ಕಾದಂಬರಿ

ಕಿರು ಕಾದಂಬರಿ: ಭಾವ ಸಂಬಂಧ- ಎಳೆ 6

Share Button

(ಇದುವರೆಗೆ : ವಿಶಿಷ್ಟ ಸನ್ನಿವೇಶದಲ್ಲಿ ಭೇಟಿಯಾಗಿ, ಇತ್ತೀಚೆಗೆ ಒಂದೇ ಮನೆಯಲ್ಲಿ ವಾಸಿಸಲಾರಂಭಿಸಿದ ಒಂಟಿಜೀವಗಳಾದ ಸೀತಕ್ಕ ಹಾಗೂ ನರ್ಸ್ ಸರಸ್ವತಿ ಅವರ ನಡುವೆ ಬಹಳ ಆತ್ಮೀಯವಾದ ಬಾಂಧವ್ಯ ಬೆಳೆಯುತ್ತಿದೆ.  ಸೀತಕ್ಕ ತನ್ನ ಬಗ್ಗೆ ನಾಳೆ ತಿಳಿಸುವೆನೆಂದು ನಿದ್ರೆಗೆ ಜಾರಿದರೆ, ಸರಸ್ವತಿಯ ಮನಸ್ಸಿನಲ್ಲಿ ತನ್ನ ಬಾಲ್ಯದ ಕಹಿ, ಆಸರೆ ಕೊಟ್ಟ ದಂಪತಿಯ ವಾತ್ಸಲ್ಯ,  ತಾನು ನರ್ಸಿಂಗ್ ತರಬೇತಿ ಪಡೆಯುವಂತಾದುದು   ..ಇತ್ಯಾದಿ ನೆನಪುಗಳ ಮೆರವಣಿಗೆ ಶುರುವಾಯಿತು.. …..ಮುಂದಕ್ಕೆ ಓದಿ)

ಸರಸ್ವತಿಯ ಮಾತುಗಳಿಂದ ಸೀತಮ್ಮನವರ ಮನಸ್ಸು ಹಗುರವಾದಂತೆ ಆಯಿತು.

ಅಬ್ಬಾ ಹೆಣ್ಣೆ, ನೀನೇನು ಮನಃಶಾಸ್ರ್ತ ಓದಿದಿಯೋ ಹೇಗೆ? ಎಷ್ಟು ಬೇಗ ಎದುರಿಗಿದ್ದವರ ಮನದಲ್ಲಿ ಏನು ಓಡುತ್ತಿದೆ ಎಂದು ಯೋಚಿಸಿ ಅದನ್ನು ಸಮಾಧಾನ ಪಡಿಸಿ ಬಿಡುತ್ತೀಯಲ್ಲಾ ಹುಡುಗಿ ನೀನು.  ಅದಕ್ಕೇ ಆಸ್ಪತ್ರೆಯಲ್ಲಿ ರೋಗಿಗಳೂ, ನಿನ್ನ ಸಹೋದ್ಯೋಗಿಗಳೂ ನಿನ್ನನ್ನು ಅಷ್ಟೊಂದು ಹಚ್ಚಿಕೊಂಡಿರುವುದು, ಹೊಗಳುವುದು.

ಹುಂ, ಇರಲಿ, ಇರಲಿ, ನೀವೇನು ಕಮ್ಮಿ? ನನಗಂತೂ ನೀವು ಬಂದ ಮೇಲೆ ನನ್ನ ಕೆಲಸವೇ ಎಲ್ಲಿ ಹೊರಟು ಹೋಗುತ್ತದೋ ಎಂದು ಭಯವಾಗುತ್ತಿದೆ.  ಎಲ್ಲರೂ ನಿಮ್ಮನ್ನು ಅಷ್ಟೊಂದು ಹಚ್ಚಿಕೊಂಡಿದ್ದಾರೆ.  ಮೊನ್ನೆ ಆ ಬೆಡ್‌ ನಂಬರ್‌ ಹನ್ನೆರಡರ ಯುವಕ, ಶ್ರೀಧರ್‌ ಹೇಳುತ್ತಿದ್ದ – ಆಂಟಿ ಎಷ್ಟು ಆಕ್ಟಿವ್‌ ಆಗಿ ಇರುತ್ತಾರಲ್ಲಾ, ಎಲ್ಲಿಂದ ಅವರಿಗೆ ಅಷ್ಟೊಂದು ಎನರ್ಜಿ ಬರುತ್ತೆ? ಅಂತ, ನಮ್ಮ ಪ್ರಕಾಶ್ ಸರ್‌ ಸಹ ಹೇಳುತ್ತಿದ್ದರು – ಅವರು ಎಷ್ಟು ಚೆನ್ನಾಗಿ ಎಲ್ಲರನ್ನೂ ಮೋಟಿವೇಟ್‌ ಮಾಡುತ್ತಾರೆ, ನಾನು ಮೆಟ್ಟಿಲು ಹತ್ತಿ ಬರುತ್ತಿರುವಾಗ ಎಲ್ಲರ ಕೈಲೂ ಅವರು ಹೇಳಿಸುವ “ಓಂ” ಶಬ್ಧ ಸುಶ್ರಾವ್ಯವಾಗಿ ಕೇಳುತ್ತಿದ್ದರೆ ಅಂದು ಮಾಡುವ ಕೆಲಸದಲ್ಲಿ ದುಪ್ಪಟ್ಟು ಪಾಸಿಟಿವ್‌ ಎನರ್ಜಿ ಇರುತ್ತದೆ ಅಂತಾ – ಎಂದಳು ಸರಸ್ವತಿ.

ಸಾಕು ಮಾರಾಯ್ತಿ, ಆಯ್ತು, ನಾವಿಬ್ಬರೂ ಗ್ರೇಟ್., ಸರೀನಾ, ಜಾಣೆಯರಲ್ಲಿ ಜಾಣೆಯರು – ಎನ್ನುತ್ತಾ, ʼಬಂದೆ ಇರುʼ ಎಂದು ಒಳಗೆ ಹೋಗಿ ಎರಡು ಚಿಕ್ಕ ಬಟ್ಟಲುಗಳಲ್ಲಿ ಕಾಂಗ್ರಸ್‌ ಕಡ್ಲೆಕಾಯಿ ಬೀಜ, ಕೊಬ್ಬರಿ ಮಿಠಾಯಿಯ ತುಂಡುಗಳನ್ನು ಇಟ್ಟುಕೊಂಡು ಬಂದರು.

ಹಾಗೇ ಹೇಳತೊಡಗಿದರು.

ನಿನ್ನೇನೇ ಹೇಳಿದಂತೆ ನಂದೇನೂ ಯಾವ ಮಹಾ ನಾಯಕಿಯ ಕಥೆಯೇನೂ ಅಲ್ಲ ಸರಸು.  ಶ್ರೀ ಸಾಮಾನ್ಯ, ಅಲ್ಲ, ಶ್ರೀಮತಿ ಸಾಮಾನ್ಯಳಲ್ಲಿ, ಶ್ರೀಮತಿ ಸಾಮಾನ್ಯಳ ಕಥೆ.  ಆದರೂ ಒಟ್ಟಿಗೆ ಇರಲು ನಿರ್ಧರಿಸಿರುವ ನಮ್ಮಲ್ಲಿಒಬ್ಬರ ಬಗ್ಗೆ ಇನ್ನೊಬ್ಬರು ಪೂರ್ಣವಾಗಿ ತಿಳಿದಿರಬೇಕು ಎಂಬುದಲ್ಲಿ ಎರಡನೇ ಮಾತೇ ಇಲ್ಲ.  ಹಾಗಾಗಿ ಹೇಳುತ್ತೇನೆ ಕೇಳು.

ಎಂದು ಹೇಳ ತೊಡಗಿದರು.

ಅವರು ಹೇಳಿದ್ದು, ಸರಸ್ವತಿ ಕೇಳಿದ್ದು ಹೀಗಿತ್ತು:

ಸೀತಮ್ಮ, ಸತೀಶರಾಯರು ಇಬ್ಬರೂ ಮಧ್ಯಮ ವರ್ಗಗಳ ಕುಟುಂಬಗಳಿಂದಲೇ ಬಂದವರು.  ಎರಡೂ ಕುಟುಂಬಗಳು ಮೌಲ್ಯಾಧಾರಿತ ಜೀವನವನ್ನು ಅಪ್ಪಿಕೊಂಡವರು.  ಅಂದಿನ ದಿನಗಳಲ್ಲಿ ಯಾರೂ ಸೋಮಾರಿಗಳಲ್ಲದಿದ್ದರೂ, ಹಣ ಸಂಪಾದಿಸುವವರುಗಳು ಮಾತ್ರ ಒಂದು ಕುಟುಂಬಕ್ಕೆ ಒಬ್ಬರೇ ಇರುತ್ತಿದ್ದರು.

ಹಿರಿಯರೇ ನೋಡಿ, ಒಪ್ಪಿ, ಜಾತಕ ತೋರಿಸಿ, ಮುಹೂರ್ತ ಇಡಿಸಿ ಮಾಡಿದ ಮದುವೆ.  ಅಚ್ಚುಕಟ್ಟಾಗಿಯೇ ನಡೆಯಿತು.  ಆಗಿನ ಕಾಲದಲ್ಲಿಯೇ ಸತೀಶ ಅವರು ಎಂಜಿನಿಎರಿಂಗ್‌ ಓದಿ ಫ್ಯಾಕ್ಟರಿಯೊಂದರಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದರು.

ಸೀತಮ್ಮನೂ ಪದವಿ ಓದುತ್ತಿದ್ದರು.  ಒಳ್ಳೆಯ ಸಂಬಂಧ ಕೂಡಿ ಬಂತೆಂದು , ಓದು ನಿಲ್ಲಿಸಿ ತಂದೆ ತಾಯಿ ಮದುವೆ ಮಾಡಿ ಬಿಟ್ಟರು.  ಸೀತಮ್ಮನಿಗೇನೂ ಬೇಜಾರಾಗಲಿಲ್ಲ.  ಅವರು ತುಂಬಾ ಭಾವಜೀವಿ.  ಅಪ್ಪ, ಅಮ್ಮ, ಹೇಳುತ್ತಿದ್ದಾರೆ ಅಂದರೆ ಅದು ನನ್ನ ಒಳ್ಳೆಯದಕ್ಕೇ, ಎಂಬ ಭಾವನೆ ಅವರದು.  ಸತೀಶರೂ ಸ್ನೇಹ ಜೀವಿ.  ಆದರೆ ಅವರ ಮೊದಲ ಆದ್ಯತೆ ಕರ್ತವ್ಯ ಪ್ರಜ್ಞೆ, ದೂರಾಲೋಚನೆ.  ಮನೆಗೆ ಹಿರಿಯ ಮಗ.  ತಮ್ಮ ತಂಗಿಯರ ಜವಾಬ್ದಾರಿ ಇತ್ತು.   ಅವರ ತಂದೆ ಇವರನ್ನು ಏನೂ ಕೇಳದಿದ್ದರೂ ಇವರು ತಮ್ಮ ಜವಾವ್ದಾರಿ ಅರಿತು ನಡೆಯುತ್ತಿದ್ದರು.

ಮದುವೆಯಾದ ಹೊಸದರಲ್ಲೇ ಒಮ್ಮೆ ಹೇಳಿದ್ದರು.  – ನಿನ್ನ ಆಸೆಗಳನ್ನು ಪೂರೈಸುವುದು ನನ್ನ ಕರ್ತವ್ಯ ಹಾಗೂ ಇಷ್ಟವೂ ಸಹ.  ಆದರೂ ಅದಕ್ಕೆ ನಿನ್ನದೇ ಆದ ಕಡಿವಾಣವಿರಲಿ.  ನಮ್ಮ ಜೀವನದಲ್ಲಿ ಅಗತ್ಯಗಳನ್ನು ಖಂಡಿತಾ ಹೊಂದೋಣ.  ಆದರೆ ಯಾವುದನ್ನೂ ವ್ಯರ್ಥ ಮಾಡುವುದು ಬೇಡ.

ಸೀತಮ್ಮ ತಲೆಯಾಡಿಸಿದ್ದರು.  ಏಕೆಂದರೆ ಅವರ ಅಮ್ಮ ಆಗಲೇ ಅವರ ತಲೆಯಲ್ಲಿ ತುಂಬಿದ್ದರು, ಗಂಡನ ಮನಸ್ಸನ್ನು ಅರಿತು ಅದರಂತೆ ನಡೆಯುವುದೇ ಧರ್ಮ ಎಂದು.  ಅದು ವೇದವಾಕ್ಯವಾಗಿತ್ತು, ಸೀತಮ್ಮನಿಗೆ.

ಫ್ಯಾಕ್ಟರಿಯಲ್ಲಿ ಕೆಲಸವಾದ್ದರಿಂದ ಇವರು ನಗರದಲ್ಲೇ ಇದ್ದರು.  ಮನೆಯವರುಗಳೆಲ್ಲಾ ಊರಿನಲ್ಲಿದ್ದರು.  ಇಬ್ಬರೇ ಹಕ್ಕಿಯಂತೆ ಹಾರಾಡಿಕೊಂಡು ಬದುಕು ಸಾಗುತಿತ್ತು.

ಸರಳ ಸುಂದರ ಜೀವನದಲ್ಲಿ ಕುಡಿಯೊಡೆದಿತ್ತು.  ಸೀತಮ್ಮ ಗರ್ಭಿಣಿಯಾದರು.  ಮನೆಯಲ್ಲಿ, ಮನದಲ್ಲಿ ಸಂತಸ ನಲಿದಾಡಿತು.  ಅಷ್ಟರಲ್ಲಿ ಸತೀಶರ ತಮ್ಮನ ಓದು ಮುಗಿದು ಕೆಲಸವೂ ಸಿಕ್ಕಿತ್ತು, ತಂಗಿಯ ಮದುವೆಯೂ ಆಗಿತ್ತು.  ತಂದೆ ಮಗ ಇಬ್ಬರೂ ಒಬ್ಬರಿಗೊಬ್ಬರು ಕೈ ಜೋಡಿಸಿ ಯಶಸ್ವಿಯಾಗಿ ಮದುವೆ ಪೂರೈಸಿದ್ದರು.  ತಂಗಿ ಗಂಡನ ಮನೆ ಸೇರಿ ಸುಖವಾಗಿದ್ದಳು.    ಸತೀಶರ ಮನವೂ ನಿರಾಳವಾಗಿತ್ತು.  ಬಸುರಿ ಹೆಂಡತಿಯ ಬಯಕೆಗಳನ್ನೆಲ್ಲಾ ಸಂತೋಷದಿಂದ ತೀರಿಸಿದರು.  ಅವರಿಗೂ ಅಷ್ಟು ಹೊತ್ತಿಗಾಗಲೇ ಗಂಡನ ಸರಳತೆ ಇಷ್ಟವಾಗಿ ತಾವೂ ಅದನ್ನು ಅಳವಡಿಸಿಕೊಂಡಿದ್ದರು.  ಅವರ ಬಯಕೆಗಳೇನಿದ್ದರೂ, ಕಾಂಗ್ರೆಸ್‌ ಕಡ್ಲೆ ಬೀಜ ತಿನ್ನುವುದು, ರಾಜ್‌ ಕುಮಾರ್‌ ಸಿನಿಮಾ ನೋಡುವುದು, ಹೋಟಲಿನಲ್ಲಿ ಜಾಮೂನು, ಮಸಾಲೆ ದೋಸೆ ತಿನ್ನುವುದು ಅಷ್ಟಕ್ಕೇ ಸೀಮಿತವಾಗಿತ್ತು.  ಮಿಕ್ಕೆಲ್ಲಾ ತಿಂಡಿ ತೀರ್ಥಗಳು ಅಮ್ಮನಿಂದ, ಅತ್ತೆಯಿಂದ ಪೂರೈಸಲ್ಪಡುತ್ತಿದ್ದವು.  ದಿನ ತುಂಬಿ ಸುಖವಾಗಿ ಹೆರಿಗೆಯಾಗಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮವಿತ್ತರು.  ಮಗಳು ಮುಖ ನೋಡಿ ನಕ್ಕಾಗ ಸೀತಮ್ಮ ಸತೀಶರಿಗೆ ಜೀವನ ಸಾರ್ಥಕವಾದಂತೆನಿಸುತ್ತಿತ್ತು.  ಒಮ್ಮತದಿಂದ ರೇಖಾ ಎಂದು ಹೆಸರಿಟ್ಟರು.

ದಿನಗಳು ಕಳೆಯುತ್ತಿದ್ದವು.  ಮಗಳು ಬೆಳದಿಂಗಳಿನಂತೆ ಬೆಳಗುತ್ತಿದ್ದಳು, ಬೆಳೆಯುತ್ತಿದ್ದಳು.  ಇಬ್ಬರೂ ಒಮ್ಮೆ ಕೂತು ಚರ್ಚಿಸಿ, ಒಂದೇ ಮಗು ಸಾಕೆಂಬ ತೀರ್ಮಾನಕ್ಕೆ ಬಂದಿದ್ದರು.

ಮಗಳು ಹೈಸ್ಕೂಲಿಗೆ ಬರುವ ವೇಳೆಗೆ ಸ್ವಂತ ಮನೆಯೂ ಆಯಿತು.

ರೇಖಾ ಓದಿನಲ್ಲಿ, ತುಂಬಾ  ಜಾಣೆ.  ಎಸ್.ಎಸ್.‌ಎಲ್.‌ಸಿ. ಯಲ್ಲಿ ‌ ಡಿಸ್ಟಿಂಗಷನ್ನಿನಲ್ಲಿ ಪಾಸಾಗಿ ಪಿಯುಸಿ ಸೇರಿಕೊಂಡಳು.

ಸತೀಶರು ಮುಂಚಿನಿಂದಲೂ ತಮ್ಮ ಅಗತ್ಯಗಳನ್ನು ಆದಷ್ಟು ಸರಳೀಕರಿಸಿಕೊಂಡು ಇತರರಿಗೆ ಸಹಾಯಮಾಡುವ ಸ್ವಭಾವದವರಾಗಿದ್ದರು.  ಗೆಳೆಯ ಗೋಪಾಲ ಒಮ್ಮೆ ಹೇಳಿದ್ದರು.  ತಮ್ಮ ಪರಿಚಯದ ಹುಡುಗನೊಬ್ಬ ತುಂಬಾ  ಕಷ್ಟದಿಂದ ವಿದ್ಯಾಭ್ಯಾಸ ಮಾಡುತ್ತಿದ್ದಾನೆ.  ಅವನ ಕುಟುಂಬ ಹಳ್ಳಿಯಲ್ಲದೆ.  ಮನೆ ತುಂಬಾ ಜನ.  ಅಪ್ಪನ ಆದಾಯ, ರಾವಣನ ಹೊಟ್ಟೆಗೆ ಆರು ಕಾಸಿನ ಮಜ್ಜಿಗೆಯಂತೆ.  ಸಾಧ್ಯವಾದರೆ ಏನಾದರೂ ಸಹಾಯ ಮಾಡು – ಎಂದು.

ಆಯಿತು, ಕಳುಹಿಸು, ಮಾತನಾಡುತ್ತೇನೆ – ಎಂದು ಹೇಳಿದರು.

ಮನೆಗೆ ಬಂದು ಸೀತಮ್ಮನ ಬಳಿ ಮಾತನಾಡಿದರು.  ಅವರು ಎಂದೂ ಇಂಥಹ ಕೆಲಸಗಳಿಗೆ ಬೇಡವೆನ್ನುತ್ತಿರಲಿಲ್ಲ.  ಆದರೆ ಸತೀಶರು – ಹೇಗೂ ಹೊರಗಡೆಯಿಂದಲೇ ಮೆಟ್ಟಿಲುಗಳಿವೆ.  ಮೇಲುಗಡೆ ಸಾಮಾನು ಸರಂಜಾಮುಗಳನ್ನಿಡಲೆಂದು ಕಟ್ಟಿಸಿರುವ ರೂಮನ್ನು ಕೊಡೋಣ, ನಮ್ಮ ಮನೆಯಲ್ಲೇ ಊಟ ತಿಂಡಿ ಮಾಡಲಿ.  ಸಮಯಕ್ಕಿರಲಿ ಎಂದು ಮೇಲುಗಡೆ ಒಂದು ಬಾತ್‌ ರೂಂ ಸಹ ಕಟ್ಟಿಸಿರುವುದರಿಂದ ತಮ್ಮ ಖಾಸಗೀ ಬದುಕಿಗೇನೂ ತೊಂದರೆಯಾಗದು – ಎಂದಾಗ ಮಾರ್ತ ತೀರ್ವವಾಗಿ ವಿರೋಧಿಸಿದರು.  ನೀವು ಹಣಕಾಸಿನ ಸಹಾಯ ಏನು ಬೇಕಾದರೂ ಮಾಡಿ, ಆದರೆ ಇಲ್ಲೇ ಬಂದಿರುವುದು, ಊಟ, ತಿಂಡಿ, ಮುಂತಾದವು ಮಾತ್ರ ಬೇಡ.   ಮನೆಯಲ್ಲಿ ಬೆಳೆಯುತ್ತಿರುವ ಮಗಳಿದ್ದಾಳೆ, ಬೆಂಕಿಯ ಪಕ್ಕ ಬೆಣ್ಣೆ ಇಟ್ಟು ನಂತರ ಪರಿತಪಿಸುವುದು ಖಂಡಿತಾ ಬೇಡ ಎಂದರು.

ಸತೀಶರು ಕೇಳಲಿಲ್ಲ – ಏನೂಂತ ಮಾತನಾಡುತ್ತೀಯ ಸೀತಾ – ಬೆಂಕಿ ಅಂತೆ, ಬೆಣ್ಣೆ ಅಂತೆ.  ಈಗ ಕಾಲ ಎಷ್ಟು ಬದಲಾಗುತ್ತಿದೆ.  ನೀನಿನ್ನೂ ನಿಮ್ಮ ಅಜ್ಜಿ ಹೇಳುತ್ತಿದ್ದ ಗಾದೆ ಮಾತುಗಳಿಗೆ ಕಟ್ಟು ಬಿದ್ದಿರುವೆಯಲ್ಲಾ. ಹಾಗೆ ನೋಡಿದರೆ ಅವಳು ಓದುತ್ತಿರುವುದೇ ಕೋ-ಎಜುಕೇಷನ್‌ ಕಾಲೇಜಿನಲ್ಲಿ.  ಕಾಲೇಜಿನ ತುಂಬಾ ಬೆಂಕಿಗಳೇ, ಬೆಣ್ಣೆಗಳೇ.  ನಿನ್ನ ಮಾತು ಕೇಳಿದರೆ ಅಷ್ಟೆ, ಎಂದು ಸುಮ್ಮನಾಗಿಸಿದರು.  ಸೀತಮ್ಮ  ಯಾವತ್ತೂ ಅಷ್ಟೆ, ಅವರಿಗೆ ಎದುರು ಹೇಳುತ್ತಿರಲಿಲ್ಲ.  ಇಷ್ಟು ಹೇಳಿದ್ದೇ ಹೆಚ್ಚು, ಸುಮ್ಮನಾದರು.

ಎರಡನೇ ವರ್ಷದ ಬಿ.ಎಸ್ಸಿ., ಓದುತ್ತಿದ್ದ ಕಿರಣ್‌ ಮೇಲಿನ ಕೊಠಡಿಗೆ ಬಂದಾಯಿತು.  ಹುಡುಗ ಸಭ್ಯನಂತೆ ಕಾಣುತ್ತಿದ್ದ.  ಸೀತಮ್ಮನಿಗೂ ನೆಮ್ಮದಿಯಾಯಿತು.  ಅವನು ತಾನಾಯಿತು, ತನ್ನ ಓದಾಯಿತು ಎಂದು ಇರುತ್ತಿದ್ದ.

ರೇಖಾ ಪಿಯುಸಿ ಮುಗಿಸಿ ಎಂಜಿನಿಯರಿಂಗ್‌ಗೆ ಸೇರಿಕೊಂಡಳು.  ನಾಲ್ಕು ವರುಷಗಳು ಕಳೆದದ್ದೇ ತಿಳಿಯಲಿಲ್ಲ.  ಯಾವಾಗ ನೋಡಿದರೂ ಸೆಮಿಸ್ಟರ್‌, ಪರೀಕ್ಷೆ, ಪ್ರಾಜೆಕ್ಟ್‌.  ಹೀಗೆ ಕಾಲ ಓಡಿ ಹೋಯಿತು.

ಈ ಮಧ್ಯೆ ಕಿರಣನೂ ತನ್ನ ಬಿ.ಎಸ್ಸಿ., ಮುಗಿಸು ತನಗೆ ಒಂದು ಖಾಸಗೀ ಕಂಪನಿಯಲ್ಲಿ ಕೆಲಸ ಸಿಕ್ಕಿದೆ.  ಹಾಗಾಗಿ ಕಂಪನಿಯ ಹತ್ತಿರವೇ ಇಬ್ಬರು ಸಹೋದ್ಯೋಗಿಗಳೊಂದಿಗೆ ಒಂದು ಪುಟ್ಟ ಮನೆ ಮಾಡಿಕೊಳ್ಳುವುದಾಗಿ ತಿಳಿಸಿ , ಹಣ್ಣು, ಹೂವು, ಸಿಹಿಗಳನ್ನು ಕೊಟ್ಟು ಕೃತಜ್ಞತೆ ತಿಳಿಸಿ ನಮಸ್ಕರಿಸಿ ಹೊರಟು ಹೋದ.

ಏಳನೇ ಸೆಮಿಸ್ಟರ್‌ ಓದುತ್ತಿರುವಾಗಲೇ ಒಂದು ದಿನ ರೇಖಾ ಬಂದು ಹೇಳಿದಳು.  – ಅಪ್ಪಾ ಈಗ ಕಾಲೇಜಿಗೆ ಕ್ಯಾಂಪಸ್ ಸೆಲೆಕ್ಷೆನ್ನಿಗೆ ಎಂದು ಕಂಪನಿಗಳು ಬರುತ್ತಿವೆ.  ಆದರೆ ನನಗೆ ಅಮೆರಿಕಾಗೆ ಹೋಗಿ ಎಂ.ಎಸ್.‌, ಮಾಡಬೇಕೆಂದು ತುಂಬಾ ಆಸೆ.  ಅದು ನನ್ನ ಕನಸು ಕೂಡ ಹೌದು.  ನೀವು  ʼಹುಂʼ ಅಂದರೆ ನಾನು ಕ್ಯಾಂಪಸ್‌ ಸೆಲೆಕ್ಷನ್‌ ಪರೀಕ್ಷೆಗಳನ್ನು ತೆಗೆದುಕೊಳ್ಳುವುದಿಲ್ಲ.  ಬೇಡ ಎಂದರೆ ಒಂದೆರಡು ವರ್ಷಗಳು ಕೆಲಸ ಮಾಡಿ, ಒಂದು ಪುಟ್ಟ ಹಣದ ಗಂಟನ್ನು ಮಾಡಿಕೊಂಡು ನಂತರ ಹೋಗುವೆ. ಹೇಗೂ ಬ್ಯಾಂಕಿನಿಂದ ಎಜುಕೇಶನ್‌ ಲೋನ್‌ ತೆಗೆದುಕೊಂಡೇ  ಹೋಗುವುದಾದರೂ, ಇನಿಷಿಯಲ್‌ ಖರ್ಚುಗಳಿಗೆಂದು ಒಂದಷ್ಟು ಹಣ ಬೇಕಾಗುತ್ತದೆ.  ಇನ್ನು  ನಿಮಗೆ ಹೊರೆಯಾಗಲು ನನಗೆ ಇಷ್ಟವಿಲ್ಲ ಎಂದಳು.

ಮಗಳ ಮಾತು ಕೇಳಿ ಸೀತಮ್ಮ ದಂಗಾಗಿ ಬಿಟ್ಟರೆ, ಸತೀಶರಿಗೆ ಹೆಮ್ಮೆ ಎನಿಸಿತು.

ಸೀತಮ್ಮ – ಸಾಕು, ಸಾಕು, ಏನು ಒಬ್ಬಳೇ ಅಮೆರಿಕಾಗೆ ಹೋಗುವುದೇ.  ಸುಮ್ಮನೆ ಇಂಜಿನಿಯರಿಂಗ್‌ ಮುಗಿಸು.  ಅಷ್ಟರಲ್ಲಿ ಒಂದು ಒಳ್ಳೇ ಗಂಡು ಹುಡುಕುತ್ತೇವೆ.  ಮದುವೆಯಾಗಿ ಸುಖವಾಗಿರು.  ಗಂಡನ ಮನೆಯವರು ಇಷ್ಟಪಟ್ಟರೆ ಕೆಲಸ ಬೇಕಾದರೂ ಮಾಡು.  ನಿನಗೆ ಅದೃಷ್ಟವಿದ್ದರೆ, ಅಮೆರಿಕಾದಲ್ಲರುವ ಗಂಡೇ ಸಿಕ್ಕಿದರೆ, ಅಲ್ಲಿಗೂ ಹೋಗುವಿಯಂತೆ – ಎಂದರು.

ರೇಖಾ – ಅಪ್ಪಾ, . . . . .  ಎನ್ನುತ್ತಾ ಅವರೆಡೆ ನೋಡಿದಳು.  ಅವರು ಸುಮ್ಮನಿರುವಂತೆ ಸನ್ನೆ ಮಾಡಿ,

ಸೀತಾ ನೀನು ಸುಮ್ಮನಿರು, ಈಗ ಕಾಲ ಬದಲಾಗಿದೆ.  ವಿದ್ಯೆಗೆ, ವಯಸ್ಸು, ಲಿಂಗ ಬೇಧವಿಲ್ಲ.  ನಮ್ಮ ಮಗಳು ಅಮೆರಿಕಾಗೆ ಹೋಗಿ ಎಂ.ಎಸ್.‌, ಮಾಡಿ ಬಂದರೆ ಎಷ್ಟು ಹೆಮ್ಮೆ ಎನ್ನಿಸುವುದಿಲ್ಲವೆ? ದೇವಿ ಸರಸ್ವತಿ ಎಲ್ಲರಿಗೂ ಒಲಿಯುವುದಿಲ್ಲ.  ಅವಳು ಒಲಿಯುವಾಗ ನಾವು ಧಿಕ್ಕರಿಸಬಾರದು ಸುಮ್ಮನಿರು – ಎನ್ನುತ್ತಾ ಎಂದಿನಂತೆ ಸೀತಮ್ಮನ ಬಾಯಿ ಮುಚ್ಚಿಸಿ ಮಗಳ ಕಡೆ ತಿರುಗಿ –

ಇಲ್ಲಾ ರೇಖಾ ಪುಟ್ಟಿ, ನೀನು ನಿನ್ನ ಎಂಜಿನಿಯರಿಂಗ್‌ ಮುಗಿಸಿದ ಕೂಡಲೇ ಎಂ.ಎಸ್.‌, ಮಾಡುವ ಏರ್ಪಾಡು ಮಾಡಿಕೋ.  ಅದಕ್ಕೆ ಏನೇನು ತಯಾರಿ ಮಾಡಿಕೊಳ್ಳಬೇಕೋ ಮಾಡಿಕೋ.  ನಾನು ನಿನಗೆ ಯಾವ ಆಸ್ತಿ, ಪಾಸ್ತಿ ಬಂಗಲೆ ಐಷಾರಾಮಿ ಜೀವನ, ಬೆಲೆಬಾಳುವ ಕಾರು ಮುಂತಾದ ಸೌಲಭ್ಯಗಳನ್ನು ಕೊಡಲಾಗಿದ್ದರೂ ನೀನು ಲೋನ್‌ ತೆಗೆದುಕೊಂಡು ಉನ್ನತ ವ್ಯಾಸಂಗ ಮಾಡುತ್ತೀನಿ ಎಂದರೆ ಅದಕ್ಕೆ ಸಹಕರಿಸುವ ಮಟ್ಟಿಗಂತೂ ಖಂಡಿತಾ ಸಬಲನಾಗಿದ್ದೇನೆ. “ಗೋ ಅಹೆಡ್‌ ಮಗಳೇ” – ಅಂದು ಬಿಟ್ಟರು.

ರೇಖಳಿಗೆ ಹೆಸರಾಂತ ʼವರ್ಜೀನಿಯಾ ಟೆಕ್‌ʼ ಯೂನಿವರ್ಸಿಟಿಯಲ್ಲಿ ಸೀಟು ಸಿಕ್ಕಿ ಅಲ್ಲಿಗೆ ಹಾರಿ ಕಾಲೇಜಿಗೆ ಸೇರಿಯೂ ಆಯಿತು.

ತಂದೆ ಒಳ್ಳೆಯ ಕೆಲಸದಲ್ಲಿ ಇರುವುದರಿಂದಲೂ, ಮನೆಯನ್ನು ಒತ್ತೆಯಾಗಿ ಇಟ್ಟಿದ್ದರಿಂದಲೂ ಸುಲಭದಲ್ಲಿ ಬ್ಯಾಂಕಿನಲ್ಲಿ ಸಾಲವೇನೋ ದೊರೆಯಿತು.  ಆದರೆ ಹೋಗುವ ಮುಂಚಿನ ತಯಾರಿಗಳಾಧ ಜಿ ಆರ್‌ ಇ, ಟೋಫೆಲ್‌ ಪರೀಕ್ಷೆಯ ಫೀಸುಗಳು, ಅವುಗಳ ಟ್ಯೂಷನ್‌ ಕ್ಲಾಸುಗಳ ಫೀಸುಗಳು, ನಾಲ್ಕೈದು ಯೂನಿರ್ವಸಿಟಿಗಳಿಗೆ ಅರ್ಜಿ ಹಾಕಲು ಬೇಕಾದ ಖರ್ಚುಗಳು, ಅಲ್ಲಿಯ ಛಳಿ ಪ್ರದೇಶಕ್ಕೆ ಹೊಂದುವಂತಹ ಬಟ್ಟೆ ಬರೆಗಳು, ಒಂದೇ ಎರಡೇ, – ಎಲ್ಲಾ ಖರ್ಚುಗಳೂ ಪೂರೈಸುವಷ್ಟರಲ್ಲಿ ಸತೀಶರ ಬಳಿ ಇದ್ದ ಪುಟ್ಟ ಗಂಟು ಪೂರ್ತಿಯಾಗಿ ಕರಗಿ ಕೈ ಖಾಲಿಯಾಯಿತು.  ಆದರೂ ಅವರು ಅದನ್ನು ಯಾರ ಬಳಿಯೂ , ಸೀತಮ್ಮನ ಬಳಿಯೂ ಬಾಯಿ ಬಿಡಲಿಲ್ಲ.

ಸೀತಮ್ಮನಾದರೋ ತಮ್ಮದೇ ಗಾಭರಿ, ಆತಂಕಗಳ ಮಧ್ಯೆಯೂ, ಮಗಳಿಗೆ ಮಸಾಲೆ ಪುಡಿಗಳು, ಹಪ್ಪಳ ಸಂಡಿಗೆಗಳು, ಚಟ್ನಿಪುಡಿ, ಉಪ್ಪಿನಕಾಯಿಗಳು, ಚಕ್ಕುಲಿ, ಕೋಡುಬಳೆ, ರವೆ ಉಂಡೆ ಕೊಬ್ಬರಿ ಮಿಠಾಯಿ, ಮೈಸೂರು ಪಾಕುಗಳನ್ನು ಮಾಡಿಕೊಟ್ಟರು.

ರೆಕ್ಕೆ ಬಲಿತ ಹಕ್ಕಿ ಗೂಡು ಬಿಟ್ಟು ಹಾರಿತ್ತು.

(ಮುಂದುವರಿಯುವುದು)

ಈ ಕಾದಂಬರಿಯ ಹಿಂದಿನ ಸಂಚಿಕೆ ಇಲ್ಲಿದೆ :     http://surahonne.com/?p=32623

-ಪದ್ಮಾ ಆನಂದ್, ಮೈಸೂರು

12 Comments on “ಕಿರು ಕಾದಂಬರಿ: ಭಾವ ಸಂಬಂಧ- ಎಳೆ 6

  1. ಸೊಗಸಾದ ಕಥಾ ಹಂದರ…ಕಥೆಯು ಸಾಗುತ್ತಿರುವ ರೀತಿ ಬಹಳ ಕುತೂಹಲಕಾರಿಯಾಗಿದೆ.

  2. ತುಂಬಾ ಚೆನ್ನಾಗಿದೆ ಕಿರು ಕಾದಂಬರಿ.

    1. ಧನ್ಯವಾದಗಳು ತಮ್ಮ ನಿರಂತರ ಪ್ರೋತ್ಸಾಹದ ನುಡಿಗಳಿಗೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *