ಧೈರ್ಯಂ ಸರ್ವತ್ರ ಸಾಧನಂ
ನಾನು ಬೀಚನಹಳ್ಳಿಯಿಂದ ಬೇರೊಂದು ಗ್ರಾಮಕ್ಕೆ ನಿಯೋಜನೆಗೊಂಡು ಅಲ್ಲಿಗೆ ಕರ್ತವ್ಯ ನಿರ್ವಹಿಸಲೋಸುಗ ಹೊರಟೆ. ಹಾಗೆ ನನ್ನಂತೆ ಇನ್ನೊಬ್ಬ ಶಿಕ್ಷಕರೂ ಅಲ್ಲಿಗೆ ನಿಯೋಜನೆಗೊಂಡಿದ್ದರು. ಸತೀಶ್ ಎಂಬುದು ಅವರ ಹೆಸರು. ಸತೀಶ ಸಂಸಾರಸ್ಥ. ಮುದ್ದಾದ ಎರಡು ಮಕ್ಕಳು, ಭೂಮಿಕಾಣಿಯುಳ್ಳ ತಕ್ಕಮಟ್ಟಿನ ಶ್ರೀಮಂತನೇ. ಲವಲವಿಕೆಯ ಮಾತುಗಾರಿಕೆ, ಬೋಧನಾ ಚಾತುರ್ಯ ಕೂಡ ಮೆಚ್ಚುವಂತದ್ದೇ. ಚಂದವಾಗಿ ಪಾಠ ಮಾಡಿಕೊಂಡು, ಓಡಾಡಿಕೊಂಡು ಇದ್ದ ಮನುಷ್ಯ ಅಂತೂ ಇಂತೂ ಒಂದು ವರ್ಷ ಕಳೆದದ್ದೇ ತಿಳಿಯಲಿಲ್ಲ. ನಾವಿಬ್ಬರೂ ನಮ್ಮ ನಮ್ಮ ಒರ್ಜಿನಲ್ ಪ್ಲೇಸ್‌ಗಳಿಗೆ ಹಿಂದಿರುಗಿದೆವು.
ಅಲ್ಲಿಂದ ಮುಂದಕ್ಕೆ ನಮ್ಮ ಭೇಟಿಯಾಗಲಿಲ್ಲ. ನಾನು ನಿಯೋಜನೆಗೊಂಡ ಶಾಲೆಯಲ್ಲಿ ಸತೀಶನ ಚಿಕ್ಕಮ್ಮ ಕೂಡ ಕೆಲಸ ಮಾಡುತ್ತಿದ್ದರು. ಒಂದೆರಡು ವರ್ಷಗಳ ನಂತರ ಅವರು ನಮ್ಮ ಪಕ್ಕದ ಶಾಲೆಗೇ ವರ್ಗವಾಗಿ ಬಂದರು. ಉಭಯಕುಶಲೋಪರಿ ಮಾತಾಡುತ್ತಾ ಸತೀಶರ ಬಗ್ಗೆ ಅವರು ಹೇಳತೊಡಗಿದರು. ಮೇಡಂ, ಸತೀಶನಿಗೆ ಕ್ಯಾನ್ಸರ್ ಮೇಡಂ. ಟ್ರೀಟ್ಮೆಂಟಿನಲ್ಲಿದ್ದಾನೆ. ಆ ದೇವರು ಅವನನ್ನು ಏನು ಮಾಡುತ್ತಾನೋ ಗೊತ್ತಿಲ್ಲ. ಎನ್ನುತ್ತಲೇ ದುಃಖಪೂರಿತರಾದರು. ನಾನು ನನಗೆ ತಿಳಿದಂತೆ ಸಂತೈಸಿ ಸಮಾಧಾನಿಸಿದೆ.
ಮತ್ತೆ ಸ್ವಲ್ಪ ದಿನಗಳಾದ ಮೇಲೆ ಬೆಂಗಳೂರಿನಲ್ಲಿ ಟ್ರೀಟ್ ಮೆಂಟ್ ಮುಗಿಯಿತು ಎಂದರು. ಪರವಾಗಿಲ್ಲ ಈಗ ಚೆನ್ನಾಗಿದ್ದಾನೆ ಎಂದರು. ನನಗೆ ಆಶ್ಚರ್ಯವಾಯಿತು. ಅಬ್ಬಾ ಕ್ಯಾನ್ಸರ್ ಗುಣವಾಯಿತೆ ಎಂದು!. ಆಗಿರಬಹುದು ಎಂದುಕೊಂಡು ಸುಮ್ಮನಾದೆ. ಒಂದು ದಿನ ನಾನು ಶನಿವಾರ ಶಾಲೆ ಮುಗಿಸಿ ಶಾಲೆಯಿಂದ ಮೈಸೂರಿಗೆ ಬಂದು, ಮನೆಗೆ ಹೋಗಲು ಸಿದ್ದಪ್ಪ ಸರ್ಕಲ್‌ನಲ್ಲಿ ಬಸ್ ಹತ್ತಲು ಬಂದೆ. ನೋಡುತ್ತೇನೆ, ಸಾಕ್ಷಾತ್ ಸತೀಶರೇ ನಿಂತಿದ್ದಾರೆ. ನನಗೆ ಹೇಳಿಕೊಳ್ಳಲಾಗದಷ್ಟು ಆಶ್ಚರ್ಯ ಮುಖದಲ್ಲೇ ಪ್ರಕಟವಾಗಿಹೋಯಿತು. ಸತೀಶ ನನ್ನನ್ನು ನೋಡಿದವರೇ, `ಮೇಡಂ ಚೆನ್ನಾಗಿದ್ದೀರಾ?’ ಎಂದು ನಗುನಗುತ್ತಾ ಕೇಳಿದರು. ನನ್ನ ಉತ್ತರ ಆಶ್ಚರ್ಯದಲ್ಲಿ ಮುಳುಗಿಹೋಗಿ ಉತ್ತರಿಸಲೇ ತೋಚದಾಯಿತು. `ಯಾಕೆ ಮೇಡಂ? ನನ್ನನ್ನು ಎದುರಿಗೇ ನೋಡಿ ಆಶ್ಚರ್ಯವಾಯಿತೇ?’ ಎಂದದ್ದಕ್ಕೂ ನನ್ನ ಬಳಿ ಉತ್ತರವಿಲ್ಲ. ಸ್ವಲ್ಪಹೊತ್ತಿನ ನಂತರ ಸಾವರಿಸಿಕೊಂಡು ಕೇಳಿದೆ, `ನಿಮ್ಮ ಚಿಕ್ಕಮ್ಮ ನಿಮಗೆ ಹುಶಾರಿಲ್ಲ ಎಂದಿದ್ದರು. ಈಗ ಹೇಗಿದ್ದೀರಿ?’ ಎಂದೆ. `ಮೇಡಂ, ಫಸ್ಟ್ ಕ್ಲಾಸಾಗಿದೀನಿ ಮೇಡಂ.. ನೀವೇ ನೋಡಿ, ನನ್ನನ್ನು ನೋಡಿದರೆ ಕ್ಯಾನ್ಸರ್ ಬಂದವನಂತೆ ಇದ್ದೀನಾ?’ ಎಂದಾಗ ಅವರನ್ನು ನಖಶಿಖಾಂತ ನೋಡಿ, `ಹಾಗಾದ್ರೆ ಹುಶಾರಾದ್ರಾ?’ ಎಂದೆ.
`ಹೌದು ಮೇಡಂ. ನನಗೆ ಬ್ಲಡ್ ಕೌಂಟಿಂಗ್ ಇದ್ದಿದ್ದು ಎಷ್ಟು ಗೊತ್ತಾ ಮೇಡಂ? ಎಲ್ಲರಿಗಿಂತ ಹೆಚ್ಚೇ ಇರಬೇಕು. ಫಿಫ್‌ಟೀನ್ ಪಾಯಿಂಟ್ ಸಮ್ ಥಿಂಗ್ ಇತ್ತು ಮೇಡಂ. ಅದಕ್ಕೇ ಏನೋ ನನಗೆ ಬ್ಲಡ್ ಕ್ಯಾನ್ಸರ್ರೇ ಬಂದಿದ್ದು.’ ಎಂದರು ನಗುತ್ತಾ.
`ಛೇ! ಬಿಡಿ ನಿಮಗೇನು ಕಂಟಕವಿತ್ತೋ ಸಧ್ಯ! ಬಚಾವಾದಿರಲ್ಲ…..ಎಲ್ಲಕ್ಕೂ ನಿಮ್ಮ ಆತ್ಮವಿಶ್ವಾಸವೇ ಕಾರಣರೀ. ನಿಮ್ಮ ವಿಲ್ ಪವರ್ ನಿಮ್ಮನ್ನು ಜೀವಂತವಾಗಿಟ್ಟಿದೆ.’ ಎಂದೆ.
`ನಿಜ ಮೇಡಂ ಒಮ್ಮೊಮ್ಮೆ ನಾನು ಸತ್ತು ಹೋದರೆ, ನನ್ನ ಸಂಸಾರದ ಗತಿಯೇನು ಎಂದು ಒಳಗೊಳಗೇ ವೇದನೆ ಪಡುತ್ತಿದ್ದೆ. ಆದರೆ ಏನೇ ಆದರೂ ಧೈರ್ಯ ಕಳೆದುಕೊಳ್ಳಬಾರದು ಎಂದು ನಿರ್ಧರಿಸಿದೆ. ಎನ್ನುತ್ತಲೇ ತಾವು ಅನುಭವಿಸಿದ ಹಣಕಾಸಿನ ತೊಂದರೆ, ಮನಸಿನ ಉಮ್ಮಳ, ದೈಹಿಕವಾಗಿ ಆಗುತ್ತಿರುವ ರೋಗದ ಧಾಳಿ ಎಲ್ಲವನ್ನೂ ವಿವರಿಸುತ್ತಾ ಮೌನವಾದರು. ಆ ಮೌನದಲ್ಲಡಗಿದ್ದ ಪ್ರಕ್ಷುಬ್ಧತೆ ತಣ್ಣಗೆ ನಿಂತಿದ್ದ ನನ್ನರಿವಿಗೆ ಬಂದಿತು.. ಎರಡು ಹನಿ ಕಂಬನಿ ಮಿಡಿಯುವುದದರ ಮೂಲಕ ಕೇಳುವ ದುಃಖವನ್ನು ಹೊರಹಾಕಿಬಿಡುವ ನಾವು, ಅವರು ಅನುಭವಿಸಿದ ಆ ಸಂದರ್ಭದ ವೇದನೆಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸತೀಶ್, ತಮ್ಮ ಓಡಾಟ, ಶಾಲೆಗೆ ರಜ ಹಾಕಿದ್ದು, ಹಣಕಾಸಿಗಾಗಿ ಪಡೆದ ಲೋನ್ ಗಳು ಖರ್ಚುಗಳನ್ನೆಲ್ಲ ಕೇವಲ ಹತ್ತು ನಿಮಿಷದ ಅವಧಿಯಲ್ಲಿ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದರು.
ಇವತ್ತು ನಿಮ್ಮ ಕಣ್ಣಮುಂದೆ ನಾನು ನಿಂತಿದ್ದೇನೆ ಎಂದರೆ ಮೂರು ಕಾರಣಗಳಿವೆ ಮೇಡಂ.
1. ನಾನು ನಿಸ್ಫೃಹತೆಯಿಂದ ಮಾಡಿದ ಸರ್ಕಾರಿ ಸೇವೆ.
2. ನನ್ನ ತಂದೆತಾಯಿಯರ ಆಶೀರ್ವಾದ
3. ನನ್ನ ಆತ್ಮವಿಶ್ವಾಸ.
ಅವರ ಎಲ್ಲ ವಿವರಗಳನ್ನು ಬಿಟ್ಟ ಕಣ್ಣು ಬಿಟ್ಟಂತೆ ಕೇಳಿದ ನಾನು ಮಾತು ಬಾರದೆ ನಿಂತಿದ್ದೆ. ಅಷ್ಟರಲ್ಲಿ ನನ್ನ ಬಸ್ ಬಂದ ಕಾರಣ, ` ಆ ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ ಸರ್, ಬರ್‍ತೀನಿ’ ಎಂದು ನಮಸ್ಕರಿಸಿ ಬಸ್ಸು ಹತ್ತಿದೆ. ಹೌದು! ಈಗ ಎಲ್ಲವನ್ನೂ ಗೆಲ್ಲಬಹುದು. ಹೇಗೆಂದರೆ ಸಮಯೋಚಿತವಾದ ನಡವಳಿಕೆ, ಸಮಯಪ್ರಜ್ಞೆ ಮತ್ತು ಧೈರ್ಯ. ಈ ಮೂರನ್ನು ಸದಾ ನಮ್ಮ ಬೆನ್ನಿಗೆ ಕಟ್ಟಿಕೊಂಡಿರಬೇಕು. ಅಷ್ಟಲ್ಲದೆ ಹೇಳಿದ್ದಾರೆಯೇ ಹಿರಿಯರು…….`ಧೈರ್ಯಂ ಸರ್ವತ್ರ ಸಾಧನಂ.’
(ಕ್ಯಾನ್ಸರ್ ಗೆದ್ದ ವೀರರೊಬ್ಬರ ಸಾಹಸಗಾಥೆ)
-ಬಿ.ಕೆ.ಮೀನಾಕ್ಷಿ, ಮೈಸೂರು.
ಆತ್ಮ ವಿಶ್ವಾಸ ಅನಾವರಣಗೊಂಡ ಲೇಖನ ಚೆನ್ನಾಗಿದೆ.ಅಭಿನಂದನೆಗಳು ಗೆಳತಿ ಮೀನಾಕ್ಷಿ.
ಬದುಕಿನಲ್ಲಿ ಆತ್ಮವಿಶ್ವಾಸದ ಮಹತ್ವ ಕಥೆಯಲ್ಲಿ ಚೆನ್ನಾಗಿ ಮೂಡಿ ಬಂದಿದೆ ಧನ್ಯವಾದಗಳು
ಯಾರ ಬದುಕಲ್ಲಾದರೂ ಪ್ರೋತ್ಸಾಹ ತುಂಬುವಂತಹ ಲೇಖನ. ನೈಸ್
ತುಂಬಾ ಚೆನ್ನಾಗಿದೆ ಲೇಖನ…ಚಂದದ ನಿರೂಪಣೆ
ಆತ್ಮ ವಿಶ್ವಾಸ ತರುವ ಲೇಖನ..ಅಂದವಾದ ನಿರೂಪಣೆ
ಮನಸ್ಥೈರ್ಯವನ್ನು ಬಿಂಬಿಸುವ, ಆತ್ಮಶಕ್ತಿಯನ್ನು ಉದ್ದೀಪನಗೊಳಿಸುವ ಈ ಲೇಖನವು ನಿಜವಾಗಿಯೂ ಪರಿಣಾಮಕಾರಿಯಾಗಿ ಮೂಡಿಬಂದಿದೆ.
ನೆಟ್ ವರ್ಕ್ ಇಲ್ಲದೆ ಅಭಿಪ್ರಾಯಗಳನ್ನು ನೋಡಲಾಗಿರಲಿಲ್ಲ. ಇದೊಂದು ಕಣ್ಣೆದುರಿನ ಘಟನೆಯ ನಿರೂಪಣೆಯಷ್ಟೆ. ಮೆಚ್ಚಿದ ಎಲ್ಲರಿಗೂ ಧನ್ಯವಾದಗಳು.