ಅಂಚೆಯ ಅಣ್ಣ

Share Button

ಅದೊಂದು ಕಾಲವಿತ್ತು..ಅಂಚೆ ಪೇದೆ ಮನೆ ಬಾಗಿಲಿಗೆ ಬಂದನೆಂದರೆ ಬಹಳ ಕುತೂಹಲ! ನಮಗೆ ಪತ್ರ ಎಲ್ಲಿಂದ ಬಂದಿದೆಯೋ, ಅದರಲ್ಲಿ ವಿಷಯವೇನಿದೆಯೋ ಎಂದು ತಿಳಿಯುವ ಕಾತರ. ಒಂದು ಪುಟ್ಟ ಕಾರ್ಡಿನಲ್ಲಿ ಬರೆದ ಒಂದೆರಡು ಸಾಲುಗಳೇ ಇರಲಿ, ಹತ್ತಾರು ಬಾರಿ ಓದಿ ಖುಶಿ ಪಡುವುದು ಮಾಮೂಲಿ. ಹಳ್ಳಿಯಲ್ಲಿರುವ ಒಂದು ಸಣ್ಣ ಅಂಚೆ ಕಚೇರಿಯೇ ಅಲ್ಲಿಯ ಜನರ ಕೇಂದ್ರಸ್ಥಾನವಾಗಿರುತ್ತಿತ್ತು. ಅಲ್ಲಿಯ ಪೋಸ್ಟ್ ಮಾಸ್ಟರ್,  ಬರಹವಿಲ್ಲದವರ ಪತ್ರವನ್ನು ಓದಿ ಹೇಳುವುದರಿಂದ ಪ್ರಾರಂಭಿಸಿ, ಬಂದ ಪತ್ರಕ್ಕೆ ಉತ್ತರವನ್ನೂ ಅವರೇ ಬರೆದು ಕೊಡುವುದು ಸಾಮಾನ್ಯ. ಹಳ್ಳಿಯ ಪ್ರತಿಮನೆಯವರ ಆಗುಹೋಗುಗಳಲ್ಲಿ, ಕಷ್ಟ ಸುಖಗಳಲ್ಲಿ ಅವರು ಸದಾ ಭಾಗಿ. ಅಂಚೆ ಕಚೇರಿಗೆ ಬರುವಾಗ, ಅವರಿಗಾಗಿ ಪ್ರತಿಯೊಬ್ಬರ ಕೈಯಲ್ಲೂ ಮನೆಯಲ್ಲಿ ಬೆಳೆದ ಒಂದಿಲ್ಲೊಂದು ತರಕಾರಿ, ಹಣ್ಣುಗಳು ಇದ್ದೇ ಇರುವುದು ರೂಢಿ. ಮೈಲುಗಟ್ಟಲೆ ನಡೆದು ಪತ್ರ ಹಂಚುವ ನಗು ಮುಖದ ಅಂಚೆಯವನು ಎಲ್ಲರ ಪ್ರೀತಿ ಪಾತ್ರ. 45 ವರ್ಷಗಳ ಹಿಂದೆ, ನಮ್ಮೂರಿನ ಅಂಚೆ ಕಚೇರಿಗೆ ಹೋಗಿ, ನಾನು ನನ್ನ ಪದವಿ ಪತ್ರವನ್ನು ಪಡೆದ ನೆನಪು ಇನ್ನೂ ಹಚ್ಚಹಸಿರಾಗಿದೆ.

ಆ ದಿನಗಳಲ್ಲಿ ಪತ್ರಗಳಿಗೆ ಜೀವನದಲ್ಲಿ ವಿಶೇಷ ಮಹತ್ವವಿತ್ತು. ಅತಿ ಶ್ರೀಮಂತರ ಮನೆಯ ವೈಭವ ಸೂಚಕವಾಗಿದ್ದ ಫೋನು, ಹಳ್ಳಿಯವರಿಗೆ  ಫೋನು ಎಂದರೇನು ಎಂದೇ ತಿಳಿಯದ ಕಾಲವಾಗಿತ್ತದು ಎಂದರೆ; ಸದಾ ಕೈಯಲ್ಲಿ ಚರವಾಣಿ ಹಿಡಿದಿರುವ ಇಂದಿನ ಜನಾಂಗದವರು ಖಂಡಿತಾ ನಂಬಲಾರರು. ಅರ್ಥೈಸಿಕೊಳ್ಳಲಾರರು. ಪುಟ್ಟ ಹಳ್ಳಿಯಲ್ಲಿ ಬೆಳೆದ ನಾನು ವಿದ್ಯಾಭ್ಯಾಸಕ್ಕಾಗಿ ಪಟ್ಟಣಕ್ಕೆ ಹೋಗಿದ್ದಾಗ, ಮನೆಯವರೊಡನೆ ಪತ್ರದಲ್ಲೇ ವ್ಯವಹರಿಸಬೇಕಿತ್ತು. ದೇಶೀಯ ಪತ್ರ(Inland Letter)ದೊಳಗೆ ಮಾತ್ರವಲ್ಲದೆ, ಮಡಿಕೆಯ ಒಳಭಾಗವನ್ನು ಸಹಿತ ಸೂಜಿ ಮೊನೆಯಷ್ಟೂ ಜಾಗ ಬಿಡದೆ ಬರೆದು, ಅಂಚೆ ಡಬ್ಬಕ್ಕೆ ಹಾಕಿತೆಂದರೆ, ನಂತರದ ಕೆಲಸ, ಉತ್ತರಕ್ಕಾಗಿ ಕಾಯುವುದು. ಪತ್ರ ಬರಲು ಸ್ವಲ್ಪ ತಡವಾದರೂ ಚಡಪಡಿಕೆಗೆ ಮಿತಿಯಿರುತ್ತಿರಲಿಲ್ಲ. ಬಡವರ ಬಂಧುವಾದ ಅತೀ ಕಡಿಮೆ ಬೆಲೆಯ ಅಂಚೆ ಕಾರ್ಡ್, ದೇಶವಿಡೀ ಸುತ್ತಿ ವಾರಸುದಾರರ ಕೈ ಸೇರುವಾಗ ಇಲಾಖೆಗೆ ಕಾರ್ಡಿನ ಬೆಲೆಗಿಂತಲೂ ಹೆಚ್ಚು ಖರ್ಚು ಬೀಳುತ್ತಿದ್ದರೂ ಜನರ ಸೇವೆಗಾಗಿ ಅದು ಇಂದಿಗೂ ಲಭ್ಯ. ಭಾವನಾತ್ಮಕವಾಗಿ ಮನಸ್ಸುಗಳನ್ನು ಸೇರಿಸುವ, ಬಾಂಧವ್ಯವನ್ನು ಬೆಸೆಯುವ, ಉಳಿಸುವ ಈ ಅಂಚೆ ಪತ್ರಗಳು ನಮ್ಮ ಭಾವನೆಗಳನ್ನು, ನೆನಪುಗಳನ್ನು ಯಾವಾಗಲೂ ಹಸಿರಾಗಿಡುತ್ತವೆ. ನನಗೆ ಬಂದ ಪತ್ರಗಳನ್ನು ಜೋಪಾನವಾಗಿ ಇರಿಸುವ ಅಭ್ಯಾಸವಿದ್ದುದರಿಂದ, ಹತ್ತಾರು ವರುಷಗಳು ಕಳೆದರೂ ಇಂದಿಗೂ ಕೆಲವು ಪತ್ರಗಳು ನನ್ನಲ್ಲಿದ್ದು, ಅವುಗಳನ್ನು ನೋಡಿದಾಗ, ಹಳೆ ನೆನಪುಗಳ ಮೆರವಣಿಗೆಯೇ ಹೊರಡುವುದಲ್ಲದೆ, ಮನಸ್ಸನ್ನು ತೋಯಿಸುತ್ತವೆ. ಈಗಿನ ವೈಜ್ಞಾನಿಕ ಯುಗದಲ್ಲಿ ನಾವೆಷ್ಟೇ ಮುಂದುವರಿದು, ಅಂತರ್ಜಾಲ ಕೃಪೆಯಿಂದ, ಕ್ಷಣ ಮಾತ್ರದಲ್ಲಿ, ಬೇಕಾದ ಫೋಟೋಗಳು, ವೀಡಿಯೋಗಳು, ಮಾಹಿತಿಗಳು.. ಏನುಂಟು, ಏನಿಲ್ಲ.. ಸಕಲವೂ ನಮ್ಮ ಕೈಯಲ್ಲಿರುವ ಚರವಾಣಿಯಲ್ಲಿ ಲಭ್ಯವಿದ್ದರೂ, ಕೈಯಲ್ಲಿ ಪತ್ರವನ್ನು ಹಿಡಿದು ಓದುವಾಗ ಸಿಗುವ ಆನಂದವೇ ಬೇರೆ. ಖಾಸಗಿಯಾಗಿ ಕೋರಿಯರ್, ಅಂಚೆ ಕಚೇರಿಗೆ ಸಡ್ಡು ಹೊಡೆದರೂ, ಹಿಂದಿನಂತೆ ಪತ್ರ ವ್ಯವಹಾರಕ್ಕಾಗಿ ಬಳಕೆಯಾಗುವುದು ಕಡಿಮೆಯಾದರೂ, ಜನರ ಹಣದ ವ್ಯವಹಾರ, ಪಾರ್ಸೆಲ್ ಗಳಂತಹ ಇತರ ಸೇವೆಗಳನ್ನುಇಂದಿಗೂ ಕಡಿಮೆ ದರದಲ್ಲಿ ಸುವ್ಯವಸ್ಥಿತವಾಗಿ ನಿರ್ವಹಿಸುತ್ತದೆ.

ನಾನು ಅಮೇರಿಕದಲ್ಲಿರುವ ಮಗಳ ಮನೆಗೆ ಹೋಗಿದ್ದಾಗ ಅಲ್ಲಿ ಒಮ್ಮೆ ನಾನು ಸ್ವತ: ಅಂಚೆ ಅಕ್ಕ ಆಗುವ ಸನ್ನಿವೇಶ ಒದಗಿ ಬಂದುದು ನಿಜಕ್ಕೂ ತಮಾಶೆಯೆನಿಸುತ್ತದೆ. ಅಲ್ಲಿ ಪ್ರತಿ ರಸ್ತೆಯಲ್ಲಿರುವ ಮನೆಗಳ ಸಂಖ್ಯೆಯು ಒಂದೇ ರೀತಿ ಇರುತ್ತದೆ. ಒಂದು ದಿನ ನಮ್ಮ ಮನೆಗೆ ಬಂದ ಪತ್ರದಲ್ಲಿ ವಿಳಾಸದಾರ ಮತ್ತು ರಸ್ತೆ ಹೆಸರು ಬೇರೆಯೇ ಇತ್ತು. ಮನೆ ಸಂಖ್ಯೆ ಮಾತ್ರ ನಮ್ಮದಿತ್ತು. ಅಂಚೆ ಪೇದೆ ಗಮನವಿಲ್ಲದೆ, ಪಕ್ಕದ ರಸ್ತೆಯವರ ಪತ್ರವನ್ನು ನಮ್ಮಲ್ಲಿಗೆ ಹಾಕಿದ್ದ. ಆ ರಸ್ತೆಯಲ್ಲಿ  ದಿನಾ ಸಂಜೆ ನನ್ನ ನಡಿಗೆ ಸಾಗುತ್ತಿತ್ತು. ಅಲ್ಲಿ, ಎದುರಿಗೆ ಯಾರಾದರೂ ಸಿಕ್ಕಿದರೆ, ಕೆಲವರು ನಗೆ ಚೆಲ್ಲಿ ‘ಹಾಯ್’ ಎನ್ನುವುದು ಬಿಟ್ಟರೆ, ಯಾರೂ ಪರಿಚಯ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ನಾನೇನೋ ಬಹಳ ಉತ್ಸಾಹದಲ್ಲಿ ಆ ಪತ್ರವನ್ನು ವಿಳಾಸದ ಮನೆಯವರಿಗೆ ನಾನೇ ತಲಪಿಸುವುದೆಂದು ನಿರ್ಧರಿಸಿದೆ. ಮರುದಿನ  ಆ ಮನೆಯ ನಂಬರನ್ನು ಹುಡುಕಿ ಕಂಡುಹಿಡಿದು ಅವರ ಚಂದದ ಹೂದೋಟವನ್ನು ದಾಟಿ ಮನೆ ಕಡೆ ಹೋಗುತ್ತಿದ್ದಂತೆ, ಪಕ್ಕದಲ್ಲಿ ಕಾರು ಬಳಿ ಇದ್ದ ಹೆಂಗಸೊಬ್ಬರು ಏನೆಂದು ವಿಚಾರಿಸಿದರು. ಅಲ್ಲಿ ಒಂದು ತೊಂದರೆ ಎಂದರೆ, ಅವರ ಇಂಗ್ಲಿಷ್ ನಮಗೆ ಅರ್ಥವಾಗುವುದು ತುಸು ಕಷ್ಟ..ಹಾಗೆಯೇ ಅವರಿಗೆ ನಮ್ಮದು. ಆದ್ದರಿಂದ, ವಿಷಯವನ್ನು ತಿಳಿಸಲು ನಾಲ್ಕು ಸಲ ಹೇಳಬೇಕಾಯಿತು. ಕೊನೆಗೆ ನಾನು ಹೋಗುತ್ತಿದ್ದ ಮನೆಯನ್ನೆ ತೋರಿಸಿ, ಅಲ್ಲಿ ವಿಚಾರಿಸಲು ಸೂಚಿಸಿದರು. ಮುಂದೆ ಹೋಗುತ್ತಿದ್ದಂತೆ, ಜೋರಾಗಿ ನಾಯಿ ಬೊಗಳುವ ಸದ್ದು.. ಮೊದಲೇ ನಾಯಿಯೆಂದರೆ ಭಯ.. ಮತ್ತೆ ಕೇಳಬೇಕೇ! ಪುಣ್ಯವಶಾತ್ ಬಾಗಿಲು ಹಾಕಿದ ಮನೆಯೊಳಗಿತ್ತು ನಾಯಿ. ಕರೆಗಂಟೆ ಬಾರಿಸಿದರೆ ಒಳಗಿನಿಂದ ಯಾವ ಸದ್ದೂ ಇಲ್ಲ. ಸ್ವಲ್ಪ ಹೊತ್ತು ನಿಂತು ಅವರ ಪತ್ರವನ್ನು ಬಾಗಿಲ ಬಳಿ ಇರಿಸಿ ಬಂದಾಗ ಒಂದು ಮಹಾನ್ ಕೆಲಸ ಮಾಡಿದ ನೆಮ್ಮದಿ!

ಅಮೇರಿಕದಲ್ಲಿರುವ ಎಂಟು ವರ್ಷದ ಮೊಮ್ಮಗಳು, ಅಲ್ಲಿಯ ಅತ್ಯಂತ ದೊಡ್ಡ ಹಬ್ಬವಾದ ಕ್ರಿಸ್ ಮಸ್ ಸಮಯದಲ್ಲಿ ಊರಿಗೆ ಬರುವ ತಯಾರಿ ನಡೆದಿತ್ತು. ಅಲ್ಲಿ ಪುಟ್ಟ ಮಕ್ಕಳಿಗೆ, ಕ್ರಿಸ್ ಮಸ್ ತಾತನಾದ ಸಾಂತಾಕ್ಲಾಸ್ ಹಿಂದಿನ ದಿನ ರಾತ್ರಿ ನಿದ್ದೆಯಲ್ಲಿದ್ದಾಗ ಅವರಿಗಾಗಿ ಚಂದದ ಉಡುಗೊರೆಗಳನ್ನು ತಂದು ಅವರ ಬಳಿ ಇರಿಸಿ ಹೋಗುವನೆಂಬ ಬಲವಾದ ನಂಬಿಕೆ. ಈ ನಂಬಿಕೆಗೆ ನಮ್ಮ ಮಗು ಕೂಡಾ ಹೊರತಲ್ಲ. ಆದ್ದರಿಂದ, ಆ ಸಮಯದಲ್ಲಿ ಅವಳು ಅಲ್ಲಿರದಿದ್ದರೆ ಸಾಂತಾಕ್ಲಾಸ್ ಅಜ್ಜನಿಗೆ ಬೇಜಾರಾಗಬಹುದು, ಅಲ್ಲದೆ, ಚಂದದ ಉಡುಗೊರೆಯೂ ಕೈ ತಪ್ಪಿ ಹೋಗುವೆದೆಂದು ಅವಳೆಣಿಕೆ. ಅದಕ್ಕಾಗಿ ಮೊಮ್ಮಗಳು ಸಾಂತಾಕ್ಲಾಸ್ ಗೆ ಒಂದು ಪತ್ರ ಬರೆದು ಉಡುಗೊರೆಗಳನ್ನು ಅವಳು ಹಿಂತಿರುಗಿದ ಮೇಲೆ ಕೊಡುವಂತೆ ಕೇಳಿಕೊಳ್ಳುವುದೇ ಅವಳ ಉಪಾಯ! ಹಾಗೆಯೇ ಅವಳದೇ ರೀತಿಯಲ್ಲಿ ಪತ್ರ ಬರೆದು ಲಕೋಟೆಗೆ ಹಾಕಿಯೂ ಆಯಿತು… ಆದರೆ ವಿಳಾಸ? ಅದಕ್ಕೂ ಅವಳಲ್ಲಿ ಉತ್ತರವಿತ್ತು.. ವಿಳಾಸವನ್ನು, “ಸಾಂತಾಕ್ಲಾಸ್ ಅಜ್ಜ, ಅಮೇರಿಕ” ಎಂದು ಬರೆದಳು. ಮುಂದಿನ ಕೆಲಸ, ಅಂಚೆ ಕಚೇರಿಗೆ ಹೋಗಿ ಸ್ಟಾಂಪ್ ಹಾಕಿ ಅಂಚೆ ಡಬ್ಬಕ್ಕೆ ಹಾಕುವುದು. ಅದಕ್ಕಾಗಿ ಅವಳಮ್ಮ ಅವಳನ್ನು ಅಂಚೆ ಕಚೇರಿಗೆ ಕರೆದೊಯ್ದು, ವಿಚಾರವನ್ನು ಅಲ್ಲಿಯ ಸಿಬ್ಬಂದಿಗೆ ನಾಜೂಕಾಗಿ ವಿವರಿಸಿದಾಗ ಅವರಿಗೆ ಅಚ್ಚರಿ ಹಾಗೂ ನಗು. ಅದನ್ನು ತೋರ್ಪಡಿಸದೆ, ಬಹಳ ತಾಳ್ಮೆಯಿಂದ, ಪುಟ್ಟ ಹುಡುಗಿಗೆ  ಪತ್ರ ರವಾನೆಯಾಗುವ ಪ್ರತಿ ಹಂತವನ್ನೂ ಬಹಳ ಚೆನ್ನಾಗಿ ವಿವರಿಸಿ, ಅವಳಲ್ಲಿದ್ದ ಕವರಿಗೆ ಸ್ಟಾಂಪ್ ಲಗತ್ತಿಸಿ ಅಲ್ಲೇ ಎದುರಿಗಿದ್ದ ಅಂಚೆ ಡಬ್ಬಕ್ಕೆ ಅವಳಲ್ಲೇ ಹಾಕಿಸಿದರು. ಮಗುವಿಗೆ ಎಲ್ಲವನ್ನೂ ಗೆದ್ದ ಭಾವ.. ಬಹಳ ಸಂತೋಷದಿಂದ ಅಮ್ಮನೊಡನೆ ಮನೆಗೆ ಹಿಂತಿರುಗಿದಳು. ಇತ್ತ ಅಂಚೆ ಕಚೇರಿಯಲ್ಲಿ ಆ ಪತ್ರವನ್ನು ತೆಗೆದಿರಿಸಿದರೆನ್ನಿ! ಈ ಸನ್ನಿವೇಶದಿಂದ, ಮಗುವಿಗೆ ಅಂಚೆ ಕಚೇರಿಯಲ್ಲಿ ನಡೆಯುವ ಕೆಲಸದ ಬಗ್ಗೆ ಸ್ವತ: ಪ್ರಾಯೋಗಿಕವಾಗಿ ತಿಳಿಯುವಂತಾದುದು ನಿಜಕ್ಕೂ ಮೆಚ್ಚುವ ವಿಚಾರ. ನನಗೆ ಮಗಳು ಈ ವಿಷಯ ತಿಳಿಸಿದಾಗ, ನಮ್ಮಲ್ಲಿ ಆಗಿದ್ದರೆ ಏನಾಗುತ್ತಿತ್ತು ಎಂದು ಯೋಚಿಸಿದೆ. ಮೊದಲನೆಯದಾಗಿ, ಆ ಪತ್ರವೇ ಹುಚ್ಚಾಟ ಎಂದು ಗೇಲಿಮಾಡುತ್ತಿದ್ದರು. ತಲೆ ಎತ್ತಿ ಗ್ರಾಹಕರೊಡನೆ ಮಾತನಾಡಲೂ ಸಮಯವಿಲ್ಲದಷ್ಟು ಕೆಲಸದಲ್ಲಿ ಮುಳುಗೇಳುತ್ತಿರುವ ನಮ್ಮಲ್ಲಿಯ ಸಿಬ್ಬಂದಿಗಳಿಗೆ ಇಂತಹುಗಳನ್ನು ಸಂಭಾಳಿಸಲು ತಾಳ್ಮೆಯೂ ಇಲ್ಲ.. ಸಮಯವೂ ಇಲ್ಲ.

(ಚಿತ್ರಮೂಲ: ಸಾಂದರ್ಭಿಕ,ಅಂತರ್ಜಾಲ)

ಹಿಂದಿನ ಕಾಲದಲ್ಲಿ ಪತ್ರಗಳನ್ನು ಕಾಲ್ನಡಿಗೆಯಲ್ಲಿ ಅಥವಾ ಇನ್ನೂ ದೂರದೂರುಗಳಿಗೆ ಕುದುರೆಯ ಮೇಲೇರಿ ಹೋಗಿ ಬಟವಾಡೆ ಮಾಡಲಾಗುತ್ತಿತ್ತು. ಅಲ್ಲದೆ ಈ ಕೆಲಸವು ಅತ್ಯಂತ ಸಂಘಟಿತವಾಗಿ, ಸುಸಜ್ಜಿತವಾಗಿ ನಿರ್ವಹಿಸಲ್ಪಡುತ್ತಿತ್ತು. ನಂತರದ ದಿನಗಳಲ್ಲಿ, ನಿಧಾನವಾಗಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಪತ್ರಗಳ ಬಟವಾಡೆಗೆ ರಾಷ್ಟ್ರಗಳು ಪರಸ್ಪರ ಒಪ್ಪಿಗೆ ಸೂಚಿಸಲಾರಂಭಿಸಿದಾಗಲೇ ಅಂತರ್ದೇಶೀಯ ಪತ್ರಗಳು ಪ್ರಾರಂಭವಾದುವು.

ಸುಮಾರು 1800ನೇ ಇಸವಿಯ ಪೂರ್ವದಲ್ಲೇ ಜಗತ್ತಿನ ಕೆಲವು ದೇಶಗಳಲ್ಲಿ ಅಂಚೆ ಸೇವೆ ಇತ್ತೆಂಬ ಮಾಹಿತಿಯಿದೆ. ಆದರೆ ಅದು ತುಂಬಾ ನಿಧಾನ ಹಾಗೂ ಕಷ್ಟದಾಯಕವಾಗಿತ್ತು. 1874ರ ಅಕ್ಟೋಬರ 9ರಂದು ಸ್ವಿಝರ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಅಂಚೆ ಒಕ್ಕೂಟದ ವಾರ್ಷಿಕೋತ್ಸವದಂದು, ಆ ದಿನವನ್ನು ವಿಶ್ವ ಅಂಚೆದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಆನಂತರದಲ್ಲಿ, ಈಗಿರುವಂತಹ ಅತ್ಯಾಧುನಿಕ ಪದ್ಧತಿಯಲ್ಲಿ ಪತ್ರ ರವಾನೆಯ ವ್ಯವಸ್ಥೆ ಪ್ರಾರಂಭವಾಯಿತೆನ್ನಬಹುದು.  ಹಾಗೆಯೇ  ವಿಶ್ವದಾದ್ಯಂತ ಒಬ್ಬರಿಗೊಬ್ಬರು ಪತ್ರ ಬರೆಯುವ ಮೂಲಕ ಸಂವಹನ ನಡೆಸುವುದನ್ನು ಕಲಿಸುವುದು ಮತ್ತು ಉತ್ತೇಜಿಸುವುದು ಅಂಚೆದಿನದ ಮುಖ್ಯ ಉದ್ದೇಶವಾಯಿತು. 1948ರಲ್ಲಿ ವಿಶ್ವ ಅಂಚೆ ಒಕ್ಕೂಟವು ಸಂಯುಕ್ತ ರಾಷ್ಟ್ರಗಳ ಏಜೆನ್ಸಿ ವಹಿಸಿಕೊಂಡಿತು. ಬಳಿಕ, 1969ರಲ್ಲಿ ಜಪಾನಿನ ಟೊಕಿಯೋದಲ್ಲಿ ನಡೆದ ವಿಶ್ವ ಅಂಚೆ ಒಕ್ಕೂಟದ ಸಮ್ಮೇಳನದಲ್ಲಿ ಜಾಗತಿಕ ಮಟ್ಟದಲ್ಲಿ ಪೂರ್ಣರೂಪದಲ್ಲಿ, ಅಕ್ಟೋಬರ 9ರಂದು ವಿಶ್ವ ಅಂಚೆದಿನವನ್ನು ವಿಶ್ವದಾದ್ಯಂತ ಆಚರಿಸುವಂತೆ ಘೋಷಿಸಲಾಯಿತು. ಆ ನಂತರ ಇಡೀ ಜಗತ್ತಿನೆಲ್ಲೆಡೆ ಈ ವಿಶೇಷ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು, ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಅಂಚೆ ಸೇವೆಯ ಮಹತ್ವವನ್ನು ಸಾರುವ ಪ್ರಯತ್ನ ನಡೆಯುತ್ತದೆ. ವಿಶೇಷವಾದ ಅಂಚೆ ಚೀಟಿ ಬಿಡುಗಡೆ, ಅಪರೂಪದ ಅಂಚೆ ಚೀಟಿಗಳ ಪ್ರದರ್ಶನ, ವಿಶೇಷ ವಿಷಯಗಳ ಬಗೆಗೆ ಕಾರ್ಯಾಗಾರಗಳು ಆಯೋಜಿಸಲ್ಪಡುತ್ತವೆ. ವಿಶ್ವ ಅಂಚೆ ಒಕ್ಕೂಟದ ವತಿಯಿಂದ ಯುವ ಜನತೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪತ್ರ ಬರೆಯುವ ಸ್ಪರ್ಧೆ ಏರ್ಪಡಿಸಿ ಪ್ರೋತ್ಸಾಹಿಸಲಾಗುತ್ತದೆ.

ನಮ್ಮ ದೇಶದಲ್ಲಿ, ಈಸ್ಟ್ ಇಂಡಿಯ ಕಂಪೆನಿಯ ವಾರನ್ ಹಾಸ್ಟಿಂಗ್ಸ್ ಎಂಬವನು ಆಳುತ್ತಿದ್ದ ಕಾಲದಲ್ಲಿಯೇ  ‘ಕಂಪೆನಿ ಮೈಲ್’ ಎಂಬ ಹೆಸರಿನಿಂದ  ಅಂಚೆ ಆರಂಭವಾಗಿತ್ತು. ಆ ನಂತರ 1837ರಿಂದ ನಿಯಮಿತವಾದ ಅಂಚೆ ಸೇವೆ ಆರಂಭವಾಯಿತು. ಅಕ್ಟೋಬರ 1,1854ರಲ್ಲಿ ‘ಭಾರತ ಅಂಚೆ ಇಲಾಖೆ’ ಎಂಬ ವಿಭಾಗವು ಪ್ರಾರಂಭವಾಯಿತು. ಈಗ ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ  ಉದ್ಯೋಗಿಗಳು ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವರು. ಮೊತ್ತ ಮೊದಲ ಅಂಚೆ ಚೀಟಿಯು ಜುಲೈ1, 1852ರಲ್ಲಿ ಬಿಡುಗಡೆಗೊಂಡು ಕ್ರಮೇಣ ದೇಶದೊಳಗೆ ಸಾರ್ವತ್ರಿಕವಾಗಿ ಒಂದೇ ರೀತಿಯ ಬೆಲೆಯನ್ನು ನಿಗದಿಪಡಿಸಲಾಯಿತು.  ಸುಮಾರು 1843ರಲ್ಲಿ ಆರಂಭವಾದ ತಂತಿ ಸಂದೇಶದ ವಿಭಾಗವು 1850ರಲ್ಲಿ  ಅಂಚೆ ಇಲಾಖೆಯ ಜೊತೆಗೇ ಸೇರಿಕೊಂಡಿರುವಂತಹುದು.. ಅದೇ, ತಂತಿ ಇಲಾಖೆ. ಅತ್ಯಂತ ವೇಗವಾಗಿ ಸಂದೇಶಗಳನ್ನು ರವಾನಿಸುವ ಮಾಧ್ಯಮವಾಗಿದ್ದ ಇದು ಕ್ರಮೇಣ ತಂತಿ ರಹಿತವಾಗಿ, ಆಮೇಲೆ ಫ್ಯಾಕ್ಸ್, ಕೊನೆಗೆ ಮಿಂಚಂಚೆ, ಚರವಾಣಿಯಲ್ಲಿರುವ ವ್ಯವಸ್ಥೆಗಳಿಗೆ ತಲಪುವಷ್ಟರಲ್ಲಿ ತಂತಿ ಸಂದೇಶಗಳಿಗೆ ಬೆಲೆ ಇಲ್ಲದಂತಾಯಿತು. ಆದ್ದರಿಂದ ಸುಮಾರು 163ವರ್ಷಗಳಷ್ಟು ಹಳೆಯದಾದ ತಂತಿ ವಿಭಾಗವು 2006ನೇ ಇಸವಿಯಲ್ಲಿ ತನ್ನ ಕೊನೆಯನ್ನು ಹಾಡಿತು. ದೂರವಾಣಿ ಇಲಾಖೆಯಲ್ಲಿದ್ದ ನಾನು ಕೂಡಾ ಅದರ ಒಂದು ಭಾಗವೇ ಆಗಿದ್ದುದರಿಂದ, ಆ ದಿನಗಳಲ್ಲಿ ತುಂಬ ಭಾವುಕಳಾಗಿದ್ದುದು ಇಂದಿಗೂ ನೆನಪಿದೆ.

ಇಂದಿನ ದಿನಗಳಲ್ಲಿ ಮಿಂಚಂಚೆಯಿಂದಾಗಿ ಪ್ರಪಂಚವಿಡೀ ನಮ್ಮ ಮುಷ್ಟಿಯೊಳಗಿದ್ದಂತೆ ಭಾಸವಾಗುತ್ತಿದೆ. ವ್ಯಕ್ತಿಗಳೊಂದಿಗಿನ ಸಂವಹನವು ಕ್ಷಣಮಾತ್ರದಲ್ಲಿ ಆಗುತ್ತಿರುವುದು, ವೈಜ್ಞಾನಿಕವಾಗಿ ಮಾನವನು ಎಷ್ಟು ಮುಂದುವರಿದಿರುವನೆಂಬುದನ್ನು ಸೂಚಿಸುತ್ತದೆ. ಆದರೂ ಭಾವನಾತ್ಮಕವಾಗಿ ಹೃದಯಕ್ಕೆ ಅತ್ಯಂತ ಆತ್ಮೀಯವಾದ ಪತ್ರ ವ್ಯವಹಾರಗಳ ಅನುಭವವನ್ನು ಮೆಲುಕು ಹಾಕುವುದು ಮಾತ್ರ ನಮಗುಳಿದಿದೆ. ಅದಕ್ಕಾಗಿ ನಿಮ್ಮ ನಿಮ್ಮ ಹಳೆ  ಪೆಟಾರಿಯಲ್ಲಿರಬಹುದಾದ ಹಳೆಯ ಪತ್ರಗಳನ್ನು ಹೊರತೆಗೆದು ಓದಿ ಆನಂದಿಸಿ..ನನ್ನಂತೆ.

-ಶಂಕರಿ ಶರ್ಮ, ಪುತ್ತೂರು.

8 Responses

  1. ಶಶಿಕಲಾ.ಕೆ.ಎಸ್. says:

    ಮೇಡಂ.ನಿಜ ಅಂಚೆಯಣ್ಣ ನ ಸೇವೆ ಸದಾ ಸ್ತುತ್ಯಾರ್ಹ.ಅಂಚೆಯಣ್ಣ ನನ್ನು ಬಹಳ ನೆನಪಿಸುವ ಹಬ್ಬ ಗೌರಿ ಹಬ್ಬ..ತಾಯಿ ಮನೆಯಿಂದ ಬರುವ ಹಣ ಮಂಗಳದ್ರವ್ಯ ಕ್ಕೆ ಅಂತ ಕಳಿಸೋರು.ನಮ್ಮ ಮನೆಯಲ್ಲಿ ಲಕ್ಷ ಹಣವಿದ್ದರೂ, ತಾಯಿ ಮನೆಯ ಉಡುಗೊರೆ ಎಷ್ಷು ಅಪ್ಯಾಯಮಾನ.ಅಲ್ಲೂ ಅಂಚೆ ಅಣ್ಣ ನ ಸೇವೆ.ಮರೆಯಲಾದೀತೇ ?
    ಬರಹಕ್ಕಾಗಿ ಧನ್ಯವಾದಗಳು .ಚೆಂದದ ಲೇಖನ

  2. Anonymous says:

    ಅಂಚೆ ಅಣ್ಣನ ಬರಹದಿಂದ ನಮ್ಮ ಹಳೆಯ ನೆನಪು ಗಳ ಸುತ್ತ ಸುತ್ತು ವಂತೆ ಮಾಡಿತು.ಅದಕ್ಕಾಗಿ ನಿಮಗೆ ನನ್ನ ದೊಂದು ನಮಸ್ಕಾರ ಮೇಡಂ.

  3. Savithri bhat says:

    ಚೆಂದದ ಲೇಖನ. ಹಳೆ ನೆನಪುಗಳು ,ವಿವರಣೆ ಓದಿ ತುಂಬಾ ಕುಶಿ ಆಯಿತು.ಧನ್ಯವಾದಗಳು

    • ಶಂಕರಿ ಶರ್ಮ, ಪುತ್ತೂರು says:

      ಧನ್ಯವಾದಗಳು ಸಾವಿತ್ರಿ ಅಕ್ಕ.

  4. ನಯನ ಬಜಕೂಡ್ಲು says:

    ಚಂದದ ಬರಹ ಮೇಡಂ, ಹೌದು ಎಷ್ಟು ಆಪ್ತವಾಗಿದ್ದವು ಪತ್ರ ವ್ಯವಹಾರದ ಆ ದಿನಗಳು. ಇವತ್ತು ಎಲ್ಲವೂ ಮಿತಿ ಮೀರಿದ ವೇಗ ಹಾಗೂ ಎಲ್ಲವೂ ನೀರಸ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: