ಕವಿ ನೆನಪು 32: ಕೆ ಎಸ್ ನ ಅವರ ಉತ್ತರ ಕನ್ನಡ ಪ್ರವಾಸ
ಕವಿದಂಪತಿಗಳನ್ನು ಉತ್ತರಕನ್ನಡದ ಪ್ರಮುಖ ಸ್ಥಳಗಳಾದ ಹೊನ್ನಾವರ, ಕಾರವಾರ, ಗೋಕರ್ಣ ಮೊದಲಾದ ಊರುಗಳಿಗೆ ಕರೆದುಕೊಂಡು ಹೋಗಿ ಸ್ಥಳೀಯ ಸಂಘ,ಸಂಸ್ಥೆಗಳ ಆಶ್ರಯದಲ್ಲಿ ಉಪನ್ಯಾಸ, ಕಾವ್ಯವಾಚನ ಹಾಗೂ ಸತ್ಕಾರ ಸಮಾರಂಭವನ್ನು ಏರ್ಪಡಿಸಲಾಯಿತು.ಜನ ಕವಿಯ ಮಾತುಗಳನ್ನು ಕೇಳಿ ಸಂತಸಪಟ್ಟರು. ಆ ಸಂದರ್ಭದಲ್ಲಿ ಶರಾವತಿಯ ಹಿನ್ನೀರಿನಲ್ಲಿ ಕವಿದಂಪತಿಗಳನ್ನು ಹಬೆದೋಣಿಯಲ್ಲಿ ಕೂರಿಸಿ ಮೆರವಣಿಗೆ ಮಾಡಲಾಯಿತು. ಇದು ತಮ್ಮ ಜೀವನದ ಅಪೂರ್ಣ ಕ್ಷಣವೆಂದು ನಮ್ಮ ತಂದೆ ಆಗಾಗ್ಗೆ ನೆನಪಿಸಿಕೊಳ್ಳುತ್ತಿದ್ದರು.
ಈ ಸಂದರ್ಭದಲ್ಲಿ ಗೋಕರ್ಣದ ಕವಿ, ಪತ್ರಕರ್ತ ಗೌರೀಶ ಕಾಯ್ಕಿಣಿ (ಜಯಂತ ಕಾಯ್ಕಣಿ ಅವರ ತಂದೆ) ನಮ್ಮ ಕುಟುಂಬಕ್ಕೆ ನಿಕಟವಾದರು.ಒಂದು ಸಂಜೆ ಗೋಕರ್ಣದ ಭದ್ರಕಾಳಿ ಹೈಸ್ಕೂಲಿನಲ್ಲಿ ಏರ್ಪಾಟಾಗಿದ್ದ ಸತ್ಕಾರ ಸಮಾರಂಭದಲ್ಲಿ ಒಂದು ಸ್ವಾರಸ್ಯಕರ ಪ್ರಸಂಗ ನಡೆಯಿತು. ಅದೇ ಸಂದರ್ಭದಲ್ಲಿ ಕವಿ ಸು.ರಂ. ಎಕ್ಕುಂಡಿಯವರಿಗೆ ಸೋವಿಯಟ್ ಲ್ಯಾಂಡ್ ಬಹುಮಾನ ಬಂದಿತ್ತು.ಸಮಾರಂಭ ತುಂಬ ಆತ್ಮೀಯವಾಗಿತ್ತು.ಆಗ ಅಲ್ಲಿನ ಕನ್ನಡ ಉಪಾಧ್ಯಾಯರು ನರಸಿಂಹಸ್ವಾಮಿಯವರ ಹತ್ತಿರ ಬಂದು “ನಿಮ್ಮ ‘ಶಾನುಭೋಗರ ಮಗಳು‘ ಪದ್ಯ ಚೆನ್ನಾಗಿದೆ; ನಾನದನ್ನು ಪಾಠ ಹೇಳಿದ್ದೇನೆ. ನೋಡಿ ಈ ಊರಿನಲ್ಲಿ ಒಬ್ಬರು ಶಾನುಭೋಗರು ಇದ್ದಾರೆ. ಅವರ ಮಗಳು ಸೀತೆ ಇದೇ ಸ್ಕೂಲಿನಲ್ಲಿ ಓದುತ್ತಿದ್ದಾಳೆ. ಆ ಪದ್ಯ ಅವಳ ತರಗತಿಗೆ ಪಠ್ಯವಾಗಿದೆ. ಒಂದು ದಿನ ಆ ಶಾನುಭೋಗರು ನನ್ನಲ್ಲಿಗೆ ಬಂದು ‘ಬುದ್ದಿಯಿಲ್ಲದ ಅವನೇನೋ (ಕೆ ಎಸ್ ನ) ನನ್ನ ಮಗಳ ಮೇಲೆ ಪದ್ಯ ಕಟ್ಟಿರಬಹುದು. ಆದರೆ ಅದನ್ನು ತರಗತಿಯಲ್ಲಿ ನೀವು ಓದಿ ಪಾಠ ಮಾಡುವುದರಿಂದ ನನಗೆ ಕೋಪ ಬಂದಿದೆ. ಇನ್ನು ಮೇಲೆ ಹೀಗೆ ಮಾಡಬೇಡಿ’ ಎಂದು ಎಚ್ಚರಿಸಿದ್ದಾರೆ” ಎಂದರು.
ಇದನ್ನು ಕೇಳಿ ಕವಿಗೆ ಆಶ್ಚರ್ಯವಾಯಿತು. ಗೌರೀಶ ಕಾಯ್ಕಿಣಿ ಯವರಂತೂ “ಇದಲ್ಲವೆ ನಿಜವಾದ ಕವಿಕೀರ್ತಿ” ಎಂದು ಕೆ ಎಸ್ ನ ಅವರ ಬೆನ್ನು ತಟ್ಟಿದರು.
ಇಂಥ ಹಲವಾರು ರಸಸನ್ನಿವೇಶಗಳಿಂದ ಆ ಉತ್ತರ ಕನ್ನಡ ಪ್ರವಾಸವು ನಮ್ಮ ತಂದೆಯವರಿಗೆ ನಿತ್ಯ ಸ್ಮರಣೀಯವಾಗಿತ್ತು.
ಈ ಲಿಂಕ್ ನಲ್ಲಿ ಕೆ ಎಸ್ ನ ಅವರ ‘ಶ್ಯಾನುಭೋಗರ ಮಗಳು…’ ಹಾಡನ್ನು ಕೇಳಿ ಆನಂದಿಸಿ. ಹಾಡನ್ನು ಅಪ್ ಲೋಡ್ ಮಾಡಿದ ‘ಗೀತಾ ಮಾಧುರಿ’ ಅವರಿಗೆ ಧನ್ಯವಾದಗಳು: https://gaana.com/song/shanubhogara-magalu
ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ:http://surahonne.com/?p=31202
-ಕೆ ಎನ್ ಮಹಾಬಲ
(ಕೆ ಎಸ್ ನ ಪುತ್ರ, ಬೆಂಗಳೂರು)
ನೆನಪುಗಳು ಹಂಚಿ ಕೊಂಡಿದ್ದು ಖುಷಿಯಾಗಿದೆ
ಕೆ.ಎಸ್.ಎನ್ ನನ್ನ ಅತ್ಯಂತ ನೆಚ್ಚಿನ ಕವಿಗಳು. ಅವರ ಬಗ್ಗೆ ಇನ್ನಷ್ಟು ತಿಳಿಯುವ ಅವಕಾಶ ದೊರೆಯಿತು.ಧನ್ಯವಾದಗಳು ಸರ್
ಅನೇಕ ಮೆಲುಕು ಹಾಕುವ ನಿಮ್ಮ ಅನುಭವ ಕುಶಿಯಾಯ್ತು.ಜೊತೆಗೆ ಅನುಕರಣೀಯವೂ ಆಗಿತ್ತು.
ನನ್ನ ಹಲವು ಮುಂಜಾವಿನ ಸಂಗಾತಿ ಕೆಎಸ್ ನ. ಅವರ ಭಾವಗೀತೆಗಳು… ಈ ಬರಹಗಳು ಆದಷ್ಟು ಬೇಗ ಸಮಗ್ರವಾಗಿ ಕೃತಿರೂಪಕ್ಕೆ ಬರಲಿ.
Very nice song. thanks for the new way of presenting
ಸೊಗಸಾದ ಬರಹದ ಸವಿಯೊಂದಿಗೆ, ಇಂಪಾದ ಹಾಡಿನ ಸಿಹಿ. ಉತ್ತಮ ಪ್ರಯತ್ನ.
ಲೇಖನ ಓದುತ್ತಾ ಹಾಡಿನ ಸವಿಯನ್ನು ಸವಿದೆವು ಧನ್ಯವಾದಗಳು
ಕೆ.ಎಸ್.ನ.ಅವರ ನೆನಪಿನ ಲೇಖನ ದ ಜೊತೆ ಯಲ್ಲಿ ಅವರ ರಚನೆಯ ಭಾವಗೀತೆಯು ಸವಿ ಚಹಾದ ಜೊತೆಗೆ ಚೊಡಾ ಇದ್ದಹಾಗಿತ್ತು.ಈ ವಿಶಿಷ್ಟ ಪ್ರಯತ್ನಕ್ಕೆ ನನ್ನದೊಂದು ನಮನ.
ಅತ್ಯಂತ ನೈಜತೆಯಿಂದ ಕೂಡಿದ ‘ಶ್ಯಾನುಭೋಗರ ಮಗಳು..’ ಹಾಡನ್ನು ಕೇಳುತ್ತಾ, ಕವಿಗಳ ಬಗ್ಗೆ ಓದುವ ಅವಕಾಶ ಹೊಸ ರೀತಿಯದು..ಅದ್ಭುತವಾಗಿತ್ತು. ಸಂಪಾದಕಿಯವರಿಗೆ, ಕವಿಗಳಿಗೆ, ಕವಿ ಪುತ್ರರಿಗೆ ಧನ್ಯವಾದಗಳು..ನಮನಗಳು. ಲೇಖನ ಮಾಲೆಯು ಅದ್ಭುತವಾಗಿ ಮೂಡಿಬರುತ್ತಿದೆ. ಧನ್ಯವಾದಗಳು ಸರ್.