ಕಿರು ಕಾದಂಬರಿ: ಭಾವ ಸಂಬಂಧ- ಎಳೆ 7
ಮಗಳ ಅಭ್ಯುದಯ ಕಂಡು ಸುಖಿಸಬೇಕೋ, ಗಂಡನ ಮನೆಗೆ ಹೋಗಬೇಕಾದ ಹೆಣ್ಣುಮಗಳು ದೂರದ ಕಾಣದ ದೇಶಕ್ಕೆ ಒಬ್ಬಳೇ ಹೊರಟ್ಟಿದ್ದ ಕಂಡು ಆತಂಕ ಪಡಬೇಕೋ ತಿಳಿಯದ ಮಿಶ್ರಭಾವದಿಂದ ಸೀತಮ್ಮ ಸತೀಶ್ ದಂಪತಿಗಳು ಮಗಳಿಗೆ ಟಾ ಟಾ ಹೇಳಿದರು.
ರೇಖಳಿಗೂ ಅಷ್ಟೆ. ಎಷ್ಟು ಆತ್ಮ ವಿಶ್ವಾಸ, ದಕ್ಷತೆಗಳಿದ್ದರೂ, ಮೊದಲ ಬಾರಿಗೆ ಅಪ್ಪ ಅಮ್ಮನ ಬೆಚ್ಚನೆಯ ಪರಿಧಿಯಿಂದ ಆಚೆ ಹೋದಾಗ ಮನ, ನೀರಿನಿಂದ ಹೊರಬಂದ ಮೀನಿನಂತಾಗಿತ್ತು. ಆದರೂ ಸಾಧಿಸುವ ಛಲವಿತ್ತು, ಅಂದುಕೊಂಡದ್ದನ್ನು ಮಾಡಲೇ ಬೇಕೆಂಬ ಬದ್ಧತೆಯಿತ್ತು.
ದಿನಕ್ಕೆ ಒಂದು ಬಾರಿ ಫೋನ್ ಮಾಡುತ್ತಿದ್ದಳು. ಅಲ್ಲಿಯ ವಿಷಯಗಳನ್ನೆಲ್ಲಾ ಚಾಚೂ ತಪ್ಪದೆ ಹೇಳುತ್ತಿದ್ದಳು. ಸೀತಮ್ಮ ಸತೀಶರಿಗೆ ಮಗಳನ್ನು ಅಮೆರಿಕಾಗೆ ಕಳಯಹಿಸುವ ನಿರ್ಧಾರ ಸಧ್ಯ ತಪ್ಪಾಗಲಿಲ್ಲ ಎನಿಸ ಹತ್ತಿತು
ಎರಡು ವರುಷ ಆಡಾಡುತ್ತಾ ಕಳೆದು ಹೋಯಿತು. ರೇಖಳ ಕೊನೆಯ ಪರೀಕ್ಷೆ ಮುಗಿಯುವ ಮೊದಲೇ ಅವಳ ಕೈಗೆ ಪ್ರತಿಷ್ಠಿತ ಕಂಪನಿಯೊಂದರಿಂದ ಉದ್ಯೋಗ ದೊರೆತ ಪತ್ರ ಬಂದಾಗಿತ್ತು.
ಇತ್ತ ಸತೀಶರೂ ಕೆಲಸದಿಂದ ನಿವೃತ್ತರಾದರು. ನಿವೃತ್ತಿಯ ಹಣದೊಂದಿಗೆ, ಅವರು ಲೆಕ್ಕಾಚಾರ ಹಾಕಿ ಉಳಿಸಿಟ್ಟ, ಇನ್ಯೂರೆನ್ಸ್, ಆರ್.ಡಿ. ಮುಂತಾದ ಉಳಿತಾಯದ ಹಣವೂ ಮೆಚ್ಯೂರ್ ಆಗಿ ಒಟ್ಟಿಗೆ ಬಂದಿತು.
ಸೀತಮ್ಮನಂತೂ ಮಗಳ ಓದು ಮುಗಿಯುತ್ತಿದೆ. ಕೈಗೆ ಹಣವೂ ಬಂದಿದೆ. ಒಳ್ಳೆ ಹುಡುಗನನ್ನು ನೋಡಿ ಮದುವೆ ಮಾಡುವುದಷ್ಟೇ ಇನ್ನು ಉಳಿದಿರುವುದು, ಎಂದು ಸಂಭ್ರಮಿಸುತ್ತಾ ಪರಿಚಯಸ್ಥರಲ್ಲಿ ಜಾತಕ ಕೊಡೋಣವೆಂದುಕೊಂಡರು. ಸತೀಶರೇ ತಡೆದರು. – ಸ್ವಲ್ಪ ತಡೀ, ಈಗ ಅವಳು ಸ್ವತಂತ್ರವಾಗಿ ಯೋಚಿಸುವಷ್ಟು ಪ್ರಬುದ್ಧಳಾಗಿದ್ದಾಳೆ. ಅವಳನ್ನು ಒಂದು ಮಾತು ಕೇಳಿ ಮುಂದುವರಿಯೋಣ – ಎಂದಳು.
ಪಾಪ ಮಗು, ಅದಕ್ಕೇನು ತಿಳಿಯುತ್ತೆ, ಅದರಲ್ಲೂ ಹೆಣ್ಣು ಹುಡುಗಿ, ನಾಚಿಕೆ, ಸಂಕೋಚ ಇರುವುದಿಲ್ಲವೇ, ಬಾಯಿಬಿಟ್ಟು ನಾನು ಮದುವೆ ಮಾಡಿಕೊಳ್ಳುತ್ತೀನಿ, ಎಂದು ಹೇಳುತ್ತಾಳೆಯೇ? ನಾವು ತಾನೇ ಹಿರಿಯರು, ಮುಂದೆ ನಿಂತು ಮಾಡಬೇಕು – ಎಂದರು.
ಸೀತಾ, ನೀನೀಗ, ಸ್ವತಂತ್ರ ವ್ಯಕ್ತಿತ್ವದ, ವಿದ್ಯಾವಂತ, ಬುದ್ಧಿವಂತ, ಸಮರ್ಥ ಮಗಳ ತಾಯಿ. ವಿಭಿನ್ನವಾಗಿ ಯೋಚಿಸಲು ಪ್ರಾರಂಭಿಸ ಬೇಕು. ಇರಲೀ, ನನಗೂ ಮಗಳ ಮದುವೆ ಮಾಡಿ ಸಂಭ್ರಮಿಸಲು, ಅಳಿಯ ಮೊಮ್ಮಕ್ಕಳು, ಬೀಗರು, ನೆಂಟರು ಎಂದು ಸುಖಪಡಲು ಆಸೆಯಿದೆ. ಇಂದೇ ಸಂಜೆ ಅವಳೊಂದಿಗೆ ಮಾತನಾಡೋಣ – ಎಂದರು.
ಸಂಜೆ ಮಗಳು ಫೋನ್ ಮಾಡಿದಾಗ, ಸೀತಮ್ಮ ಕೇಳಿದರು – ಹುಂ, ಪರೀಕ್ಷೆ ಮುಗಿಯಿತಲ್ಲಾ ರೇಖಾ ಎಂದು ಬರುತ್ತೀಯಾ . . . . . ಎಂದು ಇನ್ನೂ ಮುಂದುವರಿಯುವುದರಲ್ಲಿದ್ದರು. ರೇಖಾ, – ಅಪ್ಪಾ. . . . . ಎನ್ನುತ್ತಾ ಮತ್ತೆ ಅಪ್ಪನ ಮೊರೆ ಹೋದಳು.
ಸತೀಶರು ಸೀತಮ್ಮನನ್ನು ತಡೆಯುತ್ತಾ, – ಇರು ಸೀತಾ, ಅವಳ ಯೋಜನೆಗಳೇನಿವೆಯೋ ಕೇಳೋಣ, ಎನ್ನುತ್ತಾ, ರೇಖಳನ್ನು ಕುರಿತು – ನಿನ್ನ ಮುಂದಿನ ಪ್ಲಾನುಗಳೇನು ಕಂದಾ – ಎಂದರು.
ಹುಂ, ಅಪ್ಪಾ, ವೆರಿ ಗುಡ್ ನ್ಯೂಸ್, ಇಲ್ಲಿಯ ಪ್ರತಿಷ್ಠಿತ ಕಂಪನಿಯಲ್ಲಿ ನನಗೆ ಕೆಲಸ ಸಿಕ್ಕಿದೆ. ಪರೀಕ್ಷೆಗಳನ್ನೂ ಚೆನ್ನಾಗಿಯೇ ಮಾಡಿದ್ದೇನೆ. ನಿಮಗೇ ತಿಳಿದಿರುವಂತೆ, ನಾನು ಆನ್ ಕ್ಯಾಂಪಸ್ ಕೆಲಸವನ್ನೂ ಮಾಡಿಕೊಂಡು ಓದಿದ್ದರಿಂದಲೂ, ಹಲವಾರು ಸ್ಕಾಲರ್ಶಿಪ್ಪುಗಳು ಸಿಕ್ಕಿದ್ದರಿಂದಳು ನನಗೆ ಸಾಂಕ್ಷನ್ ಆದ ಲೋನಿನಲ್ಲಿ ಸ್ವಲ್ಪ ಮಾತ್ರ ಉಪಯೋಗಿಸಿಕೊಂಡು M.S ಮುಗಿಸುವಂತೆ ಆಯಿತು. ಒಂದು ವರುಷ ಕೆಲಸ ಮಾಡಿಬಿಟ್ಟರೆ ಲೋನ್ ಪೂರ್ತಿ ತೀರಿಸಿ ಬಿಡಬಹುದು. ಹಾಗಾಗಿ ನಾನು ಮುಂದಿನ ವರ್ಷ ಊರಿಗೆ ಬರುತ್ತೀನಿ. ಹಾಂ, ಅದು ವಿಸಿಟ್‌ಗೆ ಮಾತ್ರ. ಅಮ್ಮಾ ಖಂಡಿತಾ ಆಗ ಮದುವೆಯನ್ನೂ ಮಾಡಿಕೊಳ್ಳುತ್ತೀನಿ. ನಂತರ ನಾಲ್ಕಾರು ವರುಷಗಳು ಗಂಡನೊಂದಿಗೆ ಇಲ್ಲೇ ಇರುತ್ತೀನಿ. ಏಕೆಂದರೆ ಈ ಒಂದು ವರುಷದ ಪೂರ್ತಿ ನನ್ನ ಸಂಪಾದನೆ, ನನ್ನ ಇರುವಿಕೆ ಮತ್ತು ಲೋನ್ ತೀರಿಸುವಿಕೆಗೆ ಆಗುತ್ತದೆ. ನಂತರ ಮೂರ್ನಾಲ್ಕು ವರ್ಷ ಎಲ್ಲ ಕಡೆ ಸುತ್ತಾಡಿಕೊಂಡು ಸ್ವಲ್ಪ ಎಂಜಾಯ್ ಮಾಡಿಕೊಂಡು ನಂತರ ಭಾರತಕ್ಕೆ ಬಂದು ಬಿಡುತ್ತೀವಿ. ಅಲ್ಲದೇ ಮುಂದಿನ ವರ್ಷದಿಂದ ಪ್ರತೀ ವರ್ಷವೂ ಊರಿಗೆ ಬರುತ್ತೀನಿ. ಹಾಗೆಯೇ ಇಲ್ಲಿ ಮೂರ್ನಾಲ್ಕು ವರ್ಷಗಳು ಕೆಲಸ ಮಾಡಿದರೆ ಅದರ ಅನುಭವದ ಆಧಾರದ ಮೇಲೆ ನನಗೆ ಎಲ್ಲಿ ಬೇಕಾದರೂ ಒಳ್ಳೆಯ ಕೆಲಸ ಸಿಗುತ್ತದೆ.
ಸೀತಮ್ಮಾ, ಸತೀಶರಿಗೆ ಏನು ಹೇಳಲು ಉಳಿಸಿರಲಿಲ್ಲ ರೇಖಾ, ಮುಂದಿನ ಒಂದು ವರುಷಗಳು ಕಾಯುವುದನ್ನು ಬಿಟ್ಟು.
ಮುಂದಿನ ಹತ್ತೇ ತಿಂಗಳಲ್ಲಿ, ರೇಖಾ ಫೋನಾಯಿಸಿದಳು. – ಅಪ್ಪಾ, ಅಮ್ಮಾ, ನಾನು ನನ್ನ ಪೂರ್ತಿ ಲೋನನ್ನು ತೀರಿಸಿ ಬಿಟ್ಟೆ. ಇನ್ನು ಎರಡು ತಿಂಗಳಿಗೆ ಊರಿಗೆ ಬರುತ್ತೀನಿ. ಹೊಸಾ ಕೆಲಸವಾದುದರಿಂದ ರಜ ಸಿಗುವುದು ಕಷ್ಟ. ಬರೀ ಮೂರು ವಾರಗಳು ಮಾತ್ರ ಇರುತ್ತೀನೆ.
ದಂಪತಿಗಳ ಮನಸ್ಸು ಹಕ್ಕಿಯಂತೆ ಹಾರಾಡಿತು. ಸೀತ ಅಂಜುತ್ತಂಜುತ್ತಲೇ ಕೇಳಿದರು. ಯಾವುದಾದರೂ ಜಾತಕ ತರಿಸಿ ತೋರಿಸಲಾ, ನಿನಗೆ ಯಾವ ರೀತಿಯ ಗಂಡ ಬೇಕು?
ಅಮ್ಮಾ ಗಂಡನೇನು ಅಂಗಡಿಯಲ್ಲಿ ಸಿಗುವ ವಸ್ತುವೆ? ನಾನು ಬರುತ್ತೀನಲ್ಲ ನಿಧಾನಕ್ಕೆ ಮಾತನಾಡೋಣ.
ಎರಡು ತಿಂಗಳು ಕಳೆದದ್ದೇ ತಿಳಿಯಲಿಲ್ಲ. ಮುಂದೆ ಬಂದು ನಿಂತ ಮಗಳನ್ನು ಕಂಡಾಗ, ಸೀತಮ್ಮ- ಸತೀಶರಿಗೆ ತಮ್ಮ ಕಣ್ನುಗಳನ್ನೇ ನಂಬಲಾಗಲಿಲ್ಲ. ರೇಖಾ ಪೂರ್ತಿ ಬದಲಾಗಿದ್ದಳು. ಮುಖದಲ್ಲಿ ಆತ್ಮವಿಶ್ವಾಸ ತುಂಬಿ ತುಳುಕುತ್ತಿತ್ತು. ಏನನ್ನಾದರೂ ಸಾಧಿಸಿ ಜಯಿಸುತ್ತೇನೆಂಬ ದೃಢತೆಯಿತ್ತು.
ಇಬ್ಬರಿಗೂ ಇದ್ದಕ್ಕಿದಂತೆ, ತಮಗೆ ವಯಸ್ಸಾದಂತೆಯೂ, ಇನ್ನು ಮುಂದೆ ತಾವು ಮಾಡಬೇಕಾದ ಕೆಲಸಗಳಿಗೆ, ರೇಖಾಳ ಸಲಹೆ , ಅಭಿಪ್ರಾಯಗಳನ್ನು ಕೇಳಿ ಅನಂತರ ಮಾಡುವುದು ಒಳಿತು, ಅನ್ನಿಸಹತ್ತಿತು.
ಬಂದವಳೇ ರೇಖಾ ಅಪ್ಪ, ಅಮ್ಮನನ್ನು ಆತ್ಮೀಯವಾಗಿ ತಬ್ಬಿ ಹಿಡಿದಳು. ಇಬ್ಬರ ಮೈ ಮನಗಳೂ ಸುಖ-ಸಂತೋಷದಿಂದ ರೋಮಾಂಚನಗೊಂಡವು.
ಅಮ್ಮನ ಕೈಯಡುಗೆಯನ್ನು ಚಪ್ಪರಿಸಿಕೊಂಡು ತಿಂದ ರೇಖಾ ಹೇಳಿದಳು – ಅಮ್ಮಾ, ಇಲ್ಲಿಯ ಹಗಲು, ಅಲ್ಲಿಯ ರಾತ್ರಿ. ನನಗೆ ಈಗ ತುಂಬಾ ನಿದ್ರೆ ಬರುತ್ತಿದೆ. ಒಂದೆರಡು ಗಂಟೆ ಮಲಗುತ್ತೇನೆ. ಹಾಂ, ಇನ್ನು ಎರಡು ದಿನಗಳ ನಂತರ ನನ್ನ ಮದುವೆಯ ವಿಚಾರ ಮಾತನಾಡೋಣ.
ಮೂಕವಿಸ್ಮತರಾಗುವ ಸರದಿ ಸೀತಮ್ಮನವರದಾಗಿತ್ತು.
ಎರಡು ದಿನಗಳ ನಂತರ ತಿಂಡಿಯಾದೊಡನೆಯೇ ರೇಖಳೇ ಶುರು ಮಾಡಿದಳು. ಅಮ್ಮಾ, ನಾನು ಈ ಸಲ, ನಿಮಗೆ ಈ ಹಿಂದೆಯೇ ಮಾತು ಕೊಟ್ಟಿದಂತೆ ಮದುವೆ ಮಾಡಿಕೊಂಡೇ ಊರಿಗೆ ಹೊರಡುವುದು.
ಸೀತಮ್ಮ ಏನೋ ಹೇಳಲು ಬಾಯಿ ತೆರೆಯಲು, ಸತೀಶರು ಅವರನ್ನು ಸುಮ್ಮನಾಗಿಸಿದರು. ರೇಖಾ, – ʼಥ್ಯಾಂಕ್ಸ್ ಅಪ್ಪಾʼ – ಎನ್ನುತ್ತಾ ತನ್ನ ಮಾತನ್ನು ಮುಂದುವರೆಸಿದಳು.
ನಿಮಗೆ ಕೇಳಿ ಆಶ್ಚರ್ಯವಾಗಬಹುದು. ಆದರೆ ನಾನು, ನಮ್ಮ ಮನೆಯಲ್ಲಿ ಓದುತ್ತಿದ್ದಾಗ ಇದ್ದ ಕಿರಣ್ ನನ್ನು ಮದುವೆಯಾಗುವುದೆಂದು ತೀರ್ಮಾನಿಸಿದ್ದೇನೆ. ನಾವಿಬ್ಬರೂ ಕಳೆದ ನಾಲ್ಕು ವರುಷಗಳಿಂದಲೂ ಒಬ್ಬರನ್ನೊಬ್ಬರನ್ನು ಇಷ್ಟ ಪಟ್ಟಿದ್ದೇವೆ. ಅವರಿಗೆ ತಮ್ಮ ಗತಕಾಲದ ಬಡತನವನ್ನು ಮರೆಯಬೇಕೆಂಬ ಆಸೆಯಿದೆ. ಹಾಗಾಗಿ ಅವರು ನನ್ನ ಜೊತೆ ಅಮೆರಿಕಾಗೆ ಬರಲು ಸಿದ್ಧರಾಗಿದ್ದಾರೆ. ಅಮ್ಮಾ ಇನ್ನು ಹದಿನೈದು ದಿನಗಳಲ್ಲಿ ನನ್ನ ಮದುವೆಯಾಗ ಬೇಕು. ಹೇಗೆ ಆಗ ಬೇಕು, ಎಲ್ಲಿ ಆಗಬೇಕು, ಸರಳವಾಗೋ, ಗ್ರಾಂಡ್ ಆಗೋ ಎಲ್ಲ ನಿಮ್ಮಿಷ್ಟದಂತೆ ನಡೆಯುತ್ತೆ. ಕಿರಣ್, ನಾನು, ನೀವಿಬ್ಬರು, ನಾಲ್ಕೇಜನ ಮನೆಯಲ್ಲೇ ಮದುವೆಯಾದರೂ ಸರಿ. ಯಾವುದಾರೂ ದೇವಸ್ಥಾನದಲ್ಲಾದರೂ ಸರಿ, ಇಲ್ಲಾ ನಿಮಗೆ ಎಲ್ಲರನ್ನು ಕರೆದು ಗ್ರಾಂಡ್ ಆಗ ಬೇಕೆಂದರೆ ಅದೂ ಸರಿ. ನಂತರ ನಾನು ಊರಿಗೆ ಹೋಗಿ ಅವರಿಗೆ ಸ್ಪೌಸ್ ವೀಸಾ ಮಾಡಿಸುತ್ತೇನೆ. ಈಗಾಗಲೇ ಅವರು ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ನಂತರ ನಾನು ಅವರಿಗೆ ಟಿಕೆಟ್ ಕಳುಹಿಸುತ್ತೇನೆ, ಬಂದು ನನ್ನನ್ನು ಸೇರುತ್ತಾರೆ – ಎಂದಳು.
ಅವಳು ಹೇಳಿದ ರೀತಿ, ವಿವರಗಳನ್ನು ಕೊಟ್ಟಂತಿತ್ತು. ತಮ್ಮ ಸಲಹೆ, ಸೂಚನೆ, ಅಭಿಪ್ರಾಯಗಳಿಗೆ ಅಲ್ಲಿ ಬೆಲೆಯಿಲ್ಲ ಎಂಬುದು ಸ್ವಷ್ಟವಾಗಿತ್ತು. ಸತೀಶರು ಮೌನಕ್ಕೆ ಶರಣಾದರು, ಸೀತಮ್ಮನ ಉತ್ಸಾಹವೆಲ್ಲಾ ಜರ್ ಎಂದು ಇಳಿದು ಹೋಯಿತು.
ತಮ್ಮ ಮಾತಿಗೆ ಕವಡೆ ಕಿಮ್ಮತ್ತು ಇರುವುದಿಲ್ಲ ಅನ್ನಿಸಿದರೂ ಮನಸ್ಸು ತಡೆಯದೆ – ಅಲ್ಲ ಕಣೆ ರೇಖಾ, ನಮ್ಮ ಹಿರಿಯರು ಹೇಳುತ್ತಿದ್ದರು. ಯಾವಾಗಲೂ ನಾವು ಮಗಳನ್ನು ನಮಗಿಂತ ಜಾಸ್ತಿ ಉಳ್ಳವರ ಮನೆಗೆ ಕೊಡಬೇಕು. ಸೊಸೆಯನ್ನು ನಮಗಿಂತ ಆರ್ಥಿಕವಾಗಿ ಸ್ವಲ್ಪ ಕೆಳಸ್ತರದಿಂದ ತರಬೇಕು. ಆಗ ಎಲ್ಲಾ ಹೆಣ್ಣು ಮಕ್ಕಳೂ ಸಂತೃಪ್ತರಾಗಿರುತ್ತಾರೆ. ಸಂಸಾರ ನಿಲ್ಲುತ್ತದೆ ಅಂತ, ನೀನು ನೋಡಿದರೆ . . . . .
ಅಷ್ಟರಲ್ಲೇ ಅವರ ಮಾತನ್ನು ತಡೆದು – ಅಮ್ಮಾ ಈಗ ಕಾಲ ಬದಲಾಗಿದೆ. ನಾನು ಕಿರಣ್‌ನನ್ನು ಮನಸಾರ ಮೆಚ್ಚೆದ್ದೇನೆ. ಅವರೊಂದಿಗೇ ಮದುವೆಯಾಗುವುದೆಂದು ನಿರ್ಧರಿಸಿಯಾಗಿದೆ – ಎಂದಳು.
ಏಕಾಂತದಲ್ಲಿ ಸತೀಶರು ತಮಗಾದ ನಿರಾಸೆಯನ್ನು ನುಂಗಿಕೊಂಡು ಸೀತಮ್ಮನನ್ನು ಸಮಾಧಾನ ಪಡಿಸಿ ಮುಂದಿನ ಕೆಲಸ ಕಾರ್ಯಗಳ ಬಗ್ಗೆ ಯೋಚಿಸಲು ಅವರ ಮನಸ್ಸನ್ನು ಸಿದ್ಧಗೊಳಿಸಿ, ತಾವೂ ಕಾರ್ಯೋನ್ಮುಖರಾದರು. ಮುಂದಿನ ದಿನವೇ ಕಿರಣನಿಗೆ ಫೋನಾಯಿಸಿ, ಅವನ ತಂದೆ ತಾಯಿಗಳಿರುವ ಊರಿಗೆ ಹೋಗಿ ಅವರನ್ನು ಬಂದು ಹೆಣ್ಣು ನೋಡುವಂತೆ ವಿನಂತಿಸಿಕೊಂಡರು.
ಅಷ್ಟರಲ್ಲಾಗಲೇ ಕಿರಣನಿಗೆ ರೇಖಳಿಂದ, ಅವಳ ತಂದೆ ತಾಯಿಗಳಿಗೆ ಈ ಮದುವೆಯಿಂದ ಅಷ್ಟೇನು ಸಂತೋಷಗೊಂಡಂತೆ ಕಾಣಲಿಲ್ಲ ಎಂಬ ವಿಷಯ ತಿಳಿದು, ಅದು ಅವನ ನಡುವಳಿಕೆಯಲ್ಲಿ ಗೋಚರಿಸುತ್ತಿತ್ತು.
ಬೀಗರೇನೂ ಕಡಿಮೆ ಬಿಂಕ ತೋರಲಿಲ್ಲ. ವರೋಪಚಾರದ, ಮದುವೆ ಆಗಬೇಕಾದ ರೀತಿ ನೀತಿಗಳ ಬಗ್ಗೆ ದೊಡ್ಡ ಪಟ್ಟಿಯನ್ನೇ ಕೊಟ್ಟರು.
ಮತ್ತೆ ಮನೆಯನ್ನು ಒತ್ತೆ ಇಟ್ಟು ರೇಖಳಿಗೆ ಆರ್ಥಿಕ ಸಂಕಷ್ಟದ, ಅವರ ಮನೆಯವರ, ಕಿರಣನ ನಡುವಳಿಕೆಯ ಬಗ್ಗೆ ಕಿಂಚಿತ್ತೂ ಸುಳಿವು ಕೊಡದಂತೆ ಸಾಂಗೋಪಾಂಗವಾಗಿ ಮದುವೆ ನೆರವೇರಿಸಿದರು. ರೇಖಾ ಖುಷಿಯಾಗಿ, ಕಿರಣನಿಗೆ, ತಾನು ಆದಷ್ಟು ಬೇಗ ಅವನನ್ನು ಅಮೆರಿಕಾಗೆ ಕರೆಸಿಕೊಳ್ಳುವ ವಾಗ್ದಾನ ಮಾಡಿ, ಅಪ್ಪ ಅಮ್ಮನಿಗೆ ಟಾ ಟಾ ಮಾಡಿ ವಿಮಾನವೇರಿದಳು.
ಅವಳು ಊರಿಗೆ ಹೋದ ನಂತರ ಕಿರಣ ಇವರ ಮನೆ ಕಡೆ ಸುಳಿಯಲೂ ಇಲ್ಲ. ಅವರ ಫೋನ್ ಕರೆಗಳಿಗೆ ಉತ್ತರಿಸುತ್ತಲೂ ಇರಲಿಲ್ಲ. ಒಂದೆರಡು ಸಲ ಹಾಗಾದಾಗ ಸತೀಶರು ಸುಮ್ಮನಾಗಿಬಿಟ್ಟರು. ಸೀತಮ್ಮ, ಸತೀಶರು ಒಳಗೇ ನೋಯುತ್ತಿರುವುದನ್ನು ಗಮನಿಸಿ ತಾವೂ ಸುಮ್ಮನಾಗಿ ಬಿಟ್ಟರು.
ರೇಖಾ ವಾರಕ್ಕೊಮ್ಮೆ ಫೋನಾಯಿಸಿ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಿದ್ದಳು. ಅವಳೂ ಕಿರಣನ ವಿಷಯ ಎತ್ತುತ್ತಿರಲಿಲ್ಲ. ಇವರೂ ಕೇಳುತ್ತಿರಲಿಲ್ಲ.
ಒಂದೂವರೆ ತಿಂಗಳ ನಂತರ, ಒಮ್ಮೆ ಫೋನಾಯಿಸಿದಾಗ ಕಿರಣ್ ಸುಖವಾಗಿ ಬಂದು ತನ್ನನ್ನು ಸೇರಿದರೆಂದೂ ತಾವಿಬ್ಬರೂ ಸಂತೋಷದಿಂದ್ದೀವೆಂದೂ ತಿಳಿಸಿ ಸುಮ್ಮನಾದಳು.
ನಂತರದ ದಿನಗಳಲ್ಲಿ ಕಿರಣನ ತಂದೆ ತಾಯಿಯರು, ತಮ್ಮ ತಂಗಿಯರು, ಚಿಕ್ಕಪ್ಪ, ಚಿಕ್ಕಮ್ಮ, ಸೋದರತ್ತೆ ಯಾರೇ ಊರಿಗೆ ಬಂದರೂ ಇವರ ಮನೆಗೇ ಬಂದು ಇಳಿದುಕೊಳ್ಳುತ್ತಿದ್ದರು. ಇವರಿಗೆ ಇಷ್ಟವಿದೆಯೋ, ಇಲ್ಲವೋ ಯೋಚಿಸಲೂ ಹೋಗುತ್ತಿರಲಿಲ್ಲ. ತಮ್ಮ ಹಕ್ಕೇನೋ ಎಂಬಂತೆ ನನಗೆ ಅದು ಇಷ್ಟ, ಇದು ಇಷ್ಟ ಎನ್ನುತ್ತಾ ಕೇಳಿ ಮಾಡಿಸಿಕೊಳ್ಳುತ್ತಿದ್ದರು. ಇದು ನಮ್ಮ ಕಿರಣನ ಮನೆ, ನಮ್ಮ ಕಿರಣನ ಮನೆ ಎನ್ನುತ್ತಾ ತಮಗಿಷ್ಟ ಬಂದಷ್ಟು ದಿನ ಇದ್ದು ಹೋಗುತ್ತಿದ್ದರು.
ಸೀತಮ್ನ, ಸತೀಶರ ಸಂಸ್ಕಾರ, ಸಾತ್ವಿಕತೆ ತಮಗೆ ಕಷ್ಟವಾಗುತ್ತಿದೆ ಎಂದು ತಿಳಿಸಲು ಅಡ್ಡ ಬರುತ್ತಿದ್ದವು. ತಮಗೆ ತಾವೇ ಅವರು ನಮ್ಮ ಬೀಗರ ಮನೆಯವರು, ಅವರಿಗೆ ಉಪಚಾರ ಮಾಡಬೇಕಾದ್ದು ನಮ್ಮ ಕರ್ತವ್ಯ, ಅವರು ತಾನೇ ಯಾರು, ನಮ್ಮ ಪ್ರೀತಿಯ ಮಗಳಾದ ರೇಖಾಳ ಗಂಡನ ಮನೆಯವರು ತಾನೆ, ಎಂದು ಸಮಾಧಾನ ಮಾಡಿಕೊಳ್ಳುತ್ತಿದ್ದರು. ಸೀತಮ್ಮ ಕೆಲಸಮಾಡಲಾಗದೇ ನವೆಯುತ್ತಿದ್ದರು, ಸತೀಶರು ಹಣ ಹೊಂದಿಸಲಾಗದೆ ನವೆಯುತ್ತಿದ್ದರು. ರೇಖಳಿಗೆ ಇದ್ಯಾವುದರ ಪರಿವೆಯೇ ಇರಲಿಲ್ಲ.
ಮೊದಲ ವರ್ಷದ ಗೌರಿ, ಗಣೇಶ ಹಬ್ಬ ಬಂದಾಗ, ರೇಖ ಅಲ್ಲಿಂದ ಫೋನ್ ಮಾಡಿದಳು. ಅಮ್ಮಾ, ಇದು ಮೊದಲ ವರ್ಷದ ಹಬ್ಬ. ನಾವಿಲ್ಲದಿದ್ದರೇನಂತೆ ಪದ್ಧತಿಯಂತೆ ಅವರ ಮನೆಗೆ ಪೂಜೆಯ ಸಾಮಾನುಗಳು, ಉಡುಗೊರೆಗಳು, ಬೆಳ್ಳಿಯ ಗಣೇಶ ಎಲ್ಲಾ ತೆಗೆದುಕೊಂಡು ಹೋಗಿ ಕೊಟ್ಟು ಬನ್ನಿ. ಅವರು ತುಂಬಾ ಸಂಪ್ರದಾಯಸ್ಥರು, ನೀವು ಈ ರೀತಿ ನಡೆದುಕೊಳ್ಳದಿದ್ದರೆ ತಪ್ಪಾಗುತ್ತದೆ ಎಂದಾಗ, ಸೀತಮ್ಮನವರಿರಲಿ, ಸತೀಶರೂ ಮಾನದಲ್ಲಿ, – ಓ ಮಗಳೆ, ನಮ್ಮ ಕಷ್ಟ ಸುಖದ ಅರಿವೆಯೇ ನಿನಗಿಲ್ಲವೆ? ಎಂದುಕೊಂಡರು. ತಮ್ಮಲ್ಲಿ ಇದ್ದಷ್ಟು ದುಡ್ಡಿನಲ್ಲಿ ಉಡುಗೊರೆ, ಪೂಜೆಯ ಸಾಮಾನುಗಳನ್ನೇನೋ ತಂದು , – ನಾಳೆ ತಯ್ಯಾರಾಗು ಸೀತಾ, ಹೋಗಿ ಕೊಟ್ಟು ಬರೋಣ, ಬೆಳ್ಳಿ ಗಣೇಶ ಎಲ್ಲಾ ತರಲು ನನ್ನಲ್ಲಿ ಹಣವಿಲ್ಲ, ನಿಸ್ಪಹತೆಯಿಂದ ನನ್ನ ಕೈಲಾದಷ್ಟು ಮಾಡಿದ್ದೇನೆ. ಅದು ಆ ಭಗವಂತನಿಗೆ ಗೊತ್ತಿದೆ, ಅಷ್ಟು ಸಾಕು – ಎಂದು ಮುಖ ಚಿಕ್ಕದು ಮಾಡಿಕೊಂಡರು. ಸೀತಮ್ಮನಿಗೆ ಕರುಳು ಹಿಂಡಿದಂತಾಯಿತು. ಸತೀಶರು ಎಂದೂ ಹೀಗೆ ಕೈ ಚೆಲ್ಲಿ ಕುಳಿತವರಲ್ಲ. ಅವರನ್ನು ಸಮಾಧಾನ ಪಡಿಸುತ್ತಾ – ಇರಲಿ ಬಿಡಿ, ಅದಕ್ಯಾಕೆ ಮುಖ ಚಿಕ್ಕದು ಮಾಡಿ ಕೊಳ್ಳುತ್ತೀರಿ, ನನ್ನ ಹತ್ತಿರ ಅಮ್ಮ ಕೊಟ್ಟದ್ದ ಚಿಕ್ಕ ಗಣಪತಿಯ ಮೂರ್ತಿ ಇದೆ, ಸಂಜೆ ಅದಕ್ಕೇ ಪಾಲೀಷ್ ಹಾಕಿಸಿಕೊಂಡು ಬರುತ್ತೀನಿ ಕೊಟ್ಟು ಬಿಡೋಣ, ನಾವು ತಾನೆ ಇನ್ನು ಯಾರಿಗೆ ಇಡಬೇಕು – ಎಂದು ಸಮಾಧಾನಿಸಿದರು. “ನಿನ್ನಿಷ್ಟ” ಎನ್ನುತ್ತಾ ಮೌನವಾದರು ಸತೀಶರು.
ವಾಸ್ತವವಾಗಿ ಸೀತಮ್ಮನ ಹತ್ತಿರ ಯಾವ ಗಣೇಶನ ಮೂರ್ತಿಯೂ ಇರಲಿಲ್ಲ. ಮಧ್ಯಾನ್ಹವೇ ಪೆಟ್ಟಿಗೆಯಿಂದ ತಾವು ಹಬ್ಬ ಹರಿದಿನಗಳಲ್ಲಿ ಪೂಜೆಗೆ ಇಟ್ಟುಕೊಳ್ಳುತ್ತಿದ್ದ ದೊಡ್ಡ ಬೆಳ್ಳಿಯ ಹರಿವಾಣವನ್ನು ಮಾರ್ಕೆಟ್ ಬೀದಿಯಲ್ಲಿದ್ದ, ಪಾನ್ ಬ್ರೋಕರ್ ಅಂಗಡಿಗೆ ಅಡವಿಡಲು ತೆಗೆದುಕೊಂಡು ಹೋದರು. ಅವರ ಜೀವಮಾನದಲ್ಲೇ ಎಂದೂ ಈ ರೀತಿಯ ಕೆಲಸವನ್ನು ಮಾಡಿರಲಿಲ್ಲ. ಯಾರಾದರೂ ಪರಿಚಯಸ್ಥರು ನೋಡಿಬಿಟ್ಟರೆ, ಎಂಬ ಅಳುಕಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಸತೀಶರಿಂದ ಮುಚ್ಚಿಟ್ಟು ಎಂದೂ ಯಾವ ಕೆಲಸವನ್ನೂ ಮಾಡಿರಲಿಲ್ಲ. ಇರಲಿ, ಎಂದು ತಮ್ಮನ್ನು ತಾವೇ ಸಮಾಧಾನಿಸಿಕೊಂಡು ಅಂಗಡಿಯವ ಹೇಳಿದ ಕಡೆ ಸಹಿ ಹಾಕಿ ಅವನು ಕೊಟ್ಟಷ್ಟು ದುಡ್ಡನ್ನು ತೆಗೆದುಕೊಂಡು, ನಾನು ಮುಂದಿನ ತಿಂಗಳೇ ಬಂದು ಬಿಡಿಸಿಕೊಳ್ಳುತ್ತೀನೆ, ಎಷ್ಟು ಬಡ್ಡಿಯಾಗಬಹುದು ಎಂದಾಗ, ಅವನು, – ಇರಲಿ, ಬನ್ನಿ ಅಮ್ಮಾ, ನಿಮ್ಮಿಂದ ಜಾಸ್ತಿಯೇನೂ ತೆಗೆದುಕೊಳ್ಳುವುದಿಲ್ಲ – ಎಂದು ಸವಿನಯದಿಂದ ಹೇಳಿದಾಗ, ಸಮಾಧಾನಗೊಂಡು ಬೇಗ ಬೇಗ ಆ ಕಡೆ, ಈ ಕಡೆ ನೋಡುತ್ತಾ ಅಂಗಡಿಯಿಂದ ಹೊರ ಬಂದವರೇ ಮತ್ತೊಂದು ಬೆಳ್ಳಿಯ ಅಂಗಡಿಗೆ ಹೋಗಿ ಒಂದು ಗಣೇಶ ವಿಗ್ರಹವನ್ನು ಖರೀದಿಸಿ, ಮನೆಗೆ ಹೊರಟರು. ಸತೀಶರ ಮುಖವನ್ನು ತಲೆಯೆತ್ತಿ ನೋಡಲೂ ಅಳುಕಾಗುತ್ತಿತ್ತು.
ಮಾರನೆಯ ದಿನ ಬೀಗರ ಮನೆ ಕಡೆಗೆ ಪ್ರಯಾಣ ಬೆಳೆಸುವ ಮುಂಚೆ ಸತೀಶರು – ನನಗೆ ಗಣೇಶ ಮೂರ್ತಿಯನ್ನು ತೋರಿಸಲೇ ಇಲ್ಲವಲ್ಲ ಸೀತಾ – ಎನ್ನಲು, ಅಳುಕಳುತ್ತಲೇ ತೋರಿಸಿದರು. ನೋಡಿದ ಅವರು – ಎಷ್ಟು ಮುದ್ದಾಗಿದೆಯಲ್ಲಾ ಸೀತಾ, ಯಾವಾಗ ಅಮ್ಮ ಕೊಟ್ಟಿದ್ದರು, ನನಗೆ ನೆನಪೇ ಇಲ್ಲವಲ್ಲ- ಎನ್ನಲು, ಹೌದು ಅದನ್ನು ಕೊಟ್ಟದಿನದಿಂದಲೂ ಪೆಟ್ಟಿಗೆಯಲ್ಲೇ ಇಟ್ಟು ಬಿಟ್ಟಿದ್ದೆ. ದೇವರ ಮನೆಯಲ್ಲಿ ಬೇರೆ ಗಣೇಶ ಮೂರ್ತಿ ಇತ್ತಲ್ಲಾ, ಹಾಗಾಗಿ ನೆನಪು ಹಾರಿತ್ತು. ನಿನ್ನೆ ಇದ್ದಕ್ಕಿದಂತೆ ನೆನಪು ಬಂತು. ಸಧ್ಯ ಸಮಯಕ್ಕಾಯಿತಲ್ಲ ಬಿಡಿ – ಎಂದರೂ, ಮನ ತಮ್ಮಿಬ್ಬರ ಅಸಹಾಯಕತೆಗೆ ಮರುಗುತಿತ್ತು.
ಭಕ್ತಿ, ಶ್ರದ್ಧೆಗೇನೂ ಕಮ್ಮಿ ಇಲ್ಲದಂತೆ ಇಬ್ಬರೇ ಸರಳವಾಗಿ ಹಬ್ಬವನ್ನಾಚರಿಸಿದರು.
(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಸಂಚಿಕೆ ಇಲ್ಲಿದೆ : http://surahonne.com/?p=32644
-ಪದ್ಮಾ ಆನಂದ್, ಮೈಸೂರು
ಮಗಳಾದವಳು ಹೆತ್ತವರ ಸಂಕಟವನ್ನು ಅರಿಯಲಾರದಷ್ಟು ಸ್ವಾರ್ಥಿ ಆದಳೆ?
ಜೀವಯಾನದಲ್ಲಿ ಅತ್ಯಂತ ಯಶಸ್ವೀ ಯುವತಿಯಾದ ಮಗಳು, ಭಾವಯಾನದಲ್ಲಿ ಎಡವಿದ್ದಾಳೆ
ಎಂದಿನಂತೆ ಸುಂದರ. ಸುಲಲಿತವಾಗಿ, ಅತ್ಮೀಯತೆಯಿಂದ ಓದಿಸಿಕೊಂಡು ಹೋಗುತ್ತಿದೆ..ತಮ್ಮ ಕಾದಂಬರಿ..ಧನ್ಯವಾದಗಳು ಮೇಡಂ.
ತಮ್ಮ ಸ್ಪಂದನೆಗಾಗಿ ಧನ್ಯವಾದಗಳು.
ತುಂಬಾ ಚೆನ್ನಾಗಿದೆ, ಸರಳ ಸುಂದರವಾದ ಕಥಾಹಂದರ ,ಮಗಳು ಬೆಳೆದ ಹಾಗೆ ತಂದೆ ತಾಯಿ ಮಸಸ್ಸಿನ ತುಮುಲವನ್ನು ಗಮನಿಸುವುದೇ ಇಲ್ಲ
ಧನ್ಯವಾದಗಳು ಪುಣ್ಯ.