ಹುಟ್ಟುಹಬ್ಬ
ಬೆಳಿಗ್ಗೆ ಎದ್ದವನ ಸಂಭ್ರಮ ಹೇಳತೀರದು. ಅದಕ್ಕೆ ಕಾರಣ, ಈ ದಿನ ಹೆಂಡತಿಯ ಜನ್ಮದಿನ. ಅವನು ಮನಸ್ಸಿನಲ್ಲೇ ಅಂದಿನ ಕಾರ್ಯಕ್ರಮಗಳ ಪಟ್ಟಿ ಮಾಡಿಕೊಂಡ. ಮೊದಲು ಸುಂದರ ಹೂಗುಚ್ಛ, ನಂತರ ಸ್ವೀಟ್ ಅಂಗಡಿಯಿಂದ ಅವಳ ಮೆಚ್ಚಿನ ಮೈಸೂರು ಪಾಕ್, ನಂತರ ಗೆಳೆಯ,ಗೆಳತಿಯರನ್ನು ಸಂಜೆ ಮನೆಗೆ ಆಮಂತ್ರಿಸಲು ಕಾಲ್ ಮಾಡಬೇಕಿರುವುದು. ಅವರಿಗೆ ಬೇಕಾದ ತಿಂಡಿ, ತಂಪು ಪಾನೀಯ ಇತ್ಯಾದಿ.
ಬೇಗ ಬೇಗ ಸ್ನಾನ ಮುಗಿಸಿ, ತಲೆ ಬಾಚಿ, ಇಸ್ತ್ರಿ ಹಾಕಿದ ಬಟ್ಟೆ ಧರಿಸಿದ. ಮನೆಯಿಂದ ಹೊರಟು ಅವನು ಮೊದಲು ಕೊಂಡದ್ದು ಆ ಸುಂದರ ಹೂ ಗುಚ್ಛ. ಅಲ್ಲೆ ಬಂದ ಪರಿಚಯದ ಆಟೋ ಡ್ರೈವರ್ , “ನಮಸ್ತೆ ಸರ್, ಓ ಇವತ್ತು ಮೇಡಂ ಬರ್ತ್ ಡೇನಾ? ಸರಿ, ಬನ್ನಿ” ಎನ್ನುತ್ತಾ ಕೂರಿಸಿಕೊಂಡ. ಮೈಸೂರು ರಸ್ತೆ ಮುಗಿಸಿ, ಕೆಂಗೇರಿ ದಾಟಿ ಆ ಆಟೋ ಒಂದು ಸಮಾಧಿಯ ಬಳಿ ನಿಂತಿತು.
ಸ್ವಲ್ಪ ಹೊತ್ತಾದ ಮೇಲೆ ಹಿಂತಿರುಗಿದವನು, ” ಹೊರಡೋಣವಾ?” ಅಂದ. ಹಿಂತಿರುಗುತ್ತಾ ಆಟೋದವನು, ” ಸರ್, ಮೇಡಂ ಹೋಗಿ, ಐದು ವರ್ಷ ಆಯ್ತಲ್ಲವೆ?” ಅಂತ ಮಾತು ಪ್ರಾರಂಭಿಸಿದ.
– ಅನಂತ ರಮೇಶ್ , ಬೆಂಗಳೂರು
ಉತ್ತಮ ಬರಹ.ಧನ್ಯವಾದಗಳು
ಪುಟ್ಟ ಕಥೆ, ಅಗಾಧ ಭಾವ ಅದರೊಳಗೆ.
ಈ ರೀತಿ ಅಂತ್ಯ ಊಹಿಸಿ ಇರಲಿಲ್ಲ
ಕೊನೆಗೆ ಬೇಸರವಾಯಿತು.
ತೀವ್ರ ತಿರುವಿನ ಪುಟ್ಟ ಕಥೆಯು ವಿಶೇಷ ಅನುಭೂತಿಯನ್ನುಂಟು ಮಾಡಿತು.
ಓದಿ ಪ್ರತಿಕ್ರಿಯಿಸಿದ ಎಲ್ಲರಿಗೆ ಧನ್ಯವಾದಗಳು.