‘ನೆಮ್ಮದಿಯ ನೆಲೆ’ ಕಾದಂಬರಿ ..ಒಂದು ಅನಿಸಿಕೆ

Share Button

ಬಿ.ಕೆ.ಮೀನಾಕ್ಷಿ, ಮೈಸೂರು.

ಕಾದಂಬರಿ ಲೋಕವೆಂಬ ವಿಹಾರತಾಣ ಅತ್ಯದ್ಭುತ ಅನುಭವ ಕಲ್ಪನೆ ಮತ್ತು ಸುಖಗಳನ್ನು ನೀಡುವಂತಹುದು. ಆ ಲೋಕ ಓದುಗನನ್ನು ಏಕಾಂತವಾಸಕ್ಕೆ ಕರೆದೊಯ್ಯುವುದಲ್ಲದೆ, ಕಾದಂಬರಿಯ ಪಾತ್ರಗಳೇ ಅವನಾಗಿಬಿಡುವುದು ವಿಸ್ಮಯವೇ ಸರಿ. ನಮಗೆ ಓದುವ ಹವ್ಯಾಸ ಬೆಳೆಸುವುದೇ ಕಾದಂಬರಿಗಳು. ಕುತೂಹಲವನ್ನು ಬಡಿದೆಬ್ಬಿಸುತ್ತಾ, ಓದುಗನನ್ನು ಆತಂಕದಲ್ಲಿಡುತ್ತಾ, ಸಂಕಟಗಳನ್ನು ಕಟ್ಟಿಕೊಟ್ಟು ಓದುಗನೆದೆಯಲ್ಲಿ ತಲ್ಲಣಗಳನ್ನು ಸೃಷ್ಟಿಸುತ್ತಾ, ಕಾದಂಬರಿಗಳು ನಮ್ಮನ್ನು ತಮ್ಮ ಸುತ್ತ ಸುತ್ತುವಂತೆ ಮಾಡುವುದಲ್ಲದೆ, ಓದುವ ಹಂಬಲ ಹೆಚ್ಚಿಸುತ್ತವೆ. ನಾವು ಚಿಕ್ಕವರಿದ್ದಾಗ ಎನ್. ನರಸಿಂಹಯ್ಯನವರ ಪತ್ತೇದಾರಿ ಕಾದಂಬರಿಗಳನ್ನೋದುತ್ತಾ ಪುರುಷೋತ್ತಮನ ಸಾಹಸಗಳನ್ನು ಮೆಚ್ಚುತ್ತಾ ಬೆಳೆದವರು. ಅಂತೆಯೇ ಅಲ್ಲಿಂದ ಸಾಮಾಜಿಕ ಕಾದಂಬರಿಗಳನ್ನರಸುತ್ತಾ ಹೊರಟು, ತ್ರಿವೇಣಿ, ಎಮ್.ಕೆ. ಇಂದಿರಾ, ವಾಣಿ ಇನ್ನಿತರ ಮಹಾನ್ ಕಾದಂಬರಿಕಾರರನ್ನು ಕೈಗೆಟುಕುವಂತೆ ಮಾಡಿಕೊಂಡು ಆ ಪ್ರಪಂಚದಲ್ಲಿ ತಲ್ಲೀನರಾದವರು.

ಅದಕ್ಕೆ ಏನೋ ಕಾದಂಬರಿಗಳಿಗೆ ಹೆಚ್ಚು ಬೇಡಿಕೆಯಿರುವುದು. ಕೆಲವರು ಕಾದಂಬರಿ ಓದುತ್ತೋದುತ್ತಲೇ ತಾವೇ ಕಾದಂಬರಿಕಾರರಾಗಿಬಿಟ್ಟರು. ಅಂತಹ ಉದಾಹರಣೆಗಳು ಸಾಕಷ್ಟಿವೆ. ಈ ನಿಟ್ಟಿನಲ್ಲಿ ನಮ್ಮ ನಾಗರತ್ನ ಮೇಡಂ ಹೆಸರನ್ನು ನಾವೀಗ ತೆಗೆದುಕೊಳ್ಳಬೇಕಿದೆ. ಸಾಹಿತ್ಯಲೋಕದ ಬೇರೆ ಬೇರೆ ಕ್ಷೇತ್ರಗಳಲ್ಲೆಲ್ಲ ತಮ್ಮ ಬರವಣಿಗೆಯ ಮೂಲಕ ಸಂಚರಿಸಿ ಇದೀಗ ಕಾದಂಬರಿಗೂ ಕೈ ಹಾಕಿ ಅದರಲ್ಲೂ ಸೈ ಎನ್ನಿಸಿಕೊಳ್ಳುವ ಹವಣಿಕೆಯಲ್ಲಿದ್ದಾರೆ. ಹೌದು, ಶ್ರೀಮತಿ ನಾಗರತ್ನರವರು ಇದೀಗ ತಾನೇ ಒಂದು ಕಾದಂಬರಿಯ ಒಡತಿಯಾಗಿದ್ದಾರೆ. ಸಾಲದ್ದಕ್ಕೆ ಈ ಕಾದಂಬರಿ, `ಸುರಹೊನ್ನೆ’ಯಲ್ಲಿ ಪ್ರತೀವಾರ ಒಟ್ಟು ಹದಿನಾರು ಕಂತುಗಳಲ್ಲಿ ಪ್ರಕಟವಾಗಿ ಸುರಹೊನ್ನೆಯೋದುಗರ ಗಮನವನ್ನು ಸೆಳೆದಿದೆ. ಓದಿದವರೆಲ್ಲರೂ ಒಳ್ಳೆಯ ಅಭಿಪ್ರಾಯ ಅನಿಸಿಕೆಗಳನ್ನು ಸೂಚಿಸಿ, ನಾಗರತ್ನರವರ ಬೆನ್ನು ತಟ್ಟಿ ಪ್ರೋತ್ಸಾಹಿಸಿ, ಮತ್ತೊಂದು ಕಾದಂಬರಿ ರಚನೆಗೆ ಅಣಿಯಾಗುವಂತೆ ಮಾಡಿದ್ದಾರೆ.

ಇದೀಗ ನಾಗರತ್ನರ ಪ್ರಕಟವಾದ ಕಾದಂಬರಿ `ನೆಮ್ಮದಿಯ ನೆಲೆ ‘ ಯೊಳಗೆ ಒಂದು ಸುತ್ತು ಸುತ್ತಾಡಿಬರೋಣ. ಇದುವರೆಗೆ ಕಾದಂಬರಿಯನ್ನು ಸುರಹೊನ್ನೆಯಲ್ಲಿ ಹದಿನಾರು ಕಂತುಗಳಲ್ಲಿ ಪ್ರಕಟಿಸಿ, ತಾವು ಕಾದಂಬರಿ ಬರೆಯಬಲ್ಲಿರಿ ಎಂದು ವಿಶ್ವಾಸ ಹುಟ್ಟಿಸಿದ ಶ್ರೀಮತಿ ಹೇಮಮಾಲಾ ರವರಿಗೆ ಧನ್ಯವಾದ ಹೇಳುತ್ತಾ , ನೆಮ್ಮದಿಯ ನೆಲೆ ಹೇಗಾಯಿತೆಂದು ಒಮ್ಮೆ ಕಾದಂಬರಿಯ ಸಿಂಹಾವಲೋಕನ ಮಾಡಿಬಿಡೋಣ.

ನೆಮ್ಮದಿಯ ನೆಲೆ:
ಸುನಾದಿನಿ ಸುಕನ್ಯಳ ಸ್ವಗತ
ಹೆಸರೇ ಸೂಚಿಸುವಂತೆ ಕಾದಂಬರಿ ಸುಖಾಂತ್ಯವಾಗಿದೆ. ಅದು ಸಂತೋಷದ ವಿಷಯ. ಓದಿದವರಿಗೆ ವಿಷಾದದ ಹೊರೆ ಹೊರಿಸುವುದಿಲ್ಲ. ಕಾದಂಬರಿಯ ನಾಯಕಿ ಸುಕನ್ಯ. ಸುಕನ್ಯ ತಾನು ಬದುಕಿದ ಬದುಕನ್ನು ಸ್ವಗತದಲ್ಲಿ ಓದುಗನ ಮುಂದೆ ತೆರೆದಿಡುತ್ತಾ ತನ್ನ ನೆನಪುಗಳನ್ನು ಹಸಿಯಾಗಿಸತೊಡಗುತ್ತಾಳೆ. ಹುಟ್ಟಿಬೆಳೆದ ಮನೆಯೊಂದಿಗಿನ ಅವಿನಾಭಾವ ಸಂಬಂಧ, ಪ್ರೀತಿಯ ತಂದೆತಾಯಿ, ಅವರ ಸುಸಂಸ್ಕೃತ ನಡೆನುಡಿ, ಕುಂದಿಲ್ಲದ ಜೀವನ ಅಣ್ಣಂದಿರು ಮನೆಯ ಯಾವುದೇ ಜವಾಬ್ದಾರಿಗೂ ಹೆಗಲು ಕೊಡದೆ, ಸ್ವಾರ್ಥಪರರಾದರೂ, ದೂಷಿಸದ ತನ್ನ ಅಪ್ಪ ಅಮ್ಮನ ಬಗ್ಗೆ ಅವಳಿಗೆ ಹೆಮ್ಮೆಯಿದೆ. ಶ್ರೀಮಂತರಲ್ಲದ ಆದರೆ ಹೃದಯ ಶ್ರೀಮಂತಿಕೆಯುಳ್ಳ ನಂಜನಗೂಡಿನ ಒಂದು ಕುಟುಂಬಕ್ಕೆ ಸೊಸೆಯಾಗಿ ಆ ಕುಟುಂಬದ ಆಗುಹೋಗುಗಳಿಗೆ ಸಾಕ್ಷಿಯಾಗಿ ನಿಲ್ಲುತ್ತಾಳೆ. ತನ್ನೆರಡು ಮಕ್ಕಳು, ಮೈಸೂರಿಗೆ ಓಡಾಡುವ ಗಂಡ, ಅತ್ತೆಯ ಜಮೀನಿನ ಪ್ರೀತಿ, ಜನಾನುರಾಗಿಯಾದ ಆಕೆ ಸೊಸೆಯಲ್ಲೊಂದು ಮೆಚ್ಚುಗೆಯ ಉನ್ನತ ಸ್ಥಾನದಲ್ಲಿ ವಿರಾಜಮಾನರಾಗುತ್ತಾರೆ. ಮೈಸೂರಿನಲ್ಲಿ ಕೆಲಸ ಮಾಡುವ ಯಜಮಾನನ ಶರತ್ತಿನಂತೆ ಮದುವೆಯಾದ ಮೇಲೆ ನಂಜನಗೂಡಿನಲ್ಲಿ ಅತ್ತೆಮಾವಂದಿರೊಂದಿಗೆ ಜೊತೆಯಾಗಿ ಹೊಂದಿಕೊಂಡು ಹೋಗುತ್ತಲೇ, ಅತ್ತೆಮಾವಂದಿರ ಕಾಲವಾದ ನಂತರ ಮೈಸೂರಿಗೆ ಬಂದು ಅಲ್ಲಿ ಬದುಕನ್ನು ಮುಂದುವರೆಸಿಕೊಂಡು, ಮಕ್ಕಳ ಓದು,ಕೆಲಸ, ಅವರ ಕಷ್ಟಸುಖ, ಇಚ್ಛೆ, ಎಲ್ಲವನ್ನೂ ನೆರವೇರಿಸಿಕೊಳ್ಳುವ ಮಧ್ಯೆಯೇ ಸುಕನ್ಯಳ ತಾಯಿ ಕಾಲವಾಗುತ್ತಾರೆ. ಅಪ್ಪನ ಯೋಗಕ್ಷೇಮದ ಹೊಣೆಯನ್ನು ನಿಭಾಯಿಸುತ್ತಲೇ, ಮಗನ ಸ್ವಂತ ಇಷ್ಟದಂತೆ ಮದುವೆ, ಅವರ ವಿದೇಶವಾಸ, ಸೊಸೆಯ ಬಾಣಂತನಗಳು, ಮಗಳ ಓದು, ಮದುವೆ, ಗಂಡನ ನಿರ್ಲಿಪ್ತಭಾವ, ಮಗನ ಪರೀಕ್ಷಾ ಬರವಣಿಗೆಗೆ ಅನುಕೂಲವಾಗಲೆಂದು ಅವನ ಕೋರಿಕೆಯಂತೆ ಮತ್ತೆ ವಿದೇಶ ಪ್ರವಾಸ, ಮಗಳು ಇಚ್ಛಿಸಿದ ಗಂಡಿನೊಂದಿಗೆ ಮದುವೆ, ಕೊನೆಗೆ ಅತ್ತೆ ಮಾವಂದಿರ ಮಾರಿದ ಆಸ್ತಿಯನ್ನು ಮತ್ತೆ ತನ್ನ ಗಂಡ ದಯಾನಂದನೇ ಕೊಂಡುಕೊಂಡು , ಸುಕನ್ಯಳ ಅಂತರಂಗದ ಆಸೆಯಂತೆ, ಅದನ್ನು ಅವಳ ನೆಮ್ಮದಿಯ ತಾಣವಾಗಿಸಿ, ಅವಳಿಗೊಂದು ಅದ್ಭುತ `ಸರ್‌ಪ್ರೈಸ್’ ನೀಡುವುದರ ಮೂಲಕ ಗಂಡನಾದವನು ಅವಳ ಒಡನಾಡಿಯಾಗಿ ಮಾರ್ಪಡುತ್ತಾನೆ.

ಕಾದಂಬರಿಯು ಅದರ ಓಘಕ್ಕೆ ತಡೆಯೊಡ್ಡದೆ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಸರಳ ಭಾಷೆ, ನೇರ ನಿರೂಪಣೆ, ವಸ್ತುನಿಷ್ಠ ವಿವರಣೆ, ಕ್ಲಿಷ್ಟಪದಗಳ ಅಡಚಣೆಯಿರದೆ ಕಾದಂಬರಿ ಸುಲಿದ ಬಾಳೆಹಣ್ಣಿನಂತೆ ಸುಲಭವಾಗಿ ನಮ್ಮ ಮನಸ್ಸನ್ನು ತಟ್ಟುತ್ತದೆ. ಸ್ವಗತದಲ್ಲಿ ಪ್ರಾರಂಭವಾಗುವ ಕಾದಂಬರಿ ಕೊನೆಯ ಕಂತಿನಲ್ಲಿ ಸ್ವಗತಕ್ಕೆ ವಿದಾಯ ಹೇಳಿ, ಕಾದಂಬರಿಕಾರರೇ ನಿರೂಪಿಸಿ, ಕಾದಂಬರಿ ಅಂತ್ಯಗೊಂಡಿದೆ. ಬಹುಶಃ ಸ್ವಗತ ಕೊನೆಯ ಕಂತಿನ ವಿಚಾರಕ್ಕೆ ಸೂಕ್ತವಲ್ಲವೆಂದು ಯೋಚಿಸಿರಬಹುದು. ಆದರೆ ಅದೂ ಸ್ವಗತವೇ ಆಗಿದ್ದರೆ ಭಾವಕೋಶ ಮಧುರವಾಗಿ ಬಿಡಿಸಿಕೊಳ್ಳುತ್ತಿತ್ತು. ಅಣ್ಣಂದಿರ ಪಾತ್ರಗಳ ನಿರೂಪಣೆಯಲ್ಲಿ ಲೇಖಕಿ ಏನು ಹೇಳುತ್ತಾರೆಂಬುದು ಓದುವ ಮೊದಲೇ ತಿಳಿದುಬಿಡುತ್ತದೆ. ಅತ್ತಿಗೆಯರ ವಿಚಾರವೂ ಅಷ್ಟೆ. ನೇರವಾಗಿ ಅವರ ಗುಣಸ್ವಭಾವಗಳು ಪ್ರಸ್ತಾಪವಾಗುತ್ತವೆ. ಹೀಗೇ ಬರೆಯಬೇಕೆಂದಿದ್ದರೆಂದು ಸಹಜವಾಗಿ ಅನ್ನಿಸಿಬಿಡುತ್ತದೆ. ಕಾದಂಬರಿಯನ್ನು ಸಲೀಸಾಗಿ ಓದುತ್ತಲೇ ಒಂದೆರಡು ಕಬ್ಬಿಣದ ಕಡಲೆ ಮಧ್ಯೆ ಸಿಕ್ಕಿಬಿಡುತ್ತವೆ. ಅವುಗಳು ಬಹುತೇಕ, ಪತಿರಾಯರು, ಸುಪುತ್ರಿ, ಹೀಗೆ ಕೆಲವೊಂದು ಪದಗಳು ಗಂಭೀರತೆಯನ್ನು ಸಡಿಲಗೊಳಿಸಿಬಿಡಬಹುದೇನೋ. ಇದು ನನ್ನ ವೈಯಕ್ತಿಕ ಆತಂಕದ ಅನಿಸಿಕೆ. ಇವಿಷ್ಟು ವಿಷಯಗಳು ನನಗನ್ನಿಸಿದ್ದು .

ಕಾದಂಬರಿಯ ಪಾತ್ರಗಳಿಗೆ ಲೇಖಕಿ ಎಲ್ಲ ರೀತಿಯಿಂದಲೂ ನ್ಯಾಯ ಒದಗಿಸಿದ್ದಾರೆ. ಯಾವ ಪಾತ್ರಗಳೂ ಪೇಲವವೆನಿಸುವುದಿಲ್ಲ. ಅಳಿಯನ ತೀರ್ಮಾನವನ್ನು ಮಗಳ ಮೂಲಕ ತಿಳಿದುಕೊಂಡ ಸುಕನ್ಯ ಪರಿತಪಿಸುವ ಬಗೆ ಖೇದ ಹುಟ್ಟಿಸುವುದರ ಜೊತೆಗೆ, ಮಗಳಿಗೆ ಅವಳ ಪಾಲಿದ ಧನವನ್ನು ನೀಡಲು ಹೋದಾಗ ನನಗೇನು ಮಕ್ಕಳೇ ಮರಿಯೇ..ಎನ್ನುವ ಅವಳ ಮಾತು ಓದುಗನಲ್ಲೂ ವಿಷಾದ ಮೂಡಿಸುತ್ತದೆ. ಒಳಗೆ ಲಾವರಸವೇ ಇದ್ದರೂ, ಎಲ್ಲವನ್ನೂ ಸಮಚಿತ್ತದಿಂದ ತೂಗಿಸುವ ಸುಕನ್ಯ ಕೆರಳುವುದು ಒಂದೇ ಬಾರಿ. ಅದು ಮಗ , ಹೆಂಡತಿಗೆ ಹೇಳದೆ ವಿದೇಶಕ್ಕೆ ಕರೆಸಿಕೊಂಡಾಗ. ಅಲ್ಲಿಯೂ ಮಗ ಸೊಸೆಯರ ಹಳಸುತ್ತಿರುವ ಸಂಬಂಧದ ಬಗ್ಗೆ ಪರಿತಪಿಸುತ್ತಾಳೆ ಸುಕನ್ಯ.

ಮೈಸೂರು ನಂಜನಗೂಡು ಬಿಟ್ಟು ಮತ್ತೆಲ್ಲೂ ಹೆಜ್ಜೆಯಿಡದ ಸುಕನ್ಯ ಗೆಳತಿ ಸಂಧ್ಯಾಳ ಸಹಯೋಗದಲ್ಲಿ ಪ್ರವಾಸ ಹೋಗುವುದು ಓದುಗನಲ್ಲಿ ನಿರಾಳಭಾವವನ್ನು ಮೂಡಿಸುತ್ತದೆ. ಸಂಸಾರವನ್ನು ಜಂಜಾಟವೆನ್ನದೆ, ತನಗೆ ದೊರೆತದ್ದನ್ನೇ ಪರಮಪದವೆಂದುಕೊಂಡು ಬದುಕಿದ ಸುಕನ್ಯ ಗಂಡನ ಸಾಹಚರ್ಯ ತನಗೆ ಸದಾ ಇರಲಿ ಎಂಬ ಆಸೆ ಕಡೆಗೂ ಈಡೇರಿದಾಗ ಅವಳ ಸಂತೋಷಕ್ಕೆ ಅವಳೇ ಸಾಟಿ. ಸಂಸಾರವೆನ್ನುವುದು ಸಾಗರ, ನಿಜ; ಅದನ್ನೇ ಜುಳುಜುಳು ಮಂಜುಳನಾದದಲಿ ಮೊರೆಯುತ್ತಾ ಮಾರ್ಗ ಸಿಕ್ಕೆಡೆ ಹರಿದು ಆ ಎಲ್ಲ ಜಾಗವನ್ನು ಹಸನು ಮಾಡುತ್ತಾ ಸಾಗುವ ನದಿಯಂತೆ ಸುಕನ್ಯ ಭಾಸವಾಗುತ್ತಾಳೆ.

ಶ್ರೀಮತಿ ಬಿ.ಆರ್,ನಾಗರತ್ನ

ಇಂದಿನ ಯಾಂತ್ರಿಕ ಬದುಕಿನಲ್ಲಿ ಜೀವನ ತೀರ ಸಂಕೀರ್ಣವಾಗುತ್ತಿರುವ ಬಗೆಯನ್ನು, ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತಿರುವುದನ್ನು ಕಾದಂಬರಿಕಾರ್ತಿ ಮನೋಜ್ಞವಾಗಿ ಹಿಡಿದಿಡುತ್ತಲೇ ಅದರ ಬಗೆಗೆ ಒಳಗೇ ಕಂಬನಿ ಮಿಡಿಯುತ್ತಾರೆ. ಸಮಾಜದ ಸ್ಥಿತಿಗತಿಗಳನ್ನು ವಿವರಿಸುತ್ತಾ ಸಾಗುವ ಕಾದಂಬರಿ, ಪುಸ್ತಕ ರೂಪದಲ್ಲಿ ಬಂದರೆ ಒಂದೇ ಓದಿನಲ್ಲಿ ಬಿಡದೆ ಓದಿ ಕೆಳಗಿರಿಸಬಹುದು.

ಸಮಾಜದ ಬಗ್ಗೆ ಅದರ ನಡವಳಿಕೆಗಳ ಬಗ್ಗೆ ವಿಶ್ಲೇಷಣಾತ್ಮಕವಾಗಿ ನೋಡುತ್ತಾ, ಇನ್ನು ಹೆಚ್ಚು ಹೆಚ್ಚು ಕಾದಂಬರಿಗಳು ಸಾಹಿತ್ಯಲೋಕಕ್ಕೆ ಇವರಿಂದ ಸೇರುತ್ತಾ ಹೋಲೆಂಬುದೇ ನನ್ನ ಹಾರೈಕೆ. ಅಭಿನಂದನೆಗಳು ಮೇಡಂ.

 – ಬಿ.ಕೆ.ಮೀನಾಕ್ಷಿ, ಮೈಸೂರು.

8 Responses

  1. ಬಿ.ಆರ್.ನಾಗರತ್ನ says:

    ಹೃತ್ಪೂರ್ವಕ ಧನ್ಯವಾದಗಳು ಗೆಳತಿ ಮೀನಾಕ್ಷಿ.

  2. ಬಿ.ಆರ್.ನಾಗರತ್ನ says:

    ನಾನು ಬರೆದ ಕಾದಂಬರಿ ನೆಮ್ಮದಿಯ ನೆಲೆಯ ಒಂದು ಅವಲೋಕನವನ್ನು ಮಾಡಿದ ನಿಮಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ಗೆಳತಿ ಮೀನಾಕ್ಷಿ.

  3. ನಯನ ಬಜಕೂಡ್ಲು says:

    ನೆಮ್ಮದಿಯ ನೆಲೆ ಎಲ್ಲರ ಮನ ಗೆದ್ದ ಕಾದಂಬರಿ. ಆ ಕಾದಂಬರಿ ಯ ಕುರಿತಾಗಿ ವ್ಯಕ್ತವಾದ ಅಭಿಪ್ರಾಯ ತುಂಬಾ ಸೊಗಸಾಗಿದೆ.

  4. ವಿದ್ಯಾ says:

    ನಮಸ್ಕಾರ ,ವಿಶ್ಲೇಷಣೆ ಚೆನ್ನಾಗಿ ಮೂಡಿ ಬಂದಿದೆ.

  5. B.k.meenakshi says:

    ಪ್ರತಿಕ್ರಿಯೆ ನೀಡಿದ ನಯನರವರಿಗೆ ಮತ್ತು ವಿದ್ಯಾ ರವರಿಗೆ ಧನ್ಯವಾದ.
    ನಾಗರತ್ನ ಮೇಡಂ ತಮಗೂ ಧನ್ಯವಾದ ಗಳು. ನನಗನಿಸಿದ್ದನ್ನು ನಿಮ್ಮಗಳೊಂದಿಗೆ ಹಂಚಿಕೊಳ್ಳಲು ಅನುವು ಮಾಡಿಕೊಟ್ಟ ಶ್ರೀಮತಿ ಹೇಮಮಾಲಾರಿಗೂ ತುಂಬುಹೃದಯದ ಧನ್ಯವಾದ. ಎಲ್ಲ ಲೇಖನಗಳೂ, ಬರೆಹಗಳೂ ಬಹಳ ಚೆನ್ನಾಗಿ ಓದಿಸಿಕೊಂಡು ಹೋಗುತ್ತಿವೆ. ಎಲ್ಲ ಲೇಖಕರಿಗೂ ಅಭಿನಂದನೆಗಳು

  6. ಶಂಕರಿ ಶರ್ಮ says:

    ಸುಲಲಿತವಾಗಿ ಓದಿಸಿಕೊಂಡು ಹೋಗುತ್ತಿದ್ದ ಸುಂದರ ಕೌಟುಂಬಿಕ ಕಾದಂಬರಿ ‘ನೆಮ್ಮದಿಯ ನೆಲೆ’ ಯ ವಿಮರ್ಶಾತ್ಮಕ ಲೇಖನವು ಚೆನ್ನಾಗಿ ಮೂಡಿಬಂದಿದೆ.

  7. Padma Anand says:

    ಸುಂದರ ಕಾದಂಬರಿಗೊಂದು ಚಂದದ ವಿಶ್ಲೇಷಣೆ.
    ಸುಲಲಿತವಾಗಿ ಓದಿಸಿಕೊಂಡು ಹೋದ ʼನೆಮ್ಮದಿಯ ನೆಲೆʼ ಯ ಲೇಖಕಿ ಶ್ರೀಮತಿ.ನಾಗರತ್ನ ಅವರಿಗೂ, ಕಾದಂಬರಿಯನ್ನು ಅಚ್ಚುಕಟಾಗಿ ವಿಶ್ಲೇಷಿಸಿ, ಅದರ ಹೂರಣವನ್ನು ಸೊಗಸಾಗಿ ಗುರುತಿಸಿದ ಶ್ರೀಮತಿ.ಮೀನಾಕ್ಷಿ ಅವರಿಗೂ ಅಭಿನಂದನೆಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: