ಪ್ರವಾಸ

ದೇವರ ದ್ವೀಪ ಬಾಲಿ : ಪುಟ-7

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಬಾಲಿಯ ಸಾಂಪ್ರದಾಯಿಕ ಕೆಚಕ್ ನೃತ್ಯ

ಇಂಡೋನೇಶ್ಯಾ ಬಾಲಿ ದ್ವೀಪದಲ್ಲಿ ನಾವು ಉಳಕೊಂಡಿದ್ದ ಉಬೂದ್ ಎಂಬಲ್ಲಿ ಬಾಲಿಯ ಮುಖ್ಯ ಸಾಂಪ್ರದಾಯಿಕ ನೃತ್ಯಪ್ರಕಾರವಾದ ‘ಕೆಚಕ್ ಡ್ಯಾನ್ಸ್ ‘ ಕಾರ್ಯಕ್ರಮವನ್ನು ವೀಕ್ಷಿಸುವ ಅವಕಾಶ ಲಭಿಸಿತು. ಬಾಲಿಯಲ್ಲಿ ಕೆಲವು ಕಡೆ ಈ ಪ್ರದರ್ಶನವಿರುತ್ತದೆ . ಸಂಜೆ ಏಳು ಗಂಟೆಗೆ ತೆರೆದ ರಂಗಮಂದಿರದಲ್ಲಿ ಪ್ರಸ್ತುತಪಡಿಸುವ ಈ ಕಾರ್ಯಕ್ರಮವನ್ನು ಶುಲ್ಕ ಕೊಟ್ಟು ವೀಕ್ಷಿಸಬೇಕಾಗುತ್ತದೆ. ರಾಮಾಯಣದ ಕಥಾನಕವನ್ನು ತಮ್ಮದೇ ಶೈಲಿಯಲ್ಲಿ ಪ್ರಸ್ತುತ ಪಡಿಸುವ ಈ ಕಲಾ ಪ್ರಕಾರವನ್ನು 1930 ರ ದಶಕದಲ್ಲಿ ಅಭಿವೃದ್ಧಿಪಡಿಸಲಾಯಿತು. ಇದೊಂದು ರೀತಿಯ ನೃತ್ಯ ರೂಪಕದಂತೆ ಇದ್ದು, ಯಾವುದೇ ವಾದ್ಯ ಸಂಗೀತ, ಹಿಮ್ಮೇಳ ಹಾಗೂ ವಿಶೇಷ ಧ್ವನಿ ಬೆಳಕಿನ ವ್ಯವಸ್ತೆಯನ್ನು ಹೊಂದಿಲ್ಲ. ಮಾನವನ ಧ್ವನಿಯ ಕೋರಸ್ ಒಂದೇ ಇಲ್ಲಿಯ ಹಿಮ್ಮೇಳ. ಕೆಚಕ್ ನೃತ್ಯವು ದೇವಾಲಯದ ಧಾರ್ಮಿಕ ರೂಪವಾಗಿದ್ದರೂ, ಇತ್ತೀಚೆಗೆ ಪ್ರವಾಸಿಗರ ಆಕರ್ಷಣೆಯಾಗಿ ಸಾಂಸ್ಕೃತಿಕ-ಪ್ರದರ್ಶನವಾಗಿ ರೂಪುಗೊಂಡಿದೆ.

ಕಾರ್ಯಕ್ರಮದ ಆರಂಭದಲ್ಲಿ, ವೇದಿಕೆಯಲ್ಲಿ ಇರಿಸಲಾದ ಆರು ಅಡಿ ಇರಬಹುದಾದ ದೀಪದ ಕಂಭದಲ್ಲಿ ಅಳವಡಿಸಲಾದ ದೀಪಗಳನ್ನು ಉರಿಸುತ್ತಾರೆ. ಕಪ್ಪು-ಬಿಳುಪು ಚೌಕಳಿ ವಿನ್ಯಾಸದ ಲುಂಗಿಯಂತಹ ‘ಸಾರಂಗೊ’ ಎಂಬ ಉಡುಪನ್ನು ತೊಟ್ಟ 30 ಕ್ಕೂ ಹೆಚ್ಚು ಪುರುಷ ಕಲಾವಿದರು ‘ ಚಕ್ ಚಕ್ ಚಕ್ ಚಕ್ ಚಕ್….ಕಕ್ .ಚು ..ಕೆಹ್ ..’ ಎಂಬಂತೆ ನಮಗೆ ಕೇಳಿಸುವ ಶಬ್ದಗಳನ್ನು ವಿವಿಧ ಲಯದಲ್ಲಿ , ವಿಭಿನ್ನ ಆವರ್ತದಲ್ಲಿ ಹೇಳುತ್ತಾ ವೇದಿಕೆಗೆ ಧಾವಿಸಿ ಬಂದು ಪ್ರೇಕ್ಷಕರಿಗೆ ಬೆನ್ನು ಹಾಕಿ ಅರ್ಧ ವೃತ್ತಾಕಾರದಲ್ಲಿ ಕುಳಿತುಕೊಳ್ಳುತ್ತಾರೆ. ಈ ಕಲಾವಿದರ ಸೊಂಟದ ಮೇಲ್ಭಾಗ ಬರಿಮೈ ಆಗಿದು, ಅವರ ಆವೇಶಪೂರ್ಣ ಆಂಗಿಕ ಅಭಿನಯದಲ್ಲಿ ಸ್ನಾಯುಗಳು ಹುರಿಗೊಳ್ಳುವುದು ಕಾಣುತ್ತದೆ. ಸುಮಾರು ಒಂದೂವರೆ ಗಂಟೆಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಸಹಕಲಾವಿದರು ಆಗಾಗ ತಮ್ಮ ಕೈಯೆತ್ತುವುದು, ವೃತ್ತಾಕಾರವಾಗಿ ಕುಳಿತುಕೊಳ್ಳುವುದು, ಪರಸ್ಪರ ಕೈಜೋಡಿಸುವುದು ಹೀಗೆ ಮಾಡುತ್ತಾ ಇರುತ್ತಾರೆ. ಭಾಷೆ ಅರ್ಥವಾಗದ ಕಾರಣ ಇವರ ‘ಚಕ್ ..ಚಕ್ ‘ ಉದ್ಗಾರದ ಲಯ ಮಾತ್ರ ನಮ್ಮ ಅರಿವಿನ ಪರಿಧಿಯಲ್ಲಿ ಅರ್ಥವಾಗುತ್ತದೆ. ಇದು ಮುಖ್ಯ ಕಲಾವಿದರಿಗೆ ಕೊಡುವ ಸಂದೇಶವೂ ಅಗಿರುತ್ತದೆಯೆಂತೆ. ಇದರಲ್ಲಿ ಬಾಲಿನೀಸ್ ನೃತ್ಯದ ಸನ್ನೆಗಳು, ದೇವಾವೇಶ ಸನ್ನಿವೇಶಗಳೂ ಇವೆ.

ಹೀಗೆ ಸಹಕಲಾವಿದರ ಕೋರಸ್ ಮುಂದುವರಿಯುತ್ತಿದ್ದಂತೆ, ರಂಗಸ್ಥಳದಲ್ಲಿ ಮೊದಲಿಗೆ ರಾಮ ಹಾಗೂ ಸೀತೆಯ ಪ್ರವೇಶವಾಗುತ್ತದೆ. ಚಿನ್ನದ ಜಿಂಕೆ ತರಲು ಹೋದ ರಾಮ, ಲಕ್ಷ್ಮಣ ರೇಖೆ ಎಳೆದು ಅಣ್ಣನ ಬಳಿ ಹೋದ ಸನ್ನಿವೇಶ, ಸೀತೆಯನ್ನು ಒಯ್ಯುವ ರಾವಣ, ಅಲ್ಲಿ ದು:ಖಿತೆಯಾಗಿರುವ ಸೀತೆಯ ಜೊತೆಗೆ ಸಂಭಾಷಿಸುವ ರಾವಣನ ಸೊಸೆ ತ್ರಿಜಟಾ, ಲಂಕೆಗೆ ಹನುಮನ ಪ್ರವೇಶ, ಸೀತೆಗೆ ಕೊಡುವ ಉಂಗುರ, ರಾವಣನ ಮಗ ಮೇಘನಾದ, ತದನಂತರ ರಾಮ,ಸುಗ್ರೀವರ ಆಗಮನ, ಮೇಘನಾದನ ಸಂಹಾರ,ಮುಂದೆ ರಾವಣ ವಧೆ, ರಾಮ-ಸೀತೆಯರ ಭೇಟಿ, ಸುಖಾಂತ್ಯ ಇಷ್ಟನ್ನೂ ಆಂಗಿಕಾಭಿನಯದ ಮೂಲಕ ಬಹಳ ಚೆನ್ನಾಗಿ ಪ್ರಸ್ತುತಪಡಿಸುತ್ತಾರೆ.

ನಮಗೆ ರಾಮಾಯಣದ ಕಥಾನಕ ಮೊದಲೇ ಸುಮಾರಾಗಿ ಗೊತ್ತಿರುವುದರಿಂದ ಕಚಕ್ ನೃತ್ಯವನ್ನು ನಮಗೆ ಅರಿವಿನ ‘ರಾಮಾಯಣ’ಕ್ಕೆ ತಕ್ಕಂತೆ ಅನ್ವಯಿಸಿಕೊಂಡೆವು. ಹಾಗಾಗಿ, ನಮಗೆ ರಾಮ, ಸೀತೆ, ಲಕ್ಷ್ಮಣ ಪಾತ್ರಗಳ ಸಂವಹನ ಮತ್ತು ನೃತ್ಯ ಸೌಮ್ಯ ಗತಿಯ ಸಮುದ್ರದ ಅಲೆಗಳ ಚಲನೆಯಂತೆ ಭಾಸವಾಯಿತು. ರಾವಣನ ವೇಷ ಯಾಕೋ ನಾವು ನಿರೀಕ್ಷಿಸಿದಷ್ಟು ಉಗ್ರ ಎನಿಸಲಿಲ್ಲ. ಆದರೆ ಕೋರೆದಾಡೆಗಳಿಂದ ಅಲಂಕೃತನಾಗಿ, ಉಗ್ರ ಸ್ವರೂಪಿಯಂತೆ ಕಾಣಿಸುತ್ತಿದ್ದ ಹನುಮಾನ್ ಮಾತ್ರ ನಾವು ಊಹಿಸಿದ ‘ಲಂಕೆ ಸುಟ್ಟ ಕೀಟಲೆ ಕಪಿ’ಯ ತರ ಅನಿಸಲಿಲ್ಲ! ನಮಗೆ ಉಬ್ಬಿದ ಗಲ್ಲದ ಶ್ರೀರಾಮ ದೂತನ ಕಲ್ಪನೆಯೇ ಹಿತವೆನಿಸುತ್ತದೆ! ನಮಗೆ ಗೊತ್ತಿರುವ ರಾಮಾಯಣದ ಯಥಾ ಪ್ರಕಾರದ ಅನುಕ್ರಮಣಿಕೆ ಅಲ್ಲಿ ಇದ್ದ ಹಾಗಿರಲಿಲ್ಲ. ಕೆಲವು ಪಾತ್ರಗಳು ಇರಲಿಲ್ಲ, ಅಥವಾ ನಮಗೆ ಗೊತ್ತಾಗಲಿಲ್ಲ.

ನೃತ್ಯದ ಕೊನೆಯ ಭಾಗದಲ್ಲಿ ನಾಟಕೀಯತೆಯ ರೂಪದ ಬೆಂಕಿಯೊಂದಿಗೆ ಚೆಲ್ಲಾಟದ ‘ಸೆಂಗ್ಯಾಂಗ್ ದೆದರಿ’ ನೃತ್ಯವಿತ್ತು. ತೆಂಗಿನ ಚಿಪ್ಪುಗಳಿಗೆ ಬೆಂಕಿ ಹಾಕಿ, ಅದರ ಜ್ವಾಲೆಯ ಮಧ್ಯೆಯೇ ಅದನ್ನು ಬರೀಕಾಲಿನಿಂದ ಕೊಡವಿ ಮಾಡುವ ನೃತ್ಯ ನೋಡುವಾಗ ಮೈ ಜುಮ್ಮೆನ್ನುತ್ತದೆ. ಸೆಂಗ್ಯಾಂಗ್ ಎಂದರೆ ದುಷ್ಟ ಶಕ್ತಿ, ದೆದರಿ ಎಂದರೆ ದೇವತೆ ಎಂದರ್ಥ. ದುಷ್ಟ ಶಕ್ತಿಯೊಡನೆ ಹೋರಾಡಿ ಶಿಷ್ಟರನ್ನು ರಕ್ಷಿಸುವ ಬಗ್ಗೆ ರೂಪಿಸಲಾದ ನೃತ್ಯಪ್ರಕಾರವಿದು.

ಒಟ್ಟಿನಲ್ಲಿ , ಇನ್ನೊಂದು ದೇಶದ ಸಂಪ್ರದಾಯ, ಕಲೆ ಮೊದಲಾದುವುಗಳನ್ನು ಗಮನಿಸುವುದು ಖುಷಿ ಕೊಡುವ ವಿಚಾರ. ಬಾಲಿಯ ‘ಕಚಕ್ ನೃತ್ಯ’ ಚೆನ್ನಾಗಿಯೇ ಇತ್ತು. ಸಹಕಲಾವಿದರ ‘ಕಚ ..ಕಚಕ್ ‘ ಕೋರಸ್ ಸ್ವಲ್ಪ ಕಡಿಮೆಯಿದ್ದರೆ ಇನ್ನೂ ಸೊಗಸಾಗಿ ಇರುತ್ತಿತ್ತು ಹಾಗೂ ವೇದಿಕೆಯ ತುಂಬಾ ಸಹಕಲಾವಿದರೇ ತುಂಬಿಕೊಂಡಂತಾಗಿ, ಮುಖ್ಯ ಪಾತ್ರಧಾರಿಗಳಿಗೆ ಸ್ಥಳಾವಕಾಶ ಕಡಿಮೆ ಎಂಬಂತೆ ನಮಗೆ ಅನಿಸಿತ್ತು. ಇದು ನಮ್ಮ ಅಭಿಪ್ರಾಯ ಅಷ್ಟೆ. ಬಾಲಿಯವರಿಗೆ ‘ಕಚಕ್ ನೃತ್ಯ’ ಹೆಮ್ಮೆಯ ವಿಶ್ವಮಾನ್ಯತೆ ಪಡೆದ ಕಲೆ. ಲೋಕೋ ಭಿನ್ನ ರುಚಿ:!

ಹೇಮಮಾಲಾ.ಬಿ. ಮೈಸೂರು

(ಮುಂದುವರಿಯುವುದು)
ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ: https://surahonne.com/?p=43962

5 Comments on “ದೇವರ ದ್ವೀಪ ಬಾಲಿ : ಪುಟ-7

  1. ಪ್ರವಾಸ ಎಂದಿನಂತೆ ಚೆನ್ನ ಈಸಾರಿಯ ಬರೆಹದಲ್ಲಿ ಬಾಲಿಯಲ್ಲಿ ನೃತ್ಯ ದ ಬಗ್ಗೆ ವಿವರಣಾ ತ್ಮಕ ಲೇಖನ ಚಂದವಾಗಿ ಚಿತ್ರ ಸಮೇತ ಮೂಡಿಬಂದಿದೆ.. ವಂದನೆಗಳು ಗೆಳತಿ.. ಹೇಮಾ

  2. ವಿಶೇಷವಾದ, ವಿಚಿತ್ರವಾದ ಕೆಚಕ್ ನೃತ್ಯದ ವರ್ಣನೆ, ಪೂರ್ತಿ ರಾಮಾಯಣದ ಆಂಗಿಕಾಭಿನಯದ ನಾಟಕ ಪ್ರದರ್ಶನ, ಮೈ ಜುಮ್ಮೆನಿಸುವ, ಬೆಂಕಿಯೊಂದಿಗೆ ಚೆಲ್ಲಾಟದ ಸೆಂಗ್ಯಾಂಗ್ ನೃತ್ಯ…
    ಬಾಲಿಯಲ್ಲಿನ ಪ್ರದರ್ಶನಗಳು ಕಣ್ಮುಂದೆ ನಲಿದವು!!

  3. ಸುಂದರವಾದ ಪ್ರವಾಸ ಕಥನ. ಬಾಲಿಯ ಸಂಸ್ಕೃತಿ, ಸಾಂಸ್ಕೃತಿಕ ಚಟುವಟಿಕೆಗಳು ಬಹಳ ಆಕರ್ಷಕವಾಗಿವೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *