ಪ್ರವಾಸ

ದೇವರ ದ್ವೀಪ ಬಾಲಿ : ಪುಟ-9

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಟೆರೇಸ್ ರೈಸ್ ಫೀಲ್ಡ್ , ಪುರ ಬೆಸಾಕಿಹ್‌ (ಮದರ್ ಟೆಂಪಲ್‌ )
ಉಬೂದ್ ನ ಶಾಲೆಯ ಸರಸ್ವತಿ ಪೂಜೆ ನೋಡಿ , ಹೋಂ ಸ್ಟೇಗೆ ಬಂದು ಉಪಾಹಾರ ಸೇವಿಸಿ, ವ್ಯಾನ್ ನಲ್ಲಿ ಸುಮಾರು ಒಂದೂವರೆ ಗಂಟೆ ಪ್ರಯಾಣಿಸಿ ಬಟುರಾ ಎಂಬಲ್ಲಿಗೆ ಪ್ರಯಾಣಿಸಿದೆವು. ಹಸಿರು ಪರಿಸರದಲ್ಲಿ ಈ ರಸ್ತೆ ಪ್ರಯಾಣ ಹಿತಕಾರಿಯಾಗಿತ್ತು. ನಗರ ಪ್ರದೇಶದಲ್ಲಿ ಮನೆಗಳೂ, ದೇವಾಲಯಗಳೂ, ಅಲ್ಲಲ್ಲಿ ಪೂಜೆಗಾಗಿ ಸೇರಿದ್ದ ಜನರು ಅಥವಾ ಪೂಜೆ ಮುಗಿಸಿ ಸ್ಕೂಟರ್ ನಲ್ಲಿ ಬಿದಿರಿನ ಬುಟ್ಟಿಯಲ್ಲಿ ಪ್ರಸಾದವನ್ನು ಒಯ್ಯುತ್ತಿದ್ದ ಮಹಿಳೆಯರು ಹೀಗೆ ವಿವಿಧ ದೃಶ್ಯಾವಳಿಗಳು ಕಾಣಿಸಿದಾಗ, ನಮ್ಮ ಗೌರಿ -ಗಣೇಶ ಹಬ್ಬ, ಬೀದಿಯಲ್ಲಿ ಗಣೇಶನನ್ನು ಕೂರಿಸಿದ ಮಂಟಪಗಳು, ‘ಗೌರಿಹಬ್ಬದ ಬಾಗಿನ’ ಒಯ್ಯುವ ಮಹಿಳೆಯರ ನೆನಪಾಯಿತು!

ನಗರ ಪ್ರದೇಶ ದಾಟಿದ ಮೇಲೆ, ಮಾವು ಹುಣಸೆ, ಜಾಯಿಕಾಯಿ, ಕಾಳುಮೆಣಸು, ಕಣಗಿಲೆ, ರತ್ನಗಂಧಿ ಹೂ, ಕೇಪುಳ ಹೂ ಇತ್ಯಾದಿ ಸಸ್ಯಸಿರಿ ಕಾಣಿಸಿತು. ಅಲ್ಲಲ್ಲಿ ಹಸಿರಾಗಿದ್ದ ‘ಟೆರೇಸ್ ರೈಸ್ ಫೀಲ್ಡ್ ‘ ಗಳು ಕಣ್ಣಿಗೆ ಮುದ ಕೊಟ್ಟುವು. ಇಲ್ಲಿಯ ಭತ್ತದ ಗದ್ದೆಗಳು ವಿಶಾಲವಾಗಿ ಹಬ್ಬಿಕೊಂಡಿರುವುದಿಲ್ಲ. ಬದಲಾಗಿ , ಬೆಟ್ಟದಲ್ಲಿ ಇಳಿಜಾರಾದ ಜಾಗದಲ್ಲಿ ಹಲವಾರು ಚಿಕ್ಕ ಚಿಕ್ಕ ಅಂತಸ್ತುಗಳಂತೆ ಕೆತ್ತಲಾದ ಜಾಗದಲ್ಲಿ ಇವೆ. ಇಂತಹ ಕೆಲವೆಡೆ ಜೋಕಾಲಿಯನ್ನು ಕಟ್ಟಿ, ಪ್ರವಾಸಿ ಆಕರ್ಷಣೆಯಾಗಿಯೂ ಬಳಸಿಕೊಳ್ಳುತ್ತಾರೆ.

ಇಂಡೋನೇಶ್ಯಾದ ಬಾಲಿಯ ಬಟುಕಾರ್ ಪರ್ವತ ಶ್ರೇಣಿಯ ಗುನುಂಗ್‌ ಅಗುಂಗ್‌ ಎಂಬಲ್ಲಿ 1000 ವರ್ಷಗಳ ಇತಿಹಾಸವುಳ್ಳ ‘ಪುರ ಬೆಸಾಕಿಹ್ ‘ ಎಂಬ ಸುಂದರವಾದ ದೇವಾಲಯ ಸಂಕೀರ್ಣವಿದೆ. ಬಾಲಿಯಲ್ಲಿರುವ ಎರಡನೆಯ ಅತಿ ದೊಡ್ಡ ದೇವಾಲಯವಾದ ಇದನ್ನು ‘ಮದರ್ ಟೆಂಪಲ್’ ಎಂದೂ ಕರೆಯುತ್ತಾರೆ. ಬಾಲಿನೀಸ್ ಹಿಂದೂಗಳಿಗೆ ಅತಿ ಪ್ರಮುಖವಾದ ಮಂದಿರವಿದು. ಇಲ್ಲಿಂದ ಸುಮಾರು 5 ಕಿಮೀ ದೂರದಲ್ಲಿ ‘ಕಿಂತಾಮಣಿ’ ಎಂಬ ಜ್ವಾಲಾಮುಖಿ ಪರ್ವತವಿದೆ. ಅಲ್ಲಿ ‘ಬಾಸುಕಿ’ ಎಂಬ ನಾಗಗಳ ದೇವತೆ ವಾಸವಾಗಿದ್ದನೆಂಬ ನಂಬಿಕೆ. ಬಾಸುಕಿಯಿಂದಾಗಿ ಈ ಸ್ಥಳಕ್ಕೆ ‘ಬೆಸಾಕಿಹ್’ ಎಂಬುದು ಎಂಬ ಸ್ಥಳೀಯ ಹೆಸರು ರೂಪುಗೊಂಡಿತಂತೆ. ಬಾಲಿಯ ಕೆಲವು ದೇಗುಲಗಳಲ್ಲಿ ‘ಬಾಸುಕಿ’ಗೂ ಗುಡಿಯಿರುತ್ತದೆ. ಪ್ರಕೃತಿಯ ಪೂಜೆ ಮಾಡುವ ಸಂಸ್ಕೃತಿಯಲ್ಲಿ ‘ನಾಗಾರಾಧನೆ’ಗೆ ಪ್ರಾಮುಖ್ಯತೆಯಿದೆ. ನಮ್ಮ ನವನಾಗಗಳ ಪಟ್ಟಿಯಲ್ಲಿ ಒಂದಾದ ‘ವಾಸುಕಿ’ಯೇ ಬಾಲಿಯ ‘ಬಾಸುಕಿ’ಯಾಗಿದ್ದಾನೆ!

ಬೆಸಾಕಿಹ್ ದೇವಾಲಯದ ಹೊರಗಡೆ ಇರುವ ಸಭಾಂಗಣದಲ್ಲಿ ನಮಗೆ ಸೊಂಟಕ್ಕೆ ‘ಸಾರಂಗೊ’ ಮೇಲುಡುಗೆ ಉಡಿಸಿದರು. ಅದರ ಮೇಲೆ ‘ಸಾಶೆ’ ಎಂಬ ಸಣ್ಣ ಪಟ್ಟಿಯನ್ನೂ ಕಟ್ಟಿ ಒಳಗೆ ಹೋಗಲು ಅನುಮತಿ ಮಾಡಿಕೊಟ್ಟರು. ಬಾಲಿಯ ವಿಶಿಷ್ಟ ವಿಭಜಿತ ದ್ವಾರದ ವಾಸ್ತುಶಿಲ್ಪವುಳ್ಳ ಸೊಗಸಾದ ಹೆಬ್ಬಾಗಿಲು ‘ಕ್ಯಾಂಡಿ ಬೆಂಟರ್ ‘ಮೂಲಕ ಆವರಣದ ಒಳ ಹೊಕ್ಕೆವು. ಈ ದೇವಾಲಯ ಸಂಕೀರ್ಣದಲ್ಲಿ ಇಪ್ಪತ್ತಕ್ಕೂ ಹೆಚ್ಚು ಚಿಕ್ಕ, ಪುಟ್ಟ ಗುಡಿಗಳಿವೆ. ಏಕ ಛಾವಣಿಯ ಗುಡಿಗಳೂ ಇವೆ, ಬಹು ಅಂತಸ್ತಿನ ಹುಲ್ಲು ಛಾವಣಿಯ ಗುಡಿಗಳೂ ಇವೆ. ಬಾಲಿಯ ಆಲಯಗಳಲ್ಲಿ ಗರ್ಭಗುಡಿಯ ಬಾಗಿಲು ಹುಣ್ಣಿಮೆ , ಅಮವಾಸ್ಯೆ ಮತ್ತು ಅವರ ಕೆಲವು ಹಬ್ಬದ ದಿನಗಳಲ್ಲಿ ಮಾತ್ರ ತೆರೆಯುವುದು ಮತ್ತು ಅರ್ಚಕರಿಗೆ ಮಾತ್ರ ಗರ್ಭಗುಡಿಗೆ ಪ್ರವೇಶ. ಆ ಗುಡಿಗಳಲ್ಲಿ ಒಬ್ಬರಿಗೆ ಮಾತ್ರ ಹೋಗುವಷ್ಟು ಸ್ಥಳ ಇತ್ತು. ಸ್ಥಳೀಯ ಜನಸಾಮಾನ್ಯರಿಗೂ, ನಮ್ಮಂತಹ ಪ್ರವಾಸಿಗರಿಗೂ ಬಯಲೇ ಆಲಯ. ಈ ದೇವಾಲಯದ ಆವರಣದಲ್ಲಿ ಸುಮಾರು 20-30 ಜನರಿದ್ದರು. ಪಕ್ಕದ ಹಾಲ್ ನಲ್ಲಿ ಏನೋ ಕಾರ್ಯಕ್ರಮ ನಡೆಯುತ್ತಿತ್ತು. ಧ್ವನಿವರ್ಧಕದಲ್ಲಿ ನಮಗೆ ಅರ್ಥವಾಗದ, ಇಂಪಾಗಿದ್ದ ಹಾಡು ಕೇಳಿ ಬರುತ್ತಿತ್ತು.

ಅಷ್ಟರಲ್ಲಿ ನಮ್ಮ ಮಾರ್ಗದರ್ಶಿ ಮುದ್ದಣ, ಪೂಜೆ ಮಾಡಲು ಬೇಕಾಗುವ ಹೂವು, ಅಗರಬತ್ತಿ ಪೊಟ್ಟಣದೊಂದಿಗೆ ಬಂದರು. ನಾವೆಲ್ಲರೂ ಪೂಜೆ ಮಾಡಿ ದೇವರಿಗೆ ಅರ್ಪಿಸಲೆಂದು ಹೂಗಳಿದ್ದ ಪುಟ್ಟ ತೆಂಗಿನ ಗರಿಯ ದೊನ್ನೆಗಳನ್ನು ಖರೀದಿಸಿ ಎಲ್ಲರಿಗೂ ಒಂದೊಂದು ದೊನ್ನೆ ಕೊಟ್ಟರು. ತಾನೇ ಪುರೋಹಿತನಂತೆ ನಿರ್ದೇಶನ ಕೊಡುತ್ತಾ ನಮ್ಮ ಕೈಯಲ್ಲಿ ಪೂಜೆ ಮಾಡಿಸಿದರು. ಮುದ್ದಣನ ನಿರ್ದೇಶನದಂತೆ, ಮೊದಲು ನೆಲದ ಮೇಲೆ ನಮಗೆ ಅನುಕೂಲಕರವಾಗುವಂತೆ ಸುಖಾಸನದಲ್ಲಿ ಕುಳಿತುಕೊಂಡೆವು. ಹೂಗಳಿದ್ದ ದೊನ್ನೆಯನ್ನು ನಮ್ಮದುರು ನೆಲದಲ್ಲಿರಿಸಿದೆವು. ಅದರಲ್ಲಿ ಮೂರು ಬಣ್ಣದ ಹೂಗಳು ಮತ್ತು ಅಗರಬತ್ತಿ ಇದ್ದುವು. ಮೊದಲಿಗೆ ಮೂರು ಬಾರಿ ದೀರ್ಘ ಉಚ್ಛ್ವಾಸ , ನಿಶ್ವಾಸ ಮಾಡಿ ಪ್ರಾಣಾಯಾಮ ಮಾಡಬೇಕು. ಅಗರಬತ್ತಿಯನ್ನು ಉರಿಸಿ , ಅದರ ಹೊಗೆಯನ್ನು ನಮ್ಮ ಕೈಗಳಿಗೆ ಹರಿಸಿ ಕೈಗಳನ್ನು ‘ಸ್ವಚ್ಛ’ ಮಾಡಿಕೊಳ್ಳಬೇಕು. ಅನಂತರ ಕೈಗಳನ್ನು ನಮ್ಮ ತಲೆಯ ಮೇಲೆ ಬರುವಂತೆ ಮಾಡಿ ಕೈಮುಗಿಯಬೇಕು. ನಾವು ಹುಟ್ಟುವಾಗ ಬರಿಗೈಯಲ್ಲಿ ಬರುತ್ತೇವೆ ಎಂಬುದರ ಸಂಕೇತವಿದು. ದೇವರಿಗೆ ಕೈಮುಗಿಯುವಾಗ ಮಾತ್ರ, ನಮ್ಮ ಕೈ ಗಳು ನಮ್ಮ ತಲೆಯ ಮೇಲೆ ಬರುವಂತೆ ಮಾಡುವುದು ಮತ್ತು ಮನುಷ್ಯರಿಗೆ ನಮಸ್ಕರಿಸುವಾಗ , ಎದೆಯ ಮಟ್ಟಕ್ಕೆ ಕೈಮುಗಿಯುವುದು ಅವರ ಪದ್ಧತಿ. ಆಮೇಲೆ, ಒಂದು ಬಣ್ಣದ ಹೂವನ್ನು ಹಿಡಿದು ಬ್ರಹ್ಮನಿಗೆ ಎಂದು ಪ್ರಾರ್ಥಿಸಿ ನೆಲದಲ್ಲಿಡಬೇಕು, ಇದೇ ರೀತಿ ಇನ್ನೊಂದು ಬಣ್ಣದ ಹೂವನ್ನು ವಿಷ್ಣುವಿಗೆ , ಮತ್ತೊಂದು ಬಣ್ಣದ ಹೂವನ್ನು ಶಿವನಿಗೆಂದು ಅರ್ಪಣೆ ಮಾಡಬೇಕು. ಅನಂತರ ಮೂರೂ ಬಣ್ಣದ ಇನ್ನಷ್ಟು ಹೂಗಳನ್ನು ಒಟ್ಟಾಗಿ ಹಿಡಿದು, ಕೈಮುಗಿದು ಕುಟುಂಬದ ಪಿತೃಗಳಿಗೆ ಅರ್ಪಿಸಬೇಕು. ಈ ಹೂಗಳಿಗೆ ಅಗರಬತ್ತಿಯನ್ನು ಆರತಿ ಬೆಳಗಿ, ಕೊನೆಯದಾಗಿ, ಪುನಃ ತಲೆಮೇಲೆ ಕೈಯೆತ್ತಿ , ಕೈಮುಗಿದು ಪ್ರಾರ್ಥಿಸಬೇಕು. ಇದು, ನಾವು ಭೂಮಿಗೆ ಬರುವಾಗಲೂ ಬರಿಗೈ, ಭೂಮಿಯಿಂದ ಹೋಗುವಾಗಲೂ ಬರಿಗೈ ಎಂಬುದನ್ನು ಸೂಚಿಸುತ್ತದೆಯಂತೆ.

ಆಮೇಲೆ ಅಲ್ಲಿದ್ದ ಸ್ಥಳೀಯರೊಬ್ಬರು, ಬಹುಶ: ಅರ್ಚಕರಿರಬಹುದು, ನಮ್ಮ ತಲೆಗೆ ನೀರನ್ನು ಪ್ರೋಕ್ಷಣೆ ಮಾಡಿ, ಕೈಗೂ ತೀರ್ಥ ಕೊಟ್ಟರು. ಜೊತೆಗೆ ನಾಲ್ಕಾರು ಅಕ್ಕಿಕಾಳನ್ನು ಪ್ರಸಾದದಂತೆ ಕೊಟ್ಟರು. ಮುದ್ದಣ ತಿಳಿಸಿದಂತೆ, ಆ ಅಕ್ಕಿಕಾಳುಗಳನ್ನು ನಾವು ಹಣೆಗೆ ಮತ್ತು ಎರಡೂ ಕಿವಿಗಳ ಪಕ್ಕ ಅಂಟಿಸಿ , ಇನ್ನೂ ಮಿಕ್ಕರೆ ಬಾಯಿಗೆ ಹಾಕಿಕೊಳ್ಳಬೇಕು. ಅಲ್ಲಿಗೆ ಸರಳ ಪೂಜೆ ಸಂಪನ್ನವಾಯಿತು. ಯಾವುದೇ ದೇಶದ , ಯಾವುದೇ ಧರ್ಮದ ಜನರು ಬಾಲಿನೀಸ್ ಹಿಂದೂ ಪೂಜೆಯಲ್ಲಿ ಸುಲಭವಾಗಿ ಪಾಲ್ಗೊಳ್ಳಬಹುದು. ಬಾಲಿನೀಸ್ ಹಿಂದುಗಳ ಸರಳ ಪೂಜಾ ಪದ್ಧತಿ, ಧರ್ಮಾತೀತವಾಗಿ ಮುಕ್ತ ಅವಕಾಶ, ನಿಚ್ಚಳವಾದ ಪರಿಸರಪ್ರೇಮ, ಸ್ಚಚ್ಚತೆ, ಪ್ರಕೃತಿಯನ್ನು ಆರಾಧಿಸುವ ಭಾವ ಇವೆಲ್ಲಾ ಅನುಕರಣೀಯ ವಿಚಾರಗಳೆನಿಸಿತು. ಆದರೆ, ಅಲ್ಲಿಯ ದೇವಾಲಯದ ಆವರಣದಲ್ಲಿ ಚಪ್ಪಲಿ ಧರಿಸಿಯೇ ಹೋಗುವುದು, ಕೆಲವರು ಸಿಗರೇಟ್ ಸೇದುತ್ತಿದ್ದುದು ಆ ವಾತಾವರಣಕ್ಕೆ ಮತ್ತು ನಮ್ಮ ಮನೋಭಾವಕ್ಕೆ ಸೂಕ್ತವೆನಿಸಲಿಲ್ಲ.

(ಮುಂದುವರಿಯುವುದು)
ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ: https://surahonne.com/?p=44074

ಹೇಮಮಾಲಾ.ಬಿ. ಮೈಸೂರು

6 Comments on “ದೇವರ ದ್ವೀಪ ಬಾಲಿ : ಪುಟ-9

  1. ಪ್ರವಾಸ ಕಥನ ಚೆನ್ನಾಗಿ ಮೂಡಿಬಂದಿದೆ.. ಪೂರಕ ಚಿತ್ರ ಗಳು ಮನಕ್ಕೆ ಮತ್ತಷ್ಟು.. ವಿವರಣೆಗೆ ಸಹಾಯವಾದವು… ಧನ್ಯವಾದಗಳು ಗೆಳತಿ ಹೇಮಾ

  2. ಮದರ್ ಟೆಂಪಲ್ ಎಂದೆನಿಸಿದೆ ಸುಂದರವಾದ ಪುರಾತನ ಪುರಿ ಬೆಸಾಹಿಕ್ ದೇವಾಲಯ ಸಂಕೀರ್ಣ, ಬೆಸಾಹಿಕ್ ಪದದ ಹಿನ್ನೆಲೆ, ಸರಳವಾದ ಬಾಲಿನೀಸ್ ಪೂಜೆಯಲ್ಲಿ ಪಾಲ್ಗೊಂಡ ಸಂಭ್ರಮ….!!

    ಬಹಳಷ್ಟು ಮಾಹಿತಿಗಳನ್ನು ಒಳಗೊಂಡ ಲೇಖನ ಖುಷಿಕೊಟ್ಟಿತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *