ಕಥೆ – “ಭಿನ್ನ”
“ಬಹಳ ಯೋಚನೆ ಮಾಡಿಯೇ ಈ ನಿರ್ಧಾರಕ್ಕೆ ಬಂದಿರೋದು. ಗಂಟೆಗಳ ಲೆಕ್ಕದಲ್ಲಿ ಕ್ರಿಯೇಟಿವಿಟಿಯನ್ನ ಎಕ್ಸೆಲ್ ಫೈಲೊಳಗೆ ತುಂಬುವುದು ನನಗಂತೂ ಸಾಧ್ಯವಿಲ್ಲ. ಒಬ್ಬೊಬ್ಬ ವ್ಯಕ್ತಿಯ ಸಂದರ್ಶನದ ಹಿಂದಿನ ಸಂಶೋಧನೆ, ಪ್ರಶ್ನೆಗಳು, ಅವರ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಲು ಬೇಕಾದ ಸಿದ್ಧತೆ ಎಲ್ಲವನ್ನೂ ಗಂಟೆ, ನಿಮಿಷದ ಲೆಕ್ಕದಲ್ಲಿ ಅಳೆಯೋದು, ಇದ್ದಕ್ಕಿದ್ದಂತೆ ಸಂಜೆ ಒಬ್ಬರ ಹೆಸರು ಹೇಳಿ ಮಾರನೇ ದಿನಕ್ಕೆ ಸಂದರ್ಶನದ ಅಷ್ಟೂ ತಯಾರಿ ಆಗಿರಬೇಕನ್ನೋದು ನನಗೆ ಉಸಿರುಗಟ್ಟಿಸ್ತಿದೆ. ಇಲ್ಲಿವರೆಗೂ ಮಾಡಿದ ಪ್ರತಿ ಕೆಲಸದ ವಿವರವೂ ಗೂಗಲ್ ಡ್ರೈವಲ್ಲಿದೆ. ನಾನಿವತ್ತಿಗೆ ಕೆಲಸ ಬಿಡ್ತಿದೀನಿ. ಇಷ್ಟು ದಿನದ ಈ ಸಹಕಾರಕ್ಕೆ ಧನ್ಯವಾದಗಳು.” ಹಾಗಂತ ಹೇಳಿಮುಗಿಸಿದಾಗ ಗಂಟೆ ಎರಡಾಗಿತ್ತು.ಶರಧಿಯ ಹಾಲುಬಣ್ಣದ ಮುಖ ಗುಲಾಬಿ ಬಣ್ಣಕ್ಕೆ ತಿರುಗಿ, ಅಗಲ ಕಣ್ಣುಗಳು ಗಟ್ಟಿ ನಿರ್ಧಾರವೊಂದನ್ನು ಹೇಳುವ ನಿಷ್ಠುರತೆಯನ್ನು ಆವಾಹಿಸಿಕೊಂಡಿತ್ತು.
ಹಿಂದಿನ ದಿನ ಮಧ್ಯರಾತ್ರಿಯವರೆಗೂ ವಾಟ್ಸಪ್ ಚಾಟ್ನಲ್ಲಿ ನಡೆದ ಸಮರದ ಅಂತ್ಯ ಹೀಗಾಗಬಹುದೆಂಬ ನಿರೀಕ್ಷೆ ಹರಿಣಿಗಿರಲಿಲ್ಲ. ಐದಾರು ತಿಂಗಳ ಹಿಂದೆ ಕೆಲಸಕ್ಕೆ ತೆಗೆದುಕೊಂಡಾಗ ಶರಧಿಯ ಬರವಣಿಗೆ, ಸಮಚಿತ್ತತೆ, ವಿಷಯದ ಆಳಕ್ಕಿಳಿಯುವ ಗುಣ ಬಹಳ ಇಷ್ಟವಾಗಿತ್ತು. ಇಂಟರ್ವ್ಯೂ ಅಂತ ಕರೆಸಿ ಮೂರು ಗಂಟೆಗಳ ಕಾಲ ಎರಡು-ಮೂರು ಬರಹಗಳನ್ನು ಬರೆಸಿ, ಪರೀಕ್ಷಿಸಿ, ಮಾತನಾಡಿ ಒಪ್ಪಿಕೊಂಡ ಅಭ್ಯರ್ಥಿ. ಇತ್ತೀಚಿನ ಕೆಲಸಗಳೆಲ್ಲವೂ ಒಂದೂ ಲೋಪದೋಷವಿಲ್ಲದೆ ತಮ್ಮ ಸಂಸ್ಥೆಗೆ ಹೆಮ್ಮೆ ತರುವಂತಿದ್ದುದು, ಆ ಗುಣಮಟ್ಟ, ಆ ನಯವಂತಿಕೆ ಹೊಟ್ಟೆಕಿಚ್ಚಾಗಿಸುವಷ್ಟು ಚೆಂದವಿದ್ದುದು ಹರಿಣಿಗೆ ಹೊಸ ಕನಸು ಕಾಣಲು ಬಣ್ಣ ಜೋಡಿಸಿದ್ದವು. ಇದ್ದಕ್ಕಿದ್ದಂತೆ ಆಡಿದ ನಾಲ್ಕು ಮಾತಿಗೇ ಎದೆಗೊದ್ದಂತೆ ಕೆಲಸ ಬಿಟ್ಟ ಶರಧಿಯ ಬಗ್ಗೆ ಈಗ ಅಸಮಾಧಾನ, ಸಿಟ್ಟು ಒತ್ತರಿಸಿ ಬಂದು ಬುಸುಗುಡುವಂತಾಯ್ತು.
” ಸೆಲ್ಫ್ ಪಿಟಿ ಯಾವತ್ತಿಗೂ ಒಳ್ಳೆಯದಲ್ಲ. ನಿಮ್ಮ ಶ್ರಮ, ನಿಮ್ಮ ಪ್ರತಿಭೆ ಎಲ್ಲಾದಕ್ಕೂ ಬೆಲೆ ಕೊಟ್ಟೇ ಇದೀವಿ. ಹೋದ ತಿಂಗಳು ನೀವು ಹತ್ತು ದಿನ ರಜೆ ತೆಗೆದುಕೊಂಡಾಗಲೂ ಪೇಮೆಂಟ್ ಕಟ್ ಮಾಡಿಲ್ಲ. ನಿಮ್ಮ ಕಷ್ಟ ಅರ್ಥ ಮಾಡಿಕೊಂಡಿದೀನಿ. ಇಂಟರ್ವ್ಯೂಗೆ ಬಂದಾಗ ಸಮಯದ ಬೆಲೆ ಗೊತ್ತು ಲೊಟ್ಟು ಲಸ್ಕು ಅಂದು ಈಗ ಟೈಮಿಗೆ ಕೆಲಸ ಮುಗಿಸೋದು ಕಷ್ಟ ಅಂದ್ರೆ ಅದು ನನ್ನ ಪ್ರಾಬ್ಲಮ್ ಅಲ್ಲ. ನೀವು ಕೊಟ್ಟಿದ್ದ ಪುಸ್ತಕ ವಾಪಸ್ ಕೊಡ್ತೀನಿ. ತೊಗೊಂಡು ಹೋಗಿ. ಇನ್ನೇನಾರೂ ಮಾತಾಡೋಕೆ ಇದ್ಯಾ?” ಉರಿಗಣ್ಣು ಅಗಲಿಸಿ, ಡಿಸೆಂಬರಿನ ಶೀತಲ ವಾತಾವರಣದಲ್ಲೂ ಬೆವರುತ್ತಾ ಕೂತ ಹರಿಣಿ ಸದ್ಯಕ್ಕೆ ಏನು ಹೇಳಿದ್ರೂ ಅರ್ಥ ಮಾಡಿಕೊಳ್ಳವ ಪರಿಸ್ಥಿತಿಯಲ್ಲಿ ಇರಲಿಲ್ಲ. ಮುಂದೆ ನೀರು ತುಂಬಿದ ಗಾಜಿನ ಲೋಟವಿದ್ದೂ, ಮಾತು ಕಾವೇರಿ ಗಂಟಲು ಒಣಗಿದರೂ, ಅಲ್ಲಿನ ಹನಿನೀರೂ ಮುಟ್ಟಬಾರದೆನಿಸಿತ್ತು. ಹಸಿವಿನಲ್ಲಾದರೆ ತಾಳ್ಮೆ ತಪ್ಪಬಹುದೆಂದು ಬಿಸಿಬಿಸಿ ಪೊಂಗಲ್ ತಿಂದು, ಎರಡು ಲೋಟ ನೀರು ಕುಡಿದು ಮನೆಯಿಂದ ಹೊರಟಿದ್ದು ಒಳ್ಳೆಯದಾಯಿತೆನಿಸಿತು ಶರಧಿಗೆ. ಹಸಿವಿನಲ್ಲಾಗಿದ್ದರೆ ನೀನು ಅಂದ್ರೆ ನಿಮ್ಮಪ್ಪ ಎನ್ನುವ ರೋಷ ಉಕ್ಕುತ್ತಿತ್ತು. ಈಗ ಸಮಾಧಾನವಾಗಿ ಕೇಳುವ, ಉತ್ತರಿಸುವ ಸೌಜನ್ಯವಿದೆ. ಹಾಗಂತ ಏನೂ ಹೇಳದೆ ಹೊರಟರೆ, ತನ್ನ ಅಭಿಪ್ರಾಯವೇ ಸತ್ಯ. ಉತ್ತರಿಸೋ ಮುಖವೇ ಇಲ್ಲದೆ ಹೋದಳು ನೋಡಿದ್ಯಾ ಎಂಬ ಭಾವನೆ ಒಸರುತ್ತದೆನ್ನಿಸಿ, ” ನೀವು ಅದ್ಯಾವ ಅರ್ಥದಲ್ಲಿ ಸ್ವಾನುಕಂಪದ ಬಗ್ಗೆ ಮಾತಾಡಿದ್ರಿ ಗೊತ್ತಿಲ್ಲ. ಆದರೆ ಶ್ರದ್ಧೆಯಿಂದ ಬುದ್ಧಿ, ಮನಸ್ಸು, ಭಾವನೆ ಎಲ್ಲಾ ಏಕಾಗ್ರಗೊಳಿಸಿ ಮಾಡುವ ಕ್ರಿಯೇಟಿವ್ ಜಾಬ್ ಗೆ ಗಂಟೆಯ ಲೆಕ್ಕ, ನಿಮಿಷ ನಿಮಿಷದ ವರದಿ ಕೊಡೋದು ನನಗಾಗಲ್ಲ. ಅದು ನನ್ನ ದೌರ್ಬಲ್ಯವೇ ಇರಬಹುದು ಅಂದೆ ಅಷ್ಟೇ. ಬೇರಾವ ಆರೋಪಕ್ಕೂ ನಾನು ತಲೆಕೆಡಿಸಿಕೊಳ್ಳಲ್ಲ. ಆದರೆ ಸೆಲ್ಫ್ ಪಿಟಿ ಅನ್ನೋದು ಯಾವ ವಿಷಯದಲ್ಲೂ ನನಗಿಲ್ಲ. ನಿನ್ನೆಯಿಂದ ಆಡಿದ ಮಾತನ್ನ ಅಂದಂದೇ , ಆಯಾ ಸಂದರ್ಭದಲ್ಲೇ ಆಡಿದ್ರೆ ಬಹುಶಃ ಇವತ್ತು ಈ ನಿರ್ಧಾರ ಇರ್ತಿರ್ಲಿಲ್ಲ.” ತಣ್ಣಗಿನ ದನಿಯಲ್ಲಿ ಮಾತು ಮುಗಿಸಿ ಹರಿಣಿಯ ಮುಖವನ್ನೇ ಉತ್ತರಕ್ಕಾಗಿ ದಿಟ್ಟಿಸಿದಳು.
ನಾಲ್ಕು ಮುಕ್ಕಾಲಡಿಯ ಹರಿಣಿ ಕುರ್ಚಿಯನ್ನು ಎತ್ತರಿಸಿ ಕುಳಿತಿದ್ದಳು. ಕ್ಯಾಬಿನ್ನ ಒಳಬಂದಾಗ ಬಲವಂತದ ಕಿರುನಗೆಯೊಂದನ್ನ ಸೂಸಿದ್ದು ಬಿಟ್ಟರೆ, ಇವತ್ತು ಬೇಟೆಗೆ ಸಿದ್ಧವಾದ ವ್ಯಾಘ್ರದಂತಿದ್ದಾಳೆ. ಕಣ್ಣ ಸುತ್ತಲಿನ ಕಪ್ಪು ಉಂಗುರಗಳು ಮತ್ತಷ್ಟು ಕಪ್ಪಾಗಿ, ರಾತ್ರಿ ನಿದ್ದೆಕೆಟ್ಟು ಈಗ ಸಿಟ್ಟಿಗೆ ಸಿಕ್ಕು ಕಣ್ಣು ಕೆಂಪಾಗಿ, ಸಾಮಾನ್ಯವಾಗಿ ವಿಷಾದವನ್ನೇ ಹೊತ್ತ ಹರಿಣಿಯ ಮುಖ ಇಂದು ಬೇರೆಯಾಗಿ ಕಂಡಿತ್ತು. ಕುರ್ಚಿಯಿಂದ ಮುಂದೆ ಬಾಗಿ,
” ನೋ ನೋ… ನಾನು ಅಷ್ಟೆಲ್ಲಾ ಮಾಡಿದೀನಿ ಅನ್ನೋದು ಸೆಲ್ಫ್ ಪಿಟೀನೆ. ಎಲ್ಲಾ ವಿಚಾರಕ್ಕೂ ಎರಡು ಮುಖ ಇರತ್ತೆ. ನೀವಂದುಕೊಂಡಿದ್ದೇ ಸತ್ಯ ಅಲ್ಲ. ವಿ ಲಾಸ್ಟ್ ಎನ್ ಒಪರ್ಚುನಿಟಿ. ಬಿಸಿನಸ್ ಲಾಸ್ ಅದು… ಒಂದು ದಿನದೊಳಗೆ ಮಾಡಕ್ಕಾಗಲಿಲ್ಲ ಅನ್ನೋದು ನಿಮ್ಮ ತಪ್ಪು. ಅದನ್ನ ನನ್ನ ತಲೆ ಮೇಲೆ ಹೊರಿಸ್ಬೇಡಿ ಆಯ್ತಾ? ನಿಮ್ಮ ಬದಲಿಗೆ ನಾಲ್ಕು ಜನರನ್ನ ಇಟ್ಕೊಂಡು ಕೆಲಸ ಮಾಡಿಸೋ ಕೆಪಾಸಿಟಿ ಇದೆ ನಂಗೆ. ಆದರೆ ನಿಮಗೆ ರೆಸ್ಪೆಕ್ಟ್ ಕೊಡಬೇಕಂತ ಈ ಮಾತು ನಾನಾಡಿಲ್ಲ…”
ಹರಿಣಿ ಕೋಪದ ಭರದಲ್ಲಿ ಅದುವರೆಗೂ ಕೂಡಿಟ್ಟುಕೊಂಡಿದ್ದ ವಿಷ, ಸಿಟ್ಟು, ಸಣ್ಣತನಗಳನ್ನೆಲ್ಲಾ ಮಾತಿನ ರೂಪದಲ್ಲಿ ಆಚೆಹಾಕಿದಳು. ಬುದ್ಧನ ಫೋಟೋವನ್ನೇ ಸದಾ ಡಿಪಿಯಾಗಿ ಇಡುವ, ಶ್ರೇಷ್ಠವಾದುದ್ದು ಎಲ್ಲಿದ್ದರೂ ಅದಕ್ಕೆ ತನ್ನ ಗೌರವವಿದೆ ಎಂದು ಸಾರಲು ಬಯಸುವ, ಅಗತ್ಯಕ್ಕಿಂತ ಹೆಚ್ಚೇ ವಿನಯ, ಸೌಜನ್ಯ ತೋರುವ ನಲ್ವತ್ತರ ಹರಿಣಿ ಇಂದು ತನ್ನ ಚಿಪ್ಪಿನಿಂದ ಆಚೆ ಬಂದು, ಅದುವರೆಗೂ ಆಕೆಯ ನಯವಾದ ನಗುಮೊಗದ ಮಾತುಗಳ ಹಿಂದೆ ಅಡಗಿಸಿಟ್ಟಿದ್ದ ವಿಷದ ಬಾಣಗಳನ್ನು ಹೊರಕ್ಕೆಸೆದಿದ್ದಳು. ದೊಡ್ಡ ಕ್ಯಾಬಿನ್ನ ಪ್ರತಿ ವಸ್ತುವೂ ತಣ್ಣಗಿನ ಕ್ರೌರ್ಯದಲ್ಲಿ ಹೆಪ್ಪಗಟ್ಟಿದಂತನಿಸಿತ್ತು.
ಇನ್ನು ಮಾತನಾಡಿ ಉಪಯೋಗವಿಲ್ಲ ಎನ್ನುವುದು ಖಚಿತವಾಗಿ ಮಾತು ಬೆಳೆಸದೆ ಬರ್ತೀನಿ ಅಂತಷ್ಟೇ ಹೇಳಿ ಹೊರನಡೆದಳು ಶರಧಿ.
ತಾವು ಸದಾ ಸರಿಯಾದ್ದನ್ನೇ ಮಾಡ್ತೀವಿ ಅಂತ ತೋರಿಸಿಕೊಂಡು, ಸುತ್ತ ವಂದಿಮಾಗಧರ ದೊಡ್ಡ ಪಡೆ, ದೊಡ್ಡವರನ್ನು ಓಲೈಸಲು ಬೇಕಾದ ಚಾಕಚಕ್ಯತೆ, ಸ್ವಂತ ಮಾಧ್ಯಮ ಸಂಸ್ಥೆ ಹೊಂದಿರುವ ಗರ್ವ, ಅಧಿಕಾರ ಹೊಂದಿರುವ ಇವರೊಂದಿಗಿನ ಜಟಾಪಟಿ ಭಾವನಾತ್ಮಕವಾಗಿ ಹೈರಾಣುಗೊಳಿಸಿತ್ತು. ಯಾರೊಂದಿಗೂ ದೊಡ್ಡವರ ಸಣ್ಣತನ ಚರ್ಚಿಸಿ ಚಿಕ್ಕವಳಾಗುವುದು ಬೇಡ. ಈ ಕತೆ ಇಲ್ಲಿಗೆ ಮುಗಿಯಲಿ. ಮತ್ತೆ ಇವರ ಮುಖ ನೋಡಲಾರೆ ಅಂತ ಮನಸ್ಸಿಗೆ ತಾಕೀತು ಮಾಡುತ್ತಾ ಕನಸಿನಲ್ಲೆಂಬಂತೆ ಮೆಟ್ರೋ ಹತ್ತಿ ಮನೆ ತಲುಪಿದಳು.
ಆದರೂ ಬುದ್ಧಿ, ಮನಸ್ಸುಗಳು ಈ ಎರಡುದಿನದ ಆಗುಹೋಗುಗಳು, ಮಾತುಕತೆಯ ಮಧ್ಯದಲ್ಲಿ ಎದ್ದ ಪ್ರಶ್ನೆಗಳ ಬಗ್ಗೆ ಪದೇ ಪದೇ ಚಿಂತಿಸಿ, ಸ್ಪಷ್ಟಗೊಳಿಸಲು ಒದ್ದಾಡುತ್ತಿದ್ದವು. ಸಂಜೆ ಐದಾಗುತ್ತಿತ್ತು. ಒಂದು ಲೋಟ ಚಹಾ ತನ್ನ ಲಹರಿಯನ್ನು ಹಗುರಗೊಳಿಸಬಹುದೆಂದು ಅಡುಗೆಮನೆಗೆ ನಡೆದಳು. ಟೀ ಪಾತ್ರೆ ತೊಳೆಯುವಾಗಲೂ, ನೀರು- ಹಾಲು ಟೀ ಪುಡಿ ಬೆರೆಸಿ ಕುದಿಸುವಾಗಲೂ, ಸಕ್ಕರೆ ಬೆರೆಸಿ ಸೋಸಿ ಲೋಟಕ್ಕೆ ಸುರಿದು ಕೂರುವಾಗಲೂ ಅದೇ ಚಿಂತೆ.
ಹೀಗೆ ಅಚಾನಕ್ಕಾಗಿ ಕೆಲಸ ಬಿಡುವ ನಿರ್ಧಾರ ತಿಳಿಸಿ ಹಿಂತಿರುಗಿ ನೋಡದೆ ಬೀಸುನಡಿಗೆಯಲ್ಲಿ ಎದ್ದು ಬರಬೇಕೆನ್ನುವ ತೀರ್ಮಾನ ಹಿಂದಿನ ರಾತ್ರಿ ಮೊಳಕೆಯೊಡೆದು ಬೆಳೆದು ಬೆಳೆದು ಬೃಹದಾಕಾರವಾಗಿ ಇವತ್ತು ಹರಿಣಿಯ ಮುಂದೆ ಕುಳಿತಾಗ ಹೇಳಲೇಬೇಕಾದ ಒತ್ತಡ ಸೃಷ್ಟಿಸಿತ್ತು. ಎಂದಿನಂತೆ ಮೀಟಿಂಗ್ ರೂಮಲ್ಲಿ ಸಿಗದೆ ತನ್ನ ಕ್ಯಾಬಿನ್ನಿಗೆ ಕರೆಸಿ ಕೂರಿಸಿದಾಗಲೇ ಹರಿಣಿ ತನ್ನ ಅಧಿಕಾರ ಪ್ರದರ್ಶನ ಮಾಡಿಯೇ ತೀರುವ ಸೂಚನೆ ಸಿಕ್ಕಿತ್ತು. ಕಳೆದ ತಿಂಗಳು ಹತ್ತು ದಿನದ ರಜೆಗಾಗಿ ಬೇಡಿಕೆಯಿಟ್ಟಿದ್ದೂ ನಿಜ. ಆಮೇಲೆ ಆ ದಿನಗಳ ಪೇಮೆಂಟ್ ಬಂದಿದ್ದೂ ನಿಜ. ಆದರೆ ವಾರಕ್ಕೆ ಮೂರುದಿನದ ಕೆಲಸದ ಲೆಕ್ಕ ವಾರದ ಏಳೂ ದಿನಗಳಿಗೂ ವಿಸ್ತರಿಸಿ, ಹಗಲು-ರಾತ್ರಿಯ ಬೇಧವೂ ಇರದಂತಾಗಿಸಿ, ವಾಸ್ತವವಾಗಿ ಅವರು ಕೊಟ್ಟ ಮೂರು ಸಾವಿರ ತನ್ನ ಬೆಲೆಗೂ ಮೀರಿ ದುಡಿಸಿಕೊಂಡಾಗಿತ್ತು. ಬರೀ ಹಣದ ಲೆಕ್ಕವಲ್ಲ. ಅಸಲಿಗೆ ಕೇಳಿದ್ದು ಸಂಬಳ ರಹಿತ ರಜೆಯೇ.ತಾವೇ ಹಣ ಹಾಕಿ ಆಮೇಲೆ ಹಂಗಿಸುವ ರೀತಿ ಶರಧಿಗೆ ಹೊಟ್ಟೆತೊಳೆಸಿತು. ಒಂದೇ ತಿಂಗಳಲ್ಲಿ ಹತ್ತು ಸಲ ಆ ಮಾತನ್ನು ಎತ್ತೆತ್ತಿ ಆಡಿದ್ದಳು ಹರಿಣಿ.
ಅಷ್ಟಕ್ಕೂ ಬೆಂಗಳೂರಲ್ಲಿ ಸ್ವಂತ ಮನೆ ಇದ್ದು, ಒಂದು ರುಪಾಯಿ ಸಾಲ ಕೂಡ ಇರದ ತಮಗೆ ತಿಂಗಳ ಖರ್ಚಿಗೆ ೮-೧೦ ಸಾವಿರವಾದರೆ ಸಾಕು. ಹೋಟೆಲ್, ಸಿನಿಮಾ, ಬಾರ್ ಪಬ್ ಶೋಕಿಯಿರದ ಮಧ್ಯಮವರ್ಗದ ಸಾಧಾರಣ ಕುಟುಂಬ. ತಿಂಗಳ ದಿನಸಿ, ಹಾಲು, ತರಕಾರಿ, ಕರೆಂಟು ನೀರಿನ ಬಿಲ್ ಕಟ್ಟಿಕೊಂಡರೆ ಮಿಕ್ಕಿದ್ದು ಉಳಿತಾಯ ಖಾತೆಗೆ. ತಾನೊಬ್ಬಳೇ ಎರಡು ಮೂರು ಮೂಲದಿಂದ ಒಟ್ಟು ಮುವ್ವತ್ತು ಸಾವಿರ ದುಡಿಯುತ್ತಿದ್ದವಳಿಗೆ ಈ ಕೆಲಸ ಹಣದ ಅವಶ್ಯಕತೆಯದಾಗಿರಲಿಲ್ಲ. ಸೃಜನಶೀಲ ಸವಾಲಾಗಿತ್ತು. ಅಷ್ಟು ಕಷ್ಟವೆನಿಸಿದರೆ ಉಪ್ಪಿನಕಾಯಿ ಅನ್ನ ತಿಂದಾದ್ರೂ ಬದುಕಿಕೊಳ್ತೀನಿ. ಯಾರ ಹಂಗಿನ ಋಣವೂ ತನಗೆ ಬೇಕಿಲ್ಲ ಎನಿಸುತ್ತಿತ್ತು. ಅದಕ್ಕೆಂದೇ
“ನನ್ನಿಂದ ನಿಮಗೆ ಲಾಸ್ ಆಗಿರೋದಕ್ಕೆ ಒಂದಿಡೀ ತಿಂಗಳ ಸಂಬಳ ಹಿಡಿದುಕೊಳ್ಳಿ. ಹೋದ ತಿಂಗಳ ಸಂಬಳದ ಒಂದು ಪೈಸೆಯೂ ನನಗೆ ಬೇಡ.” ಎಂದಳು. ಅವರು ಆ ಮಾತಿಗೇ ಕಾದಿದ್ದಂತೆ ಒಂದು ತಿಂಗಳ ಸಂಬಳ ಉಳಿಸಿಕೊಂಡರು. ಅದು ಒತ್ತಟ್ಟಿಗಿರಲಿ.
ವಾಸ್ತವವಾಗಿ ಇವರು ಆ ನಟನನ್ನು ಸಂಪರ್ಕಿಸಲು ಆಗಷ್ಟೇ ಪ್ರಯತ್ನಿಸಬೇಕಿತ್ತು. ಒಬ್ಬರ ಇಂಟರ್ವ್ಯೂಗೆ ಕನಿಷ್ಟ 2-3 ದಿನ ಮುಂಚಿತವಾಗಿ ತಿಳಿಸಿದರೆ ಅವರ ವಿವರ ಸಂಗ್ರಹಿಸಿ, ವ್ಯಕ್ತಿತ್ವದ ಸೂಕ್ಷ್ಮಗಳನ್ನು ಗ್ರಹಿಸಿ, ಪ್ರಶ್ನೆ ಹೊಸೆಯಲು ಅನುಕೂಲವಾಗತ್ತೆ ಅಂತ ಶರಧಿ ಪದೇ ಪದೇ ವಿನಂತಿಸಿಕೊಂಡಿದ್ದು ಪ್ರಯೋಜನವಾಗಿರಲಿಲ್ಲ. ನೀವು ಇಡೀ ಪ್ರಶ್ನೆ ಕೊಡಬೇಡಿ. ಔಟ್ ಲೈನ್ ಕೊಡಿ ಸಾಕು. ಮಿಕ್ಕಿದ್ದು ನಾವು ನೋಡ್ಕೋತೀವಿ. ಎಡಿಟರ್ಸ್ ಇದ್ದಾರೆ. ನೀವು ಕೊಟ್ಟಿದ್ದನ್ನ ನಾವು ಶಾರ್ಪ್ ಮಾಡಿಯೇ ಬಳಸೋದು. ನಿಮ್ಮದೇ ಅಂತಿಮವಲ್ಲ. ಎನ್ನುವ ಸಿದ್ಧ ಉತ್ತರ ಟಪಾರನೆ ಮುಖಕ್ಕೆ ಸಿಡಿಯುತ್ತಿತ್ತು.
ಬರೆದುಕೊಟ್ಟ ಪೀಠಿಕೆ, ಅತಿಥಿ ಪರಿಚಯ, ಎರಡು ಮೂರು ಸಾಲಿನ ಪ್ರಶ್ನೆಗಳನ್ನೇ ಪ್ರೈಮರಿ ಶಾಲೆಯ ಮಗು ಉರುಹೊಡೆದು ಪಾಠ ಒಪ್ಪಿಸುವಂತೆ ಕ್ಯಾಮರಾ ಮುಂದೆ ಒಪ್ಪಿಸುವ, ಅಲ್ಪಪ್ರಾಣ ಮಹಾಪ್ರಾಣಗಳನ್ನು ನಾಲಿಗೆ ಹೊರಳಿದಂತೆಲ್ಲಾ ಅದಲುಬದಲಿಸುವ ನಿರೂಪಕಿ ಸ್ವಂತವಾಗಿ ಏನನ್ನೂ ಹೇಳಲಾರಳೆಂಬುದು ಶರಧಿಗೆ ತಿಳಿದಿತ್ತು. ಪ್ರಶ್ನೆಗಳ ಔಟ್ ಲೈನ್ ಕಳಿಸಿ ಎಂದವರೇ ಒಂದು ಶಬ್ದ ಕಳೆದುಹೋಗಿದ್ದರೂ ಅದಕ್ಕಾಗಿ ಕರೆ ಮಾಡಿ, ಏನೋ ತಪ್ಪಾಗಿದೆ ಸರಿ ಮಾಡಿ ಕಳಿಸಿ ಎಂದು ಬೊಬ್ಬೆ ಹಾಕುತ್ತಿದ್ದರು. ಅದಾಗಲೇ ಪ್ರಕಟಿಸಿದ್ದ ಸಂದರ್ಶನಗಳಲ್ಲಿ ತಾನು ಬರೆದ ಒಂದಕ್ಷರವೂ ಆಚೀಚೆಯಾಗದೇ ಯಥಾವತ್ತಾಗಿ ಬಳಕೆಯಾಗಿದ್ದನ್ನು ಬಲ್ಲ ಶರಧಿಗೆ ಎಡಿಟರ್ಸ್ ಇದ್ದಾರೆ. ಶಾರ್ಪ್ ಮಾಡ್ತಾರೆ ಎಂಬ ಮಾತು ಗುಮ್ಮ ಬರ್ತಾನೆ ಅಂತ ಹೆದರಿಸುವ ತಂತ್ರದಂತೆ ಭಾಸವಾಗಿ ಪಕಪಕ ನಗು ಬಂತು. ಕೈಲಿದ್ದ ಚಹಾ ಚೆಲ್ಲದಂತೆ ಮೇಜಿನ ಮೇಲಿಟ್ಟು ಒಬ್ಬೊಬ್ಬಳೇ ನಕ್ಕಳು.
ನಾಳೆಯಿಂದ ಕೆಲಸ ಮಾಡಿಯೂ, ಏನೂ ಮಾಡಿಲ್ಲವೆಂಬಂತೆ ಮಾತು ಕೇಳುವ, ಹರಿಣಿಯ ಪೂರ್ವಾಗ್ರಹಪೀಡಿತ ಸ್ಟೇಟ್ಮೆಂಟುಗಳನ್ನು ತಾಳ್ಮೆಯಿಂದ ಆಲಿಸಿ, ಪಕ್ಕಕ್ಕಿರಿಸುವ ಗೋಜಿಲ್ಲವೆಂಬುದು ಒಂಥರಾ ನಿರಾಳತೆಯನ್ನು ತಂದುಕೊಟ್ಟಿತ್ತು. ತನಗೂ ಮುಂಚೆ ಆಗಿಹೋದ ರೈಟರ್ಗಗಳು ಮಾಡಿರುವ ಮೋಸ, ನಂಬಿಕೆ ದ್ರೋಹ, ಹದಗೆಟ್ಟಿರುವ ವೈಯಕ್ತಿಕ ಬದುಕು, ಸದಾ ಕಾಡುವ ಆರೋಗ್ಯ ಸಮಸ್ಯೆ ಸೃಷ್ಟಿಸಿರುವ ಗೋಜಲುಗಳಿಂದಲೇ ಯಾರನ್ನೂ ಪೂರ್ಣ ನಂಬದ, ಪ್ರಾಮಾಣಿಕ ಪ್ರಯತ್ನವನ್ನೂ ಅನುಮಾನದಿಂದಲೇ ನೋಡುವ ಮನಃಸ್ಥಿತಿ ತಲುಪಿದ್ದಾಳೆಂಬ ವಿಶ್ಲೇಷಣೆ ರೂಪುಗೊಂಡಿತು. ಸ್ವಲ್ಪವೇ ಸಕ್ಕರೆ ಹಾಕಿದ ಹದವಾದ ಚಹಾ ಗಂಟಲುಗಿಳಿಯುತ್ತಲೇ ಆಹ್ಲಾದವೆನಿಸಿತು.
ತಿಂಗಳುಗಳಿಂದ ಸರಿಯಾದ ಸಮಯಕ್ಕೆ ಊಟ ನಿದ್ದೆ ಇಲ್ಲದೆ, ಮುಖಕ್ಕೂ ಕೂದಲಿಗೂ ಕನಿಷ್ಟ ಆರೈಕೆಯಿಲ್ಲದೆ, ವರ್ಕ್ ಫ್ರಂ ಹೋಂ ಎಂದು ಮನೆಗೂ ಮನೆಯೊಡೆಯನಿಗೂ ಸರಿಯಾಗಿ ಸಮಯ ನೀಡಲಾಗದೆ ಒದ್ದಾಡಿದ ದಿನಗಳು ಮುಗಿಯಿತೆನ್ನಿಸಿ ಸಮಾಧಾನಪಟ್ಟಳು. ಎಂತಹ ಪರಿಸ್ಥಿತಿಯಲ್ಲೂ ಬೆಳ್ಳಿಗೆರೆಯೊಂದು ಗೋಚರಿಸುವುದು, ಸದಾ ಸಂತೋಷಕ್ಕೊಂದು ಕಾರಣ ಸಿಗುವುದು ಈ ಬದುಕಿನ ಪುಣ್ಯವೆನಿಸಿತ್ತು ಅವಳಿಗೆ.
ಸದಾಕಾಲ ನಾವು ಯಾರಿಗೋ ತುಂಬಾ ಅಗತ್ಯವೆಂದು ಭಾವಿಸಿ ಬೀಗುತ್ತಿರುತ್ತೇವೆ. ಆದರೆ ಒಂದು ಬಿರು ಮಾತು, ಒಂದು ಸತ್ಯ, ಒಂದೇ ಒಂದು ಅವಸರದ ನಿರ್ಧಾರ ಸಂಬಂಧಗಳನ್ನು ಕಡಿದು ಶಾಶ್ವತವಾಗಿ ದೂರವಿರಿಸುತ್ತದೆ. ಯಾರಿಲ್ಲದೆಯೂ ಲೋಕ ತನ್ನಷ್ಟಕ್ಕೆ ನಡೆಯುತ್ತದೆ. ಶರಧಿಗೆ ಇದಲ್ಲದಿದ್ದರೆ ಮತ್ತೊಂದು ಕೆಲಸ. ಹರಿಣಿಗೆ ಇವಳಲ್ಲದಿದ್ದರೆ ಮತ್ತೊಬ್ಬರು ಕಂಟೆಟ್ ಕ್ರಿಯೇಟರ್. ಮನುಷ್ಯನ ಅಹಂಕಾರಕ್ಕೆ ಮಾತ್ರ ಪರ್ಯಾಯವಾದುದು ಮತ್ತೊಂದಿಲ್ಲ. ಅವರವರ ಮೂಗಿನ ನೇರಕ್ಕೆ ಮಾತುಕತೆ, ನಡವಳಿಕೆ, ಶಿಷ್ಟಾಚಾರ.
ಇಂತಹದ್ದೊಂದು ಅರಿವು ಸ್ಫುರಿಸಲು ಶರಧಿಗೂ ಸಮಯ ಬೇಕಾಯ್ತು. ಹೆಚ್ಚು ಒತ್ತಡ ಹಾಕಿದ್ರೆ ಹೆಚ್ಚು ಕೆಲಸ, ಇನ್ನಷ್ಟು ವಿಷಯ ತನ್ನಿಂದ ತೆಗೆಯಬಹುದೆಂದು ಹೊರಟ ಹರಿಣಿಯ ನಡೆ, ಬಾಲ್ಯದಲ್ಲಿ ಕೇಳಿದ ‘ಚಿನ್ನದ ಮೊಟ್ಟೆಯಿಡುವ ಕೋಳಿ’ ಕಥೆಗೆ ಸಾಮ್ಯವಿದ್ದಂತೆ, ತನ್ನ ನಡೆ ‘ಅಜ್ಜಿಯ ಜಂಬ’ದ ಕತೆಯನ್ನು ಹೋಲುತ್ತಿದೆ ಎನ್ನಿಸಿತು. ಹೇಗೆ ಹೇಳಹೊರಟರೂ ಎಲ್ಲಾ ಕಥೆಯೂ ನೀತಿಕತೆಯೇ ಆಗುವುದು, ಗೊತ್ತಿರುವ ಮತ್ತೊಂದು ಕತೆಗೆ ತಳುಕು ಹಾಕಿಕೊಳ್ಳುವುದು ತನಗೆ ಮಾತ್ರವಿರಲಾರದು ಎಂದುಕೊಳ್ಳುತ್ತಾ ಹೊಸ ಕೆಲಸ ಹುಡುಕುವ ಯೋಚನೆಗೆ ಹುರುಪುಗೊಂಡಳು. ಖಾಲಿ ಲೋಟ ಎಲ್ಲವನ್ನೂ ತುಂಬಿಕೊಳ್ಳುವಂತೆ ಸುಮ್ಮನೆ ಕುಳಿತಿತ್ತು. ಹೀಗೆ ಯೋಚಿಸಲು ಕೂಡ ತಲೆ ಸ್ವಲ್ಪ ಖಾಲಿಯಿರಬೇಕು. ಎಲ್ಲಾ ತುಂಬಿಕೊಂಡರೆ ಹೊಸ ಹೊಸ ವಿಚಾರಕ್ಕೆ ಜಾಗವೆಲ್ಲಿ? ಪಾಠ ಮಾತ್ರ ನೆನಪಿಟ್ಟುಕೊಂಡು ಇಷ್ಟುದ್ದದ ಜಗಳವನ್ನು ಮರೆತುಬಿಡು ಶರಧಿ…ಎಂದುಕೊಳ್ಳುತ್ತಾ ಖಾಲಿ ಲೋಟ ಕೈಗೆತ್ತಿಕೊಂಡಳು.
– ಎಸ್ ನಾಗಶ್ರೀ
Good one
Thank u
Thank u
Beautiful narration
Very real picture
ವಾಸ್ತವ ಸಂಗತಿಯು ಕೈಗನ್ನಡಿಯಂತೆ ಭಿನ್ನ ವಾಗಿಯೇ ಒಡಮೂಡಿದ ಮೇಡಂ ಅಭಿನಂದನೆಗಳು.
ಕತೆ ಮತ್ತು ಕತೆಗಾರಿಕೆ ಚೆನ್ನಾಗಿದೆ.
ವರ್ತಮಾನಕ್ಕೆ ಬಹಳ ಹತ್ತಿರವಿರುವ ಕಥೆ ನಾಗಶ್ರೀ. ಸಹಜವಾಗಿ, ಪರಿಣಾಮಕಾರಿಯಾಗಿ ಕಥೆ ಹೆಣೆದಿದ್ದೀರಿ. ಎಲ್ಲೂ ಬೋರು ಹೊಡೆಸುವುದಿಲ್ಲ.
ಅನುಕ್ರಮವಾಗಿ ಘಟನೆ ಮತ್ತು ಅದಕ್ಕೆ ಪೂರಕವಾಗಿ ನಡೆದ ವಿದ್ಯಮಾನಗಳನ್ನು ವಿವರಿಸದೇ ಕತೆಯೊಂದು ಅನುಭವ ಆಗುವಂತಿದೆ. ಮೊದಲ ಯಶಸ್ವೀ ಪ್ರಯತ್ನಕ್ಕೆ ಅಭಿನಂದನೆಗಳು
ಮನಸ್ಸಿನ ಭಾವನೆ ಚೆನ್ನಾಗಿ ಒಡಮೂಡಿದೆ chennagidhe
ತುಂಬಾ ಚೆನ್ನಾಗಿದೆ. ವಾಸ್ತವಕ್ಕೆ ಹತ್ತಿರವಾಗಿದೆ.
ಚಂದದ ಕಥೆ.
ಚೆಂದಕ್ಕೆ ಬರೆದಿರುವಿರಿ ನಾಗಶ್ರೀ..
ಕಥೆಯನ್ನು ಓದಿ ಸ್ಪಂದಿಸಿದ ಎಲ್ಲರಿಗೂ ಧನ್ಯವಾದಗಳು
ವಿಭಿನ್ನವಾದ ಕಥಾವಸ್ತುವನ್ನೊಳಗೊಡ ‘ಭಿನ್ನ’ಕತೆ ಸೊಗಸಾಗಿದೆ.
ಒಂದಲ್ಲ ಒಂದು ರೀತಿಯಲ್ಲಿ ಕಮಿಟೆಡ್ ಮನಗಳು ಅನುಭವಿಸುವ ಮನದ ಭಾವಗಳಿಗೆ ಉತ್ತಮ ರೀತಿಯ ಮಾತು ಕೊಟ್ಟಿದ್ದೀರಿ. ಎಂದಿನಂತೆ ನಿಮ್ಮ ಓದು ನನಗೆ ಆಪ್ತವಾದದ್ದು.