ಕಿರುಗತೆ : ಬಣ್ಣದ ಡ್ರೆಸ್
ಅವಳಿನ್ನೂ ಪುಟ್ಟ ಹುಡುಗಿ. ಅಪ್ಪ ಸೈನಿಕ. ದೂರದ ಗಡಿಯಲ್ಲಿ ಕೆಲಸ.
ಕಳೆದ ವಾರವಷ್ಟೇ ಸ್ಕೈಪಲ್ಲಿ ಬಂದು ಮಗಳೊಡನೆ ಬಹಳ ಹೊತ್ತು ಮಾತಾಡಿದ್ದ. ʼಪುಟ್ಟಿ, ಮುಂದಿನ ತಿಂಗಳು ನಾನು ಬರುತ್ತೇನೆ. ನೀನು ಶಾಲೆಗೆ ಚಕ್ಕರ್ ಹೊಡೆಯಬಾರದು. ಕ್ಲಾಸಲ್ಲಿ ತಂಟೆ ಮಾಡಬಾರದು. ಚೆನ್ನಾಗಿ ಓದಬೇಕು. ಅಮ್ಮನಿಗೆ ಹಠ ಮಾಡಿ ತೊಂದರೆ ಕೊಡಬಾರದು. ನಾನು ಬರುವಾಗ ನಿನಗೆ ಒಳ್ಳೆಯ ಮೂರು ಬಣ್ಣದ ಡ್ರೆಸ್ ತರುತ್ತೇನೆʼ ಎಂದಿದ್ದ. ಮಗಳಿಗೆ ಖುಷಿಯೋ ಖುಷಿ. ಅಪ್ಪ ತರುವ ಬಣ್ಣ ಬಣ್ಣಗಳ ಉಡುಗೆಯ ಕನಸು.
ತಿಂಗಳ ಕೊನೆಯಲ್ಲಿ ಅಪ್ಪನ ದೇಹವನ್ನು ಮನೆಗೆ ತಂದರು. ನಂತರ ಮಿಲಿಟರಿ ಮರ್ಯಾದೆಯೊಡನೆ ಅಂತಿಮ ಕಾರ್ಯಕ್ಕೆ ಅಣಿಮಾಡಲು ಕೊಂಡೊಯ್ದರು.
ಏನೂ ಅರಿಯದ ಪುಟ್ಟ ಮಗಳು ಅಂತಿಮ ಸಂಸ್ಕಾರದ ಸಮಯ, ಅಪ್ಪನ ದೇಹ ತಂದ ಸೈನಿಕನೊಬ್ಬನ ಬಳಿ ಮೆಲು ಧ್ವನಿಯಲ್ಲಿ ಕೇಳಿದಳು, ʼಅಪ್ಪ ಯಾಕೋ ಇನ್ನೂ ಮಲಗಿದ್ದಾರೆ. ಅವರು ನನಗೆ ಮೂರು ಬಣ್ಣದ ಡ್ರೆಸ್ ತರ್ತೀನಿ ಅಂದಿದ್ದರು. ತಂದಿದ್ದಾರಾ ಅಂಕಲ್?ʼ
ಸೈನಿಕ ಅವಳನ್ನು ಅಪ್ಪನ ದೇಹದ ಬಳಿ ಕೊಂಡೊಯ್ದ, ಅದರ ಮೇಲೆ ಹೊದಿಸಿದ್ದ ಧ್ವಜ ತೆಗೆದು ಮಡಚಿ ಅವಳ ಕೈಯಲ್ಲಿಟ್ಟು ಹೇಳಿದ ʼಮಗೂ. ಈ ಧ್ವಜವನ್ನು ಎತ್ತಿ ಹಿಡಿಯಲು ನಿನ್ನ ಅಪ್ಪ ಹೋರಾಡಿದ್ದಾರೆ ಗೊತ್ತಾ? ಅದರ ನೆನಪಿಗೆ ಇದನ್ನು ನಿನ್ನ ಬಳಿ ಇಟ್ಟುಕೊ. ಇದು ನಿನ್ನ ಬಳಿ ಇದ್ದರೆ ಅಪ್ಪನಿಗೆ ತುಂಬಾ ಖುಷಿಯಾಗುತ್ತದೆ.ʼ
ಸೈನಿಕನ ಮಾತು ಅವಳಿಗೆ ಅಷ್ಟಾಗಿ ಅರ್ಥವಾಗಲಿಲ್ಲ. ಧ್ವಜದ ಕೇಸರಿ, ಬಿಳಿ, ಹಸಿರಿನ ಮೂರು ಬಣ್ಣಗಳು ಅವಳ ಮನಸ್ಸು ಹೊಕ್ಕಿತು.
ತನ್ನ ಪುಟ್ಟ ಮಗಳ ಭವಿಷ್ಯವೂ ತ್ರಿವರ್ಣ ಧ್ವಜದ ರಕ್ಷಣೆಗೇ ಮುಡಿಪು ಎಂದು ಅಲ್ಲಿ ಮೌನದಲ್ಲಿ ಕುಳಿತ ತಾಯಿ ಹೃದಯ ನಿರ್ಧರಿಸಿತು.
– ಅನಂತ ರಮೇಶ್
ವಾವ್ ಪುಟ್ಟ ಕಥೆಯಲ್ಲಿ ಏನೆಲ್ಲಾ ಅಡಗಿಸಿದ್ದೀರಾ ಸಾರ್ ತುಂಬಾ ಆಪ್ತವಾಗಿದೆ ಧನ್ಯವಾದಗಳು.
ಧನ್ಯವಾದಗಳು.
ಸೊಗಸಾದ ಕಥೆ..
ಧನ್ಯವಾದಗಳು.
ಓದುತ್ತಾ ಕಣ್ಣು ತುಂಬಿ ಬಂದ ಭಾವ,ಕತೆಯ ಭಾವ
ಮನಸ್ಸು ನ್ನು ಕದಲಿಸಿತು,,,ಕೆಲವೇ ಸಾಲುಗಳು
ಓದಿದವರನ್ನೆಲ್ಲಾ,,,ಮುದಗೊಳಿಸುವ ಒಳ್ಳೆಯ ಕತೆ
ಧನ್ಯವಾದಗಳು.
ಮನತುಂಬಿ ಎದೆತುಂಬಿ ಕಣ್ಣಂಚಿನಲ್ಲಿ ನೀರು ಜಿನುಗಿತ್ತು ವಂದನೆಗಳು
ಧನ್ಯವಾದಗಳು.
ಹೃದಯ ಸ್ಪರ್ಶಿ
ಧನ್ಯವಾದಗಳು.
ಮನ ತಟ್ಟಿದ ಕಥೆ
ಧನ್ಯವಾದಗಳು.
ಮನಕಲಕುವ ಕಥೆ. ಅಂತ್ಯದಲ್ಲಿ ತಾಯಿಯ ನಿರ್ಧಾರವಂತೂ ದೇಶಪ್ರೇಮದ ಪರಕಾಷ್ಟೆಯ ಮತ್ತೊಂದು ಮಜಲು. ಚಿಕ್ಕ ಚೊಕ್ಕ ಕಥೆ.
ಧನ್ಯವಾದಗಳು.
ಅರ್ಥವತ್ತಾದ, ಮನಕಲಕುವ ಕಿರುಗತೆ ಬಹಳ ಚೆನ್ನಾಗಿದೆ ಸರ್.
ಧನ್ಯವಾದಗಳು.