ಅತಿಯಾದರೆ….?!
ಹೌದು, ‘ಅತಿಯಾದರೆ ಅಮೃತವೂ ವಿಷವಾಗುವುದು’.. ಇದು ಬಹಳ ಅರ್ಥವತ್ತಾದ ಗಾದೆಗಳಲ್ಲೊಂದು. ಜನರು ಸಹಜವಾಗಿಯೇ ಅವರವರ ಆರೋಗ್ಯ, ಬಾಹ್ಯನೋಟ, ನಡೆನುಡಿಗಳನ್ನು ಉತ್ತಮವಾಗಿರಿಸಿಕೊಳ್ಳಲು ಪ್ರಯತ್ನಿಸುವರು. ಅದರಲ್ಲಿ, ಈಗಿನ ಪರಿಸ್ಥಿತಿಯಲ್ಲಿ ಉಳಿದುದೆಲ್ಲವೂ ನಗಣ್ಯವಾಗಿ, ಬರೀ ಆರೋಗ್ಯದ ಕಡೆಗೆ ಎಲ್ಲರ ಗಮನ ಹರಿದಿರುವುದು ನಿಜ ತಾನೇ?
ಈ ಮಹಾಮಾರಿ ಎಲ್ಲರ ತಲೆಯನ್ನು ಹಾಳುಮಾಡಿರುವುದಾಗಿ ನನ್ನೆಣಿಕೆ. ಶರೀರದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಯುರ್ವೇದ ಗಿಡಮೂಲಿಕೆಗಳ ಬಗ್ಗೆ ಬಹಳಷ್ಟು ಜಾಹೀರಾತುಗಳು ಟಿ.ವಿ. ಮತ್ತು ಪತ್ರಿಕೆಗಳಲ್ಲಿ ಬರುವುದನ್ನು ಕಾಣಬಹುದು. ಜೊತೆಗೆ ಬಂಧುಮಿತ್ರರು, ನೆರೆಹೊರೆಯವರು, ಹೀಗೆ ಎಲ್ಲರೂ ಬಹಳ ಕಾಳಜಿಯಿಂದ ಇದಕ್ಕಾಗಿ ಮಾಹಿತಿಗಳನ್ನು ಒಟ್ಟುಗೂಡಿಸಿ ತಮ್ಮ ಮೇಲೆ ಪ್ರಯೋಗಿಸುವುದೂ ಅಲ್ಲದೆ ಇತರರಿಗೂ ಉಚಿತ ಸಲಹೆಗಳನ್ನು ನೀಡುತ್ತಿರುತ್ತಾರೆ. ಇದರಿಂದ, ನನ್ನಂತಹ ಎಡೆಬಿಡಂಗಿಗಳಿಗೆ ಯಾವುದು ಮಾಡುವುದು, ಯಾವುದು ಬಿಡುವುದೆಂದು ತಿಳಿಯಲಾರದೆ, ಕೊನೆಗೆ ಎಲ್ಲವನ್ನೂ ಪ್ರಯೋಗ ಮಾಡುತ್ತಿರುವುದಂತೂ ನಿಜ. ಆದರೆ ಇದರಿಂದಾಗುವ ಅಡ್ಡ ಪರಿಣಾಮಗಳ ಬಗೆಗೆ ಯೋಚಿಸುವುದೇ ಇಲ್ಲ..ಯಾಕೆಂದರೆ ಆಯುರ್ವೇದ ಗಿಡ ಮೂಲಿಕೆಗಳ ಕಷಾಯಗಳಿಂದ ಅಂತಹದೇನೂ ಅಡ್ಡ ಪರಿಣಾಮಗಳಿಲ್ಲವೆಂಬ ತಪ್ಪು ಕಲ್ಪನೆ. ಇಲ್ಲಿದೆ ನೋಡಿ ಕೆಲವು ಘಟನೆಗಳು.. ಇಲ್ಲಿ ಬರುವ ಹೆಸರುಗಳೆಲ್ಲ ಕೇವಲ ಕಾಲ್ಪನಿಕ.
ನಮ್ಮತ್ತಿಗೆ ಸೀತಾ ಒಂದು ದಿನ ಮೈಕೈ ಎಲ್ಲಾ ನೋಯುತ್ತಾ ಇದೆ ಎಂದಳು. ಮತ್ತೆರಡು ದಿನಗಳಲ್ಲಿ ಸಣ್ಣಗೆ ಜ್ವರ ಬರಲು ಪ್ರಾರಂಭವಾಯಿತು. ಎಡ ಕಾಲಿನಲ್ಲಿ ಕೆಂಪಗೆ ಕಾಣಿಸಿಕೊಂಡ ಗುಳ್ಳೆ ಮತ್ತೆರಡು ದಿನಗಳಲ್ಲಿ ಅಲ್ಲೇ ಮುಂದಕ್ಕೆ ಹರಡತೊಡಗಿತ್ತು. ನೋವು ಸಹಿಸಲಾರದೆ ವೈದ್ಯರಲ್ಲಿ ಹೋದಾಗ, ಶರೀರದೊಳಗಿನ ಉಷ್ಣದಿಂದಾಗಿ ಈ ಗುಳ್ಳೆಗಳುಂಟಾದ ಬಗ್ಗೆ ತಿಳಿಯಿತು. ನನ್ನೊಡನೆ ಅವಳು ಮಾತನಾಡಿದಾಗ ತಿಳಿದ ವಿಷಯವೇನೆಂದರೆ; ಶರೀರದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು, ಮಾರುದ್ದದ ಅಮೃತಬಳ್ಳಿಯ ಜೊತೆಗೆ ಇನ್ನೂ ಕೆಲವು ಔಷಧೀಯ ವಸ್ತುಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ, ಕುಂದಿಸಿ ಮಾಡಿದ ಕಷಾಯವನ್ನು ದಿನವಿಡೀ ಕುಡಿಯುತ್ತಿದ್ದಳಂತೆ. ಸಾಮಾನ್ಯವಾಗಿ ಇಂತಹ ಮನೆಮದ್ದುಗಳನ್ನು ಮಾಡುವಾಗ ವೈದ್ಯರ ಸಲಹೆ ತೆಗೆದುಕೊಳ್ಳುವುದು ತೀರಾ ಅಪರೂಪ.. ಇಲ್ಲಿಯೂ ಹಾಗೆಯೇ ಆಯ್ತು. ಅಮೃತಬಳ್ಳಿಯು ತುಂಬಾ ಉಷ್ಣ ಗುಣವುಳ್ಳದ್ದಾಗಿರುವುದರಿಂದ, ಕೇವಲ ಅರ್ಧ ಇಂಚಿನಷ್ಟು ಮಾತ್ರ ಉಪಯೋಗಿಸಬೇಕಿತ್ತು. ಅವರ ಹಿತ್ತಿಲಲ್ಲಿಯೇ ಸಾಕಷ್ಟು ಲಭ್ಯವಿದ್ದ ಅಮೃತಬಳ್ಳಿಯನ್ನು ಬಹಳ ಜಾಸ್ತಿ ಉಪಯೋಗಿಸಿದ ಕಾರಣ ಈ ಸಮಸ್ಯೆ ಎದುರಿಸಬೇಕಾಯಿತು. ಇಂತಹುದೇ ರೀತಿಯಲ್ಲಿ, ನನಗೂ ಶರೀರದಲ್ಲಿ ಉಷ್ಣ ನೋವು ಕಾಣಿಸಿಕೊಂಡುದು ಅಮೃತಬಳ್ಳಿಯ ಹೆಚ್ಚಿನ ಸೇವನೆಯಿಂದ ಎಂಬುದು ತಿಳಿದ ತಕ್ಷಣ ಅದರ ಸೇವನೆಯನ್ನು ನಿಲ್ಲಿಸಿಬಿಟ್ಟುದರಿಂದ ಹೆಚ್ಚೇನೂ ತೊಂದರೆಯಾಗಲಿಲ್ಲ..ದೇವರದಯದಿಂದ! ಹಾಗೆಯೇ, ನೆಲನೆಲ್ಲಿ, ಶುಂಠಿ, ಜೀರಿಗೆ, ಕಾಳುಮೆಣಸು, ತುಳಸಿ ಇತ್ಯಾದಿ ಕಷಾಯಗಳ ಸೇವನೆ ನಿರಂತರವಾಗಿ ನಡೆಯುತ್ತಿದ್ದುದು, ಈಗ ಬಹಳ ಜಾಗರೂಕತೆಯಿಂದ ಮಾಡುವಂತಾಗಿದೆ.
ಸದ್ಯಕ್ಕಂತೂ ಎಲ್ಲೂ ಹೊರಗಡೆ ಹೋಗುವ ಹಾಗಿಲ್ಲದ್ದರಿಂದ ಅಂತರ್ಜಾಲದಲ್ಲಿ ಹುಡುಕಿ ಏನಾದರೂ ಮಾಡುವ ಹಪಾಹಪಿ. ಹಾಗೆಯೇ ಒಮ್ಮೆ ಟೂತ್ ಪೇಷ್ಟಿಗಿಂತ ಹಲ್ಲುಪುಡಿ ಒಳ್ಳೆಯದೆಂದು; ಅಂತರ್ಜಾಲದಲ್ಲಿ ಸಿಕ್ಕಿದ ಮಾಹಿತಿಯಂತೆ ಹಲ್ಲುಪುಡಿ ತಯಾರಾಯಿತು. ನನಗಂತೂ ಬಹಳ ಸಂಭ್ರಮ, ಯಾಕಂತೀರಿ..? ವಜ್ರದಂತಿಗಳಾಗಲು, ಟಿ. ವಿ.ಯಲ್ಲಿ ಬರುವ ಜಾಹೀರಾತಿನಂತೆ, ‘ನಿಮ್ಮ ಟೂತ್ ಪೇಷ್ಟಿನಲ್ಲಿ ಉಪ್ಪಿದೆಯಾ?..ಲವಂಗ ಇದೆಯಾ?.. ಕಹಿಬೇವು ಇದೆಯಾ..??’ ಎಂದರೆ ನಾನು ತಯಾರಿಸಿದ ಹಲ್ಲುಪುಡಿಯಲ್ಲಿ ಇವೆಲ್ಲವೂ ಇದ್ದುವು! ಸರಿ.. ಕಹಿ ಕಹಿಯಾಗಿದ್ದರೂ ಆರೋಗ್ಯಕ್ಕೆ ಕಹಿಬೇವು ಒಳ್ಳೆಯದೆಂದು ದಿನಾ ಅದರಲ್ಲೇ ಹಲ್ಲುಜ್ಜಿ, ನಮ್ಮವರಿಗೂ ಅದನ್ನೇ ಉಪಯೋಗಿಸಲು ಪ್ರೋತ್ಸಾಹಿಸಿ ಹೆಮ್ಮೆಯಲ್ಲಿ ಬೀಗಿದೆ. ಒಂದೆರಡು ತಿಂಗಳುಗಳಲ್ಲಿ ನಾಲಿಗೆಯಲ್ಲಿ ಏನೋ ಬದಲಾವಣೆಯಾದಂತೆ ಅನ್ನಿಸಿತು.. ಜೊತೆಗೆ ಸ್ವಲ್ಪ ನೋವು ಕಾಣಿಸಿಕೊಂಡಿತು. ಕನ್ನಡಿಯಲ್ಲಿ ನೋಡಿದಾಗ ನನಗೇ ಗಾಬರಿಯಾಯಿತು. ನಾಲಿಗೆ ಬಿರುಕು ಬಿಟ್ಟು ಅಲ್ಲಲ್ಲಿ ಕಪ್ಪಗಾಗಿತ್ತು. ಯಾಕೆ ಹೀಗಾಯ್ತೆಂದು ಎಷ್ಟು ತಲೆ ಕೆರಕೊಂಡರೂ ಗೊತ್ತಾಗಲಿಲ್ಲ. ಫಕ್ಕನೆ ಹಲ್ಲುಪುಡಿ ನೆನಪಾಯಿತು. ಅದರ ಮೇಲೆ ಸಂಶಯ ಬಂದು ಅದನ್ನು ಬಿಟ್ಟುಬಿಟ್ಟ ಮೇಲೆ ಎಲ್ಲಾ ಸರಿಯಾಯಿತು,ಈಗ ನೆಮ್ಮದಿಯಾಗಿರುವೆ. ಕೆಟ್ಟ ಮೇಲೆ ಬುದ್ಧಿಬಂತು ಎನ್ನೋಣವೇ!?
ಇನ್ನು, ನನ್ನದೇ ಇನ್ನೊಂದು ಅನುಭವವನ್ನು ಕೇಳಿ. ಸಾಮಾನ್ಯವಾಗಿ ಎಲ್ಲಾ ವೈದ್ಯರೂ, ಸ್ತ್ರೀಯರಿಗೆ ಮೂವತ್ತೈದು ವರ್ಷ ವಯಸ್ಸಿನ ಬಳಿಕ, ಎಲುಬನ್ನು ಬಲಗೊಳಿಸಲು ದಿನಾಲೂ ಒಂದೊಂದು ಕ್ಯಾಲ್ಸಿಯಂ ಸೇವಿಸಲು ಸೂಚಿಸುತ್ತಾರೆ. ಹಾಗೆಯೇ ನಾನೂ ವರ್ಷಗಟ್ಟಲೆ ತೆಗೆದುಕೊಳ್ಳುತ್ತಾ ಇದ್ದೆ. ಆದರೆ ಕೆಲವು ವರ್ಷಗಳ ಹಿಂದೆ, ನನ್ನ ಎರಡೂ ಮೊಣಕಾಲಿನ ಗಂಟುಗಳಲ್ಲಿ ವಿಪರೀತ ನೋವು ಕಾಣಿಸಿಕೊಂಡಿತು. ಆಯುರ್ವೇದ ಪ್ರಿಯಳಾದ ನಾನು ವೈದ್ಯರಲ್ಲಿ ಹೋಗಿ, ಅವರು ಕೊಟ್ಟ ಎಣ್ಣೆಯನ್ನು ಹಚ್ಚಿ, ಕಹಿ ಕಷಾಯವನ್ನು ಕುಡಿಯುತ್ತಾ ಒಂದು ವರುಷ ಕಳೆದರೂ, ಸ್ವಲ್ಪವೂ ಕಡಿಮೆಯಾಗಲಿಲ್ಲ. ಅಲೋಪತಿ ಮಾತ್ರೆಗಳನ್ನು ನುಂಗಲು ಇಷ್ಟಪಡದ ನಾನು, ಇನ್ನೊಂದು ಪ್ರಯತ್ನವೆಂದು, ಹೋಮಿಯೋಪತಿ ಮಾತ್ರೆಗಳನ್ನು ನುಂಗತೊಡಗಿದೆ. ಊಹೂಂ.. ಪ್ರಯೋಜನವೇನೂ ಕಾಣಲಿಲ್ಲ; ಬದಲಿಗೆ ಮೊಣಕಾಲುಗಳು ಕೆಂಪಗೆ ಊದಿಕೊಳ್ಳಲಾರಂಭಿಸಿದುವು. ಆಮೇಲೇನು.. ನನಗೆ ಇಷ್ಟವಿಲ್ಲದಿದ್ದರೂ, ಎಲುಬು ತಜ್ಞರನ್ನು ಭೇಟಿಯಾಗಲೇ ಬೇಕಾಯಿತು. ಅವರ ನಿರ್ದೇಶನದಂತೆ ಪ್ರಯೋಗಾಲಗಳಲ್ಲಿ ಹಲವಾರು ಪರೀಕ್ಷೆಗಳನ್ನು ಮಾಡಿಸಿ, ಅವುಗಳ ವರದಿಗಳನ್ನು ಕೈತುಂಬಾ ತಂದು ಅವರಿಗೆ ಒಪ್ಪಿಸಿದಾಗ, ಅದನ್ನು ಪರಿಶೀಲಿಸಿ ತಣ್ಣನೆ ನನ್ನೊಡನೆ, “ ನಿಮಗೆ ಏನೊಂದು ತೊಂದರೆಯೂ ಇಲ್ಲ. ನಿಜ ಹೇಳಬೇಕೆಂದರೆ ನಿಮಗೆ ನೋವೇ ಇಲ್ಲ.. ಅದನ್ನು ಮರೆತುಬಿಡಿ!” ಎಂದರು. ನೋವು ತಿನ್ನುವ ನಾನು ಅದನ್ನು ಮರೆಯುವುದಾದರೂ ಹೇಗೆಂದು ಅವರಿಗೆ ಮನದಟ್ಟು ಮಾಡಲು ಪ್ರಯತ್ನಿಸಿ, ಕೊನೆಗೆ ಸೋಲನ್ನು ಒಪ್ಪಿಕೊಳ್ಳಬೇಕಾಯಿತು. ಆದರೂ ಮನದ ಮೂಲೆಯಲ್ಲಿ ಒಂದು ನೆಮ್ಮದಿ.. ತೊಂದರೆಯೇನೂ ಇಲ್ಲವಲ್ಲ ಎಂದು. ಏತನ್ಮಧ್ಯೆ ನನ್ನ ಕ್ಯಾಲ್ಸಿಯಂ ಸೇವನೆ ವೈದ್ಯರ ಸಲಹೆಯಂತೆ ಎಂದಿನಂತೆ ಮುಂದುವರೆಯಿತು.
ಇದೇ ಸಮಯಕ್ಕೆ, ಅಮೇರಿಕದಲ್ಲಿರುವ ಮಗಳಲ್ಲಿಗೆ ಹೋಗುವ ದಿನ ನಿಗದಿಯಾಯಿತು. ಆದರೆ, ನೋವಿನ ಕಾಲನ್ನು ನಿಭಾಯಿಸುವುದರ ಬಗ್ಗೆಯೇ ಚಿಂತೆ. ಆದರೆ, ಹೋಗುವಾಗ ಜೊತೆಗೆ ಕ್ಯಾಲ್ಸಿಯಂ ಪೊಟ್ಟಣವನ್ನು ಜೊತೆಗೊಯ್ಯಲು ಮರೆತುಹೋಗಿತ್ತು. ಅಲ್ಲಿ ಸಮಯವಿದ್ದಾಗಲೆಲ್ಲಾ, ಸಮತಟ್ಟಾದ ಕಾಲುದಾರಿಯಲ್ಲಿ ಗಂಟೆಗಟ್ಟಲೆ ನನ್ನ ನಡಿಗೆ ಬಹಳ ಅನುಕೂಲಕರವಾಗಿ ಸಾಗಿತ್ತು. ಮೂರು ತಿಂಗಳು ಕಳೆದು ಒಮ್ಮೆ ನಾವೆಲ್ಲರೂ ಚಾರಣ ಹೊರಟಾಗ, ಏರು ದಾರಿಯಲ್ಲಿ ಕಷ್ಟವಾಗಬಹುದೆಂದು ಮೆಲ್ಲನೆ ವರಾತ ತೆಗೆದೆ. ಎಲ್ಲರೂ ನನ್ನ ಮನವೊಲಿಸಿ ಜೊತೆಗೆ ಹೋದ ಬಳಿಕ, ಸುಮ್ಮನೆ ಕೂತಿರುವ ಬದಲು ಸ್ವಲ್ಪ ನಡೆಯೋಣವೆಂದುಕೊಂಡು ಅಲ್ಲಿಯ ಎತ್ತರದ ದಿಬ್ಬ ಏರಲು ತೊಡಗಿದರೆ, ಹಾಂ..ಏನಿದು ಆಶ್ಚರ್ಯ..ನನಗೆ ಗೊತ್ತಿಲ್ಲದೆಯೇ ನೋವು ಮಾಯವಾಗಿದೆ! ಖುಷಿಯಲ್ಲಿ ಕುಣಿದಾಡುವಂತಾಯಿತು.
ನಮ್ಮೂರಿಗೆ ಹಿಂತಿರುಗಿದ ಬಳಿಕ ಕ್ಯಾಲ್ಸಿಯಂ ಸೇವಿಸುವ ಬಗ್ಗೆ ಗಮನಿಸಲಾಗಲಿಲ್ಲ.. ನೋವು ಮತ್ತೆ ಮರುಕಳಿಸಲಿಲ್ಲ. ಆದರೆ ನೋವು ನಿವಾರಣೆಯಾಗಲು ಕಾರಣವನ್ನು ತಿಳಿಯುವ ಕುತೂಹಲ ಇನ್ನೂ ಹಾಗೆಯೇ ಇತ್ತು. ನಮ್ಮ ಪರಿಚಯದ ವೈದ್ಯರಲ್ಲಿ ಇದರ ಬಗ್ಗೆ ವಿಚಾರಿಸಿದಾಗ ಅವರ ಉತ್ತರ ಬಹಳ ಕುತೂಹಲಕಾರಿಯಾಗಿತ್ತು. ನಾನು ದಿನಾಲೂ ನುಂಗುತ್ತಿದ್ದ ಕ್ಯಾಲ್ಸಿಯಂ ನಿಜವಾಗಿಯೂ ನನ್ನ ದೇಹಕ್ಕೆ ಅಗತ್ಯವೇ ಇರಲಿಲ್ಲ. ಆದ್ದರಿಂದ, ಹೊಟ್ಟೆ ಸೇರಿದ ಹೆಚ್ಚಿನ ಕ್ಯಾಲ್ಸಿಯಂ ಅಂಶವು ಮೊಣಕಾಲ ಸಂದುಗಳಲ್ಲಿ ಸೇರಿಕೊಂಡು ತೊಂದರೆ ಕೊಡುತ್ತಿತ್ತು; ಅದಕ್ಕಾಗಿಯೇ ಅದು ಪರೀಕ್ಷೆಗೂ ಸಿಕ್ಕಿರಲಿಲ್ಲ! ಅಮೇರಿಕದಲ್ಲಿ ಮೈಲುಗಟ್ಟಲೆಯ ನನ್ನ ನಡಿಗೆ ಹಾಗೂ ಕ್ಯಾಲ್ಸಿಯಂ ಸೇವನೆ ನಿಲ್ಲಿಸಿದ್ದರಿಂದ, ಮೊಣಕಾಲ ಗಂಟುಗಳಲ್ಲಿ ಶೇಖರಿಸಿದ್ದ ಕ್ಯಾಲ್ಸಿಯಂ ಅಂಶವು ಸಮನಾಗಿ ಪಸರಿಸಿ ನೋವು ನಿವಾರಣೆಯಾಗಿತ್ತು! ನನಗಂತೂ ಈ ಹೊಸ ವಿಷಯ ತಿಳಿದು ವಿಪರೀತ ಆಶ್ಚರ್ಯ!
ಇನ್ನು ನನ್ನ ಗೆಳತಿ ಲಲಿತಳ ವಿಷಯ ಕೇಳಿ.. ಸ್ವಾತಿಮಳೆ ನೀರು ಕಣ್ಣಿಗೆ ಆಗಾಗ ಹಾಕುತ್ತಾ ಇದ್ದರೆ ಒಳ್ಳೆಯದು ಹಾಗೂ ಕಣ್ಣು, ಕಿವಿಯ ಸಣ್ಣಪುಟ್ಟ ನೋವುಗಳಿಗೂ ಒಳ್ಳೆಯ ಫಲ ಕೊಡುವುದರ ಬಗ್ಗೆ ತಿಳಿಸಿದ್ದೆ. ದಿನಾ ಕಣ್ಣಿಗೆ ಎರಡು ಬಿಂದು ಸ್ವಾತಿ ನೀರು ಹಾಕುವಂತೆ ಕಿವಿಗೂ ಹಾಕತೊಡಗಿದಳು, ಲಲಿತ. ಸರಿ.. ಅವಳ ಕಣ್ಣೇನೋ ತಂಪಾಗಿರತೊಡಗಿತೆನ್ನಿ..ಆದರೆ ಒಂದೆರಡು ತಿಂಗಳಿನಲ್ಲಿ ಎರಡೂ ಕಿವಿಗಳು ನೋಯಲು ಪ್ರಾರಂಭಿಸಿ, ಶ್ರವಣ ಶಕ್ತಿಯೂ ಕಡಿಮೆಯಾದಾಗ ಸ್ವಾತಿ ನೀರನ್ನು ಇನ್ನೂ ಹೆಚ್ಚು ಹೆಚ್ಚು ಹಾಕಲು ಪ್ರಾರಂಭಿಸಿದಳು. ಆದರೂ ಏನೂ ಪ್ರಯೋಜನವಾಗದೆ ನೋವು ಇನ್ನೂ ಜಾಸ್ತಿಯಾಗತೊಡಗಿತು. ಕೊನೆಗೂ ಡಾಕ್ಟರ್ ಭೇಟಿ ತಪ್ಪಲಿಲ್ಲ. ಅವರು ಎರಡೂ ಕಿವಿಗಳಲ್ಲಿ ತುಂಬಿದ್ದ ಮಯಣವನ್ನು ತೆಗೆದು ಕಿವಿಗಳಿಗೆ ನೀರು ಹೋಗದಂತೆ ಜಾಗ್ರತೆ ವಹಿಸಲು ಸಲಹೆ ಕೊಟ್ಟರು. ಇದೇ ನೋಡಿ, ಸರಿಯಾಗಿ ವಿವೇಚಿಸದೆ, ವಿಮರ್ಶಿಸದೆ ಕಿವಿಗೆ ನೀರು ಹಾಕಿದ್ದರ ಪ್ರತಿಫಲ! ಈಗ ಅವಳ ಕಿವಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿರುವುದಾಗಿ ಹೇಳಿದಳು!
ಇನ್ನು ನಮ್ಮ ತೀರಾ ಹತ್ತಿರದ ಬಳಗದ ಗೋವಿಂದಣ್ಣನ ಪಾಡಂತೂ ದೇವರಿಗೇ ಪ್ರೀತಿ. ಈಗ ಟಿ.ವಿಯಲ್ಲಿ ಇಡೀ ದಿನ ಬರುವ ಜಾಹೀರಾತು, “ಚ್ಯವನಪ್ರಾಶವು ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಯಾವ ರೋಗವೂ ಬಾರದಂತೆ ನಿಮ್ಮನ್ನು ರಕ್ಷಿಸುತ್ತದೆ!” ಇದನ್ನು ನೋಡಿ.. ನೋಡಿ, ಗೋವಿಂದಣ್ಣನು ವಾರಕ್ಕೆರಡು ಸಲ ಸೇವಿಸುತ್ತಿದ್ದ ಚ್ಯವನಪ್ರಾಶವನ್ನು ದಿನನಿತ್ಯ ತೆಗೆದುಕೊಳ್ಳಲು ಪ್ರಾರಂಭಿಸಿದ. ತಿಂಗಳಾಗುವುದರೊಳಗೆ ಅವನ ಎಡ ಕಣ್ಣಿನ ರೆಪ್ಪೆಯ ಮೇಲೆ ಕಾಣಿಸಿಕೊಂಡವು.. ದಪ್ಪನೆಯ ಗುಳ್ಳೆಗಳು. ಅಗತ್ಯಕ್ಕಿಂತ ಹೆಚ್ಚು ತೆಗೆದುಕೊಂಡ ಚ್ಯವನಪ್ರಾಶವು ದೇಹದ ಉಷ್ಣ ಗುಣವನ್ನು ಹೆಚ್ಚಿಸಿ ಕಣ್ಣಿನ ರೆಪ್ಪೆಯಲ್ಲಿ ಕಾಣಿಸಿಕೊಡಿತ್ತು.. ಗುಳ್ಳೆಯ ರೂಪದಲ್ಲಿ. ಈ ದಿನಗಳಲ್ಲಿ ವೈದ್ಯರಲ್ಲಿಗೆ ಹೋಗಲೂ ಭಯ ತಾನೇ? ತಿಂಗಳ ಕಾಲ ಒಕ್ಕಣ್ಣನಾಗಿ ಓಡಾಡಿದ ಪಾಪ. ಅಂತೂ ಮನೆ ಔಷಧಿಯಲ್ಲಿ ಗುಣವಾಯಿತೆನ್ನಿ!
ಸ್ವಯಂವೈದ್ಯನಾಗುವುದು ಬಹಳ ತಪ್ಪು. ಹಾಗೆಯೇ, ವೈದ್ಯರ ಸಲಹೆ ಇಲ್ಲದೆ, ಆರೋಗ್ಯಕ್ಕೆ ಒಳ್ಳೆಯದೆಂದು ಮಾಡುವ ಸೇವನೆಯು ಅತಿಯಾದಲ್ಲಿ ಹೀಗೆಲ್ಲಾ ಗತಿಯಾಗಬಹುದೆಂದು ತಿಳಿದುಕೊಂಡರೆ ವಾಸಿಯಲ್ಲವೇ?
-ಶಂಕರಿ ಶರ್ಮ, ಪುತ್ತೂರು.
reality. i too suffered from heat by taking more of things mentioned by you.
ಸೊಗಸಾದ, ಹಾಸ್ಯ ಮಿಶ್ರಿತ, ಬರಹ. ಬಹಳ ಉತ್ತಮ ಮಾಹಿತಿಗಳಿಂದ ಕೂಡಿದೆ.
ಓದಿ ಮೆಚ್ಚುಗೆ ಸೂಸಿದ ಸುಧಾ ಮೇಡಂ, ನಯನ ಮೇಡಂ.. ನಿಮಗೆ ಹೃತ್ಪೂರ್ವಕ ಧನ್ಯವಾದಗಳು.
ಸಕಾಲಿಕವಾದ ಚೆಂದದ ಬರಹ. ಹೌದು, ಅತಿಯಾಗಿ ಕಷಾಯ ಕುಡಿದು ಜನರು ತೊಂದರೆಗೆ ಸಿಲುಕಿಕೊಳ್ಳುತ್ತಿದ್ದಾರೆ ಎಂದು ನನ್ನ ಪರಿಚಿತ ಡಾಕ್ಟರ್ ಒಬ್ಬರು ತಿಳಿಸಿದ್ದರು.
ಲೇಖನವನ್ನು ಪ್ತಕಟಿಸಿ, ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿರುವಿರಿ…ಹೃತ್ಪೂರ್ವಕ ಧನ್ಯವಾದಗಳು.
ನಿಮ್ಮ ಲೇಖನದಲ್ಲಿ ಗಂಭೀರ ವಿಷಯ ತಿಳಿ ಹಾಸ್ಯದ ಲೇಪನದ ಜೊತೆ ಸುಂದರವಾಗಿ ಮೂಡಿ ಬಂದಿದೆ. ಚಂದದ ಲೇಖನ
ತಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು.
ಉತ್ತಮ ಮಾಹಿತಿ ನೀಡಿದ್ದೀರಿ ಮೇಡಂ ಅಭಿನಂದನೆಗಳು.