ಅಂತರಗಂಗೆ
ಬೆಳೆಯಲು ಬಿಡದೇ ತಡೆದಂತೆ ಬೆಳೆಯುತ್ತೆ
ನೆನಪಿನ ನೋವು ಕಳೆಯಂತೆ
ಸೋತು ಸೊರಗಿ ಕೈ ಚೆಲ್ಲಿದಾಗ
ಹಟ ಕುಡುಗೋಲಾಗಿ ಕೈ ಸೇರುತ್ತೆ
ಆಗ ಕತ್ತರಿಸಿ ಒತ್ತರಿಸಿದರೇ
ಕಳೆಯಾಗಿ ಕಾಡುವ ನೋವನ್ನು
ಹದವಾದ ನೆಲವೀಗ ಮನವು
ಬಿತ್ತುತ್ತೇನೆ ಒಂದಿಷ್ಟು ಸಂತೋಷವನ್ನು
ಸಂತೋಷವೆಂದರೆ ನೀನೇ.. ಅಂತಲ್ಲ
ಸಾಂತ್ವನಪರಿಯರಿತ ಸ್ವಾರ್ಥ ಚೌಕಟ್ಟು ಮೀರಿದ
ಸಂಗಾತ ನೀಡುವ ಸಕಲವೂ ಸರಿ
ಒಂದು ತುಂತುರು, ನಯವಾಗಿ ಸೋಕುವ ತಂಗಾಳಿ
ಬಯಲ ಹಸಿರು, ತಲೆದೂಗುವ ಚೆಂಗುಲಾಬಿ
ಹಾರುವ ಹಕ್ಕಿ, ತಾರಾಡುವ ಚಿಟ್ಟೆ
ಆಗಸದ ನೀಲಿ.. ಅಗಣಿತ ನಕ್ಷತ್ರ
ಹರಿಯುವ ತೊರೆ, ಭೋರ್ಗರೆಯುವ ಜಲಪಾತ
ಜಂಗಮ ನದಿ, ಸ್ಥಾವರ ಕಡಲು
ಓಗೊಟ್ಟು ಕಿವಿಗೊಟ್ಟರಾಯಿತು
ಅಂತರಂಗ ಬಹಿರಂಗವಾಗಲು
ಬಹಿರಂಗ ಅಂತರಗಂಗೆಯಾಗಲು!!
-ರೋಹಿಣಿಸತ್ಯ
ಅರ್ಥಪೂರ್ಣವಾದ ಕವನ. ಧನ್ಯವಾದಗಳು
ಪ್ರಕೃತಿಯ ಸಾಮಿಪ್ಯದಲ್ಲಡಗಿರುವ ನೆಮ್ಮದಿ ಎಂತಹುದು ಅನ್ನುವುದನ್ನು ವ್ಯಕ್ತ ಪಡಿಸುವ ಸಾಲುಗಳು. ಚೆನ್ನಾಗಿದೆ ಮೇಡಂ ಕವನ.
“ಓಗೊಟ್ಟು ಕಿವಿಗೊಟ್ಟರಾಯಿತು ..ಅಂತರಂಗ ಬಹಿರಂಗವಾಗಲು….ಬಹಿರಂಗ ಅಂತರಗಂಗೆಯಾಗಲು….. ” ಈ ಸಾಲು ಬಹಳ ಇಷ್ಟವಾಯಿತು. ಚೆಂದದ ಕವನ.
ನಮ್ಮ ಭಾವನೆ, ಜೀವನ ಇತ್ಯಾದಿಗಳಿಗೆ ಪ್ರಕೃತಿಯೊಂದಿಗಿರುವ ಅವಿನಾಭಾವ ಸಂಬಂಧವನ್ನು ಸೊಗಸಾಗಿ ನಿರೂಪಿಸಿರುವಿರಿ ತಮ್ಮ ಕವನದ ಮೂಲಕ..ಧನ್ಯವಾದಗಳು ಮೇಡಂ.