ಇದು ಆನ್ ಲೈನ್ ದುನಿಯಾ…
ಎಲ್ಲ ವರ್ಷದಂತೆ ಇದ್ದಿದ್ದರೆ ಈ ಸಮಯ ಕಾಲೇಜು ಆರಂಭ, ಪಠ್ಯಕ್ರಮ ಸಮಯ ನಾವು ಮೇಷ್ಟ್ರುಗಳು, ಉಪನ್ಯಾಸಕ ವರ್ಗ, ಆಂತರಿಕ ಪರೀಕ್ಷೆ, ಟ್ಯಾಲೆಂಟ್ಸ್‌ಡೇ, ಹೀಗೆಲ್ಲ ವಿದ್ಯಾರ್ಥಿಗಳೊಂದಿಗೆ ಒಂದಲ್ಲಒಂದು ಚಟುವಟಿಕೆಗಳಲ್ಲಿ ಮಗ್ನವಾಗಿದ್ದು, ಆ ಎಳೆಯ ಮನಸ್ಸುಗಳೊಂದಿಗೆ ಸಂಭ್ರಮವೋ , ಸಂಕಟವೋಒಂದುರೀತಿಯ’ಜೋಶ್’ನಲ್ಲಿಯೇಇರುತಿದ್ದೆವು. ಈಗ ನೋಡಿದರೆ ಕಾಲ ಬದಲಾಗಿದೆ. ಚರಿತ್ರೆಯಲ್ಲಿಯುದ್ಧಕಾಲದಲ್ಲಿ ಗೃಹಬಂಧಿಗಳಾದವರು ಹೇಗಿದ್ದಿರಬಹುದೇನೋಎನ್ನುವುದನ್ನೂ ಅನುಭವಿಸಿ ಆಯಿತು. ಇದೀಗ ಆನ್ ಲೈನ್‌ದುನಿಯಾ. ಇದೊಂದು ವಿಶಿಷ್ಟ ಪ್ರಪಂಚ. ‘ಊರಿಗೆ ಬಂದವಳು ನೀರಿಗೆ ಬರದಿರುತ್ತಾಳೆಯೇ? ಎನ್ನುವಂತೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳದಿದ್ದರೆ ನಾಶವಾಗುವ ಪರಿಸ್ಥಿತಿ. ಎ ಟಿ ಎಮ್, ಗೂಗಲ್ ಪೇ.. ಹೀಗೆ ಬ್ಯಾಂಕು ಸಿಬ್ಬಂದಿ ಮುಖ ನೋಡದೆ ತಿಂಗಳುಗಳೇ ಕಳೆದವು. ಇ ಮೈಲ್‌ಇಲ್ಲದೆ, ದಿನ ಬೆಳಗಾದರೆ ವಾಟ್ಸ್‌ಆಪ್ ಮೆಸೇಜುಗಳಿಲ್ಲದೆ ಬದುಕಲೇ ಆಗದ ಪರಿಸ್ಥಿತಿಗೆ ನಾವು ಬಂದಿದ್ದೇವೆ. ಇನ್ನುಆನ್ ಲೈನ್ ಪಾಠ ಮಾಡುವ ಸಂಭ್ರಮ.
ಆನ್ ಲೈನ್ ನಲ್ಲಿ ಪಾಠ, ಅದೂ ದಿನ ನಿತ್ಯ ಮಾಡಬೇಕಾಗಬಹುದು ಎಂದು ನಾವು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಆಗೆಲ್ಲ ‘ಸೆಮಿನಾರ್’ ಗಳಲ್ಲಿ ಪಿ ಪಿ ಟಿ ಪ್ರೆಸೆಂಟ್ ಮಾಡುವುದೇ ದೊಡ್ಡ ವಿಷಯವಾಗಿತ್ತು. ತದ ನಂತರ ಆಯ್ದ ವಿಷಯಗಳಿಗೆ ಕೆಲವೊಂದು ವಿಡಿಯೋ, ಸಾಕ್ಷ್ಯಚಿತ್ರ ತೋರಿಸುತ್ತಿದ್ದೆವು. ಈಗ ನೋಡಿದರೆ ಯುಟ್ಯೂಬ್, ಗೂಗಲ್‌ಡ್ರೈವ್, ಫಿಲಂ ಇವೆಲ್ಲ ನಮ್ಮ ಪಠ್ಯಕ್ರಮದ ಅವಿಭಾಜ್ಯ ಅಂಗಗಳೇ ಆಗಿ ಬಿಟ್ಟಿವೆ. ಮೊದ ಮೊದಲು ಇವಕ್ಕೆ ಒಗ್ಗಿಕೊಳ್ಳಲು ನಾವು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಮೊದಲೆಲ್ಲ ‘ವಿಡಿಯೋಕಾನ್ಫರೆನ್ಸ್ ‘ ಎಂದರೆ ಅಷ್ಟೊಂದು ಭಯ ಭಕ್ತಿಯಲ್ಲಿ ಇರುತ್ತಿದ್ದ ನಾವು ಈಗ ದಿನ ಬೆಳಗಾದರೆ ‘ಗೂಗಲ್ ಮೀಟ್’ , ಜ಼ೂಮ್’ ಎಂದೆಲ್ಲ ಪರದಾಡುತ್ತಿರುವುದು ಕಾಲನ ಮಹಿಮೆಯೇ ಸರಿ.
ಇ ಮೈಲ್‌ಇಲ್ಲದೆ , ದಿನ ಬೆಳಗಾದರೆ ವಾಟ್ಸ್‌ಆಪ್ ಗ್ರೂಪ್ ನೋಡದಿದ್ದರೆ ಏನೋ ಕಳೆದುಕೊಂಡಂತೆ ಅನಿಸುತ್ತಿರುತ್ತದೆ. ಅರ್ಧಗಂಟೆ ವಿಡಿಯೋ ಮಾಡಿ ಏನೋ ಸಣ್ಣತಪ್ಪಿಗೆ ಆ ಇಡೀ ಪ್ರಯತ್ನ ಹಾಳಾಗಿ ಅನುಭವಿಸುವ ವಿಹ್ವಲತೆ, ಸಣ್ಣ ಪುಟ್ಟ ರಿಪೇರಿ ಮಾಡಲು ಕಲಿತುಕೊಳ್ಳುವುದು, ಹೀಗೆ ನಾವೂ ಅಪ್‌ಡೇಟಾಗುತ್ತೇವೆ. ಹಾಗೆ ನೋಡಿದರೆ ಹದಿನೈದು ವರ್ಷದ ಹಿಂದೆ ‘ವಿಡಿಯೋ ಕಾನ್ಫರೆನ್ಸ್ ‘ ಎಂದರೆಅದೇನೋ ಬಹಳ ದೊಡ್ದ ವಿದ್ಯಮಾನವೆಂದುಕೊಂಡಿದ್ದೆವು. ಈಗ ನಾವೇ ವೆಬಿನಾರ್ ಅದು ಇದು ಎಂದು ಕ್ರಿಯಾಶೀಲರಾಗಿರುತ್ತೇವೆ.
ಇದೆಲ್ಲಕ್ಕಿಂತ ಮಿಗಿಲಾದುದು ನಮ್ಮ ಸಮೀಕರಣಗಳೆಲ್ಲ ಅದಲು ಬದಲಾದ ಬಗೆ. ಇಂಜಿನಿಯರಿಂಗ್ ಕಲಿಯುವ ಮಗಳು ಅಮ್ಮನಿಗೆ ಪಾಠ ಹೇಳಿಕೊಡುತ್ತ ತಾನು ತಾಳ್ಮೆ ಕಲಿಯುತ್ತಾಳೆ, ಅಮ್ಮ ಹೊಸತನದ ಆವಿಷ್ಕಾರಗಳಿಗೆ ತೆರೆದುಕೊಳ್ಳುತ್ತ ತಿದ್ದಿಕೊಳ್ಳುತ್ತಾಳೆ. ಈ ಆನ್ ಲೈನ್‌ದುನಿಯಾದ ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್’ ಕೂಡಜಗತ್ತಿನಲ್ಲಿ ಆಶಾ ಭಾವ ಹುಟ್ಟಿಸುತ್ತದೆ. ಇನ್ನೇನು ಅಷ್ಟು ಕಷ್ಟ ಪಟ್ಟು ಮಾಡಿದ ಫ಼ೈಲ್ ಹೋಯಿತು ಎನ್ನುವಾಗ ಒಂದು ಕಡೆ ‘ನೀನು ಶ್ಯೂರ್ ಇದ್ದೀಯಲ್ಲ’ ಎಂದು ಕೇಳುತ್ತದೆ. ತೀರಾ ಯಡವಟ್ಟು ಸ್ಪೆಲ್ಲಿಂಗ್ ಕೂಡ ತಾಳ್ಮೆಯಿಂದ ತಿದ್ದುತ್ತದೆ. ಪಿ ಪಿ ಟಿಗೆ ಬಣ್ಣ ಹಚ್ಚುತ್ತ, ‘ಎಫ಼ೆಕ್ಟ್’ ಹಾಕುತ್ತ, ವರ್ಡ್, ಪಿ ಡಿ ಎಫ಼್, ಅಪ್ ಲೋಡ್, ಡಿಲಿಟ್, ಸೆಂಡ್, ಯುಟ್ಯೂಬ್ ಲಿಂಕ್.. ಹೀಗೆ ಮೊದಲೇ ಅಸ್ತಿತ್ವದಲ್ಲಿದ್ದು ನಾವು ಗಮನಿಸಿರದ ಒಂದು ವರ್ಚುವಲ್ ಜಗತ್ತೇ ಇಲ್ಲಿದೆ. ನಮ್ಮ ಪರಿಧಿಯಲ್ಲೇ ಇದ್ದು, ನಮಗೆ ಹೆಚ್ಚೇನೂ ಅವಶ್ಯಕ ಇಲ್ಲದಿರುವ ವಿಷಯಗಳನ್ನು ನಾವು ಹೇಗೆ ಅಸ್ತಿತ್ವದಲ್ಲಿಯೇ ಇಲ್ಲ ಎನ್ನುವಂತೆ ಕಡೆಗಣಿಸುತ್ತೇವೆ ಎನ್ನುವುದೊಂದು ಅಚ್ಚರಿ. ಅದೆಷ್ಟೋ ಯುಟ್ಯೂಬ್ ವಿಡಿಯೋಗಳು ಮಾಹಿತಿಯ ಕಣಜಗಳು. ವಿಕಿಪೀಡಿಯಾ ಅಲ್ಲದೆ ಅದೆಷ್ಟೋ ತಾಣಗಳು.
ಹಾಗೆಂದು ಇಪ್ಪತ್ತು ನಿಮಿಷದ ಪಾಠ ಗೂಗಲ್‌ಡ್ರೈವ್ ನಲ್ಲಿ ಅಪ್ ಲೋಡ್ ಆಗಲೇ ಒಂದೂವರೆ ಗಂಟೆಗಿಂತ ಜಾಸ್ತಿ ತೆಗೆದುಕೊಳ್ಳುವಾಗ, ಗೂಗಲ್ ಮೀಟ್‌ಕ್ಲಾಸ್ ತೆಗೆದುಕೊಳ್ಳುವಾಗ ಒಂದೆರಡು ವಿದ್ಯಾರ್ಥಿಗಳು ಗೊತ್ತಿದ್ದೋ ಗೊತ್ತಿಲ್ಲದೆಯೋ ‘ಲೆಫ಼್ಟ್’ ಎಂದು ಕಾಣುವಾಗ ಆಗುವ ಸಂಕಟ ನಮ್ಮನ್ನೆಲ್ಲ ತತ್ವಜ್ಞಾನಿಗಳನ್ನಾಗಿಸುವ ಶಕ್ತಿ ಹೊಂದಿದೆ. ಅರ್ಧರಾತ್ರಿ ಹೊತ್ತಲ್ಲಿ ತೂಕಡಿಸುತ್ತ ಯುಟ್ಯೂಬ್ ಗೆ ಲಿಂಕ್ ಹಚ್ಚಿ. ‘ನಂ ಲೈಫ಼್ ಹಿಂಗಾಗೋಯ್ತಲ್ಲೋ’ ಎಂದು ಹಲುಬಿದ್ದಿದೆ. ಹಾಗೆಂದು ಟೆಕ್ನಾಲಜಿಯ ಅನೇಕ ಆಯಾಮಗಳನ್ನು ಕಲಿತುಕೊಂಡದ್ದು ಇಲ್ಲಿಯೇ. ಬಣ್ಣ ಬಣ್ಣದ ಚಿತ್ರಗಳು, ಸುಂದರವಾದ ಡಿಸೈನ್ ನ ಸ್ಲೈಡ್ ಗಳು.. ಆಡಿಯೋ ಗಳು.. ಹೀಗೆ ಕೊರೋನಾ ಮುಗಿದ ನಂತರವೂ ಇವನ್ನು ಸಕ್ರಿಯವಾಗಿ ಬಳಸಿಕೊಳ್ಳುವ ಹುಮ್ಮಸ್ಸು ಮೂಡಿದೆ. ಒಂದು ಪುಟ್ಟ ಲ್ಯಾಪ್‌ಟಾಪ್ ಅನ್ನು ಪ್ರಾಣದಂತೆ ಸಂರಕ್ಷಿಸಿಕೊಳ್ಳಲಾರಂಭಿಸುತ್ತೇವೆ. ಪೆನ್‌ಡ್ರೈವ್ ಗಳೆಂದರೆ ಮಾಣಿಕ್ಯವೇ ಸರಿ. ವೈರಸ್ ಗಳೆಂಬ ಕಾಣದ ಶತ್ರುಗಳಿಂದ ದೂರವಿರಲು ರಕ್ಷಣಾ ಕ್ರಮಗಳು. ಇನ್ನು ನಾವು ಇ ಮೈಲ್ ಗೆ ಹಾಕಿದ ಫ಼ೈಲುಗಳು, ಫ಼ೇಸ್ ಬುಕ್ ನಲ್ಲಿ ಹಾಕಿದ ಮಾಹಿತಿ.. ಈ ಅಂತರಿಕ್ಷದಲ್ಲೆಲ್ಲೋ ತರಂಗಗಳಾಗಿ ಚಲಿಸುತ್ತಿರಬಹುದೇ? ಹೀಗೆಲ್ಲ ಬೆರಗಿನ ಯೋಚನೆಗಳು.
ಹಾಗೆ ನೋಡಿದರೆ ತಂತ್ರಜ್ನಾನ ನಮಗೊಂದು ವರ. ‘ಆಗ್ಲೇ ಈ ಫ಼ೈಲ್‌ಅಪ್ ಲೋಡ್ ಮಾಡಿದ್ದೀ ಕಣಮ್ಮ’ ಎಂದು ನಾವ್ಯಾವುದೋ ಗೊಂದಲದಲ್ಲಿರುವಾಗ ಎಚ್ಚರಿಸುತ್ತದೆ. ಅಷ್ಟು ಸಾಲದ್ದಕ್ಕೆಯಾವುದಾದರು ಫ಼ೈಲ್ ಡಿಲಿಟ್ ಮಾಡಲು ಹೊರಟಾಗ ‘ಸರಿ ಯೋಚಿಸಿದ್ದೀಯಾ’ ಅಂತ ಕಾಳಜಿ ಬೇರೆ. ಈ ಟ್ಯೂಬ್ ಲಿಂಕ್ ಗಳ ಸಂಭ್ರಮದಲ್ಲಿರುವಾಗಲೇ ಉಳಿದ ಯೂಟ್ಯೂಬ್ ಚಾನೆಲ್ ಗಳನ್ನೂ ನೋಡಲಾರಂಭಿಸಿದ್ದು. ಜನ ಸಾಮಾನ್ಯರಾದ ನಾವೆಲ್ಲ ನೋಡುವುದು ಅಡುಗೆ ಚಾನೆಲ್ ಗಳನ್ನು, ಜ್ಞಾನ ಹೆಚ್ಚಿಸುವಂತಹ ಕೆಲವು ವಿಡಿಯೋಗಳನ್ನು, ತಪ್ಪಿದರೆ ಸಿನೆಮಾಗಳನ್ನು. ಒಂದು ಹಗುರವಾದ ಮೊಬೈಲ್ ನಲ್ಲಿ ಅಂಕಗಳನ್ನು ಕೂಡುವುದು, ಗುಣಿಸುವುದರಿಂದ ಹಿಡಿದು ಅಂತರಾಷ್ಟ್ರೀಯ ಸಮ್ಮೇಳನದ ವರೆಗೆ ಎಷ್ಟೆಲ್ಲ ಕಾರು ಬಾರು ನಡೆಸಬಹುದೆಂದರೆ ಆಶ್ಚರ್ಯವಾಗುತ್ತದೆ. ‘ಕಾಲಾಯತಸ್ಮೈ ನಮ: “
ಬದಲಾವಣೆ ಜಗದ ನಿಯಮ. ಬದಲಾಗದಿದ್ದರೆ, ಕಾಲದ ಪ್ರವಾಹದಲ್ಲಿ ಈಜಾಡುತ್ತ ಅಸ್ತಿತ್ವ ಕಂಡುಕೊಳ್ಳದಿದ್ದರೆ ನಾವು ನಾಶವಾಗುತ್ತೇವೆ ಎನ್ನುವ ಸತ್ಯ ನಮಗೆ ಬಹಳ ಖಚಿತವಾಗಿ ಅರಿವು ಮೂಡಿಸಿದ ಕರೋನದೊಂದಿಗೆ ಬದುಕಬೇಕಾದ ಪರಿಸ್ಥಿತಿ. ಈ ಸಂದರ್ಭದಲ್ಲಿ ಮನಸ್ಸಿನ ಸ್ಫೂರ್ತಿ ಕುಗ್ಗಿ ಹೋಗದಂತೆ ನೋಡಿಕೊಳ್ಳುವುದೇ ಒಂದು ಸವಾಲಾಗಿದೆ. ಮೊದಲಿನಂತೆ ಸಂತೆ, ಬೀದಿ, ವ್ಯಾಪಾರ, ಜಾತ್ರೆ, ಮಾಲ್, ಜನ ಜಂಗುಳಿ, ಗದ್ದಲ.. ಹೀಗೆ ಸಹಜವಾಗಿ ಬದುಕುವ ಕಾಲ ಬರಲಿ ಎನುವುದೇ ಹಾರೈಕೆ. ಸ್ಕೂಲುಗಳ ಎದುರು ರೈನ್ ಕೋಟ್ ಹಾಕಿಕೊಂಡ ಪುಟ್ಟ ಮಕ್ಕಳು, ಮಳೆಯಲ್ಲಿ ದಡ ಬಡಿಸಿ ಬರುವ ಕಾಲೇಜು ಮಕ್ಕಳು, ’ ರೈಟ್ ಪೋಯಿ’ ಎನ್ನುವ ಬಸ್ಸುಗಳು.. ಇವನ್ನೆಲ್ಲ ನೋಡಿ ಯಾವ ಕಾಲ ಆಯಿತೋ ಏನೋ. ಈ ಮಂಕು ಕವಿಸುವ ದುರಿತ ಕಾಲ ದೂರವಾಗಿ ಬೆಳಕು ಮೂಡಲಿ ಎಂದು ಹಾರೈಕೆ.
-ಡಾ.ಜಯಶ್ರೀ ಬಿ ಕದ್ರಿ.
ಹೌದು ಜಯಶ್ರೀ ಆನ್ದುಲೈನ್ಕ್ ದುನಿಯಾಕ್ಕೆ ಶರಣು ಹೋಗದೆ ವಿಧಿಯಿಲ್ಲಯೆಂಬಂತಾಗಿದೆ ಪರಿಸ್ಥಿತಿ
ಹೌದು..ಬದಲಾವಣೆ ಜಗದ ನಿಯಮ…ಬರಹ ಸಕಾಲಿಕ ಹಾಗೂ ಅರ್ಥಪೂರ್ಣ ವಾಗಿದೆ
Dhanyavaadagalu Madam. Thank you.
ವಾಸ್ತವಿಕ ಸತ್ಯದ ನೆಲೆಗಟ್ಟಿನಲ್ಲಿ ಬರೆದ ಲೇಖನವಾದರೂ.ಹಿಂದಿನ ಪ್ರಾತಕ್ಷತೆ ಲವಲವಿಕೆ ಚೇತನ ಒಡನಾಟಕ್ಕೆ ಬಯಸಿರುವ ಮನದತ್ತ ಸಾಗಿದೆ. ಆಸನ್ನಿವೇಶ ಬರಲಿ ಎಂಬ ಹಾರೈಕೆ ಇದೆ . ಅಭಿನಂದನೆಗಳು ಮೇಡಂ.
ಇವತ್ತಿನ ಪರಿಸ್ಥಿತಿಯನ್ನು ಬಹಳ ಚೆನ್ನಾಗಿ ಹೇಳಿದ್ರಿ ಮೇಡಂ.
ಕರೋನಾ ಸಮಯದಲ್ಲಿ ಕಂಪ್ಯೂಟರ್, ಮೊಬೈಲ್, ಟಿವಿಗಳು ಇಲ್ಲದಿದ್ದರೆ, ನಮ್ಮ ಆಪ್ತೇಷ್ಟರ ಬಗ್ಗೆ, ಜಗದ ಆಗುಹೋಗುಗಳ ಬಗ್ಗೆ ಮಾಹಿತಿಯಿಲ್ಲದೆ ಹುಚ್ಚು ಹಿಡಿಯುತಿತ್ತು. ಆನ್ಲೈನ್ ಎಂಬುದು ಕರೋನಾ ಸಮಯದಲ್ಲಿ ವರವಾಗಿ ದಕ್ಕಿದೆ,ನಾವು ಸ್ವೀಕರಿಸಲೇಬೇಕು ಬದುಕನ್ನು ಸಹ್ಯವಾಗಿಸಿಕೊಳ್ಳಲು..
Thank you all for the encouraging comments.
ಬರಹ ತುಂಬಾ ಚೆನ್ನಾಗಿದೆ ಮೇಡಮ್
ಸೊಗಸಾದ ನಿರೂಪಣೆ
ಸದ್ಯದ ಪರಿಸ್ಥಿಯನ್ನು ಯಥಾವತ್ತಾಗಿ ಬಿಂಬಿಸಿದ ಬರಹ, ಕಟು ಸತ್ಯವನ್ನೂ ತೆರೆದಿಟ್ಟಿದೆ. ಮಂಕು ಸರಿದು ಬೆಳಕು ಬರಲಿ..ಅಷ್ಟೇ ಸದ್ಯದ ಬೇಡಿಕೆ.