ಮೌನದೊಳಗೆ ಜಗದ ಬೆಳಕಾದೆ!
ಜಗವೆಲ್ಲಾ ಮಲಗಿರಲು ಬುದ್ದನೊಬ್ಬ ಎದ್ದ
ಜಗದ ಜಂಜಡವ ಅರಿತು ಪರಿಹಾರ ಸೂಸಿದ
ಬೋಧಿವೃಕ್ಷದಡಿ ಕುಳಿತು ಮಹಾ ತಪಸ್ಸು ಮಾಡಿ
ಆಸೆಯೇ ದುಃಖಕ್ಕೆ ಮೂಲ ಎಂಬ ಸಂದೇಶವ ನೀಡಿ.
ಸದಾ ನಗುಮುಖವ ಸೂಸುತ
ಎಲ್ಲೆಡೆ ಸಂಚರಿಸಿ ಮಾರ್ಗದರ್ಶನ ನೀಡುತ
ಸಾಗಿದೆ ಸಾಗಿದೆ ನೀ ಎಲ್ಲಾ ಎಲ್ಲೆಗಳ ದಾಟಿ
ಭವ ಬಂಧನಗಳ ಕಳಚಿ ಸಂಚಲನವ ಮೀಟಿ.
ಬುದ್ಧಂ ಶರಣಂ ಗಚ್ಛಾಮಿ ಎಂಬ ಧ್ಯೇಯ ವಾಕ್ಯವ ನೀಡಿ
ಎಲ್ಲರಲ್ಲೂ ಸತ್ಯ, ಸಂಸ್ಕಾರಗಳ ಪೋಷಣೆ ಮಾಡಿ
ಬೌದ್ಧಧರ್ಮ ಪರಿಚಾರಕರಾಗಿ ಆದೆ ನೀನು ತ್ಯಾಗಿ
ಜಗತ್ತಿನೆಡೆಗೆ ಸಂದೇಶವ ಸರಮಾಲೆ ಸಾರಿದ ಯೋಗಿ.
ರಾಜವೈಭವ ಕ್ಷಣಿಕ ಎಂದನರಿತು ನಡೆದೆ
ಎದುರಿಗೆ ಸಿಕ್ಕವರ ಮನಗೆದ್ದು ನುಡಿಮುತ್ತ ನುಡಿದೆ
ಮೌನವಾಗಿದ್ದುಕೊಂಡೆ ಜಗದ ಬೆಳಕಾದೆ
ಸಿದ್ಧಾರ್ಥನಾಗಿದ್ದ ನೀನೇ ಅಂತಿಮವಾಗಿ ಬುದ್ಧನಾದೆ.
ಎಂದೆಂದಿಗೂ ಬೆಳಗುವ ನಂದಾದೀಪದ ರೂವಾರಿ
ನೀ ನಡೆದ ಹಾದಿಯೆಲ್ಲ ಆಯಿತು ಹೆದ್ದಾರಿ
ಜ್ಞಾನವ ಪಡೆದು ಅಜ್ಞಾನವ ನೀಗಿಸಿದ ಸಂಚಾರಿ
ನೀ ಎಂದೆಂದಿಗೂ ಸರ್ವರಿಗೆಲ್ಲ ಮಾದರಿ.
-ಕಾಳೀಹುಂಡಿ ಶಿವಕುಮಾರ್ , ಮೈಸೂರು.
ಅರ್ಥಗರ್ಭಿತವಾದ ಕವನ
ವಂದನೆಗಳು
ಸಾಂದರ್ಭಿಕ ಕವನ ಚೆನ್ನಾಗಿದೆ ಮೂಡಿ ಬಂದಿದೆ ಸಾರ್ ಅಭಿನಂದನೆಗಳು.
ಚೆನ್ನಾಗಿದೆ
ಅಹಿಂಸೆ,ತ್ಯಾಗ,ಶಾಂತಿ ಸಂದೇಶಗಳನ್ನು ಜಗತ್ತಿಗೆ ಸಾರಿದ ಮಹಾಪುರುಷ.. ಗೌತಮ ಬುದ್ಧ.. ಸಕಾಲಿಕ ಸುಂದರ ಕವನ.
ಬುದ್ದನಂತಹ ಮಹಾಮಹಿಮರ ಬಗ್ಗೆ ಬರೆದಷ್ಟೂ ಇನ್ನೂ ಇರುತ್ತದೆ. ಓದಿದಷ್ಟೂ ಇನ್ನೂ ಓದುವ ಇಷ್ಟವಾಗುತ್ತದೆ. ಕವನ ಅರ್ಥವತ್ತಾಗಿದೆ. ಅಭಿನಂದನೆಗಳು.