂಡಿದ ಶಿಖರಗಳನ್ನು ಹತ್ತಿರದಿಂದಲೇ ನೋಡುತ್ತಿರುವ ಭ್ರಮೆ. ಪೂರ್ತ ಪ್ರಕೃತಿಯ ವೈಭವವನ್ನು ಕಣ್ತುಂಬಿಕೊಳ್ಳುವ ಮೊದಲೇ ಹೆಲಿಕ್ಯಾಪ್ಟರ್ ಪ್ರಯಾಣ ಮುಗಿದು ಹೋಗಿತ್ತು. ಕೇದಾರನಾಥನ ದರ್ಶನ, ಪೂಜೆ, ಅತ್ಯಂತ ಭಾವುಕತೆಯಿಂದ ಕೂಡಿತ್ತು. ಶಿವಲಿಂಗವನ್ನು ನಾವೇ, ಕೈಯಾರ, ತುಪ್ಪದ ಅಭಿಷೇಕದಿಂದ ಹಿಡಿದು ಗಂಧ, ಪುಷ್ಪಗಳಿಂದ ಪೂಜಿಸಿ, ನೈವೇದ್ಯ ಸಮರ್ಪಣೆ ಎಲ್ಲವೂ ಸಾಂಗೋಪಾಂಗವಾಗಿ ನಡೆದು ಆಚೆ ಬಂದಾಗ ನನ್ನ ಶ್ರೀಮತಿಯಂತೂ ಬಹಳ ಭಾವುಕಳಾಗಿದ್ದಳು. ಅಂದು ಅಕ್ಟೋಬರ್ 16 ರಂದು ನನ್ನ ಜನ್ಮ ದಿನ, ಶಿವನ ದಿನವಾದ ಸೋಮವಾರ, ಏಕಾದಶಿ. ಉಪವಾಸ ಮಾಡಿದ್ದ ನನ್ನ ಶ್ರೀಮತಿ, ಹಿಂದಿನ ದಿನ ನನ್ನ ಮೋಬೈಲ್ಲಿನಲ್ಲಿ ಸೇವ್ ಮಾಡಿಟ್ಟುಕೊಂಡಿದ್ದ ಲಿಂಗಾಷ್ಟಕವನ್ನು ಕೇಳಿ, ಜೊತೆಯಲ್ಲಿ ತಾನೂ ಪಠಿಸಿ ಸಂತೋಷಪಟ್ಟಳು. ಇನ್ನೆರಡು ದಿನಗಳಿಗೆ ಕೇದಾರನಾಥ ದೇವಸ್ಥಾನದ ಬಾಗಿಲು ಮುಚ್ಚುವುದರಲ್ಲಿತ್ತು.
ಚಾರ್ ಧಾಮ್ ಗಳಲ್ಲಿ ಮೂರು ಧಾಮಗಳ ಯಾತ್ರೆ ಮುಗಿದಿತ್ತು. ಇನ್ನುಳಿದದ್ದು ಬದರೀನಾಥ ದರ್ಶನ ಮಾತ್ರ. ಇಲ್ಲಿ ಬೆಟ್ಟ ಗುಡ್ಡ ಹತ್ತುವ ಅವಶ್ಯಕತೆ ಇಲ್ಲದಿದ್ದರೂ ಹವಾಮಾನ ಮಾತ್ರ 4 ಡಿಗ್ರಿ ಇತ್ತು. ಆ ನಡುಗುವ ಛಳಿಯಲ್ಲೀ 5 ಗಂಟೆಗೇ ಎದ್ದು, ಮತ್ತೆ ದೇವಸ್ಥಾನದ ಬಳಿಯಲ್ಲಿದ್ದ ಬಿಸಿನೀರಿನ ಕೊಳದಲ್ಲಿ ಸ್ನಾನ ಮಾಡಿ ದೇವರ ದರ್ಶನ ಮುಗಿಸಿಕೊಂಡು ಆಚೆ ಬರುವ ಹೊತ್ತಿಗೆ ಬದರೀನಾಥ ನಮ್ಮ ಮೇಲೆ ಕರುಣೆ ತೋರಿದ್ದ. ಬೆಳಗಿನ ಸೂರ್ಯ ಕಿರಣಗಳು ಛಳಿಯನ್ನು ಕಡಿಮೆ ಮಾಡಿದ್ದವು. ನದಿಯ ತಟದಲ್ಲಿ ದಂಪತಿಗಳೆಲ್ಲಾ ಜೊತೆ ಜೊತೆಯಾಗಿ ಕುಳಿತು ಕುಬೇರ ಆರಾಧನೆ ಹಾಗೂ ಷೋಡಶದಾನಗಳ ಪೂಜೆ ಪುರೋಹಿತರ ಮೇಲ್ವಿಚಾರಣೆಯಲ್ಲಿ ಸಾಂಗೋಪಾಂಗವಾಗಿ ನಡೆಸಿದೆವು. ಬಿಸಿಲು ಬಂದಿದ್ದರಿಂದ ನಾವುಗಳು ಸಂಪ್ರದಾಯದಂತೆ ಪಂಚೆ ಶಲ್ಯಗಳನ್ನು ಉಟ್ಟುಕೊಂಡೇ ಪಿತೃಕಾರ್ಯಗಳನ್ನೂ ಮಾಡಲು ಸಾಧ್ಯವಾಯಿತು.
ಸಾಯಂಕಾಲ ಬದರೀನಾಥನ ಮುಂದೆ 20 ನಿಮಿಷಗಳ ಕಾಲ ಕುಳಿತು ವಿಷ್ಣು ಸಹಸ್ರನಾಮವನ್ನು ಹೇಳುವ/ಕೇಳುವ ಅನುಭವ ಚೆನ್ನಾಗಿತ್ತು. ಏನೆಂದರೂ ನಮ್ಮ ನಾರಾಯಣ ಅಲಂಕಾರ ಪ್ರಿಯ. ವಜ್ರ, ವೈಢೂರ್ಯಗಳಿಂದ ಅಲಂಕೃತನಾಗಿ ಕಂಗೊಳಿಸುತ್ತಿದ್ದ ದೃಶ್ಯ ನಯನ ಮನೋಹರವಾಗಿತ್ತು. ಅಂದು ದೀಪಾವಳಿ ಹಬ್ಬದ ದಿನವಾಗಿತ್ತು. ಹಾಗಾಗಿ ದೇವಸ್ಥಾನ ಪೂರ್ತಿ, ಹೂವಿನಿಂದ, ದೀಪಗಳಿಂದ ಅಲಂಕೃತವಾಗಿತ್ತು. ಉತ್ಸಾಹಿಗಳು ಪಟಾಕಿ, ವಿವಿಧ ರೀತಿಯ, ವೈವಿಧ್ಯಮಯ ಬಾಣ, ಬಿರುಸುಗಳಿಂದ ಪೂರ್ತಿ ಬದರೀ ಕ್ಷೇತ್ರವನ್ನು ಕಂಗೊಳಿಸುವಂತೆ ಮಾಡಿದ್ದರು.
ಚಾರ್ ಧಾಮ್ ಯಾತ್ರೆ ಮುಗಿದಿತ್ತು. ಮೈ ಮನಸ್ಸುಗಳು ಪ್ರಫುಲ್ಲವಾಗಿದ್ದವು. ಪ್ರಕೃತಿಯ ರುದ್ರ ರಮಣೀಯ ದೃಶ್ಯಗಳು. ಕೇದಾರನಾಥದಲ್ಲಿ ಕೆಲವೇ ವರ್ಷಗಳ ಹಿಂದೆ, ಕೇವಲ ಹದಿನೈದು ನಿಮಿಷಗಳ ಪ್ರವಾಹದಿಂದ ಕೊಚ್ಚಿ ಹೋದ ನೂರಾರು ಯಾತ್ರಿಕರು, ಅಂಗಡಿ ಮುಂಗಟ್ಟುಗಳು, ಕಟ್ಟಡಗಳ ನಡುವೆಯೂ ದೇವಾಲಯವು ಸುರಕ್ಷಿತವಾಗಿದ್ದು, ಹಲವರಿಗೆ ಆಶ್ರಯ ನೀಡಿದ್ದು, ದೇವಾಲಯದ ಹಿಂಬದಿಯಲ್ಲಿರುವ ಭೀಮಬಂಡೆಗೆ ನೀರು ಬಡಿದು ಅದು ದೇವಾಲಯವನ್ನು ರಕ್ಷಿಸಿದ ಪರಿ ಎಂಥಹ ನಾಸ್ತಿಕರಿಗೂ, ನಮ್ಮ ಅರಿವಿಗೂ ನಿಲುಕದ ಒಂದು ಶಕ್ತಿಯ ಇರುವಿಕೆಯ ಬಗ್ಗೆ ಮನದಟ್ಟು ಮಾಡುತ್ತದೆ, ಎಂದು ಯೋಚಿಸುತ್ತಾ ಮತ್ತೊಮ್ಮೆ, ಬದರೀನಾಥ, ಕೇದಾರನಾಥ, ಗಂಗೆ, ಯಮುನೆಯರಿಗೆ ನಮಿಸುತ್ತಾ ನನ್ನ ಸಫಲ ಯಾತ್ರಾ ಕಥನವನ್ನು ಮುಗಿಸುತ್ತೇನೆ.
-ಎಂ.ಆರ್ .ಆನಂದ್, ಮೈಸೂರು
ಸರಳ ನೇರ ನಿರೂಪಣೆಯ ಚಾರದಾಮ್ ಯಾತ್ರೆ ಸುಖವಾಗಿ ಓದಿಸಿಕೊಂಡು ಹೋಯಿತು.ಸ್ಥಳಗಳ ವಿವರಣೆಗೆ ನನ್ನದೊಂದು ನಮಸ್ಕಾರ.
ವಂದನೆಗಳು
Very nice
Thank you very much
Sir, ನೀವು ಯಾತ್ರೆ ಮಾಡಿದ ಟೂರ್ ವ್ಯವಸ್ಥಾಪಕರ ವಿವರ ಕೊಟ್ಟಿದ್ದರೆ ನಾವು ಅವರಲ್ಲಿ ಚಾರ್ಧಾಂ ಯಾತ್ರೆ ಗೆ ಬುಕ್ ಮಾಡ್ ಬಹುದಾಗಿತ್ತು.
ಖಂಡಿತಾ. ನಿರ್ಮಲ ಟ್ರಾವಲ್ಸ್.
2016 ರಲ್ಲಿ ನಾವು ಚಾರ್ ಧಾಮ್ ಪ್ರವಾಸ ಮಾಡಿದ್ದೆವು..ನೆನಪು ಮರುಕಳಿಸಿತು..ಧನ್ಯವಾದಗಳು.
ಧನ್ಯವಾದಗಳು
ನಮಗೂ ಕೂತಲ್ಲಿಯೇ ಚಾರ್ ಧಾಮ್ ಯಾತ್ರೆ ಮಾಡಿಸಿದಿರಿ. ..ಸೊಗಸಾದ ನಿರೂಪಣೆ.. ಧನ್ಯವಾದಗಳು ಸರ್.
ತಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು
ಚಾರ್ಧಾಮ ಯಾತ್ರೆ ಯನ್ನು ಬಹಳ ಚೆನ್ನಾಗಿ ನಿರೂಪಿಸಿದ್ದೀರಿ..ನಮಗೂ ಮನದಲ್ಲಿ ಯಾತ್ರೆ ಮಾಡಿದ ಅನುಭವ ಆಯಿತು.
ಪ್ರವಾಸದ ನಿಮ್ಮ ಅನುಭವ ನಮಗೂ ಅನಂದ ನೀಡಿತು
೨೦೧೯ರ ಮೇ ತಿಂಗಳಲ್ಲಿ ಚಾರಧಾಮ ಯಾತ್ರೆ ನನ್ನ ಶ್ರೀಮತಿ ಮತ್ತು ಸಹೋದರ ದಂಪತಿ ಗಳೊಂದಿಗೆ ಕೈಕೊಂಡಿದ್ದೇನು. ತಮ್ಮ ನಿರೂಪಣೆ ನಮ್ಮ ಯಾತ್ರೆ ಅನುಭವ ಆಯಿತು. ಒಳ್ಳೆಯ ಪ್ರವಾಸ. ಜೀವನ ಸಾರ್ಥಕತೆ ಅನಿಸಿತು.
ಆನಂದ ಸರ್,
ಬಹಳ ಸೊಗಸಾಗಿ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದೀರಿ. ನಾನು ಮತ್ತು ಶ್ರೀ ಕಾಂತ್ ಕುಟುಂಬ 2019ರಲ್ಲಿ ಮಾಡಿದ ಚಾರ್ಧಾಮ ಯಾತ್ರೆ ನೆನಪಿಗೆ ಬಂತು. ಧನ್ಯವಾದಗಳು
ಚಂದಾದ ವಿಭಿನ್ನ ನಿರೂಪಣೆ!
ನಿಮ್ಮ ಪ್ರವಾಸದ ಬರವಣಿಗೆಯು ತುಂಬಾ ಚೆನ್ನಾಗಿದೆ ಸರ್
ಕೇದಾರನಾಥ ದೇವಾಲಯಕ್ಕೆ ಹೋಗಲು ಹೆಲಿಕಾಪ್ಟರ್ ಸಿಗದಿದ್ದಾಗ ಡೋಲಿ ಯಲ್ಲಿ ಹೋಗುವುದು ಕ್ಷೇಮವೇ ಅಥವಾ ನೆಡೆಯಲು ಸಾದ್ಯವೇ ದಯವಿಟ್ಟು ತಿಳಿಸಿ
ನಿಮ್ಮ ಪ್ರವಾಸದ ಬರವಣಿಗೆಯ ಶೈಲಿ ಬಹಳ ಚೆನ್ನಾಗಿದೆ ಸರ್
ಕೇದಾರನಾಥ ದೇವಾಲಯ ನೋಡಲು ಹೋಗುವುದಕ್ಕೆ ಹೆಲಿಕಾಪ್ಟರ್ ವ್ಯವಸ್ಥೆ ಸಿಗದಿದ್ದಾಗ ಡೋಲಿ ಉತ್ತಮವೇ ಅಥವಾ ನಡಿಗೆ ಉತ್ತಮವೇ ದಯವಿಟ್ಟು ತಿಳಿಸಿ