ಮಂಗಳಮ್ಮ ಬರುವುದಿಲ್ಲ!

Share Button

ಮಂಗಳಮ್ಮ ಎಂಬ ಮಂಗಳಮಯ ಹೆಂಗಸನ್ನು ನಾನು ನೋಡಿದ್ದು ನಮ್ಮ ಪಕ್ಕದ ಅಪಾರ್ಟ್‌ಮೆಂಟಿಗೆ ನನ್ನ ಪರಿಚಯದವರೊಬ್ಬರು ಮನೆಮಾಡಿಕೊಂಡು ಬಂದಾಗ. ಮಂಗಳಮ್ಮ ಮಹಾ ನಗುವಿನ ಗಣಿ. ಮುಖದಲ್ಲೊಂದು ಎಳೆ ನಗುವಿದ್ದೇ ಇರುವ ಹಸನ್ಮುಖಿ. ಗುಂಗುರುಕೂದಲು, ನಿತ್ಯ ತಲೆಗೆ ಸ್ನಾನ. ಎಣ್ಣೆ ಎಣ್ಣೆ ಕೂದಲಿನ ಮಿನುಗು ದೊಡ್ಡ ಕುಂಕುಮ ಹರಿಸಿನ ತೊಡೆದ ಕಪೋಲಗಳು, ಎತ್ತರದ ನಿಲುವು ಹೀಗೆ ಮಂಗಳಮ್ಮ ಆಕರ್ಷಕ ವ್ಯಕ್ತಿತ್ವವುಳ್ಳ ಹೆಂಗಸು. ಅವರ ಮನೆ ಮುಂದೆ ಹಾದುಹೋಗುವ ಎಲ್ಲರನ್ನೂ ಏನಾದರೊಂದು ಮಾತಾಡಿಸಿ ಮಾತಿಗೆ ಪೀಠಿಕೆ ಹಾಕಿ ಅದನ್ನೇ ಮುಂದುವರೆಸಿಕೊಂಡು ಹೋಗುತ್ತಿದ್ದರು. ಹಾಗೆಂದು ಬಾಯಿಬಡುಕಿಯಲ್ಲ. ಹಿತಮಿತ ಮಾತು, ಎಲ್ಲರ ಹೆಸರನ್ನೂ ತಿಳಿದುಕೊಂಡು ಅವರ ಕಷ್ಟಸುಖಗಳನ್ನರಿಯುವ ಸ್ನೇಹಜೀವಿ.

ಮಂಗಳಮ್ಮ ಎಲ್ಲರಿಗೂ ಬೇಕಾದ ವಯೋವೃದ್ಧರು. ನಗುನಗುತ್ತಾ ಎಲ್ಲರನ್ನೂ ಮಾತಾಡಿಸಿಕೊಂಡು, ಅಪಾರ್ಟ್‌ಮೆಂಟಿನವರ ಕಷ್ಟಸುಖಗಳನ್ನು ವಿಚಾರಿಸುತ್ತಾ, ಸಾಧ್ಯವಾದರೆ ಪರಿಹಾರ ಸೂಚಿಸುತ್ತಾ, ಅಥವಾ ತಾವೇ ಮುಂದೆ ನಿಂತು ಸಮಸ್ಯೆಗಳನ್ನು ಬಗೆಹರಿಸುವ ಮಹಿಳೆ. ಮಕ್ಕಳಿಬ್ಬರೂ ಮಿಲಿಟರಿ ಸೇರಿ ದೇಶಸೇವೆ ಮಾಡುವಂತೆ ಪ್ರೇರೇಪಿಸಿದ ಮಹಾತಾಯಿ. ಮೈಸೂರಿನಲ್ಲಿ ಮಂಗಳಮ್ಮ ಮತ್ತವರ ಯಜಮಾನರು ಚಿಕ್ಕದೊಂದು ಸ್ವಂತ ಮನೆಯಲ್ಲಿ ವಾಸವಾಗಿದ್ದರು.

ಮಂಗಳಮ್ಮನಿಗೆ ಮದುವೆಯಾದಾಗ ಇನ್ನೂ ಬಾಲ್ಯವೇ ಮಾಸದಂತ ಹದಿನಾಲ್ಕು ವರ್ಷ. ಇಬ್ಬರಿಗೂ ವಯಸ್ಸಿನ ಅಂತರ ಬಹಳವೆನ್ನುವಷ್ಟೇ ಇತ್ತು. ಒಂದುದಿನ ರಾಯರು ಇದ್ದಕ್ಕಿದ್ದಹಾಗೆ ಆಯಾಸಗೊಂಡು ಮಲಗಿಬಿಟ್ಟರು. ಜ್ವರ, ಕೆಮ್ಮು, ಹೊಟ್ಟೆಯ ತೊಂದರೆ..ಹೀಗೆ ಏನೇನೋ ಆರೋಗ್ಯದ ಸಮಸ್ಯೆಗಳು ಪೀಡಿಸತೊಡಗಿ, ಕಡೆಗೆ ಆಸ್ಪತ್ರೆಯಲ್ಲಿ ಅವರಿಗೆ ಕರುಳಿನ ಕ್ಯಾನ್ಸರೆಂಬುದು ದೃಢವಾಯಿತು. ಮಂಗಳಮ್ಮನ ನಗು ಮಾಸಿಹೋಗಿ, ಕಂಗಾಲಾಗಿ ಮಂಕುಹಿಡಿದು ಕುಳಿತುಬಿಟ್ಟರು. ಇನ್ನೊಬ್ಬರ ಕಣ್ಣೊರೆಸಿ ಗೊತ್ತಿದ್ದ ಮಂಗಳಮ್ಮನಿಗೆ, ತನ್ನ ದುಃಖವನ್ನು ಯಾರ ಮುಂದೂ ತೋಡಿಕೊಳ್ಳಲು ಸಾಧ್ಯವಾಗಲಿಲ್ಲ. ತಡೆಯಲಾರದೆ ಅವರ ಆತ್ಮೀಯರು ಒತ್ತಾಯಿಸಿ ಕೇಳಿದ್ದಕ್ಕೆ, ಕಡೆಗೆ ತನ್ನೆಜಮಾನರಿಗೆ ಕರುಳಿನ ಕ್ಯಾನ್ಸರ್ ಆಗಿರುವ ಬಗ್ಗೆ ಬಾಯಿಬಿಟ್ಟು ಗೊಳೋ ಎಂದು ಅತ್ತರು. ಯಾವತ್ತೂ ನಗುವನ್ನೇ ನೋಡಿದ್ದ ಅವರ ಪರಿಚಿತರು ಅವರ ಅಳುವನ್ನು ಇದೇ ಮೊದಲು ಕಂಡಿದ್ದು! ದೂರದ ಕಲ್ಕತ್ತಾದಲ್ಲಿ ಮಕ್ಕಳಿದ್ದರು. ಮೈಸೂರಿಗೆ ಅವರು ಬರಲು ಸಾಧ್ಯವಿಲ್ಲವಾಗಿ, ವಿಧಿಯಿಲ್ಲದೆ ಡಿಸೆಂಬರಿನಲ್ಲಿ ಯಜಮಾನರನ್ನು ಕರೆದುಕೊಂಡು ಕಲ್ಕತ್ತಾಗೆ ಪ್ರಯಾಣ ಬೆಳೆಸಿದರು. ಅಕ್ಕಪಕ್ಕದವರಿಗೆ ಹೇಳಿ, ನಂಬಿಕಸ್ಥರೊಬ್ಬರಿಗೆ ಮನೆಯ ಬೀಗದ ಎಸಳನ್ನು ಕೊಟ್ಟು ಬಳಸಿಕೊಳ್ಳುವಂತೆ ಹೇಳಿ, ಹೊರಟುಹೋದರು.

ಆಗಾಗ ಅವರಿಗೆ ಫೋನ್ ಮಾಡಿ ವಿಚಾರಿಸಿಕೊಳ್ಳುತ್ತಿದ್ದ ಅವರ ಆತ್ಮೀಯ ಕಿರಿಯ ಸ್ನೇಹಿತೆ ಜ್ಯೋತಿಗೆ ಮೊನ್ನೆ ಫೋನ್ ಮಾಡಿದ್ದರಂತೆ. ಕರುಳಿನ ಶಸ್ತ್ರಚಿಕಿತ್ಸೆಯಾಗಬೇಕು. ಇವರಿಗೆ ಎಂಭತ್ತು ವರ್ಷವಲ್ಲಾ…..ತಡೆದುಕೊಳ್ಳಲು ಆಗುವುದಿಲ್ಲಾ..ಇದ್ದಷ್ಟು ದಿನ ಬದುಕಲಿ ಬಿಡಿ ಎಂದು ವೈದ್ಯರುಗಳು ಕೈಚೆಲ್ಲಿ ಕುಳಿತರಂತೆ. ಊಟವೂ ಏನೂ ಸೇರುತ್ತಿಲ್ಲವಂತೆ, ತುಂಬಾ ನಿಶ್ಯಕ್ತರಾಗಿದ್ದಾರೆ ಎಂದು ಜ್ಯೋತಿಯ ಬಳಿ ಹೇಳಿಕೊಂಡು ಕಣ್ಣೀರಿಟ್ಟರಂತೆ.

ಜ್ಯೋತಿಗೆ ಹೇಳಿ ಅವರ ಮನೆಯ ಬೀಗದ ಎಸಳನ್ನು ಮನೆಯಿರದವರಿಗೆ ಕೊಟ್ಟುಬಿಡಿ ಎಂದು ಕೊಡಿಸಿದ್ದಾರೆ. ಗಂಡಹೆಂಡತಿ, ಒಂದು ಮಗು, ಅತ್ತೆ ಮಾವರಿರುವ ಕುಟುಂಬವೊಂದು ಅವರ ಹೆಸರು ಹೇಳಿಕೊಂಡು ಈಗ ಮನೆಯಲ್ಲಿದ್ದಾರೆ. ಮಂಗಳಮ್ಮನ ಮುಖ ಕಣ್ಮುಂದೆ ಬಂದು ಜ್ಯೋತಿಗೆ ಕಣ್ತುಂಬಿ ಬರುತ್ತದೆ. ಅಗಲವಾದ ಕುಂಕುಮ, ಹರಡಿಕೊಂಡ ಗುಂಗುರುಕೂದಲು, ಕನ್ನಡಕದೊಳಗಿನಿಂದ ತೂರಿಬರುವ ಮಾತೃಹೃದಯದ ಕರುಣಾಪೂರಿತ ನೋಟ…..ಇಲ್ಲಿಗೆ ಮತ್ತೆ ಅವರು ಬರುವುದಿಲ್ಲ, ಬಂದರೂ ಯಜಮಾನರಿರುವುದಿಲ್ಲ! ಅಪಾರ್ಟ್‌ಮೆಂಟಿನಲ್ಲಿ ಎಲ್ಲರ ಬಾಯಲ್ಲೂ ಮಂಗಳಮ್ಮನ ಮಾತೇ!

`ಪಾಪ ಮಂಗಳಮ್ಮನಿಗೆ ಹೀಗಾಗಬಾರದಿತ್ತು.’ ಎಂದು ಒಬ್ಬರೆಂದರೆ, ಇನ್ನೊಬ್ಬರು,
`ಈ ಹಾಳು ಲಾಕ್ ಡೌನ್ ಇಲ್ಲದಿದ್ದಿದ್ದರೆ ಮಂಗಳಮ್ಮ ಇಲ್ಲಿಗೇ ಬಂದುಬಿಡಬಹುದಿತ್ತು. ಈಗ ನೋಡಿದ್ರೆ ಸೊಸೆ ಮಗನ ಹತ್ತಿರ ಸಿಕ್ಕಿಕೊಂಡರು.’
`ಇಲ್ಲಪ್ಪ, ಮಗಸೊಸೆ ಎಲ್ಲರೂ ತುಂಬ ಒಳ್ಳೆಯವರಂತೆ. ಚೆನ್ನಾಗಿ ನೋಡಿಕೊಳ್ತಾರಂತೆ. ಪಾಪ! ಖಾಯಿಲೆ ಮನುಷ್ಯ ಅವರ ತಂದೆ. ಅವರನ್ನೂ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುತ್ತಿದ್ದಾರಂತೆ.’
`ಹೌದು, ಜ್ಯೋತಿ ಫೋನ್ ಮಾಡಿದ್ದಳಂತೆ. ಜ್ಯೋತಿಗೆ ಅವ್ರೂ ಮಾಡ್ತಿರ್‍ತಾರಂತೆ. ಚೆನ್ನಾಗಿದ್ದಾರಂತೆ. ಆದರೇನು ಮಾಡೋದು? ಪಾಪ! ಅವರ ಯಜಮಾನರಿಗೆ ವಯಸ್ಸಾಗಿಬಿಟ್ಟಿದಿಯಲ್ಲಾ?’
`ನೋಡಿ, ಮಂಗಳಮ್ಮ ಏನೇ ಮಾಡಿದ್ದರೂ ಒಳ್ಳೆಯದೇ ಮಾಡ್ತಾರೆ ಅನ್ನೋದಕ್ಕೆ ಅವರ ಮನೇನಾ ಬಡವರೊಬ್ಬರು ಬದುಕಲು ಕೊಟ್ಟಿರೋದೇ ಸಾಕ್ಷಿ ಅಲ್ವಾ?’ ಮಂಗಳಮ್ಮನ ಬಗ್ಗೆ ಎಲ್ಲರ ಬಾಯಲ್ಲೂ ಒಳ್ಳೆಯ ಮಾತೇ ಹೊರತು, ಕೆಟ್ಟದೊಂದು ಶಬ್ಧವಿಲ್ಲ.
***
`ಜ್ಯೋತಿಗೆ ಫೋನ್ ಮಾಡಿದ್ದರಂತೆ ನೆನ್ನೆ. ಪಾಪ ಮಂಗಳಮ್ಮನ ಯಜಮಾನರು ತೀರಿಕೊಂಡರಂತೆ.’
`ಅಯ್ಯೋ..ಹೌದೇ? ಬಾಳಿ ಬದುಕಿದ ಮನೆ. ಇಲ್ಲಿಗೇನಾದ್ರೂ ತರ್‍ತಾರಂತಾ?’
`ಇಲ್ವಂತೆ. ಲಾಕ್ ಡೌನ್ ಅಲ್ವೇನ್ರಿ? ಎಲ್ಲಿ ತರಕ್ಕಾಗುತ್ತೆ. ನೀವೊಬ್ರು!’
ಮಂಗಳಮ್ಮನ ಬಗ್ಗೆ ಎಷ್ಟೆಲ್ಲ ಒಳ್ಳೆಯ ಮಾತಾಡಿದರೂ ಅವರನ್ನು ನಾವಿನ್ನು ನೋಡುವುದು ಕನಸಿನ ಮಾತೆ ಎಂಬ ಪರಿತಾಪ ಎಲ್ಲರ ಮುಖದಲ್ಲೂ.
ಜ್ಯೋತಿ ಮಂಗಳಮ್ಮ ಫೋನಿನಲ್ಲಿ ಅಳುತ್ತಾ ಮಾತಾಡಿದ್ದು ಅವಳ ಮನಸ್ಸನ್ನು ಘಾಸಿಗೊಳಿಸಿತ್ತು.ಇಂದು ಒಂದನೇ ಜುಲೈ ಎರಡುಸಾವಿರದ ಇಪ್ಪತ್ತರಂದು ಕರೆ ಮಾಡಿದ್ದರು.

`ಅವರು ಇವತ್ತು ಬೆಳಗ್ಗೆ ಹೋಗಿಬಿಟ್ಟರು ಜ್ಯೋತಿ. ಎಲ್ಲರೂ ಮನೆಯಲ್ಲೇ ಇದ್ದೆವು. ಎಲ್ಲರ ಕಣ್ಣಮುಂದೆ ನಗುನಗುತ್ತಲೇ, ನನ್ನ ಬಿಟ್ಟು ಹೊರಟುಹೋದರು. ಈ ಕೊರೋನಾ ಕರ್ಮಕಾಂಡದಲ್ಲಿ ಅವರ ಹುಟ್ಟಿದೂರು ಮೈಸೂರಿನ ಮಣ್ಣಿನಲ್ಲಿ, ಅಂತ್ಯ ಸಂಸ್ಕಾರ ಮಾಡಲು ಆಗಲಿಲ್ಲವಲ್ಲ ಆ ಕೊರಗೊಂದು ಎದೆಯಲ್ಲಿ ಉಳಿದುಬಿಟ್ಟಿತು ಜ್ಯೋತಿ? ಏನು ಮಾಡಲಿ ಜ್ಯೋತಿ? ಅವರ ಎಲ್ಲ ಆಸೆಗಳನ್ನು ಮಕ್ಕಳು ತೀರಿಸಿದರು. ಹುಟ್ಟೂರಿನ ಮಣ್ಣಿನಲ್ಲಿ ಅವರು ಮಣ್ಣಾಗಬೇಕಿತ್ತು. ಅದೇ ಅವರ ಆಸೆಯಾಗಿತ್ತು. ಆದರೆ ಈ ಮಹಾಮಾರಿ ಎಲ್ಲರ ಆಸೆಯನ್ನೂ ಬಲಿತೆಗೆದುಕೊಂಡುಬಿಟ್ಟಳು.’ ಗೊಳೋ ಎಂದು ಅತ್ತರಂತೆ ಮಂಗಳಮ್ಮ.

`ಈದಿನ ಜ್ಯೋತಿಯ ಮುಖ ನೋಡುವ ಹಾಗಿಲ್ಲ. ಪಾಪ, ಒಳಗೇ ರೋಧಿಸುತ್ತಿದ್ದಾಳೆ. ದೇವರು ಎಂಥ ಕಟುಕ ಅಲ್ಲವಾ?’ ಎಲ್ಲರೂ ಜ್ಯೋತಿಯ ದುಃಖಕ್ಕೂ ವೇದನೆ ಪಟ್ಟರು.

-ಬಿ. ಕೆ. ಮೀನಾಕ್ಷಿ, ಮೈಸೂರು

10 Responses

  1. ನಾಗರತ್ನ ಬಿ.ಆರ್ says:

    ಕರೋನಾ ಎಂಬ ಪಿಡುಗು ಇಡೀ ವಿಶ್ವವನ್ನೇ ತನ್ನ ಮುಷ್ಟಿಯಲ್ಲಿ ಹಿಡಿದು ಆಡಿಸುತ್ತಿದ್ದೆ.ಅಂಥಹ ಸಂದರ್ಭದಲ್ಲಿ ಕಂಡುಂಡ ಘಟನೆಯ ಅಭಿವ್ಯಕ್ತಿ. ಚೆನ್ನಾಗಿದೆ ಮೂಡಿ ಬಂದಿದೆ ಅಭಿನಂದನೆಗಳು ಗೆಳತಿ ಮೀನಾಕ್ಷಿ.

  2. Padma Anand says:

    ಮಂಗಳಮ್ಮನಿಗಾಗಿ, ಮಂಗಳಮ್ಮನಂಥಹವರಿಗಾಗಿ ಮನಸ್ಸು ಮೂಕವಾಗಿ ರೋಧಿಸುತ್ತದೆ.. ಎಂದಿಗೆ ಕರೋನಾ ಎಂಬ ಕಪಿಮುಷ್ಠಿಯಿಂದ ಈಚೆಬಂದು ಲವಲವಿಕೆಯ ಜೀವನ ಸಿಗುತ್ತೋ ಗೊತ್ತಿಲ್ಲ. ಅಂತಃಕರಣ ತುಂಬಿದ ಬರಹ.

  3. Anonymous says:

    ಕರೋನದಿಂದ ಎಲ್ಲರ ಪರಿಸ್ಥಿತಿಯೂ ದುಸ್ತರ

    • B.k.meenakshi says:

      ನಿಮ್ಮೆಲ್ಲರಿಗೂ ಧನ್ಯವಾದ ಗಳು. ಈ ಘಟನೆಯ ಪ್ರತಿಯೊಂದು ಅಕ್ಷರವೂ ಸತ್ಯವಾದದ್ದು. ಮಂಗಳಮ್ಮ ಬಹಳ ಸ್ನೇಹಮಯಿ ಅವರ ಯಜಮಾನರೂ ತುಂಬಿದಕೊಡ.ಹಾಗಾಗಿ ಹಂಚಿಕೊಳ್ಬೇಳಕೆನ್ನಿಸಿ ಬರೆದೆ.

  4. Padmini Hegde says:

    ಎಲ್ಲರಿಗೂ ಇಂತಹುದೊಂದು ಘಟನೆಯನ್ನು ದುಃಖದಿಂದ ನೆನಪಿಸಿಕೊಳ್ಳುವ, ಹೇಳಿಕೊಳ್ಳುವ ಪರಿಸ್ಥಿತಿ ಇಂದಿನದು ಎನ್ನುವುದು ವಿಷಾದಕರ!

    • B.k.meenakshi says:

      ಮೇಡಂ ನಮಸ್ತೆ. ನಿಮ್ಮ ಅನಿಸಿಕೆ ನಮ್ಮೆಲ್ಲರದೂ ಕೂಡ.

  5. ತೋoಟೆಶ್.ಕೆ. ಎಸ್ says:

    ನಿಮ್ಮ ಈ ನಿರೂಪಣೆ ಅದ್ಭುತವಾದ ಬರವಣಿಗೆಯ ಶಕ್ತಿಯನ್ನು ನಿರೂಪಿಸಿದೆ.
    ನಿಮ್ಮಿಂದ ಸಾಹಿತ್ಯಾಸಕ್ತರಿಗೆ ಇನ್ನಷ್ಟು ಬರಹಗಳು ಲಭ್ಯ ಆಗಲಿ ಎನ್ನುವುದು ನಮ್ಮ ಅಪೇಕ್ಷೆ.
    ನಮಸ್ತೆ…….

    • B.k.meenakshi says:

      ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ತುಂಬುಹೃದಯದ ನಮನಗಳು ಸರ್

  6. ಶಂಕರಿ ಶರ್ಮ says:

    ಹೌದು ಮೇಡಂ..ಈ ಮಹಾಮಾರಿಯಿಂದಾಗಿ ಮಾನವ ಜೀವನವೇ ಅಸ್ತವ್ಯಸ್ತವಾಗಿದೆ..ಏನ್ಮಾಡ್ಳಿ?
    ದು:ಖ ಭರಿಸುವ ಶಕ್ತಿಗೆ, ನಾವು ಮಂಗಳಮ್ಮನವರಿಗಾಗಿ ಪ್ರಾರ್ಥಿಸಬಹುದಷ್ಟೆ.

    • B.k.meenakshi says:

      ಹೌದು ಮೇಡಂ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಮಾಡುವುದು ನಮ್ಮ ಕೆಲಸವಾಗುತ್ತದೆ. (ಕೈಲಾದಷ್ಡು ಸಹಾಯವನ್ನೂ ಜೊತೆಗೆ ಮಾಡಿಕೊಂಡು)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: