ಮನಸ್ಸಿನ ಭಾವನೆಗಳನ್ನು ಹೊರಹಾಕುವ “ಬರಹ”

Share Button

ನಾನೇಕೆ ಬರೆಯುತ್ತೇನೆ? ಪ್ರಶ್ನಾರ್ಥಕ ದೃಷ್ಟಿಯಿಂದ ಯೋಚಿಸುತ್ತಿದ್ದೆ.  ಒಂದು ದಿನ ಕುಳಿತುಕೊಂಡು ಸುಮ್ಮನೆ ಮತ್ತಷ್ಟು ಯೋಚನೆ ಮಾಡಿದೆ. ನನ್ನ ಮನದಲ್ಲಿ ನೂರಾರು ತರಹದ ಭಾವನೆಗಳು ಮೂಡಿಬಂದವು. ಬರೆಯುವುದು ಒಂದು ಕಲೆ. ಕೆಲವರು ಮಾತು….. ಬರಹ….. ಎಲ್ಲಾ ಶಕ್ತಿ ಇದ್ದರೂ ಸುಮ್ಮನೆ ಮೌನವಾಗಿ ಇದ್ದುಕೊಂಡು ಕೇವಲ ಓದುತ್ತಾರೆ ಅಷ್ಟೇ!. ಮತ್ತೊಂದೆಡೆ ಬರೆಯುವವರಿಗೆ ಮಾತುಗಾರಿಕೆ ಇರುವುದಿಲ್ಲ, ಮಾತು ಬಲ್ಲವರಿಗೆ ಬರೆಯಲು ಆಗುವುದಿಲ್ಲ. ಎರಡರಲ್ಲೂ ಅಂದರೆ ಬರೆಯುವುದು, ಮಾತನಾಡುವುದು ಇವುಗಳಲ್ಲಿ ಪಳಗಿರುವ ಮಂದಿ ಕೂಡ ಕಡಿಮೆಯೇ ಎಂದು ಹೇಳಬೇಕು. ಎರಡು ವಿಶಿಷ್ಟ ಕಲೆಗಳನ್ನು ಮೈಗೂಡಿಸಿಕೊಂಡವರು ನಿಜಕ್ಕೂ ಧನ್ಯರು. ಅಂಥವರ ಲೇಖನಗಳನ್ನು ಓದುವುದು, ಅಥವಾ ಭಾಷಣವನ್ನು ಕೇಳುವುದು ಇದೆಯಲ್ಲ ಅದು ನಮಗೆ ವಿಶಿಷ್ಟ ರೀತಿಯಲ್ಲಿ ಮುದನೀಡುತ್ತದೆ.

ನಿಜಕ್ಕೂ ಬರೆಯುವುದು ಎಂದರೆ ನನಗೆ ಎಲ್ಲಿಲ್ಲದ ಸಡಗರ ಸಂಭ್ರಮ. ಬರಹ ಬದುಕಿನ ಒಳ-ಹೊರಗನ್ನು ತೆರೆದಿಡುತ್ತದೆ. ಬರಹದಿಂದ ಮನಸ್ಸು ಪ್ರಫುಲ್ಲಗೊಳ್ಳುತ್ತದೆ.  ಮೊದಮೊದಲು ನಾನು ತೋಚಿದ್ದನ್ನು ಗೀಚು  ಎನ್ನುವಂತೆ ಬರೆಯಲು ಪ್ರಾರಂಭಿಸಿದೆ. ಈಗ ಹಂತ ಹಂತವಾಗಿ ಬರಹ ನನ್ನ ಬದುಕಿನ ದಿಕ್ಕನ್ನೇ ಬದಲಾಯಿಸಿದೆ. ನನಗೆ ಬರೆಯುವುದಕ್ಕೆ ಬರುತ್ತದೆ ಎಂದು ಸುಮ್ಮನೆ ಬರೆದರೆ ಸಾಲದು. ನಾವು ಯಾವುದೇ ವಿಷಯದ ಬಗ್ಗೆ ಬರೆಯಲು ಪ್ರಾರಂಭಿಸುವ ಮೊದಲು ನಾವು ಯಾವ ವಿಷಯದ ಬಗ್ಗೆ ಬರೆಯಬೇಕು ಎಂದುಕೊಂಡಿದ್ದೇವೆ ಇವೆಲ್ಲದರ ಬಗ್ಗೆ ಆಳವಾದ ಅಧ್ಯಯನ, ಜೊತೆಗೆ ಸಂಗ್ರಹಯೋಗ್ಯ ಮಾಹಿತಿಗಳು, ಉಪಮಾನ  ಉಪಮೇಯ ಪದಪುಂಜಗಳು, ಓದುಗರಿಗೆ ವಿಷಯವನ್ನು ನೇರವಾಗಿ ಮುಟ್ಟಿಸುವ ಜಾಣ್ಮೆ ತಾಳ್ಮೆ ಇರಬೇಕು. ಆಗ ಮಾತ್ರ ನಾವು ಬರೆದಿದ್ದು ನೇರವಾಗಿ ಓದುಗರ ಮನೆ-ಮನ ತಲುಪುತ್ತವೆ.

ನಾನು ಬರೆದಿದ್ದರಿಂದ, ಅದನ್ನು ನೂರಾರು ಜನರು ಓದಿದ್ದರಿಂದ, ನನಗೆ ಗೊತ್ತಿಲ್ಲದೆ ಅನೇಕ ಸ್ನೇಹಿತರು ಪರಿಚಯವಾದರು!. ಬರಹದಿಂದ ಎಷ್ಟೊಂದು ಜನ ಸ್ನೇಹಿತರು ನನ್ನೊಟ್ಟಿಗೆ ಇದ್ದಾರೆ ಎಂದೆನಿಸುತ್ತದೆ. ಕೇವಲ ಓದಿಬಿಟ್ಟರೆ ಸಾಕೆ?  ಬರೆಯಬೇಕು. ಮನಸ್ಸಿನ ಭಾವನೆಗಳನ್ನು ಹೊರಹಾಕಲು ಬರಹವೊಂದು ಪ್ರಭಾವಿ ಮಾಧ್ಯಮವಾಗಿದೆ. ಪ್ರೇಮಿಗಳ ಪರಸ್ವರ ಉಭಯಕುಶಲೋಪರಿ  ವಿನಿಮಯಕ್ಕೆ  ಪತ್ರ ಬರಹ ಸಂಪರ್ಕ ಸೇತುವಾಗಿತ್ತು. ಭಾವನೆಗಳನ್ನು ತುಂಬಿ ಬರೆದಿದ್ದನ್ನು ಪ್ರೇಮಿಗಳಿಬ್ಬರಿಗೆ ಪರಸ್ವರ ಓದುವುದೇ ಒಂದು ಹಬ್ಬದ ಸಡಗರ. ಅಂಚೆಯವನ ಹಾದಿಯನ್ನೇ ಕಾಯುತ್ತಿದ್ದ ಕಾಲವೂ ಇತ್ತು. ತಂತ್ರಜ್ಞಾನ ಬೆಳೆದಂತೆ ಮೊಬೈಲ್ ಸಂಪರ್ಕ ಮಾಧ್ಯಮಗಳು ಇವೆಲ್ಲವುಗಳಿಂದಾಗಿ ಬರೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಮಾತಿಲ್ಲ…. ಕತೆಯಿಲ್ಲ… ಎಲ್ಲವೂ ಮೌನ ಸಂಭಾಷಣೆ  ಆನ್ಲೈನ್ ಮೂಲಕ !.

ನಮ್ಮ ಬದುಕು ಬವಣೆ ಎಲ್ಲವೂ ಬರಹಗಳಿಂದ ವ್ಯಕ್ತವಾಗಿ ಮುಂದೊಂದು ದಿನ ನಮ್ಮ ಬವಣೆಗೆ ಪರಿಹಾರ ಕೂಡ ಸಿಗುತ್ತದೆ. ಓದದೇ ಕಂಡಿತ ಬರೆಯಲು ಸಾಧ್ಯವಿಲ್ಲ. ಮೋಡ ಕಟ್ಟದೆ ಮಳೆಯಾದೀತೆ?. ನನಗೆ ಇನ್ನೂ ಸಹ ನೆನಪಿದೆ ಬಾಲ್ಯದಿಂದಲೂ ಸಹ ನನಗೆ ಬರವಣಿಗೆ ಎಂದರೆ ಎಲ್ಲಿಲ್ಲದ ಪ್ರೀತಿ. ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ದಿಂದ ಮಾಧ್ಯಮಿಕ ಶಾಲೆಯವರೆಗೆ ಓದಿದರೂ ಕೂಡ ಪ್ರಬಂಧ ಬರೆಯುವುದೆಂದರೆ ಏನೋ ಒಂದು ರೀತಿಯಲ್ಲಿ ಸಂಭ್ರಮ. ಗಾದೆಗಳ ವಿಸ್ತಾರಗಳು, ಅವುಗಳ ಬಗ್ಗೆ ಬರೆಯುವುದರ  ಮೂಲಕ ಪ್ರಥಮವಾಗಿ ಪ್ರಾರಂಭವಾದರೆ, ಇನ್ನು ನಂತರದ ದಿನಗಳಲ್ಲಿ ಸ್ವಲ್ಪ ಬಿಡುವು  ಸಿಕ್ಕಿತ್ತು. ಶಾಲಾದಿನಗಳಲ್ಲಿ ಪತ್ರ ಬರೆಯುವ ಸ್ಪರ್ಧೆ ಮಾಡುತ್ತಿದ್ದರು. ತಂದೆ-ತಾಯಿ, ಸ್ನೇಹಿತ, ಗುರುಗಳಿಗೆ ಹೀಗೆ ಎಲ್ಲರಿಗೂ ಪತ್ರ ಬರೆಯುವುದನ್ನು ಕಡ್ಡಾಯ ಮಾಡಿದ್ದರು.

ಬಾಲ್ಯದಲ್ಲಿ ನನ್ನ ಪ್ರೀತಿಯ ಗುರುಗಳಾದ ಹನುಮನಹಳ್ಳಿಯ ಅಣ್ಣಯ್ಯ ಮಾಸ್ಟರ್ ಅವರು ಕಾಪಿರೈಟಿಂಗ್ ಅನ್ನು ಅದೆಷ್ಟೋ ವರ್ಷ ದಿನಾಲೂ ಬರೆಸುತ್ತಿದ್ದರು.   ಅದರ ಫಲವಾಗಿ ನಾನು ಇವತ್ತಿಗೂ ಕೂಡ ಕನ್ನಡ, ಹಿಂದಿ, ಇಂಗ್ಲಿಷ್ ಈ ಮೂರು ಭಾಷೆಗಳನ್ನು ನಾಲ್ಕು ಜನ ಮೆಚ್ಚುವಂತೆ ಚೆನ್ನಾಗಿ ಬರೆಯುತ್ತೇನೆ. ಇದೊಂದು ಹೆಮ್ಮೆಯ ವಿಷಯ. ನನ್ನ ಬಾಲ್ಯ ದಾಟಿದ  ನಂತರ ರೇಡಿಯೋ ಕೇಳುವುದನ್ನು ರೂಡಿಸಿಕೊಂಡೆ. ಆಕಾಶವಾಣಿಗೆ ಪತ್ರ ಬರೆದು ನಮ್ಮ ಮೆಚ್ಚಿನ ಚಿತ್ರಗೀತೆಗಳನ್ನು ಕೇಳುವುದು, ಆಕಾಶವಾಣಿಯ  ಕಾರ್ಯಕ್ರಮಗಳ ಬಗ್ಗೆ ಚಿಕ್ಕದಾಗಿ ವಿಮರ್ಶೆ ಬರೆಯುವುದು.  ಇಲ್ಲಿಂದ ಆಕಾಶವಾಣಿಯ ನಂಟು ಬೆಳೆಯಿತು. ಇದರ ಫಲವಾಗಿ ಆಕಾಶವಾಣಿಯಲ್ಲಿ ನಮ್ಮ ಹೆಸರು ಬಂದರೆ ಸ್ವರ್ಗಕ್ಕೆ ಮೂರೇ ಗೇಣು!. ಪ್ರಾರಂಭದಲ್ಲಿ ನನ್ನ ಹೆಸರು ಬರಲಿ ಎಂದು ಬರೆದಿದ್ದೆ ಹೆಚ್ಚು!. ಇನ್ನು ಮುಂದುವರಿದಂತೆ ಪತ್ರಿಕೆಗಳಲ್ಲಿ ಹಲವು ಸ್ನೇಹಿತರ ಅಂಕಣಗಳು ಇದ್ದವು. ಅಲ್ಲಿ ವಿಳಾಸ ನೀಡುತ್ತಿದ್ದರು. ವಿಳಾಸಗಳಿಗೆ ಪರಸ್ಪರ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದುದು ನಡೆಯಿತು. ಇದು ಹೀಗೇ ಮುಂದುವರೆದು ಮುಂದೊಂದು ದಿನ ಪೋಸ್ಟ್ ಕಾರ್ಡ್ ನಲ್ಲಿ ಪತ್ರ ಬರೆಯುವುದು ಒಂದು ಕ್ರಾಂತಿಯಾಯಿತು!.

ಈಗಲೂ ಸಹ ಶಿವಮೊಗ್ಗ ಜಿಲ್ಲೆಯ ಬಿ.ಆರ್. ಪ್ರಾಜೆಕ್ಟ್ನಲ್ಲಿ ವಾಸವಾಗಿರುವ, ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು, ಈಗ ನಿವೃತ್ತಿಯಾಗಿರುವ  ಜೊತೆಗೆ  ಸಾಹಿತ್ಯದಲ್ಲಿ  ಅಪಾರ ಆಸಕ್ತಿ, ಒಲವು ಹೊಂದಿರುವ “ಹೊಸಹಳ್ಳಿ ದಾಳೇಗೌಡ” ರವರು ಸ್ನೇಹಿತರ ಪರಿಚಯ ಕೂಡ ನನಗೆ ಪತ್ರ ಬರೆದುದರಿಂದ ಸಿಕ್ಕಿತು. ಇವರು ಬಿ.ಆರ್. ಪ್ರಾಜೆಕ್ಟ್ ನಲ್ಲಿ ಪ್ರತಿ ವರ್ಷವೂ ರಾಜ್ಯ, ಅಂತರರಾಜ್ಯ ಮಟ್ಟದ ಪತ್ರ -ಮಿತ್ರ ಸ್ನೇಹಿತರ ಸಮ್ಮೇಳನ ಮಾಡುತ್ತಾರೆ. ಅಲ್ಲಿ ಬಡವ-ಬಲ್ಲಿದ, ಜಾತಿಗಳ  ಸೋಂಕಿಲ್ಲದೆ ನಾವೆಲ್ಲರೂ ಒಂದೇ. ಎಲ್ಲಾ ಸ್ನೇಹಿತರು ಒಟ್ಟಾಗಿ ಬೆರೆತು, ಕಲೆತು ಒಂದಷ್ಟು ಸಮಯವನ್ನು ನಮಗಾಗಿ ಮೀಸಲಿಟ್ಟು, ಕೆಲವು ಸ್ಪರ್ಧೆಗಳನ್ನು ಏರ್ಪಡಿಸಿ, ಪರಸ್ಪರ ಅಭಿಪ್ರಾಯಗಳನ್ನು ಹಂಚಿಕೊಂಡು, ಒಟ್ಟಾಗಿ ಊಟ ಮಾಡುವ ಖುಷಿ ಇದೆಯಲ್ಲ ಅದು ಎಷ್ಟು ದುಡ್ಡು ಕೊಟ್ಟರೂ ಸಿಗದು!!. ಹೊಸಹಳ್ಳಿ ದಾಳೇಗೌಡರು ಪ್ರತಿಯೊಬ್ಬ ಸ್ನೇಹಿತರಿಗೂ ಒಂದೊಂದು ಕಡತವನ್ನು (ಫೈಲ್) ಮಾಡಿಟ್ಟುಕೊಂಡಿರುತ್ತಾರೆ. ಪರಸ್ಪರ ಪತ್ರವ್ಯವಹಾರದ ಎಲ್ಲಾ ಪತ್ರಗಳು ಅದರಲ್ಲಿ ಸಂಗ್ರಹವಾಗಿರುತ್ತವೆ. ಇದೇ ರೀತಿ ಅಲ್ಲದೆ  ಪತ್ರ ಮಿತ್ರರಿಗೂ ಪ್ರತ್ಯೇಕವಾಗಿರುತ್ತದೆ. ಹೀಗೆ ಪತ್ರ ಮಿತ್ರ ಸ್ನೇಹಿತರೊಂದಿಗೆ ಬೆರೆಯುವುದು ಇದೆಯಲ್ಲ ಅದು ಕೂಡಾ ವಿಶಿಷ್ಟ ರೀತಿಯಲ್ಲಿ ನಮಗೆ ಮುದನೀಡುತ್ತದೆ. ಹೀಗೆ ಇದರಿಂದ ಸಿಗುವ ಸವಲತ್ತು ಒಂದೇ ಎರಡೇ?.

ಹೀಗೆ ಯೋಚಿಸುತ್ತಾ ಹೋದಂತೆ ಈ ಬರವಣಿಗೆ ಇಷ್ಟೆಲ್ಲಾ ಬದಲಾವಣೆಯನ್ನು ನಮ್ಮ ಜೀವನದಲ್ಲಿ ಮಾಡಿದೆಯಲ್ಲ ಎಂದೆನಿಸುತ್ತದೆ.  ಶಾಲಾ-ಕಾಲೇಜು ದಿನಗಳಲ್ಲಿ ಬರೆದಿದ್ದು ಆಯಿತು.  ಆದರೆ ನಂತರದಲ್ಲಿ ಇಂದಿನ ತಂತ್ರಜ್ಞಾನ ಯುಗದಲ್ಲಿ ಎಲ್ಲಾ ಮಾಯ ಮಾಯ ಮಾಯ!. ಮೊಬೈಲ್ ಲ್ಯಾಪ್ಟಾಪ್ ಇದರಲ್ಲೇ ಮುಳುಗಿಹೋಗಿದ್ದಾರೆ. ಇದರಿಂದಾಗಿ ಬರೆಯುವುದೇ ಮರೆತುಹೋಗಿದೆ. ಜೊತೆಗೆ ಬರೆಯುವುದಿರಲಿ, ಬರೆದಿದ್ದನ್ನು ಓದಲು ಕೂಡ ಸಮಯ ಸಿಗುತ್ತಿಲ್ಲ. ನಾನಂತೂ ಆಕಾಶವಾಣಿಗೆ, ಪತ್ರಿಕೆಗಳಿಗೆ ದಿನಾಲು ಸ್ವಲ್ಪ-ಸ್ವಲ್ಪ ಬರೆಯಲೇಬೇಕು ಇಲ್ಲದಿದ್ದರೆ ನನ್ನ ದಿನಚರಿ ಸಾಗದು!.

ದೊಡ್ಡ ದೊಡ್ಡ ಸಾಹಿತಿಗಳು ಅಂದು ತಾಳ್ಮೆಯಿಂದ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರೆಯದೆ ಇದ್ದರೆ ಉತ್ಕೃಷ್ಟ ಸಾಹಿತ್ಯ ಸಿಗುತ್ತಿರಲಿಲ್ಲ. ಇಂದಿನ ಯುವಜನತೆ ಮುಖ್ಯವಾಗಿ ಬರೆಯುವುದನ್ನು ಓದುವುದನ್ನು ಕಲಿಯಬೇಕು. ಪತ್ರಿಕೆಗಳಲ್ಲಿ ಹಲವು ಅಂಕಣಕಾರರು ನಿಯಮಿತವಾಗಿ ತಮ್ಮ ಬರಹಗಳನ್ನು ಬರೆದು ಓದುಗರಿಗೆ ತಲುಪಿಸುತ್ತಾರೆ. ನಂತರದಲ್ಲಿ ಅದು ಪುಸ್ತಕರೂಪದಲ್ಲಿ ಬಂದು ಮತ್ತಷ್ಟು ಓದುಗರನ್ನು ತಲುಪುತ್ತದೆ. ದಿನ, ವಾರ, ಮಾಸಪತ್ರಿಕೆಗಳಲ್ಲಿ ಹಲವರ ಬರಹಗಳು ಸೂಜಿಗಲ್ಲಿನಂತೆ  ಸೆಳೆಯುತ್ತವೆ.  ಇದರಿಂದಾಗಿ ಪತ್ರಿಕೆ ಬರುವ ಹಾದಿಯನ್ನು ಕಾಯುವ ಮಂದಿಯೇ ಹೆಚ್ಚು.

ನಾನು ಬರೆಯುತ್ತಲೇ ಇದ್ದೇನೆ. ಹೇಳಿಕೊಳ್ಳಲಾಗದ ಅನಿಸಿಕೆಗಳನ್ನು ಬರೆದಷ್ಟು ನನ್ನ ಮನಸ್ಸು ಹಗುರವಾಗುತ್ತದೆ. ಮತ್ತಷ್ಟು ಪ್ರಫುಲ್ಲಗೊಳ್ಳುತ್ತದೆ ಕೆಲಸ ಕಾರ್ಯಗಳನ್ನು ಮಾಡಲು ಸ್ಫೂರ್ತಿ ನೀಡುತ್ತದೆ.  ನನ್ನ ಮನಸ್ಸಿಗೆ ಏನಾದರೂ ನೋವಾದರೆ ನಾನು ಮೊದಲು ಮಾಡುವ ಕೆಲಸ ಬರವಣಿಗೆ. ಏನೆಂದರೆ ನನ್ನ ಅಂತರಂಗದಲ್ಲಿ ಅಡಗಿರುವ ಏನಾದರೊಂದು ಸಾಹಿತ್ಯವನ್ನು ಬರೆಯುವುದರ ಕಾಯಕದಲ್ಲಿ ತೊಡಗಿದರೆ ಮನಸ್ಸು ಹಗುರವಾಗುತ್ತದೆ. ನೋವು ಮಾಯವಾಗುತ್ತದೆ. ಮತ್ತೆ ಹೇಳುತ್ತೇನೆ ಆದುದರಿಂದ ನಾನು ಬರೆಯುತ್ತೇನೆ.

ಈಗ 2021 ನೇ ನೂತನ ವರ್ಷಕ್ಕೆ ಕಾಲಿಟ್ಟಿದ್ದೇವೆ. ಈ ವರ್ಷದಿಂದಾದರೂ ನಾವು ಬರೆಯುವುದನ್ನು ಮೈಗೂಡಿಸಿ ಕೊಳ್ಳೋಣ. ಮುಖ್ಯವಾಗಿ ನಮ್ಮ ಮಕ್ಕಳಿಗೆ ಓದುವುದರ ಜೊತೆಗೆ ಬರೆಯುವುದನ್ನು ಕಲಿಸೋಣ. ಹೆಚ್ಚೆಚ್ಚು ಬರೆದಷ್ಟು ಮಕ್ಕಳ ಮನಸ್ಸಿನಲ್ಲಿ ದೀರ್ಘಕಾಲದವರೆಗೆ ನೆಲೆ ನಿಲ್ಲುತ್ತದೆ. ಒಂದು ಬಾರಿ ಬರೆಯುವುದು ಒಂದೇ, ಹತ್ತು ಬಾರಿ ಓದುವುದು ಒಂದೇ!. ಇದು ಅನುಭವದ ಮಾತು. ಹೊಸವರ್ಷದ ನಿಮ್ಮ ಸಂಕಲ್ಪಗಳ ಪಟ್ಟಿಯಲ್ಲಿ ಬರೆಯುವುದು ಸಹ ಸೇರಿರಲಿ. ಇನ್ನೇಕ ತಡ? ಇವತ್ತಿನಿಂದಲೇ ಬರೆಯಿರಿ. ಅದರಲ್ಲೂ ದಿನಾನು (ಡೈರಿ) ದಿನಚರಿ ಬರೆಯುವುದನ್ನು ರೂಢಿಸಿಕೊಳ್ಳಬೇಕು. ನಂತರದಲ್ಲಿ ಸಮಯ ಸಿಕ್ಕಾಗ ಅದನ್ನು ಓದುವುದೇ ಒಂದು ರೀತಿಯಲ್ಲಿ ಖುಷಿ. ನೆನಪಿನ ಚಿತ್ತಾರ ಮುಗಿಸಿಬಿಡುತ್ತದೆ!. ಬರೆಯುವುದನ್ನು ಎಲ್ಲರಿಗೂ ಕಲಿಸಿರಿ. ಏನಂತೀರಿ?.

-ಕಾಳಿಹುಂಡಿ ಶಿವಕುಮಾರ್, ಮೈಸೂರು. 

7 Responses

  1. ನಯನ ಬಜಕೂಡ್ಲು says:

    ನೆನಪೆoಬ ಕೊಳವನ್ನು ಕಲಕಿತು ಸರ್ ನಿಮ್ಮ ಬರಹ, ಈಗ ಮನದ ತೀರಕ್ಕೆ ಅಲೆ ಅಲೆಯಾಗಿ ಅಪ್ಪಳಿಸುವ ಸುಮಧುರ ದಿನಗಳ ನೆನಪಿನ ಅಲೆಗಳು. ಬರಹ ಮನಸಿನಲ್ಲಿರುವದನ್ನೆಲ್ಲ ಹೊರ ಹಾಕಿ ಮನಸ್ಸನ್ನು ತಿಳಿಯಾಗಿಸುವಲ್ಲೂ ಸಹಕಾರಿ.

  2. Anonymous says:

    ಬರವಣಿಗೆಯ ಹವ್ಯಾಸ ಹೇಗೆ ನಮ್ಮ ಮನಸ್ಸಿಗೆ ಮುದ ಕೊಡುತ್ತಾ ಹೋಗುತ್ತದೆ ಅದರಿಂದ ನಾವು ಗಳಿಸುವ ಸ್ನೇಹವಲಯ ಇವೆಲ್ಲ ವನ್ನು ತಮ್ಮ ಅನುಭವದ ಮೂಲಕವೇ ಪಡಿಮೂಡಿಸಿರುವ ಲೇಖನ ಚೆನ್ನಾಗಿದೆ.ಹಾಗೇ ಬರವಣಿಗೆ ಮುಂದಿನ ಜನಾಂಗಕ್ಕೆ ಕೊಂಡೊಯ್ಯುವ ಆಶಯ ಮೆಚ್ಚತಕ್ಕದ್ದು.ಅಭಿನಂದನೆಗಳು ಸಾರ್.

  3. Anonymous says:

    ಒಳ್ಳೆಯ ವಿಚಾರ ಚೆನ್ನಾಗಿದೆ

  4. Anonymous says:

    ಸುರವನ್ನೇ ತುಂಬಾ ಅದ್ಭುತವಾಗಿದೆ
    ನಿಮ್ಮ ಬರವಣಿಗೆ ಬದುಕು ಬಂಗಾರವಾಗಲಿ

    ಶ್ರೀಮತಿ ಭಾಗ್ಯ ಕೆ ಶೆಟ್ಟಿ

  5. ನಾವೇಕೆ ಬರೆಯಬೇಕು!? ಅನ್ನೋದನ್ನ ಸರಳವಾಗಿ, ಸಹಜವಾಗಿ ನಿಮ್ಮ ಬರಹದ ಮೂಲಕ ವ್ಯಕ್ತಪಡಿಸಿದ ಪ್ರಯತ್ನ ಚೆನ್ನಾಗಿದೆ, ಅಭಿನಂದನೆಗಳು ನಿಮಗೆ ಮುಂದಿನ ದಿನಗಳಲ್ಲಿ ನಿಮ್ಮಿಂದ ಇನ್ನೂ ಹೆಚ್ಚಿನ ಬರಹಗಳು ಹೊರಬರಲಿ, ಶುಭವಾಗಲಿ..

  6. ಶಂಕರಿ ಶರ್ಮ says:

    ಹೌದು..ಬರೆಯುವುದನ್ನು ಹವ್ಯಾಸವಾಗಿಸಿಕೊಂಡರೆ ನಮ್ಮ ಅತ್ಮೀಯ ವಲಯ ವಿಶಾಲವಾಗುವುದು ನಿಜ. ಆರಂಭಿಕ ಬರಹಗಾರರಿಗೆ, ಮೊತ್ತ ಮೊದಲ ಬಾರಿಗೆ ಪ್ರಕಟವಾಗುವ ಅವರ ಲೇಖನ/ಕವನಗಳು ಕೊಡುವ ಆನಂದ ಅಪರಿಮಿತ. ಎಲ್ಲರ ಮನಗಳ ಭಾವನೆಗಳನ್ನು ಕ್ರೋಢೀಕರಿಸಿ ಬಂದಿದೆ ತಮ್ಮ ಸೊಗಸಾದ ಲೇಖನ…ಧನ್ಯವಾದಗಳು.

  7. Dharmanna dhanni says:

    ಅರ್ಥಪೂರ್ಣವಾದ ಬರಹ.ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: