ಪುಸ್ತಕ ಪರಿಚಯ-ಗೋಪಾಲಕೃಷ್ಣ ಭಟ್ ಅವರ ‘ನೆನಪಿನಂಗಳದಿಂದ’
ಮಂಗಳೂರಿನ ಸಂತ ಅಲೋಷಿಯಸ್ ಸ್ಕೂಲ್ ಮಂಗಳೂರಿನಲ್ಲಿ ಜೀವಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಶ್ರೀ ಗೋಪಾಲ ಕೃಷ್ಣ ಭಟ್ ಬಹಳ ನಿಷ್ಠೆಯಿಂದ, ತನ್ನ ಉದ್ಯೋಗ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು. ಅವರು ತನ್ನ ಸ್ಕೌಟ್ ಜೀವನದ ನೆನಪುಗಳಿಗೆ ಅಕ್ಷರ ರೂಪ ಕೊಟ್ಟು ‘ನೆನಪಿನಂಗಳದಿಂದ’ ಎಂಬ ಸೊಗಸಾದ ಪುಸ್ತಕವನ್ನು ಪ್ರಕಟಿಸಿದ್ದಾರೆ.ಸ್ಕೌಟ್ಸ್ ಬಗೆಗಿನ ಮಾಹಿತಿಯುಳ್ಳ ಈ ಪುಸ್ತಕವು ಸ್ಕೌಟ್ಸ್ ಶಿಕ್ಷಕರಿಗೆ, ಸ್ಕೌಟ್ಸ್ ಶಿಬಿರಾರ್ಥಿಗಳಿಗೆ ಹಾಗೂ ಇತರ ಆಸಕ್ತರಿಗೆ ಉಪಯುಕ್ತವಾಗಿದೆ. ಓದುತ್ತಾ ಹೋದಂತೆ ಸ್ಕೌಟ್ಸ್ ಕ್ಯಾಂಪ್ ಗಳಲ್ಲಿ ಕ್ಲಿಷ್ಟ ಕರ ಸಂದರ್ಭಗಳನ್ನು ನಿಭಾಯಿಸಿದ ರೀತಿ, ಹಾಗೂ ಲಂಡನ್ ನಲ್ಲಿ ಸ್ಕೌಟ್ಸ್ ಬಗ್ಗೆ ತಾನು ತಿಳಿದುಕೊಂಡಿರುವ ಮಾಹಿತಿಯನ್ನು ಹಂಚಿಕೊಂಡಿರುವುದು ಬಹಳ ಹಿಡಿಸಿತು. ಒಟ್ಟಿನಲ್ಲಿ ಹೇಳಬೇಕೆಂದರೆ ಎಲ್ಲರಿಗೂ ಜೀವನದಲ್ಲಿ ಅಳವಡಿಸಬೇಕಾದ ಮಾಹಿತಿ ಕೈಪಿಡಿ ಎನ್ನಬಹುದು.
ಒಬ್ಬ ಸಾಮಾನ್ಯ ಶಿಕ್ಷಕನಾಗಿದ್ದು, ತನ್ನ ಜೀವನದಲ್ಲಿ ಚೌಕಟ್ಟಿನೊಳಗೆ ಅಚ್ಚುಕಟ್ಟಾಗಿ ಹೇಗೆ ಸಾಧಿಸಬಹುದು ಎಂಬುದಕ್ಕೆ ಇದೊಂದು ನಿದರ್ಶನ. ಪುಸ್ತಕದ ಮೊದಲಲ್ಲಿ ತನ ಸ್ಕೌಟ್ ಜೀವನದಲ್ಲಿ ತರಬೇತಿ ಪಡೆದುಕೊಳ್ಳುವ ಸಮಯದ ಅನುಭವಗಳಾದರೆ ಆಮೇಲೆ ಶಿಕ್ಷಕನಾಗಿ ಸ್ಕೌಟ್ಸ್ ನಲ್ಲಿ ತನ್ನನ್ನು ತೊಡಗಿಸಿಕೊಂಡಾಗಿನ ಕೆಲವು ಹಾಸ್ಯಮಯ “ಅಲೆಯಾ !ಪೊಂಜೊವು ಸೈಕಲ್ಡ್ ಪೋಯಿನಿ! ” ಎಂದು ನೆನಪುಗಳೊಂದಿಗೆ ಅದನ್ನು ಆ ಉಪಯೋಗಿಕ ಭಾಷೆಯಲ್ಲೇ ವರ್ಣಿಸಿರುವುದು,ತನ್ನ ಸ್ಕೌಟ್ ವಿದ್ಯಾರ್ಥಿಗಳನ್ನು ನೆನಪಿನಲ್ಲಿ ಉಳಿಸಿಕೊಂಡಿರುವುದು, ಹೀಗೆ ಇನ್ನೂ ಹಲವು ಮಾತುಗಳು ಹಾಗೆಯೇ ಅಚ್ಚಳಿಯದೆ ಮನಸಲ್ಲೂಳಿದಿರುವಂತದ್ದು ಎಂದರೆ ನಿಜಕ್ಕೂ ಅದು ಅನುಭವಕ್ಕೆ ಬಂದಾಗಿನ ಸಂದರ್ಭ ಎಂತಹುದಿದ್ದೀರಬಹುದು ಎಂದು ಯೋಚಿಸಬೇಕಾದ ಅಂಶ.
ಪ್ರತಿಯೊಂದು ಸಂದರ್ಭಗಳಲ್ಲಿಯೂ ಸ್ಪಷ್ಟ ನಿಲುವು, ಸ್ಪಷ್ಟ ನಿರ್ಧಾರಗಳು,ಒಬ್ಬ ವ್ಯಕ್ತಿಯು ಹೇಗಿರಬೇಕು, ಹೇಗಿರಬಾರದು, ಹೇಗೆ ಗೌರವಿಸಬೇಕು, ಸಮಯದ ಪರಿಪಾಲನೆ ಹೇಗಿರಬೇಕು, ಎನ್ನುವ ನಿರೂಪಣೆಯ ಅಚ್ಚುಕಟ್ಟು ಮುಂದಿನ ಪೀಳಿಗೆಗೂ ಇತರರಿಗೂ ಅತ್ಯಂತ ಸಹಕಾರಿಯಾಗುವಂತಹ ಸ್ಪಷ್ಟ ಮಾಹಿತಿ ಈ ಪುಸ್ತಕದಲ್ಲಿದೆ. ತಾನು ಸ್ಕೌಟ್ ಜಂಬೂರಿಗಾಗಿ ಇಂಗ್ಲೆಂಡ್ ಗೆ ಹೋಗಿದ್ದಾಗ ಅಲ್ಲಿ ತಾನು ತಿಳಿದು ಕೊಂಡಿರುವ ಮಾಹಿತಿಗಳನ್ನು ಚಾಚೂ ತಪ್ಪದೇ ಮುಂದಿನವರಿಗಾಗಿ ಇಲ್ಲಿ ಬರೆದಿರುವುದು ನಿಜಕ್ಕೂ ಗಮನಾರ್ಹ. ಒಟ್ಟಿನಲ್ಲಿ ಆಕರ್ಷಕ ನಿರೂಪಣೆಯ ಪುಸ್ತಕವಿದು.
-ರಜನಿ ಪ್ರಸಾದ ,ಬೀರಂತಡ್ಕ.
Beautiful. “ಅಲಯ ಪೊಣ್ಣು ಸೈಕಲ್ ಡ್ ಪೋಪಿನಿ ” ಬಿರುದು ನನ್ನ ಕಾಲೇಜು ದಿನಗಳಲ್ಲಿ ನನಗೂ ಸಿಕ್ಕಿದೆ ಆ ದಿನಗಳೆಲ್ಲ ಮತ್ತೊಮ್ಮೆ ನೆನಪಾಯಿತು.
ಸೊಗಸಾದ ಪುಸ್ತಕವೊಂದರ ಸುಂದರ ವಿಮರ್ಶೆ