ಸಮಯಕ್ಕೆ ಸರಿಯಾಗಿ..!
ಸಮಯವೆಂಬುದು ಅತ್ಯಮೂಲ್ಯ.. ಕಳೆದ ಸಮಯವನ್ನು ಹಿಂದೆ ಪಡೆಯಲಾಗದು. ಅದರೊಂದಿಗೆ, ಸಮಯಕ್ಕೆ ಸರಿಯಾಗಿ ಆಗಬೇಕಾದುದು ಆಗಲೇಬೇಕು, ಮುಂದೂಡುವಂತೆಯೇ ಇಲ್ಲ. ಅದು ಹೌದು…ಆದರೆ ಒಮ್ಮೊಮ್ಮೆ ನಮ್ಮ ಯಾವುದೋ ಕೆಲಸದ ನಡುವೆ, ‘ಶಿವಪೂಜೆಯಲ್ಲಿ ಕರಡಿ ಬಿಟ್ಟಂತೆ(ಕರಡಿಗೆ ಬಿಟ್ಟಂತೆ..?)’, ಇನ್ನೊಂದೇನೋ ಬಂದು ಬಿಟ್ಟರೆ ಅದು ಮನಸ್ಸಿಗೆ ಸ್ವಲ್ಪ ಕಿರಿಕಿರಿ ಮಾಡುವುದು ಸಹಜ. ನೋಡಿ, ಒಂದು ಉದಾಹರಣೆಗೆ, ದಶಕಗಳಿಂದ ನಮ್ಮಮನೆಯ ರೇಡಿಯೋದ ಪೂಜ್ಯಸ್ಥಾನ ನಮ್ಮ ಅಡುಗೆಕೋಣೆ. ನಾವು ಹೆಣ್ಣುಮಕ್ಕಳು, ನಮ್ಮ ಜೀವಮಾನದ ಮುಕ್ಕಾಲಂಶ ಆಯುಸ್ಸು ಕಳೆಯುವುದೇ ಅಡುಗೆ ಕೋಣೆಯಲ್ಲಿ ಎಂಬುದು ನಮಗೆಲ್ಲ ತಿಳಿದ ಸತ್ಯ. ಅಡುಗೆ ಮಾಡುವಾಗ ಮಾತ್ರವಲ್ಲದೆ ನಮ್ಮ ಊಟ, ತಿಂಡಿಯ ಸಮಯದಲ್ಲೂ ರೇಡಿಯೋ ಕಿವಿ ಹಿಂಡುವ ಅಭ್ಯಾಸ ನಮ್ಮದು. ರಸವತ್ತಾದ ಕಾರ್ಯಕ್ರಮವನ್ನು ಉತ್ಸಾಹದಿಂದ ಕೇಳುತ್ತಾ ತಿಂಡಿ ತಿನ್ನುತ್ತಿರುವಾಗಲೇ ಸಮಯಕ್ಕೆ ಸರಿಯಾಗಿ ಬಂದಿತು..ಜಾಹೀರಾತು.. ‘…ಅಮ್ಮಾವ್ರೇ, ನಮ್ಮ ಶಾಲ್ಯಾಗ ಕುಡಿಯೋಕೆ ನೀರಿಲ್ಲ, ಪಾಯಖಾನೆಯಾಗೂ ನೀರಿಲ್ಲ..!’ ನಮ್ಮವರು ಅರ್ಧದಿಂದ ಎದ್ದು ರೇಡಿಯೋ ತೆಗೆಯುವುದು, ಪುನ: ಹಾಕುವುದು.. ನಡೆದೇ ಇರುತ್ತದೆ. ಅದು ಬೇಡವೆಂದು ಟಿ. ವಿ. ಹಾಕಿದರೆ, ಅದರಲ್ಲಿ ಅಕ್ಷಯ ಕುಮಾರನು ಸೀದಾ ನಮ್ಮನ್ನು ಬಚ್ಚಲಿಗೇ ಒಯ್ದು, ಅದನ್ನು ಹರ್ಪಿಕ್ ನಿಂದ ಝಗ ಝಗಿಸುತ್ತಾನೆ! ಇನ್ನು ಬೇರೆ ಸಮಯಗಳಲ್ಲಿ ಟಿ. ವಿ. ಹಾಕಿದರೆ, ಅಪರೂಪಕ್ಕೆ ಯಾವುದಾದರು ರೋಚಕವಾದ ಸನ್ನಿವೇಶವನ್ನು ಆಸಕ್ತಿಯಿಂದ ವೀಕ್ಷಿಸಿದ ಒಂದು ನಿಮಿಷಕ್ಕೇ ಹತ್ತು ನಿಮಿಷಗಳ ಜಾಹೀರಾತು ನಮ್ಮ ತಲೆ ತಿಂದು ಇಡೀ ದಿನ ಟಿ. ವಿ. ಹಾಕದಂತೆ ಮಾಡಿಬಿಡುತ್ತದೆ.
ನಮ್ಮ ಎಷ್ಟೋ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗಬೇಕೆಂಬುದು ನಮ್ಮಿಚ್ಛೆ. ಆದರೆ ನಡೆಯುವುದು ದೈವೇಚ್ಚೆಯಂತೆ.. ಹೌದಲ್ವೇ? ಒಮ್ಮೆ ನಮ್ಮೂರಿನಿಂದ ಐವತ್ತು ಕಿ.ಮೀ.ದೂರದಲ್ಲಿರುವ ರೈಲು ನಿಲ್ದಾಣಕ್ಕೆ ಹೋಗಬೇಕಿತ್ತು. ಮೂರುಗಂಟೆ ಮುಂಚಿತವಾಗಿ ಹೊರಟು, ಮಣಭಾರದ ಲಗ್ಗೇಜುಗಳನ್ನು ಕಾರಿನಲ್ಲಿ ಸಾಗಿಸಿ ನಿಲ್ದಾಣ ತಲಪಿದಾಗ, ಸಾಮಾನ್ಯವಾಗಿ ಲಗ್ಗೇಜುಗಳನ್ನು ರೈಲಿಗೊಯ್ಯುವ ಕೂಲಿಗಳು ನಾಪತ್ತೆ! ಇಪ್ಪತ್ತು ನಿಮಿಷ ಉಳಿದಿತ್ತು ರೈಲು ಹೊರಡಲು.. ನಮ್ಮ ಹೃದಯ ಬಡಿತ ಮಾತ್ರ ನೂರಕ್ಕೇರಿತ್ತು, ಆತಂಕದಿಂದ. ಮೆಟ್ಟಲುಗಳನ್ನು ಹತ್ತಿಳಿದು ಕಿ.ಮೀ. ದೂರದಲ್ಲಿರುವ ನಮ್ಮ ಪ್ಲಾಟ್ ಫೋರ್ಮ್ ಗೆ ಈ ಭಾರವನ್ನು ಹೊತ್ತುಕೊಂಡು ನಾವಿಬ್ಬರು ಹೋಗಲುಂಟೆ!? ಆದರೆ ಹೋಗಲೇ ಬೇಕಾದ ಅನಿವಾರ್ಯತೆ. ಅಂತೂ ಒದ್ದಾಡಿ, ಎಳೆದಾಡಿ ಹೋಗುತ್ತಿರುವಾಗ ಯಾರೋ ಹೇಳಿದರು; ಮೇಲೇರಲು ಲಿಫ್ಟ್ ಇದೆಯೆಂದು. ಸರಿಯೆಂದು ಅಲ್ಲಿಗೆ ಓಡಿದಾಗ ಅದು ಕೆಟ್ಟು ನಿಂತಿತ್ತು. ಸಮಯ ನಿಲ್ಲುವುದೇ?.. ಅದರಷ್ಟಕ್ಕೆ ಓಡುತ್ತಿತ್ತು. ಹತ್ತಿರದಲ್ಲಿದ್ದ ಇನ್ನೊಂದು ಲಿಫ್ಟ್ ನೊಳಗೆ ಹೋಗಲು ನಮ್ಮ ಲಗೇಜುಗಳು ಅದರೊಳಗೆ ಹೋಗಲೊಪ್ಪದೆ ತೊಂದರೆ ಕೊಡಲಾರಂಭಿಸಿದಾಗ ಲಿಫ್ಟ್ ನಲ್ಲಿದ್ದ ಯುವಕರಲ್ಲಿ ಸಹಾಯ ಕೇಳಬೇಕಾಯ್ತು. ಅವರು ಒಲ್ಲದ ಮನಸ್ಸಿನಿಂದ ಕೈಗೂಡಿಸಿದರು. ಅಲ್ಲಿಂದ ಪುನ: ನಮ್ಮ ರೈಲು ಇರುವ ಪ್ಲಾಟ್ ಫೋರ್ಮ್ ಗೆ ಇನ್ನೂ ನಡೆಯಲೇ ಬೇಕಿತ್ತು. ಘಳಿಗೆ ಘಳಿಗೆಯೂ ಅತ್ಯಮೂಲ್ಯವಾಗಿರುವ ಹೊತ್ತು..ರೈಲು ಹೊರಡಲು ಕೇವಲ ಎರಡು ನಿಮಿಷ!! ಅಂತೂ ನಮ್ಮ ಬೋಗಿಯನ್ನು ಹುಡುಕುವ ಕೆಲಸಕ್ಕೆ ಹೋಗದೆ ಯಾವುದೋ ಒಂದು ಬೋಗಿಗೆ ಈ ಲಗ್ಗೇಜುಗಳನ್ನು ಬಿಸಾಕಿ ಒಳಗೆ ಕಾಲಿಟ್ಟ ತಕ್ಷಣ ರೈಲು ಶಿಳ್ಳೆ ಹಾಕಿದಾಗ ನಾವು ಪೂರ್ತಿ ಬೆವತು ನೀರಾಗಿದ್ದೆವು.
ಇನ್ನೊಮ್ಮೆ ಮಗಳು ಮತ್ತು ಮೊಮ್ಮಕ್ಕಳ ಜೊತೆ ನಮ್ಮವರು ರೈಲಲ್ಲಿ ಚೆನ್ನೈಗೆ ಹೋಗುವುದಿತ್ತು. ನಾನು ಕೂಡ ಅವರ ಜೊತೆ ನಿಲ್ದಾಣದಲ್ಲಿರುವ ರೈಲಿಗೆ ಹತ್ತಿ ಕುಳಿತು ಮಾತನಾಡುತ್ತಿದ್ದವಳಿಗೆ ಸಮಯ ಹೋದುದೇ ತಿಳಿಯಲಿಲ್ಲ. ಅದು ಎ.ಸಿ. ಬೋಗಿಯಾಗಿದ್ದರಿಂದ ಕಿಟಿಕಿಗಳು ಮುಚ್ಚಿದ್ದವು. ಬೋಗಿಯಲ್ಲಿದ್ದ ಪ್ರಯಾಣಿಕರೊಬ್ಬರು ರೈಲು ಹೊರಟ ಬಗ್ಗೆ ಸೂಚನೆ ಕೊಟ್ಟಾಗ ಅಲ್ಲಿಂದ ಪಿ.ಟಿ. ಉಷಾಳನ್ನೂ ನಾಚಿಸುವಂತೆ ಓಡಿ ಬಾಗಿಲ ಬಳಿ ಬಂದಾಗ ರೈಲು ನಿಧಾನವಾಗಿ ಚಲಿಸುತ್ತಿತ್ತು. ಸೀರೆ ಉಟ್ಟಿದ್ದ ನಾನು, ಅದಾವುದೋ ಧೈರ್ಯದಲ್ಲಿ ರೈಲಿನಿಂದ ಪ್ಲಾಟ್ ಫೋರ್ಮ್ ಗೆ ಜಿಗಿದೇ ಬಿಟ್ಟೆ, ಎದುರಿಗೆ ಪರಿಚಯದವರು ಯಾರೂ ಇರದಿರಲಪ್ಪಾ ಎಂದು ದೇವರಿಗೆ ಕೈಮುಗಿಯುತ್ತಾ. ಆದರೆ ಎಲ್ಲವೂ ನಾವು ಎಂದುಕೊಂಡಂತೆ ಆಗುವುದಿಲ್ಲವಲ್ಲಾ! ಎದುರಿಗೇ ಪರಿಚಯದವರೊಬ್ಬರು ಹಲ್ಲು ಕಿಸಿದು ನನ್ನನ್ನೇ ನೋಡುತ್ತಾ “ಏನಾಯ್ತು?” ಎಂದು ಕೇಳಿದಾಗ, “ಏನಿಲ್ಲ” ಎಂದು ಬಾಯಿಯಲ್ಲಿ ಹೇಳಿ, ಮನಸ್ಸಿನಲ್ಲಿ “ಅಯ್ಯೋ.. ಇವರೂ ನೋಡಿಬಿಟ್ಟರಾ?..ನನ್ನ ಅವಸ್ಥೆ!” ಎಂದುಕೊಂಡೆ.
ಒಮ್ಮೆ ಅತ್ಯಂತ ತುರ್ತಾಗಿ ಮನೆಯಿಂದ ಹೊರಡುವ ಸಮಯದಲ್ಲಿ ಪಕ್ಕದ ಮನೆಯ ಮಹಿಳೆ ಬಂದರು. “ತುಂಬಾ ದಿನಗಳಾಯಿತು ನಿಮ್ಮಲ್ಲಿ ಮಾತಾಡದೆ, ಹೇಗಿದ್ದೀರಿ?” ಎನ್ನುತ್ತಾ ಒಳಬಂದಾಗ ನಮ್ಮ ಮನ:ಸ್ಥಿತಿ ಆ ದೇವರೇ ಬಲ್ಲ. ಹ್ಹೆ.. ಹ್ಹೆ.. ಎಂದು ಪೆಚ್ಚು ನಗೆ ನಗುತ್ತಾ ಅವರನ್ನು ಉಪಚರಿಸಿ ಕಳುಹಿಸುವುದಂತೂ ಸತ್ಯ..ಇದು ಎಲ್ಲಾ ವನಿತೆಯರ ಸಾಮಾನ್ಯ ನಿರ್ವಹಣೆ ಅಲ್ಲವೇ? ಇದೇ ರೀತಿ ಸಾಮಾನ್ಯವಾಗಿ ಹಳೆ/ಹೊಸ ಬಟ್ಟೆಗಳನ್ನು ಅನಾಥಾಶ್ರಮಕ್ಕೆ ಒಯ್ಯುವ ಕುಮಾರನು ನಾನು ಆಫೀಸಿಗೆ ಹೊರಡುವ ಸಮಯದಲ್ಲಿಯೇ ಬಂದು “ಅಮ್ಮಾ ಹೇಗಿದ್ದೀರಿ?” ಎಂದು ಅಡ್ಡಬಿದ್ದು ಇಷ್ಟಗಲ ನಕ್ಕಾಗ ಹೇಗೆ ತಾನೇ ಕೋಪಿಸಿಕೊಳ್ಳಲಿ? “ನೀನಿನ್ನು ಯಾವಾಗಲೂ ರವಿವಾರ ಮಾತ್ರ ಬಾ ಮಾರಾಯ” ಎಂದರೂ ಅವನು ಮಾತ್ರ ಎಂದಿಗೂ ಆ ತಪ್ಪು ಮಾಡಲಿಲ್ಲವೆನ್ನಿ.
ಪಕ್ಕದ ಮನೆಯ ಗೆಳತಿ ಜೊತೆಗೆ ಬೆಳಿಗ್ಗೆ ಸರಿಯಾಗಿ ಐದೂವರೆ ಗಂಟೆಗೆ ವಾಕಿಂಗ್ ಹೋಗುವ ರೂಢಿ. ಸರಿಯಾಗಿ ಏಳಲು ಮೊಬೈಲಿನಲ್ಲಿ ಅಲರಾಂ ಇಟ್ಟು ಮಲಗಿದರೆ ಒಂದು ದಿನ ಏಳುವಾಗ ತಡವಾಗಿ ಹೋಗಬೇಕೆ? ಸರಿಯಾದ ಸಮಯಕ್ಕೆ ಅಲರಾಂ ಆಗಲಿಲ್ಲವೆಂದು ಮೊಬೈಲನ್ನು ದೂರುವ ಹಾಗೂ ಇರಲಿಲ್ಲ..ಯಾಕೆಂದರೆ ಅದು ತಪ್ಪು ಮಾಡುವುದೇ ಇಲ್ವಲ್ಲ. ಮತ್ತೆ ಕೂಲಂಕುಶವಾಗಿ ಗಮನಿಸಿದರೆ ಅಲರಾಂಗೆ ಬಳಸಿದ ಇಂಪಾದ ಸ್ವರವು ಅತಿ ಸಣ್ಣ ದನಿಯಲ್ಲಿ ನನಗೆ ಜೋಗುಳ ಹಾಡಿ ಮಲಗಿಸಿತ್ತು. ಅದರ ಶಬ್ದವನ್ನು ದೊಡ್ಡದು ಮಾಡಿದ ಮೇಲೆ ಸರಿಯಾಗಿ ಅದರ ಡ್ಯೂಟಿ ಮಾಡುತ್ತಿದೆ.
ಮನೆಯಲ್ಲಿ ಅತಿಥಿಗಳು ಬಂದಾಗಲೋ ಅಥವ ಹಬ್ಬದ ಅಡುಗೆ ದಿನವೋ ವಿದ್ಯುತ್ ಅಥವಾ ನಲ್ಲಿ ನೀರು ಕೈಕೊಡುವುದು ಸರ್ವೇಸಾಮಾನ್ಯ ಅಲ್ವೇ? ಹಾಗೇ ಆಯ್ತು.. ನೂತನ ದಂಪತಿಗಳನ್ನು ಔತಣಕ್ಕೆ ಕರೆದಿದ್ದೆವು. ನಾನು ಉದ್ಯೋಗದಲ್ಲಿ ಇದ್ದುದರಿಂದ ಅವರು ರಾತ್ರಿಗೆ ಬರುವುದಿತ್ತು. ಜೊತೆಗೆ ಆದಷ್ಟು ಬೇಗ ಊಟ ಮುಗಿಸಿ ಹಿಂತಿರುಗಬೇಕೆಂದು ಮೊದಲೇ ತಿಳಿಸಿದ್ದರು. ನನಗೆ ರಜೆ ಸಿಗದ ಕಾರಣ, ಸಂಜೆ ಮನೆಗೆ ಹಿಂತಿರುಗಿದ ನಂತರವೇ ವಿಶೇಷ ಅಡುಗೆ ತಯಾರಿ ಆಗಬೇಕಿತ್ತು. ಆರು ಗಂಟೆಗೆ ಮನೆಗೆ ಬಂದು ನೋಡಿದರೆ ವಿದ್ಯುತ್ ಆಗಲೇ ನಾಪತ್ತೆಯಾಗಿರಬೇಕೆ? ‘ಸರ್ವಂ ಯಂತ್ರಮಯಂ ಜಗತ್’ ಆಗಿರುವ ಈ ಕಾಲದಲ್ಲಿ ಕರೆಂಟು ಇಲ್ಲದೆ ನಮ್ಮ ಕೈಕಾಲು ಚಲಿಸುವುದೇ ಇಲ್ಲ! ಆದರೆ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವ ಸಂದರ್ಭವಲ್ಲದ್ದರಿಂದ ಅಡುಗೆಕೋಣೆ ಪಕ್ಕದಲ್ಲಿ ಬಟ್ಟೆ ಹೊದ್ದು ಮಲಗಿದ್ದ ನಮ್ಮ ದೊಡ್ಡದಾದ ಅರೆಯುವ ಕಲ್ಲನ್ನು ಎಚ್ಚರಿಸಿ, ಎಲ್ಲವನ್ನೂ ಅದರಲ್ಲೇ ಅರೆದು ಅತಿಥಿಗಳು ಬರುವಾಗ ಸಿದ್ಧ ಮಾಡಿದ ನಳ(?)ಪಾಕ ವಿಶೇಷ ರುಚಿಯಿಂದ ಕೂಡಿತ್ತು ಎಂದು ನನ್ನೆಣಿಕೆ.
ನಾಲ್ಕು ದಶಕಗಳ ಹಿಂದಿನ ಮಾತು. ಹಳ್ಳಿಯಲ್ಲಿರುವ ತವರುಮನೆಯಲ್ಲಿ ಹೊಲ ಗದ್ದೆ ಬೇಸಾಯ, ತೆಂಗು ಕಂಗುಗಳ ಸಮೃದ್ಧ ಬೆಳೆ, ಹಾಗೆಯೇ ಹತ್ತಾರು ಆಳು ಕಾಳುಗಳು ಕೆಲಸಕ್ಕಿದ್ದರು. ಒಮ್ಮೆ ಹೆಚ್ಚುವರಿ ಕೆಲಸಕ್ಕಾಗಿ ಮತ್ತೂ ಆರೇಳು ಆಳುಗಳು ಬರುವುದಿತ್ತು. ಮನೆಯೊಡತಿಗೆ ಅಷ್ಟೂ ಮಂದಿಗೆ ಊಟೋಪಚಾರಗಳ ವ್ಯವಸ್ಥೆಯನ್ನು ಖುದ್ದು ಮಾಡುವ ಜವಾಬ್ದಾರಿ. ಹಾಗೇಯೇ ಆ ದಿನ ಸುಮಾರು ಹದಿನೈದು ಜನರಿಗಾಗಿ ಪ್ರತ್ಯೇಕ ಅಡುಗೆ ಸಿದ್ಧವಾಯ್ತು.. ದೊಡ್ಡ ಪಾತ್ರೆಯಲ್ಲಿ ತುಂಬಾ ಖಾರವಾದ ಸಾಂಬಾರ್! ಅದೇ ದಿನ ಕೆಲಸದರು ಕೈಕೊಟ್ಟು, ಮನೆಯವರು ತಲೆಮೇಲೆ ಕೈ ಹೊತ್ತು ಕೂತದ್ದಂತೂ ನಿಜ. ಆದರೆ ಸ್ವಲ್ಪ ಹೊತ್ತಿನಲ್ಲಿ ಬಂದ ನಾಲ್ಕು ಮಂದಿ ಅತಿಥಿಗಳಿಗೆ ಆ ಖಾರದ ಸಾಂಬಾರಿನ ಉಪಚಾರವಾಯಿತೆನ್ನಿ.
ಹಲವಾರು ವರ್ಷಗಳ ಹಿಂದೆ, ನಾನು ಕಾಲೇಜಿಗೆ ಹೋಗುತ್ತಿದ್ದ ಸಮಯ. ನಾನೊಬ್ಬಳೇ ಬಸ್ಸಿನಲ್ಲಿ ಪ್ರಯಾಣ ಮಾಡಿದ ಸಂದರ್ಭ. ಬಸ್ಸು ಏರಿ ಟಿಕೇಟಿನ ಹಣಕ್ಕಾಗಿ ಕೈಚೀಲದಲ್ಲಿದ್ದ ಪುಟ್ಟ ಪರ್ಸಿಗಾಗಿ ತಡಕಾಡಿದಾಗ ಅದೆಲ್ಲಿದೆ ?! ಅದಾಗಲೇ ಕಿಸೆಗಳ್ಳರ ಪಾಲಾದುದು ತಿಳಿಯಿತು. ಬಸ್ಸಲ್ಲಿ ಪರಿಚಯದವರಿದ್ದರೂ ಕೇಳಲು ಸಂಕೋಚ. ಗಾಬರಿಯಿಂದ ಮೈ ಇಡೀ ಬೆವರಿ ಒದ್ದೆ! ದೇವರಿಗೆ ಮನಸ್ಸಲ್ಲೇ ಸಣ್ಣ ಹರಕೆಯ ಲಂಚ ಒಪ್ಪಿಸುತ್ತಾ, ಕೈ ಚೀಲದ ತಳವನ್ನು ಜಾಲಾಡಿದೆ. ಅಬ್ಬಾ..ನಾಲ್ಕಾರು ಚಿಲ್ಲರೆ ನಾಣ್ಯಗಳು ಕೈಗೆ ತಗುಲಿದವು. ಬೇಗ ಬೇಗನೆ ಅದನ್ನೆಣಿಸಿದಾಗ ಸರಿಯಾಗಿ ಟಿಕೆಟಿಗೆ ಬೇಕಾದಷ್ಟು ದುಡ್ಡು ನನ್ನ ಕೈಯಲ್ಲಿತ್ತು! ಸಮಯಕ್ಕೆ ಸರಿಯಾಗಿ ದೇವರು ದಯಪಾಲಿಸಿದುದಕ್ಕೆ ಸಣ್ಣ ಸಾಕ್ಷಿಯಾಯಿತು ಆ ದಿನದ ಘಟನೆ.
ಹತ್ತಾರು ವರುಷಗಳ ಹಿಂದೆ, ಮಂಗಳೂರಿಗೆ ಪೋಪ್ ಬಂದಿದ್ದ ದಿನ. ನಮ್ಮವರು ಬೆಳಿಗ್ಗೆ ಮಂಗಳೂರಿಗೆ ಹೋಗಿ ಮಧ್ಯಾಹ್ನ ಹೊತ್ತಿಗೆ ಮನೆಗೆ ಹಿಂತಿರುಗಲು ನೂಕುನುಗ್ಗಲಿನಲ್ಲಿ ಬಸ್ಸನ್ನು ಏರಿ ಕುಳಿತು ಟಿಕೆಟ್ಟಿಗಾಗಿ ಪ್ಯಾಂಟು ಕಿಸೆಗೆ ಕೈಹಾಕಿದಾಗ ಕಿಸೆ ಖಾಲಿಯಾಗಿದ್ದುದು ಗಮನಕ್ಕೆ ಬಂತು.. ಕಿಸೆಗಳ್ಳರು ಕೈಚಳಕ ತೋರಿಸಿಯೇ ಬಿಟ್ಟಿದ್ದರು! ಬಸ್ಸಲ್ಲಿದ್ದ ಪರಿಚಯದವರಲ್ಲಿ ಹಣ ಪಡೆದು ಮನೆಗೆ ತಲಪಿದರೂ, ಸಮಯಕ್ಕೆ ಒದಗಿದ ಅವರ ಸಹಾಯವನ್ನು ಇಂದಿಗೂ ನೆನೆಯುವಂತಾಗಿದೆ.
– ಶಂಕರಿ ಶರ್ಮ, ಪುತ್ತೂರು.
ಸರಿಯಾದ ಸಮಯಕ್ಕೆ ಸರಿಯಾಗಿ ಘಟಿಸಿದ ಒಳಿತು-ಕೆಡುಕು, ಸಹಾಯ-ಮೋಸ, ಸರಿ-ತಪ್ಪು, ಮನರಂಜನೆ-ಕಿರಿಕಿರಿ, ಹಾಸ್ಯ-ಗಂಭೀರ, ಮುಜುಗರ-ಗೌರವ ಎಲ್ಲಾ ಸನ್ನಿವೇಶವನ್ನು ಕಲಾತ್ಮಕವಾಗಿ ಬರೆದಿದ್ದೀರಿ.
ಧನ್ಯವಾದಗಳು ಮೇಡಂ.
ಚಿಂತನೆಗೆ ಹಚ್ಚುವ ಬರಹ ಚೆನ್ನಾಗಿದೆ ಮೂಡಿ ಬಂದಿದೆ ಮೇಡಂ.
ಧನ್ಯವಾದಗಳು ಮೇಡಂ.
ಸಮಯದ ಮಹತ್ವವನ್ನು ತಿಳಿ ಹಾಸ್ಯ ಹಾಗೂ ಬದುಕಿನಲ್ಲಿ ನಡೆದ ಘಟನೆಗಳ ಉಲ್ಲೇಖದೊಂದಿಗೆ ವಿವರಿಸಿದ ರೀತಿ ತುಂಬಾ ಚೆನ್ನಾಗಿದೆ. ಇತ್ತೀಚೆಗಂತೂ ಹೊತ್ತು ಸರಿದು ಬಿಡುವುದೇ ಅರಿವಾಗುತ್ತಿಲ್ಲ, ಎಲ್ಲ ಕೆಲಸಗಳೂ ಬಾಕಿ.
ಧನ್ಯವಾದಗಳು ನಯನಾಮೇಡಂ.
ನಮಸ್ಕಾರ ಓಡುವ ಸಮಯದೊಂದಿಗೆ ಓಡುತಿರುವ,ಓಡಲಾಗದೆ ಒದ್ದಾಡುವ ಪರಿ ತಿಳಿ ಹಾಸ್ಯ ದೊಂದಿಗೆ ಬರಹ ರಂಜಿಸುತ್ತದೆ
ಧನ್ಯವಾದಗಳು.
ಎಷ್ಟು ಚೆನ್ನಾಗಿ .ಜೀವನದ .ಘಟನೆ ಹಾಸ್ಯದೊಂದಿಗೆ ಸಮಯವನ್ನೂ ಕೂಡಾ ಹೊಗಳಿ ಬರೆದಲೇಖನ ಸೂಪರ್ ಅಕ್ಕಾ ….
ಧನ್ಯವಾದಗಳು ಆಶಾ ಅವರಿಗೆ.