ಕಿರು ಕಾದಂಬರಿ: ಭಾವ ಸಂಬಂಧ- ಎಳೆ 2

Share Button


(ಕಳೆದ ಸಂಚಿಕೆಯಿಂದ : ವಿಶಿಷ್ಟ ಸನ್ನಿವೇಶದಲ್ಲಿ ಭೇಟಿಯಾಗಿ, ಇತ್ತೀಚೆಗೆ ಒಂದೇ ಮನೆಯಲ್ಲಿ ವಾಸಿಸಲಾರಂಭಿಸಿದ ಒಂಟಿಜೀವಗಳಾದ ಸೀತಕ್ಕ ಹಾಗೂ ನರ್ಸ್ ಸರಸ್ವತಿ ಅವರ ನಡುವೆ ಬಹಳ ಆತ್ಮೀಯವಾದ ಬಾಂಧವ್ಯ ಬೆಳೆಯುತ್ತಿದೆ. ಅವರಿನ್ನೂ ಪರಸ್ಪರರ ಗತಜೀವನದ ಬಗ್ಗೆ ತಿಳಿಯಲು ಆಸಕ್ತಿ ತೋರಿಸಿರಲಿಲ್ಲ. …..ಮುಂದಕ್ಕೆ ಓದಿ)

ಸರಿ ಸೀತಕ್ಕ, ನನಗೆ ಖಂಡಿತಾ ನಿಮ್ಮ ಬಗ್ಗೆ ತಿಳಿದುಕೊಳ್ಳಲು ಆಸೆ ಇದೆ.  ಕೆಟ್ಟ ಕುತೂಹಲ ಖಂಡಿತಾ ಇಲ್ಲ, ಕಂತೆ ಪುರಾಣ, ಗಿರಾಣ ಅಂತ ಏಕನ್ನುತ್ತೀರಿ, ನಿಮಗೆ ಹೇಳಬೇಕೆನ್ನಿಸಿದರೆ, ಅದರಿಂದ ನಿಮ್ಮ ಮನಕ್ಕೆ ಕಿಂಚಿತ್ತಾದರೂ ಸಮಾಧಾನ ಸಿಕ್ಕರೆ ನನಗೆ ಅಷ್ಟೇ ಸಾಕು ಹೊರತು ಕೆಟ್ಟ ಕುತೂಹಲ ಖಂಡಿತಾ ಇಲ್ಲ.

ಅಯ್ಯೋ ಆದರೂ ಎಂಥಹ ಮಾತೃ ಹೃದಯವೇ ತಾಯಿ ನಿಂದು. ಸಾಧಾರಣದಲ್ಲಿ ಸಾಧಾರಣ ಗೃಹಿಣಿ ನಾನು, ನಂದೇನು ದೊಡ್ಡ ಸಾಧಕರ ಕಥೆಯೇನೂ ಅಲ್ಲ, ಹೇಗೂ ಒಟ್ಟಿಗೆ ಇರುವ ತೀರ್ಮಾನ ಮಾಡಿದ್ದೀವಿ, ಅದಕ್ಕೆ ನನ್ನ ಬಗ್ಗೆ ನಿಂಗೆ ಎಲ್ಲಾ ಗೊತ್ತಿರಬೇಕು ಅನ್ನಿಸ್ತು.  ಅಲ್ಲದೆ ಯಾಕೋ ಹೇಳ್ಕೋಬೇಕು ಅಂತಾನೂ ತುಂಬಾ ಅನ್ನಿಸ್ತಾ ಇದೆ.  ಇರಲಿ, ಈಗ ಕಣ್ಣೆಳೆಯುತ್ತಾ ಇದೆ, ಈವತ್ತು ಯಾಕೋ ಸ್ವಲ್ಪ ಜಾಸ್ತೀನೇ ಆಯಾಸಾ ಆಯ್ತು, ಮಲಕ್ಕೋತೀನಿ, ನಾಳೆ ಬೇರೆ ನನ್ನ ಬಾಯಿಗೆ ರೆಸ್ಟೇ ಇರೋದಿಲ್ಲ – ಎನ್ನುತ್ತಾ ಮಗ್ಗುಲು ಬದಲಾಯಿಸಿ ಮಲಗಿದ ಸೀತಕ್ಕ ಎರಡು ನಿಮಿಷಗಳಲ್ಲೇ ಸಣ್ಣಗೆ ಗೊರಕೆ ಹೊಡೆಯಲು ಪ್ರಾರಂಭಿಸಿದರು.

ಮಧ್ಯಾನ್ಹ ಒಳ್ಳೆಯ ನಿದ್ರೆಯಾಗಿದ್ದ ಸರಸ್ವತಿಗೆ, ತೇಲುತ್ತಾ, ಮುಳು ಮುಳುಗೇಳುತ್ತಾ  ಸಾಗುತ್ತಿರುವ ಜೀವನದ ಘಟನೆಗಳು, ಅದರ ಮಧ್ಯೆ ಇದ್ದಕ್ಕಿದಂತೆ ಬಾಂಧವ್ಯ ಬೆಳೆದು ತನ್ನವರೆನಿಸ ಹತ್ತಿದ ಸೀತಕ್ಕನ ಪರಿಚಯವಾದ ಘಟನೆಗಳ ನೆನಪಿನ ಮೆರವಣಿಗೆ ಒಂದರ ಹಿಂದೊಂದರಂತೆ ಕಣ್ಣ ಮುಂದೆ ಬರತೊಡಗಿತು.

ಸೀತಮ್ಮನವರೆಂದಂತೆ,  ಅವರದಾಗಲೀ,  ಈಗ ಅವರ ಜೊತೆಗಿರುವ ಸರಸ್ವತಿಯದಾಗಲೀ ಅಂತಹ  ಹೆಚ್ಚುಗಾರಿಕೆಯಿರದ, ಹೇಳಿಕೊಳ್ಳುವಂತಹ  ರೋಚಕತೆಗಳಿರದ ಸ್ತ್ರೀಸಾಮಾನ್ಯ ಜೀವನ.

ಸರಸ್ವತಿಯದಾದರೋ ಚಿಕ್ಕ ವಯಸ್ಸಿನಲ್ಲೆ ತಾಯಿಯನ್ನು ಕಳೆದುಕೊಂಡು, ಮಲತಾಯಿಯ ಕೈಯಲ್ಲಿ, ಚಟ್ನಿಯ ಖಾರವೂ ಅಲ್ಲ, ಮೆಣಸಿನಕಾಯಿಯ ಖಾರದಂತೆ ರುಬ್ಬಿಸಿಕೊಂಡು, ಬಾಯಿ ಸತ್ತ ಅಪ್ಪನ ಕಣ್ಣುಗಳಲ್ಲಿ ಕಂಡೂ ಕಾಣದಂತೆ ಅನುಭವ ವೇದ್ಯವಾಗುತ್ತಿದ್ದ ಕರುಣೆಯ ಸೆಲೆಯೊಂದನ್ನೇ ನಂಬಿ ನೀರಸವಾಗಿ ಸಾಗುತ್ತಿದ್ದ ಜೀವನ.  ಆದರೂ ಚಿಕ್ಕಮ್ಮನ ಶಿಸ್ತು ಎಂಬ ಮುಖವಾಡ ಧರಿಸಿದ ಅಮಾನವೀಯ ಕಡಿವಾಣವೇ ತಾ ಮಾಡುವ ಕೆಲಸಗಳನ್ನು ಪರಿಪೂರ್ಣತೆಯಿಂದ ಕಲಿಯುವಂತೆ ಮಾಡಿತು.  ಆ ಸಮಯದಲ್ಲಿ ಅದು ನರಕವೇನೋ ಎನ್ನುವಷ್ಟರ ಮಟ್ಟಿಗೆ ಪುಟ್ಟ ಮನಸ್ಸು ರೋಸಿ ಹೋಗುತ್ತಿದ್ದರೂ, ನೋಯುತ್ತಿದ್ದರೂ, ಮುಂದಿನ ದಿನಗಳಲ್ಲಿ ಬದುಕು ಕಟ್ಟಿಕೊಳ್ಳಲು, ಕಷ್ಟಗಳನ್ನು ಧೈರ್ಯವಾಗಿ ಎದುರಿಸಲು ನೆರವಾಯಿತು ಎನ್ನುವುದಂತೂ ಸುಳ್ಳಲ್ಲ.  ಎಷ್ಟರ ಮಟ್ಟಿಗೆ ಎಂದರೆ, ಹಬ್ಬ ಹರಿದಿನಗಳು ಬಂದರೆ ಬಾಗಿಲಿಗೆ ತೋರಣ ಕಟ್ಟ ಬೇಕೆಂದರೆ, ಹಿಂದೆ ಕಟ್ಟಿದ್ದ ದಾರವನ್ನೇ ಉಪಯೋಗಿಸ ಬೇಕೆಂಬುದೇನೋ ಸಾಧುವೇ ಸರಿ, ಆದರೆ ಅದಕ್ಕೆ ಚುಚ್ಚಿದ್ದ ಕಡ್ಡಿಗಳನ್ನೇ ಮತ್ತೆ ತೆಗೆದು ಚುಚ್ಚಬೇಕು.  ಮಾವಿನೆಲೆಗಳು ಮಾತ್ರ ಹೊಸದು ಅಷ್ಟೆ.

ಹಾಗೆಯೇ ಹೂ ಕಟ್ಟುವಾಗಲೂ ಅಷ್ಟೆ.  ಹಿಂದಿನ ದಿನ ಕಟ್ಟಿದ ಹೂವಿನ ಮಾಲೆಯ ಒಣಗಿದ ಹೂಗಳನ್ನು ತರಚಿ ತೆಗೆದು, ಅದೇ ದಾರದಲ್ಲಿ ಹೊಸ ಹೂಗಳನ್ನು ಹಾಕಿ ಮಾಲೆ ಕಟ್ಟಬೇಕು.  ಅಕಸ್ಮಾತ್‌, ಹೊಸ ದಾರ ತೆಗೆದುಕೊಂಡರೆ ಅಷ್ಟೆ, ಗಿಣ್ಣುಗಳ ಮೇಲೆ ಬೀಳುತಿತ್ತು, ಏಟುಗಳು.

ಬೆಳಗೆದ್ದು ತೊಳೆಯಲು ರಾತ್ರಿ ಹಾಕಿದ ಮುಸುರೆಯ ಪಾತ್ರೆಗಳು ಒಣಗಬಾರದೆಂದು  ನೀರು ತುಂಬಿಸಿ ಇಡುವಂತಿಲ್ಲ.  ಒಂದು ಪಾತ್ರೆಗೆ ನೀರು ಹಾಕಿ, ಪಾತ್ರೆಯನ್ನು ಒದ್ದೆ ಮಾಡಿ, ಆ ನೀರನ್ನು ಇನ್ನೊಂದು ಪಾತ್ರೆಗೆ ಬಗ್ಗಿಸಿ, ಹಿಂದಿನ ಪಾತ್ರೆಯನ್ನು ಬೋರಲು ಹಾಕಿಡಬೇಕು.  ಹಾಗೇ ಒಂದೇ ಪಾತ್ರೆಗೆ ಹಾಕಿದ ನೀರಿನಂದ ಎಲ್ಲಾ ಪಾತ್ರೆಗಳನ್ನು ಒದ್ದೆ ಮಾಡಬೇಕು.  ಒದ್ದೆ ಮಾಡಿದ ಪಾತ್ರೆಗಳನ್ನು ಬೋರಲಾಗಿಟ್ಟರೆ ಅವು ಒಣಗುವುದಿಲ್ಲ.  ಇದು ಚಿಕ್ಕಮ್ಮನ ಅಡುಗೆ ಮನೆಯ ಅನುಭವದ ಕಟ್ಟಪ್ಪಣೆಯಾದರೆ ನಂತರದ ದಿನಗಳಲ್ಲಿ ಶಾಲೆಯಲ್ಲಿ ಗುರುಗಳು, ಗಾಳಿಯಾಡದ್ದರಿಂದ ಒದ್ದೆ ಹಾಗೇ ಇರುವುದು ʼವಿಜ್ಞಾನʼ ಎಂದಾಗ, ಅಚ್ಚರಿಗೊಳ್ಳುವ ಸರದಿ ಸರಸ್ವತಿಯದಾಗಿತ್ತು.

ಅಂತೂ ಇಂತೂ ಪ್ರೀತಿಯ ಹಂಬಲದಲ್ಲೇ, ಯೌವನಕ್ಕೆ ಕಾಲಿಟ್ಟ ಸರಸ್ವತಿ, ಯಾವುದೋ ಒಬ್ಬ ಹುಂಬ, ಬೇಜವಾಬ್ದಾರೀ, ಅಪಕ್ವ ಯುವಕನ ಬಣ್ಣದ ಮಾತುಗಳಿಗೆ ಮನಸೋತು, ನಾಲಿಗೆ ಸತ್ತ ಅಪ್ಪ, ಅಭಿಮಾನ ಶೂನ್ಯ ಚಿಕ್ಕಮ್ಮನ ಮನೆಯಿಂದ ನಗರಕ್ಕೆ ಓಡಿ ಬಂದು ಅಪಾತ್ರನಿಗೆ ತನ್ನೊಲವಿನ ಪ್ರೀತಿಯನ್ನು ಮನಸಾರೆ ಧಾರೆಯೆರದದ್ದು, ಇರುಳು ಕಂಡ ಬಾವಿಯಲ್ಲಿ ಹಗಲು ಬಿದ್ದಂತಾಯಿತು.  ಬಾಳಿಗಾಸರೆಯಾಗುತ್ತೀನೆಂದು ನಂಬಿಸಿ ಕರೆತಂದ ಇನಿಯ, ಒಡಲ ತುಂಬಿ ಓಡಿಹೋದಾಗ, ಕಾಣದ ನಾಡಿನಲ್ಲಿ ಕಣ್ಣು ಕಟ್ಟಿ ಬಿಟ್ಟಂತಾಗಿತ್ತು ಇವಳ ಪರಿಸ್ಥಿತಿ.   ಅಂತಹ ಸಮಯದಲ್ಲೀ ಪರಿಚಯವಾದವರು ಮುಂದಿನ ಬೀದಿಯಲ್ಲಿದ್ದ ರಾಜಮ್ಮ, ರಾಮರಾಯ ದಂಪತಿಗಳು.

ರಾಯರದು ಒಳ್ಳೆಯ ಸ್ಥಾನಮಾನಗಳಿದ್ದ ಸರ್ಕಾರೀ ನೌಕರಿ.  ಆರ್ಥಿಕವಾಗಿ ಆಗರ್ಭ ಶ್ರೀಮಂತರಲ್ಲದಿದ್ದರೂ, ಉಳ್ಳವರು ಎಂದೇ ಹೇಳಬಹುದಿತ್ತು.  ದಂಪತಿಗಳಿಗೆ ಮಕ್ಕಳಿರಲಿಲ್ಲ.   ರಾಜಮ್ಮನವರಿಗೆ ಚಿಕ್ಕ ವಯಸ್ಸಿನಲ್ಲೇ ಮಧುಮೇಹ ಬಂದಿತ್ತಾದ್ದರಿಂದ ನಲವತ್ತು ವರ್ಷಗಳಿಗೇ ಮಂಡಿನೋವಿನಿಂದ ತೀವ್ರವಾಗಿ ನರಳುತ್ತಿದ್ದರು.  ರಾಯರು ಒಳ್ಳೆಯ ಸ್ಥಾನಮಾನ ಹೊಂದಿದ್ದರಿಂದಲೂ ದಂಪತಿಗಳಿಬ್ಬರ ಕಡೆಯೂ ಸಾಕಷ್ಟು ಬಂಧು ಬಾಂಧವರು ಇದ್ದ ಕಾರಣ ಮನೆಗೆ ಬರುವವರು, ಹೋಗುವವರು ವಿಪರೀತ. ಹಾಗಾಗಿ ಯಾರನ್ನಾದರೂ ಸಹಾಯಕ್ಕೆ ಇಟ್ಟುಕೊಳ್ಳುವುದು ಲೇಸು ಎಂದು ಯೋಚಿಸುತ್ತಿದ್ದರು.  ಇಂತಹ ಸಮಯದಲ್ಲೇ ಸರಸ್ವತಿ ರಾಜಮ್ಮನವರ ಸಂಪರ್ಕಕ್ಕೆ ಬರುವಂತಾಗಿ, ಸರಸ್ವತಿ, ಒಂದು ಚೂರೂ ಮುಚ್ಚು ಮರೆಯಿಲ್ಲದೆ ತನ್ನ ಕಥೆ, ವ್ಯಥೆಯನ್ನೆಲ್ಲಾ ಅವರ ಮುಂದೆ ಹೇಳಿದಾಗ ಅವರ ಹೃದಯ ಮರುಗಿ, ತನಗೆ ಮನೆಯಲ್ಲಿ ಸಹಾಯಕಳಾಗಿ ಇರುವಂತೆ ತಿಳಿಸಿ, ಹಿಂದೆ ಇರುವ ಚಿಕ್ಕ ಔಟ್‌ ಹೌಸಿನಲ್ಲೆ ವಾಸ ಇರುವ ವ್ಯವಸ್ಥೆಯನ್ನೂ ಮಾಡಿಕೊಟ್ಟರು.  ಅವಳ ನೇರ, ಸರಳ ನಡುವಳಿಕೆಯಲ್ಲದೇ ದಿಟ್ಟವಾಗಿ ಎಲ್ಲವನ್ನೂ ಬಿಚ್ಚಿಟ್ಟಿದ್ದೇ ಅವರ ಮನವನ್ನು ತಟ್ಟಿದ್ದು.

ಆದಾಗ್ಯೂ ರಾಜಮ್ಮನವರ ಮನಸ್ಸು, ಬಸುರಿ ಹುಡುಗಿ, ನನ್ನನ್ನೇ ನೋಡಿಕೊಳ್ಳಲು ಒಂದು ಜನ ಬೇಕು.  ಈಗೇನೋ ಸರಿ, ಮುಂದೆ  ಮಗು ಹುಟ್ಟಿದಾಗ, ನಂತರದ ದಿನಗಳು ಹೇಗಪ್ಪಾ ಎಂದು ಬುದ್ದಿ ಚಿಂತಿಸಿದರೂ ಹೃದಯ ಸರಸ್ವತಿಯೆಡೆಗೆ ಅನುಕಂಪವನ್ನೇ ಬೀರಿತ್ತು.

ತಮ್ಮ ದುಗುಡವನ್ನು ಯಜಮಾನರ ಹತ್ತಿರ ಹಂಚಿಕೊಂಡಾಗ, ರಾಮರಾಯರು –

ನೋಡು ರಾಜು, ಹುಡುಗಿ ನೋಡಲೇನೋ ಸಂಭಾವಿತಳಂತೆ, ಒಳ್ಳೆಯ ಕುಟುಂಬದಿಂದ ಬಂದಂತೆ ಕಾಣುತ್ತಾಳೆ.  ಏನೋ ವಯಸ್ಸಿನ ದೆಸೆಯಿಂದ ತಪ್ಪು ನಿರ್ಧಾರ ತೆಗೆದುಕೊಂಡು ತೊಂದರೆಯಲ್ಲಿದ್ದಾಳೆ.   ಅಲ್ಲದೇ ನಿನಗೆ ಮನಸ್ಸಮಾಧಾನ ಸಿಗುತ್ತದೆ ಎಂದಾದರೆ ಇಟ್ಟುಕೋ.  ಏನೂ ಚಿಂತಿಸ ಬೇಡ.  ನಮಗೂ ಒಬ್ಬ ಅಗತ್ಯವಿರುವ ಹೆಣ್ಣು ಮಗಳಿಗೆ ಸಹಾಯ ಮಾಡಿದ ಸಮಾಧಾನವಿರುತ್ತದೆ.  ಅಲ್ಲದೇ ನಿನಗೂ ಸಹಾಯವಾಗುತ್ತದೆ.  ಅಕಸ್ಮಾತ್‌, ನಮ್ಮ ಲೆಕ್ಕಾಚಾರ ತಪ್ಪಾಗಿ, ಅವಳು ಸರಿಯಿಲ್ಲ ಅನ್ನಿಸಿದರೆ, ಅವಳಿಂದ ನಮಗೇನೂ ತೊಂದರೆಯಾಗದಂತೆ ಅವಳನ್ನು ನಿವಾರಿಸಿಕೊಳ್ಳುವ ಯುಕ್ತಿ, ಶಕ್ತಿ ಎರಡೂ ನನಗಿದೆ.  ನೀನು ಯೋಚಿಸಿ ಆಯಾಸ ಮಾಡಿಕೊಳ್ಳದೇ ಮುಂದುವರಿ ಎಂದಾಗ ರಾಜಮ್ಮನವರ ಮನಸ್ಸು ನಿರಾಳವಾಯಿತು.

ಸರಸ್ವತಿಯೂ ತಾನು ಸುಸಂಸ್ಕೃತರ ನೆರಳಿಗೆ ಬಂದಾಯಿತೆಂದೂ, ಅವರಿಬ್ಬರಿಗೂ ಆದಷ್ಟೂ ತನ್ನಿಂದ ಸಹಾಯವಾಗುವಂತೆಯೂ,  ತೊಂದರೆಯಾಗದಂತೆಯೂ  ಇರಬೇಕೆಂದು ನಿರ್ಧರಿಸಿದಳು. ಎಂಟು ಹತ್ತು ದಿನಗಳಲ್ಲೇ ಅವಳ ಕರ್ತವ್ಯಪರತೆ, ಅಚ್ಚುಕಟ್ಟುತನಗಳು ದಂಪತಿಗಳಿಗೆ ತುಂಬಾ ಇಷ್ಟವಾಯಿತು.  ಸ್ವಭಾವತಃ  ಜಾಣೆಯಾದ ಸರಸ್ವತಿ ಎಲ್ಲಾ ಕೆಲಸಗಳನ್ನು ಸುಲಭವಾಗಿ ಮಾಡಿಕೊಂಡು ಹೋಗುತ್ತಿದ್ದಳು.  ದಿನಗಳು ಸುಲಭವಾಗಿ ಸಾಗುತ್ತಿದ್ದವು.

ಅವಳ ವಾಸ್ತವ್ಯ ಯಾವಾಗಲೋ ಔಟ್‌ ಹೌಸಿನಿಂದ ಮೈನ್‌ ಹೌಸಿಗೇ ಶಿಫ್ಟ್‌ ಆಗಿ ಆಗಿತ್ತು.  ತನ್ನ ಸ್ವಂತ ಮನೆಗಿಂತ ಹತ್ತು ಪಟ್ಟು ಜಾಸ್ತಿ ಇಲ್ಲಿ ಸುಖವಾಗಿದ್ದಳು.  ಏಕೆಂದರೆ ಇಲ್ಲಿ ಬಡತನವಿರಲಿಲ್ಲ.  ಎಲ್ಲಾ ನವನವೀನ ಉಪಕರಣಗಳಿದ್ದವು.  ಒಮ್ಮೆ ಹೇಳಿಕೊಟ್ಟ ಕೂಡಲೇ ಎಲ್ಲವನ್ನು ಕಲಿತುಬಿಡುತ್ತಿದ್ದಳು.  ಎಷ್ಟರ ಮಟ್ಟಿಗೆ ಎಂದರೆ, ರಾಯರ ಕಾಗದ ಪತ್ರಗಳನ್ನೂ ನಕಲು ಮಾಡುವುದು, ಕಂಪ್ಯೂಟರಿನಲ್ಲಿ ಟೈಪ್‌ ಮಾಡುವುದು , ರಾಜಮ್ಮನವರ ಮಂಡಿಗೆ ಎಣ್ಣೆ ನೀವುವುದು, ಅವರನ್ನು ನಿಧಾನವಾಗಿ ಅಂಗಳದಲ್ಲೇ ಓಡಾಡಿಸುವುದು ಎಲ್ಲವನ್ನೂ ಅತ್ಯಂತ ಮುತುವರ್ಜಿಯಿಂದ ಮಾಡುತ್ತಿದ್ದಳು.  ಏಕೆಂದರೆ ಅವಳಿಗೆ ಕೆಲಸದಲ್ಲಿ ಶ್ರದ್ಧೆಯಿತ್ತು, ತುಂಬು ಮನದ ಕೃತಜ್ಞತೆಯಿತ್ತು.

ಒಮ್ಮೊಮ್ಮೆ ಯೋಚಿಸುತ್ತಿದ್ದಳು.  – ಏನು ನನಗೆ ಭಾವನೆಯೇ ಇಲ್ಲವೆ, ನಾ ಹುಟ್ಟಿ ಬೆಳೆದ ಮನೆಯ ನೆನಪೇ ಆಗುವುದಿಲ್ಲವಲ್ಲ ನನಗೆ – ಎಂದು.

ನಂತರ ತನ್ನನ್ನು ತಾನೇ ಸಮಾಧಾನಪಡಿಸಿಕೊಳ್ಳುತ್ತಿದ್ದಳು.  – ಕೃಷ್ಣ, ದೇವಕೀ, ವಸುದೇವರಿಗೆ ಹುಟ್ಟಿದರೂ ಯಶೋಧೆ, ನಂದಗೋಪರ ಮಡಿಲಲ್ಲಿ ಬೆಳೆಯಲಿಲ್ಲವೆ, ನಾನೇನೂ ಕೃಷ್ನನಂತೆ ಮಹಾನ್‌ ಅಲ್ಲದಿದ್ದರೂ, ನಾ ನಂಬಿ, ಕೆಟ್ಟು, ಕಳಂಕಿತಳ ಪಟ್ಟ ಹೊತ್ತು, ಅಲ್ಲಿ ಹೋಗಿ, ಅವರ ಮಾನ ಕಳೆದು, ಮೂದಲಿಕೆಗಳಿಂದ ಬದುಕುವ ಬದಲು, ತಾಯಿ ತಂದೆಯಂತೆ ಸಲಹುತ್ತಿರುವ ಇವರೊಂದಿಗೆ ಬದುಕಿಯೇ ನನ್ನ ಜೀವನನವನ್ನು ಕಟ್ಟಿಕೊಳ್ಳುವುದು ಒಳಿತು – ಎಂದು.

ರಾಜಮ್ಮನವರೂ ನೋವು ಕಮ್ಮಿಯಿದ್ದಾಗಲೆಲಲ್ಲಾ ಪುರಾಣ, ಪುಣ್ಯ ಕಥೆಗಳನ್ನು ಓದುತ್ತಿರುತ್ತಿದ್ದರು.  ಅವರು ಸರಸ್ವತಿಗೆ ಜೀವನದ ಪಾಠಗಳನ್ನು ಹೇಳಿಕೊಡುತ್ತಿದ್ದರು.  –

ನೋಡು ಮಗಳೇ, ಜೀವನ ಹೂವ ಹಾಸಿಗೆಯಂತೂ ಖಂಡಿತಾ ಅಲ್ಲ.  ಆದರೂ ನಾವು ಜೀವಿಸಿ ಈ ಯಾನವನ್ನು ಪೂರೈಸಲೇ ಬೇಕು.   ಮಧ್ಯೆ ಮಧ್ಯೆ ಖಂಡಿತಾ ಸುಖ ಸಂತೋಷಗಳೂ ಸಿಕ್ಕೆ ಸಿಗುತ್ತವೆ.  ಭೂತಕಾಲದಿಂದ ಕಲಿಯ ಬೇಕಿರುವ ಪಾಠದ ಬಗ್ಗೆಯಷ್ಟೇ ಯೋಚಿಸು. ಅದನ್ನೇ ನೆನೆ, ನೆನೆದು ದುಃಖಿಸುತ್ತಾ ಕೂಡಬೇಡ.  ಆದಷ್ಟೂ ಪರರಿಗೆ ಉಪಕಾರ ಮಾಡುತ್ತಾ ಬಾಳುವುದನ್ನು ರೂಢಿಸಿಕೋ.  ಯಾರಿಗೂ, ಎಂದಿಗೂ ಕೆಟ್ಟದ್ದನ್ನು ಬಯಸ ಬೇಡ.  ಅದಂತೂ ನಿನಗೆ ಹೇಳುವ ಅಗತ್ಯವಿಲ್ಲ. ನಿನ್ನಂಥಹ ಹುಡುಗಿಯನ್ನು ಕಾಪಿಟ್ಟುಕೊಳ್ಳುವ ಯೋಗ್ಯತೆಯೇ ನಿನ್ನ ಮನೆಯವರಿಗೂ, ನೀನು ಬಾಳ ಸಂಗಾತಿ ಎಂದು ತಪ್ಪಾಗಿ ಭಾವಿಸಿದ ಆ ಹುಡುಗನಿಗೂ ಇಲ್ಲ.  ಇನ್ನು ಮುಂದೆ ಇದೇ ನಿನ್ನ ಮನೆ, ನೀನು ನಮ್ಮವಳು.

ಸರಸ್ವತಿಯ ಮನ ಅವರ ಸಜ್ಜನಿಕೆಗೆ ಮೌನ ನಮನ ಸಲ್ಲಿಸುತ್ತಿತ್ತು.

ಬಾಳು ಒಂದು ದಡ ಸೇರಿತೆಂದುಕೊಳ್ಳುವಷ್ಟರಲ್ಲಿಯೇ ಸಂಭವಿಸಿತು ಮತ್ತೊಂದು ಅವಘಡ.  ಮಹಡಿಯಿಂದ ಕೆಳಗಿಳಿದು ಬರುತ್ತಿದ್ದ ಸರಸ್ವತಿ ಜಾರಿ ಬಿದ್ದಳು.  ಧಬ್‌ ಎಂಬ ಶಬ್ಧ ಕೇಳಿ ಕೋಣೆಯೊಳಗೆ ಮಲಗಿದ್ದ ರಾಜಮ್ಮನವರು ಆಚೆ ಬಂದು ನೋಡಿದರೆ, ಬಿದ್ದಿದ್ದ ಸರಸ್ವತಿ ಅರೆ ಪ್ರಜ್ಞಾವಸ್ಥೆಗೆ ಜಾರಿದ್ದಳು.  ಅವಳ ಕಾಲ ಸಂದಿಯಲ್ಲಿ ಸಣ್ಣಗೆ ರಕ್ತದ ಧಾರೆ ಹರಿಯಲಾರಂಭಿಸಿತ್ತು.   ತಕ್ಷಣ ಫೋನ್‌ ಮಾಡಿ ಕುಟುಂಬ ವೈದ್ಯರಾದ ಡಾ||ವೈದೇಹಿಯವರನ್ನು ಬರಮಾಡಿಕೊಂಡರೂ, ಅವರಿಗೆ ಸಾಧ್ಯವಾದದ್ದು, ಸರಸ್ವತಿಯನ್ನು ಮಾತ್ರ ಉಳಿಸಲು.

ಸರಸ್ವತಿಯ ಪಾಲನೆಗೆಂದೇ ಇನ್ನೊಬ್ಬ ಹೆಣ್ಣಾಳನ್ನು ಇಟ್ಟುಕೊಂಡ ರಾಜಮ್ಮನವರು ಕಣ್ಣರೆಪ್ಪೆಯಂತೆ ನೋಡಿಕೊಂಡು ಕಾಪಾಡಿಕೊಂಡರು.  ರಾಮರಾಯರೂ ಪೂರ್ಣಪ್ರಮಾಣದ ತಂದೆಯ ಪ್ರೀತಿ ನೀಡುವಲ್ಲಿ ಹಿಂದೆ ಬೀಳಲಿಲ್ಲ.

ಸರಸ್ವತಿ ಕೇಳುತ್ತಿದ್ದಳು – ಯಾಕಣ್ಣಾ ನನ್ನ ಬಾಳನಲ್ಲಿ ಹೀಗೆ ಮೇಲಿಂದ ಮೇಲೆ ದುರಂತಗಳೇ ಆಗುತ್ತವೆ?

ಅವಳು ಈ ಮನೆಗೆ ಬಂದ ನಾಲ್ಕಾರು ದಿನಗಳಿಂದಲೇ ರಾಜಮ್ಮನವರನ್ನು ಅಮ್ಮಾ ಎಂದೂ, ರಾಮರಾಯರನ್ನು ಅಣ್ಣಾ ಎಂದು ಕರೆಯ ಹತ್ತಿದ್ದಳು.

ಅಣ್ಣಾ ಹೇಳುತ್ತಿದ್ದರು  – ದುಃಖ ಪಡಬೇಡ ಸರಸ್ವತಿ, ಜೀವನ ಎಂದರೆ ಇಷ್ಟೆ.  ಒಂದು ಕಲ್ಲು ಶಿಲ್ಪವಾಗಿ, ಒಂದು ಮೂರ್ತಿಯಾಗಿ ರೂಪುಗೊಂಡು ಪೂಜಿಸಿಕೊಳ್ಳುವಂತಾಗಲು ಹಲವಾರಿ ಉಳಿ ಪೆಟ್ಟುಗಳು ಬೀಳಲೇ ಬೇಕು ಅಲ್ಲವೇ ಮಗು?

ಸರಸ್ವತಿ ಹೇಳುತ್ತಿದ್ದಳು – ಅಣ್ಣಾ, ನಾನು ಅಮ್ಮನಿಗೆ, ನಿಮಗೆ ಸಹಾಯ ಮಾಡುತ್ತೀನಿ ಎಂದು ಬಂದು ನಿಮ್ಮಿಂದಲೇ ಮಾಡಿಸಿಕೊಳ್ಳುವಂತೆ ಆಯಿತು.  ಹೋಟ್ಟೆಯಲ್ಲಿದ್ದ ಆ ಮಗು ಭುಮಿಗೆ ಬಂದ ನಂತರ ನಾವೆಲ್ಲರೂ ಉಲ್ಲಾಸದಿಂದಿರಬಹುದು ಎಂದುಕೊಂಡರೆ ಅದೂ ಆಗಲಿಲ್ಲವಲ್ಲ, ಯಾಕೆ ಅಣ್ಣಾ ಹೀಗೆ?  ಅಣ್ಣಾ ನಾನು ಎಲ್ಲರಿಂದಲೂ ಪೂಜಿಸಿಕೊಳ್ಳುವ ಮೂರ್ತಿಯಾಗುವುದು ಇರಲಿ, ದೇವರ ಗುಡಿಯ ಮೆಟ್ಟಿಲಾಗುವುದೂ ಬೇಡ,  ನನಗೆ ಈ ಉಳಿ ಪೆಟ್ಟುಗಳನ್ನು ಸಹಿಸಲು ಆಗಿತ್ತಿಲ್ಲ.  ಹಾಯಾಗಿ ಮಳೆ, ಬಿಸಿಲು, ಛಳಿಗಳನ್ನು ಎದುರಿಸುತ್ತಾ ಕಲ್ಲು ಬಂಡೆಯಾಗಿಯೇ ಇರಲು ಇಷ್ಟಪಡುತ್ತೀನಿ, ಅಣ್ಣಾ – ಎನ್ನುತ್ತಾ ಗದ್ಗದಿತಳಾದರೆ.

ರಾಜಮ್ಮನವರು ನಿಧಾನವಾಗಿ ತಲೆಯ ಮೇಲೆ ಕೈಯಾಡಿಸುತ್ತಿದ್ದರೆ, ರಾಮರಾಯರು, ನಸುನಗುತ್ತಾ ಹೇಳುತ್ತಿದ್ದರು – ಎಲ್ಲಾದರೂ ಕಲ್ಲನ್ನು ಕೇಳಿ, ಶಿಲ್ಪಿ, ಶಿಲೆಯನ್ನು ಆರಿಸಿಕೊಳ್ಳುವುದನ್ನು ಕೇಳಿದ್ದೀಯಾ – ಎಂದು.

ಸರಸ್ವತಿಗೆ ಅವರ ಮಾತುಗಳು ಕೇಳಿ, ಹೌದಲ್ಲಾ ಅನ್ನಿಸಿದ್ದರಿಂದಲೋ, ರಾಜಮ್ಮನವರ ಆಪ್ಯಾಯಮಾನವಾದ ನೇವರಿಕೆಯಿಂದಲೋ, ಆಯಾಸದಿಂದಲೋ ಮಂಪರು ಕವಿದಂತಾಗಿ ನಿದ್ರೆ ಹತ್ತುತ್ತಿತ್ತು.

ಈ ಕಾದಂಬರಿಯ ಹಿಂದಿನ ಸಂಚಿಕೆ ಇಲ್ಲಿದೆhttp://surahonne.com/?p=32222

(ಮುಂದುವರಿಯುವುದು)

-ಪದ್ಮಾ ಆನಂದ್, ಮೈಸೂರು

9 Responses

  1. ನಯನ ಬಜಕೂಡ್ಲು says:

    ಕಾದಂಬರಿ ತುಂಬಾ ಚೆನ್ನಾಗಿ ಸಾಗುತ್ತಿದೆ. ಬದುಕು ನೀಡುವ ಹೊಡೆತಗಳು ಹಾಗೂ ಅವನ್ನು ಎದುರಿಸಲು ಬೇಕಾಗುವಂತಹ ಭರವಸೆ ತುಂಬುವ ಮಾತುಗಳು ಎಲ್ಲೋ ಒಂದು ಕಡೆ ದಾರಿ ದೀಪವಾಗಬಲ್ಲವು.

  2. ಬದುಕಿನ ವಾಸ್ತವ ಮನೆ ಮುಟ್ಟುವ ಕಥೆ

  3. ಶಂಕರಿ ಶರ್ಮ says:

    ಜೀವನದಲ್ಲಿ ಬೀಳುವ ಕಷ್ಟಗಳ ಪೆಟ್ಟುಗಳು ಮುಂದಿನ ಒಳ್ಳೆಯ ದಿನಗಳಿಗಾಗಿ ಇರಬಹುದೇನೋ.. ಸರಸ್ವತಿಯು ಒಳ್ಳೆಯ ಆಸರೆಯಲ್ಲಿರುವುದು ಸಮಾಧಾನವೆನಿಸಿತು. ಕಾದಂಬರಿ ಚೆನ್ನಾಗಿದೆ, ಧನ್ಯವಾದಗಳು ಮೇಡಂ.

  4. ಪುಣ್ಯ says:

    ಕತೆ ತುಂಬಾ ಚನ್ನಾಗಿದೆ ಮುಂದಿನ ವಾರದ ಕತೆಗಾಗೀ ಕಾಯುತ್ತಾ ಇರುವೆ

    • Padma Anand says:

      ಮುಂದಿನ ಗುರುವಾರ ಮೂರನೆಯ ಎಳೆ ನಿಮ್ಮ ಕಾಯುವಿಕೆಗಾಗಿ ಬರಲಿದೆ. ಧನ್ಯವಾದಗಳು ಆತ್ಮೀಯ ಪುಣ್ಯ.

  5. Padma Anand says:

    ನಿಮ್ಮ ಮೆಚ್ಚುಗೆಗಾಗಿ ಧನ್ಯವಾದಗಳು.

  6. Jaya says:

    Padma tumba chennagide bandide kathe

Leave a Reply to ಪುಣ್ಯ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: