ಕಿರು ಕಾದಂಬರಿ: ಭಾವ ಸಂಬಂಧ- ಎಳೆ 8
ಮುಂದಿನ ಒಂದು ತಿಂಗಳು, ಸೀತಮ್ಮನವರು ತಾವು ಯುದ್ದಕ್ಕೆ ತಯಾರಿ ಮಾಡಿಕೊಂಡಂತೆ, ಒಂದೊಂದು ಪೈಸೆಯನ್ನೂ ಕೂಡಿಡತೊಡಗಿದರು. ಪಾತ್ರೆಗೆ ಅಳೆದು ಹಾಕಿದ ಅಕ್ಕಿ, ಬೇಳೆಗಳಿಂದ ಒಂದೊಂದು ಮುಷ್ಟಿ ಮತ್ತೆ ತೆಗೆದು ಹಿಂದೆ ಡಬ್ಬಕ್ಕೆ ಹಾಕುತ್ತಿದ್ದರು. ಬಾಣಲೆಗೆ ಹಾಕಿದ ಎಣ್ಣೆಯಿಂದ ಎರಡು ಚಮಚ ಎಣ್ಣೆ ತೆಗೆದು ಹಿಂದಕ್ಕೆ ಹಾಕುತ್ತಿದ್ದರು. ಎಲ್ಲದ್ದಕ್ಕಿಂತ ಅಗ್ಗದ ತರಕಾರಿ, ದೇವರಿಗೆ ಮನೆಯ ಅಂಗಳದಲ್ಲೇ ಬಿಟ್ಟ ಹೂವು, ಹೀಗೆ ಒಂದೊಂದು ಪೈಸೆಯನ್ನೂ ಕೂಡಿಟ್ಟು ನವರಾತ್ರಿಗೆ ಮುಂಚೆಯೇ ಹೋಗಿ ಹರಿವಾಣವನ್ನು ಬಿಡಿಸಿಕೊಂಡು ಬಂದರು. ಸಧ್ಯ, ದೊಡ್ಡ ಯುದ್ಧ ಗೆದ್ದು ಬಂದಂತಾಯಿತು. ಏಕೆಂದರೆ ನವರಾತ್ರಿಯಲ್ಲಿ, ಸರಸ್ವತೀ ಪೂಜೆ, ಆಯುಧ ಪೂಜೆ, ವಿಜಯದಶಮಿಯ ದಿನಗಳಲ್ಲಿ ಸತೀಶರು ವಿಶೇಷ ದೇವರ ಪೂಜೆ ಮಾಡುತ್ತಿದ್ದರು. ಆಗ ಈ ಹರಿವಾಣವನ್ನವರು ಉಪಯೋಗಿಸುತ್ತಿದ್ದರು.
ಪೂಜೆಗೆ ಕೂತ ಸತೀಶರು ಕರೆದರು – ಸೀತಾ ಬಾ ಇಲ್ಲಿ, ಒಂದು ಘಳಿಗೆ – ಸೀತಮ್ಮ ಮಾಡುತ್ತಿದ್ದ ಕೆಲಸವನ್ನು ಬಿಟ್ಟು ಬಂದರು.
ನೋಡು ಸೀತಾ, ಹರಿವಾಣದ ಒಂದು ಕಾಲು ಬಿದ್ದು ಹೋಗಿದೆ. ಯಾವಾಗ ಬಿತ್ತು? ನೀನೂ ಗಮನಿಸಲಿಲ್ಲವೆ? ಎಲ್ಲಾದರೂ ಎತ್ತಿಟ್ಟಿದ್ದೀಯಾ?
ಸೀತಮ್ಮನೂ ನೋಡಿರಲಿಲ್ಲ. ಗಾಭರಿಯಾದರು. ಅಯ್ಯೋ ಇಬ್ಬರಿಗೂ ತಿಳಿಯದಂತೆ ಎಲ್ಲೋ ಬಿದ್ದು ಹೋಗಿ ಕಳೆಯಿತಲ್ಲಾ, ಹಳೆಯ ಕಾಲದ ಹರಿವಾಣ, ಒಂದೊಂದು ಕಾಲೂ ಸುಮಾರು ಎಪ್ಪತ್ತು, ಎಂಭತ್ತು ಗ್ರಾಂಗಳಷ್ಟು ಬೆಳ್ಳಿಯನ್ನು ಹೊಂದಿತ್ತು.
ಸತೀಶರು, ಹೋಗಲಿ ಬಿಡು ಎಂದು ಪೇಚಾಡಿಕೊಳ್ಳುತ್ತಾ ಸುಮ್ಮನಾದರೂ ಸೀತಮ್ಮನ ತಲೆಯಲ್ಲಿ ಅನುಮಾನದ ಹುಳು ಹೊಕ್ಕಿತು.
ಮತ್ತೆ ಒಂದು ತಿಂಗಳ ಒಳಗೇ ಮಗಳ ಫೋನ್ ಬಂದಿತು. ದೀಪಾವಳಿಗೆ ಮುಂಗಡವಾಗಿಯೇ ಶುಭಾಶಯ ತಿಳಿಸುತ್ತಾ – ಅಪ್ಪಾ, ಅಮ್ಮಾ, ನಾವುಗಳೂ ಇಂಡಿಯಾದಲ್ಲಿ ಇರುತ್ತಿದ್ದರೆ, ಮೊದಲ ದೀಪಾವಳಿಗೆ ನಾವೂ, ನಮ್ಮ ಅತ್ತೆಯ ಮನೆಯವರೂ ಎಲ್ಲರೂ ಕೂಡಿ ನಿಮ್ಮಲ್ಲಿಗೆ ಬಂದು ಇರುತ್ತಿದ್ದೆವು, ಕಿರಣ್ ತುಂಬಾ ಪೇಚಾಡಿಕೊಳ್ಳುತ್ತಿದ್ದಾರೆ. ಅವರು ಮುಖ ಚಿಕ್ಕದು ಮಾಡಿಕೊಂಡರೆ ನನಗೆ ತುಂಬಾ ನೋವಾಗುತ್ತದೆ. ನಾವಿಲ್ಲದಿದ್ದರೇನಾಯಿತಂತೆ, ನಮ್ಮ ಅತ್ತೆಯ ಮನೆಯವರನ್ನೆಲ್ಲಾ ಕರೆದು ಗ್ರಾಂಡ್ ಆಗಿ ದೀಪಾವಳಿಯನ್ನು ಆಚರಿಸಿರಿ. ಕಿರಣ್ ಗೂ ಸಂತೋಷವಾಗುತ್ತದೆ, ಅವರ ಮನೆಯವರೂ ಅದನ್ನು ಎಕ್ಸಪೆಕ್ಟ್ ಮಾಡುತ್ತಿದ್ದಾರೆ.
ಅಲ್ಲಾ ರೇಖಾ, ಎನ್ನಲು ಹೋದ ಸೀತಮ್ಮನವರನ್ನು ಸತೀಶರು ಕಣ್ಣಲ್ಲೇ ಸನ್ನೆ ಮಾಡಿ ಸುಮ್ಮನಾಗಿಸಿದರು.
ಸತೀಶರು ಹಣವನ್ನು ಹೊಂಚಲು ಪಡುತ್ತಿದ್ದ ಬವಣೆಯನ್ನು ಸೀತಮ್ಮನಿಗೆ ನೋಡಲಾಗಲಿಲ್ಲ. – ನೀವು ಚಿಂತಿಸಬೇಡಿ, ಆಪದ್ಧನ ಎಂದು ಒಂದಷ್ಟು ಹಣವನ್ನು ಕೂಡಿಟ್ಟಿದ್ದೇನಿ, ಅದರಲ್ಲಿ ಹಬ್ಬವನ್ನು ಮಡೋಣ – ಎಂದಾಗ,
ಸತೀಶರು ನೆಮ್ಮದಿಯ ನಿಟ್ಟುಸಿರಿನೊಂದಿಗೆ ಹೆಂಡತಿಯೆಡೆಗೆ ಒಂದು ಅಭಿಮಾನಪೂರ್ವಕವಾದ ನೋಟ ಬೀರಿದರು.
ಮತ್ತೆ ಸೀತಮ್ಮ, ಹರಿವಾಣದೊಂದುಗೆ ಪಾನ್ ಬ್ರೋಕರ ಹತ್ತಿರ ಹೋದರು. ಹೋಗುವಾಗ ಮನದಲ್ಲಿ, ಹಿಂದೆ ಊರಿನಲ್ಲಿ ಕೆಲವರು, ಕೆಲವರನ್ನು ಆಡಿಕೊಳ್ಳುತ್ತಿದ್ದ, “ಈ ಜನ, ತಪ್ಪಲೆ ಚೊಂಬು ಮಾರಿಕೊಂಡಾದರೂ ಹಬ್ಬ ಮಾಡಿ, ಹೋಳಿಗೆ ಮಾಡಿಕೊಂಡು ಊಟ ಮಾಡುತ್ತರೆಯೇ ಹೊರತು, ಹಬ್ಬ, ಹೋಳಿಗೆಯೂಟ ಬಿಡುವುದಿಲ್ಲ” ಎಂಬ ಮಾತುಗಳು ಜ್ಞಾಪಕಕ್ಕೆ ಬಂದು, ಈಗ ತಾವು ಮಾಡುತ್ತಿರುವುದೂ ಅದೇ ಎಂದು ಯೋಚಿಸುತ್ತಾ ನಡೆದರು. ಅವರ ತುಟಿಯಂಚಿನಲ್ಲಿ ಒಂದು ವಿಶಾದ ಪೂರಿತ ನಗೆಯಿತ್ತು. ಈ ಸಲ ಅಂಗಡಿಯ ಮೆಟ್ಟಲೇರಲು ಮೊದಲ ಸಲದಷ್ಟು ಅಳುಕಿರಲಿಲ್ಲ.
ಬೀಗರಿಗೆ ಹಬ್ಬದ ಊಟ, ಉಪಚಾರ ಜೋರಾಗಿಯೇ ಆಯಿತು. ಮತ್ತೊಮ್ಮೆ, ನಮ್ಮ ಕಿರಣನ ಮನೆ, ಕಿರಣನ ಮನೆ ಪುನರುಕ್ತಿಯಾಯಿತು.
ಒಂದೆರಡು ತಿಂಗಳು ಮತ್ತೆ ಕಾಸಿಗೆ ಕಾಸು, ದುಡ್ಡಿಗೆ ದುಡ್ಡು, ಪೈಸಕ್ಕೆ ಪೈಸೆ ಕೂಡುಟ್ಟು ಹರಿವಾಣ ಬಿಡಿಸಿಕೊಳ್ಳಲು ಹೋದರು. ಈ ಸಲ ಲೆಕ್ಕ ಚುಕ್ತ ಮಾಡಿದ ನಂತರ ಅಂಗಡಿಯ ಮಾಲೀಕ ಒಳಗೆ ಹೋಗಿ ಬೀರುವಿನಿಂದ ಹರಿವಾಣವಿದ್ದ ಚೀಲವನ್ನು ತಂದು ಕೊಟ್ಟ. ಈ ಸಲ ಸೀತಮ್ಮ ಚೀಲದೊಂದಿಗೆ ಹಾಗೇ ಹೊರಡದೆ ಚೀಲದಿಂದ ಹರಿವಾಣವನ್ನು ತೆಗೆದು ಹಿಂದೆ ಮುಂದೆ ತಿರುಗಿಸಿ ನೋಡಿದರು. ಎದೆ ಧಸಕ್ಕೆಂದಿತು. ಕೋಪದಿಂದ ಪಿತ್ತ ನೆತ್ತಿಗೇರಿತು. ನಖಶಿಖಾಂತ ನಡುಗ ಹತ್ತಿದರು. ಏಕೆಂದರೆ ಹರಿವಾಣದ ಇನ್ನೊಂದು ಕಾಲು(ಪೀಠ) ನಾಪತ್ತೆಯಾಗಿತ್ತು. ಏರಿದ ದನಿಯಲ್ಲಿ ಜಗಳವಾಡತೊಡಗಿದರು. ಅಂಗಡಿಯ ಮಾಲೀಕನೂ ಮುಂಚಿನಿಂದಲೂ ಇರಲಿಲ್ಲವೆಂದೇ ಇವರಿಗಿಂತ ಜೋರಾಗಿ ಕೂಗಾಡಹತ್ತಿದನು. ಅಸಹಾಯಕತೆಯಿಂದ ಕುಗ್ಗಿ ಹೋದ ಸೀತಮ್ಮ ಜೋರಾಗಿ ಅಳಹತ್ತಿದರು. – ಜನ, ತಾವು, ಅತ್ಯಂತ ಕಷ್ಟದಲ್ಲಿದ್ದೇವಿ ಎಂದು ನಿಮ್ಮ ಬಳಿ ಬರುತ್ತಾರೆ. ನೀವು ಇಂತಹ ಮೋಸ ಮಾಡುತ್ತೀರಲ್ಲಾ, ನಾನಂತೂ ಇಂದು ಮನೆಗೆ ಹಿಂತಿರುಗಿ ಹೋಗುವುದಿಲ್ಲ. ಒಂದು ನೀವು ಹರಿವಾಣದ ಪೀಠ ಕೊಡಿ, ಇಲ್ಲಾ, ಇಲ್ಲೇ ಹತ್ತಿರದಲ್ಲಿ ಪೋಲೀಸ್ ಠಾಣೆಯಿದೆ, ನಡೆಯಿರಿ ಹೋಗೋಣ, – ಎಂದು ಪಟ್ಟು ಹಿಡಿದು ಕುಳಿತುಬಿಟ್ಟರು. ಅವರ ಜೀವಮಾನದಲ್ಲಿಯೇ ಅಷ್ಟು ಗಟ್ಟಿಯಾಗಿ ತಮ್ಮ ವಾದವನ್ನು ಹೇಳಿರದ ಸೀತಮ್ಮ ಪರಿಸ್ಥಿತಿಯ ದುರುಪಯೋಗವನ್ನು ಸಹಿಸದಾದರು.
ಅವರ ಕಾಳಿಯ ಅವತಾರಕ್ಕೆ ಬೆಚ್ಚಿಬಿದ್ದ ಅಂಗಡಿಯವ ಮಾತಿಲ್ಲದಂತೆ ಒಳಗೆ ಹೋಗಿ ಬಂದು ಒಂದು ಪೀಠವನ್ನು ತಂದುಕೊಟ್ಟ. ಅಲ್ಲೇ ಚೀಲದ ಕೆಳಗಡೆ ಬಿದ್ದಿತ್ತು. ನಾನು ನೋಡ ಬೇಕಾಗಿತ್ತು, ನೋಡಲಿಲ್ಲ, ಇರಲಿ. ಈಗ ಕೊಡುತ್ತಿದ್ದೀನಲ್ಲ ತೆಗೆದುಕೊಳ್ಳಿ ಎಂದು ನೀಡಿದ.
ಇವರು ಹಿಂದಿನ ಬಾರಿಯ ವಿಷಯವನ್ನು ಎತ್ತಿದರಾದರೂ ಅವನು ಸೊಪ್ಪು ಹಾಕಲಿಲ್ಲ. ಇರಲೇ ಇಲ್ಲ, ಈ ಸಲ ಮಾತ್ರ ಹರಿವಾಣವಿದ್ದ ಜಾಗದಲ್ಲೇ ಬಿದ್ದಿತ್ತು – ಎಂದು ದಬಾಯಿಸಿಬಿಟ್ಟ.
ಕಳ್ಳ, ಕಣ್ಣೆದುರಿಗೇ ಇದ್ದರೂ ಸಾಕ್ಷಿಯಿಲ್ಲದಿದ್ದರೆ ಶಿಕ್ಷಿಸಲಾಗದ ತಮ್ಮ ಅಸಹಾಯಕತೆಗೆ ಮರುಗುತ್ತಾ ಹಿಂದಿರುಗಿದ ಸೀತಮ್ಮಾ, ಮತ್ತೊಮ್ಮೆ ಇಂಥಹಾ ಸ್ಥಿತಿಯನ್ನು ತರಬೇಡಪ್ಪಾ ಭಗವಂತಾ ಎಂದು ಕೊಂಡರು.
ಒಂದೆರಡು ವರುಷಗಳು ಏರುಪೇರಿಲ್ಲದೆ ಕಳೆಯಿತು.
ಈಗ ರೇಖಾ ತಿಂಗಳಿಗೊಮ್ಮೆ ಫೋನ್ ಮಾಡಿ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಿದ್ದಳು. ಈ ಸಲ ಸಿಹಿ ಸುದ್ದಿಯನ್ನು ಕೊಟ್ಟಳು. ಹೊಸದಾಗಿ ಸಂಸಾರ ಹೂಡಿದ್ದರಿಂದ ಸ್ವಲ್ಪ ಕಷ್ಟವಾಗಿ ಈ ಎರಡು ವರ್ಷಗಳು ಬರಲಾಗಲೇ ಇಲ್ಲ. ಈ ವರ್ಷ ಬರೋಣವೆಂದುಕೊಂಡಿದ್ದೆವು. ಆದರೆ ಅಮ್ಮಾ, ಅಪ್ಪಾ. ನೀವು ಅಜ್ಜಿ ತಾತ ಆಗುತ್ತಿದ್ದೀರಿ, ನನಗೀಗ ಐದು ತಿಂಗಳು. ಸ್ಕ್ಯಾನ್ ಎಲ್ಲಾ ಮುಗಿದು ಎಲ್ಲಾ ಸುಸೂತ್ರವಾಗಿದೆ ಎಂದು ಖಚಿತವಾದ ನಂತರ ನಿಮಗೆ ತಿಳಿಸೋಣವೆಂದು ಇದ್ದೆ. ಮುಂದಿನ ವರ್ಷ ಖಂಡಿತಾ ಬರುತ್ತೀವಿ. ಅಮ್ಮಾ ಇನ್ನು ಎರಡು ತಿಂಗಳುಗಳ ನಂತರ ನಮ್ಮ ಸ್ನೇಹಿತರೊಬ್ಬರು ಬರುತ್ತಿದ್ದಾರೆ. ನಾನು ಕೆಲವೊಂದು ಸಾಮಾನುಗಳ ಪಟ್ಟಿಯನ್ನು ಕೊಡುತ್ತೇನೆ, ಅವರೊಂದಿಗೆ ಅವುಗಳನ್ನು ಕಳುಹಿಸಿಕೊಡು – ಎಂದಳು.
ಸೀತಮ್ಮ, ತಮ್ಮನ್ನು ಬಾಣಂತನಕ್ಕೆ ಕರೆಯುತ್ತಾಳೇನೋ ಅಂದು ಕೊಂಡರು. ಆದರೆ ಆ ಕಡೆಯಿಂದ ಆ ಬಗ್ಗೆ ಯಾವ ಪ್ರಸ್ತಾಪವೂ ಬರಲಿಲ್ಲ.
ರೇಖಳ ಸ್ನೇಹಿತರೊಂದಿಗೆ ಅವಳು ಪಟ್ಟಿ ಮಾಡಿ ಕಳುಹಿಸಿದ ಸಾಮಾನುಗಳ ಜೊತೆ, ತಮ್ಮ ಕೈಯಲ್ಲಿದ್ದ ಎರಡು ಜೊತೆ ಬಳೆಗಳಲ್ಲಿ ಒಂದು ಜೊತೆ ಬಳೆಯನ್ನು ಮಾರಿ ಹೊಸಾ ಡಿಸೈನಿನ ರೇಖಳ ಅಳತೆಯ ಬಳೆ, ಮಗುವಿಗೆಂದು ಒಂದೆಳೆ ಸರ ಮಾಡಿಸಿ ಕೊಟ್ಟು ಕಳುಹಿಸಿದರು. ರೇಖಾ ಫೋನ್ ಮಾಡಿ ಸಂತಸ ವ್ಯಕ್ತಪಡಿಸಿದಳು.
ದಿನ ತುಂಬಿದ ನಂತರ ರೇಖಳಿಗೆ ಗಂಡು ಮಗುವಾಯಿತು. ವೀಡಿಯೋದಲ್ಲಿ ಮಗುವನ್ನು ಕಂಡು ದಂಪತಿಗಳು ಆನಂದಿಸಿದರು.
ಈ ಎರಡು ಮೂರು ವರುಷಗಳಲ್ಲಿ ಸತೀಶರೂ ತಮ್ಮ ಖರ್ಚು ವೆಚ್ಚಗಳನ್ನು ಕಡಿತಗೊಳಿಸಿಕೊಂಡು ಮದುವೆಯ ಸಮಯದಲ್ಲಿ ಮನೆಯ ಮೇಲೆ ಮಾಡಿದ್ದ ಸಾಲವನ್ನು ಪೂರ್ತಿಯಾಗಿ ತೀರಿಸಿ ಪತ್ರವನ್ನು ಬಿಡಿಸಿಕೊಂಡು ತಂದು ಬೀರುವಿನಲ್ಲಿಟ್ಟರು.
ಮಗುವಿಗೆ ಒಂದು ವರ್ಷವಾಗುತ್ತಾ ಬಂತು. ರೇಖಾ, ಮೊದಲ ವರ್ಷದ ಮಗುವಿನ ಹುಟ್ಟಿದ್ದ ಹಬ್ಬಕ್ಕೆ ಊರಿಗೆ ಬರುವುದಾಗಿ ತಿಳಿಸಿದಾಗ ಮಗುವಿನೊಂದಿಗೆ ಕಳೆಯಬಹುದಾದ ಸಮಯವನ್ನು ನೆನೆಸಿಕೊಂಡು ಹರ್ಷಿತರಾದರು ದಂಪತಿಗಳು.
ಹೇಳಿದ ದಿನಕ್ಕೆ ಸರಿಯಾಗಿ ರೇಖಾ ದಂಪತಿಗಳು ಮಗುವಿನೊಂದಿಗೆ ಬಂದಿಳಿದರು. ಮಗು ಪೂರ್ತಿ ಸತೀಶರನ್ನೇ ಹೋಲುತಿತ್ತು. ಹೋಲಿಕೆ ಪುಟ್ಟ ಸತೀಶರೇ ಇವರೇನೋ ಎನ್ನುವಷ್ಟರ ಮಟ್ಟಿಗೆ ಇತ್ತು. ತಮ್ಮ ಕುಡಿಯ ಕುಡಿಯನ್ನು ಕಂಡು ಸಂಭ್ರಮಿಸಿದರು ದಂಪತಿಗಳು.
ಮೂರು ನಾಲ್ಕು ದಿನಗಳ ನಂತರ ವಿಜೃಂಭಣೆಯಿಂದ ನೆಂಟರಿಷ್ಟರು, ಬೀಗರು ಬಿಜ್ಜರನ್ನು ಕರೆದು ಮಗುವಿನ ಹುಟ್ಟಿದ ಹಬ್ಬವನ್ನು ಆಚರಿಸಿದರು.
ಇನ್ನು ಮೂರು ವಾರಗಳ ನಂತರ ಊರಿಗೆ ಹೋಗಬೇಕೆಂದು ಹೇಳಿದ ರೇಖಾ ಬರುವಾಗಲೇ ಹಿಂದಿರುಗಲು ಪ್ಕೈಟ್ ಬುಕ್ ಆಗಿರುವುದನ್ನು ತಿಳಿಸಿದಳು. ಹಾಗೆಯೇ ಮುಂದುವರೆದು ತಾನು ಅಮೆರಿಕಾದಲ್ಲಿ ಮನೆ ಖರೀದಿ ಮಾಡಬೇಕೆಂದಿರುವ ವಿಷಯವನ್ನು ತಿಳಿಸುತ್ತಾ, ಅದಕ್ಕೆ ಸಾಲದೇ ಬಂದಿರುವ ಹಣದ ಬಗ್ಗೆ ಹೇಳಿ ಇವರಿಂದ ಏನಾದರೂ ಸಹಾಯ ಸಿಗಬಹುದೇ ಎಂದು ನೇರವಾಗಿ ಕೇಳಿದಳು. ಅದೂ ಅಲ್ಲದೆ, ತಾವುಗಳು ಅಲ್ಲಿ ಗ್ರೀನ್ ಕಾರ್ಡ್ಗೆ ಅಪ್ಲೈ ಮಾಡಿರುವುದಾಗಿಯೂ ಸಧ್ಯಕ್ಕೆ ಭಾರತಕ್ಕೆ ಹಿಂದಿರುಗುವ ಯೋಚನೆ ಇಲ್ಲವೆಂದೂ, ತಮ್ಮ ಸಂಸಾರದ ಅಭ್ಯುದಯಕ್ಕೆ ಅದು ಸಹಕಾರಿ ಮತ್ತು ಅಗತ್ಯವೂ ಹೌದು ಎಂದಳು. ದಂಪತಿಗಳು ತಬ್ಬಿಬ್ಬಾದರು. ಯಾಕೆ, ಇಷ್ಟು ಜಾಣೆಯಾದ ಮಗಳಿಗೆ ತಮ್ಮ ಪರಿಸ್ಥಿತಿಯ ಅರಿವೇ ಆಗುತ್ತಿಲ್ಲ, ಎಂದು ಮರುಗಿದರು ದಂಪತಿಗಳು. ಈಗ ಬ್ಯಾಂಕಿನ ಬಡ್ಡಿಯ ದರಗಳೆಲ್ಲಾ ಕಡಿಮೆಯಾಗಿ ಹೋಗಿದೆ, ಬೆಲೆಗಳು ಗಗನ್ನಕ್ಕೇರಿದೆ. ಸತೀಶರು ದೊಡ್ಡ ಹುದ್ದೆಯಲ್ಲಿದ್ದರೂ, ಅವರು ಕೆಲಸ ಮಾಡಿದ್ದು ಫ್ಯಾಕ್ಟರಿಯಾದ ಕಾರಣ, ಪೆನಷನ್ ಕೂಡ ಬರುವುದಿಲ್ಲ. ತಮ್ಮ ಎಲ್ಲಾ ಅಗತ್ಯಗಳೂ ಬರುವ ಬಡ್ಡಿ ಹಣದಿಂದಲೇ ನಡೆಯಬೇಕಲ್ಲ ಎಂದು ಚಿಂತಿತರಾದರು ಸತೀಶರು. ಆದರೂ ಹೊರಗೆ ಏನೂ ತೋರಿಸಿಕೊಳ್ಳಲಿಲ್ಲ. ಎಂದಿನಂತೆ ಶಾಂತ ಮುದ್ರೆ.
ಹೆಂಡತಿಯೊಂದಿಗೆ ಏಕಾಂತದಲ್ಲಿ ಸಮಾಲೋಚನೆ ನಡೆಸಿದ ಸತೀಶರು ಒಂದು ತೀರ್ಮಾನಕ್ಕೆ ಬಂದರು. ತಮ್ಮದು ಇನ್ನೆಷ್ಟು ದಿನದ ಬದುಕೋ ತಿಳಿಯದು. ಬದುಕಿ ಬಾಳ ಬೇಕಾದ ಮಗಳು ಮನೆ ತೆಗೆದುಕೊಳ್ಳಲು ಸಹಾಯ ಕೇಳುತ್ತಿದ್ದಾಳೆ. ಹೇಗೂ ನಮ್ಮ ನಂತರ ನಮ್ಮದೆಲ್ಲಾ ಅವಳದೇ. ಈಗಲೇ ಕೊಟ್ಟರೆ ಅವಳಿಗೆ ಸಹಾಯವಾದರೂ ಆಗುತ್ತದೆ. ಅವಳ ರೀತಿ ನೀತಿ ನೋಡಿದರೆ, ಮತ್ತು ಅವಳೇ ಹೇಳಿದಂತೆ ಅವಳು ಭಾರತಕ್ಕೆ ಹಿಂದಿರುಗಿ ಬರುವ ಸಾಧ್ಯತೆ ಕಡಿಮೆಯೇ. ಹಾಗಾಗಿ ಈ ಮನೆಯನ್ನು ಮಾರಿ ಅವಳಿಗೆ ಹಣ ಕೊಟ್ಟು ಬಿಡೋಣ. ಅದರಲ್ಲಿ ಸ್ವಲ್ಪ ಭಾಗವನ್ನು ತಾವಿಟ್ಟುಕೊಂಡು ಒಂದು ಚಿಕ್ಕ ಮನೆಯನ್ನು ಭೋಗ್ಯಕ್ಕೆ ಹಾಕಿಕೊಂಡು ಇರೋಣ. ನಮ್ಮ ಮಿಕ್ಕ, ಚಿಕ್ಕ ಜೀವನಕ್ಕೆ ಇನ್ನೆಷ್ಟು ಬೇಕು? ನಿವೃತ್ತಿಯಾದಾಗ ಬಂದ ಹಣದಲ್ಲಿ ತಮ್ಮ ನಿವೃತ್ತ ಜೀವನಕ್ಕೆಂದು ಎತ್ತಿಟ್ಟ ಹಣಕ್ಕೆ ಈಗ ಮನೆ ಮಾರಿದಾಗ ಬರುವ ಹಣದಲ್ಲಿ ಸ್ವಲ್ಪ ಸೇರಿಸಿದರೆ ಅದರಿಂದ ಬರುವ ಬಡ್ಡಿ, ತಮ್ಮ ಸರಳ ಜೀವನಕ್ಕೆ ಸಾಕಾಗಬಹುದು ಎಂಬ ಲೆಕ್ಕಚಾರವನ್ನು ಹಾಕಿ ತಮ್ಮ ಯೋಜನೆಯನ್ನು ಹೆಂಡತಿಯ ಮುಂದಿಟ್ಟರು.
ಒಂದು ಕ್ಷಣಕ್ಕೆ ಇದೆಂಥಹ ಹುಚ್ಚು ಆಲೋಚನೆ ಎಂದು ಸೀತಮ್ಮನಿಗೆ ಅನ್ನಿಸಿ, ಈ ಮನೆಗೆ ಸೇರಕ್ಕಿಯನ್ನು ಒದ್ದು ಒಳಬಂದು ಗೃಹಪ್ರವೇಶ ಮಾಡಿದ ಪ್ರಸಂಗಗಳೆಲ್ಲಾ ಮನದಲ್ಲಿ ಮೂಡಿದರೂ ಇಚ್ಛೆಯನರಿತು ನಡೆಯುವ ಸತಿಯಂತೆ, ಸತೀಶರ ಯೋಜನೆಗೆ ತಮ್ಮ ಸಮ್ಮತಿಯ ತಲೆಯನ್ನಾಡಿಸಿದರು.
ತಮ್ಮ ಯೋಜನೆಯನ್ನು ರೇಖಳಿಗೆ ತಿಳಿಸಿದಾಗ, ಅವಳು – ನಾನೂ ಅದೇ ರೀತಿ ಯೋಚಿಸಿಯೇ ಈಗ ಊರಿಗೆ ಬಂದೆ ಅಪ್ಪಾ. ಸಮಯಕ್ಕಿಲ್ಲದ್ದು ನಂತರ ನನ್ನ ಪಾಲಿಗೆ ಬಂದರೆಷ್ಟು, ಬಿಟ್ಟರೆಷ್ಟು? ನಿಮಗೆ ನೋವಾಗದಿದ್ದರೆ ಇದೇ ಸರಿಯಾದ ಯೋಜನೆ. – ಎಂದಾಗ ಇಬ್ಬರಿಗೂ ಇಂದು ಕ್ಷಣ ಮೂಗಿನ ಮೇಲೆ ಬೆರಳು ಇಡುವಂತಾಯಿತು.
ಅಪ್ಪಾ, ಪೇಪರಿನಲ್ಲಿ ಜಾಹಿರಾತು ನೀಡೋಣ, ಆದರೆ ನಾವು ಅರ್ಜೆಂಟಿನಲ್ಲಿ ಎದ್ದೀವಿ ಎಂದು ಯಾರಿಗೂ ತಿಳಿಸುವುದು ಬೇಡ. ಹಾಗಾದರೆ ಎಲ್ಲರೂ ಕಮ್ಮಿಗೆ ಕೇಳುತ್ತಾರೆ. ನನಗೆ ಇನ್ನೆರಡು ತಿಂಗಳಲ್ಲಿ ಹಣ ಕಳುಹಿಸಿದರೆ ಸಾಕು – ಎಂದಳು.
ʼಸರಿʼ, ಎನ್ನುವುದೊಂದೇ ಸತೀಶರಿಗಿದ್ದ ಮಾರ್ಗ. ರೇಖ ಮತ್ತು ಕುಟುಂಬ ಬಂದ ಕೆಲಸ ಸುಗಮವಾಗಿ ಆದ ತೃಪ್ತಿಯಿಂದ ವಿಮಾನವನ್ನೇರಿದರು.
ಊರಿಗೆ ಹೋಗಿ ಸುಖವಾಗಿ ಸೇರಿದ್ದಕ್ಕೆ ಸಂದೇಶವೂ ಬಂತು.
(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಸಂಚಿಕೆ ಇಲ್ಲಿದೆ : http://surahonne.com/?p=32759
-ಪದ್ಮಾ ಆನಂದ್, ಮೈಸೂರು
ಉತ್ತಮವಾದ ಕಥೆ ಕಾದಂಬರಿ…
ಧನ್ಯವಾದಗಳು
ಕಾದಂಬರಿಯಲ್ಲಿ ಮಗಳ ಪಾತ್ರ ಬಹಳ ನೋವು ಕೊಡುವಂತಿದೆ. ಹೆತ್ತವರ ವೃದ್ದಾಪ್ಯದಲ್ಲಿ ಆಧಾರವಾಗಿ ಇರಬೇಕಾದ ಮಗಳೇ ಎಲ್ಲವನ್ನು ಬಾಚಿ ಹೆತ್ತವರನ್ನು ಬೀದಿಗೆ ತರುವ ರೀತಿ ನಡೆದುಕೊಳ್ಳುತ್ತಿರುವ ಪಾತ್ರ ಚಿತ್ರಣ ಮನಸಲ್ಲಿ ನೋವಿನ ಅಲೆಗಳನ್ನು ಎಬ್ಬಿಸುತ್ತಿದೆ.
ಕೆಲವೊಮ್ಮೆ ಕೆಲವರ ಶ್ರಮ ಅಪಾತ್ರದಾನವಾಗಿ ಬಿಡುತ್ತದೆ
ಕಿರುಕಾದಂಬರಿ ಸೊಗಸಾಗಿ ಮೂಡಿ ಬರುತ್ತಿದೆ..
ಮೆಚ್ಚುಗೆಗಾಗಿ ಧನ್ಯವಾದಗಳು.
ಎಂದಿನಂತೆ ಸುಂದರ. ಸುಲಲಿತವಾಗಿ, ಅತ್ಮೀಯತೆಯಿಂದ ಓದಿಸಿಕೊಂಡು ಹೋಗುತ್ತಿದೆ..ತಮ್ಮ ಕಾದಂಬರಿ..ಧನ್ಯವಾದಗಳು ಮೇಡಂ.
ತಮ್ಮ ಪ್ರತಿಕ್ರಿಯೆಗಾಗಿ ವಂದನೆಗಳು
ತಂದೆತಾಯಿಯರ ನೋವು ಮಕ್ಕಳಿಗೆ ಅರ್ಥವಾಗುವುದೇ ಇಲ್ಲವೆನಿಸುತ್ತದೆ
ವಂದನೆಗಳು
ಜನರೇಷನ್ ಗ್ಯಾಪ್ ಅಂದುಕೊಂಡು ಸಮಾಧಾನ ಪಟ್ಟುಕೊಳ್ಖ ಬೇಕು.
ತಂದೆ ತಾಯಿ ಮಸಸ್ಸಿನ ತುಮುಲ ಮಗಳಿಗೆ ಅರ್ಥವಾಗುವುದೆ ಇಲ್ಲ ವಿಪರ್ಯಾಸ , ಎಂದರೆ ತಂದೆ ತಾಯಿಗಳು ತಮ್ಮ ಬಗ್ಗೆ ಚಿಂತಿಸುವುದೆ ಇಲ್ಲ . ಕಥೆ ತುಂಬಾ ಚೆನ್ನಾಗಿದೆ ಮೇಡಂ
ಕೆಲವೊಮ್ಮೆ ಮಕ್ಕಳು ತಮ್ಮದೇ ಜೀವನ ರೂಪಿಸಿಕೊಳ್ಖುವ ಧಾವಂತದಲ್ಲಿ ಹೀಗಾಗಬಹುದಲ್ಲವೆ?
ಮೇಡಂ ಇದೀಗ ನೀವು ಬರೆದ ಸುರಹೊನ್ನೆಯ 8 ಭಾಗಗಳನ್ನು ಓದಿದೆ.ಹೆಸರಿನ ಆಯ್ಕೆ ತುಂಬ ಚೆನ್ನಾಗಿದೆ.ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ.
ತಮ್ಮ ಮೆಚ್ಚುಗೆಗಾಗಿ ಧನ್ಯವಾದಗಳು.