ದಿನಾಂಕ 23-11-2025 ರ ಭಾನುವಾರದಂದು ಮೈಸೂರು ಸಾಹಿತ್ಯ ದಾಸೋಹದಿಂದ ಮೈಸೂರಿನಲ್ಲೊಂದು ಅಪರೂಪದ ಕಾರ್ಯಕ್ರಮ ಜರುಗಿತು. ಅದು ದಶಮಾನೋತ್ಸವ ಸಂಭ್ರಮ. ಈ ಸಂದರ್ಭದಲ್ಲಿ ನಾಡಿನ ಖ್ಯಾತ ವೈದ್ಯರೂ ಬರೆಹಗಾರರೂ ಚಂದನವಾಹಿನಿಯ ‘ಥಟ್ ಅಂತ ಹೇಳಿ’ ಎಂಬ ಜನಪ್ರೀತಿ ಪಡೆದ ಕಾರ್ಯಕ್ರಮ ಸರಣಿಯ ಕ್ವಿಜ್ ಮಾಸ್ಟರ್ ಆದ ಡಾ. ನಾ ಸೋಮೇಶ್ವರ ಅವರು ಆಗಮಿಸಿ, ಒಂದು ಗಂಟೆಗಳ ಕಾಲ ತಮ್ಮ ಅಸ್ಖಲಿತ ವಿಚಾರಧಾರೆಯನ್ನು ಮಂಡಿಸಿದರು. ಮನುಷ್ಯ ಜೀವವಿಕಾಸದ ಮತಿವಂತಿಕೆಯು ಹರಡಿಕೊಂಡ ಪರಿಯನ್ನು ಸಮಕಾಲೀನ ಸ್ಥಿತಿಗತಿಗಳ ಮೂಲಕ ಪರಾಮರ್ಶಿಸಿದ ಬಗೆಯೇ ವಿಶಿಷ್ಟವಾಗಿತ್ತು. ಅದರಲ್ಲೂ ಮುಖ್ಯವಾಗಿ ಅಭಿವ್ಯಕ್ತಿಯನ್ನು ಕುರಿತ ಮಾತು ಮತ್ತು ಸಲಹೆಗಳು ಉಪಯುಕ್ತವೆನಿಸಿದವು. ಹಿರಿಯ ನಾಗರಿಕರ ವಯೋಧರ್ಮ ಮತ್ತು ಮನೋಧರ್ಮಕ್ಕೆ ಪೂರಕವಾಗಿ ಮಾತಾಡಿದ ಸೋಮೇಶ್ವರರು ಸಭಾಂಗಣದಲಿ ನೆರೆದ ಸಹೃದಯರ ಧಮನಿ ಮಿಡಿತವನ್ನು ಚೆನ್ನಾಗಿ ಅರಿತವರಾದರು. ಮೂಲತಃ ವೈದ್ಯರು, ವೈದ್ಯಲೇಖಕರು ಜೊತೆಗೆ ಎಲ್ಲ ಬಗೆಯ ಅಭಿವ್ಯಕ್ತಿ ಕ್ರಮಶ್ರಮಗಳನ್ನು ಬಲ್ಲವರು ಮುಖ್ಯವಾಗಿ ಜೀವಭಾವಗಳನ್ನು ಸಮನ್ವಯದಲ್ಲಿ ಕಂಡವರು ಮತ್ತು ಕಾಣಿಸಿಕೊಟ್ಟವರು. ಇಂಥವರ ಮಾತುಗಳಲ್ಲಿ ಅಧಿಕೃತತೆ ಮತ್ತು ಅರ್ಥಪೂರ್ಣತೆ ಎರಡೂ ಹದವಾಗಿ ಬೆರೆತವು.
ಮತಿವಂತ ಮಾನವನ ಮಹಾವಲಸೆಗಳ ವಿಚಾರದಿಂದ ಶುರುವಾದ ಅವರ ಮಾತುಕತೆಯು ಸಾಹಿತ್ಯ ದಾಸೋಹದ ಸದಸ್ಯರುಗಳ ಬರೆಹವನ್ನು ತಿದ್ದಿ ತೀಡಲು ನೀಡಿದ ಸಲಹೆಯವರೆಗೆ ಹರಡಿಕೊಂಡಿದ್ದರ ಏಕೈಕ ಸುಪ್ತಸಂಗತಿಯೇ ಅಭಿವ್ಯಕ್ತಿಯ ರೂಪರೇಖೆ. ಹಲವು ನಮೂನೆಯ ಅಭಿವ್ಯಕ್ತಿಗಳಲ್ಲಿ ಓದು ಬರೆಹವೂ ಒಂದು. ವ್ಯಕ್ತಿಯಲಿ ಸುಪ್ತವಾಗಿಹ ಭಾವಪ್ರಕಾಶವೇ ಅಭಿವ್ಯಕ್ತಿ; ಇದು ನಾಗರಿಕತೆ ಬೆಳೆದು ಬಂದ ಅವ್ಯಾಹತ ಶಕ್ತಿ. ಅಭಿವ್ಯಕ್ತಿಸದೇ ಹೋದಾಗ ಏನಾಗುತ್ತದೆ? ಅಭಿವ್ಯಕ್ತಿಸಿದಾಗ ಏನೇನಾಗಿದೆ? ಎಂಬುದನ್ನೂ ಅವರ ಮಾತುಗಳು ಒಳಗೊಂಡವು. ಅಭಿವ್ಯಕ್ತಗೊಂಡಾಗ ಮನಸು ಸಮಾಧಾನಗೊಳ್ಳುವುದು ; ಕನಸು ಚಿಗುರೊಡೆಯುವುದು. ಬದುಕಬೇಕೆಂಬ, ಒಡನಾಡಬೇಕೆಂಬ ಮತ್ತು ಆದರಿಸಿ ಆಲಿಸಬೇಕೆಂಬ ಧನಾತ್ಮಕತೆ ಪ್ರಾಪ್ತವಾಗುವುದು. ಏಕೆಂದರೆ ಆಪ್ತರೊಂದಿಗೆ ಹೇಳಿಕೊಳ್ಳಬೇಕೆಂಬ ತುಡಿತ ಮಿಡಿತಗಳು ಅನಾದಿ ಕಾಲದವು. ನಮ್ಮ ಪೂರ್ವಜರು ಗುಹೆಗಳಲ್ಲಿ ಚಿತ್ರಗಳನ್ನು ಬಿಡಿಸಿದ್ದಾರೆ. ಕಲ್ಲಿನಲ್ಲಿ ಕೆತ್ತಿದ್ದಾರೆ. ಗುಡಿಗೋಪುರಗಳನ್ನು ನಿರ್ಮಿಸಿದ್ದಾರೆ. ಶಾಸನಗಳನ್ನು ಬರೆಯಿಸಿದ್ದಾರೆ. ಹಾಗೆಯೇ ಕಾವ್ಯಗಳನ್ನು ಬರೆವ ಪ್ರತಿಭಾವಂತ ಕವಿಗಳಿಗೆ ಆಶ್ರಯವಿತ್ತು, ಅವರ ಸೃಜನಶೀಲತೆಗೆ ನೀರೆರೆದಿದ್ದಾರೆ. ಹಾಗಾಗಿ ಅಭಿವ್ಯಕ್ತಿಯೆಂಬುದು ಸನಾತನವಾದ ಸಂಸ್ಕೃತಿಯ ಪ್ರತಿಬಿಂಬ. ಈ ಅರ್ಥದಲ್ಲಿ ಸಾಹಿತ್ಯವನ್ನು ಪರಿಭಾವಿಸಬೇಕು.
ಓದುವುದು ಮತ್ತು ಬರೆಯುವುದು ಸಂಸ್ಕಾರವಂತರ ಲಕ್ಷಣ. ಓದುವವರು ಇದ್ದಾರೆಂಬ ಭರವಸೆಯೇ ಬರೆಯುವವರಿಗೆ ಆಸರೆ ಮತ್ತು ಆಧಾರ. ಬರೆದಿದ್ದನ್ನು ಓದಿ ತಮ್ಮ ಸಕಾರಾತ್ಮಕ ಮತ್ತು ರಚನಾತ್ಮಕ ಅಭಿಪ್ರಾಯಗಳನ್ನು ಕೊಡುವ ಸಹೃದಯರು ಧಾರಾಳವಾಗಿ ಸಲಹೆ ಸೂಚನೆಗಳನ್ನು ನೀಡಬಹುದು; ಟೀಕೆ ಟಿಪ್ಪಣಿಗಳನ್ನಲ್ಲ. ಈ ವಿಚಾರವನ್ನು ಸೋಮೇಶ್ವರರು ಎಲ್ಲಿಯವರೆಗೆ ನೋಡಿದರೆಂದರೆ, ಏನೂ ಮಾಡಲಾಗದ ಅಸಹಾಯಕತೆ ಎದುರಾದಾಗ ಭಗವಂತನ ಮುಂದೆ ಕುಳಿತು ಎಲ್ಲವನೂ ಹೇಳಿಕೊಳ್ಳಲೂಬಹುದು; ‘ನನಗೇಕೆ ಇಂಥ ಕಷ್ಟ ಕೊಟ್ಟೆ’ ಎಂದು ಹಲುಬಬಹುದು. ಇದು ಸಹ ಅಭಿವ್ಯಕ್ತಿಯ ಒಂದು ಕ್ರಮವೇ! ಆದ್ದರಿಂದ ಅಭಿವ್ಯಕ್ತಿಯು ಮನುಷ್ಯರ ಮೂಲಸ್ವಭಾವ. ಇದೊಂದು ಜೀವ ದೇವ ಸಂಧಿಸುವ ಸಹಯಾತ್ರೆ. ಎಲ್ಲಿಂದ ಎಲ್ಲಿಯವರೆಗೆ ಬೇಕಾದರೂ ಸಂಚರಿಸಬಲ್ಲ ದಿವಿನಾದ ವಾಹನ; ಸಂವಹನ, ಆರೋಗ್ಯಕರ ಚಟುವಟಿಕೆ. ಅಭಿವ್ಯಕ್ತಿಸಲು ಇಷ್ಟೇ ಓದಿರಬೇಕು; ಇಂತಹುದನ್ನೇ ಅಧ್ಯಯನ ಮಾಡಿರಬೇಕು ಎಂಬ ವಿಧಿನಿಯಮಗಳಿಲ್ಲ. ಏನೂ ಓದಿರದ ನಮ್ಮ ಜನಪದರ ಸಾಹಿತ್ಯವು ಅದ್ಭುತವಾಗಿ ರಚಿತಗೊಂಡಿಲ್ಲವೇ? ‘ಆಡಿ ಬಾ ನನ ಕಂದ ಅಂಗಾಲ ತೊಳೆದೇನು, ತೆಂಗೀನಕಾಯಿ ಎಳನೀರ ತಕ್ಕೊಂಡು, ನಿನ ಬಂಗಾರಮೋರೆ ತೊಳೆದೇನ’ ಎನ್ನುವಾಗ ರೂಪಕಭಾಷೆ ಅವತರಿಸಿದೆ. ‘ಸೊಸಿಯು ಬರುತಾಳಂತ ಖುಸಿ ಬಾಳ ಮನದಾಗ; ಸೊಸಿ ಬಂದು ಮಗನ ಕಸಗೊಂಡು ಬಾಳ್ವಾಗ ಮುಗಿಲಿಗೀ ಬಾಯಿ ತೆರೆದಾಳ’ ಎಂದು ಗೋಳಿಡುವಾಗ ಯಾತನೆಯ ಕರುಳು ಮಮ್ಮಲ ಮರುಗಿದೆ. ನಿರೀಕ್ಷೆಯೇ ನಿರಾಶೆಗೆ ಮೂಲ ಎನ್ನುವಂತೆ, ಅವಳಲ್ಲೀಗ ಹತಾಶೆ ತಲೆದೋರಿದೆ. ಇಂಥಲ್ಲಿ ಸೋಮೇಶ್ವರರು ಖಲೀಲ್ ಗಿಬ್ರಾನನ ಮಾತನ್ನು ನೆನಪಿಸಿಕೊಳ್ಳುವರು. ‘ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ; ಅವರು ಜಗತ್ತಿನ ಸ್ವತ್ತು. ಅವರು ನಿಮ್ಮೊಂದಿಗೆ ಇರಲು ಬಂದವರೇ ವಿನಾ ನಿಮ್ಮ ಆಜ್ಞಾನುವರ್ತಿಗಳಲ್ಲ; ಕೇವಲ ಗೆಳೆಯರು. ಸ್ವಲ್ಪ ಕಾಲವಿದ್ದು, ಸ್ವತಂತ್ರಗೊಂಡು ತಮಗೆ ಬೇಕಾದ ಕಡೆ ಹೋಗಬಲ್ಲವರು. ನಿಮ್ಮದೇನಿದ್ದರೂ ಕೇವಲ ಕರ್ತವ್ಯ; ಅದರಲ್ಲಿ ಪ್ರೀತಿಯಿರಲಿ.’ ಏಕೆಂದರೆ ಹಿರಿಯ ನಾಗರಿಕರ ಬಹುತೇಕ ಸಮಸ್ಯೆಯೇ ಈ ನಿಟ್ಟಿನದು. ಮಕ್ಕಳು ನಮ್ಮನ್ನು ಕಡೆಗಣಿಸಿದರೆಂಬ ನೋವು. ಸಾಹಿತ್ಯವು ಇಂಥಲ್ಲಿ ಉಪಶಮನವನ್ನೀವ ಔಷಧ. ಯಾರನ್ನೂ ದೂರದೆ, ಯಾರನ್ನೂ ದೂರವಿಡದೇ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಒಂದು ವಿಧ! ‘ಒಂದು ಪಕ್ಷ ಸಮಸ್ಯೆಗಳಿದ್ದರೂನು ಅದನ್ನು ಬರೆದು, ಒಮ್ಮೆ ಸಾದ್ಯಂತ ಓದಿ, ಹರಿದು ಬೆಂಕಿಗೆ ಹಾಕಿ; ಅದು ಉರಿಯುವಾಗ ನಿಮ್ಮ ಸಮಸ್ಯೆಯೂ ಹಾಗೆಯೇ ಬೆಂದು ಬೂದಿಯಾಗಿದೆಯೆಂದು ನಿಶ್ಚಿಂತರಾಗಿ’ ಎಂದು ಸೋಮೇಶ್ವರರು ಸಲಹೆ ನೀಡಿದರು. ಈ ಸಂದರ್ಭದಲ್ಲಿ ‘ನಾವು ಯಾರಿಗೂ ಹೊರೆಯಾಗಬಾರದು; ಅದಕಾಗಿ ಮುಮ್ಮೊದಲ ಸಂಪಾದನೆಯಿಂದಲೇ ಉಳಿತಾಯ ಮಾಡಬೇಕು’ ಎಂದು ಸಲಹೆ ನೀಡಿದರು.
ಆರ್ಥಿಕ ಸ್ವಾವಲಂಬನೆಯು ಹಲವು ಸಮಸ್ಯೆಗಳು ಹುಟ್ಟದಂತೆಯೇ ನೋಡಿಕೊಳ್ವುದು; ನಮಗೊಂದು ಭೀಮಬಲ ತಂದುಕೊಡುವುದು. ಸಾಹಿತ್ಯಾದಿ ಲಲಿತಕಲೆಗಳತ್ತ ಆಸ್ಥೆ ಆಸಕ್ತಿ ಹುಟ್ಟುವಂತೆ ಪ್ರೇರಕವಾಗುವುದು. ವಯಸಾದಂತೆಲ್ಲಾ ದೈಹಿಕವಾಗಿ ನಾವು ಕುಗ್ಗುವುದರಿಂದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಹಜ. ಅದರ ಜೊತೆಗೆ ನಾವು ಮಾನಸಿಕವಾಗಿಯೂ ಸಮಸ್ಯೆಗಳನ್ನು ತಂದೊಡ್ಡಿಕೊಳ್ಳುವುದರಿಂದ ಜೀವ ಜೀವನವು ದುರ್ಭರವಾಗುವುದು. ಇದಾಗದಂತೆ ನೋಡಿಕೊಳ್ಳಬೇಕು. ದೇಹವು ನಮ್ಮದಲ್ಲ; ಶರೀರವು ನಮ್ಮ ಪೂರ್ವಜರ ಮತ್ತು ತಾಯ್ತಂದೆಯರಿಂದ ಬಂದ ಬಳುವಳಿ. ವಂಶವಾಹಿ ಕಾಯಿಲೆಗಳಿಂದ ಬಳಲುವುದು ಸಾಮಾನ್ಯ. ಇದನ್ನೇ ನಮ್ಮ ಹಿಂದಿನವರು ಹಣೆಬರೆಹ ಎಂದದ್ದು. ಅದನ್ನು ನಾವೇ ಅನುಭವಿಸಬೇಕು. ಉಳಿದಂತೆ, ನಾವೇ ಕೈಯಾರೆ ದೇಹಾರೋಗ್ಯವನ್ನು ಕೆಡಿಸಿಕೊಳ್ಳಬಾರದು. ದುರಭ್ಯಾಸಗಳು ಮತ್ತು ದುಶ್ಚಟಗಳು ನಮ್ಮನ್ನು ಆಳದಂತೆ, ಅವಕ್ಕೆ ನಾವು ಅಡಿಯಾಳಾಗದಂತೆ ಎಚ್ಚರ ವಹಿಸಬೇಕು. ಅಂತಹುದರಲ್ಲಿ ಮನದ ಆರೋಗ್ಯವನ್ನೂ ಕೆಡಿಸಿಕೊಂಡರೆ ಅದಕ್ಕೆ ಸಂಪೂರ್ಣವಾಗಿ ನಾವೇ ಜವಾಬು-ದಾರರು. ಅದರಲ್ಲೂ ಐವತ್ತು ಕಳೆದ ಮೇಲೆ ನಾವು ಎಲ್ಲ ರೀತಿಯಲ್ಲೂ ಕುಗ್ಗುವುದಕ್ಕೆ ಶುರುವಿಟ್ಟುಕೊಳ್ಳುತ್ತೇವೆ. ಚಿಂತನೀಯ ಧಾಟಿ ಬದಲಾಗಿ ಹೆಚ್ಚು ಹೆಚ್ಚು ಭಾವನಾತ್ಮಕರಾಗುತ್ತೇವೆ. ಚಿಕ್ಕ ಪುಟ್ಟ ಭಾವನೆಗಳನ್ನು ನಿರ್ವಹಿಸಲೂ ವಿಫಲರಾಗಿ, ರಾದ್ಧಾಂತ ಮಾಡಿಕೊಳ್ಳುತ್ತೇವೆ. ಇಂಥ ಸಮಯದಲ್ಲೇ ಮಾನಸಿಕ ಆರೋಗ್ಯ ಬಹು ಮುಖ್ಯ. ಐಕ್ಯು ಇದ್ದಂತೆ, ಇಕ್ಯು ಎಂಬುದೂ ಇದೆ. ಇಂಟಲಿಜೆಂಟ್ ಕೋಟೆಂಟ್ (ಬುದ್ಧಿ ಸೂಚ್ಯಂಕ) ನಮ್ಮ ಬೆಳವೆಯಲ್ಲಿ. ಮಧ್ಯವಯಸ್ಸು ದಾಟುತ್ತಿದ್ದಂತೆ ಮುಖ್ಯವಾಗುವುದು ಇಕ್ಯು. (ಭಾವಸೂಚ್ಯಂಕ) ಭಾವನೆ ಮತ್ತು ಸಂವೇದನೆಗಳನ್ನು ಪಕ್ವ ಮನಸ್ಥಿತಿಯಿಂದ ನಿಭಾಯಿಸುವುದನ್ನು ಕಲಿಯುವುದೇ ಇದು. ಇಂಥಲ್ಲಿ ನೆರವಿಗೆ ಬರುವುದೇ ಸಾಹಿತ್ಯ ಮತ್ತು ಆಧ್ಯಾತ್ಮಿಕ ತತ್ತ್ವಜ್ಞಾನ. ನಾ ಸೋಮೇಶ್ವರರು ಈ ಆಯಾಮವನ್ನು ವಿವರಿಸುತ್ತಲೇ ಸಂಸ್ಕೃತದ ಮಂತ್ರಗಳನ್ನು ಹೇಳುವ ಕಲೆಯನ್ನು ರೂಢಿಗೆ ತಂದುಕೊಳ್ಳಬಹುದೆಂದು ಸಲಹಿಸಿದರು. ಅದಕ್ಕಾಗಿ ಸಂಸ್ಕೃತ ಭಾಷೆಯನ್ನು ಮೊದಲಿನಿಂದ ಕಲಿಯಬೇಕಾದ ಅಗತ್ಯವಿಲ್ಲ. ಶ್ಲೋಕ, ಮಂತ್ರಗಳನ್ನು ನಮಗೆ ಬೇಕಾದ ಲಿಪಿಯಲ್ಲೇ ಬರೆದುಕೊಂಡು, ಕಂಠಪಾಠ ಮಾಡಬಹುದು. ಸ್ಪಷ್ಟ ಉಚ್ಚಾರಣೆ, ಧ್ವನಿಯ ಏರಿಳಿತಗಳು, ಸ್ವರಧಾಟಿ, ಹೇಳುವ ಶೈಲಿ ಎಲ್ಲವೂ ನಮಗೆ ಹೊಸತನ್ನು ಪರಿಚಯಿಸುತ್ತವೆ. ಅರುವತ್ತಾಯಿತೆಂಬ ಹಾಗೂ ಕಾಲ ಮಿಂಚಿ ಹೋಯಿತೆಂಬ ಅಳಲಿಗೆ ಅರ್ಥವಿಲ್ಲ. ಏಕೆಂದರೆ ಹೊಸದನ್ನು ಕಲಿಯುವ ಅವಕಾಶ ಈಗಲೂ ಇದೆ. ನಮ್ಮ ನರಕೋಶಗಳು ಸಾಯದಂತೆ, ಅವು ಪುನಶ್ಚೇತನಗೊಳ್ಳಲು ಸಾಧ್ಯವಿದೆ. ಇಂಥದೊಂದು ಪ್ಲಾಸ್ಟಿಸಿಟಿ (ಸುರೂಪಿಕಾ ಗುಣ)ಯನ್ನು ಈ ವೈದ್ಯರು ವಿವರಿಸಿದರು. ಹೊಸ ಭಾಷೆ ಕಲಿಯುವಿಕೆ, ಹೊಸ ಓದು, ಒಂದು ಹೊಸ ಕಾದಂಬರಿ ಕುರಿತ ಸಂವಾದ ಇಂಥ ಸಾಹಿತ್ಯ ಸಹವಾಸದಿಂದ ಮಿದುಳಿನ ನರಕೋಶಗಳು ಚಟುವಟಿಕೆಯಿಂದ ಇರಲು ಸಹಕಾರಿ.
ಈ ದಿಸೆಯಲ್ಲಿ ನಾವು ಮುಖ್ಯವಾಗಿ ಗಮನಕ್ಕೆ ತಂದುಕೊಳ್ಳಬೇಕಾದುದು ಏನೆಂದರೆ, ನಮ್ಮದೇ ಆದ ಅಭಿವ್ಯಕ್ತಿ ಮಾಧ್ಯಮವೊಂದನ್ನು ಕಂಡುಕೊಳ್ಳುವುದು. ಅದು ಏನೇ ಇರಲಿ, ಚಿತ್ರಕಲೆ, ಸಂಗೀತ, ಸಾಹಿತ್ಯ ಏನೂ ಆಗಬಹುದು. ನಿದರ್ಶನಕ್ಕೆ ಹಳೆಯ ಕನ್ನಡ ಚಿತ್ರಗೀತೆಗಳನ್ನು ಸಂಕಲಿಸುವುದು ಮತ್ತು ಅವುಗಳ ಅಧ್ಯಯನ ಮಾಡುವುದು. ನಮ್ಮ ಸ್ನೇಹಿತರೊಬ್ಬರು ಹುಣಸೂರು ಕೃಷ್ಣಮೂರ್ತಿ ವಿರಚಿತ ಚಿತ್ರಗೀತೆಗಳನ್ನು ಕುರಿತು ಪಿಹೆಚ್‌ಡಿ ಸಂಶೋಧನಾಧ್ಯಯನ ಮಾಡಿ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ. ‘ಹಂಸಲೇಖ ಅವರ ಆಯ್ದ ಚಿತ್ರಗೀತೆಗಳಲ್ಲಿ ಉಪಮೆ ಮತ್ತು ರೂಪಕಾಲಂಕಾರ ಬಳಕೆಯಾಗುವ ಪರಿ’ ಎಂಬುದಾಗಿ ನಾನು ನನ್ನೋರ್ವ ವಿದ್ಯಾರ್ಥಿಗೆ ಪಿಹೆಚ್‌ಡಿ ವಿಷಯ ಕೊಟ್ಟಿದ್ದುಂಟು. ಅಂದರೆ ನಮಗೆ ಆಸಕ್ತಿ ಇರುವ ಕ್ಷೇತ್ರಗಳಲ್ಲೇ ಗೊತ್ತಿರದ ನೆಲೆ ನಿಲುವುಗಳಿರುತ್ತವೆ; ಅವುಗಳತ್ತ ಒಲವನ್ನು ಬೆಳೆಸಿಕೊಂಡರೆ ಸಾರ್ಥಕವಾಗುವುದು.
‘ಹೇಳದಿರೆ ತಾಳಲಾರನು ಕವಿಯು; ಹೇಳಿದರೆ ಹಾಳಾಗುವುದು ಅನುಭವದ ಸವಿಯು’ ಎಂಬ ಕವಿ ಕುವೆಂಪು ಅವರ ತಾಕಲಾಟಗಳು ನೇರವಾಗಿ ಅಭಿವ್ಯಕ್ತಿಗೆ ಸಂಬಂಧಪಟ್ಟಿದ್ದೇ ಆಗಿದೆ. ಬರೆಯಲೇಬೇಕಾದ ಒತ್ತಡಕ್ಕೆ ಸಿಕ್ಕಿಕೊಳ್ಳುವ ಬರೆಹಗಾರರು ತೀವ್ರತೆಯನ್ನು ಹತ್ತಿಕ್ಕಲಾಗದೇ ಬರೆಯಲು ಕೂರುತ್ತಾರೆ. ನಾನು ಬರೆದಿದ್ದನ್ನು ಯರ‍್ಯಾರು ಓದುತ್ತಾರೆಂಬ ಭವಿಷ್ಯದ ಕಲ್ಪನೆ ಮತ್ತು ಊಹೆಗಳನ್ನು ಮುಂದು ಮಾಡಿಕೊಂಡು ಚೌಕಾಸಿ ಶುರು ಮಾಡುತ್ತಾರೆ, ಬರೆಯಲೋ, ಬೇಡವೋ ಎಂದು! ಕವಿ ಕುವೆಂಪು ಅವರ ಮಾತಿನ ಉತ್ತರಾರ್ಧವು ಇದನ್ನು ಕುರಿತದ್ದಲ್ಲ. ಅದರದೇನಿದ್ದರೂ ಅನುಭವದ ಸವಿಯು ಹಾಳಾಗಬಾರದೆಂಬ ಉಮೇದು. ಎಷ್ಟೋ ಸಲ ನಾವು ನಮಗೆ ಮಹತ್ವದ್ದೆಂದು ಅನಿಸುವುದನ್ನು ಆತ್ಮೀಯರ ಬಳಿ ಹಂಚಿಕೊಳ್ಳುತ್ತೇವೆ. ಅವರ ಪ್ರತಿಕ್ರಿಯೆಯೇನಾದರೂ ನೀರಸವಾದರೆ ಪೆಚ್ಚಾಗುತ್ತೇವೆ. ಹೇಳದೆ ಸುಮ್ಮನಿರಬೇಕಾಗಿತ್ತೆಂಬ ಜ್ಞಾನೋದಯ ನಮ್ಮನ್ನು ಆ ಕ್ಷಣದಲ್ಲಿ ಆವರಿಸಿಕೊಳ್ಳುತ್ತದೆ. ‘ಲೋಕೋ ವಿಭಿನ್ನರುಚಿಃ’ ಎಂಬುದು ಈ ಕಾರಣಕ್ಕಾಗಿಯೇ. ನನಗೆ ಮುಖ್ಯವೆನಿಸುವುದು ಇನ್ನೊಬ್ಬರಿಗೆ ಅಮುಖ್ಯವಾಗಬಹುದು. ಅಂದರೆ ಇದು ಅಭಿವ್ಯಕ್ತಿಯ ನಂತರದ ಅದರ ಪರಿಣಾಮದ ಸ್ವರೂಪವನ್ನು ಕುರಿತಂಥದು. ಬರೆಯಲು ಕುಳಿತಾಗ ಇಂಥ ಪರಿಣಾಮವನ್ನು ಕುರಿತ ಆಲೋಚನೆಗಳು ನಮ್ಮ ಬರೆಹವನ್ನು ಹಾಳು ಮಾಡಬಹುದಾಗಿದೆ. ಭಾವತೀವ್ರತೆ ಇದ್ದಾಗ ಬರೆದು ಬಿಡಬೇಕು. ಓದುಗರು ಏನೆಂದುಕೊಳ್ಳುತ್ತಾರೋ ಎಂಬ ವಿಪರೀತ ಯೋಚನೆಗಳನ್ನು ಪಕ್ಕಕ್ಕಿಡಬೇಕು. ಬರೆಹದ ಹಿನ್ನೆಡೆಗೆ ಇರುವ ಇನ್ನೊಂದು ಅಡಚಣೆಯೆಂದರೆ ನಮ್ಮ ಬಗ್ಗೆ ನಾವೇ ಅತಿಯಾಗಿ ಕಟ್ಟಿಕೊಂಡ ಸ್ವಪ್ರತೀಕಗಳ ಭ್ರಮೆ! ನಾವು ಇಂಥವರು, ಅಂಥವರು. ನಾವು ಬರೆದದ್ದನ್ನು ಇನ್ನೊಬ್ಬರು ಓದಿ, ‘ಇದೇನು! ಹೀಗೆ ಬರೆದಿದ್ದಾರೆ? ಅವರ ವಿದ್ಯೆ, ಪದವಿ, ಅರ್ಹತೆ, ಅಂತಸ್ತುಗಳೇನು? ಬರೆದಿರುವುದೇನು?’ ಎಂದು ಒಂದು ಕಡೆ ನಮ್ಮನ್ನೂ ಇನ್ನೊಂದು ಕಡೆ ನಮ್ಮ ಬರೆಹವನ್ನೂ ತಕ್ಕಡಿಯಲಿಟ್ಟು ತೂಗಿ ಬಿಡುತ್ತಾರೆಂಬ ಅಳುಕು! ಇದು ಶುದ್ಧ ಮಾನಸಿಕ ವಿಭ್ರಮ. ಎಷ್ಟೋ ಮಂದಿ ಇನ್ನೂ ಯಾಕೆ ಬರೆಯಲು ಕುಳಿತಿಲ್ಲವೆಂದಾದರೆ ಇದೇ ಸಮಸ್ಯೆ. ನಮ್ಮ ಬಗ್ಗೆ ಕಟ್ಟಿಕೊಂಡ ಇಂಥ ಮತಿಭ್ರಾಂತಿಗಳಿಂದಾಗಿ ನಾವು ಬರೆಹಗಾರರಾಗದೇ ಕವಡೆ ಬಿಡುತ್ತಾ ಕುಳಿತಿದ್ದೇವೆ. ಬರೆಯುವುದೋ? ಬೇಡವೋ? ಬರೆದು ಬಯಲಾಗುವುದು ಏಕೆ? ಬರೆಯದೇ ನಮ್ಮ ಆಮೆಚಿಪ್ಪಿನೊಳಗೇ ಇದ್ದುಬಿಡೋಣವೆಂಬ ಆತ್ಮವಿಶ್ವಾಸಹೀನತೆ. ಈ ದೃಷ್ಟಿಯಿಂದ ನಾ ಸೋಮೇಶ್ವರರ ಮಾತುಗಳು ಬರೆಹಗಾರರಲ್ಲಿ ವಿಶ್ವಾಸ ಮತ್ತು ಭರವಸೆಗಳನ್ನು ತುಂಬುವುದರ ಕಡೆಗೆ ನಿಗಾ ವಹಿಸಿತು. ಸ್ವತಃ ಅವರೇ ಅತ್ಯುನ್ನತ ದರ್ಜೆಯ ಪ್ರೇರಕರು (ವೆರಿಗುಡ್ ಮೋಟಿವೇಟರ್). ಹಿಂಜರಿಕೆಯ ಮನೋಭಾವ ಇರುವ ಆದರೆ ಓದು ಬರೆಹದಲ್ಲಿ ತೀವ್ರತರ ತೊಡುಗುವಿಕೆ ಹೊಂದಿರುವ ಮಂದಿಗೆ ಅವರ ಮಾತುಗಳು ಶಕ್ತಿವರ್ಧಕ ಟಾನಿಕ್‌ನಂತಾದವು. ಒಂದು ಬಗೆಯ ಹುಮ್ಮಸ್ಸು ಎಲ್ಲರಲ್ಲೂ ಆವರಿಸಿತೆಂದರೆ ಉತ್ಪ್ರೇಕ್ಷೆಯಾಗಲಾರದು.
ಓದುವುದು ಮತ್ತು ಬರೆಯುವುದು – ಅದು ಏನೇ ಇರಲಿ ಇದೊಂದು ಮನಸ್ಸಮಾಧಾನದ ಅಭಿವ್ಯಕ್ತಿ ಮಾಧ್ಯಮ; ಪುಸ್ತಕ ಪ್ರಕಟಿಸಿದರೆ ಉದ್ಯಮ ಅಷ್ಟೇ! ಇಲ್ಲದಿರ್ದೊಡಂ ಪತ್ರಿಕೆಗಳಿಗೆ ಬರೆದು ಕಳಿಸಿದರೆ ಅಥವಾ ಪತ್ರಿಕೆ / ಮ್ಯಾಗಜೀನುಗಳಲ್ಲಿ ಪ್ರಕಟವಾಗುವ ಸಾಹಿತ್ಯಕ ಬರೆಹಗಳನ್ನು ಓದತೊಡಗಿದರೆ ನೆಮ್ಮದಿ ಮತ್ತು ನಿರಾಳ. ಬರೆದವರು ಯಾರು? ಬರೆದದ್ದು ಏನು? ಯಾವ ಪ್ರಕಾರ? ಎಂಬಿತ್ಯಾದಿ ವಿಷಯಗಳಿಗೆ ತೀರಾ ತಲೆ ಕೆಡಿಸಿಕೊಳ್ಳದೇ ಸ್ವಲ್ಪ ಹೊತ್ತು ಎಲ್ಲವನ್ನೂ ಮರೆತು ಓದತೊಡಗಿದರೆ ಅದರ ಆನಂದವೇ ಬೇರೆ. ಓದುವ ಸುಖವನ್ನು ಅರಿತ, ಅದರ ಆಸ್ವಾದನೆಯಲಿ ಎಲ್ಲ ಉಪದ್ವಾö್ಯಪಗಳನೂ ಮರೆತ ಮನಕೆಂದೂ ಮುಪ್ಪು ಬರದು. ಓದುವುದು ಸಹ ಅಭಿವ್ಯಕ್ತಿಯ ಇನ್ನೊಂದು ಆಯಾಮವಷ್ಟೇ. ನಾವು ಸುಮ್ಮನೆ ಮಗ್ಗಿ ಹೇಳುವಂತೆ ಓದುವುದಿಲ್ಲ; ನಮ್ಮೊಳಗೆ ಮಾತಾಡಿಕೊಳ್ಳುತ್ತಾ ಒಂದು ಊಹಾತ್ಮಕ ಜಗತ್ತಿನಲ್ಲಿ ಬರೆಹಗಾರರರೊಂದಿಗೆ ಸಂವಾದಿಸುತ್ತಾ ಇರುತ್ತೇವೆ. ಓದಿದ ಮೇಲೆ ನಮ್ಮ ಪ್ರಾಮಾಣಿಕ ಅನಿಸಿಕೆ, ಅಭಿಪ್ರಾಯಗಳನ್ನು ತಪ್ಪದೇ ಕಮೆಂಟಿಸಿದರೆ ನಾವೆಷ್ಟೋ ಹಗುರಾಗುತ್ತೇವೆ. ನಾವೇ ಲೇಖನ ಇತ್ಯಾದಿಗಳನ್ನು ಬರೆಯಬೇಕೆಂದಿಲ್ಲ; ಬೇರೆಯವರು ಬರೆದದ್ದನ್ನು ಓದುವುದು ಸಹ ಸಾಹಿತ್ಯದ ಸಹವಾಸವೇ. ಸಹವಾಸ ಎಂದರೆ ಜೊತೆಗಿರುವುದು ಎಂದರ್ಥ. ಈಗಂತೂ ಎಲ್ಲವೂ ಆನ್‌ಲೈನಾಗಿರುವ ಡಿಜಿಟಲ್ ಕ್ರಾಂತಿಯ ಕಾಲ. ಆನ್‌ಲೈನ್ ಸಾಹಿತ್ಯಕ ಮ್ಯಾಗಜೀನು / ಬ್ಲಾಗುಗಳು ಸಕ್ರಿಯವಾಗಿರುವ ದಿನಮಾನ. ಸದ್ಯಕ್ಕೆ ಕನ್ನಡದಲ್ಲಿ ಏಳೆಂಟು ಸಾಹಿತ್ಯಕ ಮ್ಯಾಗಜೀನುಗಳೂ ಐದಾರು ಸಾವಿರ ಬ್ಲಾಗುಗಳೂ ಇವೆ. ಪ್ರಕಟಿತ ಪುಸ್ತಕಗಳು ಆಫ್‌ಲೈನಾದರೆ ಇಂಥವು ಆನ್‌ಲೈನು. ಓದುತ್ತಾ, ಓದುತ್ತಾ ಹೋದಂತೆ ನಮಗೂ ಬರೆಯಬೇಕೆನಿಸುತ್ತದೆ. ಓದುವುದು ಒಂದು ಶಿಸ್ತಾದರೆ ಬರೆಯುವುದು ಇನ್ನೊಂದು ತೆರನಾದ ಶಿಸ್ತು. ಇವೆರಡೂ ಕುಶಲವಂತಿಕೆ; ಜೊತೆಗೆ ಆರೋಗ್ಯಕರ ಪ್ರವೃತ್ತಿ. ಯಾರು ಪುಸ್ತಕಸ್ನೇಹಿಯೋ ಅವರಿಗೆಂದೂ ಜೀವನದಲ್ಲಿ ಬೇಸರವಾಗದು; ಜೀವನ್ಮುಖಗೊಳ್ಳುವ ಸಾಧ್ಯತೆಗಳೇ ತುಂಬಾ. ಪಾಡನ್ನೂ ಹಾಡಾಗಿಸುವ ಬೆರಗಿನ ಲೋಕವೇ ಇದು. ಏಕಾಂಗಿತನವನ್ನು ಹೋಗಲಾಡಿಸಿ, ಏಕಾಂತವನ್ನು ಲೋಕಾಂತವಾಗಿಸಲು ಎಲ್ಲ ರೀತಿಯ ಓದು ಮತ್ತು ಬರೆಹಗಳು ಸಹಾಯ ಮಾಡುತ್ತವೆ; ಸಕಾರಾತ್ಮಕ ಚಿಂತನೆಯನ್ನು ರೂಢಿಸುತ್ತವೆ. ಅದಕಾಗಿಯೇ ಸೋಮೇಶ್ವರರು ಕನ್ನಡದ ಶ್ರೇಷ್ಠ ದರ್ಜೆಯ ನೂರು ಕಾದಂಬರಿಗಳನ್ನು ಪಟ್ಟಿ ಮಾಡಿಕೊಂಡು ಓದಲು ಶುರು ಹಚ್ಚಿಕೊಳ್ಳಿ ಎಂದು ಉಪದೇಶಿಸಿದರು. ಈಗಾಗಲೇ ಈ ರೀತಿಯ ಓದನ್ನು ಹಲವು ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸಂಘ ಸಂಸ್ಥೆಗಳು ನಡೆಸುತ್ತಿವೆ. ಕಾದಂಬರಿಯನ್ನು ಓದಿಕೊಂಡ ಹತ್ತು ಹಲವು ಸಾಹಿತ್ಯಾಸಕ್ತರು ಒಂದೆಡೆ ಸೇರಿ ಚರ್ಚೆ ನಡೆಸುವಂಥ ಸಂವಾದದ ಕಾರ್ಯಕ್ರಮಗಳು ಆಗಿಂದಾಗ್ಗ್ಯೆ ವರದಿಯಾಗುತ್ತಿರುತ್ತವೆ. ಅಂತಿಮವಾಗಿ ಇವೆಲ್ಲವೂ ನಮ್ಮ ಅಭಿವ್ಯಕ್ತಿಯ ಹಲವು ನಮೂನೆಗಳೇ ಆಗಿವೆ. ವಿಚಾರ ಸಂಕಿರಣ, ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ, ಸಾಹಿತ್ಯ ದಾಸೋಹದ ಮನೆ ಮನೆ ಕವಿಗೋಷ್ಠಿ, ಸಾಧಕರಿಗೆ ಗೌರವಾರ್ಪಣೆ ಇವೆಲ್ಲವೂ ನಮ್ಮ ದೇಹ ಮತ್ತು ಮನಸ್ಸುಗಳನ್ನು ಮೀರಿದ ಆತ್ಮಿಕ ಆರೋಗ್ಯವನ್ನು ಹೆಚ್ಚು ಮಾಡುವಂಥವೇ ಆಗಿವೆ. ಸಮಾನ ಮನಸ್ಕರು ಒಂದೆಡೆ ಸೇರಿ ಪರಸ್ಪರ ಕುಶಲ ವಿಚಾರಿಸಿ, ತಿಂಡಿ ಕಾಫಿ, ಮಧ್ಯಾಹ್ನದ ಲಘು ಉಪಾಹಾರಗಳನ್ನು ಸವಿದು, ವೇದಿಕೆಯಲ್ಲಿರುವ ಗಣ್ಯಮಂದಿಯ ಮಾತುಗಳನ್ನಾಲಿಸುತ್ತಾ, ಹೊಸ ಹುರುಪು ಮತ್ತು ಹೊಸ ಒನಪುಗಳಿಂದ ಹಿಂದಿರುಗಿದಾಗ ಅಭಿವ್ಯಕ್ತಿಯ ಕ್ರಮಶ್ರಮಗಳಿಗೊಂದು ಆವರ್ತ ಲಭಿಸುತ್ತದೆ; ಕ್ರಿಯೆಯೊಂದು ಸುತ್ತುವರೆದು ಪೂರ್ಣಗೊಳ್ಳುತ್ತದೆ. ಸಾಹಿತ್ಯದ ನಿಜಾಶಯವೇ ಇದು. ಸತ್ಯದ ಸಾಕ್ಷಾತ್ಕಾರವು ಸಂಶೋಧನೆಯ ಗುರಿಯಾದರೆ, ಸಾಹಿತ್ಯದ್ದು ಮುಖ್ಯವಾಗಿ ಆನಂದ ಮತ್ತು ಅರಿವು. ಸಮಾಜ ಪರಿವರ್ತನೆ, ವ್ಯಕ್ತಿತ್ವ ವಿಕಸನ, ದೀನದುರ್ಬಲರ ಉದ್ಧಾರ ಇವೆಲ್ಲವೂ ಆನಂತರದ್ದು. ಹಾಗಾಗಿ ಓದುವುದು ಮತ್ತು ಬರೆಯುವುದು ಇವೆರಡೂ ಪರಸ್ಪರ ಸಮಾಂತರ ರೇಖೆಗಳು. ಒಂದೇ ಸದಾಶಯ ಸದುದ್ದೇಶದ ಎರಡು ತುದಿಗಳು. ಇವನ್ನು ಸಂಧಿಸಿ, ಕೂಡಿಸಿದರೆ ವೃತ್ತವೊಂದು ನಿರ್ಮಾಣ. ಅದುವೇ ಸದಭಿರುಚಿಯ, ಸುಸಂಸ್ಕೃತ ಸಮಾಜ ನಿರ್ಮಾಣ. ಶ್ರೇಷ್ಠತೆಯ ವ್ಯಸನವನ್ನು ಬಿಟ್ಟು, ‘ಅವರಂತೆ, ಇವರಂತೆ ಖ್ಯಾತನಾಮರಂತೆ ನಾವು ಬರೆಯಲಾಗದು’ ಎಂಬ ಹಳಹಳಿಕೆಯನ್ನು ಮರೆತು, ನಮಗೆ ಸಾಧ್ಯವಾಗುವ ಅನುಭವ ಮತ್ತು ಕಲ್ಪನೆ ಬೆರೆಸಿದ ಬರೆಹಗಳನ್ನು ಪ್ರಾಮಾಣಿಕವಾಗಿ ದಾಖಲು ಮಾಡಿದ್ದೇ ಆದಲ್ಲಿ ಇಂದಲ್ಲ, ನಾಳೆ, ನಮ್ಮಿಂದಲೂ ಅಚ್ಚುಕಟ್ಟಾದ ಸಹೃದಯ ಸ್ಪಂದನೆ ದೊರಕುವ ಸಾಹಿತ್ಯ ಸೃಷ್ಟಿಯಾದೀತು. ಏಕೆಂದರೆ ಕವಿತೆ ಬರೆಯವುದು ಹೇಗೆ? ಕತೆಗಳನ್ನು ರಚಿಸುವುದು ಹೇಗೆ? ಎಂಬಂಥ ತರಬೇತಿ ಕೋರ್ಸುಗಳನ್ನು ನಡೆಸುವುದು ನಗೆಪಾಟಲು. ಕಾರಣವೆಂದರೆ ಹೇಳಿಕೊಟ್ಟು ಬರೆಸಲು ಸಾಧ್ಯವಿಲ್ಲ. ಬರೆಹವು ಪ್ರತಿಭಾಜನ್ಯ. ಗಿಡದಲ್ಲಿ ಹೂವರಳಿದಷ್ಟು ಸಹಜವಾಗಿದ್ದರೇನೇ ಸರಿ; ಬಲವಂತವಾಗಿ ಅರಳಿಸಲು ಹೋದರೆ ಅದು ಬಹುಬೇಗ ಮುದುಡುತ್ತದೆ ಅಥವಾ ನರಳುತ್ತದೆ. ಈಜು ಕಲಿತಂತೆ, ಅಡುಗೆ ಮಾಡಿದಂತೆ, ವಾಹನ ಚಲಾಯಿಸಿದಂತೆ ಬರೆಹವೂ ಕೌಶಲವೇ. ಸ್ವಾನುಭವದ ನೆಲೆಯಲ್ಲಿ ಅರಿತು ನುರಿತು ಹದವಾಗಿ ಹೊರಹೊಮ್ಮಬೇಕಷ್ಟೇ. ಯಾರೆಷ್ಟೇ ಹೇಳಿಕೊಟ್ಟರೂ ನಾವೇ ಈಜಬೇಕು ನಾವೇ ಅಡುಗೆ ಮಾಡಬೇಕು ಮತ್ತು ವಾಹನ ಚಲಾಯಿಸಬೇಕು. ಅದಕ್ಕೆ ಪರ್ಯಾಯವಿಲ್ಲ.
ಹಾಗಾಗಿಯೇ ಅಭಿವ್ಯಕ್ತಿಯು ಮತಿವಂತ ಮಾನವನ ಪ್ರಬಲ ಕೊಡುಕೊಳೆ. ಸದಭಿರುಚಿಯ ಅಭಿವ್ಯಕ್ತಿಯು ಪ್ರಯತ್ನಪೂರ್ವಕವಾಗಿ ಸಿದ್ಧಿಸಿಕೊಳ್ಳುವಂಥದು. ಅಂತಿಮವಾಗಿ ಇದು ನಮ್ಮ ಹೃದಯಾಂತರಾಳದಲ್ಲಿ ಮಡುಗಟ್ಟಿದ ಅಂತಃಕರಣದ ಮಹಾಪೂರ. ಅದು ಸದಾ ಮಾನವತೆಯಾಗಿ, ಜೀವಕಾರುಣ್ಯವಾಗಿ ಹರಿಯುತ್ತಿರಬೇಕು. ಸಾಹಿತ್ಯದ ಸಹವಾಸವು ಅದನ್ನು ಆಗುಮಾಡುವ ಅಂತರ್ಯಾತ್ರೆ. ಒಂಥರಾ ಸುಪ್ತಗುಪ್ತಗಾಮಿನಿ. ಅದರ ಸಾನ್ನಿಧ್ಯದಲ್ಲಿ ಮಿಂದು ಮಂದಹಾಸ ಬೀರೋಣ; ಪವಿತ್ರಜಲವ ಸೇವಿಸಿ ಕೃತಾರ್ಥರಾಗೋಣ. ಕೊನೆಯ ಮಾತೆಂದರೆ ಸಾಹಿತ್ಯದ ಸನ್ನಿಧಾನವು ಒಂಥರಾ ಮುಕ್ತಿ ಕರುಣಿಸುವ ಶಕ್ತಿಧಾಮ. ಪರಮಾತ್ಮನನ್ನು ದರ್ಶಿಸಲು ಇರುವ ಹಲವು ಮಾರ್ಗಗಳಲ್ಲಿ ಇದೂ ಒಂದು. ಅದಕಾಗಿಯೇ ಕೇಶಿರಾಜನಂಥ ವೈಯಾಕರಣಿಯು ‘…….ಪದದಿನರ್ಥಂ, ಅರ್ಥದೆ ತತ್ತ್ವಾಲೋಕಂ, ತತ್ತ್ವಾಲೋಕದಿನ್ ಆಕಾಂಕ್ಷಿಪ ಮುಕ್ತಿಯಕ್ಕುಂ, ಇದೆ ಬುಧರ್ಗೆ ಫಲಂ’ ಎಂದಿರುವುದು.

–ಡಾ. ಹೆಚ್ ಎನ್ ಮಂಜುರಾಜ್, ಮೈಸೂರು



ಅಂದು ಕಿವಿಗಳಲ್ಲಿ ಕೇಳಿದ, ಮನವನ್ನು ಚಿಂತನೆಗೆ ಹಚ್ವುವ ನುಡಿಗಳಿಗೆ ಅಕ್ಷರ ರೂಪವನ್ನು ನೀಡಿ ದಾಖಲೆಯನ್ನಾಗಿಸಿದ್ದೀರಿ, ಮರೆತಂತಾದಾಗ, ಈ ನಿಮ್ಮ ಲೇಖನವನ್ನು ಓದಿ ಮತ್ತೆ ಕಾರ್ಯತತ್ಪರರಾಗಲು ಪ್ರೇರಣೆ ಈ ನಿಮ್ಮ ಲೇಖನ.
ಇದು ಜೀವನಕ್ಕೊಂದು ದಾರಿದೀಪವೂ ಆಗುವುದು.
ಧನ್ಯವಾದಗಳು ಪದ್ಮಾ ಮೇಡಂ,
ನಿಮ್ಮ ಮತ್ತು ಆನಂದರ ಆ – ನಂದದ ನಂದಾಗೋಕುಲವೆನಿಸಿಹ ಮೈಸೂರು ಸಾಹಿತ್ಯ ದಾಸೋಹದ
ದಶಮಾನೋತ್ಸವ ದೇಗುಲದ ಗೋಪುರಕೆ ಸುವರ್ಣ ಕಲಶದಂತೆ ಸೋಮೇಶ್ವರರ ಮಾತು-ಕತೆ.
ಕಣ್ಣಾರೆ ನೋಡಿ, ಕಿವಿಯಾರೆ ಕೇಳಿ (ಹಿಂದೆಯೇ ಕುಳಿತು) ಪೂರ್ಣ ಉಪಸ್ಥಿತನಿದ್ದು ಪುನೀತನಾದೆ.
ಸುರಹೊನ್ನೆಯ ವಾರದ ಮಾಲಿಕೆ ಬರೆಹಕೊಂದು ವಸ್ತು ವಿಷಯ ಲಭಿಸಿತೆಂದು ಟೈಪಿಸಲು ಕುಳಿತೆ.
ಅಷ್ಟೇ.
ಹೆಚ್ಚೇನಿಲ್ಲ. ಸಾಹಿತ್ಯ ದಾಸೋಹದ ಯಶಸ್ವೀ ಪಯಣ ಹೀಗೆಯೇ ಸಾಗಲಿ, ಮುಂದೆ ಹೋಗಲಿ, ದೂರ ತೀರವ ಸೇರಲಿ
ಹಾಗೆಯೇ ಇದರ ಪ್ರೋತ್ಸಾಹಕರೂ ಕನ್ನಡ ನಾಡು ನುಡಿ ಸೇವೆಯಲಿ ಅಗ್ರಗಣ್ಯರೂ ಆದ ಇದೇ ಸುರಹೊನ್ನೆಯ
ಸಂಪಾದಕರಾದ ಹೇಮಮಾಲಾ ಮೇಡಂ ಅವರ ಪ್ರೀತಿ ಕಾಳಜಿಗಳು ಈ ಲೇಖನದ ನೇಪಥ್ಯದಲಿದ್ದು ಕಾಪಾಡಿದೆ.
ಕಾರ್ಯಕ್ರಮ ಮಾಡುವುದು ಎಷ್ಟು ಕಷ್ಟದ್ದು ಮತ್ತು ಪತ್ರಿಕೆ ನಡೆಸುವುದು ಎಷ್ಟು ನಷ್ಟದ್ದು ! ಎಂಬುದನ್ನು
ನಿಮ್ಮಿಬ್ಬರಿಂದ ಅರಿಯುವ ಎಲ್ಲರಿಗೂ ಶರಣು.
ಇಬ್ಬರಿಗೂ ಸಮಾನ ಮನಸ್ಕತೆಯಿದೆ : ನೀವಿಬ್ಬರೂ ಬರೆವ ಬಂಧುಗಳಿಗೆ ವೇದಿಕೆ ಆಗುವಿರಿ. ಇದಕಿಂತ ಹೆಚ್ಚಿನ
ಕನ್ನಡಸೇವೆ ಇನ್ನೊಂದಿಲ್ಲ. ಧನ್ಯವಾದಗಳು
ತುಂಬ ತುಂಬಾ ಧನ್ಯವಾದಗಳು ಸರ್.
ಬಹಳ ಚಂದದ ಬರಹ.
ಸಾಹಿತ್ಯ ದಾಸೋಹ ದ ದಶಮಾನೋತ್ಸವದ ಸಂದರ್ಭದಲ್ಲಿ.. ಡಾ..ನ.ಸೋಮೇಶ್ವರ ಅವರು..ಅಲ್ಲಿ ಮಾಡಿದ ಭಾಷಣ..ಮಂಜುಸಾರ್ ಲೇಖನ ದಲ್ಲಿ ಚೆನ್ನಾಗಿ ಅರ್ಥವಾಯಿತು..ಅದಕ್ಕಾಗಿ ಅವರಿಗೆ ಶರಣು.