ಮನದ ಮನೆ
ಅಲ್ಲೊಂದು ಅರಮನೆ. ವಿಶಾಲವಾದ ಮನೆ. ಹೆಬ್ಬಾಗಿಲು ಮುಚ್ಚಿತ್ತು. ಬಲವಾಗಿ ತಳ್ಳಿದೆ. ತೆರೆದುಕೊಂಡಿತು. ಒಳಗಿನಿಂದ ಚಿಲಕ ಹಾಕಿರಲಿಲ್ಲ. ಒಳ ನಡೆದೆ. ಆಗಲೋ ಈಗಲೋ ಕತ್ತಲಾವರಿಸುವಂತಿತ್ತು. ಮುಸ್ಸಂಜೆಯ ಮಂದ ಬೆಳಕು. ಮನೆ ಚೆನ್ನಾಗಿ ಅಲಂಕರಿಸಲ್ಪಟ್ಟಿತ್ತು. ಮನೆಯೊಳಗಿರಬೇಕಾದ ಎಲ್ಲ ಬಗೆಯ ಸೌಕರ್ಯಗಳೂ ಇದ್ದವು. ಅಂದದ ಚಂದದ ಮನೆಯೊಳಗೆ ಮನಸುಗಳ ಸುಳಿವೇ ಇರಲಿಲ್ಲ. ಖಾಲಿ ಖಾಲಿ. ಒಳ ಹೋದಂತೆ ಕತ್ತಲು. ಬರೀ ಜೇಡಗಳ ಬಲೆ ತುಂಬಿಕೊಂಡಿತ್ತು. ಉಸಿರು ಕಟ್ಟುವಂತಾಯಿತು. ಮೈ ಎಲ್ಲ ಬಲೆ ಅಂಟಿಕೊಂಡಿತು; ಬಿಡಿಸಲಾಗದ ಸಂಬಂಧಗಳಂತೆ. ಅಸಹ್ಯವಾಯಿತು. ಕಿಟಕಿ ಬಾಗಿಲುಗಳೆಲ್ಲ ಮುಚ್ಚಿಕೊಂಡಿದ್ದವು.ಹೊರಗಿಂದ ಯಾವ ಸದ್ದೂ ಕೇಳುತ್ತಿರಲಿಲ್ಲ. ಧೂಳು.. ಹೆಜ್ಜೆಯ ಅಚ್ಚು ತೆಗೆದಿತ್ತು. ಸ್ವಚ್ಛವಿರದ ಮನೆಯೊಳಗೆ ದುರ್ಗಂಧ ಹರಡಿ ಹೊಟ್ಟೆ ತೊಳೆಸುವಂತಾಯಿತು. ಭಯವೂ ಆಯಿತು. ‘ ಬೇಗ ಮರಳಬೇಕು ಈ ಮನೆಯಿಂದ‘, ಎನಿಸಿತು.
ಹೊರಡಲೇ? ಬೇಡ..
ಹೊರಡುವ ಮುನ್ನ ಈ ಕಿಟಕಿ ಬಾಗಿಲುಗಳನ್ನು ತೆರೆಯೋಣವೆನಿಸಿತು. ತೆರೆದೆ. ತಂಪಾದ, ಹಿತವಾದ ಗಾಳಿ ದುರ್ಗಂಧವ ತೂರಿ ಒಳ ಬಂತು. ಸ್ವಲ್ಪ ಹೊತ್ತಿಗೆ ದುರ್ಗಂಧ ಮರೆಯಾಗಿ ಶ್ವಾಸ ಬಿಡುವಂತಾಯಿತು. ಧೂಳೆಲ್ಲ ಒರೆಸಿದಾಗ ಶುದ್ಧವಾಯಿತು. ಬಲೆಯ ಬಂಧನದ ಭಯವೂ ಬಿಟ್ಟಿತು. ಪುಟ್ಟ ಹಣತೆಯೊಂದಿತ್ತು. ಮುಸ್ಸಂಜೆಯು ಜಾರಿ ಕತ್ತಲಾವರಿಸಲು ಹಣತೆ ಬೆಳಗಿತು. ಮನೆಯೆಲ್ಲ ಬೆಳಕು ತುಂಬಿತು. ಹೊರಬಂದು ನೋಡಿದೆ. ಮನೆ ನಕ್ಷತ್ರದಂತೆ ಹೊಳೆಯುತ್ತಿತ್ತು. ಮತ್ತೆ ಮನೆಗೆ ಮರಳುವ ಮನಸಾಯಿತು. ಮತ್ತಷ್ಟು ಮನಸುಗಳು ಮನೆಯೊಳಗೆ ಮನೆ ಮಾಡಿದವು. ಮನೆ ತುಂಬಿತು. ಅಂದವಾದ ಅರಮನೆಯಾಯಿತು.
-ಸ್ವಪ್ನ ಪಿ ಎಸ್
Nice
Thank you
keep going, nice wordings.
Thank You
Beautiful
Thank You
ಚಿಕ್ಕ ಚೊಕ್ಕ ಕತೆ..ಚೆನ್ನಾಗಿದೆ.
ಧನ್ಯವಾದಗಳು
ಮನೆಯ ದೀಪ ಬೆಳಗುವ ಮಹಾತ್ಮರು ಬರಬೇಕಲ್ಲ ಕಥೆ ಚೆನ್ನಾಗಿದೆ
ಧನ್ಯವಾದಗಳು
ನಮ್ಮೊಳಗಿನ ದನಿ..ಆತ್ಮದ ಮಾತು ಎಂದರೆ ಇದೇ ಏನೋ..
ಭಾವಪೂರ್ಣ ಕವನ ಚೆನ್ನಾಗಿದೆ.
ಧನ್ಯವಾದಗಳು
ಕೊಂಚ ಯೋಚಿಸಿ ಮತ್ತೊಮ್ಮೆ ಓದಿ ಅರ್ಥೈಸುವ ಕವನ ಅಭಿನಂದನೆಗಳು ಮೇಡಂ.
ಧನ್ಯವಾದಗಳು
ಮನೆ ಮತ್ತು ವಸತಿಯ ನಡುವೆ ಇರುವ ವ್ಯತ್ಯಾಸವನ್ನು ಸೊಗಸಾಗಿ ತಿಳಿಸಿದ್ದೀರ. ಅಭಿನಂದನೆಗಳು.
ಧನ್ಯವಾದಗಳು